ಮಧುರ ಪ್ರೇಮ 💕 – 3
ಮಧುರ ಪ್ರೇಮ 💕 – ೩
ಭಾನುವಾರ ಬೆಳಿಗ್ಗೆ. ಸೂರ್ಯ ನೆತ್ತಿಗೆ ಬಂದು ಸುಡುತ್ತಾ ಇದ್ದರೂ ಮನೆಯಲ್ಲಿ ಮಾತ್ರ ಭಾನುವಾರದ ಆ ಸೋಂಬೇರಿತನ ಮನೆಮಾಡಿತ್ತು.
ವೇದಾಂತ್ ಹಜಾರದಲ್ಲಿ ಕಾಲು ಚಾಚಿ ತನ್ನಿಷ್ಟದ ಹಾಡಾದ,
ಜೀವ ವೀಣೆ ನೀಡು ಮಿಡಿತದ ಸಂಗೀತ…..
ಸಾಲನ್ನು ಗುನುಗುತ್ತಾ ಲ್ಯಾಪ್ಟಾಪ್ ನೋಡುತ್ತಾ ಕುಳಿತಿದ್ದ.
ಒಂದು earbud ವಿಖ್ಯಾತ್ ಕಿವಿಯಲ್ಲಿ, ಇನ್ನೊಂದು ವಿಂಧ್ಯ ಕಿವಿಯಲ್ಲಿ, ಇಬ್ಬರೂ ಮೊಬೈಲ್ ಅಲ್ಲಿ ಏನೋ ನೋಡುತ್ತಾ ಕುಳಿತಿದ್ದರು.
ಪಕ್ಕದಲ್ಲೇ ಉಮಾದೇವಿ,
“ಚಿತ್ರಾ ಮತ್ತೆ ರೇವಂತ್ ಬರೋದು ಲೇಟ್ ಆಗಬಹುದು ಅನ್ಸುತ್ತೆ” ಎಂದು ಗೊಣಗುತ್ತಿದ್ದರು.
ಅಷ್ಟರಲ್ಲಿ ಮೆಟ್ಟಿಲುಗಳ ಮೇಲೆ ಗುಳಿಕೆನ್ನೆ ಸುಂದರಿ ವರ್ಣ ಪ್ರತ್ಯಕ್ಷವಾದಳು. ನಿದ್ದೆ ಕಣ್ಣಲ್ಲೇ, ಮೈ ಮುರಿಯುತ್ತಾ ಕೆಳಗಿಳಿದು ಬರುತ್ತಾ ಇರುವ ಅವಳನ್ನ ನೋಡಿ ವೇದಾಂತ್ ತುಟಿಯಂಚಲ್ಲಿ ಒಂದು ತುಂಟ ನಗು ಮೂಡಿತು.
“ಓಹೋ… ಕೊನೆಗೂ ಎಚ್ಚರ ಆಯ್ತಾ ನಮ್ಮ ಮನೆ ಸೋಮಾರಿಗೆ? ಹೊರಗಡೆ ಸೂರ್ಯ ಎಲ್ಲರನ್ನೂ ಸುಟ್ಟು ಹಾಕ್ತಾ ಇದ್ದಾನೆ, ಮೇಡಂ ಇನ್ನು ಗುಡ್ ಮಾರ್ನಿಂಗ್ ಮೂಡ್‌ನಲ್ಲೇ ಇದಾರೆ!” ಎಂದು ಕಾಲೆಳೆದ.
ವರ್ಣ ಹಜಾರಕ್ಕೆ ಬಂದು ಸೋಫಾ ಮೇಲೆ ಕುಸಿದು ಕುಳಿತಳು.
“ನೋಡು ವೇದಾಂತ್, ಬೆಳ್ಳಂಬೆಳಿಗ್ಗೆ ನನ್ನ ತಲೆ ತಿನ್ನಬೇಡ. ಸಂಡೇ ನನ್ನ ಇಷ್ಟ, ಯಾವಾಗ ಬೇಕಾದ್ರೂ ಏಳ್ತೀನಿ. ನಿನಗೆ ಯಾಕೆ ಅಷ್ಟೊಂದು ಉರಿ?”
