New Katha Varnika is now on Google Play — read Telugu stories on your phone. Learn more
ಪಯಣಿಗ ❤️ : ಪ್ರೇಮ ಕಾವ್ಯ – 1

ಪಯಣಿಗ ❤️ : ಪ್ರೇಮ ಕಾವ್ಯ – 1

ಪಯಣಿಗ ❤️ : ಪ್ರೇಮ ಕಾವ್ಯ – ೧

ಪ್ರತಿ ಕಥೆಯೂ ಪಾಠ ಕಲಿಸಬೇಕಿಲ್ಲ…

ಕೆಲವು ಕಥೆಗಳು ಕೇವಲ ಫೀಲ್ ಆಗಬೇಕು. ❤️



ಅಕ್ಷರಗಳ ಆಳದಲ್ಲಿ ಅಲೆದಾಡುವ ಪ್ರತಿ ಜೀವವೂ ಒಂದು ರೀತಿಯ ಪಯಣಿಗನೇ. ವಾಸ್ತವದ ಒರಟು ದಾರಿಗಳಿಗಿಂತ, ಶಬ್ದಗಳು ಕಟ್ಟಿಕೊಡುವ ಆ ಕಾಲ್ಪನಿಕ ಲೋಕವೇ ಹೆಚ್ಚು ಆಪ್ತವೆನಿಸಿದಾಗ ಮನಸ್ಸು ಅರಿಯದೆಯೇ ಹಾದಿ ತಪ್ಪುತ್ತದೆ. ಬರಹಗಾರ ಸೃಷ್ಟಿಸುವ ಮಾಯೆಗೂ ನಾವು ಬದುಕುವ ಸತ್ಯಕ್ಕೂ ಇರುವ ವ್ಯತ್ಯಾಸ ತಿಳಿದಿದ್ದರೂ, ಕೆಲವೊಮ್ಮೆ ನಮ್ಮ ಮನಸ್ಸು ಅದನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ.

“Lost in the rhythm of unspoken words“
ಬದುಕಿನ ಸತ್ಯಕ್ಕೂ ಬರಹದ ಮಾಯೆಗೂ ನಡುವೆ ಎಲ್ಲೋ ನಿಂತು ಸಾಗುವ ಒಂದು ಪಯಣವಿದು. ಅರಿಯದ ಅಕ್ಷರಗಳ ಹಿಂದೆ ಯಾವುದೋ ಸುಖವನ್ನು ಹುಡುಕುತ್ತಾ ಹೊರಡುವ ಈ ಮನಸ್ಸು, ವಾಸ್ತವದ ಹತ್ತಿರವಿದ್ದರೂ ಎಲ್ಲೋ ದೂರ ಹೋದಂತೆ ಭಾಸವಾಗುತ್ತಿರುತ್ತದೆ.

ಅದೇ ಪಯಣಿಗ… ಅದೇ ಪಯಣ

ಪಯಣಿಗ ❤️

———————————❤️———————————

ಸಂಜೆಯ ಆ ಮಂದ ಬೆಳಕಿನಲ್ಲಿ ಕಾವ್ಯ ಮತ್ತು ಪ್ರೇಮಾ ಹರಟೆಗೆ ಕುಳಿತಿದ್ದರು. ಕೈಯಲ್ಲಿದ್ದ ಟೀ ಕಪ್‌ನಿಂದ ಬರುವ ಹಬೆಯಂತೆ ಅವರ ಹಳೆಯ ನೆನಪುಗಳು ಕೂಡ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದ್ದವು.

“ಪ್ರೇಮಾ, ನಿನಗೆ ಎಷ್ಟು ಒತ್ತಾಯ ಮಾಡಿದರೂ ನನ್ನ ಮದುವೆಗೆ ಬರಲೇ ಇಲ್ಲ. ಅಂತೂ ಎರಡು ವರ್ಷ ಆದಮೇಲೆ ಈಗ ಬರುತ್ತಾ ಇದ್ದೀಯಾ… ನಿನ್ನನ್ನು ಎಷ್ಟು ಮಿಸ್ ಮಾಡಿಕೊಂಡೆ ಗೊತ್ತಾ?” ಕಾವ್ಯ ಹುಸಿ ಮುನಿಸಿನಿಂದ ಹೇಳಿದ್ದಳು.

