New Katha Varnika is now on Google Play — read Telugu stories on your phone. Learn more
ಮಧುರ ಪ್ರೇಮ 💕 – 4

ಮಧುರ ಪ್ರೇಮ 💕 – 4

ಮಧುರ ಪ್ರೇಮ 💕 – ೪

ಹಜಾರದಲ್ಲಿ ವಿಂಧ್ಯ, ವಿಖ್ಯಾತ್ ಉಮಾದೇವಿ ಎಲ್ಲರೂ ಈ ತಿಂಡಿ ಘಟನೆ ನೋಡಿ ಮುಸಿ ಮುಸಿ ನಕ್ಕಿದ್ದು ವರ್ಣ ಕಣ್ಣಿಗೆ ಬಿದ್ದಿತ್ತು.

ಮನಸ್ಸಿನಲ್ಲಿ ವೇದಾಂತ್ ಮೇಲೆ ಕೋಪ ಜಾಸ್ತಿ ಆಗಿತ್ತು. ಹಠದಿಂದ ಮುಖ ಸಿಂಡರಿಸಿಕೊಂಡೇ ಹೋಗಿ ಸೋಫಾ ಮೇಲೆ ಕುಳಿತಳು ವರ್ಣ.

 

ವೇದಾಂತ್ ಬಂದು ಪಕ್ಕದಲ್ಲೇ ಕುಳಿತರೂ ವರ್ಣ ಮಾತ್ರ ಅವನ ಕಡೆ ನೋಡಲಿಲ್ಲ. ಕೋಪದಿಂದ ಪಕ್ಕದಲ್ಲಿದ್ದ ನ್ಯೂಸ್‌ಪೇಪರ್ ಎಳೆದುಕೊಂಡು ಜೋರಾಗಿ ಶಬ್ದ ಮಾಡುತ್ತಾ ಪುಟಗಳನ್ನು ತಿರುವಲು ಶುರು ಮಾಡಿದಳು.

 

“ನೋಡಿದ್ರಾ, ಈ ಮನೆಯಲ್ಲಿ ಯಾರ ಮಾತನ್ನೂ ಕೇಳದ ಈ ಹಠದ ವರ್ಣನ ಕಂಟ್ರೋಲ್ ಮಾಡೋಕೆ ನಮ್ಮ ವೇದು ಒಬ್ಬನೇ ಸರಿಯಾದವನು.”

ಅಜ್ಜಿಯ ಮಾತು ಕೇಳಿ ವರ್ಣಳಿಗೆ ಉರಿ ಇನ್ನಷ್ಟು ಜಾಸ್ತಿಯಾಯಿತು. 

 

“ಅಜ್ಜಿ! ನೀನು ಸುಮ್ಮನಿರು. ಇವನೇನು ನನ್ನ ಕಂಟ್ರೋಲ್ ಮಾಡೋದು? ಅತ್ತೆ ಕಷ್ಟಪಟ್ಟು ಇಡ್ಲಿ ಮಾಡಿದ್ದಾರಲ್ಲ ಅಂತ ಸುಮ್ಮನೆ ತಿಂದೆ ಅಷ್ಟೇ, ಇಲ್ಲದಿದ್ರೆ ಇವನಿಗೆ ಚೆನ್ನಾಗಿ ತೋರಿಸ್ತಿದ್ದೆ ನಾನು ಏನು ಅಂತ” ಎಂದು ಮುಖ ಸಿಂಡರಿಸಿ ಅಜ್ಜಿಗೆ ಉಲ್ಟಾ ಉತ್ತರ ಕೊಟ್ಟಳು.

 

“ಹೌದು ಹೌದು… ಆ ತೋರಿಸೋದು ನಮಗೆಲ್ಲಾ ಗೊತ್ತಿದೆ ಬಿಡು ಪುಟ್ಟಿ. ಇವನ ಒಂದು ನೋಟಕ್ಕೆ ರೇವಂತ್ ಮಾತು ಕೇಳದೆ ಇರೋ ಒಬ್ಬರು ಹಾಗೆ ಸುಮ್ಮನೆ ಕೂತು ಇಡ್ಲಿ ಖಾಲಿ ಮಾಡಿದ್ದು ಯಾರು?” 

