ಒಲವಿನ ಸೆರೆ – 1
ವಿಶೇಷ ಸೂಚನೆ : ಈ ಕಥೆಯು ಸಂಪೂರ್ಣ ನನ್ನ ಕಲ್ಪನೆಯಲ್ಲಿ ಮೂಡಿಬಂದಿದ್ದು, ಯಾವುದೇ ಕಥೆ ಕಾದಂಬರಿ ಅಥವಾ ನಿಜ ಜೀವನಕ್ಕೆ ಹೋಲಿಕೆ ಕಂಡುಬಂದಲ್ಲಿ ಕೇವಲ ಕಾಕತಾಳೀಯ.
✨✨✨✨✨✨
ಮುಂಬೈ ನಗರದ ಪ್ರಸಿದ್ಧ ಕನ್ವೆನ್ಷನ್ ಹಾಲ್ ಇಂದು ಬಣ್ಣ ಬಣ್ಣದ ಬೆಳಕಿನಿಂದ ಕಂಗೊಳಿಸುತ್ತಿತ್ತು. ಮಾಧ್ಯಮ ಸಂಸ್ಥೆಗಳು ಎಲ್ಲರನ್ನೂ ಸ್ವಾಗತ ಕೋರುವವರಂತೆ ಎಲ್ಲೆಡೆ ಆವರಿಸಿದ್ದರು. ವೇದಿಕೆಯು ವಿಶೇಷವಾದ ಸಮಾರಂಭಕ್ಕೆಂದು ಸಿದ್ಧವಾಗಿತ್ತು. ವೇದಿಕೆಯ ದೊಡ್ಡದಾದ ಪರದೆಯ ಮೇಲೆ ಹಿಂದಿನ ವರ್ಷಗಳ ಪ್ರಶಸ್ತಿಗಳು ಹಾಗೂ ವಿಜೇತರ ಪಟ್ಟಿಯನ್ನು ಹಾಕಲಾಗಿತ್ತು. ಅದಲ್ಲದೇ ಈ ವರ್ಷದ ಪ್ರಶಸ್ತಿಗೆ ಅರ್ಹರಾದ ಕೆಲವರ ಹೆಸರುಗಳನ್ನು ಸಹ ಹಾಕಲಾಗಿತ್ತು. ಎಲ್ಲವನ್ನು ಪರದೆಯ ಮೇಲೆ ಒಂದರ ಹಿಂದೆ ಒಂದರಂತೆ ಪ್ರದರ್ಶಿಸಲಾಗುತ್ತಿತ್ತು. ವೇದಿಕೆಯ ಮುಂಭಾಗದಲ್ಲಿ ಚಂದದ ಅಲಂಕಾರದ ಮಧ್ಯೆ ಮುಖ್ಯ ಪ್ರಶಸ್ತಿಯ ಟ್ರೋಫಿಯನ್ನು ಇಡಲಾಗಿತ್ತು.
ವೇದಿಕೆಯಲ್ಲಿ ರಾಜಕೀಯ ಗಣ್ಯರು, ಉದ್ಯಮಿಗಳು, ಮಾಧ್ಯಮದವರು ಅನೇಕ ಗಣ್ಯರು ಹಾಜರಿದ್ದರು. ವ್ಯವಹಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕರನ್ನು ಗೌರವಿಸಲಾಗಿತ್ತು.
ವೇದಿಕೆಯ ಮೇಲೆ ನಿರೂಪಕ ಈ ವರ್ಷದ ಸಾಧಕ ಅಂದ್ರೆ ಬಿಸಿನೆಸ್ಮನ್ ಆಫ್ ದ ಇಯರ್ ಪ್ರಶಸ್ತಿಯನ್ನು ಕೊಡಲು ರಾಜಕೀಯ ಗಣ್ಯರೊಬ್ಬರನ್ನು ಬರಮಾಡಿಕೊಂಡಿದ್ದ. ಅವರು ಮೈಕ್ ನಲ್ಲಿ ಬಿಸಿನೆಸ್ಮನ್ ಆಫ್ ದ ಇಯರ್ ಅವಾರ್ಡ್ ಗೋಸ್ ಟು…ಎಂದು ಇಂಗ್ಲೀಷಿನಲ್ಲಿ ಹೇಳುತ್ತಿದ್ದಂತೆ ಎಲ್ಲರಲ್ಲೂ ಕುತೂಹಲ ಹೆಚ್ಚಾಯಿತು.
ವಿರಾಟ್ ಸೂರ್ಯವಂಶಿ ಎಂದು ಘೋಷಿಸುತ್ತಿದ್ದಂತೆ ಅತಿಥಿಗಳ ಸಾಲಿನಲ್ಲಿ ಕುಳಿತಿದ್ದ ಆರಡಿ ಎತ್ತರದ, ಹಾಲು ಬಿಳುಪಿನ ಮೈ ಬಣ್ಣದ, ಕಟ್ಟು ಮಸ್ತಾದ ದೇಹವನ್ನು ಹೊಂದಿದ್ದ ಕಪ್ಪು ಕೋಟನ್ನು ಧರಿಸಿದ ಯುವಕ ವೇದಿಕೆಯ ಕಡೆಗೆ ನಡೆದು ಬರುತ್ತಿದ್ದನು. ಅವನು ನಡೆದು ಬರುತ್ತಿದ್ದಂತೆ ಹಿನ್ನೆಲೆಯಲ್ಲಿ ಚಪ್ಪಾಳೆ ಸದ್ದು ಹಾಗೂ ಜನರ ಗುಸುಗುಸು ಮಾತುಗಳು ಕೇಳಿಬರುತ್ತಿದ್ದವು.
ವೇದಿಕೆಯ ಮೇಲೆ ಬರುತ್ತಿದ್ದಂತೆ ವೇದಿಕೆಯ ಬೆಳಕು ಅವನ ಮೇಲೆ ಕೇಂದ್ರೀಕೃತವಾಯಿತು. ಪ್ರಶಸ್ತಿಯನ್ನು ಸ್ವೀಕರಿಸಿ ಕೈಯಲ್ಲಿ ಮೈಕ್ ಹಿಡಿದವನು ತನ್ನ ಮಾತನ್ನು ಆರಂಭಿಸಿದ್ದ.
“ಹೆಲೋ ಎವರಿಒನ್…ಎಲ್ಲರಿಗೂ ನಮಸ್ಕಾರ… ಈ ಸಮಯದಲ್ಲಿ ನಾನು ಹೇಳೋಕೆ ಇಷ್ಟಪಡುವುದು ಏನೆಂದರೆ ಯಾವತ್ತೂ ಯಾರೂ ನಿಮ್ಮನ್ನು ನಂಬಲಿ ಎಂದು ಕಾಯಬೇಡಿ…ನೀವು ನಿಮ್ಮ ಮೇಲೆ ನಂಬಿಕೆ ಇಡಿ…ಆಗಲೇ ಎಲ್ಲವೂ ಸಾಧ್ಯವಾಗುವುದು…ಕನಸು ಕಾಣುವುದರ ಜೊತೆ ಅದನ್ನು ಸಾಕಾರಗೊಳಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ…ಜೀವನದಲ್ಲಿ ಯಾವಾಗಲೂ ಎಲ್ಲರೂ ನಮ್ಮ ಜೊತೆಯೇ ಇರಬೇಕೆಂದು ನಾವು ಬಯಸುವುದು ತಪ್ಪಾಗುತ್ತೆ…ಸಮಯದ ಜೊತೆ ನಾವು ನಡೆಯಬೇಕು…ನಮ್ಮ ಕನಸನ್ನು ಪೂರ್ಣಗೊಳಿಸಲು ನಾವೇ ಶ್ರಮ ಪಡಬೇಕು… ಆ ಶ್ರಮವೇ ನಮ್ಮನ್ನು ನಮ್ಮ ಗುರಿಯತ್ತ ತಲುಪಿಸುತ್ತದೆ… ಆಂಡ್ ಥ್ಯಾಂಕ್ ಯು…ನನ್ನ ಕನಸನ್ನು ಪೂರ್ಣಗೊಳಿಸಲು ಸಹಾಯ ಮಾಡಿದ ಪ್ರತಿಯೊಬ್ಬರಿಗೂ ನಾನು ಥ್ಯಾಂಕ್ ಯು ಹೇಳೋಕೆ ಇಷ್ಟಪಡುತ್ತೇನೆ. ’ಸೂರ್ಯವಂಶಿ ಗ್ರೂಪ್ಸ್’ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರ ಸಹಕಾರದಿಂದ ಇದು ಸಾಧ್ಯವಾಗಿದೆ…ಥ್ಯಾಂಕ್ ಯು ಎವರಿಒನ್….ಥ್ಯಾಂಕ್ ಯು ಸೋ ಮಚ್…” ಎಂದವನು ವೇದಿಕೆಯಿಂದ ಕೆಳಗೆ ಇಳಿದು ನಡೆದಿದ್ದ.
✨✨✨✨✨✨✨✨
ವಿರಾಟ್ ಸೂರ್ಯವಂಶಿ ಪ್ರಶಸ್ತಿ ಸ್ವೀಕರಿಸಿ ಹೊರ ಬರುತ್ತಿದ್ದಂತೆ ಮಾಧ್ಯಮದವರು ಅವನನ್ನು ಸುತ್ತುವರೆದಿದ್ದರು. ವಿವಿಧ ಮಾಧ್ಯಮದ ಚಿಹ್ನೆ ಹೊಂದಿದವರು ತಮ್ಮ ಕೈಯಲ್ಲಿ ಮೈಕ್ ಹಿಡಿದು ವಿರಾಟ್ ಮುಂದೆ ನಿಂತಿದ್ದರು.
ಮೊದಲಿಗೆ ಒಬ್ಬ ಮುಂದೆ ಬಂದು,”ಕಂಗ್ರಾಜುಲೇಶನ್ ಸರ್…ಹೇಗನಿಸುತ್ತಾ ಇದೆ… ಈ ವರ್ಷದ ಬಿಸಿನೆಸ್ಮನ್ ಆಫ್ ದ ಇಯರ್ ಪ್ರಶಸ್ತಿ ನಿಮ್ಮ ಪಾಲಾಗಿದೆ…ಇದರ ಬಗ್ಗೆ ಏನು ಹೇಳೋಕೆ ಇಷ್ಟ ಪಡ್ತೀರಾ???” ಎಂದು ಪ್ರಶ್ನಿಸಿದ್ದ.
ವಿರಾಟ್,”ಥ್ಯಾಂಕ್ ಯು… ಆಂಡ್ ಆಫ್ಕೋರ್ಸ್ ಖುಷಿ ಆಗ್ತಿದೆ…ಸ್ಟೆಪ್ ಬೈ ಸ್ಟೆಪ್ ನನ್ನ ಕನಸು ನನಸಾಗ್ತಾ ಇರೋ ಸಂತೋಷ ಇದೆ…” ಎಂದುತ್ತರಿಸಿದವನ ಮೊಗದಲ್ಲಿ ನಗು ಕಡಿಮೆಯೇ.
“ಈ ಸಮಯದಲ್ಲಿ ನಿಮ್ಮ ಫ್ಯಾಮಿಲಿಯವರು ಯಾರು ಇಲ್ಲಿ ಕಾಣುತ್ತಿಲ್ಲ…ಇದರ ಬಗ್ಗೆ ಏನ್ ಹೇಳ್ತೀರಾ ಸರ್???”
“ನಿಮ್ ಫ್ಯಾಮಿಲಿಗೆ ನೀವು ಅವಾರ್ಡ್ ತೆಗೆದುಕೊಂಡಿರೋ ಬಗ್ಗೆ ಖುಷಿ ಇಲ್ವಾ???”
“ನಿಮ್ಮ ತಂದೆಯವರು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಅಂತ ಎಲ್ಲರಿಗೂ ಗೊತ್ತಿರೋ ವಿಷಯ…ಮುಂದೆ ನೀವೇನಾದರೂ ರಾಜಕೀಯಕ್ಕೆ ಬರುವ ಸಾಧ್ಯತೆ ಇದ್ಯಾ???”
“ಹಾಗೇ ನಿಮ್ಮ ಬಗ್ಗೆ ಕೆಲವು ವಿವಾದಾತ್ಮಕ ವಿಷಯಗಳು ಕೂಡ ಚರ್ಚೆಗೆ ಕಾರಣವಾಗಿತ್ತು. ಇದರ ಬಗ್ಗೆ ನಿಮ್ಮ ಉತ್ತರ ಏನು ಅಂತ ಕೇಳಬಹುದಾ???”
“ಈ ಹಿಂದೆ ಮಾಡೆಲ್ ಒಬ್ಬರ ಜೊತೆ ನಿಮ್ಮ ಹೆಸರು ಕೇಳಿಬಂದಿತ್ತು ಅದರ ಬಗ್ಗೆ ಏನು ಹೇಳ್ತೀರಾ??”
ಹೀಗೆ ಒಂದರ ಮೇಲೊಂದರಂತೆ ಮಾಧ್ಯಮದವರು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ವಿರಾಟ್ ಮೌನವಾಗಿ ಎಲ್ಲವನ್ನೂ ಕೇಳುತ್ತಿದ್ದನೆ ಹೊರತು ಅವರ ಪ್ರಶ್ನೆಗಳಿಗೆ ಉತ್ತರ ನೀಡಲಿಲ್ಲ.
ಮಾಧ್ಯಮದವನೊಬ್ಬ,”ಸರ್ ನಾವು ಇಷ್ಟೊಂದು ಪ್ರಶ್ನೆಗಳನ್ನು ಕೇಳ್ತಾ ಇದ್ರೂ ನೀವೇನೂ ಸರಿಯಾಗಿ ಹೇಳ್ತಾ ಇಲ್ಲ…ಯಾಕೆ ಅಂತ ಕೇಳಬಹುದಾ ಸರ್…” ಎನ್ನಲು
ವಿರಾಟ್ ತುಟಿ ಕೊಂಕಿಸಿದವನು,”ನಾನೀಗ ತುಂಬಾ ಸಂತೋಷವಾಗಿ ಇದೀನಿ ಅಂದ ಮಾತ್ರಕ್ಕೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡ್ತೀನಿ ಅಂತ ಅಲ್ಲ…ಥ್ಯಾಂಕ್ ಯು…” ಎಂದವನು ಅಲ್ಲಿಂದ ಹೊರಡಲು
ಒಬ್ಬ,”ನಾವು ಇಷ್ಟು ಹೇಳ್ತಾ ಇದ್ರೂ ಒಂದಕ್ಕೂ ಉತ್ತರಿಸದೆ ಹೋಗ್ತಾ ಇದಿರಲ್ಲ…ನೀವು ಪಬ್ಲಿಕ್ ಪಿಗರ್…ನಾವು ಕೇಳುವ ಪ್ರಶ್ನೆಗೆ ಉತ್ತರಿಸುವುದು ನಿಮ್ಮ ಕರ್ತವ್ಯ…” ಎಂದು ಕಿರುಚಲು ವಿರಾಟ್ ಏನು ಕೇಳಿಸದವಂತೆ ಕಾರಿನ ಬಳಿ ತೆರಳಿದ್ದ.
ಮತ್ತೊಬ್ಬ ಮಾಧ್ಯಮದವನು,”ಇಷ್ಟು ಅಹಂಕಾರದಿಂದ ಹೋಗ್ತಾ ಇದೀರಾ…ನೀವೇ ಹೀಗೆ ನಡೆದುಕೊಂಡು ಈಗಿನ ಯುವ ಜನಾಂಗಕ್ಕೆ ಏನು ಸಂದೇಶ ಕೊಡ್ತಾ ಇದೀರಾ ಮಿಸ್ಟರ್ ವಿರಾಟ್” ಎಂದಾಗ ವಿರಾಟ್ ಹಿಂದಿರುಗಿ ಬಂದವನು,”ನಾನ್ ಏನು ಹೇಳಿಲ್ಲ ಅಂದರೆ ಅದರ ಬಗ್ಗೆ ಮಾತಾಡೋಕೆ ನನಗೆ ಇಷ್ಟ ಇಲ್ಲ ಅಂತ… ವೈಯಕ್ತಿಕ ವಿಷಯಗಳನ್ನು ಚರ್ಚೆ ಮಾಡುವ ಸಮಯ ಇದಲ್ಲ…ಸಾರಿ ಗೈಸ್…” ಎಂದವನು ಅವರ ಮುಂದಿನ ಮಾತಿಗೆ ಅವಕಾಶ ಕೊಡದೆ ಕಾರೇರಿ ಅಲ್ಲಿಂದ ನಿರ್ಗಮಿಸಿದ್ದ.
✨✨✨✨✨✨✨✨✨
ಸೂರ್ಯವಂಶಿ ನಿವಾಸ
ಮೂರು ಅಂತಸ್ತಿನ ಐಷಾರಾಮಿ ಬಂಗಲೆ. ಮನೆಯ ಮುಂದೆ ವಿಶಾಲವಾದ ಗಾರ್ಡನ್. ಅರಮನೆಯ ವಿನ್ಯಾಸದ ದೊಡ್ಡ ಬಾಗಿಲ ಬಳಿ ಸೂರ್ಯವಂಶಿ ನಿವಾಸ ಎಂದು ಕೆತ್ತಲಾಗಿತ್ತು. ಮನೆಯ ಮುಂದೆ ನಿಂತಿದ್ದ ಹತ್ತಾರು ದೊಡ್ಡದಾದ ಕಾರುಗಳು, ದ್ವಿಚಕ್ರ ವಾಹನಗಳು, ಮನೆಯ ಹಿಂದೆ ಇರುವ ಸುಂದರವಾದ ಈಜುಕೊಳ ಅವರ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತಿದ್ದವು.
ಟಿವಿಯ ಪರದೆಯ ಮೇಲೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ದೃಶ್ಯಗಳು ಬರುತ್ತಿದ್ದವು.
ಅಗ್ರ ರಾಷ್ಟ್ರೀಯ ವಾರ್ತೆ,
“ವಿರಾಟ್ ಸೂರ್ಯವಂಶಿ ಮಾಧ್ಯಮದ ಬಳಿ ಅಹಂಕಾರದಿಂದ ವರ್ತಿಸಿದ್ರಾ…??”
“ಯಾವುದೇ ಪ್ರಶ್ನೆಗೂ ಸರಿಯಾಗಿ ಉತ್ತರಿಸದೇ ಅಹಂಕಾರ ಮೆರೆದ ವಿರಾಟ್ ಸೂರ್ಯವಂಶಿ “
“ಮಾಧ್ಯಮದ ಮುಂದೆ ದರ್ಪ ಮೆರೆದ ರಾಜ್ಯದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾದ ರಾಜಶೇಖರ ಸೂರ್ಯವಂಶಿ ಅವರ ಮಗ ವಿರಾಟ್ ಸೂರ್ಯವಂಶಿ”
ಎಲ್ಲ ವಾಹಿನಿಗಳಲ್ಲಿ ಬೇರೆ ಬೇರೆ ಹೆಡ್ಲೈನ್ಸ್ ನಲ್ಲಿ ಬರುತ್ತಿತ್ತು. ವಿರಾಟ್ ಮೌನವನ್ನು ಅಹಂಕಾರ ಎಂದು ಬಿತ್ತರಿಸುತ್ತಿದ್ದರು. ಮಾಧ್ಯಮದವರೆಂದರೆ ಕೇಳಬೇಕಾ ವಿರಾಟ್ ಮಾತನಾಡದೆ ಕಾರ್ ಬಳಿ ಹೋಗಿದ್ದನ್ನೇ ಬೇರೆ ಬೇರೆ ರೀತಿಯ ಹೆಡ್ಲೈನ್ ಹಾಕಿ ಅದನ್ನೇ ಮತ್ತೆ ಮತ್ತೆ ತೋರಿಸುತ್ತಿದ್ದರು.
