New Katha Varnika is now on Google Play — read Telugu stories on your phone. Learn more
ಅಗ್ನಿಪರೀಕ್ಷೆ – 3

ಅಗ್ನಿಪರೀಕ್ಷೆ – 3

 

ಚಪ್ಪಾಳೆ ಹಾಗೂ ಜೋರಾದ ಮಾತುಗಳು ಕೇಳಿಬರಲು ಅವಳು ಅವನನ್ನು ತಳ್ಳಿ ಅಲ್ಲಿಂದ ಓಡಿದ್ದಳು. ವಿಖ್ಯಾತ್ ಅವಳು ಹೋಗುವುದನ್ನೇ ನೋಡುತ್ತ ಇದ್ದವನು ಕೋಪದಲ್ಲಿ ಗೋಡೆಗೆ ಕೈ ಬಡಿದಿದ್ದ. 

 

ಆರಾಧ್ಯಳ ಸ್ನೇಹಿತೆ ಸೃಷ್ಟಿಯ ಹುಟ್ಟುಹಬ್ಬದ ಸಂಭ್ರಮ. ಸೃಷ್ಟಿಯ ತಂದೆ ವಿಖ್ಯಾತ್ ನ ಆಸ್ಪತ್ರೆಯ ಪ್ರಮುಖ ಟ್ರಸ್ಟೀಗಳಲ್ಲಿ ಒಬ್ಬರು. ಅವರು ಅವನ ಕುಟುಂಬದ ಜೊತೆ ಕೂಡ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದರು. ಸೃಷ್ಟಿ ಕೇಕ್ ಕಟ್ ಮಾಡತೊಡಗಿದ್ದರೆ ನೆರೆದಿರುವ ಅತಿಥಿಗಳ ಚಪ್ಪಾಳೆ ಸದ್ದು ಜೋರಾಗಿತ್ತು. ವಿಖ್ಯಾತ್ ಅಲ್ಲಿಗೆ ಬಂದವನ ಕಣ್ಣು ಆರಾಧ್ಯಳನ್ನು ಹುಡುಕಿತ್ತು. ಸುತ್ತಲೂ ನೋಡಿದವನ ಕಣ್ಣು ಸೃಷ್ಟಿಯ ಆಸುಪಾಸಿನಲ್ಲಿಯೇ ಇದ್ದವಳನ್ನು ಗುರುತಿಸಿತ್ತು. 

 

ಅವಳು ಅವನ ನೋಟ ತನ್ನ ಮೇಲೆಯೇ ಇರುವುದನ್ನು ಗಮನಿಸಿದವಳು ಮುಖ ಪಕ್ಕಕ್ಕೆ ಹೊರಳಿಸಿದ್ದಳು. ಅವಳ ವರ್ತನೆಗೆ ಅವನ ಕೈ ಮುಷ್ಟಿ ಬಿಗಿದಿತ್ತು. ಆರಾಧ್ಯಾಳ ಸ್ನೇಹಿತೆ ಪ್ರಾರ್ಥನಾ ಅವಳ ಪಕ್ಕ ನಿಂತವಳು ವಿಖ್ಯಾತ್ ನೋಟವನ್ನು ಗಮನಿಸಿದ್ದಳು. ಅವಳ ಕೈ ತಿವಿದವಳು,”ನಿನ್ನ ಮಜ್ನು ಆಗಿಂದ ನಿನ್ನನ್ನೇ ತಿನ್ನೋ ಹಾಗೆ ನೋಡ್ತಾ ಇದಾನೆ…ನೀನ್ಯಾಕೆ ಅವನನ್ನು ನೋಡುತ್ತಾ ಇಲ್ಲ…” ಎಂದು ಹೇಳಿದರೆ ಆರಾಧ್ಯ ಅವಳನ್ನೇ ಕೋಪದಿಂದ ನೋಡಿದ್ದಳು. 

 

“ಅವನು ನನ್ನ ಮಜ್ನು ಅಲ್ಲ…ಏನೇನೋ ಹೇಳಬೇಡ…” ಎಂದು ಹೇಳಿದವಳ ನೋಟ ಅವನ ಮೇಲೆ ಹೋಗಿತ್ತು. ಅವನಿನ್ನೂ ಅವಳನ್ನೇ ನೋಡುತ್ತಿದ್ದ. ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗದೇ ನೋಟ ಬದಲಿಸಿದವಳು ಕೇಕ್ ಕಟ್ ಮಾಡುವತ್ತ ಗಮನ ಹರಿಸಿದ್ದಳು. ಸೆಲೆಬ್ರೇಷನ್ ಮುಗಿದು ಸೃಷ್ಟಿಗೆ ಉಡುಗೊರೆ ನೀಡಿದವಳು ಅವಳಿಗೆ ಒಂದು ಸಣ್ಣ ಅಪ್ಪುಗೆ ನೀಡಿ ಬಂದಿದ್ದಳು. 

