New Katha Varnika is now on Google Play — read original stories on your phone. Learn more
ಹುಚ್ಚು ಪ್ರೀತಿ ❤️‍🔥 – 2

ಹುಚ್ಚು ಪ್ರೀತಿ ❤️‍🔥 – 2

ಹುಚ್ಚು ಪ್ರೀತಿ ❤️‍🔥 – ೨

ಮಂಟಪದ ಹೊರಗೆ ಕಾರು ಹೊರಟ ಶಬ್ದ ಕೇಳಿಸಿದರೂ ಆರಾಧ್ಯ ಇನ್ನೂ ಅಲ್ಲೇ ನಿಂತಿದ್ದಳು.

 

ಕೆಲವೇ ನಿಮಿಷಗಳ ಹಿಂದೆ ಖುಷಿ, ಗಲಾಟೆ, ನಗು ತುಂಬಿದ್ದ ಜಾಗದಲ್ಲಿ ಈಗ ಎಲ್ಲರ ಮುಖದಲ್ಲೂ ಒಂದೇ ಪ್ರಶ್ನೆ. ಯಾರು ಅವನು? ಆರಾಧ್ಯಳನ್ನು ಮದುವೆಯಾಗಬೇಕು ಎಂದು ಎಲ್ಲರ ಮುಂದೆ ಹೇಳುವಷ್ಟು ಅವನಿಗೆ ಅವಳ ಜೊತೆ ಏನು ಸಂಬಂಧ?

ಆರಾಧ್ಯಳಿಗೆ ಆ  ಎಲ್ಲ ಪ್ರಶ್ನೆಗಳಿಗಿಂತ ತನ್ನ ತಲೆಯೊಳಗೆ ಓಡಾಡುತ್ತಿದ್ದ ಒಂದೇ ಮಾತು ಕಾಡುತ್ತಿತ್ತು.

 

ನಿನ್ನನ್ನು ಮದುವೆಯಾಗಬೇಕಾದವನು. ಅವನು ಅದನ್ನು ಅಷ್ಟು ಸಹಜವಾಗಿ ಹೇಳಿದ್ದೇ ಅವಳಿಗೆ ಇನ್ನಷ್ಟು ಕಿರಿಕಿರಿ ತಂದಿತ್ತು.

 

“ಆರಾಧ್ಯ..ನಿನಗೆ ಅವನು ಗೊತ್ತಾ?” ಎಂಬ ಅಮ್ಮನ ಧ್ವನಿ ಕೇಳಿದಾಗ ಅವಳು ತಿರುಗಿ ನೋಡಿದಳು.

 

“ಗೊತ್ತಿಲ್ಲ.” ಎಂದಷ್ಟೇ ಹೇಳಿ ಅವಳು ವೇದಿಕೆಯಿಂದ ಕೆಳಗಿಳಿದಳು.

 

ಕಾರ್ತಿಕ್ ಮಾತ್ರ ಇನ್ನೂ ಕೋಪದಲ್ಲಿದ್ದ. ಅವನು ಹೊರಗೆ ಹೋಗಿ ರುದ್ರವೀರ್‌ನನ್ನು ತಡೆಯಬೇಕೆಂದುಕೊಂಡರೂ ಅಪ್ಪ ಅವನನ್ನು ಹಿಡಿದು ನಿಲ್ಲಿಸಿದರು.

 

“ಈಗ ಏನೂ ಮಾಡಬೇಡ. ಮೊದಲು ವಿಷಯ ಏನು ಅಂತ ತಿಳಿದುಕೊಳ್ಳೋಣ.”

 

“ಆದರೆ ಅಪ್ಪ, ಅವನು ಮದುವೆ ನಿಲ್ಲಿಸಿದ್ದಾನೆ. ಅವನಿಗೆ ಅಷ್ಟು ಧೈರ್ಯ ಹೇಗೆ ಬಂತು?”

