New Katha Varnika is now on Google Play — read Telugu stories on your phone. Learn more
ಮಧುರ ಪ್ರೇಮ 💕 – 5

ಮಧುರ ಪ್ರೇಮ 💕 – 5

ಮಧುರ ಪ್ರೇಮ 💕 – ೫

ಕ್ಷಣಾರ್ಧದಲ್ಲಿ ಹಜಾರದಲ್ಲಿ ಉಳಿದಿದ್ದು ವೇದಾಂತ್ ಮತ್ತು ವರ್ಣ ಮಾತ್ರ.

 

ವರ್ಣ ಹೊರಗೆ ನೋಡುತ್ತಿರುವಂತೆ ನಟಿಸುತ್ತಿದ್ದರೂ, ಅವಳ ಮನಸ್ಸು ಮಾತ್ರ ಒಂದೇ ಮಾತನ್ನು ಕಾಯುತ್ತಿತ್ತು. 

 

‘ಒಂದು ಮಾತು ನಾನು ಬರ್ತೀನಿ ಅಂತ ಹೇಳಿಬಿಟ್ಟರೆ ಸಾಕಿತ್ತು. ಅದಕ್ಕೂ ನಾನೇ ಕರೀಬೇಕು ಅಂತ ಈ ಇವನಿಗೆ!’ 

 

ಇತ್ತ ವೇದಾಂತ್ ತುಟಿಯಂಚಿನಲ್ಲಿ ಸಣ್ಣ ನಗು ಮೂಡಿತ್ತು. ಅವಳನ್ನೇ ನೋಡುತ್ತಿದ್ದ. 

 

‘ನೀನೇ ಕರಿಬೇಕು ನನ್ನ ಅತ್ತೆ ಮಗಳೇ. ನಿನ್ನ ಬಾಯಿಂದ ಕೇಳೋದೇ ಮಜಾ.’

 

ಸ್ವಲ್ಪ ಹೊತ್ತು ಇಬ್ಬರೂ ಮೌನವಾಗಿಯೇ ಇದ್ದರು. ಕೊನೆಗೆ ವರ್ಣ ತನ್ನ ಅಹಂಕಾರವನ್ನು ಸ್ವಲ್ಪ ಬದಿಗಿಟ್ಟು, 

 

“ಅಲ್ಲಾ… ನಾವೆಲ್ಲಾ ಹೋಗ್ತೀವಿ ಸರಿ, ಆದ್ರೆ ನಮಗೆ ಒಬ್ಬ ಡ್ರೈವರ್ ಬೇಕಲ್ಲ? ಅಣ್ಣ ಬರಲ್ಲ ಅಂತಿದ್ದಾನೆ. ನಾನಂತೂ ಡ್ರೈವ್ ಮಾಡೋದಿಲ್ಲ ಇವತ್ತು. ಮೂಡ್ ಇಲ್ಲ. ವೇದಾಂತ್… ನೀನು ಆ ಡ್ರೈವರ್ ಕೆಲಸ ಮಾಡ್ತೀಯಾ ಹೇಗೆ?” ಉದಾಸೀನದಿಂದ ಹೇಳಿದಳು. 

 

ವೇದಾಂತ್‌ಗೆ ನಗು ತಡೆಯಲಾಗಲಿಲ್ಲ. 

 

“ಓಹೋ… ನಿನ್ನ ಈ ಇನ್ ಡೈರೆಕ್ಟ್ ರಿಕ್ವೆಸ್ಟ್ ನನಗೂ ಅರ್ಥ ಆಯ್ತು. ಸರಿ, ನಾನು ಬರ್ತೀನಿ. ಆದ್ರೆ ಪಕ್ಕಾ ಡ್ರೈವರ್ ತರಾನೇ ಇರ್ತೀನಿ ಅಂತ ಅಂದುಕೋಬೇಡ. ಅಂದಹಾಗೆ, ನೀನು ಈಗಷ್ಟೇ ಡ್ರೈವಿಂಗ್ ಕಲ್ತಿದೀಯಾ ಮತ್ತೆ ನಿನ್ನಂತ ಚಿಕ್ಕ ಹುಡುಗಿ ಹತ್ರ ಡ್ರೈವಿಂಗ್ ಕೊಡೋಕೆ ನನಗೇನು ತಲೆ ಕೆಟ್ಟಿಲ್ಲ? ನನ್ನ ತಂಗಿನ ಅಪಾಯಕ್ಕೆ ಸಿಲುಕಿಸೋಕೆ ನಂಗೆ ಇಷ್ಟ ಇಲ್ಲ!” ಎಂದು ಕಣ್ಣು ಮಿಟುಕಿಸಿದ.

