ಅಪರಾಧದ ಜಗತ್ತಿನಲ್ಲಿ ಅಕ್ಷರಾ ಆರ್ಯನ್ 🫶 – 3
ಸಂಚಿಕೆ – ೩
ರಾತ್ರಿ ಒಂಬತ್ತು ಗಂಟೆಯಾಗುತ್ತಾ ಬಂದರೂ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದ ಆವರಣದಲ್ಲಿ ಲೈಟ್‌ಗಳು ಉರಿಯುತ್ತಿದ್ದವು. ಹೊರಗೆ ನಿರಂತರವಾಗಿ ಜಿಟಿಜಿಟಿ ಮಳೆ ಶುರುವಾಗಿತ್ತು. ವಾತಾವರಣದಲ್ಲಿ ಫಿನಾಯಿಲ್ ಮತ್ತು ಫಾರ್ಮಲಿನ್ ರಾಸಾಯನಿಕದ ತೀಕ್ಷ್ಣ ವಾಸನೆ ದಟ್ಟವಾಗಿ ಹರಡಿತ್ತು.
ಶವಾಗಾರದ ಒಳಗೆ, ಸ್ಟೇನ್‌ಲೆಸ್ ಸ್ಟೀಲ್ ಮೇಜಿನ ಮೇಲೆ ಆ ಅನಾಮಧೇಯ ಮಗುವಿನ ದೇಹವಿತ್ತು. ಹಿರಿಯ ಫೋರೆನ್ಸಿಕ್ ಮೆಡಿಸಿನ್ ತಜ್ಞ ಡಾ. ಪ್ರಭಾಕರ್ ಶವಪರೀಕ್ಷೆಯ ಪ್ರಾಥಮಿಕ ಪ್ರಕ್ರಿಯೆಗಳನ್ನು ನಡೆಸುತ್ತಿದ್ದರು.
ಅವರ ಪಕ್ಕದಲ್ಲೇ ಪೂರ್ಣ ಸರ್ಜಿಕಲ್ ಗೌನ್, ಮಾಸ್ಕ್ ಮತ್ತು ವೈಸರ್ ಧರಿಸಿ ನಿಂತಿದ್ದ ಅಕ್ಷರಾ, ಪ್ರತಿಯೊಂದು ಹಂತವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ತನ್ನ ನೋಟ್‌ಪ್ಯಾಡ್‌ನಲ್ಲಿ ದಾಖಲಿಸುತ್ತಿದ್ದಳು. ಜೊತೆಗೆ ಆಂತರಿಕ ಅಂಗಾಂಗಗಳ ಮಾದರಿಗಳನ್ನು ಸಂಗ್ರಹಿಸಲು ಸಣ್ಣ ಗ್ಲಾಸ್ ಕಂಟೈನರ್‌ಗಳನ್ನು ಸಿದ್ಧವಾಗಿಟ್ಟುಕೊಂಡಿದ್ದಳು.
“ಅಕ್ಷರಾ, ಗಾಯದ ಅಂಚುಗಳನ್ನು ನೋಡು, ಹೊಲಿಗೆ ಹಾಕಲು ಬಳಸಿರೋದು ಸಾಮಾನ್ಯ ವೈದ್ಯಕೀಯ ನೈಲಾನ್ ಸೂಚರ್ ಅಲ್ಲ. ಇದು ಕರಗುವ ಪಾಲಿಗ್ಲ್ಯಾಕ್ಟಿನ್ ಎಳೆಗಳು. ಆಸ್ಪತ್ರೆಗಳಲ್ಲಿ ಮೇಜರ್ ಸರ್ಜರಿಗೆ ಬಳಸುವಂತಹದ್ದು. ಆದರೆ ಹೊಲಿಗೆಯ ಮುಕ್ತಾಯದ ಗಂಟು ತುಂಬಾ ಅವಸರದಲ್ಲಿ ಹಾಕಿದ ಹಾಗಿದೆ.” ಪ್ರಭಾಕರ್ ಫೋರ್ಸೆಪ್ಸ್‌ನಿಂದ ಹೊಲಿಗೆಯನ್ನು ಪರೀಕ್ಷಿಸುತ್ತಾ ಹೇಳಿದರು.
