New Katha Varnika is now on Google Play — read Telugu stories on your phone. Learn more
ಒಲವಿನ ಸೆರೆ – 2

ಒಲವಿನ ಸೆರೆ – 2

ಬೆಳಗಿನ ಮಂಜು ಎಲ್ಲೆಡೆ ಆವರಿಸಿತ್ತು. ನಗರವಿನ್ನೂ  ಸಂಪೂರ್ಣವಾಗಿ ಎಚ್ಚರವಾಗಿರಲಿಲ್ಲ. ರಸ್ತೆಗಳಲ್ಲಿ ವಾಹನಗಳ ಶಬ್ದ ಕಡಿಮೆಯಿತ್ತು. ಹಕ್ಕಿಗಳ ಚಿಲಿಪಿಲಿ ಕಲರವ ಸೊಂಪಾಗಿ ಕೇಳುತ್ತಿತ್ತು. ಮುಂಜಾನೆಯ ತಂಗಾಳಿ ಮನಸಿಗೆ ಹಿತವೆನಿಸುವಂತೆ ತಂಪಾಗಿ ಬೀಸುತ್ತಿತ್ತು. 

 

ನಗರದ ಹೃದಯ ಭಾಗದಲ್ಲಿ ಇರುವ ದೊಡ್ಡದಾದ ಮಹಲಿನಂತಹ ಮನೆಯಲ್ಲಿ ಗಂಟೆಯ ನಾದ ಕೇಳಿಬರುತ್ತಿತ್ತು. ಸುಮತಿ ಅವರು ಮುಂಜಾನೆ ಬೇಗನೆ ಎದ್ದು ಸ್ನಾನ ಮಾಡಿ ದೇವರಿಗೆ ಪೂಜೆ ಮಾಡುತ್ತಿದ್ದರು. ಅವರ ಮುಖದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯಂತ ಕಳೆಯಿತ್ತು. ಅವರು ಆರತಿ ತೆಗೆದುಕೊಂಡು ಬಂದವರು ಆಗಷ್ಟೇ ಸೋಫಾದಲ್ಲಿ ಬಂದು ಕುಳಿತ ಜಗದೀಶ್ ಅವರ ಎದುರು ಬರಲು ಅವರು ಆರತಿ ತೆಗೆದುಕೊಂಡಿದ್ದರು. 

 

“ಪುಟ್ಟಿ ಇನ್ನು ಎದ್ದಿಲ್ವಾ ಸುಮತಿ?” ಎಂದು ಕೇಳಿದರೆ ಸುಮತಿ ಅವರು,”ಅವಳು ಆಗಲೇ ಎದ್ದು ಬಂದಿದಾಳೆ…ಅಡುಗೆ ಮನೆಯಲ್ಲಿ ಇದಾಳೆ…ನಾನು ಬೇಡ ಅಂದರೂ ಇವತ್ತಿನ ತಿಂಡಿ ತಾನೇ ಮಾಡುತ್ತೇನೆ ಎಂದು ಬಂದಿದ್ದಾಳೆ…” ಎಂದು ಹೇಳುತ್ತಿದ್ದರೆ ಜಗದೀಶ್ ಅವರ ಮುಖದಲ್ಲಿ ನಗು ಮೂಡಿತ್ತು. 

 

“ಮಾಡಲಿ ಬಿಡೆ…ಅವಳಿಗೆ ಇಷ್ಟ ಆಗಿದ್ದನ್ನ ಮಾಡೋದಿಕ್ಕೆ ಬಿಡು…” ಎಂದು ಹೇಳಿದ್ದರು. ಸುಮತಿ ಅವರು ಆಯಿತು ಎಂಬಂತೆ ತಲೆಯಾಡಿಸಿದವರು ಅಡುಗೆ ಮನೆಯ ಕಡೆ ಹೋಗಿದ್ದರು. 