 

ಎಲ್ಲರೂ ಉಡುಗೊರೆ ಆಶೀರ್ವಾದ ಮಾಡುವುದರಲ್ಲಿ ಬ್ಯುಸಿ ಆಗಿದ್ದರೆ ಪ್ರಾರ್ಥನ,”ನಿಂದೇನು ಹೊಸ ಲುಕ್? ನಿನ್ನ ಮಜ್ನು ನಿನ್ನನ್ನ ನೋಡಿ ಫಿದಾ ಆದಂಗೆ ಇದೆ…ಪಾಪ ನಿನ್ನಿಂದ ಕಣ್ಣು ಹೊರಳಿಸೋಕು ಆಗ್ತಾ ಇಲ್ಲ ಅನಿಸುತ್ತೆ…” ಎಂದು ತಮಾಷೆ ಮಾಡಲು ಆರಾಧ್ಯ,”ಫಿದಾ? ಅವನು ನೋಡುತ್ತ ಇರುವುದನ್ನು ನೋಡಿದರೆ ಫಿದಾ ಆದ ಹಾಗ್ ಇದೆಯಾ? ಸೀರಿಯಸ್ಲೀ…” ಎಂದು ಕೇಳಿದ್ದಳು. 

 

ಪ್ರಾರ್ಥನ,”ಇನ್ನೇನು? ಅವನು ನೋಡ್ತಾ ಇರೋದನ್ನ ನೋಡಿದರೆ ನಿನ್ನ ಜೊತೆ ಮಾತಾಡೋಕೆ ಕಾಯ್ತಾ ಇದಾನೆ ಅಂತ ಅನಿಸುತ್ತೆ…ಪಾಪ ಮಾತಾಡು…” ಎಂದು ಹೇಳುತ್ತಿದ್ದರೆ ಅವಳು,”ಮುಚ್ಕೊಂಡು ನಡಿ…ಹೋಗೋಣ ಮೊದಲು ಅವನ ವಿಷಯ ನಿನಗ್ಯಾಕೆ?” ಎಂದವಳು ಮನದಲ್ಲೇ,’ಮಾತಾಡಬೇಕು ಅನಿಸೋದ? ಮಾತಾಡಿಯೂ ಆಯ್ತು ಬೈದಿದ್ದು ಆಯ್ತು…’ಎಂದುಕೊಳ್ಳುತ್ತಿದ್ದವಳಿಗೆ ಅವನು ಮುತ್ತಿಟ್ಟಿದ್ದು ನೆನಪಿಗೆ ಬಂದಿತ್ತು. 

 

ತನ್ನದೇ ಯೋಚನೆಯಲ್ಲಿ ಇದ್ದವಳು ಸ್ನೇಹಿತೆಯ ಕರೆಗೆ ಎಚ್ಚೆತ್ತಿದ್ದಳು. ವಿಖ್ಯಾತ್ ಸೃಷ್ಟಿಗೆ ಶುಭಾಶಯ ತಿಳಿಸಿದವನು ಅವಳ ತಂದೆಯ ಜೊತೆ ಮಾತನಾಡುತ್ತಾ ಇದ್ದ. ಅವನು ಮಾತನಾಡುವುದರಲ್ಲಿ ಬ್ಯುಸಿ ಆಗಿದ್ದನ್ನು ಗಮನಿಸಿದವಳು,”ನಡಿ ಹೋಗೋಣ…ಟೈಮ್ ಆಯ್ತು…” ಎಂದವಳು ಹೊರಗೆ ಬರುವಷ್ಟರಲ್ಲಿ ಕಾರು ಅವರಿಗಾಗಿ ಕಾಯುತ್ತಿತ್ತು. 

 

ವಿಖ್ಯಾತ್ ಅವಳನ್ನೇ ಗಮನಿಸುತ್ತಿದ್ದವನು ಅವಳು ಅವಸರದಲ್ಲಿ ಹೋಗುತ್ತಿರುವುದನ್ನು ನೋಡಿದವನು ಅವಳ ಹಿಂದೆಯೇ ಬಂದಿದ್ದ. 

