ಮಧುರ ಪ್ರೇಮ 💕 – 2
ಮಧುರ ಪ್ರೇಮ 💕 – ೨
ಸಂಜೆಯ ಸಮಯ. ಬೆಂಗಳೂರಿನ ಮನೆಯ ಹಜಾರದಲ್ಲಿ ಎಲ್ಲರೂ ಒಟ್ಟಾಗಿ ಕುಳಿತಿದ್ದಾರೆ. ರಾಜಾರಾವ್ ಪೇಪರ್ ಓದುತ್ತಿದ್ದರೆ, ರೇವಂತ್ ಮತ್ತು ಸಾತ್ವಿಕ್ ಏನೋ ಚರ್ಚಿಸುತ್ತಿದ್ದಾರೆ. ಉಮಾದೇವಿ ಟಿವಿಯಲ್ಲಿ ಮಗ್ನರಾಗಿದ್ದರು. ಚಿತ್ರಾ ಮತ್ತು ಚಿನ್ಮಯಿ ಅಡುಗೆ ಮನೆಯಲ್ಲಿದ್ದಾರೆ. ಎಲ್ಲವೂ ಶಾಂತವಾಗಿರುವಾಗಲೇ ಹಜಾರದ ಒಂದು ಮೂಲೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ನಡುವೆ ಜೋರಾದ ಕಿರುಚಾಟ ಶುರುವಾಯಿತು.
“ಏಯ್… ಬಿಡು ನನ್ನನ್ನ! ಅದು ನಂದು ಅಂದೆ ಅಲ್ವಾ!”
ವರ್ಣಳ ಹಠಮಾರಿ ಧ್ವನಿ ಇಡೀ ಮನೆಯಲ್ಲಿ ಪ್ರತಿಧ್ವನಿಸಿತು.
ಎಲ್ಲರ ಗಮನ ತಕ್ಷಣ ಆ ಕಡೆ ಹೋಯಿತು. ಅಲ್ಲಿ ವೇದಾಂತ್ ಮತ್ತು ವರ್ಣ ಒಬ್ಬರನ್ನೊಬ್ಬರು ಗಟ್ಟಿಯಾಗಿ ಹಿಡಿದುಕೊಂಡು ಜಗಳವಾಡುತ್ತಿದ್ದರು. ವೇದಾಂತ್ ವರ್ಣಳ ಜುಟ್ಟನ್ನು ಗಟ್ಟಿಯಾಗಿ ಹಿಡಿದು ಎಳೆಯುತ್ತಿದ್ದರೆ, ವರ್ಣ ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ವೇದಾಂತ್‌ನ ಜುಟ್ಟನ್ನೇ ಎಳೆದು ಟಗ್-ಆಫ್-ವಾರ್ ಮಾಡುತ್ತಿದ್ದಳು. ಪಕ್ಕದಲ್ಲೇ ಕುಳಿತಿದ್ದ ಸ್ವಾತಿ ಮತ್ತು ವಿಖ್ಯಾತ್ ಏನೂ ಮಾಡಲಾಗದೆ ಆ ಜಗಳವನ್ನು ಮೌನವಾಗಿ ನೋಡುತ್ತಿದ್ದರು.
“ವೇದಾಂತ್! ವರ್ಣ! ಏನಿದು? ಅವನನ್ನು ಬಿಡು ವರ್ಣ” ರೇವಂತ್ ಗಾಬರಿಯಿಂದ ಕೂಗಿದ.
ಕೋಪದಲ್ಲಿದ್ದ ವರ್ಣ,
“ನಾನು ಬಿಡಲ್ಲ! ಇವನು ನನ್ನ ಫೇವರೆಟ್ ಚಾಕೊಲೇಟ್ ತಿಂದಿದ್ದಾನೆ!” ಎಂದು ವೇದಾಂತ್ ಜುಟ್ಟನ್ನು ಇನ್ನಷ್ಟು ಜೋರಾಗಿ ಎಳೆದಳು.
“ಅದು ನನ್ನ ಚಾಕೊಲೇಟ್! ನೀನು ಸುಳ್ಳು ಹೇಳ್ತಿದ್ದೀಯಾ!” ವೇದಾಂತ್ ಕಿರುಚಿದ.
ರೇವಂತ್ ಸಾತ್ವಿಕ್ ಅವರಿಬ್ಬರನ್ನು ಬಿಡಿಸುವಷ್ಟರಲ್ಲಿ,
ವರ್ಣಳಿಗೆ ಎರಡು ಪೆಟ್ಟು ಬಿದ್ದಿತ್ತು.
“ವರ್ಣ! ಬಿಡು ಅವನನ್ನ!” ಎಂಬ ಬೈಗುಳದ ಜೊತೆಗೆ.
ಪೆಟ್ಟು ಬಿದ್ದ ತಕ್ಷಣ ವರ್ಣ ಆಘಾತದಿಂದ ವೇದಾಂತ್‌ನನ್ನು ಬಿಟ್ಟು ತಬ್ಬಿಬ್ಬಾಗಿ ನಿಂತು ಅಮ್ಮನನ್ನು ನೋಡಿದಳು.
ಚಿತ್ರಾ ಅಷ್ಟಕ್ಕೇ ಬಿಡದೆ,
“ದೊಡ್ಡವರ ಮೇಲೆ ಕೈ ಮಾಡ್ತೀಯಾ? ಬುದ್ಧಿ ಇಲ್ವಾ ನಿನಗೆ? ವೇದಾಂತ್ ಜೊತೆ ಹೇಗೆ ಇರಬೇಕು ಅಂತ ನಿನಗೆ ಎಷ್ಟು ಸಲ ಹೇಳಿಕೊಟ್ಟಿದ್ದೀನಿ?” ಎಂದು ಗದರಿಸಿದಳು.
ವರ್ಣಳ ಕಣ್ಣಲ್ಲಿ ನೀರು ತುಂಬಿಕೊಂಡಿದ್ದನ್ನು ನೋಡಿ ಉಮಾದೇವಿ ಓಡಿ ಬಂದು ಮಗುವನ್ನು ಅಪ್ಪಿಕೊಂಡರು.
“ಅಯ್ಯೋ ಚಿತ್ರಾ, ಯಾಕೆ ಪುಟ್ಟಿಗೆ ಅಷ್ಟೊಂದು ಹೊಡಿತೀಯಾ? ಬಿಡು ಅವಳನ್ನ, ಮಕ್ಕಳು ಅಂದಮೇಲೆ ಹೀಗೆ ಜಗಳ ಆಡೋದಿಲ್ವಾ?”
