New Katha Varnika is now on Google Play — read Telugu stories on your phone. Learn more
ಅಗ್ನಿಪರೀಕ್ಷೆ – 1

ಅಗ್ನಿಪರೀಕ್ಷೆ – 1

ಈ ಕಥೆಯು ಸಂಪೂರ್ಣ ನನ್ನ ಕಲ್ಪನೆಯಲ್ಲಿ ಮೂಡಿಬಂದಿದ್ದು, ಯಾವುದೇ ಕಥೆ ಕಾದಂಬರಿಗೆ ಹೋಲಿಕೆ ಕಂಡುಬಂದಲ್ಲಿ ಕೇವಲ ಕಾಕತಾಳೀಯ. 

💙💙💙💙💙💙💙

 

ರಾತ್ರಿಯ ಕತ್ತಲಲ್ಲಿ ಬಣ್ಣ ಬಣ್ಣದ ಬೆಳಕಿನಿಂದ ಪಾರ್ಟಿ ಹಾಲ್ ಮಿನುಗುತ್ತಿತ್ತು. ಹೆಸರಿಗೆ ಬರ್ತಡೇ ಪಾರ್ಟಿ ಆದರೂ  ವ್ಯವಹಾರಿಕ ಜಗತ್ತಿನಲ್ಲಿ ನಡೆಯುವ ದೊಡ್ಡ ಪಾರ್ಟಿಗಳಂತೆಯೇ ಕಾಣುತ್ತಿತ್ತು. ತುಂಡು ಉಡುಗೆ ತೊಟ್ಟು ಮಿಂಚುತ್ತಿದ್ದ ಆಧುನಿಕ ಯುವತಿಯರು, ಕೈಯಲ್ಲಿ ವಿಸ್ಕಿ ಗ್ಲಾಸ್ ಹಿಡಿದು ನಿಂತಿರುವ ಯುವಕರು ಜೊತೆಯಲ್ಲಿ ಮಾತಿನಲ್ಲಿ ತೊಡಗಿರುವ ಮಧ್ಯಮ ವಯಸ್ಸಿನ ಪ್ರಜೆಗಳು ಒಟ್ಟಿನಲ್ಲಿ ಪಾರ್ಟಿ ಜೋರಾಗಿಯೇ ನಡೆಯುತ್ತಿತ್ತು. 

 

ಡಾ. ವಿಖ್ಯಾತ್ ಪ್ರಧಾನ್ ಒಂದು ಕೈಯಲ್ಲಿ ವಿಸ್ಕಿ ಗ್ಲಾಸ್ ಹಿಡಿದು ನಿಂತವನು ಯಾರೊಂದಿಗೋ ಗಂಭೀರವಾಗಿ ಮಾತನಾಡುತ್ತಿದ್ದಾನೆ. ಅವನು ತೊಟ್ಟಿದ್ದ ನೀಲಿ ಬಣ್ಣದ ಕೋಟು ಅವನ ಅಂದವನ್ನು ಹೆಚ್ಚಿಸುತ್ತಿದೆ. ಆದರೆ ಅಂದದ ಮುಖದಲ್ಲಿ ಇಂದು ಗಂಭೀರತೆಯೇ ಹೆಚ್ಚಾಗಿ ಕಾಣುತ್ತಿದೆ. ಗಂಭೀರವಾಗಿ ಮಾತನಾಡುತ್ತಿದ್ದವನ ನೋಟ ಒಂದೆಡೆ ನಿಂತಿತ್ತು. ಎದುರಿನ ದೃಶ್ಯ ಕಂಡವನ ಮುಷ್ಟಿ ಬಿಗಿದಿತ್ತು. ಕೋಪದಲ್ಲಿ ದವಡೆ ಬಿಗಿದವನು ತಾನು ಏನು ಮಾತನಾಡುತ್ತಿದ್ದೆ ಎಂಬುದನ್ನೇ ಮರೆತಿದ್ದ. 

