New Katha Varnika is now on Google Play — read Telugu stories on your phone. Learn more
ಮಧುರ ಪ್ರೇಮ 💕 – 1

ಮಧುರ ಪ್ರೇಮ 💕 – 1

ಮಧುರ ಪ್ರೇಮ 💕 – ೧

ಅದ್ದೂರಿಯಾಗಿ ಅಲಂಕಾರಗೊಂಡಿದ್ದ ಆ ಹಾಲ್ ಬೆಳಕಿನಿಂದ ಕಂಗೊಳಿಸುತ್ತಿತ್ತು.

ವೇದಿಕೆಯ ಮೇಲೆ ಕೆಲವೇ ಕ್ಷಣಗಳ ಹಿಂದೆ ಉಂಗುರ ಬದಲಾಯಿಸುವ ಶಾಸ್ತ್ರ ನಡೆದಿತ್ತು. ಬಂಧು-ಬಳಗದವರ ಹಾರೈಕೆಗಳು, ಫೋಟೋಗ್ರಾಫರ್‌ಗಳ ಕ್ಯಾಮೆರಾ ಫ್ಲ್ಯಾಶ್‌ಗಳು, ಮಕ್ಕಳ ಗದ್ದಲ… ಇಡೀ ವಾತಾವರಣ ಸಂಭ್ರಮದ ಕಡಲಲ್ಲಿ ಮುಳುಗಿತ್ತು.

 

“ದೇವರು ನಿಮ್ಮಿಬ್ಬರನ್ನೂ ಯಾವಾಗಲೂ ಹೀಗೆ ಖುಷಿಯಾಗಿ ಇಡಲಿ” ಎಂದು ಉಮಾದೇವಿ, ರಾಜಾರಾವ್ ಮತ್ತು ಮನೆಯವರೆಲ್ಲರೂ ಇಬ್ಬರ ತಲೆಯ ಮೇಲೂ ಕೈ ಇಟ್ಟು ಆಶೀರ್ವದಿಸಿದರು. ಉಮಾದೇವಿಯವರ ಮುಖದಲ್ಲಿ ಕೊಂಚ ಅಸಮಾಧಾನ ಕಂಡಿತ್ತು.

 

ರೇವಂತ್, ಚಿತ್ರಾ, ಚಿನ್ಮಯಿ, ಸಾತ್ವಿಕ್ ಸೇರಿದಂತೆ ಮನೆಯವರೆಲ್ಲರೂ ಆ ಸಂತೋಷದಲ್ಲಿ ಜೊತೆಯಾಗಿ ನಗುತ್ತಿದ್ದರು.

 

ಆದರೆ ಆ ಸಂಭ್ರಮದ ಮಹಾಪೂರದ ಮಧ್ಯೆ, ಹಾಲ್‌ನ ಒಂದು ಮೂಲೆಯಲ್ಲಿ ನಿಂತಿದ್ದ ವರ್ಣ ಮುಖ ಮಾತ್ರ ವರ್ಣರಹಿತವಾಗಿತ್ತು. ಸಂಪೂರ್ಣ ಮೌನಕ್ಕೆ ಶರಣಾಗಿದ್ದಳು. 

ಅವಳ ದೃಷ್ಟಿ ಅನಾಯಾಸವಾಗಿ ವೇದಿಕೆಯ ಮೇಲಿದ್ದ ವೇದಾಂತ್‌ನತ್ತ ತಿರುಗಿತು. ಇಬ್ಬರ ಕಣ್ಣುಗಳು ಸಂಧಿಸಿದವು.

 

ಮರುಕ್ಷಣವೇ ವೇದಾಂತ್ ಎಲ್ಲರಿಂದಲೂ ದೂರ ಸರಿದು, ನೇರವಾಗಿ ಅವಳು ನಿಂತಿದ್ದ ಜಾಗಕ್ಕೇ ಬಂದ.

 

“ಏನಾಯ್ತು ವರ್ಣ? ಈಗಲಾದರೂ ಖುಷಿನಾ?” ವೇದಾಂತ್ ತುಟಿಯಂಚಿನಲ್ಲಿ ವ್ಯಂಗ್ಯ ನಗು ಮೂಡಿಸಿಕೊಂಡು ಕೇಳಿದ.

 

ವರ್ಣ ಅಸಹಾಯಕತೆಯಿಂದ ಅವನ ಮುಖ ನೋಡಿದಳು.

 

“ನಿನಗೆ ಬೇಕಿದ್ದದ್ದು ಇದೇ ಅಲ್ವಾ? ನೋಡಿದ್ಯಾ… ಕೊನೆಗೂ ಅಂದುಕೊಂಡಿದ್ದನ್ನು ಸಾಧಿಸಿದೆ. ಈಗಲಾದರೂ ನಿನ್ನ ಮನಸ್ಸಿಗೆ ನೆಮ್ಮದಿ ಸಿಕ್ಕಿರಬೇಕಲ್ಲ? ವರ್ಣ”

 

“ವೇದ್ …” ಮೆಲ್ಲನೆ ಹೊರಬಂದಿತ್ತು ಅವಳಿಂದ.

 

ಆದರೆ ಅವನು ಅವಳ ಯಾವ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ.

 

“Congratulations ಹೇಳೋದಿದ್ರೆ, ಹೇಳಿಬಿಡು, ಇಲ್ಲ ಅಂದರೂ ಪರವಾಗಿಲ್ಲ. ಆದರೆ ಒಂದು ವಿಷಯ ಮಾತ್ರ ಸತ್ಯ…ಇವತ್ತು ಇಲ್ಲಿ ನಿಂತು ಇದನ್ನೆಲ್ಲಾ ಕಣ್ಣಾರೆ ನೋಡ್ತಿದ್ದೀಯಲ್ಲ… ನಿನ್ನ ಹಠಕ್ಕೆ ಇದಕ್ಕಿಂತ ದೊಡ್ಡ ವಿಜಯ ಇನ್ನೇನು ಬೇಕು? ನಿನ್ನ ಗೆಲುವನ್ನು ಸೆಲೆಬ್ರೇಟ್ ಮಾಡು”

 

ವರ್ಣಳಿಗೆ ಗಂಟಲು ಪಸೆ ಆರಿತ್ತು. 

“Congratulations ವೇದ್… ವೇದಾಂತ್” ಪಿಸುಗುಟ್ಟಿದಳು.

 

ಅಷ್ಟರಲ್ಲಿ, 

 

“ವೇದ್…! ವೇದ್ ! ” ಸ್ವಾತಿಯ ಧ್ವನಿ ಇಬ್ಬರನ್ನು ಅತ್ತ ಕಡೆ ತಿರುಗುವಂತೆ ಮಾಡಿತ್ತು.