“ನನಗೂ ಇಂಡಿಯಾಗೆ ಬರಬೇಕು ಅಂತ ತುಂಬಾ ಆಸೆ ಇತ್ತು ಕಾವ್ಯ. ಆದರೆ ಏನು ಮಾಡುವುದು? ಹಸ್ಬೆಂಡ್ ಕೆಲಸದ ಮೇಲೆ ಅಲ್ಲಿಗೆ ಹೋದ ಮೇಲೆ ನಾನು ಜೊತೆಗೇ ಇರಬೇಕಲ್ವಾ? ನಾನೂ ನಿನ್ನನ್ನು, ನಮ್ಮ ಈ ಹರಟೆಯನ್ನ ತುಂಬಾ ಮಿಸ್ ಮಾಡಿಕೊಂಡೆ ” ಎಂದವಳು, ಮತ್ತೆ 

“ಅದನ್ನ ಬಿಡು… ಈಗ ನೀನು ಹೇಗಿದ್ದೀಯಾ? ನಿನ್ನ ಲೈಫ್ ಹೇಗಿದೆ?” ಕೇಳಿದಳು ಪ್ರೇಮ.

ಮಾತು ಹಾಗೆಯೇ ಮುಂದುವರಿಯಿತು. ಇಬ್ಬರೂ ಕಾಲೇಜಿನ ಆ ಸುಂದರ ದಿನಗಳಿಗೆ ಜಾರಿದ್ದರು. ಡಿಗ್ರಿ ದಿನಗಳ ಆ ತುಂಟಾಟ, ಪರೀಕ್ಷೆಯ ಟೆನ್ಷನ್, ಕಾಲೇಜು ಎಲೆಕ್ಷನ್‌ನಲ್ಲಿ ಮಾಡಿದ್ದ ಗಲಾಟೆಗಳು, ಯಾರು ಯಾರ ಮೇಲೆ ಕ್ರಶ್ ಇಟ್ಟುಕೊಂಡಿದ್ದರು ಎನ್ನುವ ಗುಟ್ಟುಗಳು… ಎಲ್ಲವನ್ನೂ ನೆನಪಿಸಿಕೊಂಡು ಮನಸಾರೆ ನಕ್ಕರು.

ಹೀಗೆ ನಗುತ್ತಿದ್ದ ಪ್ರೇಮಾ ಒಮ್ಮೆಲೇ ಗಂಭೀರವಾಗಿ, 

“ಕಾವ್ಯ, ನಿನಗೆ ಆ ರೈಟರ್ ನೆನಪಿದ್ದಾನಾ? ಪಯಣಿಗ..?” ಎಂದು ಕೇಳಿದಳು.

“ಪಯಣಿಗ… ಹೌದು, ಚೆನ್ನಾಗಿ ನೆನಪಿದೆ. ನಾವಿಬ್ಬರೂ ಅವನ ಬರಹಗಳಿಗಾಗಿ ಎಷ್ಟು ಕಾಯುತ್ತಾ ಇರುತ್ತಾ ಇದ್ವಿ ಅಲ್ವಾ? ನೀನೇ ಅಲ್ವಾ ಅವನ ಬ್ಲಾಗ್ ಬಗ್ಗೆ ಮೊದಲು ಹೇಳಿದ್ದು? ನೀನೇ ನನಗೆ ಅವನನ್ನು ಇಂಟ್ರೊಡ್ಯೂಸ್ ಮಾಡಿಸಿದ್ದು” ಕಾವ್ಯ ಮಂದಹಾಸದಿಂದ ಹೇಳಿದ್ದಳು.