ಅಕ್ಷರಾ ಮ್ಯಾಗ್ನಿಫೈಯಿಂಗ್ ಲೆನ್ಸ್ ಮೂಲಕ ಆ ಜಾಗವನ್ನು ನೋಡಿದಳು. “ಸರ್, ಹೊಟ್ಟೆಯ ಕುಹರವನ್ನು ತೆರೆದಾಗ ರಕ್ತಸ್ರಾವದ ಪ್ರಮಾಣ ಎಷ್ಟಿದೆ ಅನ್ನೋದು ಮುಖ್ಯ. ಸರ್ಜರಿ ಮಾಡುವಾಗ ಮಗು ಬದುಕಿತ್ತಾ ಅಥವಾ ಮರಣದ ನಂತರ ಕಟ್ ಮಾಡಿದ್ದಾರಾ ಅನ್ನೋದು ಗೊತ್ತಾಗಬೇಕು.”
ಪ್ರಭಾಕರ್ ಶಸ್ತ್ರಚಿಕಿತ್ಸೆಯ ಛೇದನವನ್ನು ವಿಸ್ತರಿಸಿದರು. ಒಳಗಿನ ಅಂಗಾಂಗಗಳನ್ನು ಪರಿಶೀಲಿಸುತ್ತಿದ್ದಂತೆ ಅವರ ಮುಖ ಗಂಭೀರವಾಯಿತು. “ರಕ್ತ ಹೆಪ್ಪುಗಟ್ಟಿದ ಸ್ಥಿತಿ ಮತ್ತು ಅಂಗಾಂಶಗಳ ಪ್ರತಿಕ್ರಿಯೆ ನೋಡಿದರೆ, ಮಗು ಜೀವಂತವಾಗಿದ್ದಾಗಲೇ ಈ ಆಪರೇಷನ್ ಶುರುವಾಗಿದೆ. ಆದರೆ ಎಡಭಾಗದ ಕಿಡ್ನಿ ಸಂಪೂರ್ಣವಾಗಿ ಕಾಣೆಯಾಗಿದೆ. ಅದನ್ನು ಅತ್ಯಂತ ಚುರುಕಾಗಿ, ರಕ್ತನಾಳಗಳನ್ನು ಕಟ್ ಮಾಡಿ ತೆಗೆಯಲಾಗಿದೆ. ಆದರೆ ಲಿವರ್ ಮುಟ್ಟಿಲ್ಲ. ಬಹುಶಃ ಸರ್ಜರಿಯ ಮಧ್ಯದಲ್ಲೇ ಮಗು ಕಾರ್ಡಿಯಾಕ್ ಅರೆಸ್ಟ್ ಆಗಿ ತೀರಿಕೊಂಡಿರಬಹುದು. ಅದಕ್ಕೇ ಗಾಬರಿಯಲ್ಲಿ ಅರ್ಧಕ್ಕೆ ಹೊಲಿಗೆ ಹಾಕಿ ಎಸೆದು ಹೋಗಿದ್ದಾರೆ.”
ಅಕ್ಷರಾಳ ಎದೆಯೊಳಗೆ ಏನೋ ನಡುಗಿದಂತಾಯಿತು. ಎಷ್ಟೇ ಹೆಣಗಳನ್ನು ನೋಡಿದ್ದರೂ, ಆ ಪುಟ್ಟ ಜೀವ ಅನುಭವಿಸಿದ ಯಾತನೆ ಅವಳ ಕಣ್ಣುಗಳನ್ನು ಒಂದು ಕ್ಷಣ ಮಂಜಾಗಿಸಿತು. ಆದರೆ ತಕ್ಷಣವೇ ತನ್ನ ಭಾವನೆಗಳನ್ನು ಹತ್ತಿಕ್ಕಿದಳು.
