ಅಪರಾಧದ ಜಗತ್ತಿನಲ್ಲಿ ಅಕ್ಷರಾ ಆರ್ಯನ್ 🫶 – 4
ಸಂಚಿಕೆ – ೪
ರಾತ್ರಿ ಹನ್ನೊಂದು ಮುಕ್ಕಾಲು ದಾಟುತ್ತಾ ಬಂದಾಗ ಆರ್ಯನ್ನ ಬುಲೆಟ್ ‘ಆರ್ಯ ನಿವಾಸ’ದ ಗೇಟ್ ಒಳಗೆ ಬಂದು ನಿಂತಿತು.
ಹೊರಗೆ ಜಿಟಿಜಿಟಿ ಮಳೆ ಇನ್ನೂ ನಿಂತಿರಲಿಲ್ಲ. ಪೋರ್ಟಿಕೋದ ಕೆಳಗೆ ಗಾಡಿ ನಿಲ್ಲಿಸಿ, ಹೆಲ್ಮೆಟ್ ತೆಗೆದಾಗ ಮನೆಯ ಹಜಾರದ ಲೈಟ್ಗಳು ಇನ್ನೂ ಉರಿಯುತ್ತಿರುವುದು ಅವನ ಕಣ್ಣಿಗೆ ಬಿತ್ತು.
ಇಷ್ಟೊತ್ತಾದರೂ ಯಾರೂ ಮಲಗಿಲ್ಲ, ಅಂದರೆ ಅಪ್ಪ ಕರೆ ಮಾಡಿ ಹೇಳಿದ ಆ ವಿಷಯ ಅಷ್ಟೊಂದು ಮುಖ್ಯವಾಗಿತ್ತೇ ಎಂದುಕೊಂಡ ಆರ್ಯನ್ ಮುಖದ ಮೇಲಿನ ಮಳೆ ಹನಿಗಳನ್ನು ಒರೆಸಿಕೊಳ್ಳುತ್ತಾ ಬಾಗಿಲಿನ ಬಳಿ ಬಂದ.
ಬಾಗಿಲು ತಳ್ಳಿದಾಗ, ಮನೆಯೊಳಗೆ ಮೌನ ಆವರಿಸಿತ್ತು. ಹಾಲಿನ ಸೋಫಾದ ಮೇಲೆ ತಂದೆ ದೇವರಾಜ್ ಕುಳಿತಿದ್ದರು. ಅವರ ಮುಖದಲ್ಲಿ ನಿದ್ದೆಗಿಂತ ಹೆಚ್ಚಾಗಿ ಆಲೋಚನೆಯ ಗಾಂಭೀರ್ಯ ಎದ್ದು ಕಾಣುತ್ತಿತ್ತು. ಟೇಬಲ್ ಮೇಲಿದ್ದ ವಾಚ್ ಕಡೆ ನೋಡುತ್ತಾ ಕುಳಿತಿದ್ದ ತಾಯಿ ಲಲಿತಾ, ಆರ್ಯನ್ ಒಳಗೆ ಬರುತ್ತಿದ್ದಂತೆ ಸಮಾಧಾನದ ನಿಟ್ಟುಸಿರು ಬಿಟ್ಟಳು. ಡೈನಿಂಗ್ ಟೇಬಲ್ ಬಳಿ ಅಣ್ಣ ವಿಕ್ರಮ್ ತನ್ನ ಫೋನ್ನಲ್ಲಿ ಏನೋ ಇಮೇಲ್ ಚೆಕ್ ಮಾಡುತ್ತಾ ಕುಳಿತಿದ್ದ.
“ಇಷ್ಟು ಹೊತ್ತಾಯ್ತಾ ಆರ್ಯನ್?ಒಂದು ಮುಖ್ಯವಾದ ವಿಷಯ ಮಾತಾಡೋದಿದೆ, ಬೇಗ ಮನೆಗೆ ಬಾ ಅಂತ ಹೇಳಿದ್ದೆ ಅಲ್ವಾ?”
“ಗೊತ್ತು ಅಪ್ಪ, ನೈಸ್ ರೋಡ್ ಹತ್ತಿರ ಒಂದು ಕ್ರಿಟಿಕಲ್ ಕೇಸ್ ರಿಪೋರ್ಟ್ ಆಯ್ತು. ಕಮಿಷನರ್ ಆಫೀಸ್ನಿಂದಲೇ ಪ್ರೆಶರ್ ಇತ್ತು. ಸ್ಪಾಟ್ ಇನ್ಕ್ವೆಸ್ಟ್ ಮುಗಿಸಿ ಬರೋ ಹೊತ್ತಿಗೆ ಇಷ್ಟೊತ್ತಾಯ್ತು,” ಎಂದ ಆರ್ಯನ್.
“ಪೊಲೀಸ್ ಕೆಲಸ ಅಂದಮೇಲೆ ಇವೆಲ್ಲ ಇದ್ದಿದ್ದೇ ಆರ್ಯನ್, ಆದರೆ ಸಂಸಾರ, ಬದುಕು ಅಂತ ಒಂದಿರುತ್ತೆ ಅಲ್ವೇನಪ್ಪ? ನಿನಗೆ ಈಗ ಮೂವತ್ತೊಂದು ವರ್ಷ ನಡೀತಿದೆ. ವಿಕ್ರಮ್ಗೆ ಆ ವಯಸ್ಸಿಗೆಲ್ಲಾ ಮದುವೆಯಾಗಿ ಸಂಸಾರ ಸೆಟಲ್ ಆಗಿತ್ತು. ನೀನು ನೋಡಿದರೆ ದಿನಕ್ಕೊಂದು ಕೇಸ್ ಅಂತ ಊಟ-ತಿಂಡಿ ಬಿಟ್ಟು ರಾತ್ರಿ ಹನ್ನೆರಡು ಗಂಟೆಗೆ ಬರ್ತೀಯಾ. ನಿನ್ನ ಒಪ್ಪಿಗೆ ಇಲ್ಲದೆ ಮುಂದುವರಿಯೋಕೆ ಆಗಲ್ಲ ಅಂತಲೇ ನಾವೆಲ್ಲರೂ ನಿದ್ದೆ ಬಿಟ್ಟು ನಿನಗಾಗಿ ಕಾಯ್ತಾ ಕೂತಿದ್ದೀವಿ.” ಅಮ್ಮ ಲಲಿತಾ ಹೇಳಿದರು.