“ಉರಿಯಲ್ಲ ಕಣೆ… ಕಾಳಜಿ! ಹತ್ತು ಗಂಟೆವರೆಗೂ ಮಲಗಿದ್ರೆ ಮುಖದಲ್ಲಿ ಗ್ಲೋ ಹೋಗಿ, ಬರಿ ಆ ಕೆನ್ನೆಯ ಗುಳಿ ಅಷ್ಟೇ ಉಳಿಯುತ್ತೆ ನೋಡ್ಕೋ” ಎಂದು ಕೆಣಕಿದ.
“ಬಿಡು ವೇದು, ಯಾಕೆ ಅವಳನ್ನ ಯಾವಾಗಲೂ ಕಾಡಿಸ್ತೀಯಾ? ನಮ್ಮ ಪುಟ್ಟಿ ಇಡೀ ವಾರ ಕಾಲೇಜು ಅಂತ ಓದಿರ್ತಾಳೆ, ಸಂಡೇ ಒಂದು ದಿನ ಮಲಗಿದ್ರೆ ಏನಂತೆ?” ಎಂದು ಅಜ್ಜಿ ಸಪೋರ್ಟ್ ಮಾಡಿದರು.
“ಹೌದು ಅಜ್ಜಿ, ಇವಳು ಏನು ಓದುತ್ತಾಳೆ ಅಂತ ನನಗೆ ಗೊತ್ತು! ಇಂಜಿನಿಯರಿಂಗ್ ಸೇರಿ ಎರಡು ವರ್ಷಗಳು ಆಯ್ತು. ಒಂದು ದಿನಾನೂ ಓದಿದ್ದಂತೂ ನಾನು ನೋಡಿಲ್ಲ. ಆ ಬ್ಯಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ಬೆವರಿಳಿಸಿಕೊಂಡು ಇರೋದನ್ನು ನೋಡಿದೀನಿ, ಇನ್ನು ಓದೋದು ಯಾವಾಗ?” ಎಂದು ವೇದಾಂತ್ ಮತ್ತೆ ರೇಗಿಸಿದ.
“ಓಹೋ… ನಿನ್ನ ಬಗ್ಗೆ ನೀನು ಮರೆತೇ ಹೋದ್ಯ? ನೀನು ದಿನವಿಡೀ ಆ ಗಿಟಾರ್ ಹಿಡ್ಕೊಂಡು ಅದು ಯಾವುದೋ ಡಬ್ಬ ರೆಟ್ರೋ ಸಾಂಗ್ ಹಾಡ್ತಾ ಬಿದ್ದಿರ್ತೀಯಲ.. ಅದು ಯಾರಿಗೂ ಗೊತ್ತಿಲ್ಲ ಅನ್ಕೊಂಡಿದ್ದೀಯಾ?”
“ಹಲೋ! ನಾನು ನಿನ್ನ ತರಹ ಇನ್ನು ಸ್ಟೂಡೆಂಟ್ ಅಲ್ಲ. ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಹೋಗ್ತಾ ಇದ್ದೀನಿ. ನನಗಿರೋ ಕೆಲಸದ ಪ್ರೆಶರ್ ನಿನಗೇನು ಗೊತ್ತು? ಅದಕ್ಕೆ ರಿಫ್ರೆಶ್ಮೆಂಟ್ ಗೆ ನಾನು ಸಂಗೀತದ ಮೊರೆ ಹೋಗೋದು”
ಅಷ್ಟರಲ್ಲಿ ಅಡುಗೆ ಮನೆಯಿಂದ ಚಿನ್ಮಯಿ ಹೊರಗೆ ಬಂದಿದ್ದಳು. “ಅರೇ, ಎದ್ದ ತಕ್ಷಣ ಶುರು ಮಾಡಿಕೊಂಡ್ರಾ? ಈಗ ಅತ್ತಿಗೆ ಮತ್ತು ಅಣ್ಣ ದೇವಸ್ಥಾನದಿಂದ ಬರ್ತಾರೆ, ಇಬ್ಬರೂ ಬೈಯಿಸಿಕೊಳ್ಳಬೇಡಿ” ಎನ್ನುತ್ತಾ,
ವರ್ಣಳ ಹತ್ತಿರ ಬಂದು,
“ವರ್ಣ, ಫ್ರೆಶ್ ಆಗಿ ಬಾ ಕಂದ, ತಿಂಡಿ ತಿನ್ನುವಿಯಂತೆ” ಎಂದಳು.