ಚಿತ್ರಾ ಸಿಟ್ಟಿನಿಂದ ಅತ್ತೆಯ ಕಡೆ ತಿರುಗಿ,
“ನೋಡಿ ಅತ್ತೆ, ನಿಮ್ಮಿಂದಲೇ ಇವಳು ಇಷ್ಟೊಂದು ಹಾಳಾಗಿರೋದು. ನೀವು ಪ್ರತಿಯೊಂದಕ್ಕೂ ಅವಳನ್ನ ಸಪೋರ್ಟ್ ಮಾಡ್ತೀರಿ ಅಂತಲೇ ಇವಳಿಗೆ ಅತಿಯಾದ ಅಹಂಕಾರ ಬಂದಿದೆ” ಎಂದಳು.
ರೇವಂತ್ ನಕ್ಕು ಚಿತ್ರಾಳನ್ನು ಸಮಾಧಾನಿಸಲು ಹೋದ.
“ಚಿತ್ರಾ, ಬಿಡು… ಮಕ್ಕಳು ಅಲ್ವಾ, ಅವರಷ್ಟಕ್ಕೆ ಅವರು ಸರಿ ಮಾಡ್ಕೊಳ್ತಾರೆ”
ಆದರೆ ಚಿತ್ರಾ ವರ್ಣಳ ಕಡೆ ಬೆರಳು ತೋರಿಸಿ ಎಚ್ಚರಿಸಿದಳು, “ಇನ್ನೊಂದು ಸಲಿ ನೀನು ವೇದಾಂತ್ ಜೊತೆ ಹೀಗೆ ಕಿತ್ತಾಡಿದ್ರೆ ಚಾಕೊಲೇಟ್ ಕೊಡೋದನ್ನೇ ನಿಲ್ಲಿಸಿಬಿಡ್ತೀನಿ, ನೆನಪಿಟ್ಟುಕೊ!”
ಇತ್ತ ಚಿನ್ಮಯಿ ವೇದಾಂತ್‌ನನ್ನು ಹತ್ತಿರ ಕರೆದು,
“ವೇದ್, ನೀನು ಈಗ ಫಿಫ್ತ್ ಸ್ಟ್ಯಾಂಡರ್ಡ್ ಅಲ್ವಾ? ನೀನು ದೊಡ್ಡವನು, ಅವಳು ಇನ್ನೂ ಚಿಕ್ಕವಳು. ಅವಳ ಜೊತೆ ಜಗಳ ಮಾಡಬಾರದು, ನೀನೇ ಸಮಾಧಾನ ಮಾಡ್ಕೋಬೇಕಿತ್ತು” ಎಂದು ಪ್ರೀತಿಯಿಂದಲೇ ಬುದ್ಧಿ ಹೇಳಿದಳು.
ವೇದಾಂತ್ ಸಿಟ್ಟಿನಿಂದ ವರ್ಣಳನ್ನು ನೋಡುತ್ತಿದ್ದರೂ, ಅಮ್ಮನ ಮಾತಿಗೆ ಸುಮ್ಮನಾಗಿ ಮುಖ ತಿರುಗಿಸಿಕೊಂಡು ನಿಂತ. ಮನೆಯಲ್ಲಿ ಸದ್ಯಕ್ಕೆ ಯುದ್ಧ ಮುಗಿದು ಶಾಂತಿ ನೆಲಸಿತ್ತು.
ಸ್ವಲ್ಪ ಸಮಯದ ನಂತರ ಮನೆಯಲ್ಲಿ ವಾತಾವರಣ ತಿಳಿಯಾಯಿತು. ವೇದಾಂತ್ ಒಂದು ಕಡೆ ಕುಳಿತು ಹೋಂವರ್ಕ್ ಮಾಡುತ್ತಿದ್ದರೆ, ವರ್ಣ ತನ್ನ ಹೊಸ ಗೊಂಬೆಯ ಜೊತೆ ಆಟವಾಡುತ್ತಿದ್ದಳು. ಹೋಂವರ್ಕ್ ಮಾಡುತ್ತಿದ್ದ ವೇದಾಂತ್ ತಲೆ ಎತ್ತಿ ವರ್ಣಳನ್ನೇ ನೋಡಿದ.
“ವರ್ಣ, ಆ ಗೊಂಬೆ ನಿಂದಾ?”
ವರ್ಣ ಗೊಂಬೆಗೆ ಒಂದು ಮುತ್ತು ಕೊಟ್ಟು ಪ್ರೀತಿಯಿಂದ ತಬ್ಬಿಕೊಂಡು,
“ಹೂಂ… ಇದು ನಂದು. ಇದರ ಹೆಸರು ಡಿಂಪಲ್!” ಎನ್ನುತ್ತಾ ಮುದ್ದಾಗಿ ನಕ್ಕಳು.
ಅವಳು ನಕ್ಕಾಗ ಕೆನ್ನೆಯ ಮೇಲೆ ಬೀಳುವ ಆ ಸುಂದರವಾದ ಗುಳಿ ಇಡೀ ಮುಖಕ್ಕೆ ಒಂದು ಕಳೆ ನೀಡುತ್ತಿತ್ತು.
ಅವಳ ನಗು ನೋಡಿ ವೇದಾಂತ್ ಮುಖದಲ್ಲೂ ಮಂದಹಾಸ ಮೂಡಿತು.
“ಓಹೋ… ಇದು ನಿನ್ನ ಡಿಂಪಲ್ ಆದ್ರೆ, ನೀನು ನನ್ನ ಡಿಂಪಲ್!” ಎಂದು ರಾಗವಾಗಿ ಹೇಳಿ, ಹತ್ತಿರ ಹೋದವನೇ ತನ್ನ ತೋರು ಬೆರಳಿನಿಂದ ಅವಳ ಕೆನ್ನೆಯ ಮೇಲಿನ ಆ ಗುಳಿಯನ್ನು ಮೆಲ್ಲಗೆ ಮುಟ್ಟಿ ನಕ್ಕ. ನಂತರ ಅವಳ ಕೆನ್ನೆಗೆ ಒಂದು ಮುತ್ತು ಕೊಟ್ಟು ಅವಳು ಗೊಂಬೆ ಅಪ್ಪಿಕೊಂಡಂತೆ ಇವನು ಅವಳನ್ನು ಅಪ್ಪಿಕೊಂಡ.