“ಸರ್, ಕಿಡ್ನಿ ಬೆಡ್‌ನಿಂದ ಮತ್ತು ಕಟ್ ಆಗಿರೋ ರಕ್ತನಾಳಗಳ ಅಂಚಿನಿಂದ ಟಿಶ್ಯೂ ಸ್ಯಾಂಪಲ್ಸ್ ತಗೊಳ್ತೀನಿ. ಜೊತೆಗೆ ಟಾಕ್ಸಿಕಾಲಜಿಗಾಗಿ ಲಿವರ್ ಬಿಟ್ಸ್ ಮತ್ತು ಗ್ಯಾಸ್ಟ್ರಿಕ್ ಕಂಟೆಂಟ್ ಕಲೆಕ್ಟ್ ಮಾಡ್ತೀನಿ. ಮಗುವಿಗೆ Anesthesia ಕೊಟ್ಟಿದ್ದಾರಾ ಅನ್ನೋದು ಕೆಮಿಕಲ್ ಅನಾಲಿಸಿಸ್‌ನಲ್ಲಿ ತಿಳಿಯಬೇಕು”
“ಖಂಡಿತ. ಸ್ಯಾಂಪಲ್ಸ್ ನೀನೇ ಎಫ್‌ಎಸ್‌ಎಲ್‌ಗೆ ತಗೊಂಡು ಹೋಗು. ನಿಖರ ವರದಿ ಬರೋಕೆ ಕನಿಷ್ಠ ಎರಡು-ಮೂರು ದಿನ ಬೇಕಾಗುತ್ತೆ,” ಎಂದರು ಪ್ರಭಾಕರ್.
🖤🖤🖤🖤🖤🖤🖤🖤🖤🖤🖤🖤🖤🖤🖤🖤🖤
ಅದೇ ಸಮಯದಲ್ಲಿ,
ಬೆಂಗಳೂರಿನ ಇನ್ಸ್‌ಪೆಕ್ಟರ್ ಆಫೀಸ್‌ನಲ್ಲಿ ಆರ್ಯನ್ ತನ್ನ ಟೇಬಲ್ ಮೇಲೆ ಹರಡಿದ್ದ ಫೈಲ್‌ಗಳ ನಡುವೆ ಮುಳುಗಿದ್ದ. ಅವನ ಎದುರು ಕುಳಿತಿದ್ದ ರುದ್ರ ಮತ್ತು ಡಿಜಿಟಲ್ ವಿಭಾಗದ ನಿಖಿಲ್ ಕಂಪ್ಯೂಟರ್ ಸ್ಕ್ರೀನ್ ನೋಡುತ್ತಿದ್ದರು.
“ಸರ್, ನೈಸ್ ರೋಡ್ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ಮೂರು ಟೋಲ್ ಪ್ಲಾಜಾಗಳ ಕಳೆದ ಎಪ್ಪತ್ತೆರಡು ಗಂಟೆಗಳ ಫೂಟೇಜ್ ತರಿಸಿಕೊಂಡೆವು. ಆದರೆ ರಾತ್ರಿ ಎರಡು ಗಂಟೆಯಿಂದ ಮುಂಜಾನೆ ನಾಲ್ಕರವರೆಗೆ ಆ ಹಳೆಯ ಫ್ಯಾಕ್ಟರಿ ಕಡೆಗೆ ಹೋಗೋ ರಸ್ತೆಯಲ್ಲಿ ಯಾವುದೇ ಹೆವಿ ವೆಹಿಕಲ್ಸ್ ಹೋದ ದಾಖಲೆ ಇಲ್ಲ. ಅಲ್ಲಿ ಸ್ಟ್ರೀಟ್ ಲೈಟ್ಸ್ ಸರಿಯಾಗಿಲ್ಲ, ಕೇವಲ ಒಂದೆರಡು ಕಮರ್ಷಿಯಲ್ ವ್ಯಾನ್‌ಗಳು ಮತ್ತು ಬೈಕ್‌ಗಳು ಮಾತ್ರ ಮೂವ್ ಆಗಿವೆ. ನಂಬರ್ ಪ್ಲೇಟ್‌ಗಳು ಮಣ್ಣಿನಿಂದ ಮಸುಕಾಗಿವೆ.” ನಿಖಿಲ್ ಲ್ಯಾಪ್ಟಾಪ್ ತೋರಿಸಿದ.
