ಪ್ರೀತಿಯ ಕಣ್ಣಾಮುಚ್ಚಾಲೆ ❤️ – 1
ಪ್ರೀತಿಯ ಕಣ್ಣಾಮುಚ್ಚಾಲೆ ❤️ – 1
ಬೆಳಗಿನ ಏಳು ಗಂಟೆ ಕಳೆದಿತ್ತು. ಮನೆಯ ಅಡುಗೆಮನೆಯಿಂದ ಬರುತ್ತಿದ್ದ ಒಗ್ಗರಣೆಯ ಸುವಾಸನೆ ಇಡೀ ಮನೆಯನ್ನು ಆವರಿಸಿಕೊಂಡಿತ್ತು. ಹೊರಗೆ ಅಂಗಳದಲ್ಲಿ ಹಕ್ಕಿಗಳ ಚಿಲಿಪಿಲಿ, ಅಡುಗೆಮನೆಯಲ್ಲಿ ಸೀತಾ ಅವರ ಓಡಾಟ… ಎಲ್ಲವೂ ಎಂದಿನಂತೆಯೇ ಇದ್ದರೂ, ಒಬ್ಬಳದ್ದು ಮಾತ್ರ ಗಡಿಬಿಡಿ ಶುರು ಆಗಿತ್ತು ಅಂದು!
“ಅಯ್ಯೋ ದೇವರೇ… ನನ್ನ ಐಡಿ ಕಾರ್ಡ್ ಎಲ್ಲಿ ಹೋಯ್ತು? ನಿನ್ನೆಯೇ ಬ್ಯಾಗ್ ಒಳಗೆ ಹಾಕಿದ್ದೆನಲ್ಲಾ!”
ಎಂದು ತನ್ನ ರೂಮಿನ ಎಲ್ಲ ಮೂಲೆಯನ್ನು ತಡಕಾಡುತ್ತಿದ್ದಳು ಶುಭಾ.
ಬಾಚಣಿಗೆ ಹಿಡಿದುಕೊಂಡು ಕನ್ನಡಿ ಮುಂದೆ ನಿಂತವಳು, ಕೂದಲನ್ನು ಸರಿಯಾಗಿ ಬಾಚಿಕೊಳ್ಳಲೂ ಸಮಯವಿಲ್ಲದೆ ಪೋನಿಟೇಲ್ ಕಟ್ಟಿಕೊಂಡಳು. ಹಾಸಿಗೆಯ ಮೇಲೆ ಬಿದ್ದಿದ್ದ ನೋಟ್ ಬುಕ್‌ಗಳನ್ನು ಒಂದೊಂದಾಗಿ ಬ್ಯಾಗಿಗೆ ತುರುಕುತ್ತಿದ್ದವಳಿಗೆ, ಇದ್ದಕ್ಕಿದ್ದಂತೆ ಏನೋ ನೆನಪಾದಂತಾಯಿತು.
“ಅಯ್ಯೋ! ಪೆನ್!”
ಮತ್ತೆ ಬ್ಯಾಗ್ ತೆಗೆದು ಪೆನ್ ಹುಡುಕತೊಡಗಿದಳು.
ಅಷ್ಟರಲ್ಲಿ ರೂಮಿನ ಬಾಗಿಲ ಹತ್ತಿರ ಬಂದು ನಿಂತ ಸೀತಾ ಮಗಳ ಅವತಾರವನ್ನು ನೋಡಿ ತಲೆಯ ಮೇಲೆ ಕೈಯಿಟ್ಟುಕೊಂಡರು.
“ಶುಭಾ… ಶುಭಾ… ಎಷ್ಟು ಹೊತ್ತಿನಿಂದ ಕೂಗ್ತಾ ಇದೀನಿ? ಇನ್ನೂ ತಯಾರಾಗಿಲ್ವಾ?”
“ಆಯ್ತು ಅಮ್ಮಾ… ಇನ್ನೊಂದು ಎರಡು ನಿಮಿಷ!”
“ನಿನ್ನ ಈ ಎರಡು ನಿಮಿಷ ಯಾವಾಗ ಮುಗಿಯುತ್ತೋ ದೇವರಿಗೇ ಗೊತ್ತು. ಏನು ಶುಭಾ, ಇಷ್ಟು ದೊಡ್ಡವಳಾಗಿದ್ದೀಯಾ, ಡಿಗ್ರಿ ಎರಡನೇ ವರ್ಷಕ್ಕೆ ಬಂದಿದ್ದೀಯಾ. ಆದರೂ ಒಂದನೇ ಕ್ಲಾಸಿಗೆ ಹೋಗುವ ಮಗುವಿನ ಹಾಗೆ ಪ್ರತಿಯೊಂದನ್ನೂ ನಾನೇ ಹುಡುಕಿಕೊಡಬೇಕಾ? ಕಾಲೇಜಿಗೆ ಹೋಗುವ ದಿನವಾದರೂ ಸ್ವಲ್ಪ ಬೇಗ ಎದ್ದು ಎಲ್ಲವನ್ನೂ ರೆಡಿ ಮಾಡಿಕೊಳ್ಳಬೇಕು ಅನ್ನೋ ಬುದ್ಧಿ ಬೇಡವಾ?”