 

“ಇಲ್ಲಿದ್ದೀಯಾ ನೀನು? ಅಲ್ಲಿ ಫೋಟೋಶೂಟ್‌ಗೆ ಎಲ್ಲರೂ ಕಾಯ್ತಿದ್ದಾರೆ. ಬೇಗ ಬಾ!”

 

ನಂತರ ವರ್ಣಳ ಕಡೆ ದೃಷ್ಟಿ ಹರಿಸಿದಳು.

 

“Congratulations ಸ್ವಾತಿ.” 

 

“Thank you! ವರ್ಣ” ಎಂದು ಖುಷಿಯಿಂದ ತಲೆಯಾಡಿಸಿದಳು ಸ್ವಾತಿ.

 

ವೇದಾಂತ್ ಒಮ್ಮೆ ವರ್ಣಳ ಮುಖವನ್ನು ನೋಡಿ, ನಂತರ ನಿರ್ಲಕ್ಷ್ಯದಿಂದ ಮುಖ ತಿರುಗಿಸಿ, “ನಡಿ ಸ್ವಾತಿ” ಎನ್ನುತ್ತಾ ಸ್ವಾತಿಯ ಜೊತೆ ವೇದಿಕೆಯ ಕಡೆ ನಡೆದ.

 

ವರ್ಣ ಮಾತ್ರ ಶೂನ್ಯಳಾಗಿ ಅಲ್ಲಿಯೇ ನಿಂತಿದ್ದಳು. 

ಅವನು ದೂರ ಹೋಗುತ್ತಿದ್ದಂತೆ, ಇಷ್ಟು ಹೊತ್ತಿನಿಂದ ಕಷ್ಟಪಟ್ಟು ಹಿಡಿದಿಟ್ಟುಕೊಂಡಿದ್ದ ಆ ಕಣ್ಣೀರಿನ ಹನಿಗಳು, ಕೊನೆಗೂ ಅವಳ ಕಣ್ಣಂಚಿನಿಂದ ಮೌನವಾಗಿ ಕೆನ್ನೆಯ ಮೇಲೆ ಜಾರಿದ್ದವು.

 

———————————❤️———————————

ಫೋಟೋಶೂಟ್ ಮುಗಿಯುವಷ್ಟರಲ್ಲಿ ಮಧ್ಯಾಹ್ನವಾಗಿತ್ತು.

ಅಲ್ಲಿಯೇ ಎಲ್ಲರೂ ಒಟ್ಟಿಗೆ ಊಟ ಮುಗಿಸಿದರು. ನಗು, ಮಾತು, ತಮಾಷೆಗಳ ನಡುವೆ ಸಮಯ ಕಳೆದುಹೋಯಿತು. ಸ್ವಲ್ಪ ಹೊತ್ತಿನ ನಂತರ ಒಬ್ಬೊಬ್ಬರಾಗಿ ಬಂದಿದ್ದ ಅತಿಥಿಗಳೆಲ್ಲಾ ಬೀಳ್ಕೊಟ್ಟು ಹೊರಡತೊಡಗಿದರು. ಕೊನೆಗೆ, ವೇದಾಂತ್ ಮತ್ತು ಮನೆಯವರೆಲ್ಲರೂ ಮನೆಗೆ ಹಿಂದಿರುಗಿದರು.

 

ಸಮಯ ಸರಿದಿತ್ತು. ಮನೆ ಸಂಭ್ರಮದ ನಂತರ ದಣಿವಿನಿಂದ ಮೌನಕ್ಕೆ ಜಾರಿತ್ತು. ವೇದಾಂತ್ ಅಜ್ಜಿ ಉಮಾದೇವಿಯವರ ಜೊತೆ ಸ್ವಲ್ಪ ಹೊತ್ತು ಮಾತನಾಡಿ ತಾನು ರೂಮಿಗೆ ಹೊರಟವನಿಗೆ, ಏನೋ ನೆನಪಾಗಿತ್ತು. ನೇರವಾಗಿ ಅಡುಗೆಮನೆಗೆ ಹೋಗಿ ಒಂದು ದೊಡ್ಡ ಲೋಟಕ್ಕೆ ಹಾಲು ಹಾಕಿಕೊಂಡ. ತುಟಿಯಂಚಿನಲ್ಲಿ ಸಣ್ಣ ನಗು ಮೂಡಿತ್ತು.

 

———————————❤️———————————

 

“ಡಿಂಪಲ್… ನಿನ್ನ ಆಸೆ ಈಡೇರಿದೆ ಅಲ್ವಾ. ಇವತ್ತು ನಿನಗೆ ಹಾಲು ಕುಡಿಸಲೇಬೇಕು.” ಎಂದು ತನ್ನಷ್ಟಕ್ಕೆ ತಾನೇ ಪಿಸುಗುಟ್ಟುತ್ತಾ, ಆ ಲೋಟವನ್ನು ಕೈಯಲ್ಲಿ ಹಿಡಿದು ಮೇಲಕ್ಕೆ ಹೋದ.

 

ನೇರವಾಗಿ ವರ್ಣಾಳ ಕೋಣೆಯ ಮುಂದೆ ನಿಂತು ಬಾಗಿಲನ್ನು ಮೆಲ್ಲಗೆ ತಟ್ಟಿದ. ಕೆಲವು ಕ್ಷಣಗಳ ನಂತರ ಬಾಗಿಲು ತೆರೆದಿದ್ದಳು.

ಎದುರಿಗೆ ವೇದಾಂತ್‌ನನ್ನು ನೋಡಿದ ವರ್ಣಾಳ ಮುಖ ಕ್ಷಣಕಾಲ ಬದಲಾಯಿತು.

 

“ವೇದ್…? ಈ ಹೊತ್ತಿನಲ್ಲಿ…?”

 

ಮರು ಕ್ಷಣವೇ ತನ್ನನ್ನು ತಾನು ಸಂಭಾಳಿಸಿಕೊಂಡು,

 

“ನೀನಾ…? ಹೋಗು ವೇದ್. ಯಾರಾದರೂ ನೋಡಿದರೆ ಚೆನ್ನಾಗಿರಲ್ಲ.” ಎಂದು ಬಾಗಿಲು ಮುಚ್ಚಲು ಮುಂದಾದಳು.

 

“ಹೋ… ಹೋ… ಡಿಂಪಲ್, ಪ್ಲೀಸ್ ಪ್ಲೀಸ್, ಅಷ್ಟು ಗಡಿಬಿಡಿ ಬೇಡ!” ಎನ್ನುತ್ತಾ ವೇದಾಂತ್ ಬಾಗಿಲನ್ನು ಮೆಲ್ಲನೆ ತಳ್ಳಿ, ಒಳಗಡೆ ಹೆಜ್ಜೆ ಇಟ್ಟು ಚಿಲಕ ಹಾಕಿದ.