 

ವರ್ಣ ಏನು ಹೇಳಲಾಗದೆ ತನ್ನ ಕೋಪವನ್ನೆಲ್ಲಾ ಆ ನ್ಯೂಸ್‌ಪೇಪರ್ ಮೇಲೆ ತೋರಿಸಿದಳು. ಪುಟಗಳನ್ನು ಪೇಪರ್ ಹರಿಯುವ ಹಂತಕ್ಕೆ ತಿರುಗಿಸಿದಳು.

 

ಪಕ್ಕದಲ್ಲೇ ಕುಳಿತಿದ್ದ ವೇದಾಂತ್ ಮೆಲ್ಲಗೆ ಅವಳ ಕೈಯಲ್ಲಿದ್ದ ಪೇಪರ್ ಮೇಲೆ ಕೈ ಇಟ್ಟು,

“ಹೇಯ್ … ಸ್ವಲ್ಪ ನಿಧಾನ! ಆ ಪೇಪರ್ ನಿನಗೆ ಏನೂ ದ್ರೋಹ ಮಾಡಿಲ್ಲ. ಅದನ್ನ ಹರಿದು ಹಾಕಬೇಡ, ಅದನ್ನ ಇನ್ನು ನಾನು ಓದೋದಿದೆ. ನಿನ್ನ ಸಿಟ್ಟನ್ನೆಲ್ಲಾ ಪೇಪರ್ ಮೇಲೆ ತೋರಿಸಿದ್ರೆ ಅದರಲ್ಲಿರೋ ಸುದ್ದಿನೂ ಓಡಿಹೋಗುತ್ತೆ ನೋಡ್ಕೋ!” ಎಂದ. 

 

“ನನ್ನ ಇಷ್ಟ! ನಾನು ಹೇಗೆ ಬೇಕಾದರೂ ಓದ್ತೀನಿ. ನೀನು ನಿನ್ನ ಕೆಲಸ ತೆಪ್ಪಗೆ ನೋಡ್ಕೋ” ಎಂದು ಪೇಪರ್ ಅನ್ನು ಅವನಿಂದ ದೂರ ಎಳೆದುಕೊಂಡಳು.

 

“ಓಹೋ…ಇತೀಚೆಗೆ ಸುದ್ದಿಗಳೆಲ್ಲಾ ತಲೆಕೆಳಗಾಗಿ ಪ್ರಿಂಟ್ ಆಗ್ತಿದೆಯಾ? ಹೇಗೆ?” 

 

“ಏನೋ ಈಡಿಯಟ್!…” ಎಂದು ವರ್ಣ ಸಿಟ್ಟಿನಿಂದ ಪೇಪರ್ ಅನ್ನು ಸರಿಯಾಗಿ ಗಮನಿಸಿದಾಗ, ಅಕ್ಷರಗಳೆಲ್ಲಾ ಉಲ್ಟಾ ಇರೋದು ಅವಳ ಕಣ್ಣಿಗೆ ಬಿತ್ತು!

 

ಅಷ್ಟರಲ್ಲೇ ಪಕ್ಕದಲ್ಲಿದ್ದ ವಿಖ್ಯಾತ್ ಮತ್ತು ವಿಂಧ್ಯಾ ಇಬ್ಬರೂ ಇವಳ ಮುಖ ನೋಡಿ ಜೋರಾಗಿ ನಗಲು ಶುರು ಮಾಡಿದರು. 

 

ಅವಳು ತಕ್ಷಣ ಮುಜುಗರವನ್ನು ಮರೆಮಾಚಲು ಪೇಪರ್ ಅನ್ನು ಸರಿಪಡಿಸಿ ಹಿಡಿದುಕೊಳ್ಳುತ್ತಾ, 

“ನ… ನನಗೆ ಗೊತ್ತು! ನಾನು ಸುಮ್ಮನೆ ಹೆಡ್‌ಲೈನ್ಸ್ ಚೆಕ್ ಮಾಡ್ತಿದ್ದೆ ಅಷ್ಟೇ” ಎಂದು ಮುಖ ಸಿಂಡರಿಸಿದಳು.