“ಹೌದು! ಕಾವ್ಯ ! ಅವನ ಹೊಸ ಬುಕ್ ಕೂಡ ರಿಲೀಸ್ ಆಗಿದೆ ಗೊತ್ತಾ? ನಾನು ಈ ಸಲ ಇಂಡಿಯಾಗೆ ಬರುವುದಕ್ಕೆ ಕಾಯುತ್ತಾ ಇದ್ದಿದ್ದೇ ಆ ಬುಕ್ ತೆಗೆದುಕೊಳ್ಳುವುದಕ್ಕೆ. ವಾಪಸ್ ಹೋಗುವಾಗ ಖಂಡಿತ ಅದನ್ನ ಪರ್ಚೇಸ್ ಮಾಡಿಕೊಂಡೆ ಹೋಗುತ್ತೀನಿ” 

ಕಾವ್ಯ ಏನೂ ಮಾತನಾಡದೆ ಕೇವಲ ಒಂದು ನಗು ಬೀರಿದಳು.

ಪ್ರೇಮಾ ಮುಂದುವರಿಸಿದಳು, 

“ಆದರೆ ಯಾಕೋ ಗೊತ್ತಿಲ್ಲ, ಇತ್ತೀಚೆಗೆ ಅವನು ಅಷ್ಟೊಂದು ಆಕ್ಟಿವ್ ಆಗಿಲ್ಲ ಅನ್ನಿಸುತ್ತದೆ. ತಿಂಗಳಿಗೆ ಒಂದೆರಡು ಸಲ ಬರೆಯುತ್ತಾನೆ ಅಷ್ಟೇ. ಆದರೆ ಅವನ ಕಥೆಗಳಿಗಿಂತ ಅವನ ಕವಿತೆಗಳಿವೆಯಲ್ಲ… ಅಬ್ಬಾ! ಅದೊಂಥರಾ ಅಡಿಕ್ಷನ್ ಇದ್ದ ಹಾಗೆ. ಅವನ ಹಳೆಯ ಕವಿತೆಗಳನ್ನ ನಾನು ಎಷ್ಟು ಸಲ ಓದಿದ್ದೀನಿ ಅನ್ನುವುದು ನನಗೇ ನೆನಪಿಲ್ಲ.”

“ಹೌದು ಪ್ರೇಮಾ, ಅವನ ಕವಿತೆಗಳಲ್ಲಿರುವ ಆ ರೋಮ್ಯಾಂಟಿಕ್ ಫೀಲ್ ತುಂಬಾನೇ ಡಿಫರೆಂಟ್ ಆಗಿರುತ್ತೆ. ಅದೆಷ್ಟು ನವಿರಾಗಿ ಪ್ರೀತಿಯನ್ನು ಪದಗಳಲ್ಲಿ ಪೋಣಿಸುತ್ತಾನೆ ಅಲ್ವಾ?”

ಪ್ರೇಮಾ ಒಂದು ಕ್ಷಣ ಆ ಲೋಕದಲ್ಲೇ ಮುಳುಗಿಹೋಗಿ ದೀರ್ಘವಾಗಿ ನಿಟ್ಟುಸಿರು ಬಿಟ್ಟಳು. 

“ಅದನ್ನೇ ಯೋಚನೆ ಮಾಡುತ್ತಾ ಇದ್ದೆ ಕಾವ್ಯ… ಅವನನ್ನು ಮದುವೆಯಾಗಿರೋ ಹುಡುಗಿ ಎಷ್ಟು ಅದೃಷ್ಟವಂತೆ ಇರಬಹುದು ಅಲ್ವಾ? ದಿನಾ ಬೆಳಿಗ್ಗೆ ಎದ್ದ ತಕ್ಷಣ ಇವನು ಒಂದೊಂದು ಕವಿತೆ ಹೇಳುತ್ತಾ ಇದ್ದರೆ ಅವಳಿಗೆ ಎಷ್ಟು ರೋಮ್ಯಾಂಟಿಕ್ ಫೀಲ್ ಆಗಬಹುದು? ಅವನು ಅವಳನ್ನ ಎಷ್ಟು ಗಾಢವಾಗಿ ಪ್ರೀತಿಸ್ತಿರಬಹುದು ಅಲ್ವಾ? ನಿಜಕ್ಕೂ ಅವಳು ಅದೃಷ್ಟವಂತೆ ಆಗಿರುತ್ತಾಳೆ!”