 

ವರ್ಣಾಳ ಕಣ್ಣುಗಳು ದೊಡ್ಡದಾದವು.

“ವೇದ್… ನಿನಗೆ ಹುಚ್ಚಾ? ಈ ಹೊತ್ತಿನಲ್ಲಿ ನನ್ನ ರೂಮಿಗೆ ಯಾಕೆ ಬಂದಿದ್ದೀಯ? ಯಾರಾದರೂ ನೋಡಿದರೆ ಏನು ಅಂದುಕೊಳ್ಳುತ್ತಾರೆ?”

 

“ಡಿಂಪಲ್ ಕೋಪ ಆಮೇಲಿರಲಿ. ಮೊದಲು ಇಲ್ಲಿ ಬಾ.”

 

“ವೇದ್…”

 

“ಬಾ ಅಂದೆ.” ವರ್ಣಾ ಗೊಂದಲದಲ್ಲೇ ಅವನ ಹತ್ತಿರ ಬಂದಳು.

 

ವೇದಾಂತ್ ಅವಳನ್ನು ಹಾಸಿಗೆಯ ಮೇಲೆ ಕೂರಿಸಿದ.

ನಂತರ ತನ್ನ ಕೈಯಲ್ಲಿದ್ದ ದೊಡ್ಡ ಲೋಟವನ್ನು ಅವಳ ಕಡೆ ಚಾಚಿ,

“ಇದನ್ನ ಕುಡಿ.” ಎಂದ.

 

“ಹಾಲಾ ? ಯಾಕೆ?” ಎಂದು ಕಿರಿ ಕಿರಿಯಿಂದ ಕೇಳಿದಳು.

 

ವೇದಾಂತ್ ತನ್ನ ಎಡಗೈಯ ಉಂಗುರದ ಬೆರಳನ್ನು ಅವಳ ಮುಂದೆ ತೋರಿಸುತ್ತಾ ನಗುತ್ತಾ,

“ಇವತ್ತು ತುಂಬಾ ಖುಷಿಯ ದಿನ ಅಲ್ವಾ? ನಿನಗೆ. ಕೊನೆಗೂ ನಿನ್ನ ಆಸೆ ಈಡೇರಿತು. ನನ್ನ ಎಂಗೇಜ್‌ಮೆಂಟ್ ಕೂಡ ಆಯ್ತು. ಅದಕ್ಕೆ ಈ ಖುಷಿಗೆ ಹಾಲು ಕುಡಿ.”

 

ವರ್ಣಾಳ ಮುಖದಲ್ಲಿ ಸಿಟ್ಟು ಮೂಡಿತು.

“ವೇದ್… ಸಾಕು. ತಮಾಷೆ ಮಾಡ್ಬೇಡ. ರಾತ್ರಿ ಈ ಹೊತ್ತಿನಲ್ಲಿ ಹೀಗೆ ನನ್ನ ರೂಮಿನಲ್ಲಿ ಇರೋದು ಸರಿಯಲ್ಲ. ದಯವಿಟ್ಟು ಹೋಗು.”

ಎಂದು ಹೇಳುತ್ತಾ ಎದ್ದು ನಿಂತಳು.

 

ವೇದಾಂತ್ ಹಾಲಿನ ಲೋಟವನ್ನು ಪಕ್ಕದ ಟೇಬಲ್ ಮೇಲಿಟ್ಟು, ಮರುಕ್ಷಣವೇ ವರ್ಣಾಳನ್ನು ಕಬೋರ್ಡ್‌ನತ್ತ ಮೆಲ್ಲನೆ ತಳ್ಳಿ, ಅವಳ ಎರಡೂ ಬದಿಗಳಲ್ಲಿ ತನ್ನ ಕೈಗಳನ್ನಿಟ್ಟು ಸಂಪೂರ್ಣವಾಗಿ ತನ್ನ ಹತೋಟಿಗೆ ತೆಗೆದುಕೊಂಡ. ವರ್ಣಾಗೆ ಅಲುಗಾಡಲೂ ಜಾಗವಿಲ್ಲದಂತೆ ಅವನು ತೀರ ಹತ್ತಿರಕ್ಕೆ ಬಂದಿದ್ದ.

 

ವರ್ಣಾಳ ಉಸಿರಾಟ ವೇಗವಾಯಿತು.

“ವೇದ್… ಏನು ಮಾಡ್ತಿದ್ದೀಯ?”

 

ವೇದಾಂತ್ ತುಂಟ ನಗೆಯೊಂದಿಗೆ ಅವಳನ್ನೇ ನೋಡುತ್ತಾ,

“ನಾನು ಹೋಗ್ತೀನಿ ಡಿಂಪಲ್, ಆದ್ರೆ, ಅದಕ್ಕೂ ಮುಂಚೆ ನಿನಗೆ ಒಂದು ತುಂಬಾ ಮುಖ್ಯವಾದ ವಿಷಯ ಹೇಳಬೇಕು.” ಎಂದವನು ಅವಳನ್ನೇ ದಿಟ್ಟಿಸಿದ.

 

ವರ್ಣಾ ಈಗ ವೇದಾಂತ್ ಎದೆಬಡಿತ ಕೇಳಿಸುವಷ್ಟು ಹತ್ತಿರದಲ್ಲಿದ್ದಳು.

 

ತನ್ನ ಎದೆಬಡಿತ ಜೋರಾಗುತ್ತಿದ್ದರೂ ಅದನ್ನು ತಡೆದುಕೊಳ್ಳುತ್ತಾ, “ವೇದ್… ಏನಾಗಿದೆ ನಿಂಗೆ? ಯಾಕೆ ಹೀಗೆ ಮಾಡ್ತಿದ್ದೀಯಾ?” ಕೇಳಿದಳು.

 

ವೇದಾಂತ್ ಅವಳನ್ನೇ ದಿಟ್ಟಿಸುತ್ತಾ, 

“ಯಾಕೆ ಇಷ್ಟೊಂದು ನರ್ವಸ್ ಆಗ್ತಿದ್ದೀಯಾ ಡಿಂಪಲ್? ನಾನು ಇಷ್ಟು ನಿನ್ನ ಹತ್ತಿರ ಬರೋದು ಇದೇ ಮೊದಲ ಸಲ ಅಲ್ಲವಲ್ಲ” ಎಂದು ಪಿಸುಗುಟ್ಟಿದ.

 

ವರ್ಣಾ ಅವನತ್ತ ಸಿಟ್ಟಿನಿಂದ ನೋಡಿದಳು.