ಆರ್ಯನ್ ಸೋಫಾದ ಮೇಲೆ ಕುಳಿತು ಕಣ್ಣುಗಳನ್ನು ಉಜ್ಜಿಕೊಂಡ. ತಲೆಯೊಳಗೆ ಆ ಪುಟ್ಟ ಮಗುವಿನ ಹೊಲಿಗೆಯ ಗುರುತು ಮತ್ತು ಆ ಶವಾಗಾರದ ಕರಾಳ ದೃಶ್ಯಗಳು ಇನ್ನೂ ಸುಳಿಯುತ್ತಿದ್ದವು.
“ಅಮ್ಮಾ, ಈಗಲೇ ಮದುವೆ ಬಗ್ಗೆ ಯಾಕೆ ಮಾತು? ನಾನು ಈಗಷ್ಟೇ ಒಂದು ದೊಡ್ಡ ಇನ್ವೆಸ್ಟಿಗೇಷನ್ ಶುರು ಮಾಡಿದ್ದೀನಿ. ಮುಂದಿನ ನಾಲ್ಕೈದು ತಿಂಗಳು ನನಗೆ ತಲೆ ಎತ್ತೋಕೂ ಪುರುಸೊತ್ತಿರಲ್ಲ”
“ಕೇಸ್ಗಳು ಯಾವತ್ತೂ ಮುಗಿಯಲ್ಲ ಆರ್ಯನ್, ನಾನೂ ಕೋರ್ಟ್ನಲ್ಲಿ ನೂರಾರು ಕ್ರಿಮಿನಲ್ ಕೇಸ್ಗಳನ್ನು ನೋಡ್ತೀನಿ. ಆದರೆ ಪರ್ಸನಲ್ ಲೈಫ್ ಬೇರೆ, ಪ್ರೊಫೆಷನಲ್ ಲೈಫ್ ಬೇರೆ. ಅಮ್ಮನ ಕಡೆಯ ದೂರದ ಸಂಬಂಧಿ, ಮೈಸೂರಿನ ಪ್ರಭಾಕರ್ ರಾವ್ ಅವರ ಮಗಳು ಅನನ್ಯ. ಸಾಫ್ಟ್ವೇರ್ ಇಂಜಿನಿಯರ್. ಸಂಸ್ಕಾರವಂತೆ, ಒಳ್ಳೆ ಕುಟುಂಬ. ಅವರ ಮನೆಯವರಿಗೆ ನಿನ್ನ ಪ್ರೊಫೈಲ್ ತುಂಬಾ ಇಷ್ಟವಾಗಿದೆ. ನಾಳೆ ಸಂಜೆ ಅವರು ನಮ್ಮ ಮನೆಗೆ ಬರ್ತಿದ್ದಾರೆ.” ಅಣ್ಣ ವಿಕ್ರಮ್ ಹೇಳಿದ.
ಆರ್ಯನ್ಗೆ ಕೋಪ ಏರತೊಡಗಿತು. ಆದರೆ ತಂದೆಯ ಎದುರು ಮಾತನಾಡುವಂತಿರಲಿಲ್ಲ.
“ನನ್ನನ್ನು ಕೇಳದೆ ಯಾಕೆ ಅವರಿಗೆ ಮನೆಗೆ ಬರೋಕೆ ಹೇಳಿದ್ರಿ? ನನಗೆ ಈಗಲೇ ಮದುವೆಯಾಗೋ ಯಾವ ಆಲೋಚನೆಯೂ ಇಲ್ಲ ಅಂತ ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದೆ ಅಲ್ವಾ?” ಆರ್ಯನ್ ತಂದೆಯ ಕಡೆ ತಿರುಗಿ ಕೇಳಿದ.
ದೇವರಾಜ್ ಅವರ ಮುಖ ಗಂಟಿಕ್ಕಿತು. “ನಾನು ಮೂವತ್ತೈದು ವರ್ಷ ಇಲಾಖೆಯಲ್ಲಿ ಕೆಲಸ ಮಾಡಿ ರಿಟೈರ್ಡ್ ಆದವನು ಆರ್ಯನ್. ಈ ಡಿಪಾರ್ಟ್ಮೆಂಟ್ನ ಕಷ್ಟ-ಸುಖ, ಅಪಾಯಗಳೆಲ್ಲಾ ನನಗೆ ಚೆನ್ನಾಗಿ ಗೊತ್ತು. ನೀನು ಬೆಳಗ್ಗೆ ಹೋದರೆ ರಾತ್ರಿ ಜೀವಂತವಾಗಿ ಮನೆಗೆ ಬರ್ತೀಯಾ ಅನ್ನೋ ಗ್ಯಾರಂಟಿ ಇಲ್ಲದ ವೃತ್ತಿ ಇದು. ಅಂಥದ್ರಲ್ಲಿ ನಿನ್ನ ಬದುಕಿಗೆ ಒಂದು ನೆಮ್ಮದಿ, ಒಂದು ಶಾಂತಿ ಬೇಕು ಅಂದರೆ ಮನೆಯನ್ನು ಸಂಭಾಳಿಸೋ ಒಂದು ಒಳ್ಳೆಯ ಗೃಹಿಣಿ ನಿನ್ನ ಜೊತೆಗಿರಬೇಕು. ಆ ಹುಡುಗಿ ನಮ್ಮ ಮನೆಗೆ, ನಿನ್ನ ಕೆಲಸದ ಒತ್ತಡಕ್ಕೆ ಸರಿಯಾಗಿ ಹೊಂದ್ಕೋತಾಳೆ ಅನ್ನೋದು ನನ್ನ ನಂಬಿಕೆ.”
