ಜಗದೀಶ್ ಅವರು ಮಗಳ ಬಳಿ ನಿನಗೆ ಮದುವೆ ಒಪ್ಪಿಗೆ ಇದೆಯಾ ಪುಟ್ಟಿ? ಎಂದು ಕೇಳಿದಾಗ ಅವಳು ತಲೆ ತಗ್ಗಿಸಿ ಹೌದು ಎನ್ನುವಂತೆ ತಲೆಯಾಡಿಸಿದಳು. ವಿರಾಟ್ ಕೂಡ ಒಪ್ಪಿಗೆ ಎನ್ನುವಂತೆ ಹೇಳಿದ್ದ. ಜಗದೀಶ್ ಅವರು ಪುರೋಹಿತರಿಗೆ ಕರೆ ಮಾಡಿದ್ದೇನೆ ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಬರುತ್ತಾರೆ ಎಂದಿದ್ದರು. ಕೆಲ ಹೊತ್ತಿನಲ್ಲಿ ಪುರೋಹಿತರು ಬಂದವರು ಇಬ್ಬರ ಜಾತಕಗಳನ್ನು ಹೊಂದಿಸಿ ನೋಡಿದ್ದರು. ಇಬ್ಬರ ಜಾತಕ ತುಂಬ ಚೆನ್ನಾಗಿ ಹೊಂದಾಣಿಕೆ ಆಗುತ್ತಿದೆ. ಹುಡುಗಿಯ ಜಾತಕ ಬಹಳ ಉತ್ತಮವಾಗಿದೆ ಅವಳು ಯಾವ ಮನೆ ಸೇರುತ್ತಾಳೋ ಆ ಮನೆಯ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದ್ದರು. ಅವರ ಮಾತನ್ನು ಕೇಳಿದ ಮನೆಯವರ ಮುಖದಲ್ಲಿ ನೆಮ್ಮದಿಯ ನಗು ಮೂಡಿತ್ತು. ರಾಜಶೇಖರ್ ಅವರು ಸದ್ಯದಲ್ಲಿ ನಿಶ್ಚಿತಾರ್ಥಕ್ಕೆ ಒಳ್ಳೆಯ ಮುಹೂರ್ತವನ್ನು ತಿಳಿಸಿ ಎಂದು ಹೇಳಿದ್ದರು. ಪುರೋಹಿತರು ಪಂಚಾಂಗ ನೋಡಿದವರು ಇನ್ನೊಂದು ನಾಲ್ಕು ದಿನದಲ್ಲಿ ಇರುವ ಮಹೂರ್ತ ಬಹಳ ಶುಭವಾಗಿದೆ. ಅದು ಬಿಟ್ಟರೆ ಇನ್ನೂ ಎರಡು ತಿಂಗಳು ಯಾವುದೇ ಮಹೂರ್ತ ಇಲ್ಲ ಎಂದು ಹೇಳಿದ್ದರು. ಅದನ್ನು ಕೇಳಿದ ರಾಜಶೇಖರ್ ಅವರು ಎರಡು ತಿಂಗಳು ಅಂದರೆ ತಡ ಆಗಬಹುದು. ನಾಲ್ಕು ದಿನದಲ್ಲಿ ಇರುವ ಮುಹೂರ್ತವೇ ಓಕೆ ಅನಿಸುತ್ತಿದೆ ಎಂದು ಹೇಳಲು ಜಗದೀಶ್ ಅವರು ಹಾಗೆಯೇ ಅಭಿಪ್ರಾಯ ಪಟ್ಟಿದ್ದರು.