ಸೀತಾಳ ಮಾತಿಗೆ ಶುಭಾ ತುಟಿ ಮುದುಡಿದಳು.
“ಅಮ್ಮಾ, ನೀನು ಬೆಳಿಗ್ಗೆ ಎದ್ದಾಗಿನಿಂದ ಶುರು ಮಾಡಿದ್ದೀಯಾ. ಕಾಲೇಜಿಗೆ ಹೋಗೋ ಮುಂಚೆನೇ ಇಷ್ಟೊಂದು ಲೆಕ್ಚರ್ ಕೊಟ್ಟು ಬಿಟ್ಟರೆ, ಅಲ್ಲಿ ಹೋಗಿ ನಾನೇನು ಮಾಡಲಿ?”
“ನನ್ನ ಪಾಠ ಕೇಳದೆ ಇದ್ದರೂ ಪರವಾಗಿಲ್ಲ. ಕಾಲೇಜಿನ ಲೆಕ್ಚರರ್‌ಗಳು ಏನು ಹೇಳ್ತಾರೋ ಅದನ್ನಾದರೂ ಸ್ವಲ್ಪ ಕೇಳು.”
“ಅಯ್ಯೋ ಅಮ್ಮಾ… ನನಗೆ ಈ ಕಾಲೇಜು, ಈ ಸೈನ್ಸ್ ಯಾವುದೂ ಇಷ್ಟ ಇಲ್ಲ. ನನಗೆ ಆರ್ಟ್ಸ್ ತೆಗೆದುಕೊಳ್ಳಬೇಕು ಅಂತ ಇತ್ತು. ಅದರಲ್ಲೂ ಹೆರಿಟೇಜ್ ಮ್ಯಾನೇಜ್‌ಮೆಂಟ್ ಓದಬೇಕು ಅಂತ ಎಷ್ಟೊಂದು ಆಸೆ ಇತ್ತು ಗೊತ್ತಾ? ದೇವಸ್ಥಾನಗಳು, ಪುರಾತನ ಕಟ್ಟಡಗಳು, ನಮ್ಮ ಸಂಸ್ಕೃತಿ, ಇತಿಹಾಸ… ಅವೆಲ್ಲದರ ಬಗ್ಗೆ ತಿಳಿದುಕೊಳ್ಳೋದು ನನಗೆ ಎಷ್ಟು ಇಷ್ಟ ಗೊತ್ತಾ?”
“ಅದೆಲ್ಲಾ ಏನೋ ನನಗೆ ಸರಿಯಾಗಿ ಅರ್ಥವಾಗಲ್ಲ. ಆದರೆ ದೇವಸ್ಥಾನಕ್ಕೆ ಹೋಗಿ ಫೋಟೋ ತೆಕ್ಕೊಂಡು ಬರೋದು, ಹಳೆ ಕಟ್ಟಡಗಳನ್ನೆಲ್ಲಾ ನೋಡಿಕೊಂಡು ಬರೋದು… ಅದೇನು ಓದು? ಅದರಿಂದ ಏನು ಕೆಲಸ ಸಿಗುತ್ತೆ? ಮನೇಲಿ ಎಲ್ಲರೂ ಸೇರಿ ನೀನು ಒಳ್ಳೆಯ ಮಾರ್ಕ್ಸ್ ತೆಗೆದುಕೊಂಡಿದ್ದೀಯ ಅಂತ ಈ ಸೈನ್ಸ್‌ಗೆ ಸೇರಿಸಿದ್ರು. ಈಗ ಎರಡನೇ ವರ್ಷಕ್ಕೆ ಬಂದ ಮೇಲೆ ಮತ್ತೆ ಅದೇ ರಾಗ ಹಾಡಬೇಡ.”
“ಅಮ್ಮಾ, ಅದೇನು ಸುಮ್ಮನೆ ಫೋಟೋ ತೆಗೆಯೋ ಕೆಲಸ ಅಲ್ಲ. ಅದಕ್ಕೂ ಒಂದು ಕೋರ್ಸ್ ಇದೆ. ಅದನ್ನೆಲ್ಲಾ ನಿನಗೆ ಹೇಗೆ ಅರ್ಥ ಮಾಡಿಸಲಿ?”
“ನನಗೆ ಅದೆಲ್ಲಾ ಬೇಡ. ಮೊದಲು ಈ ಪೆನ್ ಹುಡುಕಿ, ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗು. ನಿನ್ನ ಅಪ್ಪ ತಿಂಡಿ ತಿನ್ನೋಕೆ ಕಾಯ್ತಿದ್ದಾರೆ.”
“ಸರಿ ಆಯ್ತು ಅಮ್ಮ!” ಎಂದು ತಾಯಿಗೆ ಸಲ್ಯೂಟ್ ಹೊಡೆದ ಶುಭಾ, ಕೊನೆಗೂ ತನ್ನ ಬ್ಯಾಗ್ ರೆಡಿ ಮಾಡಿಕೊಂಡು ರೂಮಿನಿಂದ ಹೊರಬಂದಳು.