ಆರ್ಯನ್ ಎದ್ದು ನಿಂತ. ಅವನ ಎದೆಯೊಳಗೆ ಅಕ್ಷರಾಳ ಮುಖ ಮಿಂಚಿ ಮಾಯವಾಯಿತು. ಅಕ್ಷರಾ ಕೂಡ ಇದೇ ಇಲಾಖೆಯ ಭಾಗ. ಅವಳೂ ದಿನವಿಡೀ ಅಪರಾಧ ಸ್ಥಳಗಳಲ್ಲಿ ಸಾಕ್ಷ್ಯಗಳ ನಡುವೆಯೇ ಬದುಕುವವಳು. ಅಪ್ಪನ ಈ ‘ಶಾಂತಿಯುತ ಗೃಹಿಣಿ’ಯ ವ್ಯಾಖ್ಯಾನದಲ್ಲಿ ಅಕ್ಷರಾ ಯಾವತ್ತೂ ಕೂರಲು ಸಾಧ್ಯವಿಲ್ಲವೇ? ಈ ಕಹಿ ವಾಸ್ತವ ಅವನನ್ನು ಚುಚ್ಚಿತು.
“ನೋಡಿ ಅಪ್ಪ, ಅವರು ನಾಳೆ ಬರೋದಾದರೆ ಬರ್ಲಿ, ಅತಿಥಿಗಳ ತರ ಬಂದು ಕಾಫಿ ಕುಡಿದು ಹೋಗ್ಲಿ. ಆದರೆ ನನ್ನ ಕಡೆಯಿಂದ ಮದುವೆಗೆ ಯಾವುದೇ ಕಮಿಟ್ಮೆಂಟ್ ಇರಲ್ಲ. ನನಗೆ ಈಗ ಕೇವಲ ಈ ಕೇಸ್ ಮುಖ್ಯ. ದಯವಿಟ್ಟು ನನ್ನ ಮೇಲೆ ಒತ್ತಡ ಹಾಕಬೇಡಿ.”
“ಆರ್ಯನ್!” ದೇವರಾಜ್ ಧ್ವನಿ ಏರಿಸಿದರು.
“ಸಾಕು ಬಿಡಿ, ರಾತ್ರಿ ಹೊತ್ತು ಹುಡುಗ ಸುಸ್ತಾಗಿ ಬಂದಿದ್ದಾನೆ. ಊಟ ಮಾಡೋಣ ಬಾ ಆರ್ಯನ್,” ಲಲಿತಾ ಪರಿಸ್ಥಿತಿ ತಿಳಿಗೊಳಿಸಲು ಮಧ್ಯಪ್ರವೇಶಿಸಿದರು.
“ಬೇಡ ಅಮ್ಮಾ, ಹಸಿವಿಲ್ಲ. ಸುಸ್ತಾಗಿದೆ, ಮಲಗ್ತೀನಿ,” ಎಂದು ಹೇಳಿದ ಆರ್ಯನ್ ಯಾರಿಗೂ ಕಾಯದೆ ಮೆಟ್ಟಿಲುಗಳನ್ನು ಹತ್ತಿ ತನ್ನ ಕೋಣೆಯತ್ತ ಹೊರಟುಹೋದ.
ಕೋಣೆಯೊಳಗೆ ಬಂದು ಬಾಗಿಲು ಹಾಕಿ, ಫ್ರೆಶ್ ಆಗಿ ಟಿ ಶರ್ಟ್ ಟ್ರಾಕ್ ಪ್ಯಾಂಟ್ ಹಾಕಿ ಬಂದು ಬೆಡ್ ಮೇಲೆ ಬಿದ್ದಾಗ ಅವನ ತಲೆ ಸಿಡಿಯುವಂತಿತ್ತು. ತಲೆಯ ಒಂದು ಮೂಲೆಯಲ್ಲಿ ಆ ಕೇಸ್ನ ಕ್ರೌರ್ಯ, ಇನ್ನೊಂದು ಕಡೆ ಮನೆಯವರ ಈ ಅನಿರೀಕ್ಷಿತ ಒತ್ತಡ.
ಅಷ್ಟರಲ್ಲಿ ಅವನ ಮೊಬೈಲ್ ಮೆಲ್ಲನೆ ವೈಬ್ರೇಟ್ ಆಯಿತು. ಸ್ಕ್ರೀನ್ ಮೇಲೆ ‘ಅಕ್ಷು’ ಎಂದು ಬೆಳಗುತ್ತಿತ್ತು.
ಆರ್ಯನ್ ನಿಟ್ಟುಸಿರೊಂದನ್ನು ಹೊರಹಾಕಿ, ಕಾಲ್ ರಿಸೀವ್ ಮಾಡಿ ಕಿವಿಗೆ ಇಟ್ಟುಕೊಂಡ.
“ಮನೆ ಮುಟ್ಟಿದ್ಯಾ ಆರ್ಯನ್?” ಆ ಕಡೆಯಿಂದ ಅಕ್ಷರಾಳ ಮೃದುವಾದ, ದಣಿವು ತುಂಬಿದ ಧ್ವನಿ ಕೇಳಿಸಿತು.
“ಹೂಂ… ಈಗಷ್ಟೇ ಬಂದೆ,” ಮೆಲ್ಲಗೆ ಹೇಳಿದ.
ಅವನ ಧ್ವನಿಯಲ್ಲಿದ್ದ ಆ ಸಣ್ಣ ವ್ಯತ್ಯಾಸವನ್ನೂ ಅಕ್ಷರಾ ತಕ್ಷಣವೇ ಹಿಡಿದುಬಿಟ್ಟಳು. “ಏನಾಯ್ತು? ಧ್ವನಿ ಯಾಕೋ ಡಲ್ ಆಗಿದೆ? ಮನೆಯಲ್ಲಿ ಅಪ್ಪ ಏನಾದರೂ ಅಂದ್ರಾ?”