 

“ಗೊತ್ತು.” ಎಂದಷ್ಟೇ ಹೇಳಿದ 

 

ರಾಘವೇಂದ್ರ ಅವರು ಮುಂದೆ ಏನೂ ಹೇಳಲಿಲ್ಲ.

ಅವರಿಗೆ ರುದ್ರವೀರ್ ಗೊತ್ತಿದ್ದ. ಹೆಸರು ಮಾತ್ರವಲ್ಲ.

ಅವನ ಕುಟುಂಬ, ಅವನ ವ್ಯವಹಾರ, ಅವನ ಸ್ವಭಾವ… ಎಲ್ಲವೂ ಗೊತ್ತಿತ್ತು. ಆದರೆ ಆರಾಧ್ಯಳ ಜೊತೆ ಅವನಿಗೆ ಏನು ಸಂಬಂಧ ಅನ್ನುವುದು ಮಾತ್ರ ಗೊತ್ತಿರಲಿಲ್ಲ.

 

ಅಷ್ಟರಲ್ಲಿ ಮಂಟಪದ ಮತ್ತೊಂದು ಬದಿಯಿಂದ ವರನ ಮನೆಯವರು ಮಾತನಾಡಿಕೊಳ್ಳುವ ಶಬ್ದ ಕೇಳಿಸಿತು. ಇಷ್ಟು ಜನರ ಮುಂದೆ ನಡೆದ ಅವಮಾನವನ್ನು ಅವರು ಸುಮ್ಮನೆ ತೆಗೆದುಕೊಳ್ಳುವವರಲ್ಲ. ಆರಾಧ್ಯಳಿಗೆ ಪರಿಸ್ಥಿತಿ ಅರ್ಥವಾಗಿತ್ತು.

ತನ್ನ ಮದುವೆ ನಿಂತಿದ್ದಕ್ಕೆ ಅವಳಿಗೆ ದುಃಖವಾಗಿರಲಿಲ್ಲ.

ಆದರೆ ತನ್ನ ಕಾರಣದಿಂದ ಮನೆಯವರಿಗೆ ಇಷ್ಟೊಂದು ಅವಮಾನವಾಗಿದ್ದಕ್ಕೆ ಮನಸ್ಸು ಭಾರವಾಗಿತ್ತು. ಅವಳು ನೇರವಾಗಿ ತನ್ನ ಕೋಣೆಗೆ ಹೋದಳು. ಬಾಗಿಲು ಮುಚ್ಚಿದ ತಕ್ಷಣ ಕನ್ನಡಿಯ ಮುಂದೆ ನಿಂತಳು.

 

ಮದುವೆಗಾಗಿ ಅಲಂಕರಿಸಿಕೊಂಡಿದ್ದಳು.

ಕುತ್ತಿಗೆಯಲ್ಲಿ ಹಾರ, ಕೈಯಲ್ಲಿ ಬಳೆಗಳು, ಹಣೆಯಲ್ಲಿ ಕುಂಕುಮ, ಕೂದಲಲ್ಲಿ ಮಲ್ಲಿಗೆ. ಕೆಲವೇ ಗಂಟೆಗಳಲ್ಲಿ ತನ್ನ ಜೀವನ ಬದಲಾಗುತ್ತದೆ ಎಂದುಕೊಂಡಿದ್ದಳು.

 

ಆದರೆ ಈಗ ಏನೂ ಅರ್ಥವಾಗುತ್ತಿರಲಿಲ್ಲ.

 

‘ಅವನು ಯಾರು? ನಾನು ಹೇಗೆ ಗೊತ್ತು ಅವನಿಗೆ? ತನ್ನ ಬಗ್ಗೆ ಅವನಿಗೆ ಇಷ್ಟೊಂದು ನಂಬಿಕೆ ಹೇಗೆ?’

 

ಕೇವಲ ಪ್ರಶ್ನೆಗಳಷ್ಟೇ. ಅವಳಿಗೆ ಉತ್ತರ ಯಾವುದೂ ಸಿಗಲಿಲ್ಲ.

