ಪ್ರೀತಿ ಮರೀಚಿಕೆ – 3
ಕೊನೆಗೂ ಆ ದಿನ ಬಂದೇ ಬಿಟ್ಟಿತು.
ತನ್ನ ಜೀವನದಲ್ಲಿ ಹಲವು ವರ್ಷಗಳಿಂದ ಎದುರು ನೋಡುತ್ತಿದ್ದ ಕನಸು ನನಸಾಗಿತ್ತು.
ಶ್ರಾವ್ಯ ಚಾರ್ಟರ್ಡ್ ಅಕೌಂಟೆಂಟ್ ಆಗಿ ಅರ್ಹತೆ ಪಡೆದಿದ್ದಳು!
ಆ ಸುದ್ದಿಯನ್ನು ತನ್ನ ಕಣ್ಣಾರೆ ನೋಡಿದ ಕ್ಷಣದಲ್ಲಿ ಅವಳಿಗೆ ಮಾತೇ ಹೊರಡಲಿಲ್ಲ.
ಇಷ್ಟು ವರ್ಷಗಳ ಪರಿಶ್ರಮ, ನಿದ್ರೆಯಿಲ್ಲದ ರಾತ್ರಿಗಳು, ಹಸಿವನ್ನೂ ಮರೆತು ಓದಿದ ದಿನಗಳು, ಒಂಟಿಯಾಗಿ ಕಣ್ಣೀರು ಹಾಕಿದ ಕ್ಷಣಗಳು… ಎಲ್ಲವೂ ಒಮ್ಮೆಲೇ ನೆನಪಿಗೆ ಬಂದವು.
ಅವಳ ಕಣ್ಣುಗಳಿಂದ ಕಣ್ಣೀರು ಜಾರಿತು.
“ಅಮ್ಮಾ… ನಾನು ಸಾಧಿಸಿಬಿಟ್ಟೆ! ನೀನಿಲ್ಲ ಎಂಬ ನೋವು ಪ್ರತಿದಿನ ನನ್ನನ್ನು ಕಾಡುತ್ತಿತ್ತು. ಆದರೆ ನೀನು ಕಲಿಸಿಕೊಟ್ಟ ಧೈರ್ಯದಿಂದಲೇ ಇಂದು ಈ ಹಂತಕ್ಕೆ ತಲುಪಿದ್ದೇನೆ. ನನ್ನ ಗೆಲುವನ್ನು ನೋಡಲು ನೀನಿಲ್ಲದಿದ್ದರೂ, ಈ ಗೆಲುವು ಮಾತ್ರ ನಿನ್ನದೇ ಅಮ್ಮಾ!” ಎಂದು ತಾಯಿಯ ಫೋಟೋಗೆ ನಮಸ್ಕರಿಸಿದಳು.
ತನ್ನ ಜೀವನದಲ್ಲಿ ತಾಯಿಯಿಲ್ಲದ ಕೊರತೆ ಎಂದಿಗೂ ನೀಗುವುದಿಲ್ಲ ಎಂಬುದು ಅವಳಿಗೆ ಗೊತ್ತಿತ್ತು. ಆದರೆ ತಾಯಿ ತನ್ನೊಳಗೆ ತುಂಬಿದ ಧೈರ್ಯ ಮಾತ್ರ ಎಂದೆಂದಿಗೂ ತನ್ನ ಜೊತೆಗಿರುತ್ತದೆ ಎಂಬ ನಂಬಿಕೆಯಿತ್ತು.
ಕೆಲವು ದಿನಗಳ ನಂತರ ಶ್ರಾವ್ಯಳಿಗೆ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಉದ್ಯೋಗ ದೊರೆಯಿತು.
ಮೊದಲ ದಿನ ಆಫೀಸಿಗೆ ಹೋಗಲು ಸಿದ್ಧಳಾಗುತ್ತಾ ಕನ್ನಡಿಯಲ್ಲಿ ತನ್ನನ್ನೇ ನೋಡಿಕೊಂಡಳು.
ಅಚ್ಚುಕಟ್ಟಾಗಿ ಸಿದ್ಧಳಾಗಿ, ಕೈಯಲ್ಲಿ ಫೈಲ್ ಹಿಡಿದು ನಿಂತಿದ್ದ ತನ್ನ ರೂಪವನ್ನು ನೋಡಿದಾಗ ಅವಳ ತುಟಿಗಳ ಮೇಲೆ ಸಣ್ಣ ನಗುವೊಂದು ಮೂಡಿತು.