ಇಡೀ ಕುಟುಂಬ ಈ ಮುದ್ದಾದ ದೃಶ್ಯವನ್ನು ನೋಡಿ ನಗುತ್ತಿದ್ದರೆ, ಪಕ್ಕದಲ್ಲೇ ನಿಂತಿದ್ದ ಸ್ವಾತಿ ಕುತೂಹಲದಿಂದ ವೇದಾಂತ್ ಹತ್ತಿರ ಬಂದಳು.
“ವೇದಾಂತ್… ನನ್ನನ್ನು ಸೇರಿಸಿಕೋ. ನಾನು ನಿನ್ನ ಬೆಸ್ಟ್ ಫ್ರೆಂಡ್ ಅಲ್ವಾ? ನಂಗೂ ಒಂದು ಪಪ್ಪಿ ಕೊಡು ” ಎಂದು ಅವನ ಹತ್ತಿರ ಬಂದಳು.
ವೇದಾಂತ್ ಸ್ವಾತಿಯ ಕಡೆ ತಿರುಗಿ,
“ಅಯ್ಯೋ, ಸ್ವಾತಿ ನೀನು ಯಾವಾಗಲೂ ನನ್ನ ಬೆಸ್ಟ್ ಫ್ರೆಂಡ್!” ಎಂದು ಅವಳ ಕೆನ್ನೆಗೆ ಒಂದು ಮುತ್ತು ಕೊಟ್ಟು, ಕೈ ಹಿಡಿದುಕೊಂಡ.
ಮಕ್ಕಳ ಈ ಮುಗ್ಧ ಆಟವನ್ನು ನೋಡಿ ಹಜಾರದಲ್ಲಿದ್ದ ಹಿರಿಯರ ನಗು ಇನ್ನಷ್ಟು ಜೋರಾಯಿತು.
ರೇವಂತ್ ಚಿತ್ರಾಳ ಕಡೆ ತಿರುಗಿ,
“ನೋಡು ಚಿತ್ರಾ, ಅವರಿಗೆ ಜಗಳ ಆಡೋಕು ಗೊತ್ತು, ಸಮಾಧಾನ ಮಾಡ್ಕೊಳ್ಳೋಕು ಗೊತ್ತು. ನಾವು ಸುಮ್ಮನೆ ಅವರ ಮಧ್ಯೆ ಹೋಗಬಾರದು” ಎಂದ.
ಚಿತ್ರಾ ಅಸಮಾಧಾನದಿಂದಲೇ,
“ಆಯ್ತು ಆಯ್ತು… ನೀವೆಲ್ಲರೂ ಸೇರಿ ನನಗೇ ಬುದ್ಧಿ ಹೇಳಿ. ನನಗೆ ನನ್ನ ಮಗಳ ಬಗ್ಗೆ ಚಿಂತೆಯಿದೆ ಅಷ್ಟೇ. ಅವಳಿಗೆ ಎರಡು-ಮೂರು ವರ್ಷ ಇದ್ದಾಗ,’ ಶಾಲೆಗೆ ಹೋಗೋಕೆ ಶುರು ಮಾಡಿದ ಮೇಲೆ ಸರಿ ಹೋಗ್ತಾಳೆ’ ಅಂದಿದ್ರಿ. ಈಗ ಫಸ್ಟ್ ಸ್ಟ್ಯಾಂಡರ್ಡ್ ಮುಗಿಯುತ್ತಾ ಬಂತು, ಆದ್ರೂ ಇವಳ ಹಠ ಮಾತ್ರ ಕಡಿಮೆ ಆಗಿಲ್ಲ” ಎಂದಳು.
ಅದಕ್ಕೆ ಉಮಾದೇವಿ ನಗುತ್ತಾ,
“ಚಿತ್ರಾ, ರೇವಂತ್ ಕೂಡ ಚಿಕ್ಕವನಿದ್ದಾಗ ಹೀಗೆಯೇ ಹಠಮಾರಿ ಆಗಿದ್ದ. ಈಗ ನೋಡಿದ್ಯಾ ಎಷ್ಟು ಗುಣವಂತ ಆಗಿದ್ದಾನೆ? ಇವಳೂ ಅಷ್ಟೇ, ಸರಿ ಹೋಗ್ತಾಳೆ ಬಿಡು” ಎಂದರು.
ರೇವಂತ್ ಬಗ್ಗೆ ಅತ್ತೆ ಆಡಿದ ಮಾತನ್ನು ಕೇಳಿ ಚಿತ್ರಾ ನಕ್ಕು,
“ಗೊತ್ತು ಅತ್ತೆ, ಇವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು!” ಎಂದು ನಗುತ್ತಾ ಚಿತ್ರಾ ಅಡುಗೆ ಮನೆಗೆ ಹೋಗಲು ಎದ್ದಾಗ, ಅಲ್ಲಿಯವರೆಗೆ ಸುಮ್ಮನೆ ಕುಳಿತಿದ್ದ ವಿಖ್ಯಾತ್ ಮೆಲ್ಲನೆ ಬಂದು ಅವಳ ಮಡಿಲಿನಲ್ಲಿ ಕುಳಿತ.
“ಅಮ್ಮ… ನಿತ್ಯ ಆಂಟಿ ಯಾವಾಗ ಬರ್ತಾರೆ? ಅವರು ಬರೋದು ಲೇಟ್ ಆಗುತ್ತಾ?” ಎಂದು ಮುಗ್ಧವಾಗಿ ಕೇಳಿದ.
ಚಿತ್ರಾ ಅವನ ತಲೆ ಸವರಿದಳು.
“ಬರ್ತಾರೆ ಬಂಗಾರ, ನಾಳೆ ಬರ್ತಾರೆ. ನಿತ್ಯ ಆಂಟಿ ಮತ್ತು ದೇವ್ ಅಂಕಲ್ ಕೆಲಸ ಮುಗಿಸಿ ಬೇಗ ಬರ್ತಾರೆ. ನೆನಪಾಗ್ತಿದ್ದಾರಾ?” ಎಂದಳು ಚಿತ್ರಾ.
ವಿಖ್ಯಾತ್ ಮೆಲ್ಲಗೆ ತಲೆಯಾಡಿಸಿದ.
“ಹೂಂ…. ಅವರು ಬಂದ್ರೆ ನನಗೆ ಹೊಸ ಸ್ಟೋರಿ ಬುಕ್ ತರ್ತೀನಿ ಅಂದಿದ್ದಾರೆ”
ರೇವಂತ್ ಇದನ್ನು ನೋಡಿ ನಕ್ಕ.