ಮೊಬೈಲ್ ತೆಗೆದುಕೊಂಡು ಕಾರ್ತಿಕ್‌ಗೆ ಕರೆ ಮಾಡಬೇಕೆಂದುಕೊಂಡಳು.

 

ಅದೇ ಸಮಯದಲ್ಲಿ ಒಂದು ಮೆಸೇಜ್ ಬಂತು.

Unknown number.

 

“ಇವತ್ತು ನಿನ್ನನ್ನು ಈ ಮದುವೆಯಿಂದ ಹೊರಗೆ ತಂದಿದ್ದಕ್ಕೆ ನನ್ನನ್ನು ಕ್ಷಮಿಸು ಅಂತ ನಾನು ಕೇಳಲ್ಲ.” ಎಂದು ಒಂದು ಸಂದೇಶ ಇತ್ತು. ಅವಳು ಮೊಬೈಲ್ ಬಿಸಾಕಬೇಕು ಅಂದುಕೊಳ್ಳುವಷ್ಟರಲ್ಲಿ,

 

ಇನ್ನೊಂದು ಮೆಸೇಜ್ ಬಂದಿತ್ತು.

 

“ನೀನು ನನ್ನನ್ನು ದ್ವೇಷಿಸಿದರೂ ಪರವಾಗಿಲ್ಲ.”

 

ಅದಾದ ಮೇಲೆ ಮತ್ತೊಂದು.

 

“ಆದರೆ ಇವತ್ತು ನಡೆದದ್ದಕ್ಕೆ ನಿನ್ನ ಕುಟುಂಬದ ಮುಂದೆ ತಲೆ ತಗ್ಗಿಸಬೇಕಾದ ಪರಿಸ್ಥಿತಿ ನಿನಗೆ ಬರೋದಿಲ್ಲ.” ಎಂದು ನೋಡಿದವಳ ಕೋಪ ನೆತ್ತಿಗೇರಿತ್ತು.

 

ಸಂದೇಶ ಯಾರಿಂದ ಬಂದಿದ್ದು ಎಂದು ತಿಳಿಯಿತು.

ರುದ್ರವೀರ್.

 

ಅವಳು ಉತ್ತರ ಕೊಡಲು ಹೋದವಳು, 

‘ಯಾಕೆ reply ಮಾಡಬೇಕು? ಅವನು ತನ್ನ ಜೀವನಕ್ಕೆ ಬಂದು ಎಲ್ಲವನ್ನೂ ಹಾಳು ಮಾಡಿದ್ದಾನೆ.’ ಎಂದುಕೊಂಡು ಸುಮ್ಮನಾದಳು.

 

ಅಷ್ಟರಲ್ಲಿ ಮತ್ತೊಂದು ಮೆಸೇಜ್ ಬಂತು.

“ನೀನು ನನಗೆ ಉತ್ತರ ಕೊಡಬೇಕಿಲ್ಲ.” ಎಂದಿತ್ತು ಸಂದೇಶ.

 

ಆರಾಧ್ಯ ಫೋನ್ ಕೆಳಗೆ ಇಟ್ಟು.

‘ಅವನಿಗೆ ಹೇಗೆ ಗೊತ್ತು ತಾನು reply ಮಾಡಲು ಹೋಗಿದ್ದೆ ಎಂದು?’ ಯೋಚಿಸಿದವಳಿಗೆ ಮೊದಲ ಬಾರಿಗೆ ಸ್ವಲ್ಪ ಭಯವಾಯಿತು.

 

———————————❤️———————————

 

ಇತ್ತ ರುದ್ರವೀರ್ ತನ್ನ ಮನೆಗೆ ತಲುಪಿದ್ದ.