 

ಅವಳು ಕಾರಿನ ಬಳಿ ಹೋಗುತ್ತಿದ್ದಂತೆ ಅವಳ ಕೈ ಹಿಡಿದವನು,”ಒಂದು ನಿಮಿಷ ಮಾತಾಡಬೇಕು ಬಾ…” ಎಂದು ಹೇಳಿದರೆ ಅವಳು ಕೈ ಬಿಡಿಸಿಕೊಂಡವಳು,”ಈ ಮುಟ್ಟಿ ಮಾತಾಡಿಸೋದು ಎಲ್ಲ ನನಗೆ ಇಷ್ಟ ಆಗಲ್ಲ…ಈಗ ಮಾತಾಡೋಕೆ ಏನು ಉಳಿದಿಲ್ಲ…ಎಲ್ಲ ಮಾತಾಡಿ ಮುಗಿದಿದೆ… ಮತ್ತೆ ಮತ್ತೆ ನನ್ನ ಹತ್ತಿರ ಬರೋಕೆ ಪ್ರಯತ್ನ ಮಾಡಬೇಡಿ…ನಿಮ್ಮ ಸ್ಥಾನಕ್ಕೆ ಗೌರವ ಕೊಡಬೇಕು ಅಂತ ಸುಮ್ಮನೆ ಇದೀನಿ…ಪ್ಲೀಸ್…” ಎಂದು ಗಂಭೀರವಾಗಿ ಹೇಳುತ್ತಿದ್ದರೆ 

 

ವಿಖ್ಯಾತ್,”ನಿನಗೆ ಇಷ್ಟ ಆಗದೆ ಇದ್ದರೆ ಅದು ನನ್ನ ಸಮಸ್ಯೆ ಅಲ್ಲ…ನನ್ನ ಸ್ಥಾನಕ್ಕೆ ಗೌರವ ಕೊಡ್ತಾ ಇದೀಯ ಅಂತ ಹೇಳಿದೆ ಅಲ್ವಾ…ಬಾ ನಿನ್ನ ಜೊತೆ ಮಾತಾಡಬೇಕು…” ಎಂದು ಅವಳ ಮಾತನ್ನೇ ಅವಳಿಗೆ ತಿರುಗಿಸಿದ್ದ. 

 

ಪ್ರಾರ್ಥನ,”ಅಷ್ಟೊಂದು ಕೇಳಿಕೊಳ್ಳುತ್ತ ಇದಾರೆ ಒಂದು ಸಲ ಮಾತಾಡೋಕೆ ಏನು ಸಮಸ್ಯೆ ಆರಾಧ್ಯ?” ಎಂದರೆ ಆರಾಧ್ಯ,”ನನಗೆ ಅವರ ಜೊತೆ ಮಾತಾಡೋಕೆ ಇಷ್ಟ ಇಲ್ಲ ಪ್ರಾರ್ಥನ…ಪ್ಲೀಸ್ ಒತ್ತಾಯ ಮಾಡಬೇಡ…” ಎಂದವಳು ಮತ್ತೇನೂ ಹೇಳದೇ ಕಾರಿನಲ್ಲಿ ಹೋಗಿ ಕುಳಿತಿದ್ದಳು. 

 

ಪ್ರಾರ್ಥನ ಅವಳ ಹಿಂದೆಯೇ ನಡೆದವಳು ವಿಖ್ಯಾತ್ ಕಡೆ ಒಮ್ಮೆ ನೋಡಿ ಅವಳ ಜೊತೆ ಕುಳಿತಿದ್ದಳು. ಕಾರು ಅಲ್ಲಿಂದ ಹೊರಡುತ್ತಿದ್ದಂತೆ ವಿಖ್ಯಾತ್ ಅವಳು ಹೋಗುವುದನ್ನೇ ನೋಡುತ್ತಿದ್ದವನು ಪಕ್ಕಕ್ಕೆ ಯಾರೋ ಬಂದಂತಾಗಲು ಸಹಜವಾಗಿರಲು ಪ್ರಯತ್ನಿಸಿದ್ದ. 