ರಾಜವರ್ಧನ್ ಅವರ ಪತ್ನಿ ರೋಹಿಣಿ,”ಏನ್ರಿ ಇದು ನಿಮ್ಮ ಮಗ ಮಾಡಿರೋದು…ಎಲೆಕ್ಷನ್ ಬೇರೆ ಹತ್ರ ಬರ್ತಾ ಇದೆ…ಈ ಟೈಮಲ್ಲಿ ಈತರ ಅವರ ಬಳಿ ದರ್ಪ ತೋರಿಸೋದು ಬೇಕಿತ್ತಾ…ಏನೋ ಒಂದು ನಗುತ್ತಾ ಹೇಳಿ ಬಂದಿದ್ದರೆ ಆಗೋದು…ಯಾವಾಗಲೂ ಏನಾದರೊಂದು ಕಾರಣದಿಂದ ಅವನ ಹೆಸರು ಟಿವಿಯಲ್ಲಿ ಬರುತ್ತಾ ಇರಬೇಕೇನೋ…ಅದಕ್ಕೆ ಹೀಗೆಲ್ಲ ಮಾಡುತ್ತಿದ್ದಾನೆ” ಎಂದು ಕೂಗಾಡುತ್ತಿದ್ದರೆ,
ಅವರ ಮಗ ಸಮರ್ಥ್,”ಇದು ಹೊಸದೇನಲ್ಲ ಬಿಡು ಮಾಮ್…ಇಷ್ಟು ದಿನ ನಮ್ಮ ಬಳಿ ಮಾಡಿದ್ದನ್ನೇ ಈಗ ಅವರ ಬಳಿ ಮಾಡಿದ್ದಾನೆ…ಒಟ್ಟಿನಲ್ಲಿ ಅವನಿಗೆ ನಾವು ನೆಮ್ಮದಿಯಿಂದ ಇರುವುದು ಇಷ್ಟವಿಲ್ಲ…ನೋಡಿ ಡ್ಯಾಡ್…ನಿಮ್ಮ ಸುಪುತ್ರ ಮಾಡಿರೋದು…ಈಗ ಏನ್ ಹೇಳ್ತೀರಾ…” ಎಂದು ವ್ಯಂಗ್ಯವಾಡಿದ್ದ.
ರಾಜಶೇಖರ ಅವರು ತಮ್ಮ ಪಿಎ ಕುಮಾರ್ ಅವರ ಬಳಿ,”ಕುಮಾರ್…ಈಗ ಎಲ್ಲಿದಾನಂತೆ ಅವನು… ಫೋನ್ ಮಾಡಿ ಕೇಳಿ ಅವನಿಗೆ…ಈ ಟೈಮಲ್ಲಿ ಇದೆಲ್ಲ ಬೇಕಿತ್ತಾ… ಮೀಡಿಯಾದವರು ಬೇರೆ ಇಲ್ಲದೇ ಇರೋದೆಲ್ಲಾ ತೋರಿಸ್ತಾರೆ…” ಎಂದು ಸಿಡುಕಿದ್ದರು.
ಕುಮಾರ್ ವಿರಾಟ್ ಗೆ ಕರೆ ಮಾಡಿದವರು,”ಹಲೋ…ಎಲ್ಲಿದಿರ ಸರ್…ನಿಮ್ ತಂದೆ ನಿಮ್ಮ ಬಗ್ಗೆ ವಿಚಾರಿಸ್ತಾ ಇದಾರೆ…” ಎನ್ನಲು
ವಿರಾಟ್,”ಹಲೋ ಕುಮಾರ್… ಆನ್ ದ ವೇ ಇದೀನಿ… ಎನಿ ಪ್ರಾಬ್ಲೆಮ್…” ಎಂದು ಕೇಳಿದ್ದ.
ಕುಮಾರ್,”ಏನು ಪ್ರಾಬ್ಲೆಮ್ ಇಲ್ಲ ಸರ್…ಎಲ್ಲಾ ಸರಿಯಾಗಿದೆ… ಸರ್ ಗೆ ನಿಮ್ಮತ್ರ ಏನೋ ಮಾತಾಡುವುದು ಇರಬಹುದು ಅದಕ್ಕೆ ವಿಚಾರಿಸ್ತಾ ಇದ್ರು …” ಎಂದು ಹೇಳಿದ್ದರು.
ವಿರಾಟ್,”ಬರ್ತಾ ಇದೀನಿ ಕುಮಾರ್…ಡ್ಯಾಡ್ ಗೆ ಹೇಳಿ ” ಎಂದು ಕರೆ ಕತ್ತರಿಸಿದವನ ಮೊಗದಲ್ಲಿ ಮುಗುಳು ನಗೆಯಿತ್ತು.
✨✨✨✨✨✨
ವಿರಾಟ್ ಕಾರಿನಲ್ಲಿ ಬರುತ್ತಿದ್ದವನು ’ ಐ ನೋ ಡ್ಯಾಡ್…ನಿಮಗೆ ನಿಮ್ಮ ಮಗನ ಬಗ್ಗೆ ಹೆಮ್ಮೆ ಆಗ್ತಾ ಇರತ್ತೆ…ಅದನ್ನೇ ಅಲ್ವಾ ನೀವು ನನ್ನ ಬಳಿ ಮಾತಾಡಬೇಕಿರುವುದು…ನಾನು ಕಾಯ್ತಾ ಇದೀನಿ ಡ್ಯಾಡ್…ಈಗ ನಿಮ್ಮ ಮಾತು ಕೇಳಲು…ಬರ್ತಾ ಇದೀನಿ…” ಎಂದು ತನ್ನಲ್ಲೇ ಹೇಳಿಕೊಂಡವನು ಸಂತೋಷದಿಂದ ಮನೆ ಕಡೆ ಹೊರಟಿದ್ದ.
ವಿರಾಟ್ ಕಾರ್ ನಿಲ್ಲಿಸಿದವನು ತುಸು ಗಡಿಬಿಡಿಯಿಂದಲೇ ಮನೆಯೊಳಗೆ ನಡೆದಿದ್ದ. ಬಂದವನು ತುಸು ಮುಗುಳುನಗೆಯಿಂದಲೇ ಡ್ಯಾಡ್ ಎಂದು ಕರೆದಿದ್ದ. ರಾಜಶೇಖರ ಅವರು ಅವನು ಬರುತ್ತಿದ್ದಂತೆ,”ಏನಿದು ವಿರಾಟ್…ನಾನ್ ಕೇಳ್ತಾ ಇರೋದು…” ಎಂದು ಅಬ್ಬರಿಸಿದರೆ,
ವಿರಾಟ್ ಅಚ್ಚರಿಯಿಂದ,”ಏನಾಯ್ತು ಡ್ಯಾಡ್…” ಎಂದು ಕೇಳಿದವನ ಮನದಲ್ಲಿ ಗೊಂದಲ.
ರಾಜಶೇಖರ ಅವರು,”ಮೀಡಿಯಾದವರ ಬಳಿ ಏನ್ ಹೇಳ್ದೆ ವಿರಾಟ್… ಎಲೆಕ್ಷನ್ ಬರ್ತಾ ಇರೋ ಸಮಯದಲ್ಲಿ ಏನ್ ಮಾಡ್ತಾ ಇದೀಯ… ನಾವು ಮಾತಾಡೋ ಒಂದೊಂದು ಮಾತು ತುಂಬಾ ಮುಖ್ಯ ಆಗಿರುತ್ತೆ…ಇದನ್ನು ನಿನಗೆ ನಾನು ಈಗ ಹೇಳಿಕೊಡಬೇಕಾ…ನೋಡು ಆಗಿಂದ ಅದನ್ನೇ ತೋರಿಸ್ತಾ ಇದಾರೆ…ನಮ್ಮ ಪಕ್ಷದವರು ಒಂದೆರಡು ಪೋನ್ ಕೂಡ ಮಾಡಿದ್ದರು. ಈ ಸಮಯದಲ್ಲಿ ಯಾಕೆ ಹೀಗೆ ವಿವಾದಕ್ಕೆ ಅವಕಾಶ ಕೊಡ್ತಾ ಇದೀರಾ ಅಂತ… ನಾನು ಏನ್ ಹೇಳಲಿ ವಿರಾಟ್…” ಎಂದು ಸಿಡುಕಿದ್ದರೆ,
ವಿರಾಟ್,”ನಾನು ಸರಿಯಾಗಿಯೇ ಮಾತಾಡಿದೀನಿ…ಅವರ ಕೆಲಸನೇ ಅದಲ್ವಾ ಡ್ಯಾಡ್…ಇರೋದು ಬಿಟ್ಟು ಬೇರೆ ಎಲ್ಲ ತೋರಿಸ್ತಾರೆ…ಲೀವ್ ಇಟ್ ಡ್ಯಾಡ್…” ಎಂದು ಸಮಾಧಾನದಿಂದ ಹೇಳಿದ್ದ.