ಆರ್ಯನ್ ಯೋಚಿಸಿದ. “ಆ ಜಾಗ ಆಯ್ದುಕೊಂಡಿರೋ ರೀತಿಯೇ ಅನುಮಾನ ತರಿಸುತ್ತೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಮಿಸ್ ಆಗಿರೋ ಮಕ್ಕಳ ಬಗ್ಗೆ ಡೀಟೇಲ್ಸ್ ತರಿಸಿದ್ಯಾ ರುದ್ರ?”
“ಹೌದು ಸರ್, ಕಳೆದ ಮೂರು ತಿಂಗಳಲ್ಲಿ ಸಿಟಿಯಲ್ಲಿ ಒಟ್ಟು ಆರು ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ. ಅದರಲ್ಲಿ ನಾಲ್ಕು ಮಕ್ಕಳು ಕೊಳೆಗೇರಿ ಪ್ರದೇಶಗಳು ಮತ್ತು ರೈಲ್ವೆ ಸ್ಟೇಷನ್ ಆಸುಪಾಸಿನವರು. ಅವರ ಪೋಷಕರು ದಿನಗೂಲಿ ಕಾರ್ಮಿಕರು. ಆದರೆ ಒಬ್ಬಳು ಒಂಬತ್ತು ವರ್ಷದ ಮಗು, ಮಲ್ಲೇಶ್ವರಂನ ಮಧ್ಯಮ ವರ್ಗದ ಕುಟುಂಬದವಳು. ಸ್ಕೂಲ್ ವ್ಯಾನ್ ಹತ್ತೋಕೆ ಹೋಗುವಾಗ ನಾಪತ್ತೆಯಾಗಿದ್ದಾಳೆ. ಇನ್ನೊಂದು ಕೇಸ್ ಕೆ.ಆರ್. ಮಾರ್ಕೆಟ್ ಹತ್ತಿರ. ಆದರೆ ಈ ಎಲ್ಲಾ ಕೇಸ್‌ಗಳಲ್ಲೂ ಕಿಡ್ನ್ಯಾಪ್ ಆದ ಯಾವುದೇ ಕಾಲ್ ಅಥವಾ ಡಿಮ್ಯಾಂಡ್ ಪೋಷಕರಿಗೆ ಬಂದಿಲ್ಲ.”
“ಅಂದರೆ ಹಣಕ್ಕಾಗಿ ಕಿಡ್ನ್ಯಾಪ್ ಆಗಿಲ್ಲ. ಟಾರ್ಗೆಟ್ ಮಕ್ಕಳನ್ನ ಕೇವಲ ಕದಿಯೋದಲ್ಲ, ಅವರ ದೇಹದ ಭಾಗಗಳು…” ಆರ್ಯನ್ ಗಟ್ಟಿಯಾಗಿ ಹೇಳಿದ.
ಆ ಮಾತು ಮುಗಿಸುವಷ್ಟರಲ್ಲಿ ಆರ್ಯನ್‌ನ ಫೋನ್ ವೈಬ್ರೇಟ್ ಆಯಿತು. ಸ್ಕ್ರೀನ್ ಮೇಲೆ ಅಕ್ಷರಾ ಎಂದು ಮೂಡಿತು.
