New Katha Varnika is now on Google Play — read original stories on your phone. Learn more
ಮೋಹ ❤️ – 1
ಮೋಹ ❤️ 5 min read

ಮೋಹ ❤️ – 1

ಮೋಹ ❤️ – ೧

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ವಿಶಾಲವಾದ ಸುಂದರ ಬಂಗಲೆ. ಮನೆಯ ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿದ್ದ ಉದ್ಯಾನವನ, ಮುಂಭಾಗದಲ್ಲಿ ಸಾಲಾಗಿ ನಿಂತಿದ್ದ ದುಬಾರಿ ಕಾರುಗಳು, ಒಳಗೆ ಕಾಲಿಟ್ಟರೆ ಕಣ್ಣಿಗೆ ಹಬ್ಬವೆನಿಸುವಂತೆ ಅಲಂಕರಿಸಿದ್ದ ಹಾಲ್… ಆ ಮನೆಯ ಶ್ರೀಮಂತಿಕೆಯನ್ನು ಎದ್ದು ತೋರಿಸುತ್ತಿದ್ದವು.

ಆ ಮನೆಯ ಹಾಲ್‌ನಲ್ಲಿ ಕುಟುಂಬದವರೆಲ್ಲರೂ ಕುಳಿತಿದ್ದರು. ಮನೆಯ ಯಜಮಾನ ಆದಿತ್ಯ, ಅವರ ಪತ್ನಿ ಮಾಧವಿ, ಆದಿತ್ಯನ ತಂದೆ ವಿಶ್ವನಾಥ್ ಮತ್ತು ತಾಯಿ ಜಾನಕಿ. ಎಲ್ಲರೂ ಬೆಳಗಿನ ತಿಂಡಿ ಮುಗಿಸಿ ಹರಟೆಯಲ್ಲಿ ತೊಡಗಿದ್ದರು.

ಅವರ ಜೊತೆಯಲ್ಲೇ ಕುಳಿತಿದ್ದ ವಿಹಾನ್ ಮತ್ತು ವೈದೇಹಿ. ವಿಹಾನ್ ಮತ್ತು ಅವನ ತಾಯಿ ವೈದೇಹಿ ಆ ಮನೆಯ ಪಕ್ಕದಲ್ಲೇ ವಾಸವಾಗಿದ್ದರು.

ವಿಹಾನ್, ಇಪ್ಪತ್ತೆಂಟು ವರ್ಷದ ಯುವಕ. ಸುಮಾರು ಆರು ಅಡಿ ಎತ್ತರ, ಆಕರ್ಷಕ ವ್ಯಕ್ತಿತ್ವ, ಗಂಭೀರವಾದ ಮುಖಭಾವ ಮತ್ತು ಆತ್ಮವಿಶ್ವಾಸ ತುಂಬಿದ ನೋಟ ಅವನದ್ದು. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಅವನು ತನ್ನ ಪರಿಶ್ರಮದಿಂದಲೇ ಜೀವನ ಕಟ್ಟಿಕೊಂಡಿದ್ದ. ಹೊರನೋಟಕ್ಕೆ ಎಷ್ಟು ಗಂಭೀರವಾಗಿ ಕಾಣುತ್ತಿದ್ದನೋ, ಅಷ್ಟೇ ಹಠಮಾರಿ ಮತ್ತು ಸ್ವಾಭಿಮಾನಿ ಕೂಡ.

ಬಾಲ್ಯದಿಂದಲೂ ಆದಿತ್ಯನ ಕುಟುಂಬದ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ಅವರು, ರಕ್ತಸಂಬಂಧವಿಲ್ಲದಿದ್ದರೂ ಆ ಮನೆಯವರಿಗೆ ತಮ್ಮವರೇ ಆಗಿದ್ದರು. ವೈದೇಹಿಯನ್ನೂ ಆ ಮನೆಯವರು ಬಹಳ ಗೌರವದಿಂದ ಕಾಣುತ್ತಿದ್ದರು.

“ವಿಹಾನ್ ಕಂದಾ… ಇವತ್ತು ಆಫೀಸ್‌ಗೆ ಹೋಗಲ್ವಾ?” ಎಂದು  ಅಜ್ಜಿ ಜಾನಕಿ ಕೇಳಿದರು.