 

ಕೈಯಲ್ಲಿ ನೆಪ ಮಾತ್ರಕ್ಕೆ ಗ್ಲಾಸ್ ಹಿಡಿದು ನಿಂತವಳ ಮುಖದಲ್ಲಿ ಆತಂಕದ ಕಳೆ ಎದ್ದು ಕಾಣುತ್ತಿದೆ. ಅವಳು ತೊಟ್ಟಿದ್ದ ಗಾಢ ನೀಲಿ ಬಣ್ಣದ ಗೌನ್ ಅವಳ ಮೈ ಮಾಟಕ್ಕೆ ಇನ್ನಷ್ಟು ಆಕರ್ಷಕವಾಗಿ ಹೊಂದಿಕೊಂಡಿತ್ತು. ತೆರೆದ ಭುಜದ ಜೊತೆಯಲ್ಲಿ ತುಸು ಹೆಚ್ಚೇ ಡೀಪ್ ಆಗಿದ್ದ ನೆಕ್ಲೈನ್ ಅವಳ ಸೌಂದರ್ಯವನ್ನು ಢಾಳಾಗಿ ತೋರಿಸುತ್ತಿತ್ತು. ಅವಳ ಉದ್ದನೆಯ ಕೂದಲಿಗೆ ಕತ್ತರಿ ಹಾಕಿ ತುಂಡುಗೂದಲನ್ನು ಹಾರಲು ಬಿಟ್ಟಿದ್ದಳು. ತುಟಿಗೆ ಹಚ್ಚಿದ್ದ ಗಾಢ ಬಣ್ಣ ಅವಳ ಸೌಂದರ್ಯಕ್ಕೆ ಹೊಸ ಮೆರುಗು ನೀಡಿತ್ತು. 

 

ಎಂದಿಗಿಂತ ತುಸು ಹೆಚ್ಚೇ ದೇಹ ಪ್ರದರ್ಶಿಸುವ ಬಟ್ಟೆ ತೊಟ್ಟವಳಿಗೆ ಸಮಾಧಾನ ಇಲ್ಲ. ಹೊರನೋಟಕ್ಕೆ ಅವಳು ಸುಂದರವಾಗಿ ಕಾಣುತ್ತಿದ್ದರೂ ಮನದಲ್ಲಿ ಅಸಹಜತೆ ಕಾಡುತ್ತಿತ್ತು. ಬೇಡವೆಂದರೂ ಅವಳ ಕೈ ತೆರೆದ ಭುಜವನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ತುಟಿಯ ಮೇಲೆ ಕೃತಕ ನಗುವನ್ನು ತಂದುಕೊಂಡವಳು ಸಹಜವಾಗಿ ಇರುವಂತೆ ನಟಿಸುತ್ತಿದ್ದಳು. 

 

ವಿಖ್ಯಾತ್ ತನ್ನ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದ. ಅವಳೆಡೆ ನೋಡುತ್ತಿದ್ದವನ ಮನದಲ್ಲಿ ಅಸಹನೆ ಹೊಗೆಯಾಡುತ್ತಿತ್ತು. ಎದುರಿಗೆ ಇದ್ದವರ ಬಳಿ ಎಷ್ಟೇ ಸಹಜವಾಗಿ ಮಾತನಾಡಲು ಪ್ರಯತ್ನಿಸಿದರೂ ಅವನಿಂದ ಸಾಧ್ಯವಾಗುತ್ತಿಲ್ಲ. ಅವನ ನೋಟ ಅವಳತ್ತಲೇ ಹೋಗುತ್ತಿದೆ. ತೋರ್ಪಡಿಕೆಯ ಸಹಜತೆಯನ್ನು ನಟಿಸುತ್ತಿದ್ದವನು ತನ್ನಿಂದ ಸಾಧ್ಯವಿಲ್ಲ ಎನಿಸಿದಾಗ ಅಲ್ಲಿಂದ ನಡೆದಿದ್ದ. 