 

ಅಕ್ಷರಾ ದೊಡ್ಡದಾದ ಸುಸಜ್ಜಿತ ವ್ಯವಸ್ಥೆ ಹೊಂದಿರುವ ಅಡುಗೆ ಮನೆಯಲ್ಲಿ ನಿಂತು ಬೆಳಗಿನ ತಿಂಡಿಯ ತಯಾರಿಯಲ್ಲಿ ತೊಡಗಿದ್ದಳು. ಚಂದದ ಕುರ್ತಾಗೆ ಹೂವಿನ ಚಿತ್ತಾರ ಇರುವ ಲಾಂಗ್ ಸ್ಕರ್ಟ್ ತೊಟ್ಟವಳು ತನ್ನ ಉದ್ದದ ಕೂದಲನ್ನು ಮೇಲೆತ್ತಿ ಕ್ಲಿಪ್ಪಿನಲ್ಲಿ ಬಂಧಿಸಿದ್ದಳು. ಅವಳು ಮಾಡುವ  ವಿಧಾನ ಅಡುಗೆಯಲ್ಲಿ ನುರಿತ ಕೈಗಳು ಕೆಲಸ ಮಾಡುವಂತೆ ತೋರುತ್ತಿದ್ದವು. ಅವಳ ತಾಯಿ ಸುಮತಿ ಅಡುಗೆ ಮನೆಗೆ ಬಂದವರು ಅವಳನ್ನು ನೋಡುತ್ತಿದ್ದಂತೆ ಅವರ ಮುಖದಲ್ಲಿ ನಗು ಮೂಡಿತು. “ಪುಟ್ಟಿ…ಆಯ್ತಾ ನಿನ್ನ ಅಡುಗೆ? ನಾನು ಏನಾದ್ರೂ ಸಹಾಯ ಮಾಡ್ತೀನಿ ಅಂದರೂ ಬೇಡ ಅಂತಿದೀಯ?” ಎಂದು ಹೇಳಿದವರನ್ನು ಅಲ್ಲೇ ಇದ್ದ ಕುರ್ಚಿಯ ಮೇಲೆ ಕೂರಿಸಿದಳು. 

 

“ಮಮ್ಮಾ…ಸ್ವಲ್ಪ ಹೊತ್ತು ಆರಾಮಾಗಿ ಕೂತ್ಕೋ…ನಾನೇನು ದಿನ ಮಾಡ್ತೀನಾ? ಇಲ್ಲ ತಾನೆ…ಯಾವಾಗಲೂ ನೀನೇ ಮಾಡೋದು ಯಾರನ್ನಾದ್ರೂ ಕೆಲಸಕ್ಕೆ ಇಟ್ಕೋ ಅಂದರೂ ಒಪ್ಪಲ್ಲ” ಎಂದು ಹೇಳುತ್ತಿದ್ದರೆ 

 

ಸುಮತಿ,” ಆಯ್ತು ಕಂದಾ ನೀನೆ ಮಾಡು ನಾನು ತಿಂತೀನಿ ಆಯ್ತಾ…ಈಗ ಸಮಾಧಾನ ಆಯ್ತಾ?” ಎಂದು ಕೇಳಲು ನಗುತ್ತಾ ತಲೆಯಾಡಿಸಿದವಳು ಸರಸರನೆ ತಿಂಡಿ ಮಾಡಿ ಮುಗಿಸಿದಳು.

 

ಡೈನಿಂಗ್ ಟೇಬಲ್ ಮೇಲೆ ಪ್ಲೇಟ್ ಜೋಡಿಸಿದವಳು ಡ್ಯಾಡ್ ಎಂದು ಕೂಗಲು ಅವರು ಬಂದೇ ಪುಟ್ಟಿ ಎಂದವರು ನಿಮಿಷಗಳಲ್ಲಿ ಹಾಜರಿದ್ದರು. ತಾನು ತಯಾರಿಸಿದ ಬಿಸಿ ಬಿಸಿ ಪೂರಿ ಸಾಗುವನ್ನು ಅವರ ತಟ್ಟೆಗೆ ಬಡಿಸಿದವಳು ಇನ್ನೂ ಅಡುಗೆ ಮನೆಯಲ್ಲಿಯೇ ಇದ್ದ ಸುಮತಿ ಅವರನ್ನು ಕರೆತಂದು ಕುರ್ಚಿಯಲ್ಲಿ ಕೂರಿಸಿ ಅವರಿಗೂ ಬಡಿಸಿದ್ದಳು. 

 

ಹೇಗಿದೆ ಡ್ಯಾಡ್? ಎಂದವಳು ಕೇಳುತ್ತಿದ್ದರೆ ಜಗದೀಶ್ ಅವರು ನೀನು ಮಾಡಿದ ಮೇಲೆ ಮತ್ತೆ ಕೇಳಬೇಕಾ ಪುಟ್ಟಿ…ತುಂಬಾ ರುಚಿಯಾಗಿದೆ…” ಎಂದು ಹೇಳಿದರೆ ತಂದೆಯ ಮೆಚ್ಚುಗೆಯನ್ನು ಕೇಳಿ ಅವಳ ತುಟಿಯಂಚಲ್ಲಿ ಚಂದದ ನಗು ಮೂಡಿತ್ತು.