ಡೈನಿಂಗ್
ಟೇಬಲ್ ಬಳಿ ರಾಮಚಂದ್ರ ಈಗಾಗಲೇ ಕುಳಿತು ತಿಂಡಿ ತಿನ್ನುತ್ತಿದ್ದರು. ಶುಭಾಳನ್ನು ನೋಡಿದ ಕೂಡಲೇ, “ಬಂದಳಾ ನಮ್ಮ ರಾಜ ಕುಮಾರಿ? ಇವತ್ತು ಮೊದಲ ದಿನ ತಡವಾಗಿ ಹೋದರೆ ಪ್ರಿನ್ಸಿಪಾಲ್ ಮತ್ತೆ ಕ್ಲಾಸ್ ತೆಗೆದುಕೊಳ್ಳಬಹುದು ನೋಡು” ಎಂದು ನಗುತ್ತಾ ಹೇಳಿದರು.
“ಅಪ್ಪಾ, ನೀನಾದರೂ ಸುಮ್ಮನಿರು. ಬೆಳಗ್ಗೆಯಿಂದ ಅಮ್ಮನ ಕ್ಲಾಸ್ ಮುಗಿಯುತ್ತಿಲ್ಲ.”
“ಅಮ್ಮ ಹೇಳೋದು ಸರಿಯಾಗಿಯೇ ಇದೆ. ಎರಡನೇ ವರ್ಷಕ್ಕೆ ಬಂದಿದ್ದೀಯಾ. ಸ್ವಲ್ಪ ಜವಾಬ್ದಾರಿ ಕಲಿಯಬೇಕು.”
“ಅಯ್ಯೋ, ನೀವಿಬ್ಬರೂ ಸೇರಿಕೊಂಡು ನನ್ನ ವಿರುದ್ಧ ಪಿತೂರಿ ಮಾಡ್ತಿದ್ದೀರಾ!” ಎಂದು ಮುಖ ಸಣ್ಣದು ಮಾಡಿಕೊಂಡು ಕುರ್ಚಿಯಲ್ಲಿ ಕುಳಿತಳು.
ಸೀತಾ ತಟ್ಟೆಗೆ ತಿಂಡಿ ಹಾಕಿಕೊಡುತ್ತಾ, “ಮೊದಲು ತಿಂಡಿ ತಿನ್ನು. ಆಮೇಲೆ ನಿನ್ನ ಪಿತೂರಿ, ಪ್ರತಿಭಟನೆ ಎಲ್ಲ ಮಾಡು” ಎಂದರು.
ಶುಭಾ ತಿಂಡಿ ತಿನ್ನುತ್ತಿದ್ದಂತೆಯೇ ಪಕ್ಕದ ಕೋಣೆಯಿಂದ ಜಾನಕಮ್ಮ ಹೊರಬಂದರು. ಅಜ್ಜಿಯನ್ನು ನೋಡಿದ ಶುಭಾ ತಕ್ಷಣ ಎದ್ದು ಹೋಗಿ ಅವರ ಕಾಲಿಗೆ ನಮಸ್ಕರಿಸಿದಳು.
“ಚೆನ್ನಾಗಿರು ಪುಟ್ಟ. ಈ ವರ್ಷವಾದರೂ ಈಗಿನಿಂದಲೇ ಓದು. ಪರೀಕ್ಷೆ ಹತ್ತಿರ ಬಂದಾಗ ಮಾತ್ರ ಪುಸ್ತಕ ಹಿಡಿದುಕೊಂಡು ಕೂರುವ ಅಭ್ಯಾಸ ಬಿಡು” ಎಂದು ಜಾನಕಮ್ಮ ಆಶೀರ್ವದಿಸಿದರು.
“ಅಜ್ಜಿ, ನೀನೂ ಶುರು ಮಾಡಿದ್ಯಾ? ಇವತ್ತು ನನ್ನ ಕಾಲೇಜಿನ ಮೊದಲ ದಿನ. ಸ್ವಲ್ಪ ಒಳ್ಳೆಯದಾಗಲಿ ಅಂತ ಹಾರೈಸು. ಅಷ್ಟೇ!”
“ಒಳ್ಳೆಯದಾಗಲಿ ಅಂತಲೇ ಹೇಳಿದ್ದು ನನ್ನ ಪುಟ್ಟಿ. ನನ್ನ ಮೊಮ್ಮಗಳು ಒಳ್ಳೆಯ ಮಾರ್ಕ್ಸ್ ತಗೊಂಡು ಪಾಸ್ ಆಗಬೇಕು ಅನ್ನೋ ಆಸೆ ನನಗೂ ಇಲ್ವಾ?”
“ಆಯ್ತು ಅಜ್ಜಿ. ನಿನ್ನ ಆಸೆನೂ ಈಡೇರಿಸ್ತೀನಿ. ಈಗ ಆಶೀರ್ವಾದ ಸಾಕು.”