ಇದು ಕೇವಲ ಒಂದು ಉದ್ಯೋಗವಾಗಿರಲಿಲ್ಲ.
ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಸಿಕ್ಕ ಅವಕಾಶವಾಗಿತ್ತು.
ತನ್ನ ಜೀವನವನ್ನು ತನಗೆ ಇಷ್ಟ ಬಂದಂತೆ ರೂಪಿಸಿಕೊಳ್ಳಲು ಸಿಕ್ಕ ಮೊದಲ ಮೆಟ್ಟಿಲಾಗಿತ್ತು.
ಮನೆಯಲ್ಲಿ ಯಾರೂ ಅವಳನ್ನು ಅಭಿನಂದಿಸಲಿಲ್ಲ.
“ಕೆಲಸ ಸಿಕ್ಕಿದೆ ಅಲ್ವಾ! ಇನ್ನು ಮುಂದೆ ಮನೆಯ ಖರ್ಚಿಗೆ ಹಣ ಕೊಡಬೇಕು. ನಿನ್ನ ಸಂಬಳವೆಲ್ಲ ನಿನಗೊಬ್ಬಳಿಗೇ ಬೇಕು ಅಂತ ಅಂದುಕೊಳ್ಳಬೇಡ,” ಎಂದು ಲಲಿತ ಮೊದಲ ದಿನವೇ ಹೇಳಿದಳು.
ಶ್ರಾವ್ಯ ಶಾಂತವಾಗಿ ಅವಳತ್ತ ನೋಡಿದಳು.
“ಸರಿ ಅಮ್ಮಾ. ಮನೆಯ ಖರ್ಚಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ.”
ಅವಳ ಮಾತುಗಳಲ್ಲಿ ಎದುರು ಮಾತನಾಡುವ ಧೋರಣೆ ಇರಲಿಲ್ಲ. ಹಾಗೆಂದು ತನ್ನನ್ನು ತಾನು ಕೀಳಾಗಿ ಭಾವಿಸಿಕೊಳ್ಳುವ ಮನಸ್ಥಿತಿಯೂ ಇರಲಿಲ್ಲ.
ತನ್ನ ಜವಾಬ್ದಾರಿಗಳೇನು ಎಂಬುದು ಅವಳಿಗೆ ತಿಳಿದಿತ್ತು. ಅದೇ ಸಮಯದಲ್ಲಿ ತನ್ನ ಪರಿಶ್ರಮಕ್ಕೆ ಇರುವ ಮೌಲ್ಯವೇನು ಎಂಬುದೂ ಚೆನ್ನಾಗಿ ಗೊತ್ತಿತ್ತು.
ಮೂರ್ತಿ ಮಾತ್ರ ಪತ್ರಿಕೆ ಓದುತ್ತಲೇ ಇದ್ದನು.
“ಅಪ್ಪಾ… ನಾನು ಆಫೀಸಿಗೆ ಹೋಗುತ್ತಿದ್ದೇನೆ,” ಎಂದು ಶ್ರಾವ್ಯ ಹೇಳಿದಳು.
“ಹ್ಮ್… ಸರಿ. ಜಾಗ್ರತೆಯಾಗಿ ಹೋಗು,” ಎಂದನು ಮೂರ್ತಿ.
ಅಷ್ಟೇ!
ತನ್ನ ಮಗಳು ಇಷ್ಟೆಲ್ಲಾ ಕಷ್ಟಪಟ್ಟು ಈ ಹಂತಕ್ಕೆ ತಲುಪಿದ್ದಾಳೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿಯೂ ಅವನಲ್ಲಿ ಕಾಣಿಸಲಿಲ್ಲ.
ಶ್ರಾವ್ಯ ಒಂದು ಕ್ಷಣ ತಂದೆಯತ್ತ ನೋಡಿದಳು. ಚಿಕ್ಕವಳಿದ್ದಾಗ ತನ್ನನ್ನು ಒಮ್ಮೆಯಾದರೂ ಪ್ರೀತಿಯಿಂದ ಹತ್ತಿರ ಕರೆದು, “ನನ್ನ ಮಗಳು ತುಂಬಾ ಬುದ್ಧಿವಂತೆ” ಎಂದು ಹೇಳಿದರೆ ಸಾಕೆಂದು ಬಯಸುತ್ತಿದ್ದ ದಿನಗಳು ನೆನಪಾದವು.
