New Katha Varnika is now on Google Play — read Telugu stories on your phone. Learn more
ಅಗ್ನಿಪರೀಕ್ಷೆ – 4

ಅಗ್ನಿಪರೀಕ್ಷೆ – 4

 

ಆರಾಧ್ಯ ಬಾಗಿಲು ಮುಚ್ಚಿ ಅಳತೊಡಗಿದಳು. ಅವಳಿಗೆ ವಿಖ್ಯಾತ್ ವರ್ತನೆಯೇ ಅರ್ಥವಾಗುತ್ತಿಲ್ಲ. ಎಲ್ಲವೂ ಅವಳಲ್ಲಿದ್ದ ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದೆ. 

 

ಅವಳ ಮನ,”ಅಕ್ಕನನ್ನು ಮದುವೆ ಆಗಲು ಹೊರಟಿದ್ದಾನೆ ಅಂದಮೇಲೆ ನನ್ನ ಜೊತೆ ಯಾಕೆ ಹಾಗೆ ವರ್ತಿಸಿದ…ಅವನು ನಿಜವಾಗ್ಲೂ ನನ್ನನ್ನ ಪ್ರೀತಿಸುತ್ತಾ ಇದಾನ?” ಎಂದುಕೊಂಡವಳು ಮರುಕ್ಷಣವೇ,”ಪ್ರೀತಿ ಇದ್ದರೆ ಅಕ್ಕನ ಜೊತೆ ಮದುವೆಗೆ ಯಾಕೆ ಒಪ್ಪಿಗೆ ಕೊಡುತ್ತಾ ಇದ್ದ…” ಎಂದುಕೊಂಡವಳ ನೋವು ಹೆಚ್ಚಾಗಿತ್ತು. 

 

ಮನದಲ್ಲಿ ಇದ್ದ ಪ್ರಶ್ನೆಗಳಿಗೆ ಎಷ್ಟು ಯೋಚಿಸಿದರೂ ಉತ್ತರ ಸಿಗದೆ ಮನ ಗೊಂದಲದ ಗೂಡಾಗಿತ್ತು. ಅವಳು ತನ್ನದೇ ಯೋಚನೆಯಲ್ಲಿ ಕಳೆದುಹೋಗಿರುವಾಗ ಅವಳ ಫೋನ್ ರಿಂಗಣಿಸಿತ್ತು. ಯಾವುದೋ ಅಪರಿಚಿತ ಸಂಖ್ಯೆಯಿಂದ ಕರೆ ಬರುತ್ತಿತ್ತು. ಪೋನ್ ಸ್ವೀಕರಿಸುವ ಮನಸ್ಸಾಗದೆ ಹಾಗೆಯೇ ಕುಳಿತಿದ್ದಳು. ಒಂದು ಸಲ ರಿಂಗ್ ಆಗಿ ಕಟ್ ಆದರೂ ಅವಳು ಉತ್ತರಿಸದೇ ಇದ್ದಾಗ ಮತ್ತೊಮ್ಮೆ ರಿಂಗ್ ಆಗತೊಡಗಿತು. 

 

ಅವಳು ಕಣ್ಣೀರು ಒರೆಸಿಕೊಂಡವಳು ಫೋನ್ ಕರೆ ಸ್ವೀಕರಿಸಿ ಹಲೋ ಎಂದರೆ ಅತ್ತ ಕಡೆಯಿಂದ ಯಾವುದೇ ಉತ್ತರವಿರಲಿಲ್ಲ. ಮತ್ತೊಮ್ಮೆ ಸಂಖ್ಯೆ ಪರೀಕ್ಷಿಸಿದವಳು ಯಾರು ಎಂದು ಕೇಳಿದಾಗ ಅತ್ತ ಕಡೆಯಿಂದ ಕೇಳಿಬಂದ ದನಿ ಕೇಳಿ ಅವಳ ಹೃದಯ ಬಡಿತ ಜೋರಾಯಿತು. 

 

ರಾಧ್ಯಾ…ಎಂಬ ದನಿ ಕೇಳಿದವಳಿಗೆ ಅದು ವಿಖ್ಯಾತ್ ಧ್ವನಿಯೆಂದು ತಿಳಿಯಲು ತಡವಾಗಲಿಲ್ಲ. ಅವಳು ಏನೂ ಮಾತನಾಡಲಿಲ್ಲ. 