ತಿಂಡಿ ಮುಗಿಸಿ ಹೊರಟಾಗ,
“ದೀಪಾ… ನೀನು ಬರಲ್ವಾ ಕಾಲೇಜಿಗೆ? ಇನ್ನೂ ಎಷ್ಟು ಹೊತ್ತು ಮಲಗಿರ್ತೀಯಾ?” ಎಂದು ಕೂಗಿದಳು.
ಒಳಗಿನಿಂದಲೇ ಉತ್ತರಿಸಿದ ದೀಪಾ, “ಅಕ್ಕಾ, ನಮಗೆ ಇನ್ನೂ ಒಂದು ವಾರದ ನಂತರ ಕ್ಲಾಸ್ ಶುರುವಾಗೋದು. ಈಗಲೇ ಯಾಕೆ ಎಬ್ಬಿಸ್ತೀಯಾ?”
“ಓಹೋ! ನಿಮಗೆ ಇನ್ನೂ ಒಂದು ವಾರ ರಜಾನಾ? ಒಳ್ಳೆ ಮಜಾ ಮಾಡ್ತಿದ್ದೀಯಾ ಬಿಡು!”
ಅಷ್ಟರಲ್ಲಿ ಹೊರಗೆ ಬಂದ ದೀಪಾ, “ಅಕ್ಕಾ, ನಮ್ಮದು ಪಿಯುಸಿ ಸೆಕೆಂಡ್ ಇಯರ್. ನಿನಗೆ ಹೇಗೆ ಹೇಳಲಿ? ಈ ವರ್ಷ ತುಂಬಾ ಕಷ್ಟ ಅಲ್ವಾ. ಈಗಲೇ ನನಗೆ ಟೆನ್ಶನ್ ಶುರುವಾಗಿದೆ” ಎಂದಳು.
ಶುಭಾ ಅವಳನ್ನು ಮೇಲಿನಿಂದ ಕೆಳಗಿನವರೆಗೆ ನೋಡಿ ನಗುತ್ತಾ, “ಏನೇ, ಈಗಲೇ ಟೆನ್ಶನ್ನಾ? ನೀನು ಕಾಮರ್ಸ್ ಓದುತ್ತಿದ್ದೀಯಲ್ಲಾ. ನಾನೂ ಅದಕ್ಕಿಂತ ದೊಡ್ಡ ಹಂತ ದಾಟಿಕೊಂಡು ಬಂದಿದ್ದೀನಿ. ಏನೂ ಆಗಲ್ಲ ಬಿಡು. ಈಗ ಹೋಗಿ ನೆಮ್ಮದಿಯಿಂದ ನಿದ್ದೆ ಮಾಡು” ಎನ್ನುತ್ತಾ ಅಲ್ಲಿಂದ ನಡೆದಳು.
ಮನೆಯಿಂದ ಹೊರಬಂದ ಶುಭಾ, ರಸ್ತೆಯ ಬದಿಯಲ್ಲಿದ್ದ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದಳು. ಅದಾಗಲೇ ಕಾಲೇಜಿಗೆ ಹೋಗುವವರ ಓಡಾಟ ಶುರುವಾಗಿತ್ತು. ಒಂದೆರಡು ನಿಮಿಷ ಕಾಯುತ್ತಿದ್ದಂತೆಯೇ ಬಂದ ಬಸ್ಸನ್ನು ಹತ್ತಿದ ಅವಳು, ಕಿಟಕಿಯ ಪಕ್ಕದ ಸೀಟಿನಲ್ಲಿ ಹೇಗೋ ಜಾಗ ಮಾಡಿಕೊಂಡು ಕುಳಿತಳು.
ಬಸ್ಸಿನ ಕಿಟಕಿಯಿಂದ ಬೀಸುತ್ತಿದ್ದ ಗಾಳಿ ಮುಖಕ್ಕೆ ತಾಗುತ್ತಿದ್ದಂತೆ ಬೆಳಗ್ಗಿನಿಂದ ಇದ್ದ ಗಡಿಬಿಡಿಯ ಸ್ವಲ್ಪ ಸುಸ್ತು ಕಡಿಮೆಯಾದಂತಾಯಿತು. ಆದರೆ ಬಸ್ಸಿನ ಪ್ರಯಾಣ, ಜನಸಂದಣಿ ಮತ್ತು ಬಿಸಿಲಿನ ನಡುವೆ ಕಾಲೇಜು ತಲುಪುವಷ್ಟರಲ್ಲಿ ಅವಳ ಮುಖದಲ್ಲಿ ಬೆವರಿನ ಹನಿಗಳು ಮೂಡಿದ್ದವು.