“ವೇದ್… ಸ್ವಲ್ಪ ಮ್ಯಾನರ್ಸ್ ಇಟ್ಕೋ. ನಿನಗೆ ಇವತ್ತು ಎಂಗೇಜ್‌ಮೆಂಟ್ ಆಗಿದೆ. ನೀನು ಈಗ ಸ್ವಾತಿಯ ಫಿಯಾನ್ಸೆ. ಈ ಹೊತ್ತಿನಲ್ಲಿ ಹೀಗೆ ನನ್ನ ರೂಮಿನಲ್ಲಿ ನಿಂತು ಮಾತಾಡೋದು ಸರಿಯಲ್ಲ.”

 

ವೇದಾಂತ್ ನಕ್ಕ.

“ಸರಿ. ಆ ವಿಷಯವೇ ಮಾತಾಡೋಕೆ ಬಂದಿದ್ದೀನಿ.”

 

“ಹಾಗಿದ್ರೆ ಬೇಗ ಹೇಳಿ ಹೋಗು.”

 

“ಹೇಳ್ತೀನಿ…” ಎಂದು ಹೇಳಿ ಕ್ಷಣಕಾಲ ಅವಳನ್ನೇ ನೋಡಿದ.

 

“ಇವತ್ತು ಫೋಟೋಗ್ರಾಫರ್ ನನಗೆ ಸ್ವಾತಿಗೆ ಕಿಸ್ ಮಾಡೋಕೆ ಹೇಳಿದ್ದ. ನೆನಪಿದೆಯಾ?”

 

ವರ್ಣಾಳ ಮುಖದಲ್ಲಿ ಯಾವುದೇ ಭಾವನೆ ಕಾಣಿಸಲಿಲ್ಲ.

 

“ನನಗೆ ಗೊತ್ತಿಲ್ಲ.”

 

“ಅಲ್ಲ. ನೀನು ಅಲ್ಲೇ ಇದ್ದೆ. ತಾನೆ? “

 

“ಇದ್ದೆ. ಆದರೆ ಯಾರು ಏನು ಮಾತಾಡಿದರು ಅಂತ ನಾನು ಕೇಳಿಸಿಕೊಳ್ಳಲಿಲ್ಲ.”

 

ವೇದಾಂತ್ ಅವಳ ಮುಖವನ್ನೇ ಗಮನಿಸುತ್ತಾ ಮುಗುಳ್ನಕ್ಕ.

“ಹೌದಾ? ನಾನಂತೂ ನೀನು ಎಲ್ಲ ಕೇಳಿಸಿಕೊಂಡಿರಬಹುದು ಅಂದುಕೊಂಡಿದ್ದೆ.”

 

ವರ್ಣಾ ಸ್ವಲ್ಪ ಕಿರಿಕಿರಿಯಿಂದ,

“ಅದನ್ನೆಲ್ಲ ಬಿಟ್ಟು ವಿಷಯ ಏನು ಹೇಳು.”

 

ವೇದಾಂತ್ ದೀರ್ಘ ನಿಟ್ಟುಸಿರು ಬಿಟ್ಟ.

“ನಾನು ಯಾಕೆ ಕಿಸ್ ಮಾಡಲಿಲ್ಲ ಗೊತ್ತಾ…?”

 

“ಯಾಕೆ? ಅದರಲ್ಲೇನಿದೆ? ಸ್ವಾತಿ ನಿನ್ನ ಫಿಯಾನ್ಸೆ. ಅವಳಿಗೆ ಮುತ್ತಿಟ್ಟಿದ್ರೆ ಏನಾಗ್ತಿತ್ತು? ಸಮಸ್ಯೆ ಏನು ಇರ್ಲಿಲ್ಲ ತಾನೇ?”

 

ಅವಳಲ್ಲಿನ ಸಣ್ಣ ಅಸಮಾಧಾನ ಅವನರಿವಿಗೆ ಬಾರದೇ ಹೋಗಲಿಲ್ಲ.

 

“ಡಿಂಪಲ್ ‌ಮುತ್ತಿಡೋದು ನನಗೆ ಯಾವತ್ತೂ ಸಮಸ್ಯೆಯೇ ಅಲ್ಲ. ಬೇಕಿದ್ರೆ ಎಲ್ಲರ ಮುಂದೆಯೂ ಕೊಡ್ತೀನಿ. ಆದ್ರೆ, ನನಗೆ ಸಂಬಂಧವೇ ಇಲ್ಲದ ಒಬ್ಬ ಹುಡುಗಿಗೆ ಮುತ್ತಿಡೋಕೆ ಮಾತ್ರ ಆಗಲ್ಲ.” ಎಂದವನು, 

 

“ನನಗೆ ನನ್ನ ಹೆಂಡತಿಗೆ ಮಾತ್ರ ಕಿಸ್ ಕೊಡೋಕೆ, ಅವಳನ್ನು ಮಾತ್ರ ಮುದ್ದಾಡೋಕೆ ಬರುತ್ತೆ. ಬೇರೆ ಯಾರನ್ನೂ ಅಲ್ಲ.” ಎಂದು ತೀರಾ ಅವಳ ಮುಖದ ಹತ್ತಿರ ಹೋಗಿ, ಪಿಸುಮಾತಿಗಿಂತಲೂ ಮೆಲ್ಲಗೆ ಹೇಳಿದ್ದ. 

ವರ್ಣಾ ಮಾತೇ ಬಾರದೆ ಅವನನ್ನೇ ನೋಡುತ್ತ ನಿಂತಳು.

 

“ಏನಾಯ್ತು ಡಿಂಪಲ್? ಯಾಕೆ ಹಾಗೆ ನೋಡ್ತಾ ಇದ್ದೀಯ?” ಎಂದು ಹುಬ್ಬು ಹಾರಿಸಿದ.

 

“ನೋಡು ವೇದಾಂತ್, ನಿಂದೇನಿದ್ರೂ ಸ್ವಾತಿ ಜೊತೆ ಇಟ್ಕೋ. ಇದು ಸರಿ ಅಲ್ಲ.” ಎಂದು ತೋರು ಬೆರಳು ತೋರಿಸಿದರೆ, ಆ ಬೆರಳು ಹಿಡಿದು ಮುತ್ತಿಟ್ಟ. 

 

ಥಟ್ಟನೆ ಕೈ ಹಿಂದೆಗೆದಳು.