“ಹೌದು ಅಮ್ಮ, ಇವಳಿಗೆ ಜಾಸ್ತಿನೇ ಬಡಿಸಿ. ತಿಂದು ತಿಂದು ಆ ಬ್ಯಾಸ್ಕೆಟ್‌ಬಾಲ್ ತರಹಾನೇ ಆಗ್ಲಿ ಇವಳು!” ಎಂದ ಜೋರಾಗಿ.
ವರ್ಣ ಕೋಪದಿಂದ ಎದ್ದು,
“ವೇದಾಂತ್, ಇನ್ನೊಂದು ಸಲ ಬ್ಯಾಸ್ಕೆಟ್‌ಬಾಲ್ ಅಂದ್ರೆ, ನಿನ್ನ ಆ ಗಿಟಾರ್ ತಗೊಂಡು ಬಾಲ್ ತರಹ ಎಸೆದು ಬಿಡ್ತೀನಿ ನೋಡು!” ಎಂದು ಎಚ್ಚರಿಕೆ ಕೊಟ್ಟು ಅಡುಗೆ ಮನೆ ಕಡೆ ಓಡಿದಳು.
ವೇದಾಂತ್ ಅವಳು ಹೋಗುವುದನ್ನು ನೋಡಿ ನಕ್ಕ.
“ಸೋತರು ನನ್ನ ಡಿಂಪಲ್ ಹಠ ಮಾತ್ರ ಸ್ವಲ್ಪನೂ ಕಮ್ಮಿ ಆಗಲ್ಲ. ಇರಲಿ ನೀನು ಹೀಗಿರೋದೇ ನನಗೆ ಇಷ್ಟ ಆಗೋದು” ಎಂದು ಅಂದುಕೊಂಡ.
ಅಷ್ಟರಲ್ಲಿ,
ಸ್ವಾತಿ ಬಂದಿದ್ದಳು.
“ವೇದ್, ನಿಂಗೆ ಇಷ್ಟ ಅಂತ, ನಾನೇ ನನ್ನ ಕೈಯಾರೆ ಮೈಸೂರು ಪಾಕ್ ಮಾಡಿಕೊಂಡು ಬಂದಿದೀನಿ..ತಗೋ ಟೇಸ್ಟ್ ಮಾಡಿ ಹೇಳು. ಹೇಗಾಗಿದೆ ಅಂತ” ಎನ್ನುತ್ತಾ ಅವನಿಗೆ ಅಂಟಿಕೊಂಡೇ ಕುಳಿತಳು.
ಸ್ವಾತಿ ಮೈಸೂರು ಪಾಕ್ ಬಾಕ್ಸ್ ತೆರೆಯುತ್ತಿದ್ದಂತೆ, ವರ್ಣ ಅಲ್ಲಿಗೆ ಬಂದು ಸಹಜವಾಗಿಯೇ,
“ಅಲ್ಲಾ ಸ್ವಾತಿ, ಬರೀ ಇವನಿಗೊಬ್ಬನಿಗೇನಾ? ನಮಗೂ ಒಂದು ಚೂರು ಕೊಡು, ಇವನೇನು ಒಬ್ಬನೇ ಖಾಲಿ ಮಾಡ್ತಾನ?” ಹೇಳಿದಳು.
ವೇದಾಂತ್ ತಕ್ಷಣ ಬಾಕ್ಸ್ ಎಳೆದುಕೊಂಡು.
“ಇದು ನನಗೋಸ್ಕರ ತಂದಿರೋದು, ನಿನಗಲ್ಲ. ಬೇಕಿದ್ರೆ ನೀನು ಹೋಗಿ ಮಾಡಿಕೊಂಡು! ತಿನ್ನು” ಎಂದ.
ವರ್ಣ ಮುಖ ಸಿಂಡರಿಸಿಕೊಂಡು,
“ಓಹೋ… ಹೌದಾ? ಹಾಗಾ ಸರಿ ಬಿಡು, ನಂಗೇನು ನಿನ್ನ ಮೈಸೂರು ಪಾಕ್ ಮೇಲೆ ಆಸೆ ಇಲ್ಲ. ನೀನೇ ಬಕಾಸುರನ ತರ ಒಬ್ಬನೇ ತಿಂದು ನೂರು ವರ್ಷ ಆರಾಮಾಗಿ ಇರು!” ಎಂದು ಹಠದಿಂದ ಮುಖ ತಿರುಗಿಸಿ ಹೊರಟಳು.
ಅವಳ ಆ ಬೇಸರ ಮತ್ತು ಹಠ ನೋಡಿದ ವೇದಾಂತ್.
“ಅಯ್ಯೋ, ಯಾಕೆ ಅಷ್ಟೊಂದು ಬೇಸರ ಮಾಡ್ಕೊಳ್ತೀಯಾ? ಇರು, ತಗೋ ಒಂದು ಪೀಸ್ ಟೇಸ್ಟ್ ಮಾಡು” ಎಂದು ಅವಳ ಹತ್ತಿರ ಹೋದ.
ವರ್ಣ ಅಹಂಕಾರದಿಂದ,
“ಬೇಡ ವೇದಾಂತ್, ನೀನೇ ತಿನ್ನು. ನಿನಗೋಸ್ಕರ ನಿನ್ನ ಬೆಸ್ಟಿ ಅವಳ ಕೈಯಾರೆ ಮಾಡಿಕೊಂಡು ತಂದಿರೋದು ಅಲ್ವಾ! ನೀವಿಬ್ಬರೇ ತಿನ್ನಿ” ಎಂದು ಹಿಂದೆ ಸರಿದಳು.
ವೇದಾಂತ್ ಬಿಡಲಿಲ್ಲ.
“ತಿನ್ನು ಅಂದ್ರೆ ತಿನ್ನಬೇಕು ಅಷ್ಟೇ!” ಎನ್ನುತ್ತಾ, ಅವಳು ಏನಾದರೂ ಹೇಳುವ ಮುನ್ನವೇ ಒಂದು ಕೈಯಿಂದ ಅವಳ ಗಲ್ಲವನ್ನು ಗಟ್ಟಿಯಾಗಿ ಹಿಡಿದು, ಬಾಯಿ ತೆರೆಸಿ ಮೈಸೂರು ಪಾಕ್ ತುಂಡನ್ನು ಒಳಗಡೆ ತುರುಕಿದ!
ವರ್ಣ ಗಾಬರಿಯಿಂದ ಕಣ್ಣರಳಿಸಿ,
“ಉಮ್ಮ್… ಉಮ್ಮ್…” ಎಂದು ಒದ್ದಾಡಿದಳು. ಬಾಯಿ ತುಂಬಾ ಸ್ವೀಟ್ ಇರುವುದರಿಂದ ಮಾತು ಬಾರದೆ ಅವಳು ವೇದಾಂತ್‌ನನ್ನು ಕೊಲ್ಲುವಂತೆ ಗುರಾಯಿಸಿದಳು.
“ಸಿಹಿ ತಿಂದಾದರೂ ನಿನ್ನ ಹಠ ಒಂದು ಚೂರು ಕಮ್ಮಿ ಆಗುತ್ತಾ ಅಂತ ನೋಡ್ದೆ ಅಷ್ಟೇ!” ತುಂಟ ನಗೆಯೊಂದಿಗೆ ವೇದಾಂತ್ ಅವಳ ಕೆನ್ನೆ ಸವರಿ ಹೇಳಿದ.
ಅವನೆಡೆ ಉರಿ ನೋಟ ಬೀರುತ್ತಲೇ ವರ್ಣ ಡೈನಿಂಗ್ ಹಾಲ್ ಗೆ ನಡೆದಳು. ಚಿನ್ಮಯಿ ಇಡ್ಲಿ ಪ್ಲೇಟನ್ನು ವರ್ಣಳ ಮುಂದಿಟ್ಟಳು. ಅದನ್ನು ನೋಡುತ್ತಿದ್ದಂತೆಯೇ ವರ್ಣ ಮುಖ ಸಿಂಡರಿಸಿಕೊಂಡಳು.
“ಅತ್ತೆ, ನನಗಿದು ಇಡ್ಲಿ ಬೇಡವೇ ಬೇಡ. ದೋಸೆ ಮಾಡಿಕೊಡಿ”
“ಪುಟ್ಟಿ, ದೋಸೆಗೆ ಈಗ ತಾನೇ ಅಕ್ಕಿ-ಬೇಳೆ ರುಬ್ಬಿ ಇಟ್ಟಿದ್ದೀವಿ. ಅದು ಸ್ವಲ್ಪ ಹುಳಿ ಬರಬೇಕಲ್ವಾ? ಮಧ್ಯಾಹ್ನ ಅಥವಾ ರಾತ್ರಿ ಮಾಡಿಕೊಡ್ತೀನಿ, ಈಗ ಇದನ್ನೇ ತಿನ್ನು”
“ಅದೆಲ್ಲಾ ನನಗೆ ಗೊತ್ತಿಲ್ಲ, ನನಗೆ ಇಡ್ಲಿ ಅಂದ್ರೆ ಆಗಲ್ಲ. ನಾನು ಇದನ್ನ ತಿನ್ನಲ್ಲ ಅಷ್ಟೇ! ಈಗ ಇದನ್ನ ಬಿಸಾಕ್ತೀನಿ ನೋಡಿ” ಎನ್ನುತ್ತಾ ಸಿಟ್ಟಿನಿಂದ ಹೇಳಿದಳು.
ಹಜಾರದಲ್ಲಿದ್ದ ವೇದಾಂತ್‌ಗೆ ಇದೆಲ್ಲಾ ಕೇಳಿಸುತ್ತಲೇ ಇತ್ತು. ಅವನು ತಕ್ಷಣ ಅಡುಗೆ ಮನೆಗೆ ಬಂದು ಅವಳ ಪಕ್ಕದಲ್ಲೇ ಸ್ಟೂಲ್ ಮೇಲೆ ಆರಾಮಾಗಿ ಕುಳಿತ.
“ಓಹೋ…ಮೇಡಂಗೆ ಇಡ್ಲಿ ಕಂಡ್ರೆ ಅಲರ್ಜಿನಾ? ಅಥವಾ ಖಾರದ ಚಟ್ನಿ ತಿಂದರೆ ನಿನ್ನ ಹಠ 2x ಆಗಿಬಿಟ್ಟೆ ಅನ್ನೋ ಹೆದರಿಕೆನ?” ಎಂದು ಕಣ್ಣು ಮಿಟುಕಿಸುತ್ತಾ ಚೇಷ್ಟೆ ಮಾಡಿದ.
“ನೋಡು ವೇದಾಂತ್, ನಿನಗೆ ಯಾಕೆ ಅಷ್ಟೊಂದು ಉರಿ? ಪ್ರತಿಯೊಂದಕ್ಕೂ ಮಧ್ಯದಲ್ಲಿ ಬಂದುಬಿಡ್ತೀಯಾ! ನನ್ನ ಮನೆ, ನನ್ನ ಇಷ್ಟ, ನನಗೆ ಇಷ್ಟ ಇರೋದನ್ನೇ ನಾನು ಕೇಳ್ತೀನಿ”
“ನಾನು ಯಾಕೆ ಬರಬಾರದು? ನನ್ನ ಮುದ್ದಿನ ಮಾವನ ಮಗಳು ಹಸಿದುಕೊಂಡು ಕೂತಿದ್ರೆ ಈ ಬಾವನಿಗೆ ಸಂಕಟ ಆಗಲ್ವಾ?” ಎಂದು ಅವಳ ಗಲ್ಲ ಸವರಿದ.
“ಬಾವ ಅಂತೆ ಬಾವ ಹೋಗೋ ಈಡಿಯಟ್. ಸುಮ್ನೆ ರೇಗಿಸಬೇಡ… ನನಗೆ ಇಡ್ಲಿ ಬೇಡ ಅಂದ್ರೆ ಬೇಡ! ನಂಗೆ ದೋಸೆ ಬೇಕು ಅಂದ್ರೆ ಅದೇ ಬೇಕು. ಈಗ ಇದನ್ನ ಬಿಸಾಡ್ತೀನಿ ಅಷ್ಟೇ” ಎನ್ನುತ್ತಾ ಅವಳು ಪ್ಲೇಟ್ ಹಿಡಿದು ಹೊರಗೆ ಹೋಗಲು ಮುಂದಾದಳು.
ವರ್ಣ ಹೆಜ್ಜೆ ಇಡುತ್ತಿದ್ದಂತೆಯೇ ವೇದಾಂತ್ ಅವಳ ರಟ್ಟೆ ಹಿಡಿದು ತನ್ನ ಕಡೆಗೆ ಜೋರಾಗಿ ಎಳೆದ. ಅವನ ಆ ಹಠಾತ್ ಬಲಕ್ಕೆ ವರ್ಣ ಪಕ್ಕದಲ್ಲೇ ಇದ್ದ ಕುರ್ಚಿಯ ಮೇಲೆ ಕುಸಿಯಬೇಕಾಯಿತು.
ವೇದಾಂತ್ ಮುಖ ಗಂಭೀರವಾಗಿತ್ತು.
“ಎಲ್ಲಿಗೆ ಹೋಗ್ತಿದ್ದೀಯಾ? ಸುಮ್ನೆ ಕೂತ್ಕೊಂಡು ತಿನ್ನು”
ಅವನ ಆ ಮಾತು ವರ್ಣಳ ಅಹಂಕಾರವನ್ನು ಕೆರಳಿಸಿತು.
“ವೇದಾಂತ್! ಲಿಮಿಟ್ ದಾಡ್ತಾ ಇದ್ದೀಯಾ…ನನ್ನ ಕೈ ಬಿಡು ! ಯಾರು ನೀನು? ನನ್ನ ಮೇಲೆ ಇಷ್ಟೊಂದು ಸೊಕ್ಕು ತೋರಿಸೋಕೆ ನಿನಗೆ ಯಾರು ರೈಟ್ಸ್ ಕೊಟ್ಟಿದ್ದು? Who are you to control me?!”
ಅವಳ ಕಿರುಚಾಟಕ್ಕೆ ಅಡುಗೆ ಮನೆಯಲ್ಲಿದ್ದ ಚಿನ್ಮಯಿ ಒಂದು ಕ್ಷಣ ಗಾಬರಿಯಾದಳು. ಆದರೆ ವೇದಾಂತ್ ಮಾತ್ರ ಕಿಂಚಿತ್ತೂ ಕದಲಲಿಲ್ಲ.

“ನಾನು ತಮಾಷೆ ಮಾಡ್ತಿರುವಾಗ ನೀನು ಆಡೋ ಆಟಗಳೆಲ್ಲಾ ಓಕೆ ವರ್ಣ. ನಾನೂ ಅದನ್ನ ಎಂಜಾಯ್ ಮಾಡ್ತೀನಿ. ಆದರೆ ಈ ತರಹ ಸೀರಿಯಸ್ ಮ್ಯಾಟರ್ ಬಂದರೆ ನಾನು ಎಷ್ಟು ಸೀರಿಯಸ್ ಆಗ್ತೀನಿ ಅಂತ ನಿನಗೂ ಚೆನ್ನಾಗಿ ಗೊತ್ತು” ಎಂದವನು,
ಅವಳ ಸನಿಹಕ್ಕೆ ಬಂದು “ಮತ್ತೆ… ಯಾರು ನೀನು ಅಂತ ನನ್ನನ್ನ ಕೇಳಬೇಡ. ನೀನು ಮಾಡೋ ಪ್ರತಿಯೊಂದು ತಪ್ಪನ್ನೂ ತಿದ್ದೋ ಪೂರ್ತಿ ರೈಟ್ಸ್ ನನಗಿದೆ, ಅದನ್ನ ಯಾರೂ ಕಿತ್ಕೊಳ್ಳೋಕೆ ಆಗಲ್ಲ!”
“ನಾನು ತಿನ್ನಲ್ಲ ಅಂದ್ಮೇಲೆ ತಿನ್ನಲ್ಲ ಅಷ್ಟೇ! ನೀನೇನು ಮಾಡ್ತೀಯಾ ನೋಡ್ತೀನಿ!” ವರ್ಣ ತನ್ನ ಅಹಂಕಾರದ ಹಠ ಬಿಡದೆ ಮುಖ ತಿರುಗಿಸಿದಳು.
ವೇದಾಂತ್ ಮತ್ತೇನೂ ಮಾತನಾಡಲಿಲ್ಲ. ನೇರವಾಗಿ ಇಡ್ಲಿ ಪ್ಲೇಟ್ ಕೈಗೆತ್ತಿಕೊಂಡು, ಅದರಿಂದ ಒಂದು ತುತ್ತು ಇಡ್ಲಿ ಕತ್ತರಿಸಿ ಚಟ್ನಿಯಲ್ಲಿ ಅದ್ದಿ, ನೇರವಾಗಿ ವರ್ಣಳ ಮುಖದ ಹತ್ತಿರ ತಂದ.