 

ಮನೆಯ ಮುಂದೆ ಕಾರು ನಿಂತ ಕೂಡಲೇ ಒಳಗಿದ್ದವರಿಗೆ ಅವನು ಬಂದಿರುವುದು ಗೊತ್ತಾಯಿತು. ದೊಡ್ಡ ಮನೆ. ಹಳೆಯ ಕುಟುಂಬ. ಆ ಮನೆಯಲ್ಲಿನ ಪ್ರತಿಯೊಬ್ಬರಿಗೂ ರುದ್ರವೀರ್‌ನ ಸ್ವಭಾವ ಗೊತ್ತು. ಆದರೆ ಇವತ್ತು ಅವನು ಮಾಡಿದ ಕೆಲಸದ ಬಗ್ಗೆ ಎಲ್ಲರೂ ಕೇಳಲೇಬೇಕಿತ್ತು. ಅವನು ಒಳಗೆ ಬಂದಾಗ ಜಾನಕಮ್ಮ ಕುರ್ಚಿಯಲ್ಲಿ ಕುಳಿತಿದ್ದರು. ಅವರ ಪಕ್ಕದಲ್ಲಿ ಶಾರದಾ.

ಆದಿತ್ಯ ಈಗಾಗಲೇ ಎಲ್ಲವನ್ನೂ ಹೇಳಿದ್ದ.

 

“ನೀನು ಮದುವೆ ನಿಲ್ಲಿಸಿದ್ದೀಯಂತೆ.” ಎಂದರು ಜಾನಕಮ್ಮ.

 

ರುದ್ರವೀರ್ ಶೂ ತೆಗೆದು ಒಳಗೆ ಬಂದು,

“ಹೌದು.” ಎಂದ.

 

“ಆ ಹುಡುಗಿಯ ಒಪ್ಪಿಗೆ ಇದೆಯಾ?” ಎಂದು ಕೇಳಿದರೆ,

 

“ಇಲ್ಲ.” ಎಂದು ಆರಾಮಾಗಿ ಹೇಳಿದ.

 

ಎಲ್ಲರ ಮುಖದಲ್ಲಿ ಆತಂಕ ಮೂಡಿತು.

 

“ಹಾಗಾದರೆ ನೀನು ಮಾಡಿದ್ದು ಸರಿಯೇ?” ಎಂದು ಶಾರದಾ ಕೇಳಿದರು.

 

ರುದ್ರವೀರ್ ತಾಯಿಯತ್ತ ನೋಡಿ,

“ನನಗೆ ಗೊತ್ತಿಲ್ಲ.” ಎಂದ.

 

“ಪ್ರೀತಿ ಅನ್ನೋದು ಒಬ್ಬರನ್ನ ಹಿಡಿದುಕೊಂಡು ನಿಲ್ಲಿಸುವುದಲ್ಲ ರುದ್ರ. ಅವಳಿಗೆ ನೀನು ಇಷ್ಟವಿಲ್ಲ ಅಂದಿದ್ದಾಳೆ” ಜಾನಕಮ್ಮ ನಿಧಾನವಾಗಿ ಹೇಳಿದರು.

 

“ಗೊತ್ತು. ಆದರೆ ನಾನು ಅವಳನ್ನು ಬಿಡೋದಿಲ್ಲ. ನನಗೆ ಅವಳು ಬೇಕೇ ಬೇಕು” ಎಂದ ರುದ್ರ.

 

ಮನೆಯೊಳಗೆ ಮತ್ತೆ ಮೌನ ಆವರಿಸಿತು. ಆದಿತ್ಯ ತನ್ನ ಅಣ್ಣನತ್ತ ನೋಡುತ್ತಿದ್ದ. ಇಷ್ಟು ವರ್ಷಗಳಲ್ಲಿ ರುದ್ರವೀರ್ ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿದ್ದ. ವ್ಯವಹಾರದಲ್ಲಿ ಸೋಲನ್ನೂ ನೋಡಿದ್ದ. ಗೆಲುವನ್ನೂ ನೋಡಿದ್ದ. ಜನರನ್ನು ಕಳೆದುಕೊಂಡಿದ್ದ. ಆದರೆ ಯಾವ ವಿಷಯದಲ್ಲೂ ಇಷ್ಟು ಹಠ ಹಿಡಿದಿರಲಿಲ್ಲ. ಆರಾಧ್ಯ ಮಾತ್ರ ಬೇರೆ. ಅವಳ ವಿಷಯ ಬಂದಾಗ ಅವನಿಗೆ ಸೋಲು ಅನ್ನೋ ಪದವೇ ಇರಲಿಲ್ಲ.