 

ವೇದಾಂತ್ ಅವಳ ನಡುಹಿಡಿದು ತನ್ನತ್ತ ಎಳೆದುಕೊಂಡ. ಅವನೆದೆಗೆ ಅಪ್ಪಳಿಸಿದವಳ, ಉಸಿರಾಟದ ವೇಗ ನೂರರ ಗಡಿ ದಾಟಿತ್ತು. ಇಬ್ಬರ ನೋಟ ಬೆರೆತಿತ್ತು. ಕ್ಷಣದಲ್ಲಿ, ಗಾಬರಿಯಲ್ಲಿ ಅರೆಬಿರಿದ ಅವಳ ತುಟಿಗಳ ಮೇಲೆ ತನ್ನ ಹಕ್ಕು ಚಲಾಯಿಸಿಬಿಟ್ಟಿದ್ದ. 

ವರ್ಣಾ ಅವನಿಂದ ಬಿಡಿಸಿಕೊಂಡು ದೂರ ಹೋಗಲು ಪ್ರಯತ್ನಿಸಿದರೆ, ವೇದಾಂತ್ ಅವಳಿಗೆ ಚೇತರಿಸಿಕೊಳ್ಳಲೂ ಅವಕಾಶ ಕೊಡಲಿಲ್ಲ. ಅವಳನ್ನು ಬಿಡುವ ಸಣ್ಣ ಮುನ್ಸೂಚನೆಯನ್ನೂ ತೋರಿಸದೇ, ಸೊಂಟದ ಮೇಲಿದ್ದ ಅವನ ಹಿಡಿತವನ್ನು ಮತ್ತಷ್ಟು ಬಿಗಿ ಮಾಡುತ್ತ, ಸಂಪೂರ್ಣವಾಗಿ ಆ ಕ್ಷಣದಲ್ಲಿ ಮುಳುಗಿ ದಣಿವರಿಯದೆ ಚುಂಬಿಸಿದ್ದ.

 

ಉಸಿರಿಗೆ ಉಸಿರು ಬೆರೆಯುತ್ತಿರುವ ಆ ಕ್ಷಣದಲ್ಲಿ, ಅವನ ಪ್ರೀತಿ ಅವಳನ್ನು ಸಂಪೂರ್ಣವಾಗಿ ಆವರಿಸಿ, ಸೋತು ಹೋದಳು. ಮೈಮರೆತು, ಆ ಮಧುರ ಅನುಭೂತಿಯಲ್ಲಿ ಕರಗಿಹೋದಳು ಹುಡುಗಿ.

 

ಕೆಲ ಕ್ಷಣಗಳ ನಂತರ, ವೇದಾಂತ್ ಮೆಲ್ಲನೆ ಅವಳ ತುಟಿಗಳನ್ನು ಬಿಟ್ಟು ಹಿಂದೆ ಸರಿದ. ರಂಗೇರಿದ್ದ ಅವಳ ಕೆನ್ನೆಗಳು, ನಾಚಿಕೆಯಿಂದ ನೀರಾಗಿ ಹೋಗಿದ್ದಕ್ಕೆ ಸಾಕ್ಷಿಯಾಗಿದ್ದವು.

 

ವೇದಾಂತ್ ಅವಳನ್ನೇ ನೋಡುತ್ತಾ, “ಏನಾಯ್ತು ಡಿಂಪಲ್?” ಎಂದು ಮೃದುವಾಗಿ ಕೇಳಿದವ, ತೋರು ಬೆರಳಿನಿಂದ ಅವಳ ಎತ್ತಿ ಹಣೆಗೊಂದು ಮುತ್ತಿಟ್ಟ.

 

ಮೌನ ಗೌರಿಯಾದವಳು ತಲೆ ತಗ್ಗಿಸಿಕೊಂಡು ನಿಂತುಬಿಟ್ಟಳು.

ಅವಳು ನಿಜ ಪ್ರಪಂಚಕ್ಕೆ ಬರಲು ಕೆಲವು ಸೆಕೆಂಡುಗಳು ಬೇಕಾದವು.  

 

“ಆ ಫೋಟೋಗ್ರಾಫರ್ ನನ್ನ ಹತ್ತಿರ ಒಂದು ಫೋಟೋಗಷ್ಟೇ ಕೇಳಿದ್ದ. ಅವನೇನಾದರೂ ಈಗ ಇಲ್ಲಿಗೆ ಬಂದಿದ್ದರೆ, ಅವನಿಗೆ ಫೋಟೋ ಅಲ್ಲ. ಒಂದು ಉದ್ದನೆಯ ವೀಡಿಯೋನೇ ಸಿಗ್ತಿತ್ತು, ಅಲ್ವಾ?” ವೇದಾಂತ್ ತುಂಟತನದಿಂದ ಚೇಷ್ಟೆ ಮಾಡಿದ.

 

“ವೇದ್…! ಕುಡ್ಕೊಂಡು ಬಂದಿದ್ದೀಯಾ? ನಿನಗೆ ಇವತ್ತು ಎಂಗೇಜ್‌ಮೆಂಟ್ ಆಗಿದೆ ಅನ್ನೋದು ಮರೆತು ಹೋಗಿದೆಯಾ ಹೇಗೆ? ಹೀಗೆಲ್ಲಾ ಮಾಡೋದು ತಪ್ಪು ಅಂತ ಅನಿಸೋದಿಲ್ಲವಾ?” ಎಂದು ವರ್ಣಾ ನಾಚಿಕೆ ಮತ್ತು ಕೋಪದ ನಡುವೆ ಅವನತ್ತ ನೋಡಿದಳು.

 

“ಈಗಷ್ಟೇ ನಿನಗೆ ಕಿಸ್ ಮಾಡಿದ್ದೀನಲ್ಲ… ಇನ್ನೂ ನಿನಗೆ ನಾನು ಕುಡಿದಿಲ್ಲ ಅನ್ನೋ ಕನ್ಫರ್ಮೇಷನ್ ಸಿಗಲಿಲ್ವಾ? ಓಕೆ… ನಾನೇ ಮತ್ತೊಮ್ಮೆ ಕನ್ಫರ್ಮ್ ಮಾಡ್ತೀನಿ” ಎಂದು ಅವಳ ಮುಖವನ್ನು ಬೊಗಸೆಯಲ್ಲಿ ಹಿಡಿದುಕೊಂಡ ವೇದಾಂತ್, ಕ್ಷಣಕಾಲವೂ ತಡಮಾಡದೆ ಮತ್ತೊಮ್ಮೆ ಅವಳ ತುಟಿಗಳನ್ನು ತನ್ನದಾಗಿಸಿಕೊಂಡ.

 

ಆ ಕ್ಷಣಕ್ಕೆ ವರ್ಣಾಳ ನಾಚಿಕೆ ಇನ್ನಷ್ಟು ಹೆಚ್ಚಾಗಿ, ಅವಳ ಬೆರಳುಗಳು ಅವನ ಶರ್ಟ್‌ನ್ನು ಬಿಗಿಯಾಗಿ ಮುಷ್ಟಿಯಲ್ಲಿ ಹಿಡಿದುಕೊಂಡವು.