 

ವೇದಾಂತ್ ಅವಳ ಆ ಮುದ್ದಾದ ಮುಜುಗರದ ಮುಖವನ್ನು ನೋಡಿ ಕಣ್ಣು ಮಿಟುಕಿಸುತ್ತಾ, 

“ಹೌದು ಹೌದು, ಉಲ್ಟಾ ಹೆಡ್‌ಲೈನ್ಸ್ ಓದೋದ್ರಲ್ಲಿ ನನ್ನ ಡಿಂಪಲ್ ಫಸ್ಟ್!” ಎಂದು ಮತ್ತೆ ಕಾಲೆಳೆದ.

 

ಅಷ್ಟರಲ್ಲಿ, 

ಅಷ್ಟರಲ್ಲಿ ಚಿನ್ಮಯಿ ಕೈಯಲ್ಲಿ ಬಿಸಿಬಿಸಿ ಕಾಫಿ ಲೋಟ ಹಿಡಿದುಕೊಂಡು ಅಲ್ಲಿಗೆ ಬಂದಳು. ವೇದಾಂತ್ ತಕ್ಷಣ ಅವಳ ಕೈಯಿಂದ ಕಾಫಿ ಲೋಟವನ್ನು ತಾನೇ ತೆಗೆದುಕೊಂಡು, ಅದನ್ನು ಮೆಲ್ಲನೆ ವರ್ಣಳ ಮುಖದ ಹತ್ತಿರ ತಂದು ತೋರಿಸಿದ.

 

ಲೋಟದಿಂದ ಬರುತ್ತಿದ್ದ ಆ ಘಮಘಮಿಸುವ ಕಾಫಿಯ ಸುವಾಸನೆ ವರ್ಣಳ ಮೂಗಿಗೆ ಬಡಿಯಿತು. 

ಆದರೂ ಅವಳು ಮುಖ ತಿರುಗಿಸಿಕೊಂಡು, 

“ನನಗೆ ಇದು ಬೇಡವೇ ಬೇಡ! ಆಲ್ರೆಡಿ ಆ ನಾನ್ಸೆನ್ಸ್ ಇಡ್ಲಿನ ಬಲವಂತವಾಗಿ ತಿನ್ನಿಸಿದ್ದೀಯಾ, ಈಗ ಮತ್ತೆ ಇದನ್ನ ಯಾಕೆ ತಂದು ತೋರಿಸ್ತಾ ಇದ್ದೀಯಾ? ತಗೊಂಡು ಹೋಗು ಇಲ್ಲಿಂದ!” ಸಿಡುಕಿದಳು.

 

ವೇದಾಂತ್ ಕಾಫಿ ಲೋಟವನ್ನು ತನ್ನ ಮೂಗಿನ ಹತ್ತಿರ ತೆಗೆದುಕೊಂಡು ಹೋಗಿ ದೀರ್ಘವಾಗಿ ಉಸಿರೆಳೆದ. 

“ವಾವ್!!… ನಿಜವಾಗಲೂ ಕಾಫಿ ಸ್ಮೆಲ್ ಮಾತ್ರ ಸೂಪರ್ ಆಗಿದೆ! ಅಮ್ಮ ಮಾಡಿರೋ ಕಾಫಿ ಯಾವತ್ತೂ ಬೆಸ್ಟ್ ಇರುತ್ತೆ. ಸರಿ, ನಿನಗೆ ಬೇಡ ಅಂದ್ಮೇಲೆ ನಾನೇ ಕುಡಿತೀನಿ” ಎನ್ನುತ್ತಾ ಲೋಟವನ್ನು ತನ್ನ ತುಟಿಯ ಹತ್ತಿರ ತಂದ.