 

“ನಿನಗೆ ಅವಳ ಮೇಲೆ ಇಷ್ಟು ಪ್ರೀತಿ ಯಾವಾಗ ಆಯ್ತು?”

ಶಾರದಾ ಕೇಳಿದರು.

 

ರುದ್ರವೀರ್ ಉತ್ತರಿಸಲಿಲ್ಲ. ಅವನಿಗೆ ಆ ಪ್ರಶ್ನೆಗೆ ಉತ್ತರ ಕೊಡಲು ಇಷ್ಟವಿರಲಿಲ್ಲ. ಯಾಕೆಂದರೆ ಆ ಕಥೆ ಇವತ್ತು ಶುರುವಾಗಿರಲಿಲ್ಲ. ಬಹಳ ವರ್ಷಗಳ ಹಿಂದೆಯೇ ಶುರುವಾಗಿತ್ತು. ಅವಳಿಗೆ ನೆನಪಿರದ ಒಂದು ದಿನದಿಂದ. ಅವಳಿಗೆ ಗೊತ್ತಿರದ ಒಂದು ಭೇಟಿಯಿಂದ.

ಅವಳ ಜೀವನದಲ್ಲಿ ಅವನು ಇರಲಿಲ್ಲ. ಆದರೆ ಅವನ ಜೀವನದಲ್ಲಿ ಅವಳು ಮಾತ್ರ ಇದ್ದಳು.

 

———————————❤️———————————

 

ಸಂಜೆಯಾಗುವಷ್ಟರಲ್ಲಿ ಮದುವೆ ಮಂಟಪ ಖಾಲಿಯಾಗತೊಡಗಿತ್ತು. ವರನ ಮನೆಯವರು ಹೊರಟುಹೋಗಿದ್ದರು. ಸಂಬಂಧಿಕರ ಮಾತುಗಳು ನಿಧಾನವಾಗಿ ಕಡಿಮೆಯಾಗಿದ್ದವು. ಆರಾಧ್ಯ ತನ್ನ ರೂಮಿನಲ್ಲೇ ಕುಳಿತಿದ್ದಳು.

 

ಅಮ್ಮ ಒಳಗೆ ಬಂದು ಅವಳ ಪಕ್ಕದಲ್ಲಿ ಕುಳಿತು,

“ನಿನಗೆ ಅವನ ಬಗ್ಗೆ ನಿಜವಾಗಿಯೂ ಏನೂ ಗೊತ್ತಿಲ್ಲವಾ?” ಎಂದರು.

 

“ಇಲ್ಲ.” ಎಂದು ತಲೆ ಆಡಿಸಿದಳು ಆರಾಧ್ಯ.

 

“ಹಾಗಾದರೆ ಅವನು ಯಾಕೆ ಹೀಗೆ ಮಾಡಿದ?”

 

“ಗೊತ್ತಿಲ್ಲ ಅಮ್ಮ.”

 

“ಅವನು ಹೇಳಿದ ಮಾತು ಕೇಳಿದಾಗ… ನನಗೆ ಅವನಿಗೆ ನಿನ್ನ ಬಗ್ಗೆ  ಎಲ್ಲಾ ಗೊತ್ತಿದೆ ಅಂತ ಅನ್ನಿಸಿತು” ಎಂದರು ಅವರ ಅಮ್ಮ.

 

ಆರಾಧ್ಯ ಏನೂ ಹೇಳಲಿಲ್ಲ.

ಸ್ವಲ್ಪ ಹೊತ್ತಿನ ನಂತರ ಅಮ್ಮ ಹೊರಗೆ ಹೋದರು. ಆರಾಧ್ಯ ಮತ್ತೆ ಮೊಬೈಲ್ ತೆಗೆದು, ರುದ್ರವೀರ್‌ನ ಮೆಸೇಜ್ ಅನ್ನು ಮತ್ತೆ ನೋಡಿದಳು. ಅವಳು ಅವನ ನಂಬರ್ ಸೇವ್ ಮಾಡಲಿಲ್ಲ.

 

ಆದರೆ, ಏನೋ ಒಂದು ಕಾರಣಕ್ಕೆ ಉತ್ತರ ಕೊಡಬೇಕು ಅನ್ನಿಸಿ,

“ನೀವು ನನ್ನ ಜೀವನದಲ್ಲಿ ಮತ್ತೆ ಬರಬೇಡಿ.” ಎಂದು ಉತ್ತರ ಕಳುಹಿಸಿದಳು.

 

ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಉತ್ತರ ಬಂದಿತ್ತು.

“ಅದು ಮಾತ್ರ ಸಾಧ್ಯವಿಲ್ಲ.” ಎಂದು.

 

ಆರಾಧ್ಯ ಕೋಪದಿಂದ ಫೋನ್ ನೋಡುತ್ತಾ ಕುಳಿತಳು.

 

“ನಿನ್ನ ಜೀವನದಲ್ಲಿ ನಾನು ಬರಬಾರದು ಅಂತ ನೀನು ಹೇಳಬಹುದು. ಆದರೆ ನೀನು ನನ್ನ ಜೀವನದಿಂದ ಹೊರಗೆ ಹೋಗು ಅಂತ ನಾನು ಹೇಳೋಕೆ ಸಾಧ್ಯವಿಲ್ಲ.” ಎಂದು ಮತ್ತೊಂದು ಸಂದೇಶ ಬಂದಿತ್ತು.

 

ಆರಾಧ್ಯ ಫೋನ್ ಪಕ್ಕಕ್ಕಿಟ್ಟು ಯೋಚಿಸತೊಡಗಿದಳು.

 

‘ರುದ್ರವೀರ್ ಯಾರು? ಅವನು ತನ್ನನ್ನು ಯಾವಾಗಿನಿಂದ ಪ್ರೀತಿಸುತ್ತಿದ್ದ? ಅವನಿಗೆ ತನ್ನ ಬಗ್ಗೆ ಏನು ಗೊತ್ತು? ಅದರಲ್ಲೂ…

ತನ್ನನ್ನು ಮದುವೆಯಾಗಬೇಕು ಎಂದು ಹೇಳಲು ಕಾರಣವೇನು?’

 

ಅವಳಿಗೆ ಗೊತ್ತಿರದ ಆ ಪ್ರಶ್ನೆಗಳ ಉತ್ತರಗಳು ಒಂದೊಂದಾಗಿ ಹೊರಬರಬೇಕಿತ್ತು. ಆದರೆ ಆ ಉತ್ತರಗಳ ಜೊತೆ ಅವಳ ಬದುಕಿನ ಒಂದು ಹಳೆಯ ಬಾಗಿಲೂ ತೆರೆಯಲಿತ್ತು. ಅದು ತೆರೆದ ಮೇಲೆ ಆರಾಧ್ಯಗೆ ತನ್ನ ಬಗ್ಗೆ ತನಗೇ ಗೊತ್ತಿಲ್ಲದ ಒಂದು ಸತ್ಯ ತಿಳಿಯಲಿತ್ತು. ರುದ್ರವೀರ್ ಅವಳನ್ನು ಮೊದಲ ಬಾರಿಗೆ ನೋಡಿದ್ದು ಇವತ್ತು ಅಲ್ಲ. ಹದಿನಾಲ್ಕು ವರ್ಷಗಳ ಹಿಂದೆಯೇ ಎಂಬುದು.

 

ಮುಂದುವರೆಯುವುದು ❤️

 

———————————❤️———————————