“ನೋಡು ಚಿತ್ರಾ, ಇವನು ನಮ್ಮ ಮಗ ಅನ್ನೋದಕ್ಕಿಂತ ಹೆಚ್ಚಾಗಿ ನಿತ್ಯಾ ಮಗನೇ ಆಗಿಬಿಟ್ಟಿದ್ದಾನೆ. ಅವಳು ಇವನನ್ನು ಅಷ್ಟೊಂದು ಮುದ್ದಾಗಿ ಸಾಕಿದಾಳೆ” ಎಂದ.
“ಅದು ನಿಜ ಬಿಡಿ. ಈ ನಮ್ಮ ಮುದ್ದು ಮಗಳು ಹಠ ಮಾಡಿದಾಗೆಲ್ಲಾ ಇವನನ್ನು ನಿತ್ಯಾನೇ ನೋಡಿಕೊಂಡಿದ್ದು ಅಲ್ವಾ.. ಈಗ ಅವಳು ಇಲ್ಲದೆ ಇವನಿಗೆ ಏನೋ ಕಳೆದುಕೊಂಡ ಹಾಗೆ ಅನಿಸುತ್ತಿದೆ. ಸರಿ ಬಂಗಾರ, ಅವರು ಬಂದ ಮೇಲೆ ನೀನು ಅವರ ಮನೆಯಲ್ಲೇ ಇರು ಅಂತೆ ಆಯ್ತಾ?” ಎಂದಳು.
ವಿಖ್ಯಾತ್‌ನ ಮುಖದಲ್ಲಿ ನಗು ಮೂಡಿತು.
ದಿನ ಹೀಗೆ ಕಳೆದಿತ್ತು. ರಾತ್ರಿ ಊಟದ ನಂತರ, ಚಿತ್ರ ಆಳವಾದ ಯೋಚನೆಯಲ್ಲಿ ನೀಲ ನಭವನ್ನು ದಿಟ್ಟಿಸುತ್ತಾ ನಿಂತಿದ್ದಳು.
ಹಿಂದಿನಿಂದ ಅವಳ ನಡುವನ್ನು ಬಳಸಿದ ರೇವಂತ್ ಕೈಗಳ ಸ್ಪರ್ಶ ಅವಳನ್ನು ವಾಸ್ತವಕ್ಕೆ ಕರೆತಂದಿತ್ತು.
“ಏನು ಯೋಚನೆ ಮಾಡ್ತಾ ಇದೀಯಾ?” ಎಂದು ರೇವಂತ್ ಅವಳ ಹೆಗಲ ಮೇಲೆ ಗಲ್ಲವಿಟ್ಟು ಮೆಲ್ಲನೆ ಕೇಳಿದ.
“ಏನಿಲ್ಲ… ಹೀಗೆ.” ಎಂದು ಚಿತ್ರ ನಕ್ಕಳು.
“ಗೊತ್ತಿದೆ ನನಗೆ… ವರ್ಣ ಬಗ್ಗೆ ಅಲ್ವಾ?” ಎಂದು ಅವಳ ಕಿವಿಯ ಬಳಿ ಪಿಸುಗುಟ್ಟಿದ.
ಚಿತ್ರಾ ದೀರ್ಘ ನಿಟ್ಟುಸಿರು ಬಿಟ್ಟಳು.
“ಅವಳ ಹಠ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾ ಇದೆ ರೇವಂತ್.”
ರೇವಂತ್ ನಕ್ಕ.
“ಚಿತ್ರಾ… ಅವಳು ನಮ್ಮಿಬ್ಬರ ಮಗಳು. ಇಷ್ಟು ಹಠಮಾರಿ ಆಗದೆ ಇದ್ದರೆ ಹೇಗೆ?”
“ರೇವಂತ್!” ಎಂದು ಅವಳು ಅವನ ಕೈ ಮೇಲೆ ಮೆಲ್ಲಗೆ ಹೊಡೆದಳು.
“ನಿಜ ಅಲ್ವಾ? ನಿನ್ನ ಹಠ ಸ್ವಲ್ಪ, ನನ್ನ ಹಠ ಸ್ವಲ್ಪ ಸೇರಿ ವರ್ಣ ಆಗಿದ್ದಾಳೆ.”
“ನಿಮಗೆ ಎಲ್ಲವೂ ತಮಾಷೆ.” ಚಿತ್ರಾ ನಗು ತಡೆಯಲಾಗದೆ ನಕ್ಕಳು.
“ಯಾಕಂದ್ರೆ ನೀನು ಜಾಸ್ತಿ ಯೋಚನೆ ಮಾಡ್ತೀಯಾ.” ಎನ್ನುತ್ತಾ ಅವಳನ್ನು ತನ್ನ ಕಡೆಗೆ ಇನ್ನಷ್ಟು ಎಳೆದುಕೊಂಡ.
“ಬಿಡಿ ರೇವಂತ್..”
“ಉಹೂಂ.”
ಚಿತ್ರಾ ಅವನ ಹಿಡಿತದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದಳು.
ಆದರೆ ಅವನು ಮತ್ತಷ್ಟು ಗಟ್ಟಿಯಾಗಿ ಹಿಡಿದುಕೊಂಡ.
“ಇವತ್ತು ನಿನ್ನನ್ನು ಪೂರ್ತಿ ಮುದ್ದು ಮಾಡಬೇಕು ಅನ್ನಿಸ್ತಿದೆ.” ಪಿಸುಮಾತು ಕೇಳಿಸಿತ್ತು.
“ವರ್ಣ, ವಿಖ್ಯಾತ್…”
“ಅವರು ಇಬ್ಬರೂ ಈಗಾಗಲೇ ಕನಸಿನ ಲೋಕಕ್ಕೆ ಹೋಗಿದ್ದಾರೆ. ಅವರಿಗೆ ಟೈಮ್ ಕೊಟ್ಟ ಹಾಗೆ… ನನಗೂ ಸ್ವಲ್ಪ ಟೈಮ್ ಬೇಕಲ್ವಾ ಚಿತ್ರ”
ಚಿತ್ರಾ ಏನೋ ಹೇಳಲು ತುಟಿ ತೆರೆಯುವಷ್ಟರಲ್ಲಿ, ಅವಳು ಹಾಸಿಗೆಯ ಮೇಲಿದ್ದಳು, ರೇವಂತ್ ಅವಳ ಮೇಲಿದ್ದ. ರೇವಂತ್ ಅತ್ಯಂತ ಕಾಳಜಿಯಿಂದ, ಮೆಲ್ಲಗೆ ಅವಳನ್ನು ಆವರಿಸಿಕೊಳ್ಳುತ್ತಾ ಹೋದ. ಕೋಣೆಯ ತಣ್ಣನೆಯ ವಾತಾವರಣದಲ್ಲೂ ಅವರಿಬ್ಬರ ಪ್ರೀತಿಯ ಬಿಸಿ ನಿಧಾನವಾಗಿ ಏರತೊಡಗಿತ್ತು. ಆ ರಾತ್ರಿ ಅವರ ಪ್ರಣಯ ಲೋಕದ ಪಯಣಕ್ಕೆ ಮೂಕಸಾಕ್ಷಿಯಾಗಿ ಮೌನವಾಗಿ ಕರಗುತ್ತಿತ್ತು.