ತಿಳಿ ನೀಲಿ ಬಣ್ಣದ ಸರಳವಾದ ಕಾಟನ್ ಕುರ್ತಾ, ಬಿಳಿ ಬಣ್ಣದ ಲೆಗ್ಗಿಂಗ್ಸ್ ಧರಿಸಿದ್ದಳು. ಕುರ್ತಾದ ತೋಳುಗಳು ಮೊಣಕೈವರೆಗಿದ್ದು, ಕುತ್ತಿಗೆಯ ಸುತ್ತಲೂ ಸಣ್ಣದಾದ ಕಸೂತಿ ವಿನ್ಯಾಸವಿತ್ತು. ಅದಕ್ಕೆ ಹೊಂದುವ ತೆಳುವಾದ ದುಪ್ಪಟ್ಟಾವನ್ನು ಒಂದು ಭುಜದ ಮೇಲೆ ಹಾಕಿಕೊಂಡಿದ್ದಳು. ಉದ್ದನೆಯ ಕಪ್ಪು ಕೂದಲನ್ನು ಎತ್ತರದ ಪೋನಿಟೇಲ್‌ನಲ್ಲಿ ಕಟ್ಟಿಕೊಂಡಿದ್ದಳು. ಕಿವಿಯಲ್ಲಿ ಪುಟ್ಟ ಓಲೆ, ಹಣೆಯಲ್ಲಿ ಸಣ್ಣ ಬಿಂದಿ, ಹೆಗಲಿಗೊಂದು ಕಾಲೇಜು ಬ್ಯಾಗ್… ಎಂದಿನ ಸರಳವಾದ ಅವತಾರ.
ಕಾಲೇಜಿನ ಗೇಟ್ ಬಳಿ ಇಳಿದವಳು, ಕರ್ಚೀಫ್ ಇಂದ ಹಣೆಯ ಬೆವರನ್ನು ಒರೆಸಿಕೊಂಡಳು. ಬ್ಯಾಗಿನಲ್ಲಿದ್ದ ಐಡಿ ಕಾರ್ಡ್ ತೆಗೆದು ಕುತ್ತಿಗೆಗೆ ಹಾಕಿಕೊಂಡು, ದುಪ್ಪಟ್ಟಾವನ್ನು ಸರಿಪಡಿಸಿಕೊಂಡು ಕಾಲೇಜಿನ ಒಳಗೆ ಹೆಜ್ಜೆ ಹಾಕಿದಳು.
“ಶುಭೂ… ಶುಭೂ…” ಹಿಂದಿನಿಂದ ಯಾರೋ ಕೂಗಿದ ಧ್ವನಿ ಕೇಳಿ ಅವಳು ತಿರುಗಿದಳು.
“ಏನೇ ಸುಬ್ಬಿ… ನಿಲ್ಲೇ!” ಎಂದು ಕೈ ಬೀಸುತ್ತಾ ಅವಳತ್ತ ಓಡಿಬಂದ ಕಾವ್ಯಳನ್ನು ನೋಡಿದ ಶುಭಾ, ಮುಖ ಸಣ್ಣದು ಮಾಡಿಕೊಂಡಳು.
“ಕಾವ್ಯಾ… ಎಷ್ಟು ಸಲ ಹೇಳಿದ್ದೀನಿ ನಿನಗೆ? ನನ್ನನ್ನು ಸುಬ್ಬಿ ಅಂತ ಕರೆಯಬೇಡ ಅಂತ! ಆ ಹೆಸರಂದ್ರೆ ನನಗೆ ಸ್ವಲ್ಪನೂ ಇಷ್ಟ ಇಲ್ಲ.”
“ಅಯ್ಯೋ, ಸರಿ ಕಣೇ ಶುಭೂ… ನಿನ್ನ ಹೆಸರನ್ನು ಪ್ರೀತಿಯಿಂದ ಕರೆಯೋಕೂ ಬಿಡಲ್ಲ. ನಿನ್ನನ್ನು ಏನಂತ ಕರೀಬೇಕು ಹೇಳು? ಶುಭಾದೇವಿ ಅಂತ ಕರೀಬೇಕಾ?” ಎಂದು ಕಾವ್ಯ ಕಣ್ಣು ಮಿಟುಕಿಸಿ, ಜೊತೆಯಾಗಿ ಹೆಜ್ಜೆ ಹಾಕಿದಳು.
“ನಿಜ ಹೇಳಬೇಕಂದ್ರೆ ಕಾವ್ಯಾ, ಒಂದು ತಿಂಗಳ ರಜೆ ಮುಗಿದು ಮತ್ತೆ ಕಾಲೇಜಿಗೆ ಬರೋಕೆ ನನಗೆ ಬೇಜಾರ್ ಆಗ್ತಿದೆ ಕಣೇ. ಮತ್ತೆ ಅದೇ ಕ್ಲಾಸ್, ಅದೇ ಪಾಠ, ಅದೇ ಅಸೈನ್‌ಮೆಂಟ್‌ಗಳು… ಅಬ್ಬಾ! ನೆನಪಿಸಿಕೊಂಡರೇ ಸಾಕು, ತಲೆ ನೋಯುತ್ತೆ.”