 

💙💙💙💙💙💙💙

 

ಕಾರು ಆರಾಧ್ಯ ಮನೆ ತಲುಪಲು ಪ್ರಾರ್ಥನಳಿಗೆ ತನ್ನ ಜೊತೆ ತನ್ನ ಮನೆಗೆ ಬರುವಂತೆ ಒತ್ತಾಯಿಸಿದ್ದಳು. ಅವಳು,”ಇಲ್ಲ ಕಣೇ…ಇನ್ನೊಂದು ದಿನ ಬರ್ತೀನಿ…ಈಗ ಮನೆಗೆ ಹೋಗಲೇಬೇಕು…” ಎಂದು ಹೇಳಿದರೆ ಆರಾಧ್ಯ ಡ್ರೈವರಿಗೆ,”ಅವಳನ್ನು ಜೋಪಾನವಾಗಿ ಮನೆಗೆ ತಲುಪಿಸಿ…” ಎಂದು ಹೇಳಿದ್ದಳು. 

 

ಮನೆ ಒಳ ಬಂದವಳು ಸುತ್ತಲೂ ನೋಡಿದರೆ ಎಲ್ಲರೂ ಅವರವರ ಕೆಲಸದಲ್ಲಿ ಇರುವುದು ಕಂಡಿತ್ತು. ಸೀದಾ ತನ್ನ ಕೋಣೆಗೆ ಹೋಗಿದ್ದಳು. ಬಟ್ಟೆ ಬದಲಿಸಿ ಬಂದವಳು ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಂಡಿದ್ದಳು. ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದವಳ ಕಣ್ಣು ತನ್ನ ತುಟಿಯ ಕಡೆ ಹೋಗಿತ್ತು. ಮತ್ತೆ ಬೇಡವೆಂದರೂ ಪಾರ್ಟಿಯಲ್ಲಿ ನಡೆದ ಘಟನೆ ನೆನಪಿಗೆ ಬರುತ್ತಿತ್ತು. ಅಷ್ಟರಲ್ಲಿ ಹೊರಗಿನಿಂದ ಯಾರೋ ಬಾಗಿಲು ಬಡಿದಂತೆ ಕೇಳಿಸಿತ್ತು. ಸಹಜವಾಗಿರುವಂತೆ ಮುಖ ಒರೆಸಿಕೊಂಡವಳು ಮುಖದ ಮೇಲೆ ನಗು ತಂದುಕೊಂಡಿದ್ದಳು. 

 

ಬಾಗಿಲು ತೆರೆಯಲು ಅವಳ ಅಕ್ಕ ಅನ್ವಿತಾ ನಿಂತಿದ್ದಳು. “ಆದ್ಯಾ ಪಾರ್ಟಿ ಹೇಗಾಯ್ತು? ಏನು ಹೊರಗೆ ಬರದೆ ರೂಮಲ್ಲೇ ಕುಳಿತುಬಿಟ್ಟಿದೀಯ? ” ಎನ್ನುತ್ತಾ ಒಳಗೆ ಬಂದಿದ್ದಳು. 

 

ಆರಾಧ್ಯ,”ಫ್ರೆಷ್ ಆಗ್ತಾ ಇದ್ದೆ ಕಣೇ…ಮತ್ತೆ ಪಾರ್ಟಿ ಕೂಡ  ಚೆನ್ನಾಗಿತ್ತು…” ಎಂದು ಹೇಳಿ ಸುಮ್ಮನಾಗಿದ್ದಳು. 

 

ಅನ್ವಿತಾ,”ಯಾಕ್ ಸೈಲೆಂಟ್ ಆಗಿ ಇದೀಯ? ಬಾ ಊಟ ಮಾಡೋಣ…ಇನ್ನೂ ಯಾರದು ಊಟ ಆಗಿಲ್ಲ…” ಎಂದು ಹೇಳಿದರೆ ಆರಾಧ್ಯ,”ಯಾಕೋ ಹಸಿವಿಲ್ಲ ಅಕ್ಕಾ…ನೀನು ಹೋಗು ನಾನ್ ಬರ್ತೀನಿ…” ಎಂದು ಹೇಳಿದವಳು ತನ್ನ ಪುಸ್ತಕ ತೆಗೆದು ಓದಲು ಕುಳಿತಿದ್ದಳು. 

 

ಅನ್ವಿತಾ,”ಅರೇ ಹೀಗಂದರೆ ಹೇಗೆ? ಬೇಗ ಬಾ ಕಾಯ್ತಾ ಇರ್ತೀನಿ…” ಎಂದು ಹೊರಟವಳ ಪೋನ್ ರಿಂಗಣಿಸಿತ್ತು. ನಗುತ್ತಲೇ ಫೋನ್ ಸ್ವೀಕರಿಸಿದವಳು ಹೇಳಿ ವಿಖ್ಯಾತ್ ಎಂದು ಮಾತನಾಡುತ್ತಾ ಹೊರಟರೆ ಆರಾಧ್ಯ ಕಣ್ಣಂಚು ಒದ್ದೆಯಾಗಿತ್ತು. 