 

ವರ್ಣ ಕಾಫಿ ಪ್ರೇಮಿ ಆಗಿದ್ದರಿಂದ, ಆ ಬಿಸಿಬಿಸಿ ಕಾಫಿಯ ಮಧುರವಾದ ಸುವಾಸನೆಗೆ ಅವಳ ಮನಸ್ಸು ಒಳಗೊಳಗೇ ಟೆಂಪ್ಟ್ ಆಗಿತ್ತು. ವೇದಾಂತ್ ನಿಜವಾಗಿಯೂ ಆ ಕಾಫಿಯನ್ನು ತಾನೇ ಕುಡಿದುಬಿಡುತ್ತಾನೆನೋ ಎಂದು ಅವಳು ಅವನನ್ನೇ ನೋಡುತ್ತಿದ್ದಳು. ವೇದಾಂತ್ ಮಾತ್ರ ಅವಳನ್ನು ಪೀಡಿಸದೆ ತುಂಬಾ ಸಹಜವಾಗಿ ಕುಡಿಯುವವನಂತೆ ನಟಿಸುತ್ತಿದ್ದ.

 

ಕೊನೆಗೂ ಅವಳಿಗೆ ತಡೆಯಲು ಸಾಧ್ಯವಾಗಲಿಲ್ಲ. ಹಠ ಬದಿಗಿಟ್ಟು, “ಸರಿ ಸರಿ… ಕೊಡು. ನಾನೇ ಕುಡಿತೀನಿ. ಅತ್ತೆ ಅಷ್ಟು ಕಷ್ಟಪಟ್ಟು ಪ್ರೀತಿಯಿಂದ ಮಾಡಿಕೊಟ್ಟಿದ್ದಾರೆ ಅಂದಮೇಲೆ ನಾನು ಕುಡಿಯಲೇಬೇಕು ಅಲ್ವಾ?” ಹಾಗೇ… ನೀನು ಟೀ ಕುಡಿತೀಯ ತಾನೇ? ಅದಕ್ಕೆ ಇದನ್ನ ನನಗೆ ಕೊಡು” ಎಂದು ಅವನ ಕೈಯಲ್ಲಿದ್ದ ಲೋಟವನ್ನು ಕಸಿದುಕೊಳ್ಳುವಂತೆ ಕೈ ಚಾಚಿದಳು.

 

ವೇದಾಂತ್ ನಸುನಗುತ್ತಾ ಆ ಕಾಫಿ ಲೋಟವನ್ನು ಅವಳ ಕೈಗೆ ಕೊಟ್ಟ.

 

ಅಲ್ಲಿಯವರೆಗೆ ಇವರಿಬ್ಬರ ಆಟವನ್ನು ನೋಡುತ್ತಿದ್ದ ವಿಂಧ್ಯ ಮೆಲ್ಲನೆ ನಕ್ಕು, “ಏನೇ ಆದರೂ ಕೊನೆಗೆ ನಮ್ಮ ಅಣ್ಣನೇ ಗೆಲ್ಲೋದು!” ಎಂದು ರೇಗಿಸಿದಳು.

 

“ಸರಿಯಾಗಿ ಹೇಳಿದೆ ಬಂಗಾರಿ ನೀನು” ಎಂದು ಉಮಾದೇವಿ ದನಿಗೂಡಿಸಿದರು.

 

ವರ್ಣ ಆ ಮಾತನ್ನು ಗಮನಿಸಿದರೂ, ತನಗೆ ಆ ಕಾಫಿ ಕುಡಿಯುವ ಖುಷಿಯಲ್ಲಿ ಅದರಲ್ಲೇ ಬ್ಯುಸಿಯಾಗಿಬಿಟ್ಟಳು. ಆದರೂ ವೇದಾಂತ್ ಕಡೆ ಒಂದು ಮುದ್ದಾದ ಮುನಿಸಿನ ನೋಟ ಬೀರಲು ಅವಳು ಮರೆಯಲಿಲ್ಲ.

 

ಅಷ್ಟರಲ್ಲಿ ರೇವಂತ್ ಮತ್ತು ಚಿತ್ರ ದೇವಸ್ಥಾನದಿಂದ ಹಿಂತಿರುಗಿ ಬಂದಿದ್ದರು.

 

ಅಪ್ಪನನ್ನು ಕಂಡೊಡನೆ ವರ್ಣಳ ಮುಖದಲ್ಲಿ ಮಂದಹಾಸ ಮೂಡಿತು. ಸೋಫಾದಿಂದ ಸಂಭ್ರಮದಿಂದ ಎದ್ದು ಹೋದವಳೇ, “ಡ್ಯಾಡಿ… ಬಂದ್ರಾ?” ಎನ್ನುತ್ತಾ ರೇವಂತ್ ಅನ್ನು ತಬ್ಬಿಕೊಂಡಳು.