“ವೇದಾಂತ್… ಏನ್ ಮಾಡ್ತಿದ್ದೀಯಾ? ಬಿಡು!” ವರ್ಣ ಹಿಂದೆ ಸರಿಯಲು ಯತ್ನಿಸಿದಳು.
ಚಿನ್ಮಯಿ ಇದನ್ನು ನೋಡಿ ಗಾಬರಿಯಿಂದ ಮಧ್ಯೆ ಬಂದು ಮಗನನ್ನು ತಡೆದಳು.
“ವೇದ್… ಸುಮ್ನಿರು. ಏನಿದು ನೀನು ಕೂಡ ಸಣ್ಣ ಮಗುವಿನ ತರ ಆಡ್ತಾ ಇದೀಯಾ? ಪಾಪ ಅವಳಿಗೆ ಇಷ್ಟ ಇಲ್ಲದಿದ್ರೆ ಬಿಡು, ಯಾಕೋ ಅಷ್ಟು ಗದರಿಸ್ತೀಯಾ? ಅವಳ ಕೈ ಬಿಡು. ಏನೂ ಮಾಡಬೇಡ ಬಿಡು” ಎಂದು ಸಮಾಧಾನಿಸಲು ಬಂದಳು.
“ಅಮ್ಮ, ನೀವು ಪ್ಲೀಸ್ ಸುಮ್ಮನಿರಿ. ಬರ್ತಾ ಬರ್ತಾ ಇವಳಿಗೆ ಹಠ ತುಂಬಾ ಜಾಸ್ತಿ ಆಗ್ತಿದೆ. ತನಗೆ ಇಷ್ಟ ಇಲ್ಲ ಅಂದ ತಕ್ಷಣ ಅನ್ನ ಬಿಸಾಡೋ ಈ ಕೆಟ್ಟ ಬುದ್ಧಿ ಹೋಗಬೇಕು ಮೊದಲು. ಹಾಗೇ ದೊಡ್ಡವರಿಗೆ ಹೇಗೆ ಗೌರವ ಕೊಡಬೇಕು, ಯಾರ ಹತ್ತಿರ ಹೇಗೆ ಹೇಗೆ ಮಾತಾಡಬೇಕು ಅನ್ನೋದು ಇವಳಿಗೆ ಇವಾಗ್ಲೇ ಅರ್ಥ ಆಗಬೇಕು. ಅತ್ತೆ-ಮಾವ ನೋಡಿದ್ರೆ ಅವರಿಗೆ ಎಷ್ಟು ಬೇಜಾರಾಗುತ್ತೆ ಗೊತ್ತು ಅಲ್ವಾ ನಿಮಗೆ? ಇವಳನ್ನು ಇನ್ನೂ ಮುದ್ದು ಮಾಡಿ ಹಾಳು ಮಾಡ್ಬೇಡಿ ಅಮ್ಮ.”
ವೇದಾಂತ್ ಮಾತು ಕೇಳುವುದಿಲ್ಲ ಎಂದರಿತ ಚಿನ್ಮಯಿ ಅಸಹಾಯಕಳಾದಳು.
ಆದರೆ, ಉಮಾದೇವಿ ಮುಖದಲ್ಲಿ ಮಾತ್ರ ಅವರಿಬ್ಬರ ಸಂಭಾಷಣೆ ಕೇಳಿ ಮಂದಹಾಸ ಮೂಡಿತ್ತು.
ವೇದಾಂತ್ ಅವಳ ಗಲ್ಲವನ್ನು ಒಂದು ಕೈಯಿಂದ ಗಟ್ಟಿಯಾಗಿ ಹಿಡಿದು, ಅವಳ ಇಷ್ಟವಿಲ್ಲದ ಹಠವನ್ನೂ ಮೀರಿ, ಬಲವಂತವಾಗಿ ಇಡ್ಲಿಯನ್ನು ಅವಳ ಬಾಯೊಳಗೆ ಹಾಕಿಯೇ ಬಿಟ್ಟ!