 

ಕ್ಷಣದ ನಂತರ, ಅವಳನ್ನು ಬಿಟ್ಟು ಒಲವಿನಿಂದ ನೋಡತೊಡಗಿದ.

 

“ನಿನಗೆ ಅರ್ಥ ಆಗ್ತಿಲ್ವಾ ವೇದಾಂತ್? ನಿನಗೆ ಎಂಗೇಜ್‌ಮೆಂಟ್ ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ನೀನು ಸ್ವಾತಿಯ ಗಂಡ ಆಗ್ತೀಯ. ತಲೆಕೆಟ್ಟವರ ತರ ಮಾತಾಡ್ಬೇಡ. ನಮ್ಮಿಬ್ಬರ ಅಧ್ಯಾಯ ಮುಗಿದು ಹೋಗಿದೆ. ಅದನ್ನ ಒಪ್ಪಿಕೋ” ಎಂದು ನಾಚಿಕೆಯಲ್ಲಿ ಹೇಳಿದರೆ,

 

“ಡಿಂಪಲ್…ನೀನು ಇಷ್ಟು ನಾಚ್ಕೊಳ್ತಾ ಇದ್ರೆ, ನಾನು ಇಲ್ಲಿಂದ ಹೇಗೆ ಹೋಗಲಿ ಹೇಳು? ನನ್ನ ಕಂಟ್ರೋಲ್ ಟೆಸ್ಟ್ ಮಾಡ್ಬೇಡ ಡಿಂಪಲ್. ಮದುವೆಗೆ ಮುಂಚೆಯೇ ನನ್ನನ್ನು ಕೆಟ್ಟ ಹುಡುಗನನ್ನಾಗಿ ಮಾಡ್ಬಿಡಬೇಡ” ಎಂದು ರಾಗವಾಗಿ ಹೇಳಿದವನು,

 

“ಎಂಗೇಜ್‌ಮೆಂಟ್ ಅಂದ್ರೆ ಮದುವೆ ಅಲ್ಲ. ಅದೇ ಲೆಕ್ಕವಾಗಿದ್ದರೆ, ಸುಭದ್ರೆ ಮತ್ತು ಅರ್ಜುನನ ಮದುವೆಯೇ ಆಗುತ್ತಿರಲಿಲ್ಲ. ಅಭಿಮನ್ಯು ನಮಗೆ ಸಿಕ್ತಾನೆ ಇರಲಿಲ್ಲ” ಎಂದ.

 

ಮೀಸೆಯಡಿಯಲ್ಲಿನ ತುಂಟ ನಗು ಹಾಗೆಯೇ ಉಳಿದಿತ್ತು.

 

“ಛೀ! ವೇದಾಂತ್…ಏನೇನೋ ಮಾತಾಡಬೇಡ. ಈ ಪುರಾಣ, ಇತಿಹಾಸ ಎಲ್ಲ ನನ್ನ ಹತ್ತಿರ ಹೇಳೋಕೆ ಬರಬೇಡ.” ವರ್ಣಾ ಅವನತ್ತ ಕೋಪದಿಂದ ನೋಡಿದಳು.

 

“ಡಿಂಪಲ್, ಪುರಾಣ ಆಗಿರಲಿ, ಇತಿಹಾಸ ಆಗಿರಲಿ. ಪ್ರೀತಿ ಮಾತ್ರ ಯಾವ ಕಾಲದಲ್ಲೂ ಒಂದೇ. ಹೆಸರುಗಳು ಬದಲಾಗುತ್ತವೆ, ಕಾಲ ಬದಲಾಗುತ್ತೆ. ಆದರೆ ಪ್ರೀತಿಸುವ ಹೃದಯ ಮಾತ್ರ ಬದಲಾಗಲ್ಲ.”

 

ವರ್ಣಾ ಬೇಸರದಿಂದ ನಿಟ್ಟುಸಿರು ಬಿಟ್ಟಳು.

“ಸಾಕು ವೇದಾಂತ್… ಮತ್ತೆ ನಿನ್ನ ವೇದಾಂತ ಶುರು ಮಾಡ್ಬೇಡ.”

 

ಆ ಮಾತು ಕೇಳುತ್ತಿದ್ದಂತೆ ವೇದಾಂತ್‌ನ ತುಟಿಗಳಲ್ಲಿ ಸಣ್ಣ ನಗು ಮೂಡಿತು. ಅವಳನ್ನೇ ನೋಡುತ್ತ ನಿಂತ.

 

“ಗೊತ್ತಾ ಡಿಂಪಲ್… ಇದೇ ನಿನ್ನನ್ನು ನಾನು ಮಿಸ್ ಮಾಡ್ಕೊಳ್ತಾ ಇದ್ದೆ. ಹೀಗೆ ನನ್ನ ಜೊತೆ ಜಗಳ ಆಡೋ ಡಿಂಪಲ್. ನನ್ನ ಮಾತಿಗೆ ತಿರುಗೇಟು ಕೊಡೋ ಡಿಂಪಲ್. ನನಗೆ ಅವಳೇ ಬೇಕಿತ್ತು. ಯಾಕೆ ಹೀಗೆ ಮಾಡ್ತಿದ್ದೀಯ ಡಿಂಪಲ್…? ಯಾಕೆ ನನ್ನಿಂದ ಇಷ್ಟು ದೂರ ಹೋಗ್ತಿದ್ದೀಯ…? ಪ್ಲೀಸ್… ನನ್ನಿಂದ ದೂರ ಹೋಗ್ಬೇಡ.”

 

“ವೇದ್… ಎಷ್ಟು ಸಲ ಇದೇ ವಿಷಯ ಮಾತಾಡ್ತೀಯಾ? ಆಗಬೇಕಿದ್ದದ್ದು ಆಗಿಬಿಟ್ಟಿದೆ. ಈಗ ದಯವಿಟ್ಟು ಇಲ್ಲಿಂದ ಹೋಗು.”

ಎಂದು ಅವನನ್ನು ದೂರ ಸರಿಸಲು ಪ್ರಯತ್ನಿಸಿದಳು.