“ಇಲ್ಲ ಅಜ್ಜಿ, ಇವತ್ತು ಆಫೀಸ್‌ಗೆ ಹೋಗ್ತಿಲ್ಲ. ಸ್ವಲ್ಪ ಕೆಲಸ ಇದೆ, ಮನೆಯಲ್ಲೇ ಮುಗಿಸಿಕೊಳ್ಳಬೇಕು,” ಎಂದು ವಿಹಾನ್ ಹೇಳುವಷ್ಟರಲ್ಲಿ,

ಮೆಟ್ಟಿಲಿನ ಮೇಲಿಂದ ಹೈ ಹೀಲ್ಸ್ ಸದ್ದು ಕೇಳಿಸಿತು.
ಎಲ್ಲರ ದೃಷ್ಟಿಯೂ ಆ ಕಡೆ ತಿರುಗಿತು. ಮೆಟ್ಟಿಲು ಇಳಿದು ಬರುತ್ತಿದ್ದಳು ರೂಹಿ. ಅವಳನ್ನು ನೋಡಿದರೆ ಆಧುನಿಕತೆಯ ಪ್ರತಿಬಿಂಬವೇ ಅನ್ನಿಸುವಂತಿತ್ತು. ಟ್ರೆಂಡಿ ಶಾರ್ಟ್ ಡ್ರೆಸ್, ಸ್ಟೈಲಿಶ್ ಜಾಕೆಟ್, ಕೈಯಲ್ಲಿ ದುಬಾರಿ ಮೊಬೈಲ್ ಮತ್ತು ಗ್ಲಾಸ್, ಮುಖದಲ್ಲಿ ಆತ್ಮವಿಶ್ವಾಸಕ್ಕಿಂತಲೂ ಹೆಚ್ಚಾಗಿ ಗರ್ವ. ಅವಳ ಆಗಮನದಿಂದ ಹಾಲ್‌ನ ವಾತಾವರಣವೇ ಬದಲಾಯಿತು.

ಜಾನಕಿ ಅವಳನ್ನು ನೋಡಿ ಹುಬ್ಬೇರಿಸಿದರು.

“ರೂಹಿ ಪುಟ್ಟಾ… ಏನಮ್ಮ ಇದು ಡ್ರೆಸ್? ಸ್ವಲ್ಪನಾದರೂ ಮನೆಯವರ ಮಾತು ಕೇಳಬಾರದ?”

“ಅಜ್ಜಿ… ಪ್ಲೀಸ್! ಬೆಳಗ್ಗೆ ಬೆಳಗ್ಗೆ ಶುರು ಮಾಡಬೇಡಿ. ನಾನು ಹೊರಗೆ ಹೋಗ್ತಿದ್ದೀನಿ. ನನ್ನ ಮೂಡ್ ಹಾಳು ಮಾಡಬೇಡಿ, ಓಕೆ?” ಎಂದು ನಿರ್ಲಕ್ಷ್ಯದಿಂದ ಹೇಳಿದಳು.

ಮಾಧವಿ ಏನೋ ಹೇಳಲು ಮುಂದಾದಾಗ,

“ಮಮ್ಮಿ… ಪ್ಲೀಸ್! ನೀವೂ ಈಗ ಲೆಕ್ಚರ್ ಶುರು ಮಾಡಬೇಡಿ. ನನಗೆ ತಡವಾಗುತ್ತಿದೆ,” ಎಂದು ಕೈ ಎತ್ತಿ ಸನ್ನೆ ಮಾಡಿದಳು.

ಅಷ್ಟರಲ್ಲಿ ಅವಳ ದೃಷ್ಟಿ ಎದುರಿಗೆ ಕುಳಿತಿದ್ದ ವೈದೇಹಿ ಮತ್ತು ವಿಹಾನ್ ಮೇಲೆ ಬಿತ್ತು. ಒಂದು ಕ್ಷಣ ಅವಳ ತುಟಿಯಂಚಿನಲ್ಲಿ ವ್ಯಂಗ್ಯದ ನಗು ಮೂಡಿತು.

“ಓಹೋ! ಇವತ್ತು ನಮ್ಮ ಮನೆಯ ಹಾಲ್‌ನಲ್ಲಿ ವಿಶೇಷ ಸಭೆಯೇ ನಡೆಯುತ್ತಿದೆ ಅನಿಸುತ್ತೆ! ಏನು ವೈದೇಹಿ ಆಂಟಿ, ನಿಮ್ಮ ಮನೆಗಿಂತ ನಮ್ಮ ಮನೆಯಲ್ಲೇ ಹೆಚ್ಚು ಆರಾಮ ಸಿಗುತ್ತಾ? ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ಸಂಜೆ ಕಾಫಿ… ಎಲ್ಲವೂ ಇಲ್ಲೇ ಸಿಗುತ್ತೆ ಅಲ್ವಾ? ಫ್ರೀ ಲಾಡ್ಜಿಂಗ್ ಅಂಡ್ ಬೋರ್ಡಿಂಗ್ ಚೆನ್ನಾಗಿದೆಯೇನೋ!” ಎಂದು ಕೆಣಕಿದಳು.

“ರೂಹಿ! ಯಾರ ಹತ್ತಿರ ಹೇಗೆ ಮಾತನಾಡಬೇಕು ಅನ್ನೋ ಕನಿಷ್ಠ ಪ್ರಜ್ಞೆಯೂ ಇಲ್ಲವ ನಿನಗೆ? ಅವರು ನಮ್ಮ ಮನೆಯವರಿದ್ದಂತೆ. ಇಷ್ಟು ವರ್ಷಗಳಿಂದ ನಮ್ಮ ಜೊತೆ ಆತ್ಮೀಯವಾಗಿದ್ದಾರೆ. ಅವರ ಬಗ್ಗೆ ಹೀಗೆಲ್ಲ ಮಾತನಾಡಲು ನಾಚಿಕೆಯಾಗುವುದಿಲ್ಲವ?” ಮಾಧವಿ ಗುಡುಗಿದರು.

“ಯಾಕೆ ಮಮ್ಮಿ? ನಾನು ಹೇಳುತ್ತಿರುವುದು ಸುಳ್ಳಾ? ನಮ್ಮ ಮನೆಯ ಫೆಸಿಲಿಟಿನಾ ಉಪಯೋಗಿಸಿಕೊಂಡು, ನಮ್ಮ ಮನೆಯವರ ಜೊತೆ ರಾಜಮರ್ಯಾದೆ ಅನುಭವಿಸುತ್ತಿದ್ದರೆ ನಾನು ನೋಡಿಕೊಂಡು ಸುಮ್ಮನಿರಬೇಕಾ? ಅವರಿಗೇನಾದರೂ ಸ್ವಂತ ಮನೆ, ಸ್ವಂತ ಗೌರವ ಅಂತ ಇದೆಯಾ? ಯಾವಾಗ ನೋಡಿದರೂ ನಮ್ಮ ಮನೆಯಲ್ಲೇ ಬಿದ್ದಿರುತ್ತಾರೆ. ಅವರಿಗೆ ಸ್ವಲ್ಪವಾದರೂ ನಾಚಿಕೆ ಅನ್ನೋದು ಇರಬೇಕಲ್ವಾ?”

“ರೂಹಿ, ಸಾಕು!” ಎಂದು ಆದಿತ್ಯ ಗಟ್ಟಿಯಾಗಿ ಹೇಳಿದರು.

ಆದರೆ ರೂಹಿ ಮಾತ್ರ ಯಾರ ಮಾತನ್ನೂ ಕೇಳುವ ಮನಸ್ಥಿತಿಯಲ್ಲಿರಲಿಲ್ಲ.

“ಡ್ಯಾಡಿ, ನೀವು ಯಾಕೆ ಯಾವಾಗಲೂ ಇವರ ಪರವಾಗಿಯೇ ಮಾತನಾಡುತ್ತೀರಿ? ಇವರಿಗೆ ನಿಮ್ಮಿಂದ ಸಿಗುವ ಸಹಾಯ, ಗೌರವ ಎಲ್ಲವೂ ಸಾಕಾಗಿಲ್ಲವ? ಇನ್ನೂ ಏನು ಬೇಕು ಇವರಿಗೆ? ನಮ್ಮ ಮನೆಯವರಂತೆ ನಟಿಸಿಕೊಂಡು ಇಲ್ಲೇ ಬಂದು ಬೀಡುಬಿಡಬೇಕಾ? ಸ್ವಂತ ದುಡಿಮೆಯಿಂದ ಬದುಕಲು ಯೋಗ್ಯತೆ ಇಲ್ಲದವರು ಬೇರೆಯವರ ಮುಂದೆ ಸ್ವಾಭಿಮಾನದ ಮಾತುಗಳನ್ನಾಡುವುದೇ ಒಂದು ದೊಡ್ಡ ಜೋಕ್!”

ವಿಹಾನ್ ಮುಖದಲ್ಲಿ ಕೋಪದ ಛಾಯೆ ಮೂಡತೊಡಗಿತ್ತು.
ಅದನ್ನು ಗಮನಿಸಿದ ರೂಹಿ,

“ಓಹೋ! ಸರ್ ಗೆ ಕೋಪ ಬರ್ತಾ ಇದೆ. ಸತ್ಯ ಹೇಳಿದರೆ ಹಾಗೆ. ಉರಿ ಆಗುತ್ತೆ.”

“ರೂಹಿ!” ಎಂದು ವಿಶ್ವನಾಥ್ ಕೂಡ ಎಚ್ಚರಿಸಿದರು.

“ಏನು ತಾತ? ನಾನು ಹೇಳುತ್ತಿರುವುದರಲ್ಲಿ ತಪ್ಪೇನಿದೆ? ದುಡ್ಡು, ಅಂತಸ್ತು, ಗೌರವ ಎಲ್ಲವನ್ನೂ ಸಂಪಾದಿಸಬೇಕು. ಬೇರೆಯವರ ದಯೆಯ ಮೇಲೆ ಬದುಕುತ್ತಾ ಅವರ ಮನೆಯಲ್ಲೇ ರಾಜರಂತೆ ಓಡಾಡುವ ಭಿಕ್ಷುಕರಿಗೆ ಸ್ವಾಭಿಮಾನ ಅಂದರೆ ಏನು ಗೊತ್ತಿರುತ್ತದೆ? ಮೊದಲು ನಿಮ್ಮ ಸ್ಥಾನ ಏನು ಅಂತ ತಿಳಿದುಕೊಳ್ಳಿ. ಆಮೇಲೆ ನಮ್ಮ ಮನೆಯವರ ಜೊತೆ ಮಾತನಾಡಿ!”

ಆ ಮಾತು ಕೇಳಿದ ಕ್ಷಣ ವಿಹಾನ್‌ನ ಕೋಪ ನೆತ್ತಿಗೇರಿತ್ತು. ಅವನು ಏನೋ ಹೇಳಲು ಮುಂದಾದವನನ್ನು ವೈದೇಹಿಯ ಅಸಹಾಯಕ ನೋಟ ತಡೆದಿತ್ತು. ದವಡೆ ಬಿಗಿಹಿಡಿದು ತನ್ನ ಕೋಪವನ್ನು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸಿದ.

“ರೂಹಿ! ಸಾಕು! ಇನ್ನೊಂದು ಮಾತು ಆಡಿದರೂ ನಾನು ಸುಮ್ಮನಿರುವುದಿಲ್ಲ,” ಎಂದು ಆದಿತ್ಯ ಗದರಿಸಿದರು.

“ಓಕೆ ಡ್ಯಾಡಿ! ಇಲ್ಲಿ ಸತ್ಯ ಹೇಳಿದರೆ ಯಾರಿಗೂ ಇಷ್ಟವಾಗುವುದಿಲ್ಲ. ನನಗೂ ನಿಮ್ಮ ಈ ಉಪದೇಶ ಕೇಳುವ ಆಸಕ್ತಿಯಿಲ್ಲ. ನಾನು ತಾತನ ಮನೆಗೆ ಹೋಗುತ್ತಿದ್ದೇನೆ,” ಎಂದಳು.

“ಈಗ ಮತ್ತೆ ಅಲ್ಲಿಗೆ ಯಾಕೆ?” ಎಂದು ಮಾಧವಿ ಕೇಳುವಷ್ಟರಲ್ಲಿ,

“ಮಮ್ಮಿ, ಪ್ಲೀಸ್! ಮತ್ತೆ ಪ್ರಶ್ನೆ ಶುರು ಮಾಡಬೇಡಿ. ತಾತ ಮತ್ತು ಅಜ್ಜಿ ಸಂಜೆ ಪಾರ್ಟಿಗೆ ಹೋಗೋಣ ಅಂದಿದ್ದಾರೆ. ಅದಕ್ಕೆ ಹೋಗುತ್ತಿದ್ದೇನೆ,” ಎಂದು ಹೇಳುತ್ತಾ ಹೈ ಹೀಲ್ಸ್ ಸದ್ದು ಮಾಡುತ್ತಾ ಅಲ್ಲಿಂದ ಅಹಂಕಾರದಿಂದ ನಡೆದಳು.

ರೂಹಿ ಹೋದ ನಂತರ ವಿಹಾನ್ ಕೂಡ ತನ್ನ ಜಾಗದಿಂದ ಎದ್ದು ಹೊರಡಲು ಅಣಿಯಾದಾಗ,

“ವಿಹಾನ್…ಅವಳ ಮಾತಿಗೆ ಬೇಸರ ಮಾಡಿಕೊಳ್ಳಬೇಡ. ಅವಳ ಪರವಾಗಿ ನಾನು ಕ್ಷಮೆ ಕೇಳುತ್ತೇನೆ,” ಎಂದರು ಆದಿತ್ಯ.

“ಅಂಕಲ್, ನೀವು ಕ್ಷಮೆ ಕೇಳುವ ಅಗತ್ಯವಿಲ್ಲ. ನಿಮ್ಮ ಮೇಲಿರುವ ಗೌರವದಿಂದಲೇ ಇಷ್ಟು ದಿನ ಸುಮ್ಮನಿದ್ದೇವೆ. ಆದರೆ ನಮ್ಮ ಮೌನವನ್ನು ದೌರ್ಬಲ್ಯ ಎಂದು ಯಾರೂ ಭಾವಿಸಬಾರದು,” ಎಂದು ಹೇಳಿ ಅಲ್ಲಿಂದ ಹೊರ ನಡೆದ.

ವೈದೇಹಿ ಹೊರಡುವ ಮೊದಲು ಮಾಧವಿಯ ಕಡೆಗೆ ಒಮ್ಮೆ ನೋಡಿದರು. ಮಾಧವಿಯ ಮುಖದಲ್ಲಿ ಬೇಸರವಿತ್ತು.

“ವೈದೇಹಿ, ಅವಳ ಮಾತುಗಳನ್ನು ಮನಸ್ಸಿಗೆ ತೆಗೆದುಕೊಳ್ಳಬೇಡಿ. ಅವಳು ಆಡಿದ್ದಕ್ಕೆ ನಿಜವಾಗಿಯೂ ನನಗೆ ಬೇಸರವಾಗಿದೆ,” ಎಂದರು ಮಾಧವಿ.

“ಬಿಡಿ ಅತ್ತಿಗೆ. ನೀವು ಯಾಕೆ ಬೇಸರ ಮಾಡಿಕೊಳ್ಳುತ್ತೀರಿ?” ಎಂದು ಹೇಳಿ ವೈದೇಹಿ ಮಗನನ್ನು ಹಿಂಬಾಲಿಸಿದರು.

ಅವರು ಹೊರಟ ನಂತರ ಮಾಧವಿ ಬೇಸರದಿಂದ ಸೋಫಾದ ಮೇಲೆ ಕುಳಿತರು.
“ನೋಡಿದ್ರಾ? ರೂಹಿಯ ಅಹಂಕಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯಾರಿಗೆ ಹೇಗೆ ಮಾತನಾಡಬೇಕು ಅನ್ನೋ ಕನಿಷ್ಠ ಜ್ಞಾನವೂ ಇಲ್ಲ. ನನ್ನ ಮಗಳೇ ಹೀಗೆಲ್ಲ ಮಾತನಾಡುತ್ತಿದ್ದಾಳೆ ಅನ್ನೋದನ್ನು ನೆನೆಸಿಕೊಂಡರೆ ನನಗೇ ನಾಚಿಕೆಯಾಗುತ್ತದೆ,” ಎಂದು ಕಣ್ಣೀರು ತುಂಬಿಕೊಂಡು ಹೇಳಿದರು.

ಆದಿತ್ಯ ಪತ್ನಿಯ ಭುಜದ ಮೇಲೆ ಕೈಯಿಟ್ಟು ಸಮಾಧಾನಿಸಲು ಪ್ರಯತ್ನಿಸಿದರು.

“ಮಾಧವಿ, ಬೇಸರ ಮಾಡಿಕೊಳ್ಳಬೇಡ. ಅವಳಿಗೆ ನಾವು ಎಷ್ಟು ಹೇಳಿದರೂ ಅರ್ಥವಾಗುತ್ತಿಲ್ಲ. ಸಮಯವೇ ಅವಳಿಗೆ ಎಲ್ಲವನ್ನೂ ಕಲಿಸಬೇಕು ಅನಿಸುತ್ತಿದೆ.”

ಜಾನಕಿ ಕೂಡ ಸೊಸೆಯ ಬಳಿ ಬಂದು ಕುಳಿತರು.

“ಮಾಧು, ನೀನು ಧೈರ್ಯ ಕಳೆದುಕೊಳ್ಳಬೇಡಮ್ಮ. ಅತಿಯಾದ ಮುದ್ದು ಕೆಲವೊಮ್ಮೆ ಮಕ್ಕಳನ್ನು ಹೀಗೆ ಮಾಡುತ್ತದೆ. ಆದರೆ ಒಂದು ದಿನ ಅವಳಿಗೂ ತನ್ನ ತಪ್ಪಿನ ಅರಿವಾಗುತ್ತದೆ. ಅಂದು ಅವಳು ಆಡಿದ ಮಾತುಗಳಿಗೆ ಪಶ್ಚಾತ್ತಾಪ ಪಡುತ್ತಾಳೆ.”

ಮಾಧವಿ ಕಣ್ಣೀರು ಒರೆಸಿಕೊಂಡು ಸುಮ್ಮನಾದರು. ಆದರೆ ಮಗಳ ಭವಿಷ್ಯದ ಬಗ್ಗೆ ಅವರ ಮನಸ್ಸಿನಲ್ಲಿ ಆತಂಕ ಮಾತ್ರ ಕಡಿಮೆಯಾಗಿರಲಿಲ್ಲ.

ಇತ್ತ…

ಮನೆಯ ಹಿಂಭಾಗದ ಕಾರ್ ಪಾರ್ಕಿಂಗ್ ಕಡೆಗೆ ರೂಹಿ ವೇಗವಾಗಿ ನಡೆಯುತ್ತಿದ್ದಳು. ಕೈಯಲ್ಲಿ ಮೊಬೈಲ್ ಹಿಡಿದು ಯಾರಿಗೋ ಮೆಸೇಜ್ ಮಾಡುತ್ತಾ ಕಾರಿನ ಬಳಿಗೆ ಬಂದಳು.

ಕಾರಿನ ಬಾಗಿಲು ತೆರೆಯಲು ಕೈ ಚಾಚಿದ ಕ್ಷಣ…

ಹಠಾತ್ತನೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಅವಳ ಬಾಯಿಯನ್ನು ಬಲವಾಗಿ ಮುಚ್ಚಿದ!

“ಮ್… ಮ್ಮ್…!”

ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ, ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ರೂಹಿಯನ್ನು ಆ ವ್ಯಕ್ತಿ ಬಲವಂತವಾಗಿ ಅವಳನ್ನು ಪಕ್ಕಕ್ಕೆ ಎಳೆದುಕೊಂಡು ಹೋದ.


ಮುಂದುವರಿಯುವುದು…❤️


ಹೇಗಿತ್ತು ಮೊದಲ ಸಂಚಿಕೆ… ಅಭಿಪ್ರಾಯ ತಿಳಿಸಿ.. ಅದೇ ನಮಗೆ ಬರೆಯಲು ಸ್ಪೂರ್ತಿ…