ಆರ್ಯನ್ ಕಣ್ಣು ಮುಚ್ಚಿ ಬೆಡ್ ಹೆಡ್ರೆಸ್ಟ್ಗೆ ತಲೆ ಒರಗಿಸಿದ. ಮನೆಯ ವಿಷಯ ಹೇಳಿ ಅವಳನ್ನೂ ಕಂಗಾಲು ಮಾಡಲು ಅವನಿಗೆ ಮನಸಿರಲಿಲ್ಲ. “ಏನಿಲ್ಲ ಕಣೇ… ಕೇಸ್ನ ಟೆನ್ಶನ್ ಅಷ್ಟೇ. ಆ ಮಗುವಿನ ಮುಖ ಕಣ್ಣ ಮುಂದಿಂದ ಹೋಗ್ತಿಲ್ಲ. ಜೊತೆಗೆ ಸುಸ್ತು.”
“ಊಟ ಮಾಡಿದ್ಯಾ?” ಕಾಳಜಿಯಿಂದ ಕೇಳಿದಳು.
“ಇಲ್ಲ, ಹಸಿವಿಲ್ಲ.”
“ಆರ್ಯನ್! ಇನ್ವೆಸ್ಟಿಗೇಷನ್ ಮುಗಿಯೋವರೆಗೂ ನಾವಿಬ್ಬರೂ ಆಫೀಸರ್ಸ್ ಅಷ್ಟೇ ಅಂದವರು ಯಾರು? ನಂಗೆ ಪ್ರೊಫೆಷನಲಿಸಂ ಹೇಳಿಕೊಟ್ಟು ನೀನು ಊಟ ಬಿಟ್ರೆ ಹೇಗೆ? ಹೋಗಿ ಊಟ ಮಾಡು ಮೊದಲು.” ಗದರಿಸಿದಳು ಅಕ್ಷರ.
ಅವಳ ಆ ಮುದ್ದಾದ ಗದರಿಕೆಗೆ ಆರ್ಯನ್ನ ತುಟಿಯಂಚಲ್ಲಿ ಸಣ್ಣದೊಂದು ನಗು ಅರಳಿತು. “ಆಫೀಸ್ ಮುಗಿದು ಎಷ್ಟು ಹೊತ್ತಾಯ್ತು ಮೇಡಂ? ಈಗ ನೀನು ನನ್ನ ಮುಂದೆ ಇಲ್ಲ, ಆದ್ರೂ ಹಿಂಗೆ ಆಜ್ಞೆ ಮಾಡ್ತೀಯಾ?”
“ಹಾಗಾದ್ರೆ ನಿನ್ನ ಎದುರಿಗೆ ಬಂದು ನಿಲ್ಲಬೇಕಾ ಇನ್ಸ್ಪೆಕ್ಟರ್ ಸಾಹೇಬ್ರೇ? ಅಲ್ಲಿ ಅಷ್ಟೆಲ್ಲಾ ಹಠ ಮಾಡಿ ಮುತ್ತಿಟ್ಟ ಆ ಮುಂಗೋಪಿ ಹುಲಿ ಈಗ ಫೋನ್ನಲ್ಲಿ ಯಾಕೋ ತುಂಬಾ ಸುಸ್ತಾಗಿರೋ ಹಾಗಿದೆ.” ಅವಳು ತುಂಟತನದಿಂದ ಪಿಸುಗುಟ್ಟಿದಳು.
ಆ ಮಾತಿಗೆ ಆರ್ಯನ್ನ ಎದೆಯೊಳಗಿದ್ದ ಇಡೀ ದಿನದ ಭಾರವೆಲ್ಲಾ ಒಂದೇ ಕ್ಷಣದಲ್ಲಿ ಕರಗಿಹೋದಂತಾಯಿತು.
“ಎದುರಿಗೆ ಬಂದರೆ ಸುಮ್ಮನೆ ಬಿಡ್ತೀನಾ ನಿನ್ನನ್ನ? ಚಿಕ್ಕಮಗಳೂರಿನಲ್ಲಿ ನಮ್ಮ ಮಧ್ಯೆ ಆ ಫೋನ್ ಕಾಲ್ ಬರದೇ ಇದ್ದಿದ್ದರೆ ಈ ಹೊತ್ತಿಗೆ ನೀನು ನನ್ನ ತೋಳಲ್ಲೇ ಇರ್ತಿದ್ದೆ.”
ಅಕ್ಷರಾ ಆ ಕಡೆ ನಾಚಿ ನಕ್ಕಿದ್ದು ಕೇಳಿಸಿತು. “ಹೌದಾ… ಅಷ್ಟು ಕಾನ್ಫಿಡೆನ್ಸಾ?”
“ಡೌಟಾ ನಿನಗೆ? ಈಗಲೂ ನಿನ್ನ ಆ ಮೈ ಗಂಧ, ನಿನ್ನ ತುಟಿಯ ರುಚಿ ನನ್ನ ನೆನಪಲ್ಲೇ ಇದೆ ಅಕ್ಷು… ನಿನ್ನನ್ನ ಹಿಡಿದು ಎದೆಗೆ ಅದುಮಿಕೋಬೇಕು ಅನ್ನಿಸ್ತಿದೆ. ಎಷ್ಟೋ ದಿನದಿಂದ ಕಾಯ್ತಿದ್ದೆ, ಆ ಕಬೀರ್ ಸರ್ ಕಾಲ್ ಬಂದು ಎಲ್ಲ ಹಾಳುಮಾಡ್ತು”
ಅಕ್ಷರಾ ಮೌನವಾದಳು. ಅವಳ ಉಸಿರಾಟದ ಸಣ್ಣ ಸದ್ದು ಅವನ ಕಿವಿಗೆ ತಾಗಿತು. “ನನಗೂ ನಿನ್ನ ಜೊತೆ ಇರಬೇಕು ಅನ್ನಿಸ್ತಿದೆ ಆರ್ಯನ್… ಆದ್ರೆ ಈ ಕೇಸ್ ಮುಗಿಯೋವರೆಗೂ ನಮಗೆ ಆ ನೆಮ್ಮದಿ ಸಿಗಲ್ಲ ಅನ್ಸುತ್ತೆ.”