 

“ಏನ್ ಹೇಳಿದೆ? ನಿನ್ನಾ…” ಎನ್ನುತ್ತಾ 

 

ಸಿಟ್ಟಿನಿಂದ ಅವನತ್ತ ಬಂದು ಅವನ ಭುಜಕ್ಕೆ ಹೊಡೆಯಲು ಕೈ ಎತ್ತಿದಳು. ಆದರೆ ಅದನ್ನೇ ಕಾಯುತ್ತಿದ್ದಂತೆ ವೇದಾಂತ್ ಅವಳ ಕೈ ಹಿಡಿದು ಒಮ್ಮೆಲೆ ಹಿಡಿದು ತನ್ನತ್ತ ಸೆಳೆದುಕೊಂಡ. ಅವನ ಈ ಅನಿರೀಕ್ಷಿತವಾದ ನಡೆಗೆ ಆಯ ತಪ್ಪಿ ವರ್ಣ ನೇರವಾಗಿ ವೇದಾಂತ್‌ನ ಮಡಿಲಿನ ಮೇಲೆ ಬಂದು ಬಿದ್ದಳು !

 

“ವೇದಾಂತ್!” ಎಂದು ಅವಳು ಗಾಬರಿಯಿಂದ ಕಿರುಚಿದಳು.  

 

ವೇದಾಂತ್ ತನ್ನ ಒಂದು ಕೈಯಿಂದ ಅವಳ ಎರಡೂ ಕೈಗಳನ್ನು ಒಟ್ಟಿಗೆ ಹಿಡಿದು, ಇನ್ನೊಂದು ಕೈಯಿಂದ ಅವಳ ನಡು ಬಳಸಿ ಅವಳನ್ನು ಅವನ ಮಡಿಲಲ್ಲೇ ಗಟ್ಟಿಯಾಗಿ ಕೂರುವಂತೆ ಮಾಡಿದ.

ಅವಳ ಹೃದಯದ ಬಡಿತ ಅವಳಿಗೇ ಕೇಳಿಸುವಷ್ಟು ಜೋರಾಗಿತ್ತು.

 

“ಬಿಡು ಪ್ಲೀಸ್ ! ವೇದ್… ಬಿಡು… ಯಾರಾದರೂ ಬಂದ್ರೆ ಏನನ್ಕೋತಾರೆ? ಯಾಕೋ ಹೀಗೆಲ್ಲಾ ಮಾಡ್ತೀಯಾ?ಈಡಿಯಟ್!” ಎಂದು ವರ್ಣ ಪಿಸುಗುಟ್ಟಿದಳು. 

 

ಅವಳಿಗೆ ವಿಚಿತ್ರವಾದ ಗೊಂದಲವಾಗುತ್ತಿತ್ತು. ಅಲ್ಲಿಂದ ಏಳಬೇಕು ಅನ್ನಿಸಿದರೂ, ಏಕೋ ಅವನ ಈ ಸಾಮೀಪ್ಯ ಅವಳನ್ನು ಅಲ್ಲಿಯೇ ಕರಗುವಂತೆ ಮಾಡುತ್ತಿತ್ತು.

 



 

“ಯಾರೂ ಬರಲ್ಲ ಬಿಡು… ಬಂದರೂ ನಂಗೇನು ಪ್ರಾಬ್ಲಮ್ ಇಲ್ಲ. ಹೊಡೆಯೋಕೆ ಬಂದಿದ್ದೆಯಲ್ಲ, ಈಗ ಹೊಡಿ ನೋಡೋಣ. ಯಾಕೆ ಸುಮ್ಮನಾದೆ?”

 

ವರ್ಣ ಅವನ ದೃಷ್ಟಿ ಎದುರಿಸಲಾಗದೆ ತಲೆ ತಗ್ಗಿಸಿದಳು. 