 

“ಸರಿ ಡಿಂಪಲ್… ಈಗ ಹೋಗ್ತೀನಿ.” ಎಂದವನು,  ಅವಳ ಪುಟ್ಟ ಕೈಗಳ ಮೇಲೆ ತನ್ನ ಕೈ ಇರಿಸಿ, ಬೆರಳುಗಳಲ್ಲಿ ತನ್ನ ಬೆರಳುಗಳನ್ನು ಪೋಣಿಸಿ, ಬಿಗಿಯಾಗಿ ಹಿಡಿದು, ಅವಳ ಕೊರಳ ತುಂಬಾ ಅವನ ಬಿಸಿ ಉಸಿರನ್ನು ಹರಿಸಿದ. ಅವನ ಬೆಚ್ಚನೆಯ ಸ್ಪರ್ಶ ಅವಳ ಮೈಯನ್ನು ತಾಕುತ್ತಿದ್ದಂತೆ ವರ್ಣಾಳ ಇಡೀ ದೇಹ ಕಂಪಿಸಿತು.

 

“ಆದ್ರೆ, ಟೈಮ್ ಯಾವಾಗಲೂ ಇದೇ ರೀತಿ ಇರಲ್ಲ.” ಎಂದು ಹೇಳಿ ಅಲ್ಲಿಂದ ನಡೆದ.

 

ಕೆಲ ಕ್ಷಣ ಅಲ್ಲೇ ನಿಶ್ಚಲವಾಗಿ ನಿಂತಿದ್ದವಳು, ಎಲ್ಲ ಭಾವನೆಗಳನ್ನು ಹೊರ ಹಾಕಲು, ಟೇಬಲ್ ಮೇಲಿದ್ದ ಹಾಲಿನ ಲೋಟವನ್ನು ಕೈಗೆತ್ತಿಕೊಂಡಳು.

 

ಅಷ್ಟರಲ್ಲಿ,

 

“ಡಿಂಪಲ್, ಹಾಲನ್ನ ಮಾತ್ರ ಚೆಲ್ಲಬೇಡ. ಕ್ಲೀನ್ ಮಾಡೋದು ತುಂಬಾ ಕಷ್ಟ.” ಎಂದು ತುಂಟ ನಗೆಯೊಂದನ್ನು ಬೀರಿದವನು, ಅವಳ ಉತ್ತರಕ್ಕೂ ಕಾಯದೆ ಅಲ್ಲಿಂದ ನಡೆದ.

 

ವರ್ಣಾ ಅಸಹಾಯಕಳಂತೆ ತಲೆಯಾಡಿಸಿ, ಕೈಯಲ್ಲಿದ್ದ ಲೋಟವನ್ನು ಮತ್ತೆ ಟೇಬಲ್ ಮೇಲೆ ಇಟ್ಟು, ಆಳವಾಗಿ ಉಸಿರೆಳೆದು ಕಣ್ಣು ಮುಚ್ಚಿಕೊಂಡು,

 

“ನನ್ನ ಬಗ್ಗೆ… ಅವನಿಗೆ ಎಲ್ಲವೂ ಗೊತ್ತು…” ಎಂದು ತನ್ನಷ್ಟಕ್ಕೆ ತಾನೇ ಪಿಸುಗುಟ್ಟಿದವಳು ದಿಂಬಿಗೆ ತಲೆ ಒರಗಿಸಿದಳು. ಕಣ್ಣೀರು ಮೌನವಾಗಿ ಜಾರಲು ಶುರು ಮಾಡಿತ್ತು.

 

———————————❤️———————————

 

ರೂಮಿಗೆ ಬಂದ ವೇದಾಂತ್ ಬಾಗಿಲು ಮುಚ್ಚಿ, ಹಾಸಿಗೆಯ ಮೇಲೆ ಉರುಳಿದ. ಬೆಳಗ್ಗೆಯಿಂದ ನಡೆದ ಪ್ರತಿಯೊಂದು ಘಟನೆ ಅವನ ಕಣ್ಣ ಮುಂದೆ ಒಂದೊಂದಾಗಿ ಹಾದುಹೋಗತೊಡಗಿತು.

 

ನಿಶ್ಚಿತಾರ್ಥ..ಸ್ವಾತಿ…ವರ್ಣಾಳ ಕಣ್ಣೀರು…ಅವಳ ಮುನಿಸು…

ಅವಳ ನಾಚಿಕೆ…ಅವಳ ನಗು…ಎಲ್ಲವೂ ಮನಸ್ಸಿನಲ್ಲಿ ಬೆರೆತುಹೋಗಿತ್ತು. ಅರಿವಿಲ್ಲದೆಯೇ, ಅವನ ಕೈ,  

ಬೆರಳಲ್ಲಿದ್ದ ಉಂಗುರವನ್ನು ತೆಗೆದು ಹಾಕಿ ಮಾಡುತಲಿತ್ತು.

ಕೊನೆಗೆ ಒಂದು ದೀರ್ಘ ನಿಟ್ಟುಸಿರು ಬಿಟ್ಟು, ಉಂಗುರವನ್ನು ತೆಗೆದು ಟೇಬಲ್ ಮೇಲಿಟ್ಟ.

 

ಅದನ್ನೇ ನೋಡುತ್ತಾ,

“ಏನಾಯ್ತು ನಮಗೆ ಡಿಂಪಲ್…? ಒಂದು ಕಾಲದಲ್ಲಿ ಮಾತಾಡದೆ ಇದ್ದರೂ ಒಬ್ಬರ ಮನಸ್ಸನ್ನೊಬ್ಬರು ಅರ್ಥ ಮಾಡ್ಕೊಳ್ಳುತ್ತಿದ್ದ ನಾವು… ಇವತ್ತು ಮಾತಾಡ್ತಾ ಇದ್ದರೂ ಒಬ್ಬರನ್ನೊಬ್ಬರು ತಲುಪೋಕಾಗ್ತಿಲ್ಲ. ಎಷ್ಟು ಸುಂದರವಾಗಿತ್ತು ಅಲ್ವಾ ನಮ್ಮ ಪ್ರಪಂಚ…? ನೀನು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಸಾಕಿತ್ತು. ನಾನು ನಿನ್ನ ಮನಸ್ಸು ಓದುತ್ತಿದ್ದೆ. ಇವತ್ತು, ಅದೇ ಕಣ್ಣುಗಳಲ್ಲಿ ನನ್ನ ಮೇಲಿನ ಪ್ರೀತಿಗಿಂತ ನೋವೇ ಹೆಚ್ಚು ಕಾಣಿಸ್ತಿದೆ. ಆದ್ರೂ, ನನಗೆ ಗೊತ್ತು ಡಿಂಪಲ್, ನಮ್ಮ ಕಥೆ ಇಲ್ಲಿಗೆ ಮುಗಿಯೋದಲ್ಲ ” ಎಂದು ಪಿಸುಗುಟ್ಟಿದ.