 

💙💙💙💙💙💙💙💙💙💙

 

ಅವಳ ಸುತ್ತ ತುಂಡು ಉಡುಗೆ ತೊಟ್ಟ ಯುವತಿಯರು ನಿಂತಿದ್ದರು. ಅವರ ಬಳಿ ಮಾತನಾಡುತ್ತಿದ್ದರೂ ಅವಳ ಗಮನ ಬೇರೆಡೆಯೇ ಇತ್ತು. ಅವನು ಅವರ ಬಳಿ ಬಂದವನು ಎಕ್ಸ್ಕ್ಯೂಸ್ ಮೀ ಎಂದು ಹೇಳಿದಾಗ ಅವರು ಅವನೆಡೆ ನೋಡಿದ್ದರು. ಅವಳು ಬೇಕೆಂದೇ ಅವನನ್ನು ನಿರ್ಲಕ್ಷಿಸಿದವಳು ಅವರ ಬಳಿ ಇನ್ನಷ್ಟು ಆಪ್ತತೆಯಿಂದ ಮಾತನಾಡತೊಡಗಿದ್ದಳು. ಅವನು ಅವಳ ಬಳಿ ಮಾತನಾಡಲು ಬಯಸಿದ್ದೆಂದು ತಿಳಿದಾಗ ಅವರು ಅತ್ತ ಸರಿದಿದ್ದರು. ಅವಳು ಅವರ ಜೊತೆಯಲ್ಲೇ ಹೋಗಲು ನೋಡಿದಾಗ ಅವನು ಅವಳ ಕೈ ಹಿಡಿದಿದ್ದ. 

 

ಅಷ್ಟರಲ್ಲಿ ಹಿನ್ನೆಲೆಯಲ್ಲಿ ಮೃದುವಾದ ಸಂಗೀತ ಕೇಳಿಬರತೊಡಗಿತ್ತು. ಅಲ್ಲಿದ್ದ ಜೋಡಿಗಳೆಲ್ಲರೂ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕತೊಡಗಿದ್ದರು. ಅವಳು ಅವನ ಕೈ ಬಿಡಿಸಿಕೊಂಡು ಮುಂದೆ ಹೋಗಲು ಯುವಕನೊಬ್ಬ ಅವಳ ಬಳಿ ತನ್ನ ಜೊತೆ ಹಾಡಿಗೆ ಹೆಜ್ಜೆ ಹಾಕುವಂತೆ ಕೈ ಚಾಚಿದ್ದ. ಅವಳು ಆ ಸಮಯಕ್ಕೆ ಮತ್ತೇನೂ ಯೋಚಿಸದೆ ಅವನ ಕೈಗೆ ಕೈ ಜೋಡಿಸಿದ್ದಳು. ಅವನು ಅವಳ ಸೌಂದರ್ಯಕ್ಕೆ ಮಾರು ಹೋದಂತೆ ಅವಳನ್ನೇ ನೋಡುವಲ್ಲಿ ಮಗ್ನನಾಗಿದ್ದ. ಇಬ್ಬರು ಎದುರು ಬದುರಾಗಿ ನಿಂತಿರಲು ಅವನು ಹಾಡಿಗೆ ತಕ್ಕಂತೆ ಹೆಜ್ಜೆ ಹಾಕತೊಡಗಿದ್ದ. ಅವಳು ಅವನೆದುರು ಮೌನವಾಗಿ ನಿಂತಿದ್ದಳು. ಅವನು ಅವಳ ಕೈಗೆ ಕೈ ಸೇರಿಸಿ ಇನ್ನೇನು ಅವಳ ನಡುವನ್ನು ಮುಟ್ಟಬೇಕು ಎನ್ನುವಾಗ ವಿಖ್ಯಾತ್ ಬಂದವನು ಅವಳನ್ನು ತನ್ನೆಡೆಗೆ ಎಳೆದುಕೊಂಡಿದ್ದ. 

 

ಗಾಬರಿಯಲ್ಲಿ ಅವಳ ಕಣ್ಣುಗಳು ದೊಡ್ಡದಾಗಿದ್ದವು. ವಿಖ್ಯಾತ್ ಶೀ ಈಸ್ ಮೈ ಗರ್ಲ್ಫ್ರೆಂಡ್ ಎಂದವನು ಅವಳ ಜೊತೆ ಹೆಜ್ಜೆ ಹಾಕತೊಡಗಿದ್ದ. 