 

ಅಲ್ಲಿಯೇ ಕುಳಿತಿದ್ದ ಉಮಾದೇವಿಯವರು ತಲೆ ಕೊಡವಿಕೊಂಡು, “ಏನ್ ಪುಟ್ಟ ಅದು? ಡ್ಯಾಡಿ ಗೀಡಿ ಅಂತ? ಲಕ್ಷಣವಾಗಿ ಅಪ್ಪ ಅಂತ ಹೇಳಬಾರದ” ಎಂದು ಮೆಲ್ಲಗೆ ಗದರಿಸಿದರು.

 

ವರ್ಣ ರೇವಂತ್ ಭುಜಕ್ಕೆ ತಲೆ ಇಟ್ಟು, 

“ಅಜ್ಜಿ… ನೀನು ಇನ್ನೂ ಆ ಹಳೇ ಕಾಲದಲ್ಲೇ ಇದ್ದೀಯಾ. ಇವಾಗೆಲ್ಲಾ ಹಂಗೇ ಕರೆಯೋದು. ಅಲ್ವಾ ಡ್ಯಾಡಿ?” ಎಂದಳು. ಮಗಳ ಅತಿಶಯೋಕ್ತಿಯನ್ನು ಕಂಡು ರೇವಂತ್ ನಗುತ್ತಾ ಅವಳ ತಲೆ ಸವರಿದ.

 

ಅಷ್ಟರಲ್ಲಿ ಉಮಾದೇವಿಯವರು ವರ್ಣಳ ಕಡೆಗೆ ನೋಡಿ, 

“ಹಾಗೇ ನಮ್ಮ ವೇದು ವಿಷಯದಲ್ಲೂ ಸ್ವಲ್ಪ ಆ ಸಂಸ್ಕಾರ ತೋರಿಸು ಪುಟ್ಟಿ. ಅವನು ನಿನಗಿಂತ ದೊಡ್ಡವನು, ಲಕ್ಷಣವಾಗಿ ಬಾವ ಅಂತ ಕರಿಬಾರದಾ? ಯಾವಾಗ್ಲೂ ಹೆಸರು ಹಿಡಿದೇ ಕರೀತಿಯಲ್ಲ. ಅಣ್ಣ ಮತ್ತೆ ನಮ್ಮ ಬಂಗಾರಿ ನೋಡಿ ಕಲಿ, ಎಲ್ಲರಿಗೂ ಎಷ್ಟು ಗೌರವ ಕೊಡ್ತಾರೆ” ಎಂದು ಪ್ರೀತಿಯಿಂದಲೇ ಬುದ್ಧಿವಾದ ಹೇಳಿದರು.

 

ವರ್ಣ ತಕ್ಷಣ ಮುಖ ಗಂಟಿಕ್ಕಿತು.

 

“ಹೋಗು ಅಜ್ಜಿ… ಎಲ್ಲ ವಿಷಯದಲ್ಲೂ ನೀನೇ ನನ್ನ ಸಪೋರ್ಟ್ ಮಾಡ್ತೀಯ. ನಾನು ಏನು ಮಾಡಿದರೂ ನನ್ನ ಪುಟ್ಟಿ ಅಂತ ಮುದ್ದು ಮಾಡ್ತೀಯ. ಆದರೆ ಇಂಥ ವಿಷಯ ಬಂದಾಗ ನಿನ್ನ ಪ್ರವಚನ ಶುರು ಆಗಿಬಿಡುತ್ತೆ. ನನಗೆ ಅವನು ವೇದಾಂತ್, ವೇದಾಂತ್ ಅಷ್ಟೇ!” ಎಂದು ತನ್ನ ನಿಲುವನ್ನು ಸಮರ್ಥಿಸಿಕೊಂಡಳು.

 

ಅಲ್ಲಿಯೇ ಕುಳಿತಿದ್ದ ವೇದಾಂತ್ ನಗುತ್ತಾ ಕೈ ಮುಗಿದ.