ರಾಜಶೇಖರ ಅವರು ಅಷ್ಟಕ್ಕೇ ಬಿಡದೆ,”ಹೇಗ್ ಬಿಡೋಕೆ ಆಗತ್ತೆ ವಿರಾಟ್…ನೀನು ಯಾವಾಗಲೂ ಇದನ್ನೇ ಮಾಡೋದು…ಮಾಡೋದೆಲ್ಲ ಮಾಡಿ ಏನು ಆಗೇ ಇಲ್ಲ ಅನ್ನೋ ಹಾಗ್ ಬಿಹೇವ್ ಮಾಡೋದು…ನನ್ನ ರಾಜಕೀಯ ಭವಿಷ್ಯದ ಪ್ರಶ್ನೆ ಇದು… ನಿನಗೆ ಏನು ಅನ್ನಿಸದೆ ಇರಬಹುದು ಆದರೆ ಎಲೆಕ್ಷನ್ ಟೈಮಿಗೆ ಸಣ್ಣದು ಕೂಡ ದೊಡ್ಡದಾಗಿ ಕಾಣತ್ತೆ…” ಎಂದು ಬೈಯುತ್ತಿದ್ದರೆ ವಿರಾಟ್ ಮನಸ್ಸಿಗೆ ನೋವಾಗಿತ್ತು.
ವಿರಾಟ್ ,”ನಾನು ಅವಾರ್ಡ್ ತೆಗೆದುಕೊಂಡಿರೋ ಖುಷಿ ನಿಮ್ಮ ಮುಖದಲ್ಲಿ ಇಲ್ಲ ಡ್ಯಾಡ್…ನಾನೇ ಏನೇನೋ ಕಲ್ಪನೆ ಮಾಡಿಕೊಂಡುಬಿಟ್ಟೆ. ಅಷ್ಟೊಂದು ಅದೃಷ್ಟ ನನಗೆ ಇಲ್ಲ ಅಂತ ಈಗ ಗೊತ್ತಾಗ್ತಾ ಇದೆ ಡ್ಯಾಡ್…ನಿಮಗೆ ಮಗನ ಸಂತೋಷಕ್ಕಿಂತ ನಿಮ್ಮ ರಾಜಕೀಯ ಭವಿಷ್ಯನೇ ಹೆಚ್ಚಾಯ್ತು ಅಲ್ವಾ…ನಾನೀಗ ಏನ್ ಮಾಡಿದೆ ಅಂತ ನೀವು ಇಷ್ಟು ಕೋಪ ಮಾಡ್ಕೊಂಡಿದೀರಾ ಅಂತ ಗೊತ್ತಾಗ್ತಾ ಇಲ್ಲ…ರಾಜಕೀಯ ಬಿಸಿನೆಸ್ ಎಲ್ಲ ಕ್ಷೇತ್ರದಲ್ಲಿ ಇದ್ದವರಿಗೆ ಇಂತದ್ದೆಲ್ಲ ಸಾಮಾನ್ಯ…ನಾವು ಏನು ಹೇಳಿದರೂ ಅದೇ ನ್ಯೂಸ್ ಆಗತ್ತೆ…ಅದು ನಿಮಗೂ ಗೊತ್ತು…” ಎಂದು ನಿಲ್ಲಿಸಿದವನು “ನೀವು ನನ್ನ ಬಗ್ಗೆ ವಿಚಾರಿಸ್ತಾ ಇದೀರಾ ಅಂತ ಕುಮಾರ್ ಹೇಳಿದ ಕೂಡಲೇ ಗಡಿಬಿಡಿಯಿಂದ ಓಡೋಡಿ ಬಂದೆ…ಆದರೆ ಈಗ ಗೊತ್ತಾಗ್ತಾ ಇದೆ…ನಿಮ್ಮಿಂದ ಏನಾದರೂ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪು ಅಂತ…ಅದನ್ನ ಪದೇ ಪದೇ ನೆನಪಿಸ್ತಾ ಇರೋದಕ್ಕೆ ಥ್ಯಾಂಕ್ಸ್ ಡ್ಯಾಡ್….ಥ್ಯಾಂಕ್ ಯು ಸೋ ಮಚ್…” ಎಂದು ನೋವಿನಲ್ಲಿ ಹೇಳಿದವನು ಅಲ್ಲಿಂದ ಹೊರಟಿದ್ದ.
ಮುಂದುವರೆಯುವುದು…
ಮೊದಲ ಸಂಚಿಕೆ ಹೇಗಿತ್ತು ಎಂದು ಓದಿ ನಿಮ್ಮ ಅನಿಸಿಕೆ ತಿಳಿಸಿ.
ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ…
Swipe left/right or tap the sides to turn pages