“ಇರಬಹುದು ಪ್ರೇಮ. ಆ ಪಯಣಿಗನ ಜೊತೆ ಪಯಣ ಮಾಡುವವಳು ನಿಜವಾಗಿಯೂ ಅದೃಷ್ಟವಂತೆಯೇ ಆಗಿರುತ್ತಾಳೆ “

ಪ್ರೇಮಾ ಇನ್ನು ಆ ಕಲ್ಪನೆಯಲ್ಲೇ ಇದ್ದಳು, 

“ನಿಜವಾಗಿಯೂ! ಅಂತಹ ಒಬ್ಬ ಕವಿಯ ಜೊತೆ ಬದುಕುವುದು ಅಂದರೆ ಪ್ರತಿದಿನವೂ ಒಂದು ಸುಂದರ ಕಾವ್ಯವನ್ನ ಓದಿದ ಹಾಗೆ ಇರುತ್ತೆ…” 

ಇಬ್ಬರ ಹರಟೆ ಹೀಗೆಯೇ ಸಾಗುತ್ತಿರುವಾಗ, ಲಿವಿಂಗ್ ರೂಮಿನ ಬಾಗಿಲು ತೆರೆದ ಶಬ್ದವಾಯಿತು. ಒಳಗೆ ಬಂದ ಜೀವನ್ ಇವರಿಬ್ಬರನ್ನೂ ನೋಡಿ ನಸುನಕ್ಕ.

“ಓಹ್, ನೀನು ಯಾವಾಗ ಬಂದೆ? ನೋಡು, ನನ್ನ ಬೆಸ್ಟ್ ಫ್ರೆಂಡ್ ಪ್ರೇಮಾ ಬಂದಿದ್ದಾಳೆ,” ಎಂದು ಕಾವ್ಯ ಅವನ ಹತ್ತಿರ ಹೋಗಿ ಹೇಳಿದಳು.

“ನಾನು ಬಂದು ಎರಡು ನಿಮಿಷಗಳು ಆಯಿತು ಕಾವ್ಯ. ನೀವಿಬ್ಬರೂ ಯಾವುದೋ ಒಬ್ಬ ಕವಿಯನ್ನು ಹೊಗಳುತ್ತಾ ಇದ್ರಿ ಅಲ್ವಾ.. ಹಾಗಾಗಿ ಡಿಸ್ಟರ್ಬ್ ಮಾಡುವುದು ಬೇಡ ಅಂತ ಸುಮ್ಮನಿದ್ದೆ,” ಎನ್ನುತ್ತಾ ಒಂದು ತುಂಟ ನಗು ಬೀರಿದ ಜೀವನ್.

“ಪ್ರೇಮಾ, ನನ್ನ ಹಸ್ಬೆಂಡ್ ಜೀವನ್,” ಎಂದು ಪರಿಚಯಿಸಿದಳು ಕಾವ್ಯ.

ಪ್ರೇಮ ಅವನಿಗೆ ವಿಶ್ ಮಾಡಿ,

” ನಾವು ನಿಮ್ಮನ್ನ ಗಮನಿಸಲೇ ಇಲ್ಲ,” ಎಂದಳು.

“ಇಟ್ಸ್ ಓಕೆ, ನೀವು ಮಾತಾಡಿ.. ನಾನು ಫ್ರೆಶ್ ಅಪ್ ಆಗಿ ಬರ್ತೀನಿ,” ಎಂದು ನಗುತ್ತಾ ಒಳಗೆ ಹೋದ ಜೀವನ್.

ಪ್ರೇಮಾ ಮತ್ತು ಕಾವ್ಯಳ ಮಾತು ಮತ್ತೆ ಹಳೆಯ ಹಾದಿಗೇ ಮರಳಿತು. ಪ್ರೇಮಾಳ ಹೆಚ್ಚಿನ ಮಾತುಗಳು ಆ ಪಯಣಿಗನ ಸುತ್ತಲೇ ಸುತ್ತುತ್ತಿದ್ದವು.