ಆರ್ಯನ್ ಒಮ್ಮೆ ರುದ್ರ ಮತ್ತು ನಿಖಿಲ್ ಕಡೆ ನೋಡಿದ. ನಂತರ ಅಲ್ಲಿಂದ ಎದ್ದು, “ನೀವು ಆ ವ್ಯಾನ್‌ಗಳ ಲಿಸ್ಟ್ ಫಿಲ್ಟರ್ ಮಾಡಿ, ನಾನು ಬರ್ತೀನಿ,” ಎಂದು ಹೇಳಿ ಕಾರಿಡಾರ್‌ಗೆ ಬಂದ.
ಫೋನ್ ಕಿವಿಗೆ ಇಟ್ಟುಕೊಳ್ಳುತ್ತಲೇ ಅವನ ಧ್ವನಿ ಮೆತ್ತಗಾಗಿತ್ತು. “ಅಕ್ಷು…”
“ಆರ್ಯನ್, ಹಾಸ್ಪಿಟಲ್ ಕೆಲಸ ಮುಗೀತು. ಡಾ. ಪ್ರಭಾಕರ್ ಜೊತೆ ಶವಪರೀಕ್ಷೆ ಕಂಪ್ಲೀಟ್ ಆಯ್ತು. ಇದು ನೂರಕ್ಕೆ ನೂರು ಆರ್ಗನ್ ಹಾರ್ವೆಸ್ಟಿಂಗ್ ಕೇಸ್. ಎಡ ಕಿಡ್ನಿ ತೆಗೆದಿದ್ದಾರೆ. ಅನಸ್ತೇಷಿಯಾ ಕೊಟ್ಟಿರೋ ಸಾಧ್ಯತೆ ಇದೆ, ಸ್ಯಾಂಪಲ್ಸ್ ಲ್ಯಾಬ್‌ಗೆ ಕಳಿಸ್ತಿದ್ದೇನೆ. ಮಗು ಆಪರೇಷನ್ ಟೇಬಲ್ ಮೇಲಿದ್ದಾಗಲೇ ಪ್ರಾಣ ಬಿಟ್ಟಿರೋ ಹಾಗೆ ಕಾಣ್ತಿದೆ.” ಅಕ್ಷರಾ ಆಯಾಸದಿಂದ ಹೇಳಿದಳು.
“ರಾಕ್ಷಸರು… ಆ ಮಗು ಯಾರು ಅನ್ನೋದಕ್ಕೆ ಏನಾದರೂ ಮಾರ್ಕ್ ಸಿಕ್ತಾ?” ಆರ್ಯನ್ ದವಡೆ ಬಿಗಿದ.
“ಬಾಡಿ ಮೇಲೆ ಯಾವುದೇ ಜನನ ಗುರುತುಗಳಿಲ್ಲ. ಆದರೆ ಒಂದು ವಿಷಯ… ಮಗುವಿನ ಬಲಗೈ ಮಣಿಕಟ್ಟಿನ ಮೇಲೆ ಹಳೆಯ ಸುಟ್ಟ ಗಾಯದ ಗುರುತಿದೆ. ಸಣ್ಣ ತ್ರಿಕೋನಾಕಾರದಲ್ಲಿದೆ. ಬಹುಶಃ ಪೋಷಕರು ಗುರುತಿಸೋಕೆ ಇದು ಸಹಾಯ ಆಗಬಹುದು,” ಎಂದಳು ಅಕ್ಷರಾ.
ನಂತರ, “ನೀನು ಇನ್ನೂ ಸ್ಟೇಷನ್ ಅಲ್ಲೇ ಇದ್ದೀಯಾ? ಊಟ ಮಾಡಿದ್ಯಾ?”
ಆರ್ಯನ್‌ನ ತುಟಿಗಳಲ್ಲೊಂದು ಪುಟ್ಟ ನಗು ಮೂಡಿತು. “ಇಲ್ಲ, ಕೆಲಸ ನಡೀತಿದೆ. ನೀನು ಮನೆಗೆ ಹೋಗು ಅಕ್ಷು, ರಾತ್ರಿ ತುಂಬಾ ಆಯ್ತು. ಮನೆಗೆ ಹೋದ ತಕ್ಷಣ ನನಗೆ ಮೆಸೇಜ್ ಮಾಡು.”
“ಸರಿ, ನೀನು ಮನೆಗೆ ಹೋಗು. ಅಪ್ಪ ಫೋನ್ ಮಾಡಿದ್ರು ಅಂದೆಯಲ್ಲ? ಏನೋ ಮುಖ್ಯವಾದ ವಿಷಯ ಅಂದಿದ್ರಂತೆ?” ಅಕ್ಷರಾ ಸಹಜವಾಗಿಯೇ ಕೇಳಿದಳು.
ಆರ್ಯನ್ ಒಂದು ಕ್ಷಣ ತಡವರಿಸಿದ. ಮನೆಯಲ್ಲಿ ನಡೆಯುತ್ತಿರುವ ಮದುವೆ ಪ್ರಸ್ತಾಪದ ವಿಷಯವನ್ನು ಈಗಲೇ ಅವಳಿಗೆ ಹೇಳಿ ಆತಂಕಕ್ಕೀಡುಮಾಡಲು ಅವನಿಗೆ ಇಷ್ಟವಿರಲಿಲ್ಲ. ಸದ್ಯಕ್ಕೆ ಈ ಕೇಸ್‌ನ ಒತ್ತಡದಲ್ಲೇ ಅವಳು ಕಂಗಾಲಾಗಿದ್ದಾಳೆ.
“ಅದೇನಿಲ್ಲ ಅಕ್ಷು, ಹಳೆಯ ಊರಿನ ಜಮೀನಿನ ವಿಷಯ ಮಾತಾಡೋದಿತ್ತು ಅಷ್ಟೇ. ನೀನು ಸೇಫ್ ಆಗಿ ಮನೆ ತಲುಪು, ನಾಳೆ ಬೆಳಗ್ಗೆ ಲ್ಯಾಬ್‌ನಲ್ಲಿ ಮೀಟ್ ಆಗೋಣ,” ಎಂದು ಸಮಾಧಾನಪಡಿಸಿದ.
“ಓಕೆ, ಟೇಕ್ ಕೇರ್,” ಎಂದು ಅಕ್ಷರಾ ಕಾಲ್ ಕಟ್ ಮಾಡಿದಳು.
ಆರ್ಯನ್ ನಿಟ್ಟುಸಿರು ಬಿಟ್ಟು, ತನ್ನ ಜೇಬಿನಿಂದ ಗಾಡಿಯ ಕೀ ತೆಗೆದುಕೊಂಡ. ರಾತ್ರಿ ಹನ್ನೊಂದು ಗಂಟೆ ದಾಟಿತ್ತು. ಈಗ ಮನೆಗೆ ಹೋದರೆ ಅಪ್ಪ-ಅಮ್ಮನ ಪ್ರಶ್ನೆಗಳಿಗೆ ಎದುರಾಗಲೇಬೇಕು.
ತನಿಖೆಯ ಈ ಕರಾಳ ಜಾಲದ ನಡುವೆ, ಮನೆಯವರ ಸಂಪ್ರದಾಯದ ನಿರೀಕ್ಷೆಗಳನ್ನು ಹೇಗೆ ನಿಭಾಯಿಸುವುದು ಎಂಬ ಆಲೋಚನೆಯಲ್ಲೇ ಅವನು ಪಾರ್ಕಿಂಗ್ ಕಡೆಗೆ ಹೆಜ್ಜೆ ಹಾಕಿದ.
ಮುಂದುವರೆಯುವುದು…
Swipe left/right or tap the sides to turn pages