 

ಅವಳು ಅವನನ್ನು ಕೋಪದಿಂದ ನೋಡಿದವಳು,”ಯಾಕ್ ಹೀಗ್ ಹಿಂಸೆ ಮಾಡ್ತಾ ಇದೀರಾ? ನನಗೆ ಇದೆಲ್ಲ ಇಷ್ಟ ಆಗಲ್ಲ… ಲೀವ್ ಮೀ…” ಎಂದವಳು ತನ್ನ ನಡುವನ್ನು ಬಳಸಿದ್ದ ಅವನ ಕೈಯನ್ನು ಸರಿಸಿದರೆ ಅವನು ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿದವನು,”ನಾನು ಹತ್ತಿರ ಬಂದರೆ ನಿನಗೆ ಹಿಂಸೆ ಆಗುತ್ತಾ? ” ಎಂದವನ ದನಿಯಲ್ಲಿ ಇರುವ ನೋವನ್ನು ಗುರುತಿಸಿದವಳಿಗೆ ಮತ್ತೆ ಅವನ ಕಣ್ಣಲ್ಲಿ ನೇರವಾಗಿ ದೃಷ್ಟಿ ಇಟ್ಟು ನೋಡಲು ಸಾಧ್ಯವಾಗಲಿಲ್ಲ.  

 

ವಿಖ್ಯಾತ್,”ಹೇಳು ರಾಧ್ಯಾ…ನಿನಗೆ ನಿಜವಾಗಲೂ ನನ್ನಿಂದ ಹಿಂಸೆ ಆಗ್ತಾ ಇದೆಯಾ?” ಎಂದು ಕೇಳುತ್ತಿದ್ದರೆ ಅವಳ ಕೆನ್ನೆ ಮೇಲೆ ಜಾರಿದ ಕಣ್ಣೀರೊಂದೇ ಅವನ ಪ್ರಶ್ನೆಗೆ ಉತ್ತರವಾಗಿತ್ತು.

 

ಅವಳ ಕಣ್ಣೀರನ್ನು ನೋಡಿದವನು,”ನಿನ್ನ ಉತ್ತರ ಏನಂತ ಗೊತ್ತಾಯ್ತು ಬಿಡು…” ಎಂದವನು ಮರು ಮಾತಿಲ್ಲದೆ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದ. ನಿಮಿಷಗಳ ಬಳಿಕ ಅವಳು ಅವನಿಂದ ದೂರ ಸರಿದವಳು ಅಲ್ಲಿಂದ ಹೋಗಲು ನೋಡಿದರೆ ಅವಳನ್ನು ತಡೆದವನು ಅವಳನ್ನು ಒಮ್ಮೆ ದಿಟ್ಟಿಸಿದ್ದ. ಅವನ ಉರಿ ನೋಟವನ್ನು ಅರಿತವಳು ಪಕ್ಕಕ್ಕೆ ಮುಖ ಹೊರಳಿಸಿದರೆ ಅವನು,”ಏನಿದೆಲ್ಲ?” ಎಂದು ಪ್ರಶ್ನಿಸಿದ್ದ. 

 

ಅವಳು ಅವನೆಡೆ ನೋಡಿದವಳು ಕೈ ಬಿಡಿ ಎಂದು ಗಂಭೀರವಾಗಿ ಹೇಳಿದ್ದಳು. ಅವನು ಅಷ್ಟೇ ಗಂಭೀರತೆಯಲ್ಲಿ ನಿನ್ನ ಜೊತೆ ಮಾತನಾಡಬೇಕು ಎಂದು ಹೇಳಿದವನು ಅವಳನ್ನು ತನ್ನ ಜೊತೆ ಕರೆದೊಯ್ಯತೊಡಗಿದರೆ ಅವಳು ಕೈ ಬಿಡಿಸಿಕೊಳ್ಳಲು ಪರದಾಡಿದ್ದಳು. ಅವನ ಹಿಡಿತದ ಮುಂದೆ ಅವಳ ಶಕ್ತಿ ಎಲ್ಲೂ ಸಾಲುತ್ತಿಲ್ಲ. ಅವನು ಅವಳ ಪ್ರಯತ್ನವನ್ನು ನೋಡಿದವನು,” ಆಗದೇ ಇರುವ ಪ್ರಯತ್ನ ಮಾಡಬೇಡ…ಸುಮ್ಮನೆ ಬಾ…” ಎಂದವನು ಯಾರೂ ಇಲ್ಲದ ಕಡೆ ಕರೆದುಕೊಂಡು ಹೋಗಿದ್ದ. 