 

ಸುಮತಿ ಅವರು,” ಮಗಳು ಮಾಡಿದ ಮೇಲೆ ನಿಮ್ಮಪ್ಪನಿಗೆ ಅದು ಅಮೃತವೇ ಸರಿ” ಎಂದು ನಗುತ್ತಿದ್ದರೆ ಅಕ್ಷರಾ,”ಹಾಗಾದ್ರೆ ತಿಂಡಿ ಚೆನ್ನಾಗಿ ಇಲ್ವಾ ಮಮ್ಮಾ?” ಎಂದು ಆತಂಕದಲ್ಲಿ ಕೇಳಿದಾಗ ಸುಮತಿ,”ನಾನೆಲ್ಲಿ ಹೇಳಿದೆ? ಅವರ ಮುದ್ದಿನ ಮಗಳು ಏನೇ ಮಾಡಿದರೂ ನಿಮ್ಮಪ್ಪ ಖುಷಿಯಿಂದ ತಿಂತಾರೆ ನೀನು ಕೇಳದೆ ಇದ್ದರೂ ಅವರೇ ಹೇಳುತ್ತಾ ಇದ್ದರು ಅಂತ ಹೇಳೋಕೆ ಬಂದೆ ಅಷ್ಟೇ…” ಎಂದು ಹೇಳಿದ್ದರು. 

 

ಜಗದೀಶ್ ಅವರು,”ಹೌದು ಮತ್ತೆ…ನಮ್ಮ ಪುಟ್ಟಿ ಮಾಡಿದ ಮೇಲೆ ಚೆನ್ನಾಗೆ ಇರುತ್ತೆ…” ಎಂದವರು ಕೈ ತೊಳೆದು ಬರುತ್ತಿದ್ದಂತೆ ಅವರ ಫೋನ್ ರಿಂಗಣಿಸಿತ್ತು. 

“ಓಕೆ ನಾರಾಯಣ್…ಹತ್ತು ಗಂಟೆಗೆ ಸರಿಯಾಗಿ ನಾನು ಅಲ್ಲಿ ಇರ್ತೀನಿ…” ಎಂದು ಕರೆ ಕತ್ತರಿಸಿದರು. 

 

ಅಕ್ಷರಾ ತಿಂಡಿ ಮುಗಿಸಿದವಳು ತನ್ನ ಕೋಣೆಯ ಕಡೆ ಹೋಗಿದ್ದಳು. ಜಗದೀಶ್ ಅವರು ಹೆಂಡತಿಯ ಬಳಿ,”ಸುಮಾ…ಇವತ್ತು ಪಾರ್ಟಿ ಆಫೀಸಿಗೆ ಹೋಗ್ತಾ ಇದೀನಿ…ಇಂಪಾರ್ಟೆಂಟ್ ಡಿಸ್ಕಷನ್ ಇದೆ…ಮಧ್ಯಾಹ್ನ ಊಟ ಅಲ್ಲೇ ಅರೇಂಜ್ ಆಗಿರುತ್ತೆ ನನಗಾಗಿ ಕಾಯಬೇಡ… ಆದಷ್ಟು ಬೇಗ ಬರ್ತೀನಿ…ನೀನು ಹುಷಾರು…” ಎಂದು ಪ್ರೀತಿಯಿಂದ ಹೇಳಿದವರು ಮಗಳು ಇನ್ನೂ ಕೋಣೆಯಿಂದ ಆಚೆ ಬಾರದೇ ಇರುವುದನ್ನು ನೋಡಿ,” ನಾನು ಹೊರಟೆ ಮಗಳೇ…ಬರ್ತೀಯ? ಬಂದ್ರೆ ನಿನ್ನನ್ನ ಡ್ರಾಪ್ ಮಾಡಿ ಹೋಗ್ತೀನಿ…” ಎಂದು ದೊಡ್ಡ ದನಿಯಲ್ಲಿ ಹೇಳಿದರೆ ಅಕ್ಷರಾ ಹೊರಬಂದವಳು ಬೇಡ ಡ್ಯಾಡ್ ನಾನೇ ಕಾರು ತೆಗೆದುಕೊಂಡು ಹೋಗ್ತೀನಿ…” ಎಂದು ಹೇಳಿದರೆ ಜಗದೀಶ್ ಅವರು ಸರಿ ಡ್ರೈವರ್ ಕರೆದುಕೊಂಡು ಹೋಗು ನೀನೇ ಡ್ರೈವ್ ಮಾಡೋದು ಬೇಡ ಎಂದು ಹೇಳಲು ಅಕ್ಷರಾ ನಾನೇ ಹೋಗ್ತೀನಿ ಡ್ಯಾಡ್  ಡ್ರೈವರ್ ಬೇಡ ಎಂದು ಹೇಳುತ್ತಿದ್ದಂತೆ ಓಕೆ ಹುಷಾರು ಎಂದವರು ದೊಡ್ಡದಾದ ಸರ್ಕಾರಿ ಕಾರಿನಲ್ಲಿ ಹೋಗುತ್ತಿದ್ದರೆ ಅವರ ಹಿಂದೆ ಸಾಲು ಸಾಲು ಕಾರುಗಳು ಹೊರಟಿದ್ದವು. 

 

ಜಗದೀಶ್ ಕಶ್ಯಪ್ ಅವರು ಕೇಂದ್ರದಲ್ಲಿ ಮಂತ್ರಿ ಸ್ಥಾನದಲ್ಲಿ ಇದ್ದರು. ಅವರು ತಂದೆಯ ಕಾಲದಿಂದಲೂ ಬಂದ ರಾಜಕೀಯವನ್ನು ಮುಂದುವರೆಸಿಕೊಂಡು ಬಂದಿದ್ದರು. ಅವರು ಮನೆಯವರ ಇಚ್ಚೆಯಂತೆ ಸುಮತಿಯವರನ್ನು ಮದುವೆಯಾಗಿದ್ದರೂ ಬಹಳ ಪ್ರೀತಿ ಗೌರವದಿಂದ ನೋಡಿಕೊಳ್ಳುತ್ತಿದ್ದರು. ಅಷ್ಟು ದೊಡ್ಡ ಪದವಿಯಲ್ಲಿ ಇದ್ದರೂ ಮನೆಯಲ್ಲಿ ಹೆಂಡತಿ ಮಗಳ ಮುಂದೆ ಅಪ್ಪಟ ಸಂಸಾರಸ್ಥನಂತೆ ನಡೆದುಕೊಳ್ಳುತ್ತಿದ್ದರು. ಅವರಿಗೆ ಅಕ್ಷರಾ ಒಬ್ಬಳೇ ಮಗಳು. ಅವರ ಅಷ್ಟು ದೊಡ್ಡ ಆಸ್ತಿಗೆ ಅವಳೊಬ್ಬಳೇ ವಾರಿಸು. ಜಗದೀಶ್ ಸುಮತಿ ದಂಪತಿಗೆ ಅಕ್ಷರಾ ಹುಟ್ಟಿದ ನಂತರ ಮತ್ತೆ ಮಕ್ಕಳಾಗಲೇ ಇಲ್ಲ. ಅಷ್ಟು ದೊಡ್ಡ ಮನೆತನಕ್ಕೆ ಗಂಡು ವಾರಿಸುದಾರನಿಲ್ಲ ಎಂದು ಜಗದೀಶ್ ಅವರ ತಾಯಿ ಬಹಳ ನೊಂದುಕೊಂಡಿದ್ದರು. ಕೆಲವೊಮ್ಮೆ ಅದಕ್ಕೋಸ್ಕರವೇ ಎರಡನೇ ಮದುವೆಯ ಬಗ್ಗೆ ಕೂಡ ಮಾತನಾಡಿದ್ದರು. ಆದರೆ ಜಗದೀಶ್ ಅವರು ತಮಗೆ ಗಂಡು ಹೆಣ್ಣು ಎಂಬ ಬೇಧವಿಲ್ಲ ತಮ್ಮ ಮಗಳು ಒಬ್ಬಳೇ ಸಾಕು ಎಷ್ಟೋ ಜನರಿಗೆ ಮಕ್ಕಳೇ ಇರುವುದಿಲ್ಲ. ದೇವರು ನಮಗೆ ಇಷ್ಟು ಮುದ್ದಾದ ಮಗಳನ್ನು ಕೊಟ್ಟಿರುವಾಗ ನೀವು ಇಂತಹ ಮಾತುಗಳನ್ನು ಆಡುವುದು ಸರಿಯಲ್ಲ ಎಂದು ಅವರ ಮಾತನ್ನು ತೆಗೆದುಹಾಕಿದ್ದರು. 

 

 ✨✨✨✨✨

 

ಅಕ್ಷರಾ ಮನೆಯ ಅಂಗಳದಲ್ಲಿ ಇದ್ದ ದೊಡ್ಡ ಕಾರೊಂದರ ಬಳಿ ಹೋಗುತ್ತಿದ್ದಂತೆ ಡ್ರೈವರ್ ಓಡಿ ಬಂದು ಬಾಗಿಲು ತೆಗೆದಿದ್ದ. ಅಕ್ಷರಾ,”ನಾನೇ ಡ್ರೈವ್ ಮಾಡ್ತೀನಿ…ನೀವು ಬರೋದೇನು ಬೇಡ…” ಎಂದು ವಿನಯವಾಗಿ ಹೇಳುತ್ತಿದ್ದಂತೆ ಡ್ರೈವರ್,”ಸರ್ ಬೈತಾರೆ ಮೇಡಂ…ನಾನ್ ಡ್ರೈವ್ ಮಾಡ್ತೀನಿ…” ಎಂದು ಹೇಳಿದ್ದ.

 

ಅಕ್ಷರಾ,”ನಿಮ್ಮ ಸರ್ ಗೆ ನಾನು ಆಗಲೇ ಹೇಳಿದೀನಿ… ಅವರು ಒಪ್ಪಿಯೂ ಆಗಿದೆ ನೀವೇನೂ ತಲೆಕೆಡಿಸಿಕೊಳ್ಳಬೇಡಿ…” ಎಂದವಳು ಕಾರು ಚಲಾಯಿಸಿಕೊಂಡು ಹೋಗಿದ್ದಳು. ಕಾರು ಹೋಗಿ ನಿಂತದ್ದು ಅವಳು ನಡೆಸುತ್ತಿದ್ದ ಎನ್.ಜಿ. ಓ ಆಫೀಸಿನ ಕಡೆ. ಅವಳು ಕಾರಿನಿಂದ ಇಳಿದು ಮುಖ್ಯ ಕಟ್ಟಡದ ಕಡೆ ಹೋಗುತ್ತಿದ್ದಂತೆ ಚಿಕ್ಕ ಹುಡುಗನೊಬ್ಬ ಅವಳ ಬಳಿ ಅಕ್ಕಾ ಎನ್ನುತ್ತಾ ಓಡಿಬಂದಿದ್ದ. ನಾಲ್ಕು ವರ್ಷದ ಮುದ್ದು ಪೋರ. ಅವಳು ಅವನನ್ನು ಎತ್ತಿಕೊಂಡವಳು ಅವನ ಜೊತೆ ಮುದ್ದು ಮುದ್ದಾಗಿ ಮಾತನಾಡುತ್ತಾ ಒಳಗೆ ನಡೆದಿದ್ದಳು. ಅನಾಥ ಮಕ್ಕಳು, ವಯಸ್ಸಾದ ಹಿರಿಯರು, ಆಶ್ರಯವಿಲ್ಲದೆ ಇರುವವರು ಎಲ್ಲರಿಗೂ ಆಶ್ರಯ ನೀಡುವ ಅವಳ ’ಆಶಾಕಿರಣ’ ಎನ್ನುವ ಆಶ್ರಯ ತಾಣ. 

 

ಹಿರಿಯರು ಮಕ್ಕಳ ಬಳಿ ಪ್ರೀತಿಯಿಂದ ಮಾತನಾಡಿದವಳು ಮಕ್ಕಳಿಗೆ ತಾನು ತಂದಿದ್ದ ಚಾಕಲೇಟ್ಗಳನ್ನು ನೀಡಿದರೆ ಹಿರಿಯರಿಗೆ ಹಣ್ಣು ಹಂಪಲುಗಳನ್ನು ನೀಡಿದ್ದಳು. ವಯಸ್ಸಾದ ಅಜ್ಜಿಯೊಬ್ಬರು ಅವಳನ್ನು ಪ್ರೀತಿಯಿಂದ ಅವಳ ತಲೆಸವರಿದವರು,”ಅಷ್ಟು ದೊಡ್ಡ ಮನೆಯವಳಾದರೂ ಚೂರು ಅಹಂಕಾರ ಗರ್ವ ತೋರದೆ ನಮ್ಮಂತವರಿಗೆ ಆಶ್ರಯ ನೀಡಿದ್ದೀಯ…ನೀನು ನಿಜವಾಗಲೂ ದೇವತೆ ಕಣಮ್ಮ…” ಎಂದವರ ಕಣ್ಣಲ್ಲಿ ನೀರು ಬಂದಿತ್ತು. 

 

ಅಕ್ಷರಾ,”ಅಂತಹ ಮಾತೆಲ್ಲ ಯಾಕಜ್ಜಿ…ನಾನು ಅಂತಹ ದೊಡ್ಡ ಕೆಲಸವೇನು ಮಾಡಿಲ್ಲ…ನನ್ನ ಮನಸಿಗೆ ಖುಷಿ ಕೊಡುವಂತಹ ಕೆಲಸ ಮಾಡಿದ್ದೀನಿ ಅಷ್ಟೇ…” ಎಂದು ಹೇಳಿದರೆ ಅವರು,”ನನ್ನ ಮಕ್ಕಳೇ ನನ್ನನ್ನ ನೋಡಲು ವರ್ಷಕ್ಕೊಮ್ಮೆಯೂ ಬರದೇ ಇರುವಾಗ ನೀನು ಯಾವ ಜನ್ಮದಲ್ಲಿ ನನ್ನ ಮಗಳಾಗಿದ್ದೆಯೋ ಅಥವಾ ನಾನೇ ನಿನ್ನ ಮಗಳಾಗಿದ್ದೇನೋ ಈ ಜನ್ಮದಲ್ಲಿ ನನ್ನ ಸಾಕುತ್ತಾ ಇದೀಯ…” ಎಂದು ಹೇಳುತ್ತಿದ್ದರು. ಅಕ್ಷರಾ ನೀವು ಹಿರಿಯರು ಆಶೀರ್ವಾದ ಮಾಡಬೇಕೇ ಹೊರತು ಕಣ್ಣಲ್ಲಿ ನೀರು ಹಾಕಬಾರದು ಎಂದು ಹುಸಿಮುನಿಸು ತೋರಲು ಅಜ್ಜಿ ಯಾವಾಗಲೂ ಹೀಗೆ ಹೇಳಿ ನಮ್ಮ ಬಾಯಿಮುಚ್ಚಿಸುತ್ತೀಯಾ ಎಂದು ಹೇಳಿದ್ದರು. 

 

ಅಕ್ಷರಾ ಇರುವುದೇ ಹಾಗೆ. ಇನ್ನೊಬ್ಬರ ಸಂತೋಷದಲ್ಲಿಯೇ ತನ್ನ ಸಂತೋಷ ಕಾಣುವ ಮುದ್ದು  ಹುಡುಗಿ. ಚಿಕ್ಕಂದಿನಿಂದ ಚಿನ್ನದ ಚಮಚದ ಜೊತೆ ಬೆಳೆದಿದ್ದರೂ ಅವಳಿಗೆ ಆ ಶ್ರೀಮಂತಿಕೆಯಲ್ಲಿ ಆಸಕ್ತಿ ಇರಲಿಲ್ಲ. ಚಿಕ್ಕಂದಿನಿಂದಲೂ ತಾನು ದೊಡ್ಡವಳಾದ ಮೇಲೆ ಎನ್.ಜಿ.ಓ ನಡೆಸುತ್ತೇನೆ ಎಂದು ಹೇಳುತ್ತಿದ್ದರೂ ಅವಳ ತಂದೆ ತಾಯಿ ಚಿಕ್ಕವಳು ಏನೋ ಹೇಳುತ್ತಾಳೆ ಎಂದು ಸುಮ್ಮನಾಗಿದ್ದರು. ಆದರೆ ಅವಳು ದೊಡ್ಡವಳಾದ ಮೇಲೂ ಅದರ ಮೇಲೆ ಅವಳಿಗಿರುವ ಆಸಕ್ತಿ ನೋಡಿ ಅವರು ಅಚ್ಚರಿ ಪಟ್ಟಿದ್ದರು. ತಮ್ಮ ಮಗಳು ಇಷ್ಟೊಂದು ಶ್ರೀಮಂತಿಕೆಯ ನಡುವೆ ಆಯ್ದುಕೊಂಡ ದಾರಿ ನೋಡಿ ಬೇಸರವಾದರೂ ಅವಳ ಸಂತೋಷಕ್ಕೋಸ್ಕರ ಒಪ್ಪಿಕೊಂಡಿದ್ದರು. ಎಂ.ಟೆಕ್ ಮುಗಿಸಿದವಳು ತಂದೆಯ ಸಹಾಯದಿಂದ ತನ್ನದೇ ಸ್ವಂತ ಎನ್ಜೀಒ ತೆರೆದಿದ್ದಳು. ಅನೇಕ ಅನಾಥ ಮಕ್ಕಳು ಹಾಗೂ ಹಿರಿಯರಿಗೆ ಆಶ್ರಯ ನೀಡಿದ್ದಳು. ಜೊತೆಯಲ್ಲೇ ಹೆಂಗಸರಿಗೆ ಹೊಲಿಗೆ ತರಬೇತಿ ನೀಡುತ್ತಿದ್ದರು. ಚಿಕ್ಕ ಮಕ್ಕಳಿಗೆ ಅವಳ ತಂದೆಯ ಶಾಲೆಯಲ್ಲೇ ಉಚಿತ ಶಿಕ್ಷಣ ಕೊಡಿಸಿದ್ದಳು. ಒಟ್ಟಿನಲ್ಲಿ ಅವಳು ಆಶಾಕಿರಣದಲ್ಲಿ ಎಲ್ಲರ ಅಚ್ಚುಮೆಚ್ಚು. 

 

  ✨✨✨✨✨✨

 

ಸೂರ್ಯವಂಶಿ ನಿವಾಸ

 

ವಿರಾಟ್ ಬೆಳಿಗ್ಗೆ ಬೇಗ ಎದ್ದು ಜಿಮ್ ಮುಗಿಸಿದವನು ತಾನೇ ಪ್ರೋಟೀನ್ ಶೇಕ್ ತಯಾರಿಸಿ ಕುಡಿದಿದ್ದ. ಯಾವಾಗಲೂ ಮನೆ ಕೆಲಸಕ್ಕೆ ಬರುತ್ತಿದ್ದ ಶಾಂತಮ್ಮ ಅಂದು ಆರೋಗ್ಯ ಸಮಸ್ಯೆಯಿಂದ ಬಂದಿರಲಿಲ್ಲ. ಸ್ನಾನ ಮುಗಿಸಿ ತಯಾರಾದವನು ಅಡುಗೆ ಮನೆಗೆ ಬಂದರೆ ತಿಂಡಿ ಬಡಿಸುವವರೂ ಯಾರೂ ಇರಲಿಲ್ಲ. ಅವನಿಗೆ ಅಷ್ಟು ದೊಡ್ಡ ಮನೆಯಲ್ಲಿ ಒಬ್ಬಂಟಿಯಂತೆ ಅನಿಸಿತ್ತು. ರೋಹಿಣಿ ಹಾಗೂ ಸಮರ್ಥ್ ಆಗಷ್ಟೇ ತಿಂಡಿ ತಿಂದು ಹೋಗಿದ್ದರು. ತಂದೆ ಎಲ್ಲಿ ಎಂದು ನೋಡಲು ರಾಜಶೇಖರ್ ಅವರು ಆಗಲೇ ತಿಂಡಿ ಮುಗಿಸಿ ತಮ್ಮ ಆಫೀಸಿಗೆ ತೆರಳಿದ್ದರು. ತಾನು ನಿನ್ನೆಯಷ್ಟೇ ಅಷ್ಟು ದೊಡ್ಡ ಅವಾರ್ಡ್ ಗೆದ್ದಿರುವ ಖುಷಿ ಮನೆಯಲ್ಲೆಲ್ಲೂ ಕಾಣಲಿಲ್ಲ. ಟೇಬಲ್ ಮೇಲೆ ಇದ್ದ ತಿಂಡಿ ತಣ್ಣಗಾಗಿತ್ತು. ಟೇಬಲ್ ಮೇಲಿದ್ದ ಬೆಳ್ಳಿಯ ತಟ್ಟೆಯನ್ನು ನೋಡಲು ಮುಖದಲ್ಲಿ ವಿಷಾದದ ನಗು ಮೂಡಿತ್ತು. ತಾನು ತಿಂದರೂ ಬಿಟ್ಟರೂ ಯಾರು ಕೇಳುವವರಿಲ್ಲ ಎಂದು ಅನಿಸಿತ್ತು. ಬಡಿಸಿಕೊಂಡು ಸೇರಿದಷ್ಟು ತಿಂದವನು ಎದ್ದು ಆಫೀಸ್ ಕಡೆ ಹೋಗಿದ್ದ. 