“ಸಿಗುತ್ತೆ. ಆ ರಾಕ್ಷಸರನ್ನ ಮಟ್ಟಹಾಕಿ, ಮತ್ತೆ ನಿನ್ನನ್ನ ಅದೇ ಬೆಟ್ಟದ ತುದಿಗೆ ಕರ್ಕೊಂಡು ಹೋಗ್ತೀನಿ. ಅವತ್ತು ಯಾವ ಫೋನ್ ಕೂಡ ನಮ್ಮ ಮಧ್ಯೆ ಬರಲ್ಲ.”
“ಸರಿ, ಸದ್ಯಕ್ಕೆ ಈ ಇನ್ವೆಸ್ಟಿಗೇಷನ್ ಟೆನ್ಶನ್ ಸಾಕು. ನಿದ್ರೆ ಮಾಡು. ಬೆಳಗ್ಗೆ ಕಮಿಷನರ್ ಮೀಟಿಂಗ್ ಇದೆ,” ಅವಳು ಸಮಾಧಾನದಿಂದ ಹೇಳಿದಳು.
“ಅಷ್ಟು ಬೇಗ ನಿದ್ರೆ ಬರಲ್ಲ ಅಕ್ಷು… ಒಂದು ಮುತ್ತು ಕೊಡದೆ ಫೋನ್ ಇಡೋಕೆ ಬಿಡಲ್ಲ ನಾನು”
“ಛೇ… ಫೋನ್ನಲ್ಲಾ? ಹುಚ್ಚ ನೀನು,” ಅವಳು ನಾಚುತ್ತಲೇ ಗೊಣಗಿದಳು.
“ಕೊಡು ಅಕ್ಷು… ದಿನವಿಡೀ ಈ ತಲೆಬಿಸಿ ತಡ್ಕೊಂಡು ಸಾಯ್ತಿದ್ದೀನಿ. ಒಂದು ಕ್ಯೂಟ್ ಮುತ್ತು ಕೊಟ್ರೆ ನಂಗೆ ನಿದ್ರೆ ಬರುತ್ತೆ,” ಆರ್ಯನ್ ಪಟ್ಟುಬಿಡಲಿಲ್ಲ.
ಅಕ್ಷರಾ ಫೋನ್ ಹತ್ತಿರ ತಂದು, ಸಣ್ಣದಾಗಿ ಮುತ್ತಿಟ್ಟ ಶಬ್ದ ಮಾಡಿದಳು. “ಆಯ್ತಾ ಸಮಾಧಾನ ಸಾಹೇಬ್ರಿಗೆ? ಈಗಲಾದರೂ ಮಲಗ್ತೀರಾ?”
ಆರ್ಯನ್ ಕಣ್ಣುಗಳು ಅರಳಿದವು. ತಾನೂ ಫೋನ್ಗೆ ಪ್ರತಿಯಾಗಿ ಒಂದು ಮುತ್ತಿಟ್ಟು, “ಥ್ಯಾಂಕ್ ಯು ನನ್ನವಳೇ… ಗುಡ್ ನೈಟ್. ನಾಳೆ ಒಂಬತ್ತಕ್ಕೆ ಕಮಿಷನರೇಟ್ನಲ್ಲಿ ಸಿಗೋಣ,” ಎಂದ.
“ಗುಡ್ ನೈಟ್ ಆರ್ಯನ್, ಟೇಕ್ ಕೇರ್,” ಎಂದು ಅಕ್ಷರಾ ಕರೆ ತುಂಡರಿಸಿದಳು.
ಫೋನ್ ಅಲ್ಲಿ ಒಮ್ಮೆ ಅವಳ ಫೋಟೋ ನೋಡಿ, ಫೋನ್ ಪಕ್ಕಕ್ಕೆ ಇಟ್ಟ ಆರ್ಯನ್ ನಿರಾಳವಾಗಿ ಕಣ್ಣು ಮುಚ್ಚಿದ. ಅವಳ ಆ ಪುಟ್ಟ ಪ್ರೀತಿಯ ಕಾಳಜಿಯ ಮಾತುಗಳು ಅವನಿಗೆ ಬೆಟ್ಟದಷ್ಟು ಧೈರ್ಯ ತಂದಿದ್ದವು.
ಆದರೆ ಆ ಸಂಜೆ ತನ್ನ ಮನೆಯಲ್ಲಿ ಅವನನ್ನು ನೋಡಲು ಮತ್ತೊಬ್ಬ ಹುಡುಗಿ ಬರುತ್ತಿದ್ದಾಳೆ ಎಂಬ ಕಹಿ ಸತ್ಯ ಅವನ ಮನಸ್ಸಿನ ಒಂದು ಮೂಲೆಯಲ್ಲಿ ಚುರುಕ್ ಎನ್ನುತ್ತಲೇ ಇತ್ತು.
ಮರುದಿನ ಬೆಳಗ್ಗೆ ಒಂಭತ್ತು ಗಂಟೆಗೆ, ಬೆಂಗಳೂರು ಸಿಟಿ ಪೊಲೀಸ್ ಕಮಿಷನರೇಟ್ನ ಕಾನ್ಫರೆನ್ಸ್ ಹಾಲ್ ಸಂಪೂರ್ಣ ಗಂಭೀರವಾಗಿತ್ತು.
———————————❤️———————————
ಕಮಿಷನರ್ ರಾಘವನ್ ಐಪಿಎಸ್ ಟೇಬಲ್ನ ಮುಖ್ಯಸ್ಥಾನದಲ್ಲಿ ಕುಳಿತಿದ್ದರು. ಅವರ ಪಕ್ಕದಲ್ಲಿ ಡಿಎಸ್ಪಿ ಕಬೀರ್, ಆರ್ಯನ್, ಸಬ್-ಇನ್ಸ್ಪೆಕ್ಟರ್ ರುದ್ರ ಮತ್ತು ಫೋರೆನ್ಸಿಕ್ ವಿಭಾಗದಿಂದ ಅಕ್ಷರಾ ಹಾಗೂ ಡಾ. ಸಾನ್ವಿ ಕುಳಿತಿದ್ದರು.
ಕಮಿಷನರ್ ರಾಘವನ್ ತಮ್ಮ ಕೈಯಲ್ಲಿದ್ದ ಪ್ರಾಥಮಿಕ ಇನ್ಕ್ವೆಸ್ಟ್ ವರದಿಯನ್ನು ಕೆಳಗಿಟ್ಟರು.
“ಆರ್ಯನ್, ಮೀಡಿಯಾಗೆ ಈ ನ್ಯೂಸ್ ಇನ್ನು ಲೀಕ್ ಆಗಿಲ್ಲ. ಆದರೆ ಹೆಚ್ಚು ಹೊತ್ತು ಮುಚ್ಚಿಡೋಕೆ ಆಗಲ್ಲ. ನೈಸ್ ರೋಡ್ ಜಂಕ್ಷನ್ನಲ್ಲಿ ಸಿಕ್ಕ ಆ ಮಗು ಯಾರು ಅನ್ನೋದು ಮೊದಲು ಪತ್ತೆಯಾಗಬೇಕು. ಅಕ್ಷರಾ, ಶವಪರೀಕ್ಷೆಯ ನಂತರ ನಿಮ್ಮ ಫೋರೆನ್ಸಿಕ್ ಅಬ್ಸರ್ವೇಷನ್ ಏನು?” ಕಮಿಷನರ್ ನೇರವಾಗಿ ಅಕ್ಷರಾಳತ್ತ ನೋಡಿದರು.
ಅಕ್ಷರಾ ಎದ್ದು ನಿಂತು ತನ್ನ ಲ್ಯಾಪ್ಟಾಪ್ ಅನ್ನು ಪ್ರೊಜೆಕ್ಟರ್ಗೆ ಕನೆಕ್ಟ್ ಮಾಡಿದಳು. ಸ್ಕ್ರೀನ್ ಮೇಲೆ ಮೃತದೇಹದ ಹೈ-ರೆಸಲ್ಯೂಷನ್ ಫೋಟೋಗಳು ಮೂಡಿದವು. ಅವಳು ಆರ್ಯನ್ ಕಡೆ ಒಮ್ಮೆ ದೃಷ್ಟಿ ಹಾಯಿಸಿದಳು.
ನಂತರ ಕಮಿಷನರ್ ನೋಡಿ,
“ಸರ್, ಮಗುವಿನ ಎಡ ಕಿಡ್ನಿಯನ್ನು ಅತ್ಯಂತ ನುರಿತ ಸರ್ಜಿಕಲ್ ವಿಧಾನದಿಂದ ಹೊರತೆಗೆಯಲಾಗಿದೆ. ರಕ್ತನಾಳಗಳನ್ನು ಕ್ಲಾಂಪ್ ಮಾಡಿ ಕಟ್ ಮಾಡಿರೋ ರೀತಿ ನೋಡಿದರೆ, ಇದು ಯಾವುದೇ ಸಾಮಾನ್ಯ ಕ್ಲಿನಿಕ್ನಲ್ಲಿ ನಡೆದ ಹಾಗಿಲ್ಲ. ಇದಕ್ಕೆ ಸುಸಜ್ಜಿತವಾದ ಆಪರೇಷನ್ ಥಿಯೇಟರ್ ಬೇಕು. ಆದರೆ ಅದಕ್ಕಿಂದ ಮುಖ್ಯವಾದ ವಿಷಯ ಅಂದರೆ, ಮಗುವಿನ ಬಲಗೈ ಮಣಿಕಟ್ಟಿನ ಮೇಲೆ ಹಳೆಯ ತ್ರಿಕೋನಾಕಾರದ ಸುಟ್ಟ ಗಾಯವಿದೆ. ಇದು ಆಕ್ಸಿಡೆಂಟಲ್ ಬರ್ನ್ ಮಾರ್ಕ್ ಅಲ್ಲ. ಇದು ಉದ್ದೇಶಪೂರ್ವಕವಾಗಿ ಹಾಕಿದ ಗುರುತಾಗಿರಬಹುದೆಂಬ ಅನುಮಾನವಿದೆ.”
ಕಾನ್ಫರೆನ್ಸ್ ಹಾಲ್ನಲ್ಲಿದ್ದ ಎಲ್ಲರೂ ಸ್ಕ್ರೀನ್ ಕಡೆಗೆ ಕುತೂಹಲದಿಂದ ನೋಡಿದರು.
ಆರ್ಯನ್ ಹುಬ್ಬು ಗಂಟಿಕ್ಕಿ ಮುಂದೆ ಬಾಗಿದ. “ಬ್ರಾಂಡಿಂಗ್ ಮಾರ್ಕ್ ಅಂದರೆ… ಜೀತದಾಳುಗಳಿಗೆ ಅಥವಾ ಯಾವುದೋ ಗುಂಪಿನ ಗುರುತಿಗಾಗಿ ಮುದ್ರೆ ಹಾಕ್ತಾರಲ್ಲ ಹಾಗಾ ಅಕ್ಷರಾ?”
“ಖಂಡಿತ ಆರ್ಯನ್ ಸರ್. ಅಷ್ಟೇ ಅಲ್ಲ, ಮಗುವಿನ ರಕ್ತದ ಮಾದರಿಯಲ್ಲಿ ಪ್ರಾಥಮಿಕ ಪರೀಕ್ಷೆಯ ವೇಳೆ ‘ಪ್ರೊಪೋಫಾಲ್’ ಇರುವಿಕೆಯ ಸುಳಿವು ಸಿಕ್ಕಿದೆ. ಅಂತಿಮ ಟಾಕ್ಸಿಕಾಲಜಿ ವರದಿ ಇನ್ನೂ ಬರಬೇಕಿದೆ. ಈ ಔಷಧಿ ಸಾಮಾನ್ಯ ಮೆಡಿಕಲ್ ಶಾಪ್ಗಳಲ್ಲಿ ಸಿಗುವಂಥದ್ದಲ್ಲ. ಇದರ ಖರೀದಿ ಮತ್ತು ಪೂರೈಕೆ ವೈದ್ಯಕೀಯ ಸಂಸ್ಥೆಗಳ ಮೂಲಕ ನಿಯಂತ್ರಿತವಾಗಿರುತ್ತದೆ.”
“ಅಂದರೆ ಇದರ ಹಿಂದೆ ಯಾವುದೋ ದೊಡ್ಡ ಮೆಡಿಕಲ್ ನೆಟ್ವರ್ಕ್ ಇದೆ! ಕಬೀರ್, ಈ ಕ್ಷಣದಿಂದ ಈ ಕೇಸ್ಗೆ ‘ಆಪರೇಷನ್ ನೆರಳು’ ಅಂತ ಕೋಡ್ ನೇಮ್ ಕೊಡ್ತಿದ್ದೇನೆ. ಆರ್ಯನ್ ಈ ತನಿಖೆಯನ್ನು ಲೀಡ್ ಮಾಡ್ತಾನೆ. ಅಕ್ಷರಾ, ಈ ಬ್ರಾಂಡಿಂಗ್ ಮಾರ್ಕ್ ಮತ್ತು ಮೆಡಿಕಲ್ ಸ್ಯಾಂಪಲ್ಸ್ ಬಗ್ಗೆ ಇನ್ನಷ್ಟು ಆಳವಾದ ತನಿಖೆ ನಡೀಬೇಕು.” ಕಮಿಷನರ್ ಹೇಳಿದರು.
“ಎಸ್ ಸರ್,” ಆರ್ಯನ್ ಮತ್ತು ಅಕ್ಷರಾ ಇಬ್ಬರೂ ಒಟ್ಟಿಗೆ ಎದ್ದು ನಿಂತರು.
ಮೀಟಿಂಗ್ ಮುಗಿದು ಎಲ್ಲರೂ ಹೊರಬರುತ್ತಿದ್ದಾಗ, ಆರ್ಯನ್ ಕಾರಿಡಾರ್ನಲ್ಲಿ ವೇಗವಾಗಿ ಹೆಜ್ಜೆ ಹಾಕುತ್ತಿದ್ದ ಅಕ್ಷರಾಳ ಹತ್ತಿರ ಬಂದ. ಸುತ್ತಲೂ ಇಲಾಖೆಯ ಸಿಬ್ಬಂದಿ ಓಡಾಡುತ್ತಿದ್ದರು.
ಆರ್ಯನ್ ಅವಳ ಪಕ್ಕದಲ್ಲೇ ಹೆಜ್ಜೆ ಹಾಕುತ್ತಾ, “ಬ್ರಾಂಡಿಂಗ್ ಮಾರ್ಕ್ ಅಬ್ಸರ್ವೇಷನ್ ತುಂಬಾ ಶಾರ್ಪ್ ಆಗಿತ್ತು ಮಿಸ್ ಅಕ್ಷರಾ. ಹಾಗೆ ರಾತ್ರಿ ಮುತ್ತು ಕೊಟ್ಟಿದ್ದಕ್ಕೆ ಥ್ಯಾಂಕ್ಸ್,” ಎಂದು ಪಿಸುಗುಟ್ಟಿದ.
ಅಕ್ಷರಾ ಅವನ ಕಡೆ ನೋಡದೆ ಫೈಲ್ ಸರಿಮಾಡಿಕೊಳ್ಳುತ್ತಾ, “ಇಲ್ಲಿ ಡಿಪಾರ್ಟ್ಮೆಂಟ್ ಇದೆ ಸರ್, ಹುಷಾರಾಗಿರಿ,” ಎಂದು ಎಚ್ಚರಿಸಿದಳು.
ಆದರೆ ಆರ್ಯನ್ ಸುಮ್ಮನಾಗಲಿಲ್ಲ. ಕಾರಿಡಾರ್ನ ಕೊನೆಯಲ್ಲಿ ದಾಖಲೆಗಳ ಹಳೆಯ ಕಪಾಟುಗಳಿದ್ದ ಒಂದು ಖಾಲಿ ಮೂಲೆ ಸಿಗುತ್ತಿದ್ದಂತೆ, ಯಾರೂ ಗಮನಿಸದ ಆ ಒಂದು ಕ್ಷಣದಲ್ಲಿ ಅವಳ ಕೈಯನ್ನು ಮೆಲ್ಲನೆ ಹಿಡಿದು ಪಕ್ಕಕ್ಕೆ ಎಳೆದುಕೊಂಡ. ಅವಳನ್ನು ಗೋಡೆಗೆ ಆನಿಸಿ, ಯಾರ ಕಣ್ಣಿಗೂ ಬೀಳದಂತೆ ತಾನು ಅವಳ ಮುಂದೆ ಅಡ್ಡವಾಗಿ ನಿಂತುಕೊಂಡ.
“ಆರ್ಯನ್! ಹುಚ್ಚಾ ನೀನು… ಬಿಡು, ಯಾರಾದ್ರೂ ಬರ್ತಾರೆ,” ಅಕ್ಷರಾ ಗಾಬರಿಯಿಂದ ಸುತ್ತಲೂ ನೋಡುತ್ತಾ ಅವನ ಎದೆಗೆ ಕೈಯಿಟ್ಟು ತಳ್ಳಲು ನೋಡಿದಳು.