 

ಅಕ್ಕ ಖುಷಿಯಿಂದ ಫೋನಿನಲ್ಲಿ ಮಾತನಾಡುತ್ತಾ ಹೋಗುವುದನ್ನೇ ನೋಡಿದವಳು,”ಯಾಕ್ ಹೀಗೆ ನನ್ನ ಲೈಫಲ್ಲಿ ಆಟ ಆಡ್ತಾ ಇದೀಯ ವಿಖ್ಯಾತ್…ಪಾರ್ಟಿಯಲ್ಲಿ ನನ್ನ ಜೊತೆ ಯಾಕ್ ಹಾಗ್ ನಡೆದುಕೊಂಡೆ… ಆಗಲೂ ಒಂದು ಕ್ಷಣ ನೀನು ನನ್ನನ್ನ ತುಂಬ ಪ್ರೀತಿಸುತ್ತಾ ಇದೀಯ ಅಂತಲೇ ಅಂದುಕೊಂಡೆ…ಆದರೆ ಅದೆಲ್ಲ ಸುಳ್ಳು… ನೀನು ನನಗೆ ನಿಲುಕದ ನಕ್ಷತ್ರ ಅಂತ ಈಗಾಗಲೇ ನೀನೇ ಅರ್ಥ ಮಾಡಿಸಿದ್ದೀಯ…ಅಕ್ಕನನ್ನು ಮದುವೆ ಆಗೋಕೆ ಹೊರಟಿರುವವನು ನನ್ನ ಭಾವನೆಗಳ ಜೊತೆ ಯಾಕೆ ಆಟ ಆಡ್ತಾ ಇದೀಯ? ನಿನ್ನ ನೋವು ನನಗೆ ಅರ್ಥ ಆಗಲ್ಲ ಅಂದೆ ಅಲ್ವಾ? ಆದರೆ ಇಲ್ಲಿ ನಿಜವಾಗಿ ನೋವು ಪಡುತ್ತ ಇರೋದು ನಾನು…ನೀನು ಆರಾಮಾಗಿಯೇ ಇದೀಯಾ…ನೋಡು ಈಗಲೂ ಅಕ್ಕನ ಜೊತೆ ಎಷ್ಟು ಚೆನ್ನಾಗಿ ಮಾತನಾಡುತ್ತಾ ಇದೀಯ ಅಂತ…ಇದರಲ್ಲೇ ಅರ್ಥ ಆಗುತ್ತೆ ನೀನು ಈ ಮದುವೆಯಿಂದ ಖುಷಿಯಾಗಿ ಇರೋದು…” ಎಂದವಳು ಬಾಗಿಲು ಮುಚ್ಚಿ ಅಳತೊಡಗಿದಳು. 

 

ತನ್ನ ಅಕ್ಕ ಅವನ ಜೊತೆ ಸಂತೋಷದಿಂದ ಮಾತನಾಡುವುದನ್ನು ನೆನೆದವಳು,”ಅಕ್ಕ ಕೂಡ ಖುಷಿಯಾಗಿಯೇ ಇದಾಳೆ…ನೀನು ಇಬ್ಬರ ಜೀವನದ ಜೊತೆಯೂ ಆಟ ಆಡ್ತಾ ಇದೀಯ ವಿಖ್ಯಾತ್…ನೀನು ಹೋಗ್ತಾ ಇರೋ ದಾರಿ ಸರಿಯಾಗಿಲ್ಲ…ಇದರಿಂದ ಮುಂದೆ ಎಲ್ಲರಿಗೂ ನೋವು…” ಎಂದುಕೊಂಡವಳಿಗೆ ಅವನು ಏನು ಮಾಡಲು ಹೊರಟಿದ್ದಾನೆ ಎಂಬುದೇ ಅರ್ಥವಾಗುತ್ತಿಲ್ಲ. 

 

ಮುಂದುವರೆಯುವುದು…

 

 

ಸಂಚಿಕೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿ…

 

ನಿಮ್ಮ ಪ್ರೋತ್ಸಾಹ ಹಾಗೂ ಚಂದದ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ…