ಪ್ರೀತಿಯ ಕಣ್ಣಾಮುಚ್ಚಾಲೆ ❤️ – 2
ಪ್ರೀತಿಯ ಕಣ್ಣಾಮುಚ್ಚಾಲೆ ❤️ – 2
ಕ್ಲಾಸ್ರೂಂ ಬಾಗಿಲಿನಿಂದ ಒಳಗೆ ಬರುತ್ತಿದ್ದ ವ್ಯಕ್ತಿಯನ್ನು ನೋಡಿದ ಶುಭಾಳಿಗೆ ಒಂದು ಕ್ಷಣ ತನ್ನ ಕಣ್ಣನ್ನೇ ನಂಬಲಾಗಲಿಲ್ಲ.
“ಅಯ್ಯೋ… ಇವ್ನಾ?” ಮೆಲ್ಲಗೆ ಗೊಣಗಿಕೊಂಡಳು.
“ಏನೇ ಶುಭಾ, ಏನಾಯ್ತು? ಯಾಕೆ ಹಾಗೆ ನೋಡ್ತಿದ್ದೀಯಾ?” ಕಾವ್ಯ ಅವಳ ತೋಳು ಚಿವುಟಿದಳು.
ಆದರೆ ಶುಭಾ ಅವಳ ಮಾತಿಗೆ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಎದುರಿಗೆ ಬರುತ್ತಿದ್ದ ವ್ಯಕ್ತಿಯ ಮೇಲೆಯೇ ಅವಳ ದೃಷ್ಟಿ ನೆಟ್ಟಿತ್ತು.
ಅಷ್ಟರಲ್ಲಿ ಆ ವ್ಯಕ್ತಿ ಕ್ಲಾಸ್ ನ ಮುಂಭಾಗಕ್ಕೆ ಬಂದು ನಿಂತರು.
“ಗುಡ್ ಮಾರ್ನಿಂಗ್ ಸರ್!” ಎಂದು ವಿದ್ಯಾರ್ಥಿಗಳೆಲ್ಲರೂ ಎದ್ದು ನಿಂತು ಶುಭಾಶಯ ಕೋರಿದರು.
“ಗುಡ್ ಮಾರ್ನಿಂಗ್! ಕುಳಿತುಕೊಳ್ಳಿ.”
ಶುಭಾ ಕೂಡ ಏನೂ ಆಗಿಲ್ಲವೆಂಬಂತೆ ತಲೆ ತಗ್ಗಿಸಿಕೊಂಡು ಕುಳಿತಳು. ಎದುರಿಗೆ ನಿಂತಿದ್ದ ಹೊಸ ಲೆಕ್ಚರ್ ಒಂದು ಕ್ಷಣ ಇಡೀ ತರಗತಿಯ ಮೇಲೆ ದೃಷ್ಟಿ ಹರಿಸಿ, ನಂತರ, ಮೂರನೇ ಬೆಂಚಿನಲ್ಲಿದ್ದ ಶುಭಾಳನ್ನು ನೋಡಿ ಸುಮ್ಮನಾದರು. ಆದರೆ ಆ ಒಂದು ನೋಟ ಶುಭಾಳ ಹೃದಯದ ಬಡಿತವನ್ನು ಹೆಚ್ಚಿಸಲು ಸಾಕಾಗಿತ್ತು.
ಅವರು ಬೋರ್ಡ್ ಕಡೆ ತಿರುಗುತ್ತಿದ್ದಂತೆಯೇ ಕಾವ್ಯಳ ಮಾತು ಶುರುವಾಗಿತ್ತು.
“ವಾವ್ ಶುಭಾ… ಎಷ್ಟು ಹ್ಯಾಂಡ್ಸಮ್ ಆಗಿದ್ದಾರೆ ಅಲ್ವಾ! ನಾನು ಅಂದುಕೊಂಡ ಹಾಗೆಯೇ ಯಂಗ್, ಸ್ಮಾರ್ಟ್ ಲೆಕ್ಚರರ್ ಬಂದಿದ್ದಾರೆ. ಮೊದಲ ದಿನವೇ ನನ್ನ ನಿರೀಕ್ಷೆ ನಿಜವಾಯ್ತು!”
“ಏನೇ ಹ್ಯಾಂಡ್ಸಮ್? ಮೂವತ್ತೊಂದು ವರ್ಷ ಆಗಿದೆ ಅವನಿಗೆ. ಅಂಕಲ್ ಅವನು ಅಂಕಲ್!” ಶುಭಾ ಸಿಡುಕಿದಳು.
“ಏಯ್! ನಿನಗೆ ಹೇಗೆ ಗೊತ್ತು ಅವರ ವಯಸ್ಸು ಮೂವತ್ತೊಂದು ಅಂತ?”
“ಸುಮ್ನೆ ಅಂದೆ ಕಣೇ!”
“ಮೂವತ್ತೊಂದು ಆಗಿರಲಿ, ಮೂವತ್ತೈದು ಆಗಿರಲಿ. ನೋಡೋಕೆ ಎಷ್ಟು ಚೆನ್ನಾಗಿದ್ದಾರೆ ನೋಡು? ಮೊದಲ ದಿನವೇ ನಾನು ಫಿದಾ ಆಗಿಬಿಟ್ಟೆ!”
“ಏಯ್ ಬುದ್ಧಿ ಇಲ್ವಾ ನಿನಗೆ? ಅವರು ನಿನ್ನ ಗುರುಗಳು. ಸ್ವಲ್ಪವಾದರೂ ಗೌರವ ಕೊಡೋದು ಕಲಿತುಕೋ. ನೋಡಿದ ತಕ್ಷಣ ಫಿದಾ ಆಗೋದು, ಇದೆಲ್ಲಾ ಒಳ್ಳೆಯ ಅಭ್ಯಾಸ ಅಲ್ಲ. ಏನು ಮಾತಾಡ್ತೀಯಾ ನೀನು?”
ಕಾವ್ಯ ಅವಳ ಮಾತು ಕೇಳಿ ನಗುತ್ತಾ, “ಹೌದಾ? ಅವರು ನನ್ನ ಟೀಚರ್ ಮಾತ್ರ ಅಲ್ಲ ಕಣೇ, ನಿನ್ನ ಟೀಚರ್ ಕೂಡ ಹೌದು. ನಿನ್ನ ಮಾತು ಕೇಳಿದ್ರೆ, ನನಗೊಂದು ಅನುಮಾನ ಬರುತ್ತಿದೆ. ನೀನೂ ಅವರನ್ನ ನೋಡಿ ಫಿದಾ ಆಗಿದ್ದೀಯಾ, ಆದರೆ ಒಪ್ಪಿಕೊಳ್ಳೋಕೆ ತಯಾರಿಲ್ಲ ಅಷ್ಟೇ!”
“ಏಯ್! ನಾನು ಅಷ್ಟೊಂದು ಬರಗೆಟ್ಟಿಲ್ಲ ಬಿಡು!” ಎಂದು ಶುಭಾ ಮುಖ ತಿರುಗಿಸಿದಳು.
“ಹಾಗಾದರೆ ಯಾಕೆ ಇಷ್ಟೊಂದು ಸಿಟ್ಟು?”
“ಕಾವ್ಯಾ!”
“ಆಯ್ತು, ಆಯ್ತು. ಸುಮ್ಮನಿರ್ತೀನಿ!” ಎಂದು ಕಾವ್ಯ ತುಟಿಗೆ ಬೆರಳಿಟ್ಟುಕೊಂಡಳು.
ಇಬ್ಬರೂ ತಮ್ಮದೇ ಲೋಕದಲ್ಲಿ ಪಿಸುಗುಟ್ಟುತ್ತಾ ಮಾತನಾಡುತ್ತಿದ್ದುದನ್ನು ಗಮನಿಸಿದ ಹೊಸ ಉಪನ್ಯಾಸಕರು ಇದ್ದಕ್ಕಿದ್ದಂತೆ ಅವರ ಕಡೆಗೆ ನೋಡಿದರು.
“ಹಾಂ… ಮೂರನೇ ಬೆಂಚ್!” ಆ ಧ್ವನಿ ಕೇಳುತ್ತಿದ್ದಂತೆಯೇ ಶುಭಾ ಮತ್ತು ಕಾವ್ಯ ಇಬ್ಬರೂ ಬೆಚ್ಚಿಬಿದ್ದರು.
“ಹೇಳಿ ನೋಡೋಣ, ಮೂರನೇ ಬೆಂಚಿನ ಹುಡುಗಿಯರೇ… ಅಲ್ಲಿ ಏನು ಚರ್ಚೆ ನಡೀತಿದೆ? ನನಗೂ ಸ್ವಲ್ಪ ಕೇಳಿಸಲಿ. ನನ್ನ ಸ್ವಾಗತ ಭಾಷಣಕ್ಕೆ ಏನಾದರೂ ರೆಡಿ ಮಾಡಿಕೊಳ್ಳುತ್ತಿದ್ದೀರಾ?”
ಅವರ ಮಾತಿಗೆ ತರಗತಿಯಲ್ಲಿದ್ದ ವಿದ್ಯಾರ್ಥಿಗಳೆಲ್ಲರೂ ನಗತೊಡಗಿದರು. ಶುಭಾ ಮತ್ತು ಕಾವ್ಯ ವಿಧಿಯಿಲ್ಲದೆ ಎದ್ದು ತಲೆ ತಗ್ಗಿಸಿಕೊಂಡು ನಿಂತಿದ್ದರು.
“ಏನಾಯಿತು? ಇಷ್ಟು ಹೊತ್ತು ಚೆನ್ನಾಗಿ ಮಾತನಾಡುತ್ತಿದ್ದಿರಿ. ಈಗ ಯಾಕೆ ಮೌನ?” ಎಂದು ಅವರು ನಗುತ್ತಾ ಕೇಳಿದರು.
ಕಾವ್ಯ ನಿಧಾನವಾಗಿ ತಲೆ ಎತ್ತಿ,
“ಏನಿಲ್ಲ ಸರ್…” ಎಂದವಳು,
“ಅಕ್ಕಾ, ಈಗ ಏನ್ ಮಾಡೋದು? ಸಿಕ್ಕಿ ಹಾಕಿಕೊಂಡ್ವಿ ಮೊದಲ ದಿನವೇ” ಎಂದು ಕಣ್ಣುಗಳಲ್ಲೇ ಅಳಲು ತೋಡಿಕೊಂಡಳು.
“ಏನಿಲ್ಲ ಅಂದರೆ? ಹಾಗಾದರೆ ಏನು ಮಾತನಾಡುತ್ತಿದ್ದಿರಿ?”
“ಅದು… ನೀವು ಹೊಸದಾಗಿ ಬಂದಿದ್ದೀರಲ್ಲಾ ಸರ್. ಹಾಗಾಗಿ ಹೊಸ ಸರ್ ಹೇಗಿರಬಹುದು ಅಂತ ನಾವು ಮಾತನಾಡಿಕೊಳ್ಳುತ್ತಿದ್ದೆವು. ಅಷ್ಟೇ ಸರ್.”
ಅವಳ ಮಾತು ಕೇಳಿದ ಶುಭಾ ತಕ್ಷಣ, ಕಾವ್ಯಳ ಕಾಲು ಮೆಟ್ಟಿ, ಸುಮ್ಮನಿರು ಎಂಬ ಸೂಚನೆ ಕೊಟ್ಟಿದ್ದರೂ ಕಾವ್ಯ ಮಾತ್ರ ಅವಳ ಕಡೆ ಕಳ್ಳನೋಟ ಬೀರಿದಳು.
“ಓಹೋ! ಹಾಗಾದರೆ ನನ್ನ ಬಗ್ಗೆ ಚರ್ಚೆ ನಡೆಯುತ್ತಿತ್ತಾ?” ಎಂದು ಅವರು ಹುಬ್ಬೇರಿಸಿದರು.
ಕಾವ್ಯ ಏನೂ ಮಾತನಾಡದೆ ತುಟಿಗಳನ್ನು ಬಿಗಿಯಾಗಿ ಮುಚ್ಚಿಕೊಂಡಳು.
“ಸರಿ, ಹಾಗಾದರೆ ಈಗ ಹೇಳಿ. ನನ್ನನ್ನು ನೋಡಿ ನಿಮ್ಮ ಅಭಿಪ್ರಾಯ ಏನಾಯಿತು? ನಿರೀಕ್ಷೆಗೆ ತಕ್ಕಂತೆ ಇದ್ದೀನಾ, ಇಲ್ಲವಾ?”
ಅವರ ಪ್ರಶ್ನೆಗೆ ಕಾವ್ಯಳ ಮುಖದಲ್ಲಿ ನಗು ಮೂಡಿದರೂ, ಏನು ಉತ್ತರಿಸಬೇಕೆಂದು ತಿಳಿಯದೆ ಶುಭಾಳ ಕಡೆ ನೋಡಿದಳು.
ಶುಭಾ ಮಾತ್ರ ಇನ್ನೂ ತಲೆ ತಗ್ಗಿಸಿಕೊಂಡೇ ನಿಂತಿದ್ದಳು.
ಅವರಿಬ್ಬರ ಮೌನವನ್ನು ಗಮನಿಸಿದ ಅವರು ನಗುತ್ತಾ, “ಪರವಾಗಿಲ್ಲ, ಈಗಲೇ ಉತ್ತರ ಕೊಡಬೇಕೆಂದೇನಿಲ್ಲ. ಮೊದಲು ಕುಳಿತುಕೊಳ್ಳಿ. ಮೊದಲ ದಿನವೇ ಇಷ್ಟೊಂದು ಗಂಭೀರವಾಗಿರಬೇಕಾಗಿಲ್ಲ!” ಎಂದರು.
ಇಬ್ಬರೂ ನಿಟ್ಟುಸಿರು ಬಿಡುತ್ತಾ ಕುಳಿತುಕೊಂಡರು.
ಅವರಿಬ್ಬರೂ ಕುಳಿತುಕೊಳ್ಳುತ್ತಿದ್ದಂತೆಯೇ ಹೊಸ ಉಪನ್ಯಾಸಕರು ಬೋರ್ಡ್ ಕಡೆ ತಿರುಗಿ, ಕೈಯಲ್ಲಿದ್ದ ಮಾರ್ಕರ್ ತೆಗೆದುಕೊಂಡು ಒಂದು ಹೆಸರನ್ನು ಬರೆದರು. ನಂತರ ವಿದ್ಯಾರ್ಥಿಗಳ ಕಡೆ ತಿರುಗಿ ನಗುತ್ತಾ ಮಾತನಾಡಲು ಶುರುಮಾಡಿದರು.
“ಸೋ, ಸ್ಟೂಡೆಂಟ್ಸ್… ನನ್ನ ಹೆಸರು ನವೀನ್. ಇನ್ಮುಂದೆ ನಿಮ್ಮ Biology ಕ್ಲಾಸ್ ನನ್ನ ಜವಾಬ್ದಾರಿ. ಮೊದಲೇ ಒಂದು ವಿಷಯ ಹೇಳಿಬಿಡ್ತೀನಿ. ನಾನು ನಿಮ್ಮನ್ನು ಬೋರ್ ಮಾಡಲ್ಲ, ಇದು ನನ್ನ ಪ್ರಾಮಿಸ್!” ಎಂದಾಗ ತರಗತಿಯಲ್ಲಿ ಸಣ್ಣದಾಗಿ ನಗು ಕೇಳಿಸಿತು.
“ನಿಮಗೆಲ್ಲಾ Biology ಅಂದ್ರೆ ಬರೀ ಪುಸ್ತಕ, ಡಯಾಗ್ರಾಮ್, ನೋಟ್ಸ್ ಅಂತ ಅನಿಸಿರಬಹುದು. ಆದರೆ ಹಾಗಲ್ಲ. ಅದರಲ್ಲೂ Human Anatomy ತುಂಬಾ ಇಂಟರೆಸ್ಟಿಂಗ್ ವಿಷಯ. ನಮ್ಮ ದೇಹದ ಪ್ರತಿಯೊಂದು ಅಂಗವೂ ಹೇಗೆ ಕೆಲಸ ಮಾಡುತ್ತೆ, ಅದರ ಹಿಂದೆ ಎಷ್ಟೆಲ್ಲಾ ಅಚ್ಚರಿಯ ಸಂಗತಿಗಳಿವೆ ಅನ್ನೋದನ್ನ ತಿಳಿದುಕೊಳ್ಳೋದೇ ಒಂದು ಮಜಾ. ಹಾಗಾಗಿ ನನ್ನ ಕ್ಲಾಸ್ ನಿಮಗೆ ಬೋರ್ ಆಗಲ್ಲ ಅನ್ನೋ ನಂಬಿಕೆ ನನಗಿದೆ. ಇನ್ನೊಂದು ಮುಖ್ಯವಾದ ವಿಷಯ. ನನಗೆ ಬರೀ ಲೆಕ್ಚರ್ ಕೊಟ್ಟು, ನೋಟ್ಸ್ ಬರೆಸಿ, ಕ್ಲಾಸ್ ಮುಗಿಸಿ ಹೋಗೋ ಅಭ್ಯಾಸ ಇಲ್ಲ. ನಿಮ್ಮ ಜೊತೆ ಇಂಟರಾಕ್ಷನ್ ಇರಬೇಕು. ನಾನು ಪ್ರಶ್ನೆ ಕೇಳ್ತೀನಿ, ನೀವು ಉತ್ತರ ಕೊಡಬೇಕು. ನಿಮಗೂ ಏನಾದರೂ ಡೌಟ್ ಇದ್ರೆ ಮುಕ್ತವಾಗಿ ಕೇಳಬಹುದು. ನಮ್ಮ ಕ್ಲಾಸ್ ಯಾವಾಗಲೂ ಇಂಟರಾಕ್ಟಿವ್ ಆಗಿರಬೇಕು. ಹಾಗಂತ ನಾನು ಮಾತ್ರ ಮಾತಾಡ್ತಾ ಇರೋದಲ್ಲ, ನೀವೂ ಮಾತಾಡಬೇಕು!” ಎಂದು ನಗುತ್ತಾ ಹೇಳಿದ ನವೀನ್.
“ಸರ್, ಹಾಗಾದರೆ ನಾವು ಒಬ್ಬೊಬ್ಬರಾಗಿ ನಮ್ಮ ಇಂಟ್ರೋ ಶುರು ಮಾಡಲಾ..ಪದ್ಧತಿಯಂತೆ” ಎಂದು ಒಬ್ಬ ನಗುತ್ತಾ ಕೇಳಿದ.
“No,No, ಪ್ರತಿಯೊಬ್ಬರೂ ಈಗಲೇ ಎದ್ದು ತಮ್ಮ ಪರಿಚಯ ಮಾಡಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ನಾನು ಪ್ರಶ್ನೆ ಕೇಳಿದಾಗ ಒಬ್ಬೊಬ್ಬರನ್ನೇ ಪರಿಚಯ ಮಾಡಿಕೊಳ್ಳುತ್ತೇನೆ. ನಿಧಾನವಾಗಿ ಎಲ್ಲರ ಬಗ್ಗೆ ತಿಳಿದುಕೊಳ್ಳೋಣ. ಯಾಕೆಂದರೆ ನಾನು ಎಲ್ಲಿಗೂ ಹೋಗುತ್ತಿಲ್ಲ. ಇಲ್ಲೇ ಪರ್ಮನೆಂಟ್ ಆಗಿ ಇರೋಕೆ ಬಂದಿದ್ದೀನಿ!” ಎಂದು ಹೇಳಿ ನಕ್ಕ ನವೀನ್.
“ಅಯ್ಯೋ ದೇವರೇ… ಪರ್ಮನೆಂಟ್ ಆಗಿ ಇರೋಕೆ ಬಂದಿದ್ದಾರಂತೆ! ಎಲ್ಲವನ್ನೂ ಪ್ಲಾನ್ ಮಾಡಿಕೊಂಡೇ ಬಂದಿದ್ದಾನೆ!” ಎಂದು ಶುಭಾ ಗೊಣಗಿಕೊಂಡಳು.
“ಏನೇ ಶುಭಾ, ಏನಾಯ್ತು ನಿನಗೆ? ಅವರು ಕ್ಲಾಸ್ ಒಳಗೆ ಬಂದಾಗಿನಿಂದ ನಿನ್ನನ್ನೇ ನೋಡ್ತಿದ್ದೀನಿ. ಏನೋ ವಿಚಿತ್ರವಾಗಿ ವರ್ತಿಸ್ತಿದ್ದೀಯಾ. ಏನಾದರೂ ಪ್ರಾಬ್ಲಮ್ ಇದೆಯಾ?” ಕಾವ್ಯ ಕೇಳಿದಳು.
“ಅದೆಲ್ಲಾ ನಿನ್ನ ಭ್ರಮೆ! ನೀನು ಅವರ ಬಗ್ಗೆನೇ ಯೋಚನೆ ಮಾಡ್ತಾ ಇದ್ದೀಯಲ್ಲಾ, ಅದಕ್ಕೇ ನಿನಗೆ ಹಾಗೆಲ್ಲಾ ಅನಿಸ್ತಿದೆ. ಸುಮ್ನೆ ಕ್ಲಾಸ್ ಕೇಳು!” ಎಂದು ಮುಖ ತಿರುಗಿಸಿಕೊಂಡಳು ಶುಭ.
ಅಷ್ಟರಲ್ಲಿ ಮತ್ತೆ ನವೀನ್ ಮಾತು ಕೇಳಿಸಿತ್ತು.
“ಸರಿ, ಇವತ್ತು ಹೊಸ ಪಾಠ ಶುರು ಮಾಡೋದು ಬೇಡ. ಮೊದಲ ದಿನ ಅಲ್ವಾ? ಸ್ವಲ್ಪ ರಿವೈಸ್ ಮಾಡೋಣ!” ಎಂದು ಹೇಳಿದವನು, ಎಲ್ಲರ ಮುಖವನ್ನೂ ಒಮ್ಮೆ ನೋಡಿ, ಪ್ರಶ್ನೆಯನ್ನು ಕೇಳಿದ.
“ಒಂದು ಸಿಂಪಲ್ ಕ್ವೆಶ್ಚನ್… ಮನುಷ್ಯನ ದೇಹದಲ್ಲಿ ಅತ್ಯಂತ ಬಲವಾದ ಅಥವಾ ಗಟ್ಟಿಯಾದ ಮಾಂಸಖಂಡ ಯಾವುದು ಹೇಳಿ ನೋಡೋಣ?” ಎಂದವನು ತರಗತಿಯ ಮೂರನೇ ಬೆಂಚಿನ ಕಡೆಗೆ ದೃಷ್ಟಿ ಹಾಯಿಸಿದ.
“ನೀವು ಮೂರನೇ ಬೆಂಚ್ ಅವರು, ಲೈಟ್ ಬ್ಲೂ ಡ್ರೆಸ್ ಅವರು ನೀವು ಹೇಳಿ. ಮೊದಲು ಪರಿಚಯ ಮಾಡಿಕೊಳ್ಳಿ ಆಮೆ ಉತ್ತರ ಹೇಳಿ” ಎಂದು ಶುಭಾ ಕಡೆ ನೋಡಿದ.
ಶುಭಾಳಿಗೆ ಒಮ್ಮೆ ಆಘಾತವಾಯಿತು. ‘ಇವನಿಗೆ ಇಡೀ ಕ್ಲಾಸ್ನಲ್ಲಿ ನಾನೇ ಸಿಕ್ಕನಾ?’ ಎಂದು ಮನದಲ್ಲೇ ಅಂದುಕೊಂಡಳು.
ಆದರೂ ಎದ್ದು ನಿಂತು, “ಗುಡ್ ಮಾರ್ನಿಂಗ್ ಸರ್. ನನ್ನ ಹೆಸರು ಶುಭಾ” ಎಂದು ಸಣ್ಣ ನಗುವಿನೊಂದಿಗೆ ಪರಿಚಯ ಮಾಡಿಕೊಂಡಳು.
“ಓಕೆ ಶುಭಾ, ವೆಲ್…” ಎಂದು ತಲೆಯಾಡಿಸಿದ ನವೀನ್, “ಈಗ ನನ್ನ ಪ್ರಶ್ನೆಗೆ ಉತ್ತರ ಹೇಳಿ ನೋಡೋಣ” ಎಂದ.
“ಸರ್, ನೀವು ಕೇಳಿದ ಪ್ರಶ್ನೆಗೆ ಉತ್ತರ, ಅದು ನಾಲಿಗೆ ಸರ್! ಯಾಕಂದ್ರೆ ಅದಕ್ಕೆ ಯಾವುದೇ ಮೂಳೆ ಇಲ್ಲದಿದ್ದರೂ, ಇಡೀ ಮನೆಯವರ ಮುಂದೆ ಅಥವಾ ಕ್ಲಾಸಿನಲ್ಲಿ ಬೇಕಾದಷ್ಟು ಜನರನ್ನು ಬೇಕಾದ ಹಾಗೆ ಮಣಿಸುವ ತಾಕತ್ತು ಅದಕ್ಕೆ ಮಾತ್ರ ಇದೆ!” ಎಂದಳು.
ಅವಳ ಆ ತಮಾಷೆಯ ಉತ್ತರ ಕೇಳುತ್ತಿದ್ದಂತೆ ಇಡೀ ಕ್ಲಾಸ್ ಜೋರಾಗಿ ನಕ್ಕಿತು.
‘ಇವಳಿಗೆ ಈ ಜನ್ಮದಲ್ಲಿ ಬುದ್ಧಿ ಬರೋದಿಲ್ಲ’ ಎಂದು ಕಾವ್ಯ ಅಂದುಕೊಂಡಳು.
ಆದರೆ ನವೀನ್ ಮುಖದಲ್ಲಿ ತುಂಟ ನಗುವನ್ನು ಹಾಗೇ ಉಳಿಸಿಕೊಂಡು, ಅವರ ಬೆಂಚ್ ಹತ್ತಿರ ಬಂದು,
“ಉತ್ತರ ತುಂಬಾ ಚೆನ್ನಾಗಿದೆ ಶುಭಾ! ನಾಲಿಗೆ ನಿಜಕ್ಕೂ ತುಂಬಾ ಪವರ್ಫುಲ್ ಬಿಡಿ. ಅದರಲ್ಲೂ ನಿಮ್ಮ ನಾಲಿಗೆ ಎಷ್ಟು ಚುರುಕು ಅನ್ನೋದು ನನಗೆ ಮೊದಲನೇ ದಿನವೇ ಅರ್ಥವಾಯಿತು!” ಎಂದವನು ಗಂಭೀರವಾಗುತ್ತಾ, “ಆದರೆ ನೀವು ಹೇಳಿದ್ದು ಬಯೋಲಾಜಿಕಲ್ ಆನ್ಸರ್ ಅಲ್ಲ. ಬಯೋಲಜಿ ಪ್ರಕಾರ ಮನುಷ್ಯನ ದೇಹದ ಅತ್ಯಂತ ಗಟ್ಟಿಯಾದ ಭಾಗ ‘ಹಲ್ಲುಗಳ ಮೇಲೆ ಇರೋ ಎನಾಮಲ್’ – Tooth Enamel. ಹಾಗೆಯೇ ಮಾಂಸಖಂಡದ ವಿಷಯಕ್ಕೆ ಬಂದರೆ ಅದು ನಾಲಿಗೆ ಅಲ್ಲ, ‘ಜಾ ಮಸಲ್ – Jaw Muscle – ದವಡೆಯ ಸ್ನಾಯು!” ಎಂದು ಉತ್ತರ ಹೇಳಿದ.
ತನ್ನ ವಾದ ಸೋತದ್ದನ್ನು ಕಂಡು ಶುಭಾ ಮುಖ ಚಿಕ್ಕದು ಮಾಡಿಕೊಂಡಳು.
ನವೀನ್ ನಗುತ್ತಾ, “ಸರಿ, ಮೊದಲ ದಿನವೇ ಒಳ್ಳೆ ಟ್ರೈ ಮಾಡಿದ್ರಿ. ಈಗ ಆರಾಮಾಗಿ ಕೂತ್ಕೊಳ್ಳಿ!” ಎಂದನು.
ಶುಭಾ ತಲೆ ತಗ್ಗಿಸಿ, ಮನದಲ್ಲೇ ಅವನಿಗೆ ಬೈದುಕೊಳ್ಳುತ್ತಲೆ ಕುಳಿತಳು.
ಹೀಗೆ ಮಾತುಕತೆ ನಡೆಯುತ್ತಲೇ ನವೀನ್ ಕ್ಲಾಸ್ ಮುಗಿಸಿ, ಹೊರಟ. ಮಧ್ಯಾಹ್ನದ ಊಟದ ಸಮಯವಾಗಿತ್ತು. ವಿದ್ಯಾರ್ಥಿಗಳೆಲ್ಲರೂ ಸ್ನೇಹಿತರ ಜೊತೆ ಮಾತನಾಡುತ್ತಾ ತರಗತಿಯಿಂದ ಹೊರಬರತೊಡಗಿದರು.
ಶುಭಾ ಮತ್ತು ಕಾವ್ಯ ಕೂಡ ಒಟ್ಟಿಗೆ ಹೊರಬಂದರು. ಕ್ಲಾಸ್ ಹೊರಭಾಗದಲ್ಲಿ ನಿಂತಿದ್ದ ನವೀನ್ನನ್ನು ನೋಡಿದ ಕಾವ್ಯ, “ಶುಭಾ, ಅಲ್ಲಿ ನೋಡು! ನಮ್ಮ ಹೊಸ ಸರ್ ಇನ್ನೂ ಇಲ್ಲೇ ನಿಂತಿದ್ದಾರೆ. ಯಾರಿಗೋ ಕಾಯುತ್ತಿರುವ ಹಾಗಿದೆಯಲ್ಲಾ? ಯಾರಿಗಾಗಿ ಇರಬಹುದು?” ಶುಭಾಳ ತೋಳು ಹಿಡಿದು ಕೇಳಿದಳು.
“ಅವ್ರು ಏನ್ ಮಾಡ್ತಾರೆ ಅನ್ನೋದು ನಿನಗ್ಯಾಕೆ? ಬೆಳಗ್ಗಿನಿಂದ ಹೇಳ್ತಾನೇ ಇದ್ದೀನಿ, ಅವರು ನಿನ್ನ ಲೆಕ್ಚರರ್. ಸ್ವಲ್ಪವಾದರೂ ಗೌರವ ಕೊಡೋದನ್ನ ಕಲಿ!” ಎಂದು ಶುಭಾ ಸಿಡುಕಿದಳು.
“ಅಯ್ಯೋ, ನಾನೇನು ತಪ್ಪು ಮಾಡಿದೆ ಈಗ?” ಎಂದು ಕಾವ್ಯ ಮುಖ ಸಿಂಡರಿಸಿದಳು.
“ನೀನು ಕ್ಯಾನ್ಟೀನ್ಗೆ ಹೋಗು. ನಾನು ಸ್ವಲ್ಪ ಲೇಟ್ ಬರ್ತೀನಿ.” ಎಂದಳು ಶುಭ.
“ಏನಾಯ್ತು ನಿನಗೆ? ಎಲ್ಲಿಗೆ ಹೋಗ್ತೀಯಾ?”
“ನೀರು ಕುಡಿದು ಬರ್ತೀನಿ. ನೀನು ಹೋಗು.”
“ನನ್ನ ಹತ್ರ ಬಾಟಲ್ ಇದೆ. ನಿನ್ನ ಹತ್ರನೂ ಇದೆಯಲ್ಲಾ?”
“ಕಾವ್ಯಾ, ನನ್ನ ಜೊತೆ ವಾದ ಮಾಡಬೇಡ. ನಾನು ಬರ್ತೀನಿ ಅಂದ್ಮೇಲೆ ಬರ್ತೀನಿ. ಬೆಳಗ್ಗಿನಿಂದ ಯಾಕೆ ಸಿಐಡಿ ತರಹ ನನ್ನ ಹಿಂದೆ ಬಿದ್ದಿದ್ದೀಯಾ? ನಾವೇನು ಕ್ರಿಮಿನಾಲಜಿ ಓದುತ್ತಿಲ್ಲ! Bsc ಓದ್ತಾ ಇರೋದು” ಶುಭಾ ಕಣ್ಣು ದೊಡ್ಡದು ಮಾಡಿದಳು.
“ಸರಿ, ಸರಿ ಬಿಡು. ನನಗಾಗಲೇ ತುಂಬಾ ಹಸಿವಾಗಿದೆ. ನಿನ್ನ ಜೊತೆ ಜಗಳ ಆಡೋಕೆ ಕೂಡ ಶಕ್ತಿ ಇಲ್ಲ. ನಾನು ಕ್ಯಾನ್ಟೀನ್ಗೆ ಹೋದೆ!” ಎಂದು ಕಾವ್ಯ ಮುಂದೆ ನಡೆಯುತ್ತಾ ಹೇಳಿದಳು.
ಕಾವ್ಯ ದೂರ ಹೋಗುವುದನ್ನೇ ಕಾಯುತ್ತಿದ್ದ ಶುಭಾ, ಸುತ್ತಲೂ ನೋಡಿದಳು. ನವೀನ್ ಅಷ್ಟರಲ್ಲಿ ಅಲ್ಲಿಂದ ಮುಂದೆ ಸಾಗಿದ್ದ. ಅವನ ಹಿಂದೆಯೇ ನಿಧಾನವಾಗಿ ಹೆಜ್ಜೆ ಹಾಕಿದಳು.
ಲ್ಯಾಬ್ನ ಹತ್ತಿರ ತಲುಪುತ್ತಿದ್ದಂತೆಯೇ, ಹಿಂದಿನಿಂದ ಬಂದ ನವೀನ್ ಶುಭಾಳ ಕೈ ಹಿಡಿದು ಒಳಗೆ ಎಳೆದುಕೊಂಡ. ಅನಿರೀಕ್ಷಿತವಾಗಿ ನಡೆದ ಘಟನೆಯಿಂದ ಗಾಬರಿಯಾದ ಅವಳು ಏನೆಂದು ಯೋಚಿಸುವ ಮೊದಲೇ, ನವೀನ್ ಲ್ಯಾಬ್ ಬಾಗಿಲು ಮುಚ್ಚಿ ಲಾಕ್ ಮಾಡಿದ್ದ.
“ಸರ್… ಏನಿದು? ಏನ್ ಮಾಡ್ತಿದ್ದೀರಾ?” ಎಂದು ಅವಳು ಗಾಬರಿಯಿಂದ ಕೇಳುವಷ್ಟರಲ್ಲಿ, ನವೀನ್ ಅವಳನ್ನು ಗೋಡೆಗೆ ಒರಗಿಸಿ, ಎರಡೂ ಬದಿಯಲ್ಲಿ ತನ್ನ ಕೈ ಊರಿ ಅವಳತ್ತ ಬಾಗಿ ನಿಂತಿದ್ದ.
“ಸರ್, ಏನು ಮಾಡ್ತಾ ಇದೀರಾ? ಯಾರಾದರೂ ನೋಡಿದ್ರೆ?” ಎಂದು ಆತಂಕದಿಂದ ನೋಡಿದಳು.
ಆದರೆ ನವೀನ್ ಮಾತ್ರ ಒಲವಿನಿಂದ ಅವಳ ಮುಖವನ್ನೇ ದಿಟ್ಟಿಸುತ್ತಿದ್ದ.
“ಸರ್… ಪ್ಲೀಸ್, ನನ್ನ ಬಿಡಿ. ನನಗೆ ಭಯ ಆಗ್ತಿದೆ!” ಎಂದು ಶುಭಾ ಮೆಲ್ಲಗೆ ಹೇಳಿದಳು.
ಅವಳ ಮಾತಿಗೆ ನವೀನ್ ತುಂಟ ನಗುವಿನೊಂದಿಗೆ ತುಸು ಒರಟಾಗಿ ಅವಳ ಸೊಂಟ ಚಿವುಟಿದ.
“ಆಹ್!” ಎಂದು ಉದ್ಗರಿಸಿದ ಶುಭಾ ತಕ್ಷಣ ಅವನ ಎದೆಗೆ ಗುದ್ದಿ,
“ಹುಚ್ಚ! ಏನ್ ಮಾಡ್ತಿದ್ದೀಯಾ ನೀನು?” ಎಂದಳು ಕೋಪದಿಂದ.
ನವೀನ್ ಬಿಗಿಯಾಗಿ ಅವಳ ನಡು ಹಿಡಿದು ಅವಳನ್ನು ಮತ್ತಷ್ಟು ಹತ್ತಿರಕ್ಕೆ ಎಳೆದುಕೊಂಡು ಮುಖದ ಹತ್ತಿರ ಬಾಗಿ,
“ಈಗ ದಾರಿಗೆ ಬಂದ್ಯಾ? ಕ್ಲಾಸ್ ಅಲ್ಲಿ ಅಷ್ಟೊಂದು ಗತ್ತು ತೋರಿಸ್ತಾ ಇದ್ಯಲ್ವ ಈಗೇನಾಯ್ತು..?” ಎಂದು ಅವಳ ಹಣೆಯ ಮೇಲಿನ ಬೆವರಿನ ಹನಿಗಳನ್ನು ತೋರು ಬೆರಳಿನಿಂದ ತೀಡುತ್ತಾ ಕೇಳಿದ. ಶುಭಾ ಕಂಪಿಸಿದಳು.
(ಮುಂದುವರೆಯುವುದು ❤️)
———————————❤️———————————
ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ…
Swipe left/right or tap the sides to turn pages