“ಹೌದು ಕಣೇ. ರಜೆ ಇದ್ದಾಗ ಬೆಳಿಗ್ಗೆ ಎದ್ದೇಳುವ ಟೆನ್ಶನ್ ಇರಲಿಲ್ಲ. ಯಾವಾಗ ಬೇಕೋ ಆಗ ಏಳೋದು, ಯಾವಾಗ ಬೇಕೋ ಆಗ ಊಟ ಮಾಡೋದು. ಈಗ ನೋಡು, ಮತ್ತೆ ಅದೇ ದಿನಚರಿ. ಅದರಲ್ಲೂ ಈ ವರ್ಷ ಸೆಕೆಂಡ್ ಇಯರ್ ಬೇರೆ. ಮೊದಲನೇ ವರ್ಷ ಹೇಗೋ ಕಳೆದುಹೋಯ್ತು. ಇನ್ನು ಮುಂದೆ ಏನಾಗುತ್ತೋ ದೇವರಿಗೇ ಗೊತ್ತು.”
ಇಬ್ಬರೂ ಮಾತನಾಡುತ್ತಾ ತಮ್ಮ ತರಗತಿಯ ಕಡೆಗೆ ನಡೆದರು.
ಕ್ಲಾಸ್ ಗೆ
ಬಂದ ಕೂಡಲೇ ಎಂದಿನಂತೆ ಮೂರನೇ ಬೆಂಚಿನಲ್ಲಿ ತಮ್ಮ ಜಾಗವನ್ನು ಹಿಡಿದುಕೊಂಡರು. ಒಂದು ತಿಂಗಳ ರಜೆಯ ನಂತರ ಮತ್ತೆ ಭೇಟಿಯಾಗಿದ್ದ ಸ್ನೇಹಿತರು ತಮ್ಮ ತಮ್ಮ ರಜೆಯ ಅನುಭವಗಳನ್ನು ಹಂಚಿಕೊಳ್ಳುತ್ತಾ ಗದ್ದಲ ಮಾಡುತ್ತಿದ್ದರು.
ಶುಭಾ ಮತ್ತು ಕಾವ್ಯ ಕೂಡ ತಮ್ಮ ಮಾತು ಮುಂದುವರಿಸಿದ್ದರು.
ಅಷ್ಟರಲ್ಲಿ, ಕಿರಣ್ ತನ್ನ ಸ್ನೇಹಿತರ ಜೊತೆ ಒಳಬಂದ. ಕ್ಲಾಸ್ ಲೀಡರ್ ಆಗಿದ್ದ ಅವನು. ಶುಭಾಳನ್ನು ಕಂಡ ಕೂಡಲೇ ಅವನ ಮುಖದಲ್ಲಿ ಸಣ್ಣ ನಗು ಮೂಡಿತು.
“ಹಾಯ್ ಶುಭಾ…” ಎಂದು ಅವಳ ಗಮನ ಸೆಳೆಯಲು ಪ್ರಯತ್ನಿಸಿದ.
ಆದರೆ ಶುಭಾ ಅವನತ್ತ ಒಮ್ಮೆ ನೋಡಿದಳಷ್ಟೇ ಹೊರತು, ವಿಶೇಷವಾಗಿ ಪ್ರತಿಕ್ರಿಯಿಸಲಿಲ್ಲ. ಮತ್ತೆ ಕಾವ್ಯಳ ಕಡೆ ತಿರುಗಿ ಮಾತು ಮುಂದುವರಿಸಿದಳು.
ಕಿರಣ್ ತನ್ನ ಸ್ನೇಹಿತ ನಾಗರಾಜ್‌ನ ಕಡೆ ತಿರುಗಿ ಏನೋ ಹೇಳುತ್ತಾ ಹಿಂದಿನ ಬೆಂಚಿನ ಕಡೆಗೆ ನಡೆದ.
ಇಬ್ಬರೂ ತಮ್ಮದೇ ಲೋಕದಲ್ಲಿ ಮಾತನಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಬಾಗಿಲ ಬಳಿ ಚಲನವಲನ ಕಂಡಿತು. ಪ್ರಿನ್ಸಿಪಾಲರು ಒಳಗೆ ಬಂದರು.
ಅವರನ್ನು ನೋಡಿದ ಕೂಡಲೇ ವಿದ್ಯಾರ್ಥಿಗಳ ಗದ್ದಲ ನಿಧಾನವಾಗಿ ಕಡಿಮೆಯಾಯಿತು. ಎಲ್ಲರೂ ತಮ್ಮ ತಮ್ಮ ಜಾಗದಲ್ಲಿ ಸರಿಯಾಗಿ ಕುಳಿತರು.
“ಶುಭಾ… ಪ್ರಿನ್ಸಿಪಾಲ್ ಯಾಕೆ ಬಂದಿದ್ದಾರೆ? ಮತ್ತೆ ಭಾಷಣ ಶುರು ಮಾಡ್ತಾರೇನೋ?” ಕಾವ್ಯ ಪಿಸುಗುಟ್ಟಿದಳು.