 

ಅವಳ ಕೈ ಮೇಲಿನ ಹಿಡಿತ ಸಡಿಲಿಸಲು ಅವಳು ಹೌ ಡೇರ್ ಯು ಎಂದು ಅವನನ್ನು ಕೋಪದ ಕಣ್ಣುಗಳಿಂದ ನೋಡಿದ್ದಳು. ಅವನು ಅವಳ ಸನಿಹ ಬರುತ್ತಿದ್ದಂತೆ ಅವಳು ಹಿಂದೆ ಸರಿದಿದ್ದಳು. ಕೈ ಮುಂದೆ ಮಾಡಿದವಳು,” ಅಲ್ಲೇ ನಿಲ್ಲಿ ಹತ್ತಿರ ಬರಬೇಡಿ…” ಎಂದು ಹೇಳಲು ಅವನು ಅವಳನ್ನೇ ನೋಡುತ್ತಿದ್ದ. 

 

ಇನ್ನಷ್ಟು ಅವಳ ಸನಿಹ ಬಂದವನು,”ಯಾಕ್ ನನ್ನ ತಾಳ್ಮೆ ಪರೀಕ್ಷೆ ಮಾಡ್ತಾ ಇದೀಯ? ನೀನು ಇದನ್ನೆಲ್ಲ ಬೇಕು ಅಂತಲೇ ಮಾಡ್ತಾ ಇದೀಯ ಅಂತ ನನಗೆ ಗೊತ್ತು…” ಎಂದವನ ನೋಟ ಅವಳ ಅಂದದ ಮೊಗದ ಮೇಲೆಯೇ ಇತ್ತು. 

 

“ಯಾಕ್ ಹೀಗ್ ಮಾಡ್ತಾ ಇದೀಯ? ನಿನ್ನ ಡ್ರೆಸ್ ಹೇಗಿದೆ ಅಂತ ಒಮ್ಮೆ ನೋಡಿಕೊಂಡಿದೀಯಾ? ಇದು ನಿಜವಾಗಲೂ ನೀನೇನಾ ಅಂತ ಅನ್ನಿಸುವಷ್ಟು ಬದಲಾಗಿದೀಯ? ಯಾಕೇ ಹೀಗೆ ನನ್ನ ಜೀವ ತಿಂತೀಯ? ಏನಿದೆಲ್ಲ?” ಎಂದವನು ಅಸಹನೆಯಲ್ಲಿ ಹೇಳಲು ಅವಳು ಅವನನ್ನು ಹಿಂದೆ ತಳ್ಳಿದವಳು,”ನಾನ್ಯಾಕೆ ನಿಮ್ಮ ತಾಳ್ಮೆ ಪರೀಕ್ಷೆ ಮಾಡಬೇಕು? ಅಷ್ಟಕ್ಕೂ ನೀವು ಯಾರು? ನನ್ನ ಜೊತೆ ನಿಮ್ಮದೆಂತ ಮಾತು? ದಾರಿ ಬಿಡಿ…” ಎಂದವಳು ಅವನನ್ನು ಸರಿಸಿ ಅಲ್ಲಿಂದ ಹೋಗಲು ಯತ್ನಿಸಿದರೆ ಅವಳನ್ನು ಗೋಡೆಗೆ ಒರಗಿಸಿದವನು ತನ್ನ ಮುಖವನ್ನು ಅವಳ ಮುಖದತ್ತ ತಂದಿದ್ದ. 

 

ಮುಂದುವರೆಯುವುದು…

 

 

 ಅಭಿಪ್ರಾಯಗಳನ್ನು ಮಿಸ್ ಮಾಡದೆ ತಿಳಿಸಿ 🙏 

 

 

ನಿಮ್ಮ ಪ್ರೋತ್ಸಾಹ ಹಾಗೂ ಚಂದದ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ…