ಒಲವಿನ ಸೆರೆ – 3
ರಾಜಶೇಖರ್ ಅವರು ಪ್ರಸ್ತುತ ರಾಜಕೀಯದಲ್ಲಿ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದರು. ಇಷ್ಟು ವರ್ಷದ ಅವರ ರಾಜಕೀಯ ಜೀವನದಲ್ಲಿ ಒಂದು ಬಾರಿ ರಾಜ್ಯದ ಕ್ಯಾಬಿನೆಟ್ನಲ್ಲಿ ಮಂತ್ರಿ ಪದವಿ ಪಡೆದಿದ್ದರು. ಅವರ ಪಕ್ಷವು ರಾಜ್ಯದಲ್ಲಿ ಅನೇಕ ಬೆಂಬಲಿಗರನ್ನು ಹೊಂದಿತ್ತು. ತಮ್ಮದೇ ಸ್ವಂತ ಪಕ್ಷ ಕಟ್ಟಿ ಚುನಾವಣೆಗೆ ಸ್ಪರ್ಧಿಸಿದ್ದರು. ಅವರ ಪಕ್ಷದಿಂದ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಕಾಂಕ್ಷಿ ಆಗಿದ್ದರು. ಅವರಿಗೆ ಜೀವನದಲ್ಲಿ ರಾಜಕೀಯ ಎಂದರೆ ಅವರ ಜೀವನದ ಗುರುತು ಎಂದೇ ಹೇಳಬಹುದು.
ಅವರ ಪಿಎ ಕುಮಾರ್ ಅವರು,”ಸರ್…ನಿಮಗೆ ಏನನಿಸುತ್ತೇ? ಬರುವ ಎಲೆಕ್ಷನ್ನಲ್ಲಿ ನಮ್ಮ ಪಕ್ಷ ಗೆಲ್ಲುವ ಚಾನ್ಸ್ ಇದೆಯಾ? ಈಗಾಗಲೇ ವಿರೋಧ ಪಕ್ಷದವರು ನಮ್ಮ ವಿರುದ್ಧ ಪ್ರಚಾರ ಮಾಡ್ತಾ ಇದಾರೆ ಎನ್ನುವ ಸುದ್ದಿ ಸಹ ಕೇಳಿಬಂದಿದೆ…ಹೀಗೇ ಆದರೆ ಮುಂದೆ ಕಷ್ಟ ಇದೆ ಸರ್…” ಎಂದು ಆತಂಕದಲ್ಲಿ ಹೇಳಿದ್ದರು.
ರಾಜಶೇಖರ್,”ಹಾಗಂತೀರಾ ಕುಮಾರ್…ಇದಕ್ಕೆ ಏನಾದರೂ ಒಂದು ಮಾಡಲೇಬೇಕು…ಕೇಂದ್ರದಲ್ಲಿ ಪರಿಚಯ ಇರುವವರನ್ನು ಸಂಪರ್ಕ ಮಾಡಲು ಪ್ರಯತ್ನಿಸಿ…ಅದಷ್ಟು ಬೇಗ…ಏನಾದ್ರೂ ಮಾಡದೆ ಇದ್ದರೆ ನೀವು ಹೇಳಿದ ಹಾಗೆ ಮುಂದೆ ಖಂಡಿತ ಕಷ್ಟ ಇದೆ…” ಎಂದು ಹೇಳಿದರೆ ಕುಮಾರ್,”ಓಕೆ ಸರ್ ಆದಷ್ಟು ಬೇಗ ಇದಕ್ಕೊಂದು ಒಳ್ಳೆಯ ವ್ಯವಸ್ಥೆ ಮಾಡ್ತೀನಿ…” ಎಂದು ಹೋಗಿದ್ದರು.
©©©©©©©©©
ಸೂರ್ಯವಂಶಿ ಗ್ರೂಪ್ಸ್ ನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಆಫೀಸಿನವರೆಲ್ಲ ಸೇರಿಕೊಂಡು ಕೇಕ್ ತರಿಸಿ ಸಂಭ್ರಮಿಸಿದ್ದರು. ರಾಕೇಶ್ ಎಲ್ಲರ ಕಡೆಯಿಂದ ವಿರಾಟ್ ಬಳಿ ಕೇಕ್ ತರಿಸಿರುವ ಬಗ್ಗೆ ಹೇಳಲು ವಿರಾಟ್ ಸಂತೋಷದಿಂದ ಬಂದು ಕೇಕ್ ಕಟ್ ಮಾಡಿದ್ದ. ರಾಕೇಶ್ ಕೂಡ ತನ್ನ ವತಿಯಿಂದ ಇನ್ನೊಂದು ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದ್ದ.
ಕೇಕ್ ಕಟ್ ಮಾಡಿ ಆನಂದಿಸಿದ ನಂತರ ಎಲ್ಲರೂ,” ಸರ್ ನಮ್ಮ ಕಡೆಯಿಂದ ಆಯಿತು ಇನ್ನೇನಿದ್ದರೂ ನಿಮ್ಮ ಕಡೆಯಿಂದ ಪಾರ್ಟಿ…ಯಾವಾಗ ಕೊಡಿಸ್ತೀರ? ನಿಮ್ಮ ಕಡೆಯಿಂದ ಬರುವ ಟ್ರೀಟ್ಗೋಸ್ಕರ ವೇಟ್ ಮಾಡ್ತಾ ಇದೀವಿ…” ಎಂದು ಹೇಳಿದಾಗ ವಿರಾಟ್ ಖಂಡಿತ ನನ್ನ ಕಡೆಯಿಂದ ಎಲ್ಲರಿಗೂ ಸ್ಪೆಷಲ್ ಟ್ರೀಟ್ ಇದೆ ಆಂಡ್ ಥ್ಯಾಂಕ್ ಯು ಸೋ ಮಚ್ ಫಾರ್ ದಿಸ್…” ಎಂದು ಕೈಯಲ್ಲಿದ್ದ ಕೇಕ್ ತೋರಿಸಿದ್ದ. ಹೊರಗಡೆ ಸಂತೋಷದಿಂದ ಇರುವಂತೆ ನಗುತ್ತಿದ್ದರೂ ಅವನ ಮನದಲ್ಲಿ ನೋವೇ ತುಂಬಿತ್ತು.
✨✨✨✨✨
ರಾಜಶೇಖರ್ ಅವರು ಮನೆಗೆ ಬಂದವರು ಸೋಫಾ ಮೇಲೆ ಕುಳಿತರು. ಅವರ ಪತ್ನಿ ರೋಹಿಣಿ ಕಾಫೀ ತೆಗೆದುಕೊಂಡು ಬಂದಿದ್ದರು. “ಎಲೆಕ್ಷನ್ ಕೆಲಸ ಎಲ್ಲ ಹೇಗೆ ನಡೀತಾ ಇದೆ…ಇನ್ನೇನು ಕೆಲವು ದಿನಗಳಲ್ಲಿ ಪ್ರಚಾರ ಕೂಡ ಶುರು ಆಗತ್ತೆ ಅಲ್ವಾ?” ಎಂದು ಕೇಳುತ್ತಿದ್ದರೆ ರಾಜಶೇಖರ್ ಅವರು,”ಅದೆಲ್ಲ ನಡೀತಾ ಇದೆ ರೋಹಿಣಿ…ಆದರೆ ವಿರೋಧ ಪಕ್ಷದವರು ನಮ್ಮ ವಿರುದ್ಧ ಪ್ರಚಾರ ಮಾಡ್ತಾ ಇದಾರೆ ಅನ್ನೋ ಸುದ್ದಿ ಸಿಕ್ಕಿದೆ…” ಎಂದು ಹೇಳಿದ್ದರು.
ರೋಹಿಣಿ,”ಅಯ್ಯೋ ಹೌದೇನ್ರಿ…ವೋಟ್ ನಮ್ಮ ಪರ ಆಗೋ ಹಾಗೆ ನಾವು ಏನಾದ್ರೂ ಮಾಡಬೇಕು ಅಲ್ವಾ? ಇದಕ್ಕೆ ಏನು ಉಪಾಯ ಇಲ್ವಾ?” ಎಂದು ಆತಂಕದಲ್ಲಿ ಕೇಳಿದ್ದರು. ರಾಜಶೇಖರ್ ಅವರು,”ಇದೆ…ನಾವು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಅಷ್ಟೇ…ಕೇಂದ್ರದಲ್ಲಿ ಪರಿಚಯ ಇದ್ದವರನ್ನು ವಿಚಾರಿಸು ಅಂತ ಹೇಳಿದೀನಿ ಕುಮಾರ್ ಗೆ …ನೋಡೋಣ ಏನಾಗತ್ತೆ ಅಂತ” ಎಂದವರು ಸೋಫಾಗೆ ತಲೆಯಾನಿಸಿ ಕುಳಿತಿದ್ದರು. ಅವರ ತಲೆಯ ತುಂಬಾ ಏನಾಗಬಹುದು? ಏನು ಮಾಡಬೇಕು ಎನ್ನುವ ವಿಚಾರವೇ ಕೊರೆಯುತ್ತಿತ್ತು.
ವಿರಾಟ್ ಅಂದು ತುಸು ಮೊದಲೇ ಆಫೀಸಿನಿಂದ ಮನೆಗೆ ಬಂದಿದ್ದನು. ಅವನು ಬರುತ್ತಿದ್ದಂತೆ ರಾಜಶೇಖರ್ ಅವರು ಸೋಫಾದಲ್ಲಿ ಕುಳಿತಿರುವುದು ಕಂಡಿತು. ತನಗಿಂತ ಮೊದಲೇ ಬಂದು ಕುಳಿತಿರುವುದು ನೋಡಿ ಇವತ್ತಾದರೂ ಡ್ಯಾಡ್ ಜೊತೆ ಸರಿಯಾಗಿ ಮಾತನಾಡಬಹುದು ನಿನ್ನೆ ಏನೋ ಟೆನ್ಶನ್ ಅಲ್ಲಿ ಇದ್ದರು ಅನಿಸತ್ತೆ ಎಂದವನಿಗೆ ತಂದೆಯ ಜೊತೆ ಕುಳಿತು ಮಾತನಾಡುವ ಬಯಕೆ. ವಿರಾಟ್ ಡ್ಯಾಡ್ ಎಂದು ಕರೆಯಲು ಅವರು ಏನೋ ತಲೆಬಿಸಿಯಲ್ಲಿ ಇದ್ದವರು ಅವನ ಕಡೆ ನೋಡಿ ಬಂದ್ಯಾ ವಿರಾಟ್? ಎಂದು ಕೇಳಲು ವಿರಾಟ್ ಉತ್ತರಿಸುವ ಮೊದಲೇ ಅವರ ಫೋನ್ ರಿಂಗಣಿಸಿತ್ತು. ಹೇಳು ಕುಮಾರ್ ಎಂದವರು ಫೋನ್ ಕರೆಯಲ್ಲಿ ಬ್ಯುಸಿಯಾದರು. ವಿರಾಟ್ ಅವರ ಜೊತೆ ಮಾತನಾಡುವ ಹಂಬಲದಿಂದ ಬಂದವನು ಮತ್ತೇನೂ ಹೇಳದೇ ಅಲ್ಲಿಂದ ಸರಿದುಹೋದ. ಅವರು ಅದ್ಯಾವುದರ ಅರಿವಿರದೆ ತಮ್ಮ ರಾಜಕೀಯ ಭವಿಷ್ಯದ ಚಿಂತೆಯಲ್ಲಿ ಮುಳುಗಿದ್ದರು.
ವಿರಾಟ್ ತನ್ನ ಕೋಣೆಗೆ ಹೋದವನು ಯಾವುದೇ ಭಾವನೆ ತೋರದೆ ಕಬೋರ್ಡ್ನಲ್ಲಿದ್ದ ಬಟ್ಟೆ ತೆಗೆದುಕೊಂಡವನು ಫ್ರೆಷ್ ಆಗಲು ಹೋಗಿದ್ದ. ಬಟ್ಟೆ ಬದಲಿಸಿ ಬಂದವನು ಲ್ಯಾಪ್ಟಾಪ್ ಹಿಡಿದು ಕುಳಿತಿದ್ದ. ಅವನು ಆಫೀಸಿನಿಂದ ಬರಲಿ ಮನೆಯಿಂದ ಆಫೀಸಿಗೆ ಹೋಗಲಿ ಯಾರೂ ಏನನ್ನೂ ಕೇಳುವವರಿಲ್ಲ. ಅವರ ಪಾಡಿಗೆ ಅವರು ಇದ್ದರೇ ವಿರಾಟ್ ತನ್ನ ಪಾಡಿಗೆ ತಾನು ಇರುತ್ತಿದ್ದ. ಅವನಿಗೆ ತನ್ನದೇ ಮನೆಯಲ್ಲಿ ಇದ್ದರೂ ಬೇರೆಯವರ ಮನೆಯಲ್ಲಿ ಇರುವಂತೆ ಅನಿಸುವ ವಾತಾವರಣ ಆ ಮನೆಯಲ್ಲಿತ್ತು.
ರಾತ್ರಿ ಊಟದ ಸಮಯದಲ್ಲಿ ಎಲ್ಲರೂ ಊಟಕ್ಕೆ ಕುಳಿತಿದ್ದರು. ಎಲ್ಲರೂ ಅಂದರೆ ರಾಜಶೇಖರ್ ರೋಹಿಣಿ ಹಾಗೂ ಅವರ ಮಗ ಸಮರ್ಥ್ ಅವರ ಮಧ್ಯೆ ವಿರಾಟ್ ಇರಲಿಲ್ಲ. ಅವನು ಬಂದನೋ ಬಿಟ್ಟನೋ ಎಂದು ರಾಜಶೇಖರ್ ಕೂಡ ಕೇಳಲಿಲ್ಲ. ಅವರ ಪಾಡಿಗೆ ಅವರು ಊಟ ಮಾಡಿ ಹೋಗಿದ್ದರು.
ವಿರಾಟ್ ಲ್ಯಾಪ್ಟಾಪ್ ಹಿಡಿದು ಕುಳಿತವನು ಊಟದ ಸಮಯವಾಯಿತು ಈಗ ಡ್ಯಾಡ್ ಕೂಡ ಇರ್ತಾರೆ ಎಂದವನು ಅಡುಗೆ ಮನೆ ಕಡೆ ನಡೆದರೆ ಅಲ್ಲಿ ರೋಹಿಣಿ ಅವರು ಕಡೆಯ ತುತ್ತು ತಿಂದು ಏಳುತ್ತಿದ್ದರು. ವಿರಾಟ್ ಡ್ಯಾಡ್ ಎಲ್ಲಿ ಎಂದು ಕೇಳುತ್ತಿದ್ದಂತೆ ರೋಹಿಣಿ ಅವರು ಆಗಲೇ ಊಟ ಮುಗಿಸಿ ಹೋದರು. ನಮ್ಮದೂ ಆಯ್ತು. ನೀನು ಊಟ ಮಾಡಿ ಮಲಗು ಎಂದವರು ತಟ್ಟೆ ಎತ್ತಿಟ್ಟು ಹೋಗಿದ್ದರು. ವಿರಾಟ್ ಗೆ ಯಾಕೋ ಮನಸಿಗೆ ಬಹಳ ನೋವಾಗುತ್ತಿತ್ತು. ಗಂಡು ಮಕ್ಕಳು ಹೊರಗಡೆ ಎಷ್ಟೇ ಗಟ್ಟಿ ಎಂಬಂತೆ ತೋರಿಸಿಕೊಂಡರೂ ಒಳಗಡೆ ಇರುವ ನೋವು ಒಂದಲ್ಲ ಒಂದು ಸಂದರ್ಭದಲ್ಲಿ ಆಚೆ ಬಂದೇ ಬರುತ್ತದೆ. ವಿರಾಟ್ ಗೆ ಆಗಿದ್ದು ಅದೇ. ಅವನಿಗೆ ಈ ಮನೆಯಲ್ಲಿ ತಾನು ಇದ್ದರೂ ಬಿಟ್ಟರೂ ಯಾರಿಗೂ ಏನು ವ್ಯತ್ಯಾಸವಾಗುವುದಿಲ್ಲ ಎಂದನಿಸಿ ಗಂಟಲು ಬಿಗಿದಿತ್ತು. ಡೈನಿಂಗ್ ಟೇಬಲ್ ಬಳಿ ನಡೆದು ಕುರ್ಚಿ ಎಳೆದು ಕುಳಿತವನು ಟೇಬಲ್ ಮೇಲೆ ಇಟ್ಟಿದ್ದ ತರಹೇವಾರಿ ಪದಾರ್ಥಗಳನ್ನು ಬಿಟ್ಟು ಬರೀ ಅನ್ನ ಸಾಂಬಾರ್ ಅಷ್ಟೇ ಬಡಿಸಿಕೊಂಡಿದ್ದ. ಊಟ ಮಾಡಬೇಕು ಎಂಬಂತೆ ಶಾಸ್ತ್ರಕ್ಕೆ ನಾಲ್ಕು ತುತ್ತು ತಿಂದವನು ತಟ್ಟೆ ಎತ್ತಿ ಸಿಂಕಿನಲ್ಲಿ ಹಾಕಿ ಕೈ ತೊಳೆದು ನಡೆದಿದ್ದ.
@@@@@@@@@@@@
ಮರುದಿನ ಬೆಳಗ್ಗೆ ಶಾಂತಮ್ಮ ಊರಿನಿಂದ ಬಂದಿದ್ದರು. ಬೆಳಗಿನ ತಿಂಡಿ ಮಾಡಿದವರು ವಿರಾಟ್ ಕೋಣೆಯ ಕಡೆ ಹೋಗಲು ಅವನು ಆಫೀಸಿಗೆ ಹೋಗಲು ತಯಾರಾಗಿ ಕುಳಿತಿದ್ದ. ವಿರಾಟ್ ಎಂದು ಅವರು ಕರೆಯುತ್ತಿದ್ದಂತೆ ಅವನು ನಗು ಮೊಗದಲ್ಲಿ ,”ಯಾವಾಗ ಬಂದ್ರಿ ಶಾಂತಮ್ಮ? ಹೇಗಿದೀರ? “ಎಂದು ಖುಷಿಯಲ್ಲಿ ಕೇಳಿದ್ದ. ಶಾಂತಮ್ಮ,” ಇವತ್ತು ಬೆಳಗ್ಗೆ ಅಷ್ಟೇ ಬಂದೆ ಕಣೋ…ನೀನು ಹೇಗಿದ್ದೀಯ? ಊಟ ತಿಂಡಿ ಎಲ್ಲ ಸರಿಯಾಗಿ ಮಾಡ್ತಾ ಇದೀಯ ತಾನೆ?” ಎಂದು ಮಮತೆಯಿಂದ ವಿಚಾರಿಸುತ್ತಿದ್ದಂತೆ ವಿರಾಟ್ ಅವರನ್ನು ಬೇಸರ ಪಡಿಸಲು ಇಷ್ಟವಿಲ್ಲದೆ ಹೌದು ಚೆನ್ನಾಗೆ ಇದೀನಿ ಶಾಂತಮ್ಮ ಎಂದು ಹೇಳಿದ್ದ.
ಶಾಂತಮ್ಮ,” ನೀನು ಹೇಳಿದರೂ ಹೇಳದೆ ಇದ್ದರೂ ನನಗೆ ಗೊತ್ತು ಕಣೋ…ಈ ಮನೆಯವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು…ನಾನೇನು ಅವರನ್ನು ಈಗಲೇ ನೋಡ್ತಾ ಇರೋದಲ್ಲಾ…” ಎಂದವರು
“ನನಗೆ ಗೊತ್ತು ನೀನು ಸರಿಯಾಗಿ ಊಟ ಮಾಡಿರಲ್ಲ ಅಂತ…ಊಟ ಮಾಡಿದೆಯೋ ಇಲ್ವೋ ಅಂತನಾದರೂ ಕೇಳಿದ್ರಾ ಇಲ್ಲ ಅಲ್ವಾ? ನನ್ನ ಹತ್ತಿರ ಮುಚ್ಚಿಡಬೇಡ ನೀನು…ಬಾ ಈಗ ತಿಂಡಿ ಮಾಡುವಂತೆ…” ಎಂದವರು ಸೆರಗಿನ ತುದಿಯಲ್ಲಿ ಕಣ್ಣು ಒರೆಸಿಕೊಂಡಿದ್ದರು.
ವಿರಾಟ್,”ನೀವ್ಯಾಕೆ ಅಳ್ತಾ ಇದೀರಾ ಅಮ್ಮ…ನಾನು ಹೇಳಿಲ್ವಾ ನಾನು ಚೆನ್ನಾಗೆ ಇದೀನಿ ಅಂತ… ಸರಿ ನಡೀರಿ ಬರ್ತೀನಿ…” ಎಂದವನು ಅವರ ಹಿಂದೆ ನಡೆದಿದ್ದ.
ಶಾಂತಮ್ಮ ತಾನು ಮಾಡಿದ ಬಿಸಿ ಬಿಸಿ ಅಕ್ಕಿ ರೊಟ್ಟಿಯನ್ನು ಅವನ ತಟ್ಟೆಗೆ ಹಾಕಿದವರು,”ನೋಡು ನಿನ್ನ ಇಷ್ಟದ ಅಕ್ಕಿ ರೊಟ್ಟಿ ಮಾಡಿದ್ದೀನಿ…ಹೊಟ್ಟೆ ತುಂಬ ತಿನ್ನಬೇಕು…” ಎಂದವರು ಜೊತೆಯಲ್ಲಿ ಬಿಸಿ ಬಿಸಿ ಕಾಫೀ ತಂದು ಕೊಟ್ಟಿದ್ದರು. ವಿರಾಟ್ ತಿಂಡಿ ತಿನ್ನುತ್ತಿದ್ದಾಗ ರಾಜಶೇಖರ ಅವರು ಕೂಡ ಬಂದಿದ್ದರು.
“ಏನ್ ವಿರಾಟ್ ಇವತ್ತು ಬೇಗ ತಿಂಡಿ ತಿನ್ನೋಕೆ ಬಂದು ಬಿಟ್ಟಿದೀಯ? ಆಫೀಸ್ ಅಲ್ಲಿ ಅರ್ಜೆಂಟ್ ವರ್ಕ್ ಏನಾದ್ರೂ ಇದ್ಯ?” ಎಂದು ಕೇಳುತ್ತಿದ್ದರೆ ವಿರಾಟ್,” ನಥಿಂಗ್ ಡ್ಯಾಡ್…ಹಾಗೇನೂ ಇಲ್ಲ” ಎಂದವನು ಮತ್ತೇನೂ ಮಾತನಾಡದೆ ಅವನ ಪಾಡಿಗೆ ಅವನು ತಿಂಡಿ ತಿಂದು ಹೋಗಿದ್ದ.
©©©©©©©©©©©
ರಾಜಶೇಖರ ಅವರ ಅಸಿಸ್ಟಂಟ್ ಕುಮಾರ್ ಅವರು ಅಂದು ಮುಖ್ಯವಾದ ವಿಷಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಬಂದಿದ್ದರು.
ರಾಜಶೇಖರ್ ಅವರು,”ಕುಮಾರ್ ಏನಾದ್ರೂ ಮಾಹಿತಿ ಸಿಕ್ತಾ? ನಾನು ಹೇಳಿದ ಕೆಲಸ ಏನಾಯ್ತು?” ಎಂದು ವಿಚಾರಿಸಿದ್ದರು.
ಕುಮಾರ್,”ವಿಷಯ ಇದೆ ಸರ್…ಕೇಂದ್ರದಲ್ಲಿ ಇರುವ ಮಂತ್ರಿಯೊಬ್ಬರನ್ನು ಸಂಪರ್ಕ ಮಾಡಿದೆ…ಅವರು ತುಂಬಾ ಒಳ್ಳೆಯವರು ನಮಗೆ ಖಂಡಿತ ಸಹಾಯ ಮಾಡ್ತೀನಿ ಅಂತ ಹೇಳಿದಾರೆ…” ಎಂದು ಹೇಳಿದ್ದರು.
ರಾಜಶೇಖರ್,”ಹೌದಾ ಒಳ್ಳೆಯ ಕೆಲಸ ಮಾಡಿದ್ರಿ…ಅಂದಹಾಗೆ ಯಾರು ಅವರು?” ಎಂದು ವಿಚಾರಿಸುತ್ತಿದ್ದಂತೆ
ಕುಮಾರ್,”ಅವರು ನಿಮಗೂ ಪರಿಚಯವೇ ಸರ್…ಕ್ಯಾಬಿನೆಟ್ ಮಿನಿಸ್ಟರ್ ಜಗದೀಶ್ ಅವರು…ಅವರು ಖಂಡಿತ ನಮಗೆ ಸಹಾಯ ಮಾಡ್ತಾರೆ ಅನಿಸ್ತಿದೆ…ತುಂಬಾ ಒಳ್ಳೆಯ ಮನುಷ್ಯ…” ಎಂದು ಹೇಳಿದ್ದರು.
ರಾಜಶೇಖರ್,”ಅವರು ಹೇಳಿದ ಮೇಲೆ ಖಂಡಿತ ಸಹಾಯ ಮಾಡುತ್ತಾರೆ ಅನ್ನೋ ನಂಬಿಕೆ ನನಗೂ ಇದೆ…ಸರಿ ನೀವು ಅವರ ಜೊತೆ ಒಂದು ಮೀಟಿಂಗ್ ಫಿಕ್ಸ್ ಮಾಡಿ…ಅವರು ಇರೋದೆಲ್ಲಿ ಈಗ?” ಎಂದು ಕೇಳಿದ್ದರು.
ಕುಮಾರ್,”ಅವರು ಇರೋದು ಬೆಂಗಳೂರಲ್ಲೇ ಸರ್…ಅವರ ಪಿಎ ಜೊತೆ ಮಾತಾಡಿ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡ್ತೀನಿ…” ಎಂದವರು
“ಸರ್ ಒಂದು ಸಲಹೆ…ನಿಮಗೆ ಸಲಹೆ ಕೊಡುವಷ್ಟು ದೊಡ್ಡವನಲ್ಲ ನಾನು…ಆದರೂ ನಿಮಗೆ ಓಕೆ ಅಂದ್ರೆ…” ಎಂದು ರಾಗ ಎಳೆಯುವುದನ್ನು ನೋಡಿದ ರಾಜಶೇಖರ ಅವರು,”ಅದೇನು ಅಂತ ಹೇಳಿ ಕುಮಾರ್…ನೀವು ಇಷ್ಟೆಲ್ಲ ಹೇಳುವ ಅಗತ್ಯ ಇಲ್ಲ…ನೀವು ಮೊದಲು ಹೇಳಿ ಅನಂತರ ಅದನ್ನು ಪರಿಗಣಿಸುವುದೋ ಬೇಡವೋ ಅಂತ ನಾನು ಹೇಳ್ತೀನಿ…” ಎಂದು ಹೇಳಿದ್ದರು.
ಕುಮಾರ್ ಹೇಳಲೋ ಬೇಡವೋ ಎಂಬಂತೆ ತಡವರಿಸುತ್ತಾ,”ಸರ್ ಅದು ನೀವು ಈಗ ಅವರ ಬಳಿ ಮಾತಾಡಿ ರಾಜಕೀಯದಲ್ಲಿ ಸಹಾಯ ಮಾಡಿ ಅಂತ ಕೇಳಬಹುದು…ಅವರು ಅದಕ್ಕೆ ಒಪ್ಪಲೂಬಹುದು…ಆದರೆ ಮುಂದೊಂದು ದಿನ ಬೇರೆ ಪಕ್ಷದವರಿಂದ ಏನಾದರೂ ತೊಂದರೆ ಆಗಿ ಅಥವಾ ಏನೋ ಒಂದು ಸಮಸ್ಯೆ ಬಂದು ಅವರು ಹಿಂದೆ ಸರಿದರೂ ಸರಿಯಬಹುದು… ಆ ಚಾನ್ಸಸ್ ಕೂಡ ಇದೆ…ಅದಕ್ಕೆ ನಾನು ಒಂದು ವಿಷಯದ ಬಗ್ಗೆ ಯೋಚನೆ ಮಾಡಿದೆ…ಹಾಗಾದ್ರೆ ಖಂಡಿತ ನಮಗೆ ಯಾವುದರಲ್ಲಿಯೂ ಅಂಥ ಸಮಸ್ಯೆ ಖಂಡಿತ ಬರುವುದಿಲ್ಲ…” ಎಂದು ಹೇಳಿದರೆ ರಾಜಶೇಖರ್,”ನೀನು ಹೇಳುವುದು ಸರಿಯಾಗಿದೆ…ಆದರೆ ಇದೆಲ್ಲದರ ಮಧ್ಯೆ ನಿನ್ನ ಪ್ಲಾನ್ ಏನು ಅಂತ ಎಲ್ಲೂ ಹೇಳಿಲ್ಲ ನೀನು…ಅದೇನು ಅಂತ ನೇರವಾಗಿ ಹೇಳು ನನಗೆ ಅರ್ಥ ಆಗಿಲ್ಲ…” ಎಂದು ಹೇಳಿದ್ದರು.
ಕುಮಾರ್,”ಅಂದ್ರೆ ಸರ್ ನಾವು ಅವರ ಜೊತೆ ವೈಯಕ್ತಿಕವಾಗಿ ಸಂಬಂಧ ಬೆಳೆಸಬೇಕು…” ಎಂದರೂ ರಾಜಶೇಖರ್ ಅವರಿಗೆ ಅವರ ಮಾತಿನ ಸೂಕ್ಷ್ಮತೆ ತಿಳಿಯಲಿಲ್ಲ.
“ಅವರ ಪರಿಚಯ ಈಗಾಗಲೇ ಇದೆಯಲ್ಲ ಕುಮಾರ್…ನೀವು ಅನವಶ್ಯಕವಾಗಿ ಏನೇನೋ ಹೇಳ್ತಾ ಇದೀರಾ…ಈ ವಯಸ್ಸಲ್ಲಿ ನಾವು ಅವರ ಜೊತೆ ಸ್ನೇಹ ಬೆಳೆಸಿ ಸುತ್ತಾಡೋಕೆ ಆಗುತ್ತಾ? ಏನು ಮಾತು ಅಂತ ಆಡ್ತೀರಾ ನೀವು?” ಎಂದು ಅಸಹನೆ ವ್ಯಕ್ತಪಡಿಸಿದ್ದರು.
ಕುಮಾರ್,”ನಿಮಗೆ ಆಗಲ್ಲ ಅಂದರೆ ಏನಾಯ್ತು ನಿಮ್ಮ ಮಗ ಇದ್ದಾನಲ್ಲ?” ಎಂದು ಹೇಳಲು ರಾಜಶೇಖರ್,”ಇದರಲ್ಲಿ ಮಗ ಎಲ್ಲಿಂದ ಬಂದ?” ಎಂದವರಿಗೆ ವಿಷಯವೇ ಅರ್ಥವಾಗುತ್ತಿಲ್ಲ.
ಮುಂದುವರೆಯುವುದು…
ಕಥೆ ಓದಿ ನಿಮ್ಮ ಅಭಿಪ್ರಾಯ ತಿಳಿಸಲು ಮರೆಯಬೇಡಿ…
ಕುಮಾರ್ ಅವರ ಮುಂದಿನ ಪ್ಲಾನ್ ಏನಿರಬಹುದು? ಅದರಲ್ಲಿ ವಿರಾಟ್ ಪಾತ್ರ ಏನು? ಅದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ 🙏
ನಿಮ್ಮ ಪ್ರೋತ್ಸಾಹ ಹಾಗೂ ಚಂದದ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ…
Swipe left/right or tap the sides to turn pages