“ವೇದ್… ಒಂತರ ಆಗುತ್ತೆ ಕಣೋ ನಂಗೆ… ಉಸಿರು ಕಟ್ಟಿದ ಹಾಗೆ ಆಗ್ತಿದೆ. ಬಿಡು ಮೊದಲು”

 

“ಒಂತರ ಅಂದ್ರೆ ಯಾವ ತರ ಡಿಂಪಲ್?” ವೇದಾಂತ್ ಅವಳ ಕಿವಿಯ ಹತ್ತಿರವೇ ಪಿಸುಗುಟ್ಟಿದ. 

 

“ಅದು… ಅದು ಗೊತ್ತಿಲ್ಲ…ಒಂಥರಾ ನರ್ವಸ್ ಆಗ್ತಿದೆ. ನಿನ್ನ ಈ ತಮಾಷೆ ನನಗೆ ಇಷ್ಟವಾಗ್ತಿಲ್ಲ ವೇದ್..ಬಿಡೋ” ಕೊಸರಾಡುತ್ತಲೇ ಹೇಳಿದಳು.

 

“ಯಾವಾಗಲೂ ನೀನೇ ಮೊದಲು ಜಗಳ ಮಾಡೋಕೆ ಬರ್ತೀಯಾ. ನಂತರ ಸಿಕ್ಕಿಬಿದ್ದರೆ ಬಿಡು ಬಿಡು ಅಂತ ಹೇಳ್ತೀಯಾ. ಇದು ತುಂಬಾ ಅನ್ಯಾಯ ಡಿಂಪಲ್” ರಾಗವಾಗಿ ಹೇಳಿ ಮತ್ತಷ್ಟು ರೇಗಿಸಿದ.

 

“ಹೋಗೋ ಈಡಿಯಟ್! ನಾನೇನು ಚಿಕ್ಕ ಮಗು ಅಲ್ಲ ಈ ತರ ಕಾಡಿಸೋಕೆ” ಎಂದು ವರ್ಣ ಅವಳ ಕೈಗಳನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದಳು.

 

ವೇದಾಂತ್ ಹಿಡಿತವನ್ನು ಇನ್ನೂ ಬಿಗಿ ಮಾಡಿ ನಕ್ಕ. 

 

“ನನಗೆ ನೀನು ಈಗಲೂ ಆ ಚಾಕೊಲೇಟ್ಗೋಸ್ಕರ ಜಗಳ ಮಾಡ್ತಿದ್ದ ಪುಟ್ಟ ಹುಡುಗಿಯ ತರಾನೇ ಕಾಣ್ತಿದ್ದೀಯಾ. ಅಷ್ಟೇ ಹಠ, ಅಷ್ಟೇ ಸಿಟ್ಟು… ಆದರೆ ನಾಚಿಕೆ ಪಡೋದ್ರಲ್ಲಿ ಮಾತ್ರ ಸ್ವಲ್ಪ ದೊಡ್ಡವಳಾಗಿದ್ದೀಯಾ ಅನ್ಸುತ್ತೆ!”

 

“ನಾಚಿಕೆನೂ ಇಲ್ಲ, ಮಣ್ಣೂ ಇಲ್ಲ! ಬಿಡೋ.. ವೇದ್…!”  ಎಂದು ಕೈ ಬಿಡಿಸಿಕೊಂಡವಳಿಗೆ ತಡೆಯಲಾರದೆ ನಗು ಬಂದುಬಿಟ್ಟಿತ್ತು. ವೇದಾಂತ್ ತಲೆ ಕೆಡಿಸಲು ಕೆನ್ನೆಯ ಮೇಲೆ ಮುದ್ದಾದ ಗುಳಿ ಸ್ಪಷ್ಟವಾಗಿ ಮೂಡಿತ್ತು. ನಗುತ್ತಲೇ,ಅವನಿಂದ ಕೈ ಬಿಡಿಸಿಕೊಂಡು ಏಳಲು ನೋಡಿದರೆ, ವೇದಾಂತ್ ಅವಕಾಶ ಕೊಡಲಿಲ್ಲ. ಅವನ ಕೊರಳನ್ನು ಗಟ್ಟಿಯಾಗಿ ಹಿಡಿದಳು.

 

“ನಿಂಗೆ ಗೊತ್ತಾ ಡಿಂಪಲ್? ಈ ಡಿಂಪಲ್ ಎ ನನ್ನ ವೀಕ್ನೆಸ್! ಕಚ್ಚಿ ಬಿಡೋಣ ಅನ್ಸುತ್ತೆ ” ಎಂದವನು ತಡೆಯಲಾಗದೆ ತನ್ನ ಒರಟು ತುಟಿಗಳನ್ನು ಅವಳ ಮೆತ್ತನೆಯ ಕೆನ್ನೆಗೆ ಒತ್ತಿ, ಕೆಂಪಾದ ಗುಳಿ ಕೆನ್ನೆಯನ್ನು ಮೆಲ್ಲಗೆ ಕಚ್ಚಿಬಿಟ್ಟ. ನಡುಗಿ ಕಣ್ಮುಚ್ಚಿದಳು. ಅವಳ ಕೈಗಳು ಅವನ ಶರ್ಟ್ ಅನ್ನು ಬಿಗಿಯಾಗಿ ಹಿಡಿದವು.

 

ಕ್ಷಣದ ನಂತರ, 

“ಹೇಯ್, ಡಿಂಪಲ್ ಉರಿ ಆಯ್ತಾ? ಉರಿತ ಇದ್ರೆ ಹೇಳು ಅದಕ್ಕೂ ಟ್ರೀಟ್ಮೆಂಟ್ ಇದೆ” ಎಂಬ ಪಿಸುಮಾತು ಕಿವಿಯ ಹತ್ತಿರವೇ ಕೇಳಿದಾಗ ವಾಸ್ತವಕ್ಕೆ ಬಂದ ವರ್ಣ,

 

“ಛೀ! ವೇದ್ ! ವಿಚಿತ್ರವಾಗಿ ಆಡ್ತೀಯಾ ಒಮ್ಮೊಮ್ಮೆ.. ಅಮ್ಮಾ !! ” ಎಂದು ಅನಿರೀಕ್ಷಿತವಾಗಿ ಕೂಗಿದ್ದಳು.

 

ಕ್ಷಣದಲ್ಲೇ ಚಿತ್ರಾ ಅಲ್ಲಿಗೆ ಬಂದಳು. 

 

“ಏನಾಯ್ತು ಮತ್ತೆ?” ಎಂದು ಅನುಮಾನದಿಂದ ಕೇಳಿದಳು.

 

ಅಷ್ಟರಲ್ಲಿ ವೇದಾಂತ್ ವರ್ಣಳನ್ನು ಬಿಟ್ಟು ನಿರ್ಲಿಪ್ತವಾಗಿ ಸೋಫಾಕ್ಕೆ ಒರಗಿಕೊಂಡಿದ್ದ. ವರ್ಣ ತಕ್ಷಣ ಎದ್ದು ನಿಂತು ತನ್ನ ಡ್ರೆಸ್ ಸರಿಪಡಿಸಿಕೊಳ್ಳುತ್ತಾ ಕೆನ್ನೆ ಮೇಲೆ ಕೈ ಇಟ್ಟುಕೊಂಡು ಕೆಂಡದಂತಹ ಕಣ್ಣುಗಳಿಂದ ಅವನನ್ನು ನೋಡಿದಳು.

 

ವೇದಾಂತ್ ತುಟಿಯಂಚಿನಲ್ಲಿ ತುಂಟ ನಗೆ ಮೂಡಿಸಿಕೊಂಡು ಮೊದಲು ವರ್ಣಳ ಕಡೆ ತಿರುಗಿ,

“ಈಗ ಅತ್ತೆಗೆ ಎಲ್ಲವನ್ನೂ ಹೇಳಲಾ?” ಎಂಬಂತೆ ಹುಬ್ಬು ಹಾರಿಸಿ ಸವಾಲು ಹಾಕಿದ.

 

ಅವನ ಆ ತುಂಟತನ ಅವಳಿಗೆ ಮತ್ತಷ್ಟು ಗಾಬರಿ ಉಂಟುಮಾಡಿತು. 

‘ಇವನು ನಿಜವಾಗಿಯೂ ಎಲ್ಲವನ್ನೂ ಹೇಳಿಬಿಟ್ಟರೆ?’ ಎಂದು  ಬೆದರಿದ ಕಂಗಳಿಂದ ನೋಡಿದಳು.

 

ಅವಳ ಆ ಸ್ಥಿತಿ ಕಂಡ ವೇದಾಂತ್ ಮನಸ್ಸಿನೊಳಗೆ ನಗುತ್ತಲೇ ಚಿತ್ರಾ ಕಡೆ ತಿರುಗಿದ.

 

“ಏನಿಲ್ಲ ಅತ್ತೆ. ಇವಳೇ ನನ್ನನ್ನು ಹೊಡೆಯೋಕೆ ಬಂದಿದ್ದು. ನಾನು ಕೈ ಹಿಡಿದು ತಡೆದೆ. ಆಯ ತಪ್ಪಿ ನನ್ನ ಮೇಲೆಯೇ ಬಿದ್ದುಬಿಟ್ಟಳು. ಅದನ್ನೇ ದೊಡ್ಡ ವಿಷಯ ಮಾಡ್ತಿದ್ದಾಳೆ”

 

“ವರ್ಣ! ನೀನಿನ್ನೂ ಎಳೆ ಮಗು ಅಲ್ಲ. ಇಷ್ಟು ಸಣ್ಣ ವಿಷಯಕ್ಕೂ ಕಿರುಚೋದೇನು? ವೇದಾಂತ್ ಬಗ್ಗೆ ನಮಗೆ ಗೊತ್ತು. ನೀನೇ ಏನಾದರೂ ಜಗಳ ಶುರು ಮಾಡಿರ್ತೀಯ. ಹೋಗಿ ಬೇಗ ರೆಡಿ ಆಗು!” ಎಂದು ಬೈದು ಅಡುಗೆ ಮನೆಗೆ ಹೋದಳು ಚಿತ್ರಾ.

 

ಚಿತ್ರಾ ಹೋಗುತ್ತಿದ್ದಂತೆ, ಅವಳಿಗೆ ಏನೂ ಹೇಳಲು ತೋಚದೆ, “ನೀನು… ನೀನು ಸರಿ ಇಲ್ಲ ವೇದ್!” ಎಂದು ಗೊಣಗುತ್ತಾ ಕೋಣೆಯ ಕಡೆ ಓಡಿದಳು.

 

ವೇದಾಂತ್ ಮುಗುಳ್ನಕ್ಕ.

———————————❤️——————————–

ರೂಮಿನ ಒಳಗೆ ಬಂದು ಬಾಗಿಲು ಹಾಕಿಕೊಂಡವಳೇ ಹಾಗೇ ನಿಂತುಬಿಟ್ಟಳು. ಎದೆ ಬಡಿತ ಇನ್ನು ಹತೋಟಿಗೆ ಬಂದಿರಲಿಲ್ಲ.

 

ಮೆಲ್ಲನೆ ಹೆಜ್ಜೆ ಇಟ್ಟು ಡ್ರೆಸ್ಸಿಂಗ್ ಟೇಬಲ್ ಮುಂದೆ ಬಂದು ನಿಂತಳು. ವೇದಾಂತ್ ತನ್ನ ತುಟಿಗಳಿಂದ ಒತ್ತಿ ಕಚ್ಚಿದ್ದ ಆ ಜಾಗ ಇನ್ನು ಬೆಚ್ಚಗಾಗಿಯೇ ಇತ್ತು. ಅವನ ಕೈ ಇನ್ನೂ ನಡುವಿನ ಮೇಲೆಯೇ ಇದೆಯೇನೋ ಅನ್ನುವ ಭ್ರಮೆ. ಕನ್ನಡಿಯಲ್ಲಿದ್ದ ತನ್ನದೇ ಮುಖವನ್ನು ನೋಡಿಕೊಳ್ಳುತ್ತಾ, ಕೈ ಬೆರಳುಗಳಿಂದ ಆ ಕೆನ್ನೆಯನ್ನು ಮುಟ್ಟಿಕೊಂಡಾಗ ಅರಿಯದೆಯೇ ಮುಜುಗರದ ನಾಚಿಕೆ ಮುಖದ ತುಂಬಾ ಹರಡಿಕೊಂಡಿತು.

 

“ಈಡಿಯಟ್!… ಯಾಕೆ ಹೀಗಾಡ್ತೀಯೋ ನೀನು?

ನಿನ್ನ ಜೊತೆ ಇಂತಹ ಸಲುಗೆ ಹೊಸದೇನಲ್ಲ. ಚಿಕ್ಕಂದಿನಿಂದಲೇ  ಡಿಂಪಲ್ ಅಂತ ಕರಿತಿದ್ದೆ. ಸಿಟ್ಟು ಮಾಡಿಕೊಂಡರೆ ಇನ್ನೂ ರೇಗಿಸ್ತಿದ್ದೆ.. ಅತ್ತರೆ ಸಮಾಧಾನ ಮಾಡ್ತಿದ್ದೆ. ಚಾಕೊಲೇಟ್‌ಗಾಗಿ ಜಗಳವಾಡಿದ ದಿನಗಳಿಂದ ಇವತ್ತಿನವರೆಗೂ ನಿನ್ನ ತುಂಟಾಟಕ್ಕೆ ಏನು ಕೊರತೆ ಇಲ್ಲ. ಆದರೆ….” ಎಂದುಕೊಂಡವಳು,

 

ವಿಚಿತ್ರವಾದ ಮುಜುಗರ ಆವರಿಸಿ ಹಾಸಿಗೆಯ ಮೇಲೆ ಉರುಳಿದಳು.

 

“ಇಷ್ಟು ವರ್ಷ ಹೀಗಿರಲಿಲ್ಲ. ನಾನು ಕಾಲೇಜಿಗೆ ಹೋಗೋಕೆ ಶುರು ಮಾಡಿದ್ಮೇಲಂತೂ ಒಂತರಾ ವಿಚಿತ್ರವಾಗಿ ಹುಚ್ಚುಚ್ಚಾಗಿ ಆಡ್ತಿದೀಯಾ. ನನ್ನ ಅಷ್ಟು ಹತ್ತಿರ ಎಳೆದುಕೊಂಡು, ಆ ತರ ತೀವ್ರವಾಗಿ ನೋಡುವಾಗ ನಂಗೆ ಉಸಿರೇ ನಿಂತ ಹಾಗೆ ಆಗುತ್ತೆ ಗೊತ್ತೇನೋ ನಿಂಗೆ..ಈಡಿಯಟ್ ! ” ಎಂದು ಯೋಚಿಸಿದವಳ ಕೈ ಅರಿವಿಲ್ಲದೆಯೇ ದಿಂಬನ್ನು ಗಟ್ಟಿಯಾಗಿ ಹಿಡಿದಿದ್ದವು.

 

‘ನನ್ನನ್ನ ಪ್ರೀತಿ ಮಾಡ್ತಿದ್ದಾನಾ ಇವನು? ಏನೋ… ನನಗಂತೂ ಗೊತ್ತಾಗ್ತಾ ಇಲ್ಲ. ಛೀ, ಹಾಗೆಲ್ಲಾ ಇರೋದಿಲ್ಲ, ನನಗೂ ಅವನ ಮೇಲೆ ಆ ತರಹದ ಫೀಲಿಂಗ್ಸ್ ಏನೂ ಇಲ್ಲ. ಅವನು ಮೊದಲಿನಿಂದಲೂ ನನ್ನ ಜೊತೆ ಜಾಸ್ತಿ ಸಲುಗೆ ತಗೊಂಡಿದ್ದಾನೆ, ನನ್ನ ಡಿಂಪಲ್ ಅಂದ್ರೆ ಇಷ್ಟನೇ ಅವನಿಗೆ ಮೊದಲಿನಿಂದಲೂ.. ಅದಕ್ಕೆ ಹೀಗೆ ಮಾಡ್ತಿದ್ದಾನೆ ಅಷ್ಟೇ! ಹೀಗೆ ಆಡ್ತಾ ಇದ್ರೆ ಡ್ಯಾಡಿಗೆ ಕಂಪ್ಲೇಂಟ್ ಮಾಡ್ತೀನಿ’ ಎಂದು ಮನಸಿಗೆ ಸಮಾಧಾನ ಹೇಳಿದಳು.

 

ಮುಂದುವರೆಯುವುದು ❤️

 

———————————❤️——————————–

ಹೇಗನ್ನಿಸಿತು ಎಪಿಸೋಡ್? 

ಅಭಿಪ್ರಾಯ ಹೇಳುವುದನ್ನು ಮರೆಯಬೇಡಿ…

ವೇದಾಂತ್ ವರ್ಣ ಇಷ್ಟ ಆದ್ರಾ??

ಮೌನಿ ♥️