ತನ್ನ ಅಂಕಗಳ ಬಗ್ಗೆ ಕೇಳುತ್ತಾನೆ, ತನ್ನ ಸಾಧನೆಯನ್ನು ನೋಡಿ ಹೆಮ್ಮೆಪಡುತ್ತಾನೆ, ಪ್ರೀತಿಯಿಂದ ಮಾತನಾಡಿಸುತ್ತಾನೆ ಎಂದು ಎಷ್ಟೋ ಬಾರಿ ಕಾದಿದ್ದಳು. ಆದರೆ ಈಗ ಆ ನಿರೀಕ್ಷೆಗಳೇ ಇರಲಿಲ್ಲ.
ತಂದೆ ತನ್ನನ್ನು ಪ್ರೀತಿಸಬೇಕೆಂಬ ಆಸೆ ಸಂಪೂರ್ಣವಾಗಿ ಸತ್ತುಹೋಗಿದೆ ಎಂದಲ್ಲ. ಆದರೆ ಅವರ ಪ್ರೀತಿಗಾಗಿ ತನ್ನ ಬದುಕನ್ನು ನಿಲ್ಲಿಸಬಾರದು ಎಂಬ ನಿರ್ಧಾರಕ್ಕೆ ಮಾತ್ರ ಬಂದಿದ್ದಳು. ಮೌನವಾಗಿ ಮನೆಯ ಹೊಸ್ತಿಲು ದಾಟಿ ಹೊರಬಂದಳು.
ಆಫೀಸಿಗೆ ಹೋಗುವ ದಾರಿಯಲ್ಲಿ ಒಂದು ಪುಟ್ಟ ದೇವಸ್ಥಾನ ಕಾಣಿಸಿತು. ಅರಿವಿಲ್ಲದೆಯೇ ಅವಳ ಹೆಜ್ಜೆಗಳು ಅಲ್ಲಿಯೇ ನಿಂತವು.
ದೇವರ ಮುಂದೆ ಕೈಮುಗಿದು ಕಣ್ಣು ಮುಚ್ಚಿದಳು.
“ದೇವರೇ… ಇಷ್ಟು ದಿನ ನನಗೆ ಧೈರ್ಯ ಕೊಟ್ಟಿದ್ದೀಯ. ಇನ್ನು ಮುಂದೆಯೂ ನನ್ನ ಕಾಲ ಮೇಲೆ ನಾನು ನಿಂತುಕೊಳ್ಳುವ ಶಕ್ತಿಯನ್ನು ಕೊಡು. ನನ್ನ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸುವ ಮನೋಬಲವನ್ನು ಕೊಡು. ನನ್ನಿಂದ ಯಾರಿಗೂ ನೋವಾಗಬಾರದು. ನಾನು ಅನುಭವಿಸಿದ ನೋವನ್ನು ಬೇರೆಯವರು ಅನುಭವಿಸಬಾರದು” ಎಂದು ಮನಃಪೂರ್ವಕವಾಗಿ ಪ್ರಾರ್ಥಿಸಿದಳು.
ನಂತರ ಕಣ್ಣು ತೆರೆದು ಸಣ್ಣ ನಗೆಯೊಂದಿಗೆ ಮುಂದೆ ಸಾಗಿದಳು.
ಈಗ ಅವಳಿಗೆ ಒಂದು ಉದ್ಯೋಗವಿತ್ತು.
ತನ್ನದೇ ಆದ ಸಂಪಾದನೆಯಿತ್ತು.
ತನ್ನ ಕನಸುಗಳನ್ನು ನನಸು ಮಾಡಿಕೊಳ್ಳುವ ಸ್ವಾತಂತ್ರ್ಯವಿತ್ತು. ಅವೆಲ್ಲಕ್ಕಿಂತ ಮುಖ್ಯವಾಗಿ ತನ್ನ ಮೇಲೆ ತನಗೆ ನಂಬಿಕೆಯಿತ್ತು.
ಒಂದು ಕಾಲದಲ್ಲಿ ತಾಯಿಯ ಪ್ರೀತಿಗಾಗಿ, ತಂದೆಯ ಮಮತೆಗಾಗಿ ಕಾಯುತ್ತಿದ್ದ ಪುಟ್ಟ ಬಾಲಕಿ ಶ್ರಾವ್ಯ… ಇಂದು ತನ್ನ ಜೀವನವನ್ನು ತಾನೇ ಕಟ್ಟಿಕೊಳ್ಳುವ ಹಂತಕ್ಕೆ ತಲುಪಿದ್ದಳು.
ಅವಳಿಗೆ ಇನ್ನೂ ಅನೇಕ ಕನಸುಗಳಿದ್ದವು.