———————————❤️———————————
ಮರುದಿನ ಸಂಜೆ, ಮನೆಯಲ್ಲಿ ಎಲ್ಲರೂ ಎಂದಿನಂತೆ ಹರಟೆಯಲ್ಲಿ ಮಗ್ನರಾಗಿದ್ದಾಗ ಹೊರಗಿನಿಂದ ವೇದಾಂತ್ ಜೋರಾಗಿ ಅಳುತ್ತಾ ಮನೆಯೊಳಗೆ ಬಂದ. ಅವನ ಅಳು ಎಷ್ಟಿತ್ತೆಂದರೆ ಮನೆಯಲ್ಲಿದ್ದವರೆಲ್ಲರೂ ಒಂದೇ ಸಮನೆ ಗಾಬರಿಯಾಗಿ ಎದ್ದು ನಿಂತರು.
ಚಿನ್ಮಯಿ ಓಡಿ ಹೋಗಿ ಮಗನನ್ನ ಅಪ್ಪಿಕೊಂಡಳು.
“ವೇದಾಂತ್… ಏನಾಯ್ತು ಕಂದ? ಯಾಕೆ ಹೀಗೆ ಅಳ್ತಿದ್ದೀಯಾ?” ಎಂದು ಆತಂಕದಿಂದ ಕೇಳಿದಳು.
ವೇದಾಂತ್ ಅಳುತ್ತಲೇ,
“ಅಮ್ಮಾ… ವರ್ಣ ನನ್ನ ಕಿವಿಯೊಳಗೆ ಮರಳು ಹಾಕಿದಳು!” ಎಂದು ದೂರು ನೀಡಿದ.
ಈ ಮಾತು ಕೇಳಿ ಮನೆಯವರೆಲ್ಲರೂ ಒಂದು ಕ್ಷಣ ಬೆಚ್ಚಿಬಿದ್ದರು. ಅಷ್ಟರಲ್ಲಿ ವರ್ಣ ಕೂಡ ಆರಾಮವಾಗಿ ಹೆಜ್ಜೆ ಹಾಕುತ್ತಾ ಅಲ್ಲಿಗೆ ಬಂದಳು. ಅವಳ ಮುಖದಲ್ಲಿ ಕಿಂಚಿತ್ತೂ ಭಯವಿರಲಿಲ್ಲ, ತಾನು ಮಾಡಿದ ಕೆಲಸ ಅವಳಿಗೆ ಸರಿ ಅನಿಸಿತ್ತು.
ವರ್ಣಳನ್ನು ನೋಡುತ್ತಿದ್ದಂತೆ ಚಿತ್ರಾಳ ಸಿಟ್ಟು ನೆತ್ತಿಗೇರಿತು. ತಕ್ಷಣ ಅವಳ ಹತ್ತಿರ ಹೋದ ಚಿತ್ರಾ, ಅವಳಿಗೆ ಎರಡು ಗುದ್ದು ಹಾಕಿ ಗದರಿಸಿದಳು.
“ವರ್ಣ! ವೇದಾಂತ್‌ಗೆ ಏನಿದು ಮಾಡಿರೋದು? ಕಿವಿಗೆ ಮರಳು ಹಾಕಿದ್ಯ? ಯಾಕೆ ಹೀಗೆ ಮಾಡಿದೆ?” ಎಂದು ಕಿರುಚಿದಳು.
ವರ್ಣ ತನ್ನ ಕೈಯನ್ನು ಕೊಡವಿಕೊಳ್ಳುತ್ತಾ,
“ಅವನು ಮೊದಲು ನನ್ನ ತಲೆ ಮೇಲೆ ಮರಳು ಹಾಕಿದ, ಅದಕ್ಕೆ ನಾನು ಅವನ ಕಿವಿಗೆ ಮರಳು ಹಾಕಿದೆ ಅಷ್ಟೇ!” ಹಠದಿಂದ ಹೇಳಿದ್ದಳು.
“ವರ್ಣ! ತಲೆ ಮೇಲೆ ಮರಳು ಹಾಕಿದರೆ ಅದನ್ನು ಕೊಡವಿಕೊಳ್ಳಬಹುದು ಅಥವಾ ಸ್ನಾನ ಮಾಡಿದರೆ ಹೋಗುತ್ತೆ. ಆದರೆ ಕಿವಿಗೆ ಮರಳು ಹಾಕಿದರೆ ತೆಗೆಯೋದು ಎಷ್ಟು ಕಷ್ಟ ಗೊತ್ತಾ?” ಚಿತ್ರಾ ಅಸಹಾಯಕತೆಯಿಂದ ಹೇಳಿದಳು.
ಇದಕ್ಕೆ ವರ್ಣ ಮುಗ್ಧವಾಗಿ ನಗುತ್ತಾ,
“ಅದಕ್ಕೆ ತಾನೇ ನಾನು ಕಿವಿಗೆ ಹಾಕಿದ್ದು! ಅವನು ನನ್ನ ತಲೆಗೆ ಹಾಕಿದ ಮೇಲೆ, ನಾನು ಸುಮ್ನೆ ಇರಬೇಕ? ನಾನು ಅವನಿಗೆ ಕಷ್ಟ ಆಗೋ ಜಾಗಕ್ಕೇ ಹಾಕಬೇಕಲ್ವಾ?” ಎಂದುಬಿಟ್ಟಳು.
ಅವಳ ಈ ತರ್ಕ ಕೇಳಿ ಮನೆಯವರೆಲ್ಲರೂ ಶಾಕ್ ಆದರು. ಇಷ್ಟು ಚಿಕ್ಕ ವಯಸ್ಸಿಗೆ ಮಗುವಿನ ಬುದ್ಧಿ ಇಷ್ಟು ಹಠಮಾರಿಯಾಗಿ ಕೆಲಸ ಮಾಡುತ್ತಿದೆಯಲ್ಲಾ ಎಂದು ಎಲ್ಲರೂ ರೇವಂತ್ ಮತ್ತು ಚಿತ್ರಾಳ ಮುಖ ನೋಡಿದರು.