“ಯಪ್ಪಾ ಅಜ್ಜಿ… ಸಾಕು ಬಿಡಿ. ಇವಳ ಹತ್ತಿರ ಬಾವ ಅಂತ ಕರೆಸಿಕೊಳ್ಳೋ ಆಸೆ ನನಗಂತೂ ಇಲ್ಲ. ಇವಳು ಪ್ರೀತಿಯಿಂದ ಕರೆಯೋದಕ್ಕಿಂತ ಹೆಚ್ಚಾಗಿ ಜಗಳ ಆಡೋಕೆ ನನ್ನ ಹೆಸರು ಬಳಸೋದೇ ಜಾಸ್ತಿ. ಹೆಸರು ಹಿಡಿದೇ ಕರೀಲಿ ಬಿಡಿ, ಅಟ್ಲೀಸ್ಟ್ ಅವಳ ಬಾಯಲ್ಲಿ ನನ್ನ ಹೆಸರಾದರೂ ಸರಿಯಾಗಿ ಬರ್ತಾ ಇದೆ ಅಲ್ವಾ ಅಷ್ಟೇ ಸಾಕು!”

 

“ನಿನ್ನ” ಎಂದು ವರ್ಣ ಮತ್ತೆ ಏನೋ ಉತ್ತರಿಸಲು ಮುಂದಾದಳು.

ಆದರೆ ಚಿತ್ರಾ ತಕ್ಷಣ ಅವಳ ಭುಜಕ್ಕೆ ಮೆಲ್ಲಗೆ ಒಂದು ಪೆಟ್ಟು ಕೊಟ್ಟು, “ಸಾಕು ವರ್ಣ! ಎಷ್ಟು ವಾದ ಮಾಡ್ತೀಯ?” ಎಂದಳು.

 

“ಅಮ್ಮಾ…ನೀವು ಯಾವಾಗಲೂ ಹೀಗೆ. ಎಲ್ಲರೂ ಏನು ಬೇಕಾದರೂ ಹೇಳಬಹುದು, ನಾನು ಬಾಯಿ ತೆಗೆದರೆ ಮಾತ್ರ ನಿಮಗೆ ಸಮಸ್ಯೆ!” ಎಂದು ವರ್ಣ ಬೇಸರದಿಂದ ಹೇಳಿದಳು.

 

ಅದಕ್ಕೆ ಉಮಾದೇವಿಯವರು ನಗುತ್ತಾ, 

“ಅಯ್ಯೋ, ಅಮ್ಮನ ಕೈಯಲ್ಲಿ ಇಷ್ಟು ಪೆಟ್ಟು ತಿಂದವರು ನಮ್ಮ ಕುಟುಂಬದಲ್ಲಿ ಯಾರೂ ಇಲ್ಲ. ಆದರೂ ನಮ್ಮ ಪುಟ್ಟಿಯ ಹಠ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ!” ಹೇಳಿದರು.

 

ಚಿನ್ಮಯಿ ಸಹ ನಕ್ಕು, “ಅತ್ತಿಗೆ, ಅದು ನಿಜ. ಇಷ್ಟು ಬೈದರೂ, ಇಷ್ಟು ಪೆಟ್ಟು ತಿಂದರೂ ವರ್ಣ ಮಾತ್ರ ವರ್ಣನೇ!” ಎಂದಳು.

 

ಉಮಾದೇವಿಯವರು ಕೈ ಬೀಸುತ್ತಾ, 

“ಸರಿ ಬಿಡಿ.. ಯಾರೂ ಯಾರಿಗೂ ಕಮ್ಮಿ ಇಲ್ಲ ಇಲ್ಲಿ. ಒಬ್ಬರು ಒಂದು ಮಾತು ಅಂದ್ರೆ, ಇನ್ನೊಬ್ಬರು ಅದಕ್ಕೆ ನೂರು ಮಾತು ರೆಡಿ ಇಟ್ಕೊಂಡಿರ್ತಾರೆ.” ಹೇಳಿದರು.

 

ರೇವಂತ್ ಎಲ್ಲರನ್ನೂ ನೋಡಿ ನಕ್ಕ.

“ಇವರಿಬ್ಬರ ಜಗಳ ಇಲ್ಲದಿದ್ರೆ ಈ ಮನೆಯಲ್ಲಿ ಕಳೆ ಇರಲ್ಲ ಚಿತ್ರಾ, ಬಿಡು ಅವರನ್ನ” ಎನ್ನುತ್ತಾ ರೂಮಿನ ಕಡೆ ಹೊರಟ.

 

ವರ್ಣ ವೇದಾಂತ್ ಕಡೆಗೆ ನೋಡಿ, 

“ನೋಡಿದ್ಯಾ… ಡ್ಯಾಡಿ ನನ್ ಸಪೋರ್ಟ್!” ಎನ್ನುವಂತೆ ಒಂದು ವಿಜಯದ ನೋಟ ಬೀರಿದಳು.

 

ನಂತರ, ವರ್ಣ ಸೋಫಾದ ಮೇಲೆ ಆರಾಮವಾಗಿ ಕುಳಿತು ತನ್ನ ಮುಂದಿನ ಯೋಜನೆಯನ್ನು ಹೇಳಲು ರೆಡಿ ಆದಳು.

 

“ನೋಡಿ,ಇವತ್ತು ನಾವೆಲ್ಲಾ ಮಧ್ಯಾಹ್ನ ಸಿನಿಮಾಗೆ ಹೋಗ್ತಾ ಇದ್ದೀವಿ. ನಾನು ಆಲ್ರೆಡಿ ಪ್ಲಾನ್ ಮಾಡಿದ್ದೀನಿ. ಸ್ವಾತಿಗೂ ಹೇಳಿದ್ದೀನಿ, ಅವಳೂ ಬರ್ತಾ ಇದ್ದಾಳೆ. ನನ್ನ ಫ್ರೆಂಡ್ಸ್ ಕೂಡ ಅಲ್ಲಿಗೆ ಬರ್ತಾರೆ”

 

ನಂತರ ಪಕ್ಕದಲ್ಲೇ ಓದಿನಲ್ಲಿ ಮಗ್ನನಾಗಿದ್ದ ವಿಖ್ಯಾತನ ಕಡೆಗೆ ತಿರುಗಿ, “ಅಣ್ಣಾ, ನೀನು ಬರ್ತಾ ಇದ್ದೀಯ ತಾನೇ?” ಎಂದು ವಿಚಾರಿಸಿದಳು.

 

“ಇಲ್ಲ ವರ್ಣ, ನನಗೆ ಇಂಟರೆಸ್ಟ್ ಇಲ್ಲ. ನಾನಂತೂ ಬರಲ್ಲ.” ಎಂದು ತಣ್ಣಗೆ ಉತ್ತರಿಸಿದ ವಿಖ್ಯಾತ್.

 

ಅವನ ನಿರಾಸಕ್ತಿ ವರ್ಣಳಿಗೆ ಕಿರಿಕಿರಿ ಎನಿಸಿತು. 

“ಅಣ್ಣಾ… ನೀನು ಯಾವಾಗ್ಲೂ ಇಷ್ಟೇ! ಯಾವಾಗ್ಲೂ ಆ ಪುಸ್ತಕ ಹಿಡ್ಕೊಂಡು ಕುಳಿತಿರ್ತೀಯಾ, ದೊಡ್ಡ ಬುಕ್‌ವರ್ಮ್ ನೀನು. ಸರಿ ಬಿಡು, ನಿನ್ನ ಇಷ್ಟ” ಎಂದವಳು ವಿಂಧ್ಯಾಳ ಕಡೆಗೆ ನೋಡಿ, “ವಿಂಧ್ಯಾ, ನೀನಾದ್ರೂ ಬರ್ತೀಯಲ್ಲ?” ಎಂದು ಕೇಳಿದಳು.

 

ಅಷ್ಟರಲ್ಲಿ ಅಡುಗೆ ಮನೆಯಿಂದ ಬಂದ ಚಿತ್ರಾ,

“ವರ್ಣ, ಬಂಗಾರಿ ಇನ್ನು ಚಿಕ್ಕ ಹುಡುಗಿ. ಈ ಸಿನಿಮಾಗೆಲ್ಲಾ ಹೋಗೋದು ಬೇಡ ಈಗ. ಅವಳು ಸೆಕೆಂಡ್ ಪಿಯುಸಿ ಓದುತ್ತಿದ್ದಾಳೆ, ಓದಿನ ಕಡೆ ಗಮನ ಕೊಡಲಿ” ಎಂದು ಕಟ್ಟುನಿಟ್ಟಾಗಿ ಹೇಳಿದಳು.