ಆರ್ಯನ್ ಕದಲಲಿಲ್ಲ. ಮುಖದಲ್ಲಿ ಅದೇ ಹಠದ, ತುಂಟ ನಗು.
“ಫೋನ್ನಲ್ಲಿ ಕೊಟ್ಟ ಮುತ್ತು ಫೋನ್ಗೆ ಮಾತ್ರ ಸೇರುತ್ತೆ ಅಕ್ಷು. ನನಗೆ ನಿಜವಾಗ್ಲೂ ಬೇಕು… ಇಲ್ಲೇ, ಈ ಕ್ಷಣದಲ್ಲೇ,” ಪಿಸುಗುಟ್ಟಿದ.
“ಡ್ಯೂಟಿ ಟೈಮ್ ಇದು ಇನ್ಸ್ಪೆಕ್ಟರ್ ಸಾಹೇಬ್ರೇ! ಕಮಿಷನರ್ ಮೀಟಿಂಗ್ ಮುಗಿಸಿ ಈಗಷ್ಟೇ ಹೊರಗೆ ಬಂದಿದ್ದೀವಿ, ಸ್ವಲ್ಪನಾದ್ರೂ ಜವಾಬ್ದಾರಿ ಬೇಡ್ವಾ ನಿಮಗೆ? ನಾನು ಕೊಡಲ್ಲ, ದಾರಿ ಬಿಡು,” ಎಂದು ನಾಚಿಕೆಯನ್ನು ಮರೆ ಮಾಚಲು ಪ್ರಯತ್ನಿಸಿದಳು.
“ಓಹೋ… ಹಾಗಾದ್ರೆ ನಾನು ಇಲ್ಲಿಂದ ಕದಲಲ್ಲ. ಯಾರಾದ್ರೂ ಬರಲಿ, ನಾವಿಬ್ಬರೂ ಹಿಂಗೆ ನಿಂತಿರೋದನ್ನ ನೋಡಲಿ. ಅವ್ರಿಗೆ ಬೇಕಾದ್ರೆ ನಾನು ಇನ್ಸ್ಪೆಕ್ಟರ್, ನನಗೆ ನೀನು ನನ್ನವಳು ಅಷ್ಟೇ. ಕೊಟ್ರೆ ಬಿಡ್ತೀನಿ, ಇಲ್ಲಾಂದ್ರೆ ಇಲ್ಲೇ ಇರ್ತೀನಿ,” ಆರ್ಯನ್ ಅವಳನ್ನೇ ದಿಟ್ಟಿಸಿ, ಒಂದು ಇಂಚೂ ಹಿಂದೆ ಸರಿಯದೆ ಹಠ ಹಿಡಿದು ನಿಂತ.
ಅವನ ಹಠ ಅವಳಿಗೆ ಚೆನ್ನಾಗಿ ಗೊತ್ತು. ಅವನು ಹೇಳಿದ ಹಾಗೆ ಮಾಡದೆ ಹೋದರೆ ನಿಜವಾಗಿಯೂ ಅಲ್ಲೇ ನಿಂತು ರಾದ್ಧಾಂತ ಮಾಡಿದರೂ ಆಶ್ಚರ್ಯವಿಲ್ಲ. ಅತ್ತಿಂದಿತ್ತ ಕಾನ್ಸ್ಟೆಬಲ್ಗಳು ಓಡಾಡುವ ಬೂಟುಗಳ ಸದ್ದು ಹತ್ತಿರವಾಗುತ್ತಿದ್ದಂತೆ ಅಕ್ಷರಾಳ ಎದೆಬಡಿತ ಜೋರಾಯಿತು.
ಬೇರೆ ದಾರಿ ಕಾಣದೆ, “ನೀನು ಬದಲಾಗಲ್ಲ ಆರ್ಯನ್…” ಎಂದು ಗೊಣಗುತ್ತಲೇ, ಕಾಲ್ಬೆರಳ ಮೇಲೆ ತುಸು ಮೇಲೆದ್ದು ಅವನ ತುಟಿಯ ಮೇಲೆ ಒಂದು ಮುತ್ತಿಟ್ಟಳು.
ಮರುಕ್ಷಣವೇ ಅವನನ್ನು ಹಿಂದಕ್ಕೆ ತಳ್ಳಿ, “ಈಗ ಬಿಡು, ನಾನು ಲ್ಯಾಬ್ಗೆ ಹೋಗ್ಬೇಕು!” ಎಂದು ಕೆನ್ನೆ ಕೆಂಪಾಗಿಸಿಕೊಂಡು ಅಲ್ಲಿಂದ ಜಾರಿಕೊಂಡಳು.
ಆರ್ಯನ್ ತನ್ನ ತುಟಿಯನ್ನು ಸವರಿಕೊಳ್ಳುತ್ತಾ, ಅವಳು ನಾಚಿ ಓಡಿದ್ದನ್ನೇ ನೋಡಿ ನಕ್ಕ. ಮುಖದಲ್ಲಿದ್ದ ತುಂಟತನವನ್ನು ಕ್ಷಣಾರ್ಧದಲ್ಲೇ ಅಳಿಸಿ, ಅಲ್ಲಿಂದ ನಡೆದು, “ರುದ್ರ, ಜಯನಗರದ ಮೆಡಿಕಲ್ ಡಿಸ್ಟ್ರಿಬ್ಯೂಟರ್ಸ್ ಲಿಸ್ಟ್ ತಗೋ,” ಎಂದು ಗಂಭೀರವಾಗಿ ಕೂಗುತ್ತಾ ಮೆಟ್ಟಿಲಿಳಿದ.
(ಮುಂದುವರೆಯುವುದು ❤️)
———————————❤️———————————
ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ
Swipe left/right or tap the sides to turn pages