” ಕಾವ್ಯ, ನಿನಗೆ ನಿಜ ಹೇಳ್ತೀನಿ ಕೇಳು. ಆ ಪಯಣಿಗ ಯಾರು ಅನ್ನುವುದು ನನಗೆ ಗೊತ್ತಿಲ್ಲ, ಅವನ ಹೆಸರಾಗಲಿ, ಮುಖ ಪರಿಚಯವಾಗಲಿ ನನಗಿಲ್ಲ. ಆದರೂ ಅವನ ಬರಹಗಳ ಮೇಲೆ ನನಗೊಂದು ತೀವ್ರವಾದ ಕ್ರಶ್ ಇದೆ. ಈ ಜನ್ಮದಲ್ಲಿ ಏನೋ ಮಿಸ್ ಆಗಿ ಹೋಯಿತು.. ಆದರೆ ಮುಂದಿನ ಜನ್ಮದಲ್ಲಿ ಆದರೂ ನಾನು ಅವನನ್ನೇ ಮದುವೆಯಾಗಬೇಕು ಅಂತ ಅಂದುಕೊಂಡಿದ್ದೀನಿ!” ಎಂದಳು. ಅವಳ ಕೆನ್ನೆ ಪೂರ್ತಿ ಕೆಂಪಾಗಿತ್ತು.

ಕಾವ್ಯ ಬಂದ ನಗುವನ್ನು ತಡೆ ಹಿಡಿದು,

“ಯಾರಿಗೆ ಗೊತ್ತು ಪ್ರೇಮಾ.. ಈ ಜನ್ಮದಲ್ಲಿ ಅವನನ್ನು ಮದುವೆಯಾಗಿರೋ ಹುಡುಗಿ ಏನಾದರೂ ಮುಂದಿನ ಜನ್ಮದಲ್ಲೂ ಅವನನ್ನ ಬಿಟ್ಟುಕೊಡಲ್ಲ ಅಂತ ಹಠ ಹಿಡಿದ್ರೆ?? ನೀನು ಅಸಹಾಯಕಳಾಗ್ತೀಯ ಅಷ್ಟೇ!” ಎಂದಳು.

“ಹೇಗಾದರೂ ಸೋಮವಾರ ವ್ರತ ಮಾಡಿ ಆದರೂ ಅವನನ್ನು ಪಡೆದುಕೊಳ್ತೀನಿ” ಎಂದು ನಗುತ್ತಾ ಪ್ರೇಮ ಅವಳಿಗೆ ಮತ್ತು ಜೀವನ್ ಗೆ ವಿದಾಯ ಹೇಳಿದಳು.

———————————❤️———————————

ಪ್ರೇಮಾ ಹೋದ ನಂತರ ಮನೆಯಲ್ಲಿ ಒಂದು ರೀತಿಯ ಪ್ರಶಾಂತತೆ ಆವರಿಸಿತ್ತು. ಕಿಚನ್ ಕಡೆಯಿಂದ ಪಾತ್ರೆಗಳ ಸಣ್ಣ ಸದ್ದು ಕೇಳಿ ಕಾವ್ಯ ಮೆಲ್ಲಗೆ ಅತ್ತ ನಡೆದಳು.

ಅಲ್ಲಿ ಜೀವನ್ ಕಾಫಿ ಮಾಡುತ್ತಾ ನಿಂತಿದ್ದ. ಗ್ಯಾಸ್ ಸ್ಟೌವ್ ಹತ್ತಿರ ನಿಂತಿದ್ದ ಅವನ ಪಕ್ಕದಲ್ಲೇ ಬಂದು ನಿಂತ ಕಾವ್ಯ,  

“ಓಹೋ… ನೀವೇ ಕಾಫಿ ಮಾಡುತ್ತಾ ಇದ್ದೀರಾ?” ತುಂಟ ನಗು ಬೀರುತ್ತಾ ಕೇಳಿದಳು.

“ಮತ್ತೇನು ಮಾಡೋದು? ಮನೆಯೊಡತಿ ಬೇರೆಯವರನ್ನ ಪ್ರೀತಿಯಿಂದ ಹೊಗಳುವುದರಲ್ಲಿ ಬ್ಯುಸಿ ಇದ್ದರು. ಇನ್ನು ನನಗೆ ದಾರಿಯಿಲ್ಲದೆ ನಾನೇ ಕಾಫಿ ಮಾಡಿಕೊಳ್ಳುತ್ತಾ ಇದ್ದೀನಿ.”

ಕಾಫಿಯ ಘಮ ಇಡೀ ಅಡುಗೆಮನೆಯಲ್ಲಿ ಹರಡಿತ್ತು. ಕಾವ್ಯ ಇನ್ನಷ್ಟು ಅವನ ಹತ್ತಿರ ಸರಿದು,

“ಅಂದಹಾಗೆ ಗೊತ್ತಾ… ಆ ಪಯಣಿಗ ಅನ್ನುವ ರೈಟರ್‌ಗೆ ಎಷ್ಟೊಂದು ಜನ ನಿಷ್ಠಾವಂತ ಅಭಿಮಾನಿಗಳು ಇದ್ದಾರೆ ಅಲ್ವಾ? ಅಬ್ಬಾ! ಅವನ ಕವಿತೆಗಳು ಅಂದರೆ ಎಲ್ಲರಿಗೂ ಎಂಥಾ ಪ್ರೀತಿ!”

“ಹೌದಾ? ಬಹುಶಃ ಅವನು ಯಾವುದೋ ಮಾಂತ್ರಿಕ ಇರಬೇಕು. ಅದಕ್ಕೇ ಅವನ ಅಕ್ಷರಗಳು ಜನರಿಗೆ ಅಷ್ಟು ಬೇಗ ಮೋಡಿ ಮಾಡುವುದು,” ಎಂದು ಅವಳ ಕಡೆ ನೋಡಿ ಕಣ್ಣು ಹೊಡೆದ.

“ನಿಜವಾಗಿಯೂ ಅವನು ಮಾಂತ್ರಿಕನೇ. ಅವನ ಪದಗಳಲ್ಲಿರುವ ಆ ರೋಮ್ಯಾಂಟಿಕ್ ಫೀಲ್, ಅದೊಂಥರಾ ಅಮಲು. ಅದಕ್ಕೇ ಅಲ್ವಾ ವಿದೇಶದಲ್ಲಿದ್ದ ಪ್ರೇಮಾ ಕೂಡ ಅವನನ್ನು ಇಷ್ಟು ವರ್ಷ ನೆನಪಿನಲ್ಲಿ ಇಟ್ಟುಕೊಂಡಿರುವುದು”

ಕಾವ್ಯ ಅವನನ್ನೇ ದಿಟ್ಟಿಸಿದಳು.

ಒಮ್ಮೆಲೆ, ಜೀವನ್ ಅವಳ ನಡು ಬಳಸಿ ತನ್ನತ್ತ ಸೆಳೆದುಕೊಂಡ. ಕಾವ್ಯ ಅವನ ಎದೆಗಪ್ಪಳಿಸಿದಳು. ಇಬ್ಬರ ಉಸಿರಾಟದ ಸದ್ದು ಒಬ್ಬರಿಗೊಬ್ಬರಿಗೆ ಕೇಳಿಸುವಂತಿತ್ತು.

“ಯಾಕೋ… ಆ ಅಭಿಮಾನಿಗಳ ಹೊಗಳಿಕೆ ಕೇಳಿ ನಿನಗೆ ಸ್ವಲ್ಪ ಅಸೂಯೆ ಆದ ಹಾಗಿದೆ?” ಅವಳ ಮುಂಗುರುಳು ಸರಿಸುತ್ತ ಕೇಳಿದ್ದ.

“ಅಸೂಯೆ? ನಂಗೆ ಯಾಕೆ ಅಸೂಯೆ ? ನಾನೂ ಆ ಪಯಣಿಗನ ಬರಹಗಳನ್ನು ಅಷ್ಟೇ ಪ್ರೀತಿಸ್ತೀನಿ. ಅವನ ಪ್ರತಿಭೆ ಅಂತಹದ್ದು, ಯಾರು ಬೇಕಾದರೂ ಅವನನ್ನ ಪ್ರೀತಿಸಬಹುದು, ಅದು ನನಗೆ ಖುಷಿನೇ” ತೋರು ಬೆರಳಿನಿಂದ ಅವನ ಕೆನ್ನೆ ಸವರುತ್ತ ಹೇಳಿದಳು.

“ಅವನ ಬರಹಗಳ ಪಯಣದ ಮೇಲೆ ಮಾತ್ರ ಪ್ರೀತಿನ? ನಿನಗೂ ಪ್ರೇಮ ತರಾನೇ ಪಯಣಿಗನ ಮೇಲೂ ಪ್ರೀತಿ ಅಂದುಕೊಂಡೆ. ಅದಕ್ಕೆ ಪ್ರೇಮ ಅವನ ಮೇಲೆ ಕ್ರಶ್ ಅಂದಾಗ ನಿಂಗೆ ಅಸೂಯೆ ಆಗಿರಬಹುದು ಅಂತ ಯೋಚಿಸುತ್ತಾ ಇದ್ದೆ”

“ಪಯಣಿಗನನ್ನು ಯಾರು ಪ್ರೀತಿಸಿದರೂ ನನಗೇನು ತೊಂದರೆಯಿಲ್ಲ. ಆದರೆ, ಆ ಪಯಣಿಗ ಮಾತ್ರ ಆ ಸಾವಿರಾರು ಅಭಿಮಾನಿಗಳಲ್ಲಿ ಯಾರನ್ನಾದರೂ ಪ್ರೀತಿಸೋಕೆ ಶುರು ಮಾಡಿದರೆ ನನಗೆ ಖಂಡಿತ ಪ್ರಾಬ್ಲಮ್ ಆಗುತ್ತೆ!” ಅವಳ ಕೈಗಳು ಅವನ ಕೊರಳಿಗೆ ಹಾರವಾಗಿತ್ತು.

ಅವಳ ಮಾತಿಗೆ ಜೀವನ್ ತುಂಟತನದಿಂದ ನಕ್ಕು,

“ಒಂದು ವೇಳೆ ಹಾಗೇನಾದರೂ ಆದರೆ? ಸಾವಿರಾರು ಅಭಿಮಾನಿಗಳ ನಡುವೆ ಈ ಪಯಣಿಗ ಎಲ್ಲಾದರೂ ದಾರಿ ತಪ್ಪಿ ಹೋದರೆ…?” ಪಿಸುಗುಟ್ಟಿದ. ಅವಳ ನಡುವಿನ ಮೇಲಿದ್ದ ಅವನ ಹಿಡಿತ ಬಿಗಿಯಾಗಿತ್ತು.

ಕ್ಷಣಕಾಲ ಅವನನ್ನೇ ದಿಟ್ಟಿಸಿದ ಕಾವ್ಯ,

“ಆ ಪಯಣಿಗ ದಾರಿ ತಪ್ಪುವುದಕ್ಕೆ ಸಾಧ್ಯವೇ ಇಲ್ಲ ಜೀವನ್. ಅವನ ಕವಿತೆಯ ಮೋಡಿಗೊಳಗಾಗಿದ್ದ ಕಾವ್ಯ ಅನ್ನುವ ಪ್ರೀತಿಯ ಕವಿತೆಯಲ್ಲಿ ಅವನು ಬಂಧಿ ಆಗಿದ್ದಾನೆ” ಎನ್ನುತ್ತಾ ಅವನ ತುಟಿಗೆ ತನ್ನ ತುಟಿ ಒತ್ತಿದ್ದಳು.

ಇಬ್ಬರೂ ಆ ಮಧುರ ಕ್ಷಣದಲ್ಲಿ ಸಂಪೂರ್ಣವಾಗಿ ಮೈಮರೆತಿದ್ದಾಗ, ಸ್ಟೌವ್ ಮೇಲಿದ್ದ ಕಾಫಿ ಉಕ್ಕಿ ಪಾತ್ರೆಯಿಂದ ಹೊರಕ್ಕೆ ಚೆಲ್ಲಿದ ಸದ್ದಿಗೆ ಇಬ್ಬರೂ ಒಮ್ಮೆಲೇ ಎಚ್ಚೆತ್ತು, ಹರಡಿದ ಆ ಕಾಫಿಯ ಘಮದ ನಡುವೆ ಒಬ್ಬರನ್ನೊಬ್ಬರು ನೋಡಿ ಮುಗುಳ್ನಕ್ಕರು.

( ಮುಂದುವರೆಯುವುದು ❤️)

———————————❤️———————————

ಹೇಗಿತ್ತು ಮೊದಲ ಸಂಚಿಕೆ…?

ಮೌನಿ ❤️