 

ಆಫೀಸಿಗೆ ಬರಲು ಎಂಪ್ಲಾಯೀಗಳು ಕಂಗ್ರಾಟ್ಸ್ ಸರ್ ಎಂದು ಶುಭ ಹಾರೈಸಿದ್ದರು. ಅವನ ಪಿಎ ರಾಕೇಶ್ ಬಂದು ಹೂ ಗುಚ್ಛದೊಂದಿಗೆ ಶುಭಕೋರಿದ್ದ. ವಿರಾಟ್ ಎಲ್ಲರಿಗೂ ಥ್ಯಾಂಕ್ ಯು ಎಂದವನು ಕ್ಯಾಬಿನ್ ಕಡೆ ಹೋದರೆ ರಾಕೇಶ್ ಅವನನ್ನು ಹಿಂಬಾಲಿಸಿದ್ದ. 

 

ರಾಕೇಶ್ ಅವನ ಜೊತೆ ಬಂದವನು,”ಒನ್ಸ್ ಅಗೈನ್ ಕಂಗ್ರಾಟ್ಸ್ ಸರ್…” ಎಂದವನ ಮುಖದಲ್ಲಿ ನಿಜವಾದ ಸಂತೋಷವಿತ್ತು. ಅವನ ಸಂತೋಷವನ್ನು ನೋಡಿದ ವಿರಾಟ್ ಮುಖದಲ್ಲೂ ನಗು ಮೂಡಲು,”ಥ್ಯಾಂಕ್ ಯು ರಾಕೇಶ್…ನೀವು ಯಾವಾಗಲೂ ನನ್ನ ಜೊತೇನೆ ಇದೀರಾ…ನಾನು ಕಂಪನಿ ಜವಾಬ್ದಾರಿ ತೆಗೆದುಕೊಂಡಾಗಿನಿಂದ ಜೊತೆ ಇದೀರಾ…ಥ್ಯಾಂಕ್ ಯು…” ಎಂದವನು ತುಸು ಭಾವುಕನಾಗಿದ್ದ. ರಾಕೇಶ್ ಅವನ ವಯಸ್ಸಿನವನೇ. ಹಾಗಾಗಿ ವಿರಾಟ್ ಗೆ ಅವನು ಒಳ್ಳೆಯ ಸ್ನೇಹಿತನಂತೆಯೇ ಇದ್ದ. ಅವನ ಕೆಲಸ ಹಾಗೂ ನಿರ್ಧಾರಗಳಲ್ಲಿ ಅವನ ಹಿಂದೆ ಇರುತ್ತಿದ್ದ. ವಿರಾಟ್ ನ ನಂಬಿಕಸ್ಥ ವ್ಯಕ್ತಿಗಳಲ್ಲಿ ರಾಕೇಶ್ ಕೂಡ ಒಬ್ಬ.

 

ರಾಕೇಶ್,”ಸರ್ ಇವತ್ತು ಮಧ್ಯಾಹ್ನ ಆಫೀಸಲ್ಲಿ ಎಲ್ಲರೂ ನಿಮಗೋಸ್ಕರ ಕೇಕ್ ತರಿಸುತ್ತಾ ಇದ್ದಾರೆ…ನೀವು ಬರಬೇಕು ಸರ್…ನೀವೇ ಕೇಕ್ ಕಟ್ ಮಾಡಬೇಕು…ನಾವೆಲ್ಲ ಕಾಯ್ತಾ ಇರ್ತೀವಿ…” ಎಂದವನು ಅಂದಿನ ವರದಿ ಒಪ್ಪಿಸಿ ಹೋಗಿದ್ದ. ವಿರಾಟ್ ರಾಕೇಶ್ ಹೋದ ದಾರಿಯನ್ನೇ ನೋಡಿದವನ ಮೊಗದಲ್ಲಿ ವಿಷಾದವಾದ ನಗು ಹಾದು ಹೋಗಿತ್ತು. 

 

ಮುಂದುವರೆಯುವುದು…

 

 

 ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ  

 

 

ನಿಮ್ಮ ಪ್ರೋತ್ಸಾಹ ಹಾಗೂ ಚಂದದ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ…