New Katha Varnika is now on Google Play — read original stories on your phone. Learn more
ಪ್ರೀತಿ ಮರೀಚಿಕೆ – 4

ಪ್ರೀತಿ ಮರೀಚಿಕೆ – 4

ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೃಶ್ಯವನ್ನು ನೋಡುತ್ತಿದ್ದ ಮೂರ್ತಿಯವರ ಕಣ್ಣುಗಳು ಶಶಾಂಕ್ ಪಕ್ಕದಲ್ಲಿ ನಿಂತಿದ್ದ ವೃದ್ಧರ ಮೇಲೆ ನೆಟ್ಟವು. ಅವರನ್ನು ನೋಡಿದ ಕ್ಷಣವೇ ಅವರ ಕಣ್ಣುಗಳು ಆಶ್ಚರ್ಯದಿಂದ ಅರಳಿ ಎದ್ದು ನಿಂತರು. 

ಮೂರ್ತಿಯನ್ನು ನೋಡಿದ ಲಲಿತಾ ಏನಾಯ್ತು ಯಾಕೆ ಹೀಗೆ ನಿಂತರಿ? ಎನ್ನುತ್ತಾ ಅವರು ಸಹ ಟಿ ವಿಯ ಕಡೆಗೆ ದೃಷ್ಟಿ ನೆಟ್ಟರು.

 ಮೂರ್ತಿ ಅವರನ್ನು ನೋಡಿ ಏನೋ ಹೇಳಿದರು.

 ಅದನ್ನು ಕೇಳಿದ ಲಲಿತಾ ಮೂರ್ತಿಗೆ ಒಂದು ಸಲಹೆ  ನೀಡಿದರು. ಪ್ರತಿಯೊಂದು ವಿಷಯವನ್ನೂ ಮೂರ್ತಿ ಬಹಳ ಎಚ್ಚರಿಕೆಯಿಂದ ಆಲಿಸುತ್ತಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದ ಅವರ ಮನಸ್ಸಿನಲ್ಲಿ ಅಷ್ಟರಲ್ಲಾಗಲೇ ಒಂದು ಕುತಂತ್ರದ ಆಲೋಚನೆ ಮೊಳಕೆಯೊಡೆದಿತ್ತು. ಅದನ್ನು ಕಾರ್ಯರೂಪಕ್ಕೆ ತಂದರೆ ತಮ್ಮ ಉದ್ದೇಶ ಈಡೇರಬಹುದೆಂಬ ಲೆಕ್ಕಾಚಾರವೂ ಇಬ್ಬರ ಮನಸ್ಸಿನಲ್ಲಿ ಶುರುವಾಗಿತ್ತು.

ಆದರೆ ಆ ಕುತಂತ್ರದ ಪರಿಣಾಮವನ್ನು ಎದುರಿಸಬೇಕಾಗಿದ್ದವಳು ಮಾತ್ರ ಶ್ರಾವ್ಯ!

ಇತ್ತ ಶ್ರಾವ್ಯಳಿಗೆ ತನ್ನ ಸುತ್ತಲೂ ಏನಾಗುತ್ತಿದೆ ಎಂಬುದರ ಸಣ್ಣ ಸುಳಿವೂ ಇರಲಿಲ್ಲ. ಇಷ್ಟು ದಿನಗಳ ಪರಿಶ್ರಮದ ನಂತರ ಸಿಕ್ಕಿದ್ದ ಹೊಸ ಕೆಲಸ ಅವಳಲ್ಲಿ ಹೊಸ ಭರವಸೆಯನ್ನು ಮೂಡಿಸಿತ್ತು. ತನ್ನ ಬದುಕಿನ ಹೊಸ ಅಧ್ಯಾಯ ಆರಂಭವಾಗುತ್ತಿದೆ ಎಂಬ ಸಂತೋಷದಲ್ಲಿ, ಮುಂದಿನ ದಿನಗಳ ಕನಸುಗಳನ್ನು ಕಟ್ಟಿಕೊಳ್ಳುತ್ತಾ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಳು.

ಅವಳ ಮುಗ್ಧ ಸಂತೋಷದ ಹಿಂದೆ ಯಾರೋ ಹೆಣೆದ ಸಂಚೊಂದು ಕಾಯುತ್ತಿದೆ ಎಂಬ ಅರಿವೇ ಅವಳಿಗಿರಲಿಲ್ಲ.

ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಶ್ರಾವ್ಯಳನ್ನು ಮೂರ್ತಿಯವರು ತಮ್ಮ ಬಳಿ ಕರೆದರು.

“ಶ್ರಾವ್ಯ, ನನಗೆ ಸ್ವಲ್ಪ ಹಣಕಾಸಿನ ತೊಂದರೆ ಬಂದಿದೆ. ಹಾಗಾಗಿ ಈ ಮನೆಯನ್ನು ಅಡಮಾನ ಇಡಬೇಕೆಂದು ನಿರ್ಧರಿಸಿದ್ದೇನೆ. ಅದಕ್ಕೆ ಮನೆಯವರೆಲ್ಲರ ಸಹಿ ಬೇಕು. ನೀನು ಕೂಡ ಈ ಪತ್ರಗಳಿಗೆ ಸಹಿ ಹಾಕು” ಎಂದು ಕೆಲವು ದಾಖಲೆಗಳನ್ನು ಅವಳ ಮುಂದೆ ಇಟ್ಟರು.

ಶ್ರಾವ್ಯ ಅವುಗಳನ್ನು ಕೈಗೆತ್ತಿಕೊಂಡು ಓದಲು ಪ್ರಾರಂಭಿಸಿದಳು. ಅದನ್ನು ಗಮನಿಸಿದ ಮೂರ್ತಿಯವರಿಗೆ ಸಿಟ್ಟು ಬಂತು. ಜೊತೆಗೆ ಸಣ್ಣ ಬೆವರು ಸಹ.

“ಏನದು? ನಾನೇನು ಹೇಳುತ್ತಿದ್ದೇನೆ, ನೀನೇನು ಮಾಡುತ್ತಿದ್ದೀಯ? ನಾಲ್ಕು ಅಕ್ಷರ ಕಲಿತ ತಕ್ಷಣ ತಂದೆಯ ಮೇಲೆಯೇ ನಂಬಿಕೆ ಇಲ್ಲದಂತಾಯಿತಾ? ಅಲ್ಲಿ ನಿನ್ನ ಆಸ್ತಿ ಏನಿದೆ? ನಿನ್ನ ಗಂಟನ್ನು ಬರೆಸಿಕೊಳ್ಳುತ್ತಿರುವಂತೆ, ನನ್ನ ಮನೆಯನ್ನೇ ಅಡಮಾನ ಇಡುತ್ತಿದ್ದೇನೆ. ಅದರಿಂದ ನಿನಗೇನು ತೊಂದರೆ? ನಾನು ಹೇಳಿದ ಕಡೆ ಸಹಿ ಹಾಕು.”

“ಅಪ್ಪಾ, ಹಾಗಲ್ಲ… ಒಮ್ಮೆ ಓದಿಕೊಳ್ಳುತ್ತಿದ್ದೆ ಅಷ್ಟೇ…” ಎಂದು ಶ್ರಾವ್ಯ ಮೆಲ್ಲನೆ ಹೇಳಿದಳು.

“ಸಾಕು ನಿಲ್ಲಿಸು! ನಾಲ್ಕು ಅಕ್ಷರ ಕಲಿತಿದ್ದೀಯ ಅಂತ ಎಲ್ಲವನ್ನೂ ಓದಿ ಸಹಿ ಹಾಕಬೇಕಾ? ನಾನು ಹೇಳಿದ ಮಾತಿಗೆ ಬೆಲೆ ಇಲ್ಲವೇ? ನನ್ನ ಕಷ್ಟದ ಸಮಯದಲ್ಲಿ ಇಷ್ಟೂ ಸಹಾಯ ಮಾಡಲಾರೆ ಎಂದರೆ ಹೇಗೆ?” ನಿನ್ನನ್ನೇನು ಹಣ ನೀಡು ಎಂದು ಕೇಳುತ್ತಿದ್ದಿನಾ…

ಮೂರ್ತಿಯವರ ಮಾತುಗಳು ಶ್ರಾವ್ಯಳ ಮನಸ್ಸಿಗೆ ನೋವುಂಟುಮಾಡಿದವು. ತಾನು ಏನೋ ತಪ್ಪು ಮಾಡಿದವಳಂತೆ ತಲೆತಗ್ಗಿಸಿದಳು. ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತ್ತು.

ತಂದೆಯ ಮಾತನ್ನು ಮೀರಿ ನಡೆಯಲು ಮನಸ್ಸಾಗದೆ, ಮತ್ತೊಮ್ಮೆ ಆ ಪತ್ರಗಳತ್ತ ನೋಡಿದಳು. ಆದರೆ ಅವುಗಳನ್ನು ಓದಲು ಕೂಡ ಅವಕಾಶ ಕೊಡದೆ ಮೂರ್ತಿಯವರು ತೋರಿದ ಅಸಮಾಧಾನ ಅವಳನ್ನು ಮತ್ತಷ್ಟು ಗೊಂದಲಕ್ಕೀಡುಮಾಡಿತ್ತು.

ಕೊನೆಗೆ ಕಣ್ಣೀರು ತುಂಬಿದ ಕಣ್ಣುಗಳಿಂದಲೇ ಅವರು ತೋರಿಸಿದ ಜಾಗದಲ್ಲಿ ಸಹಿ ಹಾಕಿದಳು.

ತಾನು ಸಹಿ ಹಾಕಿದ ಆ ಕಾಗದಗಳು ತನ್ನ ಬದುಕಿನ ದಿಕ್ಕನ್ನೇ ಬದಲಾಯಿಸಬಲ್ಲವು ಎಂಬ ಸಣ್ಣ ಕಲ್ಪನೆಯೂ ಅವಳಿಗಿರಲಿಲ್ಲ. ತಂದೆಯ ಮೇಲಿನ ನಂಬಿಕೆಯೇ ಅವಳಿಂದ ಆ ಸಹಿಯನ್ನು ಹಾಕಿಸಿತ್ತು. ಆದರೆ ಮೂರ್ತಿಯವರು ಮಾತ್ರ ಆ ಸಹಿಯ ಹಿಂದೆ ಬೇರೆಯದೇ ಉದ್ದೇಶವನ್ನು ಇಟ್ಟುಕೊಂಡಿದ್ದರು.

 

  ******************💔******************

 

ಮರುದಿನ ಬೆಳಗ್ಗೆ ಎಲ್ಲರೂ ತಮ್ಮ ತಮ್ಮ ಕೆಲಸಗಳತ್ತ ತೆರಳಿದರು.

ಇತ್ತ ಶಶಾಂಕ್ ಕೂಡ ಆಫೀಸ್‌ನಲ್ಲಿ ತನ್ನ ಕೆಲಸದಲ್ಲಿ ನಿರತನಾಗಿದ್ದ. ಅಷ್ಟರಲ್ಲಿ ಅವನ ಪಿ.ಎ. ಶರತ್ ಬಂದು ಒಂದು ನೋಟಿಸ್ ಅನ್ನು ಅವನ ಕೈಗಿಟ್ಟನು.

“ಸರ್, ನಿಮಗೆ ಈ ನೋಟಿಸ್ ಬಂದಿದೆ.”

ಅದನ್ನು ಕೈಗೆತ್ತಿಕೊಂಡ ಶಶಾಂಕ್ ಅದರಲ್ಲಿದ್ದ ವಿಷಯವನ್ನು ಓದುತ್ತಿದ್ದಂತೆಯೇ ಅವನ ಮುಖದ ಭಾವನೆ ಬದಲಾಯಿತು. ಅವನ ರಕ್ತ ಕುದಿಯತೊಡಗಿತು. ಒಮ್ಮೆಲೆ ಕುರ್ಚಿಯಿಂದ ಎದ್ದು,

“What the hell!” ಎಂದು ಕೋಪದಿಂದ ಕೂಗಿದ.

ಅವನ ಧ್ವನಿಗೆ ಪಿ.ಎ. ಕೂಡ ಬೆಚ್ಚಿಬಿದ್ದಳು.

ನೋಟಿಸ್ ಅನ್ನು ಮತ್ತೊಮ್ಮೆ ನೋಡಿದ ಶಶಾಂಕ್, “ಇದು ಹೇಗೆ ಸಾಧ್ಯ? ಮೊದಲು ಮನೆಗೆ ಹೋಗಿ ಅವರ ಜೊತೆ ಮಾತನಾಡಬೇಕು. ವಿಷಯವೇನೆಂದು ತಿಳಿದುಕೊಂಡ ನಂತರವೇ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು” ಎಂದುಕೊಂಡ.

ತಕ್ಷಣವೇ ಮನೆಗೆ ಹೊರಡಲು ಸಿದ್ಧನಾದವನಿಗೆ ಅಷ್ಟರಲ್ಲಿ ಮುಖ್ಯವಾದ ಮೀಟಿಂಗ್ ನೆನಪಾಯಿತು. ಅದನ್ನು ಮುಂದೂಡುವಂತೆಯೂ ಇರಲಿಲ್ಲ, ಅರ್ಧಕ್ಕೆ ಬಿಟ್ಟು ಹೋಗುವಂತೆಯೂ ಇರಲಿಲ್ಲ.

ಅನಿವಾರ್ಯವಾಗಿ ತನ್ನ ಕೋಪವನ್ನು ನಿಯಂತ್ರಿಸಿಕೊಂಡು ಮೀಟಿಂಗ್‌ಗೆ ಹಾಜರಾದ. ಆದರೆ ಅವನ ಮನಸ್ಸು ಮಾತ್ರ ನೋಟಿಸ್‌ನಲ್ಲಿದ್ದ ವಿಷಯದ ಸುತ್ತಲೇ ಸುತ್ತುತ್ತಿತ್ತು. ಎದುರಿಗಿದ್ದವರು ಏನು ಮಾತನಾಡುತ್ತಿದ್ದಾರೆ ಎಂಬುದರ ಕಡೆ ಗಮನ ಕೊಡಲು ಪ್ರಯತ್ನಿಸಿದರೂ ಪದೇಪದೇ ಅದೇ ಯೋಚನೆಗಳು ಕಾಡುತ್ತಿದ್ದವು.

ಕೊನೆಗೂ ಆದಷ್ಟು ಬೇಗ ಮೀಟಿಂಗ್ ಮುಗಿಸಿ, ಇನ್ನು ತಡಮಾಡದೆ ಮನೆಗೆ ತೆರಳಲು ನಿರ್ಧರಿಸಿದ. ಅವನ ಮನಸ್ಸಿನಲ್ಲಿ 

“ಇಷ್ಟು ದಿನ ಸುಮ್ಮನಿದ್ದು ಈಗ ಇದ್ದಕ್ಕಿದ್ದಂತೆ ಯಾಕೆ ಬಂದರು? ಹಣ… ದುಡ್ಡು ಮನುಷ್ಯನಿಂದ ಏನು ಬೇಕಾದರೂ ಮಾಡಿಸುತ್ತದೆ ಅನ್ನೋದು ನಿಜವೇ ಸರಿ. ನನ್ನ ಹಣವನ್ನು ನೋಡಿ ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಲಿ, ನನ್ನ ಹಣದ ಆಸೆಗೆ ಬಿದ್ದು ಈ ಆಟ ಆಡಿದವರನ್ನು ಮಾತ್ರ ಅಷ್ಟು ಸುಲಭವಾಗಿ ಬಿಡುವ ಪ್ರಶ್ನೆಯೇ ಇಲ್ಲ. ಅವರು ಯಾರೆಂಬುದು ಗೊತ್ತಾದ ಮೇಲೆ ಸುಮ್ಮನೆ ಬಿಡುವುದಿಲ್ಲ!” ಎಂದು ಹಲ್ಲು ಕಚ್ಚಿ ಕೋಪದಿಂದಲೇ ಹೇಳಿಕೊಂಡ ಶಶಾಂಕ್..

 

ಮುಂದುವರೆಯುವುದು….

ಓದಿ ಅಭಿಪ್ರಾಯ ತಿಳಿಸಿ