ಕಣ್ಣು ದೊಡ್ಡದು ಮಾಡಿ, ಉಸಿರುಗಟ್ಟಿ ಅವನನ್ನೇ ನೋಡಿದಳು. ವೇದಾಂತ್ ಎರಡನೇ ತುತ್ತು ಎತ್ತಿಕೊಳ್ಳುತ್ತಿದ್ದಂತೆಯೇ, ಅವನ ಕಣ್ಣುಗಳಲ್ಲಿದ್ದ ಆ ಕಠಿಣತೆಯನ್ನು ಕಂಡು ವರ್ಣಳಿಗೆ ನಿಜವಾಗಿಯೂ ಹೆದರಿಕೆಯಾಯಿತು.
ಅವಳು ಅವನ ಕೈಯನ್ನು ತಡೆದು,
“ಓಕೆ… Leave It! ನಾನೇ ತಿಂತೀನಿ…” ಎಂದು ಅಸಹಾಯಕತೆಯಿಂದ, ಹೆದರಿಕೆಯಿಂದಲೇ ಪ್ಲೇಟ್ ಕಿತ್ತುಕೊಂಡು ಇಡ್ಲಿ ತಿನ್ನಲು ಶುರು ಮಾಡಿದಳು.
ವೇದಾಂತ್‌ನ ಆ ತೀಕ್ಷ್ಣ ದೃಷ್ಟಿ ಮತ್ತು ಅವನು ಸಿಟ್ಟಾದಾಗ ಎಷ್ಟು ಕಠಿಣವಾಗಬಲ್ಲ ಎಂಬ ಅರಿವು ವರ್ಣಳಿಗೆ ಇತ್ತು. ಪ್ಲೇಟ್ ಖಾಲಿಯಾಗುವವರೆಗೂ ವೇದಾಂತ್ ಅಲ್ಲೇ ಕುಳಿತಿದ್ದ…
ತಿಂದ ಮೇಲೆ ಅವಳು ಎದ್ದು ಹೋಗುವಾಗ ಅವನ ಕಡೆ ಒಂದು ಸವಾಲಿನ ನೋಟ ಬೀರಿ,
“ನೋಡ್ಕೋ ವೇದಾಂತ್… ನನಗೂ ಒಂದು ಟೈಮ್ ಬರುತ್ತೆ, ಅವತ್ತು ನಾನು ನಿನಗೆ ಸರಿಯಾಗಿ ತೋರಿಸ್ತೀನಿ” ಎಂದು ಬೈಯುತ್ತಲೇ ನಡೆದು ಸೋಫಾ ಮೇಲೆ ಕುಳಿತಳು.
“ಆ ಟೈಮ್‌ಗೋಸ್ಕರವೇ ನಾನು ಕಾಯ್ತಾ ಇರೋದು ಡಿಂಪಲ್!” ಎನ್ನುತ್ತಾ ಚಿನ್ಮಯಿ ಕಡೆ ತಿರುಗಿ
“ಅಮ್ಮ, ಒಂದು ಸ್ಟ್ರಾಂಗ್ ಕಾಫಿ”
“ಮತ್ತೆ ಕಾಫಿನ? ಈಗಷ್ಟೇ ಕುಡಿದಿದೀಯಲ್ಲ? ವೇದ್”
“ಅಮ್ಮ ನಂಗಲ್ಲ..ಡಿಂಪಲ್ ಗೆ”
“ಸರಿ ಸರಿ. ಏನು ಮಕ್ಕಳೋ ಏನೋ..ಮೊದಲು ಬೈಯ್ಯುವುದು ಆಮೇಲೆ ಸಮಾಧಾನ ಮಾಡೋದು..” ಎನ್ನುತ್ತಾ ಅಡುಗೆ ಮನೆ ಕಡೆಗೆ ನಡೆದಳು ಚಿನ್ಮಯಿ.
(ಮುಂದುವರೆಯುವುದು ❤️)
———————————❤️———————————
ಹೇಗನ್ನಿಸಿತು ಸಂಚಿಕೆ? ವೇದ ವರ್ಣ ಇಷ್ಟ ಆಗ್ತಾ ಇದಾರ? ಕಾಮೆಂಟ್ ಮಾಡೋದನ್ನು ಮರೆಯಬೇಡಿ..
ಮೌನಿ ♥️
Swipe left/right or tap the sides to turn pages