ವೇದಾಂತ್ ಇನ್ನೂ ಅಳುತ್ತಿದ್ದರೂ, ಒಮ್ಮೆ ಸಾತ್ವಿಕ್ ಮತ್ತು ರೇವಂತ್ ತಪಾಸಣೆ ಮಾಡಿದಾಗ ಮೇಲ್ನೋಟಕ್ಕೆ ಮರಳು ಕಿವಿಯ ತುಂಬಾ ಒಳಗೆ ಹೋದಂತೆ ಕಾಣಲಿಲ್ಲ.
“ಸುಮ್ಮನೆ ರಿಸ್ಕ್ ತಗೊಳ್ಳೋದು ಬೇಡ, ಒಂದು ಸಲ ಕ್ಲಿನಿಕ್‌ಗೆ ಹೋಗಿ ತೋರಿಸಿಕೊಂಡು ಬರೋಣ” ರೇವಂತ್ ಹೇಳಿದ.
ಒಂದು ಕಡೆ ವೇದಾಂತ್‌ನ ನೋವು, ಇನ್ನೊಂದು ಕಡೆ ವರ್ಣಳ ಈ ವಿಚಿತ್ರ ಹಠ. ಇಡೀ ಮನೆ ಮೌನಕ್ಕೆ ಶರಣಾಗಿತ್ತು. ರೇವಂತ್ ವೇದಾಂತ್‌ನನ್ನು ಎತ್ತಿಕೊಂಡು ಕ್ಲಿನಿಕ್‌ನತ್ತ ನಡೆದ. ಡಾಕ್ಟರ್ ಕೂಡ ಪರೀಕ್ಷಿಸಿ ಏನೂ ಅಪಾಯವಿಲ್ಲ ಎಂದ ಮೇಲೆ ಎಲ್ಲರೂ ಸಮಾಧಾನದಿಂದ ಮನೆಗೆ ಬಂದರು.
———————————❤️———————————
ನಿತ್ಯ ❤ ದೇವ್
ಇವರು ಚಿತ್ರ ಮತ್ತು ರೇವಂತ್ ಫ್ಯಾಮಿಲಿ ಫ್ರೆಂಡ್ಸ್.
———————————❤️——————————— ನಿತ್ಯಾ ಮತ್ತು ದೇವ್ ಅಷ್ಟರಲ್ಲಿ ಮನೆಗೆ ಬಂದಿದ್ದರು.
“ನಿತ್ಯಾ ಆಂಟಿ! ದೇವ್ ಅಂಕಲ್! ಬಂದ್ರಾ..ಇಲ್ಲಿ ಒಬ್ಬರು ನಿಮಗೋಸ್ಕರ ಕಾಯ್ತಾ ಇದಾರೆ ನಿನ್ನೆ ಇಂದ” ಎಂದು ಚಿತ್ರಾ ನಗುತ್ತಾ ಅವರನ್ನು ಸ್ವಾಗತಿಸಿದಳು.
ನಿತ್ಯಾ ನಗುತ್ತಾ,
“ಹೌದು ಚಿತ್ತು… ಟ್ರಾಫಿಕ್ ಸ್ವಲ್ಪ ಜಾಸ್ತಿ ಆಯ್ತು” ಎಂದಳು.
ಅಷ್ಟರಲ್ಲಿ… ಒಂದು ಪುಟ್ಟ ಓಟ.
“ನಿತ್ಯಾ ಆಂಟಿ!” ವಿಖ್ಯಾತ್ ನೇರವಾಗಿ ನಿತ್ಯ ಬಳಿ ಬಂದು ಅವಳ ಕಾಲು ಹಿಡಿದುಕೊಂಡ.
“ಹೇಗಿದ್ಯ ನನ್ನ ಬಂಗಾರ? ಪುತ್ತು ಎಷ್ಟು ದಿನ ಆಯ್ತು ನಿನ್ನ ನೋಡದೆ” ಎಂದು ನಿತ್ಯ ಮಂಡಿಯೂರಿ ಕುಳಿತು ಅವನ ಕೆನ್ನೆಗೆ ಮುದ್ದು ಕೊಟ್ಟಳು.
ಎಲ್ಲರೂ ಹಾಲ್‌ನಲ್ಲಿ ಕುಳಿತರು. ಮಾತುಗಳು, ನಗು, ದಿನದ ಘಟನೆಗಳು ಎಲ್ಲವೂ ಹಂಚಿಕೊಳ್ಳುತ್ತಾ ಮನೆ ಮತ್ತೆ ಹಸಿರಾಯಿತು.
ಸ್ವಲ್ಪ ಸಮಯದ ನಂತರ ದೇವ್ ಮತ್ತು ನಿತ್ಯಾ ಹೊರಡಲು ಅಣಿಯಾಗುತ್ತಾ.
“ಸರಿ, ನಾವು ಹೊರಡ್ತೀವಿ.” ಎಂದರು.
ಅಷ್ಟರಲ್ಲಿ ಚಿತ್ರಾ ವಿಖ್ಯಾತ್‌ನತ್ತ ನೋಡಿ ನಗುತ್ತಾ,
“ನಿತ್ಯಾ, ಇವನನ್ನೂ ಜೊತೆಗೆ ಕರೆದುಕೊಂಡು ಹೋಗು. ನಾಳೆ ಸಂಡೇ ಅಲ್ವಾ. ಶಾಲೆ ಕೂಡ ಇಲ್ಲ. ಸೋಮವಾರ ನಾನು ಬಂದು ಕರೆದುಕೊಂಡು ಹೋಗ್ತೀನಿ.” ಎಂದಳು.
ವಿಖ್ಯಾತ್ ಮುಖ ತಕ್ಷಣ ಅರಳಿತು.
“ನಿಜವಾ ಅಮ್ಮಾ?” ಎಂದು ಖುಷಿಯಿಂದ ಕೇಳಿದ.
“ಹೌದು ಬಂಗಾರ.” ಎಂದು ಚಿತ್ರಾ ನಕ್ಕಳು.
ನಿತ್ಯಾ ಕೂಡ ನಗುತ್ತಾ, “ಸರಿ, ನಮ್ಮ ಜೊತೆ ಬರ್ತೀಯಾ?” ಎಂದು ಕೇಳಿದಳು.