“ಹೌದು. ಇವತ್ತು ಮೊದಲ ದಿನ ಅಲ್ವಾ? ಏನಾದರೂ ಭಾಷಣ ಇದ್ದೇ ಇರುತ್ತೆ. ನೀನು ಆರಾಮಾಗಿ ಕೂತ್ಕೋ. ನಾವಿಬ್ಬರೂ ಸ್ವಲ್ಪ ಹೊತ್ತು ನಿದ್ದೆ ಮಾಡಬಹುದು!” ಎಂದು ತುಂಟ ನಗು ಬೀರಿದಳು ಶುಭಾ.
ಪ್ರಿನ್ಸಿಪಾಲರು ಮೇಜಿನ ಮುಂದೆ ಬಂದು ನಿಂತು ವಿದ್ಯಾರ್ಥಿಗಳನ್ನೆಲ್ಲಾ ಒಮ್ಮೆ ನೋಡಿ,
“ಮಕ್ಕಳೇ, ಎಲ್ಲರಿಗೂ ಶುಭೋದಯ!”
“ಗುಡ್ ಮಾರ್ನಿಂಗ್ ಸರ್!” ಎಂದು ವಿದ್ಯಾರ್ಥಿಗಳೆಲ್ಲರೂ ಒಟ್ಟಿಗೆ ಉತ್ತರಿಸಿದರು.
“ಒಂದು ತಿಂಗಳ ರಜೆಯ ನಂತರ ಮತ್ತೆ ಕಾಲೇಜಿಗೆ ಬಂದಿದ್ದೀರಿ. ಎಲ್ಲರೂ ಖುಷಿಯಾಗಿದ್ದೀರಿ ಅಂತ ಅಂದುಕೊಳ್ಳುತ್ತೇನೆ. ಇವತ್ತು ನಿಮ್ಮನ್ನು ಹೆಚ್ಚು ಹೊತ್ತು ಕೂರಿಸಿ ಭಾಷಣ ಮಾಡುವ ಉದ್ದೇಶ ನನಗಿಲ್ಲ. ನಿಮಗೂ ಮೊದಲ ದಿನವೇ ಬೋರ್ ಮಾಡುವುದು ಬೇಡ!” ಎಂದು ನಗುತ್ತಾ ಹೇಳಿದರು.
ಅದನ್ನು ಕೇಳಿ ವಿದ್ಯಾರ್ಥಿಗಳ ಮುಖದಲ್ಲಿ ಸ್ವಲ್ಪ ನಿರಾಳತೆ ಮೂಡಿತು.
“ನಿಮಗೊಂದು ಮುಖ್ಯವಾದ ವಿಷಯ ತಿಳಿಸುವುದಕ್ಕೋಸ್ಕರ ಬಂದಿದ್ದೇನೆ. ನಮ್ಮ ಕಾಲೇಜಿಗೆ ಹೊಸ Biology Lecturer ನೇಮಕವಾಗಿದ್ದಾರೆ. ಅವರು ಇವತ್ತಿನಿಂದಲೇ ಪಾಠ ಮಾಡೋಕೆ ಬರ್ತಾ ಇದಾರೆ. ಸ್ವಲ್ಪ ಹೊತ್ತಿನಲ್ಲೇ ಇಲ್ಲಿಗೆ ಬರ್ತಾರೆ. ಎಲ್ಲರೂ ಅವರಿಗೆ ಸಹಕರಿಸಬೇಕು. ಹೊಸ ಉಪನ್ಯಾಸಕರು ಬಂದಿದ್ದಾರೆ ಅಂತ ಯಾರೂ ತುಂಟಾಟ ಮಾಡಬಾರದು. ಶಿಸ್ತಿನಿಂದ ವರ್ತಿಸಬೇಕು” ಎಂದವರು,
“ನಿಮ್ಮ ಹೊಸ ಶೈಕ್ಷಣಿಕ ವರ್ಷ ಚೆನ್ನಾಗಿ ಸಾಗಲಿ. ಆಲ್ ದಿ ಬೆಸ್ಟ್!”
ಎಂದು ಹೇಳಿ ಅವರು ಅಲ್ಲಿಂದ ಹೊರನಡೆದರು.
ಅವರು ಹೋದ ಕೂಡಲೇ ಕಾವ್ಯ ಶುಭಾಳ ಕಡೆ ತಿರುಗಿದಳು.
“ಏನೇ ಶುಭಾ, ಈ ಕಾಲೇಜಿನಲ್ಲಿ ಪ್ರತಿ ವರ್ಷವೂ ಒಬ್ಬೊಬ್ಬ ಹೊಸ ಲೆಕ್ಚರರ್ ಬರ್ತಾರೆ. ಈ ವರ್ಷನೂ ಹೊಸ Biology Lecturer! ನೋಡೋಣ, ಹೇಗಿರ್ತಾರೋ?”
“ಹೂಂ…” ಎಂದು ಶುಭಾ ಅಷ್ಟೇ ಉತ್ತರಿಸಿದಳು.