 

ಪ್ರೀತಿ ವಿಚಿತ್ರ, ಒಮ್ಮೆ ಎರಡು ಮನಸ್ಸುಗಳು ಒಂದಾಗಿಬಿಟ್ಟರೆ, ಅವರನ್ನು ದೂರ ಮಾಡುವುದು ಸಮಯಕ್ಕೆ ಸಾಧ್ಯವಾಗಬಹುದು. ಪರಿಸ್ಥಿತಿಗೆ ಸಾಧ್ಯವಾಗಬಹುದು. ಆದರೆ ಪ್ರೀತಿಯನ್ನೇ ಅಳಿಸಿ ಹಾಕುವುದು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೇ ವಿರಹ ನೋವನ್ನು ಕೊಡುತ್ತದೆ. ಆದರೆ ಅದೇ ವಿರಹ ಮತ್ತೆ ಒಂದಾಗುವ ಭರವಸೆಯನ್ನೂ ಬದುಕಿಸಿರುತ್ತದೆ. ವಿರಹ ಕೆಲವರ ಬಳಿ ಅದು ಮರುಮಿಲನದ ಕನಸಾಗಿ ಮಾತನಾಡಿದರೆ, ಇನ್ನೂ ಕೆಲವರ ಬಳಿ ತಾವು ಪ್ರೀತಿಸಿದ ಜೀವ ಎಲ್ಲೋ ಒಂದು ಕಡೆ ನೆಮ್ಮದಿಯಿಂದ, ಸಂತೋಷವಾಗಿ ಬದುಕುತ್ತಿದೆ ಎಂಬ ಮೌನದ ಸಮಾಧಾನವಾಗಿ ಮಾತಾಡುತ್ತದೆ.

 

ವೇದಾಂತ್‌ನ ವಿರಹ ಮಾತ್ರ ಇನ್ನೂ ಮರುಮಿಲನದ ಕನಸನ್ನೇ ತನ್ನ ಉಸಿರಾಗಿಸಿಕೊಂಡು ಬದುಕುತ್ತಿತ್ತು.

 

ನಿದ್ರಾದೇವಿ ಇಬ್ಬರ ಹತ್ತಿರವೂ ಸುಳಿಯಲಿಲ್ಲ. ಹಳೆಯ ನೆನಪುಗಳ ದಿನಗಳ ಲೋಕ ತೆರೆದಿತ್ತು.

 

(ಮುಂದುವರೆಯುವುದು ❤️)

 

———————————❤️———————————

ಪಾತ್ರ ಪರಿಚಯ ❤️

ಸಾಮಾನ್ಯವಾಗಿ ನಾನು ಪತ್ರ ಪರಿಚಯ ಮಾಡಿಕೊಡುವುದಿಲ್ಲ. ಕಥೆ ಸಾಗುತ್ತಿದ್ದಂತೆ ಗೊತ್ತಾಗಬೇಕು ಅಂತ. ಆದರೆ ಇಲ್ಲಿ ತುಂಬಾ ಪಾತ್ರಗಳಿವೆ. ಹಾಗಾಗಿ ಸುಲಭ ಆಗಲಿ ಅಂತ ಹೇಳುತ್ತಾ ಇರೋದು. 🥰

 

ರೇವಂತ್ ಫ್ಯಾಮಿಲಿ:

ಉಮಾದೇವಿ & ರಾಜಾರಾವ್ –  ಮನೆಯ ಹಿರಿಯರು.

 

ರೇವಂತ್ & ಚಿತ್ರ – ಗಂಡ-ಹೆಂಡತಿ.

ಅವರಿಗೆ ಇಬ್ಬರು ಮಕ್ಕಳು – ವರ್ಣ & ವಿಖ್ಯಾತ್ (ಅವಳಿ ಮಕ್ಕಳು).

 

ಚಿನ್ಮಯಿ & ಸಾತ್ವಿಕ್ – ಗಂಡ-ಹೆಂಡತಿ.

ಅವರಿಗೆ ಇಬ್ಬರು ಮಕ್ಕಳು – ವೇದಾಂತ್ & ವಿಂಧ್ಯ.

(ವೇದಾಂತ್ ಅಣ್ಣ.)

 

ಚಿನ್ಮಯಿ ಮತ್ತು ರೇವಂತ್ ಒಂದೇ ಮನೆಯಲ್ಲಿ ವಾಸಿಸುತ್ತಾರೆ.

 

ಚಿನ್ಮಯಿ ಹೆಣ್ಣುಮಗಳಾದರೂ, ಮದುವೆಯಾದ ನಂತರವೂ ತವರು ಮನೆಯಲ್ಲೇ ಉಳಿದುಕೊಂಡಿದ್ದಾಳೆ.

ಸಾತ್ವಿಕ್ ಮತ್ತು ರೇವಂತ್ ಕಾಲೇಜು ದಿನಗಳಿಂದಲೂ ಆತ್ಮೀಯ ಸ್ನೇಹಿತರು.

 

ವೇದಾಂತ್ & ವರ್ಣ –  ನಮ್ಮ ಕಥೆಯ ನಾಯಕ ಮತ್ತು ನಾಯಕಿ ♥️

 

 

ಮತ್ತೊಂದು ಕುಟುಂಬ:

 

ನಿತ್ಯ & ದೇವ್ ❤️

 

ಮೀನಾಕ್ಷಿ & ನಾರಾಯಣ್ – ಮನೆಯ ಹಿರಿಯರು.

ದೇವ್ – ಅವರ ಮಗ.

ನಿತ್ಯ –  ದೇವ್‌ನ ಹೆಂಡತಿ.

 

ಅವರಿಗೆ ಒಬ್ಬಳು ಮಗಳು – ಆರುಷಿ.

 

ಇವರು ರೇವಂತ್ ಫ್ಯಾಮಿಲಿ ಫ್ರೆಂಡ್ಸ್

 

———–

 

ಇನ್ನೂ ಸ್ವಾತಿ ವೇದಾಂತ್ ಪಕ್ಕದ ಮನೆ ಹುಡುಗಿ…🫣

 

ಇಷ್ಟೇ… 😊❤️

 

ಕಥೆ ಓದುವಾಗ ಯಾವುದೇ ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲ. ಎಲ್ಲಾ ಪಾತ್ರಗಳು ಮತ್ತು ಅವರ ಸಂಬಂಧಗಳು ಮೇಲಿನಂತೆಯೇ ಇರುತ್ತವೆ. ❤️

 

ಹೇಗಿತ್ತು ಮೊದಲ ಸಂಚಿಕೆ.. ಅಭಿಪ್ರಾಯ ತಿಳಿಸುವುದನ್ನು ಮರೆಯಬೇಡಿ.

ಪ್ರೀತಿಯಿಂದ ಮೌನಿ ♥️