ವಿಖ್ಯಾತ್ ಉತ್ಸಾಹದಿಂದ ತಲೆಯಾಡಿಸಿದ.
ಸ್ವಲ್ಪ ಹೊತ್ತಿನ ಬಳಿಕ ಎಲ್ಲರೂ ಹೊರಗೆ ಬಂದರು.
ದೇವ್ ಕಾರಿನ ಬಳಿ ನಿಂತಿದ್ದ. ವಿಖ್ಯಾತ್ ಖುಷಿಯಿಂದ ದೇವ್ ಕೈ ಹಿಡಿದು ನಿಂತಿದ್ದ.
ಅಷ್ಟರಲ್ಲಿ ನಿತ್ಯಾ ನಿಧಾನವಾಗಿ ಚಿತ್ರಾಳ ಹತ್ತಿರ ಬಂದಳು.
“ಚಿತ್ತು…” ಎಂದು ಕರೆದಳು.
ಚಿತ್ರಾ ಪ್ರಶ್ನಾರ್ಥಕವಾಗಿ ಅವಳನ್ನು ನೋಡಿದಳು.
“ಏನಾಯ್ತು?”
ನಿತ್ಯಾ ಕ್ಷಣಕಾಲ ಸುಮ್ಮನಿದ್ದು,
“ನಾನು ಒಂದು ಮಾತು ಕೇಳಬಹುದಾ?” ಎಂದಳು.
“ಹುಂ… ಕೇಳು.”
“ಚಿತ್ತು… ನಿಜ ಹೇಳು. ನಿನಗೆ ಬೇಜಾರಾಗಲ್ಲ ಅಲ್ವಾ? ವಿಖ್ಯಾತ್ ಕೆಲವೊಮ್ಮೆ ನನ್ನನ್ನೇ ಹುಡುಕ್ತಾನೆ… ನನ್ನ ಜೊತೆ ಇರಬೇಕು ಅಂತ ಹಠ ಮಾಡ್ತಾನೆ… ನನ್ನ ಬರೋಕೆ ಕಾಯ್ತಾನೆ…ನಿನಗೆ ಯಾವತ್ತಾದರೂ ಬೇಜಾರಾಗಿದ್ರೆ ನೇರವಾಗಿ ಹೇಳು. ನಾನು ತಪ್ಪು ತಿಳ್ಕೊಳ್ಳಲ್ಲ. ಬೇಕಿದ್ರೆ ನಾನು ಇಲ್ಲಿ ಬರೋದು ಕಡಿಮೆ ಮಾಡ್ತೀನಿ. ನಿನ್ನ ಖುಷಿ ನನಗೆ ಮುಖ್ಯ.”
ಅವಳ ಮಾತು ಮುಗಿಯುವಷ್ಟರಲ್ಲಿ ಚಿತ್ರಾ ಅವಳ ಕೆನ್ನೆಗೆ ಮೆಲ್ಲನೆ ಏಟು ಕೊಟ್ಟಳು.
“ನಿತ್ಯಾ! ಇನ್ನೊಮ್ಮೆ ಇಂಥ ಮಾತು ಆಡಿದ್ರೆ ನಾನು ನಿನ್ನ ಜೊತೆ ಮಾತಾಡೋದನ್ನೇ ಬಿಡ್ತೀನಿ. ಏನೇನು ಯೋಚನೆ ಮಾಡ್ತೀಯಾ ನೀನು? ನಿತ್ಯಾ… ಶ್ರೀಕೃಷ್ಣನಿಗೂ ಇಬ್ಬರು ಅಮ್ಮಂದಿರು ಇದ್ದರು. ದೇವಕಿ ಮತ್ತು ಯಶೋಧೆ. ವಿಖ್ಯಾತ್ ನನ್ನ ಮಗ. ಆದರೆ ಚಿಕ್ಕಂದಿನಿಂದಲೇ ಅವನು ನಿನ್ನ ಹತ್ತಿರ ಜಾಸ್ತಿ ಇದ್ದಿದ್ದು.
ವರ್ಣ ಜೊತೆಗೇ ನಾವಿರೋದೆ ಆಗ್ತಿತ್ತು. ಅರ್ಧ ಸಮಯ ನಿನ್ನ ಜೊತೆಯಲ್ಲೇ ಕಳೆಯುತ್ತಿದ್ದ. ಮಕ್ಕಳು ಹಾಗೆ. ಯಾರ ಮೇಲೆ ಪ್ರೀತಿ ಜಾಸ್ತಿ ಇರುತ್ತದೋ ಅವರ ಬಳಿ ಹೋಗ್ತಾರೆ. ಅವನು ನಿನ್ನ ಜೊತೆ ಖುಷಿಯಾಗಿದ್ದಾನೆ. ನೀನೂ ಅವನ ಜೊತೆ ಖುಷಿಯಾಗಿದ್ದೀಯಾ. ಹಾಗಿದ್ದ ಮೇಲೆ ಸಮಸ್ಯೆ ಏನು? ನೀನು ಅವನಿಗೆ ಯಾವತ್ತೂ ಕೆಟ್ಟದ್ದನ್ನು ಬಯಸೋದಿಲ್ಲ ಅಂತ ನನಗೆ ಗೊತ್ತು. ನಿನ್ನ ಮೇಲೆ ಆ ನಂಬಿಕೆ ನನಗಿದೆ.”
ನಿತ್ಯಾಳ ಕಣ್ಣಿನಿಂದ ಒಂದು ಹನಿ ಜಾರಿತು.
ಮರುಕ್ಷಣವೇ ಅವಳು ಚಿತ್ರಾಳನ್ನು ಬಿಗಿಯಾಗಿ ಅಪ್ಪಿಕೊಂಡಳು.
“ಚಿತ್ತು… ನೀನು ತುಂಬಾ ಒಳ್ಳೆಯವಳು.”
ಚಿತ್ರಾ ನಗುತ್ತಾ ಅವಳ ಬೆನ್ನು ಸವರಿ,
“ಆಯ್ತು ಆಯ್ತು… ಇಷ್ಟು ಎಮೋಷನಲ್ ಆಗ್ಬೇಡ. ಹೋಗು… ನನ್ನ ಮಗನನ್ನ ಚೆನ್ನಾಗಿ ನೋಡಿಕೋ.” ಎಂದಳು.
———————————❤️———————————
ಕಾರು ನಿಧಾನವಾಗಿ ರಸ್ತೆಯತ್ತ ಚಲಿಸಲಾರಂಭಿಸಿತು.