 

“ಅಯ್ಯೋ ಅಮ್ಮಾ… ಸುಮ್ಮನೆ ಇರಿ. ಮೂರು ಗಂಟೆ ಫಿಲ್ಮ್ ಗೆ ಹೋದ್ರೆ ಏನಾಗಲ್ಲ. ಅಷ್ಟೊಂದು ಓದಿನ ಸ್ಟ್ರೆಸ್ ತಗೋಬಾರದು” ಎಂದು ವರ್ಣ ಸಮರ್ಥಿಸಿಕೊಂಡಳು.

 

ಚಿತ್ರಾ ನಿರಾಸಕ್ತಿಯಿಂದ ಕೈ ಬೀಸಿದಳು. 

 

“ಸರಿ ಸರಿ… ನಿಮಗೆ ಹೇಳಿದ್ರೆ ಅರ್ಥ ಆಗಲ್ಲ. ಯಾರಿಗೆ ಏನು ಬೇಕೋ ಅದನ್ನೇ ಮಾಡ್ಕೊಳ್ಳಿ” ಎಂದು ಹೇಳುತ್ತಾ ತಲೆದೂಗಿ ಮತ್ತೆ ಅಡುಗೆ ಮನೆಯ ಕಡೆ ನಡೆದಳು. 

 

ವಿಖ್ಯಾತ್ ಕೂಡ,

“ನಾನು ರೂಮಿಗೆ ಹೋಗ್ತೀನಿ” ಎಂದು ಹೇಳಿ ಅಲ್ಲಿಂದ ಹೊರಟ. 

 

ವಿಂಧ್ಯಾ ಮುಗುಳ್ನಗುತ್ತಾ, 

“ಹಾಗಾದ್ರೆ ಅತ್ತಿಗೆ ನಾನು ಯಾವ ಡ್ರೆಸ್ ಹಾಕೋದು ಅಂತ ನೋಡ್ತೀನಿ” ಎಂದು ಹೇಳಿ ಮೆಟ್ಟಿಲೇರಿ ಮೇಲಕ್ಕೆ ಹೋದಳು.

 

ಕ್ಷಣಾರ್ಧದಲ್ಲಿ ಹಜಾರದಲ್ಲಿ ಉಳಿದಿದ್ದು ವೇದಾಂತ್ ಮತ್ತು ವರ್ಣ ಮಾತ್ರ.

 

ವರ್ಣ ಹೊರಗೆ ನೋಡುತ್ತಿರುವಂತೆ ನಟಿಸುತ್ತಿದ್ದರೂ, ಅವಳ ಮನಸ್ಸು ಮಾತ್ರ ಒಂದೇ ಮಾತನ್ನು ಕಾಯುತ್ತಿತ್ತು. 

 

‘ಒಂದು ಮಾತು ನಾನು ಬರ್ತೀನಿ ಅಂತ ಹೇಳಿಬಿಟ್ಟರೆ ಸಾಕಿತ್ತು. ಅದಕ್ಕೂ ನಾನೇ ಕರೀಬೇಕು ಅಂತ ಈ ಇವನಿಗೆ!’ 

 

ಇತ್ತ ವೇದಾಂತ್ ತುಟಿಯಂಚಿನಲ್ಲಿ ಸಣ್ಣ ನಗು ಮೂಡಿತ್ತು. ಅವಳನ್ನೇ ನೋಡುತ್ತಿದ್ದ. 

 

(ಮುಂದುವರೆಯುವುದು ❤️)

 

———————————❤️———————————

 

ಸಂಚಿಕೆ ಹೇಗಿತ್ತು…? ಅಭಿಪ್ರಾಯ ಹೇಳುವುದನ್ನು ಮರೆಯಬೇಡಿ…

ಮೌನಿ ❤️