“ಏನೋ, ಈ ಸಲವಾದರೂ ಸ್ವಲ್ಪ ಯಂಗ್ ಆಗಿರೋ ಸರ್ ಬರಲಿ. ನೋಡೋಕೆ ಚೆನ್ನಾಗಿರಬೇಕು. ಕ್ಲಾಸ್ ಕೂಡ ಚೆನ್ನಾಗಿ ತಗೋಬೇಕು. ಅಂಥವರು ಸಿಕ್ಕರೆ Biology ಕ್ಲಾಸ್‌ಗೆ ಕೂರುವುದಕ್ಕೆ ಸ್ವಲ್ಪವಾದರೂ ಆಸಕ್ತಿ ಬರುತ್ತೆ! ಇಲ್ಲ ಅಂದರೆ ಅಷ್ಟು ಆಸಕ್ತಿ ಇರೋ ಬಯಾಲಜಿ ಕೂಡ ನಿದ್ದೆ ಬರುವ ಹಾಗೆ ಆಗುತ್ತೆ ” ಎಂದು ಕಾವ್ಯ ಕಣ್ಣು ಮಿಟುಕಿಸಿದಳು.
“ನಿನಗೆ ಪಾಠಕ್ಕಿಂತ ಲೆಕ್ಚರರ್‌ಗಳ ಮೇಲೆಯೇ ಆಸಕ್ತಿ ಜಾಸ್ತಿ ಅನಿಸುತ್ತೆ!” ಎಂದು ಶುಭಾ ನಕ್ಕಳು.
“ಹಾಗೇನಿಲ್ಲ ಕಣೇ. ಆದರೆ ಹೊಸ ಸರ್ ಯಂಗ್ ಆಗಿದ್ದರೆ ಚೆನ್ನಾಗಿರುತ್ತೆ ಅಷ್ಟೇ. ಇಲ್ಲದಿದ್ದರೆ ಮತ್ತೆ ಅದೇ ಹಳೆಯ ಬೋರು ಮುಖ ನೋಡಿಕೊಂಡು ಪಾಠ ಕೇಳಬೇಕು!”
ಕಾವ್ಯಳ ಮಾತಿಗೆ ಶುಭಾ ನಗಲು ಪ್ರಯತ್ನಿಸಿದರೂ, ‘ಹೊಸ Biology Lecturer’ ಎಂಬ ಮಾತು ಕೇಳಿದ ಕ್ಷಣದಿಂದಲೇ ಅವಳ ಮನಸ್ಸಿನಲ್ಲಿ ಯಾರದ್ದೋ ಮುಖ ಸುಳಿದು ಹೋದಂತಾಗಿತ್ತು.
ಆದರೆ ಆ ಯೋಚನೆಯನ್ನು ಹೆಚ್ಚು ಹೊತ್ತು ಮುಂದುವರಿಸಲು ಅವಳಿಗೆ ಸಾಧ್ಯವಾಗಲಿಲ್ಲ. ಏಕೆಂದರೆ, ಕ್ಲಾಸ್ರೂಂ ಬಾಗಿಲ ಬಳಿ ಯಾರೋ ಬಂದು ನಿಂತಿದ್ದರು.
ವಿದ್ಯಾರ್ಥಿಗಳ ಗಮನವೆಲ್ಲಾ ಆ ಕಡೆಗೆ ಹರಿಯಿತು.
ಮರು
ಕ್ಷಣ…
ಒಳಗೆ ಹೆಜ್ಜೆ ಇಡುತ್ತಿದ್ದ ವ್ಯಕ್ತಿಯನ್ನು ಕಂಡ ಶುಭಾಳ ಕಣ್ಣುಗಳು ಆಶ್ಚರ್ಯದಿಂದ ಅರಳಿದವು. ಮುಖದಲ್ಲಿದ್ದ ನಗು ಕ್ಷಣಾರ್ಧದಲ್ಲಿ ಮಾಯವಾಯಿತು. ಕೈಯಲ್ಲಿದ್ದ ಪೆನ್ ಕೂಡ ಅವಳ ಬೆರಳುಗಳ ನಡುವೆ ಹಾಗೆಯೇ ನಿಂತುಹೋಯಿತು.
“ಅಯ್ಯೋ ದೇವರೇ… ಇವನ? ನಾನಿವತ್ತು ಯಾರ ಮುಖ ನೋಡಿಕೊಂಡು ಎದ್ದೆ!” ಎಂದು ಅರಿವಿಲ್ಲದೆಯೇ ಪಿಸುಗುಟ್ಟಿದಳು.
ಮುಂದುವರಿಯುವುದು…
ಸಂಚಿಕೆ ಹೇಗಿತ್ತು? ಶುಭಾ ಇಷ್ಟ ಆದಳ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಲು ಮರೆಯಬೇಡಿ.
ಇನ್ನಷ್ಟು ಸುಂದರ ಸಂಚಿಕೆಗಳಿಗಾಗಿ ನನ್ನನ್ನು Follow ಮಾಡಿ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ಸದಾ ಹೀಗೆಯೇ ಇರಲಿ! ❤️
ಮೌನಿ ❤️
Swipe left/right or tap the sides to turn pages