ನಿತ್ಯ ಮತ್ತು ವಿಖ್ಯಾತ್ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.
“ನಿತ್ಯಾ ಆಂಟಿ… ನನ್ನ ಸ್ಟೋರಿ ಬುಕ್ ಎಲ್ಲಿ? ನನಗೆ ಹೊಸ ಸ್ಟೋರಿ ಬುಕ್ ತರುತ್ತೀನಿ ಅಂತ ಪ್ರಾಮಿಸ್ ಮಾಡಿದ್ದಲ್ವಾ?” ಎಂದು ಮುಗ್ಧವಾಗಿ ಕೇಳಿದ.
ನಿತ್ಯಾ ಹಣೆ ತಟ್ಟಿಕೊಂಡು,
“ಅಯ್ಯೋ ಪುತ್ತಾ… ನಿಜ! ನಾನು ಮರೆತುಬಿಟ್ಟೆ ಅನಿಸುತ್ತೆ…” ಎಂದಳು.
ಅದನ್ನು ಕೇಳಿದ ವಿಖ್ಯಾತ್‌ನ ಮುಖ ತಕ್ಷಣ ಸಪ್ಪೆಯಾಯಿತು.
ಅವನ ಮುಖ ನೋಡಿ ನಿತ್ಯಾಗೆ ನಗು ಬಂತು.
“ಅಯ್ಯೋ… ನನ್ನ ಪುತ್ತು ಇಷ್ಟು ಬೇಗ ನಂಬಿಬಿಟ್ಟನಾ?” ಎಂದು ನಗುತ್ತಾ ತನ್ನ ಬ್ಯಾಗ್ ತೆರೆದು,
“ಇದು ನೋಡು… ನಿನ್ನ ಫೇವರೆಟ್ ಸ್ಟೋರಿ ಬುಕ್!” ಎಂದು ಒಂದು ಸುಂದರ ಪುಸ್ತಕವನ್ನು ಅವನ ಕೈಗೆ ಕೊಟ್ಟಳು.
“ವಾವ್…!” ಎಂದು ಖುಷಿಯಿಂದ ಕಿರುಚಿದ ವಿಖ್ಯಾತ್.
“ಥ್ಯಾಂಕ್ ಯು ನಿತ್ಯಾ ಆಂಟಿ!” ಎಂದು ಅವಳ ಕೆನ್ನೆಗೆ ಒಂದು ಮುತ್ತು ಕೊಟ್ಟು ಪುಸ್ತಕವನ್ನು ತಕ್ಷಣವೇ ತಿರುಗಿಸುತ್ತಾ ನೋಡತೊಡಗಿದ.
ಅವನ ಆ ಮುಗ್ಧ ಖುಷಿಯನ್ನು ನೋಡಿ ನಿತ್ಯಾಳ ಮುಖದಲ್ಲೂ ತೃಪ್ತಿಯ ನಗು ಮೂಡಿತು. ಸ್ವಲ್ಪ ಹೊತ್ತು ಅವನನ್ನೇ ನೋಡುತ್ತಾ ಕುಳಿತಿದ್ದ ನಿತ್ಯಾ ದೇವ್ ಜೊತೆ ಮಾತು ಆರಂಭಿಸಿದಳು.
“ದೇವ್… ನಿಜ ಹೇಳಬೇಕಂದ್ರೆ, ಇವತ್ತು ಮನೆಗೆ ಬರೋ ಮುಂಚೆ ನನಗೆ ತುಂಬಾ ಭಯ ಇತ್ತು. ವಿಖ್ಯಾತ್ ನನ್ನ ಹತ್ತಿರ ಜಾಸ್ತಿ ಇರ್ತಾನೆ… ನನ್ನನ್ನೇ ಹುಡುಕ್ತಾನೆ. ಚಿತ್ತುಗೆ ಇದರಿಂದ ಬೇಜಾರಾಗಿರಬಹುದಾ ಅಂತ ಮನಸ್ಸಲ್ಲಿ ಒಂದು ಭಯ ಇತ್ತು. ಅದಕ್ಕೇ ಇವತ್ತು ಧೈರ್ಯ ಮಾಡಿ ಅವಳ ಹತ್ತಿರ ಎಲ್ಲವನ್ನೂ ಹೇಳಿಬಿಟ್ಟೆ.”
“ನಿತ್ಯಾ… ನಿನಗೆ ಚಿತ್ರಾ ಬಗ್ಗೆ ಗೊತ್ತಿಲ್ವಾ? ಅವಳು ಅಷ್ಟು ಸಣ್ಣ ಮನಸ್ಸಿನವಳು ಅಲ್ಲ.”
“ಗೊತ್ತು ದೇವ್… ಆದರೂ… ಎಷ್ಟೇ ಆದರೂ ವಿಖ್ಯಾತ್ ಅವಳ ಮಗ ಅಲ್ವಾ… ಅದಕ್ಕೇ ಆ ಯೋಚನೆ.”
“ನಿನ್ನ ಚಿತ್ತು ಯಾವಾಗಲೂ ಸಂಬಂಧಗಳನ್ನ ಹೃದಯದಿಂದ ನೋಡ್ತಾಳೆ… ಸ್ವಾರ್ಥದಿಂದ ಅಲ್ಲ. ಅದಕ್ಕೇ ನಿನ್ನನ್ನು ಅರ್ಥ ಮಾಡಿಕೊಂಡಳು. ನೀನು ಅವಳ ಮೇಲೆ ಇಟ್ಟಿರುವ ನಂಬಿಕೆಯಷ್ಟೇ… ಅವಳೂ ನಿನ್ನ ಮೇಲೆ ಇಟ್ಟಿದ್ದಾಳೆ.” ಎಂದ ದೇವ್.
“ಹೌದು ದೇವ್… ಇವತ್ತು ನನ್ನ ಮನಸ್ಸಿನ ಭಾರ ಇಳಿದಂತಾಗಿದೆ…” ಎಂದು ಹೇಳುತ್ತಾ, ಕಥೆಯ ಪುಸ್ತಕದಲ್ಲಿ ಮುಳುಗಿದ್ದ ವಿಖ್ಯಾತ್‌ನತ್ತ ಪ್ರೀತಿಯಿಂದ ನೋಡಿದಳು.
(ಮುಂದುವರೆಯುವುದು ❤️)
———————————❤️——————————-
ವರ್ಷಗಳು ಉರುಳಿದವು……
ಹೇಗನ್ನಿಸಿತು ಸಂಚಿಕೆ? ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ..
Swipe left/right or tap the sides to turn pages