ತನಗಾಗಿ ಒಂದು ಪುಟ್ಟ ಮನೆ ಖರೀದಿಸಬೇಕು. ತನ್ನ ತಾಯಿಯ ನೆನಪುಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು. ತನ್ನಂತೆ ಕಷ್ಟಗಳಲ್ಲಿ ಬೆಳೆಯುವ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು.
ಏಕೆಂದರೆ ಅವಳಿಗೆ ವಿದ್ಯೆಯ ಮಹತ್ವ ತಿಳಿದಿತ್ತು. ಪ್ರೀತಿಯಿಲ್ಲದ ಮನೆಯಲ್ಲಿ ಬೆಳೆಯುವುದು ಎಷ್ಟು ನೋವಿನ ಸಂಗತಿ ಎಂಬುದು ಗೊತ್ತಿತ್ತು. ಕಷ್ಟದಲ್ಲಿರುವಾಗ ಒಬ್ಬ ವ್ಯಕ್ತಿ ಬೆಂಬಲವಾಗಿ ನಿಂತರೆ ಎಷ್ಟು ಧೈರ್ಯ ಬರುತ್ತದೆ ಎಂಬುದನ್ನೂ ಅನುಭವದಿಂದ ತಿಳಿದಿದ್ದಳು.
ಅವಳ ಹಿಂದಿನ ಬದುಕು ಕಣ್ಣೀರುಗಳಿಂದ ತುಂಬಿತ್ತು. ಆದರೆ ತನ್ನ ಭವಿಷ್ಯವನ್ನು ಮಾತ್ರ ಕಣ್ಣೀರಿನಿಂದ ಬರೆಯಲು ಅವಳು ಇಷ್ಟಪಡಲಿಲ್ಲ.
ತನ್ನನ್ನು ತಾನು ಪ್ರೀತಿಸಿಕೊಳ್ಳುವುದು, ಗೌರವದಿಂದ ಬದುಕುವುದು, ತನ್ನಂತಹ ಇನ್ನೂ ಕೆಲವರ ಬದುಕಿನಲ್ಲಿ ಬೆಳಕನ್ನು ತುಂಬುವುದು… ಅದೇ ಅವಳ ಗುರಿಯಾಗಿತ್ತು.
ಆದರೆ ವಿಧಿ ಅವಳಿಗಾಗಿ ಬೇರೆಯದೇನನ್ನೋ ಬರೆದಿಟ್ಟಿತ್ತು. ಅವಳಿಗೆ ಮುಂದೆ ಕಣ್ಣೀರೇ ಜೊತೆಯಾಗಬಹುದು ಎನ್ನುವ ಊಹೆ ಅವಳಿಗಿರಲಿಲ್ಲ. ಅವಳ ಜೀವನದಲ್ಲಿ ಪ್ರೀತಿ ಮರೀಚಿಕೆ.
ಶ್ರಾವ್ಯಳ ಕೆಲಸ ಯಾವುದೇ ಅಡ್ಡಿ ಆತಂಕ ಇಲ್ಲದೆ ಶುರುವಾಗಿತ್ತು. ಒಂದು ತಿಂಗಳು ಕೆಲಸ ನಿರ್ವಹಿಸಿದ್ದಳು.
ಪ್ರತಿಷ್ಠಿತ ಉದ್ಯಮಿ ಶಶಾಂಕ್ ಶರ್ಮಾ ಅವರು ಟಾಪ್ ಒನ್ ಉದ್ಯಮಿ ಅಗಿ ಹೊರಹೊಮ್ಮಿದ್ದಾರೆ. ಪ್ರತಿಷ್ಠಿತ ಬ್ಯುಸಿನೆಸ್ ಐಕಾನ್ ಪ್ರಶಸ್ತಿ ಅವರ ಮುಡಿಗೇರಿಸಿಕೊಂಡಿದ್ದಾರೆ. ಎನ್ನುವ ಸುದ್ದಿ, ಸುದ್ದಿ ಮಾದ್ಯಮಗಳಲ್ಲಿ ಸುದ್ದಿ ಮಾಡುತಿತ್ತು. ಈ ಸುದ್ದಿಯನ್ನು ನೋಡುತಿದ್ದ ಮೂರ್ತಿಯವರ ಕಣ್ಣುಗಳು ಪಕ್ಕದಲ್ಲಿ ನಿಂತಿದ್ದ ವೃದ್ಧ ದಂಪತಿಯ ಮೇಲೆ ನೆಟ್ಟವು.
ಮುಂದುವರಿಯುತ್ತದೆ…
Swipe left/right or tap the sides to turn pages