 

ಇಬ್ಬರ ನಡುವೆ ಮೌನ ಆವರಿಸಿತ್ತು. ವಿಖ್ಯಾತ್,”ಕಾಲ್ ಕಟ್ ಮಾಡಬೇಡ ಪ್ಲೀಸ್…ನಾನು ನಿನ್ನ ಜೊತೆ ಮಾತಾಡಬೇಕು…” ಎನ್ನುತ್ತಿದ್ದಂತೆ ಮತ್ತೆ ಅವಳ ಕಂಗಳು ತುಂಬಿದವು. 

 

“ಪ್ಲೀಸ್…ನನಗೆ ನಿಮ್ಮ ಜೊತೆ ಮಾತಾಡೋಕೆ ಏನೂ ಇಲ್ಲ…” ಎಂದು ಅಳುವ ದನಿಯಲ್ಲಿ ಹೇಳಿದಾಗ ಅವನು,”ಒಂದು ನಿಮಿಷ ನನ್ನ ಮಾತು ಕೇಳು…” ಎಂದು ಹೇಳಿದ್ದ.

 

ಆರಾಧ್ಯ,”ಸರಿ ಒಂದು ನಿಮಿಷ ತಾನೇ…ಹೇಳಿ ಏನ್ ವಿಷಯ?” ಎಂದು ಸಹಜವಾಗಿ ಕೇಳುತ್ತಿದ್ದರೆ ಅವನು,”ನೋಡು ರಾಧ್ಯಾ…ನೀನು ನನ್ನನ್ನ ತಪ್ಪಾಗಿ ತಿಳಿದುಕೊಳ್ಳುತ್ತಾ ಇದೀಯ? ನೀನು ಅಂದುಕೊಂಡಿರೋ ತರ ಏನು ಇಲ್ಲ…” ಎಂದು ಸಮಜಾಯಿಷಿ ಕೊಡುತ್ತಿರುವುದನ್ನು ಕೇಳಿ ಅವಳ ಕೋಪ ಹೆಚ್ಚಾಗಿತ್ತು. 

 

ವ್ಯಂಗ್ಯವಾಗಿ ನಕ್ಕವಳು,”ನಾನು ತಪ್ಪಾಗಿ ತಿಳಿದುಕೊಂಡಿದ್ದೀನಿ ಅಲ್ವಾ? ಸರಿ ಆಯ್ತು…ನೀವು ಹೇಳಿ ಈಗ…ತಪ್ಪು ತಿಳಿದುಕೊಳ್ಳೋ ತರ ನಡೆದುಕೊಂಡವರು ಯಾರು? ಅಕ್ಕನ ಜೊತೆ ಮದುವೆ ಆಗೋಕೆ ಒಪ್ಪಿದ ಮೇಲೆ ನಿಮ್ಮ ಜೊತೆ ನಾನ್ಯಾಕೆ ಮಾತಾಡಬೇಕು…” ಎಂದು ಗಂಭೀರವಾಗಿ ಕೇಳಿದಾಗ ಅವನು ಮೌನವಾದ. ಅವನಿಂದ ಈಗ ಯಾವುದೇ ಉತ್ತರವಿರಲಿಲ್ಲ. 

 

ಆರಾಧ್ಯ,”ಹೇಳಿ…ಈಗ ಯಾಕೆ ಸುಮ್ಮನಾಗಿದೀರ? ನಾನ್ ಹೇಳಿದ್ದರಲ್ಲಿ ಯಾವ ತಪ್ಪು ಇಲ್ಲ ಅಲ್ವಾ? ಅದಕ್ಕೆ ಏನ್ ಹೇಳಬೇಕು ಅಂತ ಗೊತ್ತಾಗದೆ ಇದೀರಾ…” ಎಂದವಳು,”ಯಾಕ್ ಹೀಗ್ ಮಾಡ್ತಾ ಇದೀರಾ? ಮಾತಾಡಿ…ನಿಮ್ಮ ಮನಸಲ್ಲಿ ಏನಿದೆ ಅಂತ ಆದರೂ ಸರಿಯಾಗಿ ಹೇಳಿ…ಈಗಲೂ ಮದುವೆ ಇಷ್ಟ ಇಲ್ಲ ಅಂತ ನಿಮ್ಮ ಬಾಯಲ್ಲಿ ಬರ್ತಾ ಇಲ್ಲ…ಹಾಗಿದ್ದ ಮೇಲೆ ನನ್ನ ಜೊತೆ ಯಾಕ್ ಅಷ್ಟು ಕ್ಲೋಸ್ ಆಗಿ ನಡೆದುಕೊಂಡಿರಿ? ನನ್ನ ಭಾವನೆಗಳ ಜೊತೆ ಆಟ ಆಡೋದನ್ನ ಈಗಲಾದರೂ ಬಿಡಿ…” ಎಂದವಳು ಕೊನೆಯಲ್ಲಿ ಅಳತೊಡಗಿದಳು. 

 

ವಿಖ್ಯಾತ್ ಅವಳು ಅಳುವ ಶಬ್ದ ಕೇಳಿದವನು,”ರಾಧ್ಯ…” ಎಂದು ಕರೆಯುತ್ತಿದ್ದಂತೆ ಅವಳು,”ಪ್ಲೀಸ್ ಹಾಗ್ ಕರೀಬೇಡಿ ನನ್ನ…ನಿಮ್ಮ ಬಾಯಲ್ಲಿ ನನ್ನ ಹೆಸರನ್ನ ಹಾಗೆ ಕೇಳಿದರೆ ನನ್ನ ಮನಸು ಇನ್ನಷ್ಟು ನೀವೇ ಬೇಕು ಅಂತ ಹಠ ಮಾಡತ್ತೆ…” ಎಂದವಳು ಅಳುತ್ತಿದ್ದರೆ ಅವನಿಗೆ ಅವಳ ಅಳುವನ್ನು ಸಹಿಸಲು ಸಾಧ್ಯವಾಗಲಿಲ್ಲ. 

 

ವಿಖ್ಯಾತ್,”ರಾಧ್ಯಾ ಪ್ಲೀಸ್ ಅಳಬೇಡ…ನೀನು ಅಳುತ್ತಾ ಇದ್ದರೆ ನನ್ನಿಂದ ಸಹಿಸೋಕೆ ಆಗಲ್ಲ…” ಎಂದು ಹೇಳಿದ್ರೆ ಅವಳು,”ನಾನ್ ಅಳ್ತಾ ಇರೋದಕ್ಕೆ ನೀವೇ ಕಾರಣ…” ಎಂದವಳು ಒಂದೆರಡು ಕ್ಷಣ ಮೌನವಾಗಿದ್ದಳು. 

 

ಆರಾಧ್ಯ,”ಪ್ಲೀಸ್ ನನಗೆ ಪದೇ ಪದೇ ಕಾಲ್ ಮಾಡಿ ತೊಂದರೆ ಕೊಡಬೇಡಿ…ನಮ್ಮ ಮಧ್ಯೆ ಇರೋದೆಲ್ಲ ಮುಗಿದುಹೋಗಿದೆ…ಮತ್ತೆ ಯಾವತ್ತೂ ಮೊದಲಿನ ತರ ಆಗೋಕೆ ಸಾಧ್ಯ ಇಲ್ಲ…” ಎಂದವಳು ಅವನ ಮುಂದಿನ ಮಾತಿಗೂ ಕಾಯದೆ ಕರೆ ಕತ್ತರಿಸಿದ್ದಳು. 

 

“ಐ ಹೇಟ್ ಯು ವಿಖ್ಯಾತ್…ನೀವು ನಿಜಕ್ಕೂ ತುಂಬ ಕೆಟ್ಟವರು…ಈಗಲೂ ನೀವು ಸಮಜಾಯಿಷಿ ಕೊಡುತ್ತಾ ಇದೀರಾ ಹೊರತು ನಿಮ್ಮ ತಪ್ಪನ್ನು ಹೇಳುತ್ತ ಇಲ್ಲ…ನಾನೇ ಹುಚ್ಚಿ ನಿಮ್ಮ ಪ್ರೀತಿಯನ್ನು ನಿಜ ಅಂತ ತಿಳಿದು ನಿಮ್ಮನ್ನ ನಿಜವಾಗಿ ಪ್ರೀತಿಸಿಬಿಟ್ಟೆ…” ಎಂದವಳು ಅಳುತ್ತಲೇ ನಿದ್ದೆ ಹೋಗಿದ್ದಳು. 

 

💙💙💙💙💙💙💙

 

ಅವಳ ತಾಯಿ ವಸುಂಧರಾ ಅವರು ಮಗಳು ಇನ್ನೂ ಹೊರಗೆ ಬರದೆ ಇರುವುದನ್ನು ಗಮನಿಸಿದವರು ಅನ್ವಿತಾ ಬಳಿ ಕೇಳಿದ್ದರು. 

“ಅನು ಆಧ್ಯಾ ಎಲ್ಲೇ? ಇನ್ನು ಏನ್ ಮಾಡ್ತಾ ಇದಾಳೆ ಅವಳು?” ಎಂದು ಹೇಳಿದರೆ ಅನ್ವಿತಾ,”ನಾನು ಆಗಲೇ ಅವಳನ್ನು ಕರೆಯೋಕೆ ಹೋಗಿದ್ದೆ ಅಮ್ಮ…ಯಾಕೋ ಹಸಿವಿಲ್ಲ ಅಂತ ಹೇಳಿದಳು…ನೀನೇ ಕರಿ ಒಂದ್ಸಲ…” ಎಂದವಳು ಊಟಕ್ಕೆ ಕುಳಿತಿದ್ದಳು. 

 

ವಸುಂಧರಾ ಅವರು ಆರಾಧ್ಯ ಕೋಣೆಯ ಬಾಗಿಲು ತಟ್ಟಿದವರು ಆಧ್ಯಾ…ಮಗಳೇ ಎಂದು ಕರೆಯಲು ಅವಳು ನಿದ್ದೆಯಿಂದ ಎದ್ದವಳು ಬಾಗಿಲು ತೆರೆದಿದ್ದಳು. 

 

ಅವಳ ಮುಖ ನೋಡಿದರೆ ಅತ್ತ ಕುರುಹು ಕಾಣಿಸುತ್ತಿತ್ತು. ಮಗಳ ಮುಖ ಸವರಿದವರು,”ಏನಾಯ್ತೋ ಮಗನೇ…ಯಾಕ್ ಮುಖ ಹೀಗಾಗಿದೆ…ಅಳ್ತಾ ಇದ್ಯ?” ಎಂದು ಕೇಳಿದರೆ ಅವಳು,”ಇಲ್ಲ ಅಮ್ಮ… ಸುಸ್ತಾಗಿ ಮಲಗಿದ್ದೆ ಅಷ್ಟೇ…” ಎಂದವಳು,”ನಡಿ…ಊಟಕ್ಕೆ ಹೋಗೋಣ…ಹಸಿವಾಗುತ್ತಾ ಇದೆ…” ಎಂದು ವಿಷಯವನ್ನು ಬೇರೆಡೆ ತಿರುಗಿಸಿದ್ದಳು. 

 

ಅವರು ಮತ್ತೇನು ಕೇಳಲು ಹೋಗದೆ ಅವಳ ಜೊತೆ ನಡೆದಿದ್ದರು.

 

💙💙💙💙💙💙💙

 

ಮರುದಿನ ತಿಂಡಿಯ ಸಮಯದಲ್ಲಿ ಆರಾಧ್ಯ ತಂದೆ ಪ್ರಸಾದ್ ವರ್ಮಾ ಅವರು ವಿಖ್ಯಾತ್ ಹಾಗೂ ಅನ್ವಿತಾ ನಿಶ್ಚಿತಾರ್ಥದ ಬಗ್ಗೆ ಮಾತನಾಡುತ್ತಾ ಇದ್ದರು. 

“ಶ್ರೀನಿವಾಸ ಅವರ ಜೊತೆ ಆದಷ್ಟು ಬೇಗ ಮಾತಾಡುವುದು ಒಳ್ಳೆಯದು… ಎಲ್ಲರಿಗೂ ವಿಷಯ ಗೊತ್ತಾದ ಮೇಲೆ ಮತ್ತೆ ತಡ ಮಾಡುವುದರಲ್ಲಿ ಅರ್ಥ ಇಲ್ಲ…ಬೇಗ ನಿಶ್ಚಿತಾರ್ಥಕ್ಕೆ ಒಳ್ಳೆಯ ದಿನ ಗೊತ್ತು ಮಾಡಲು ಹೇಳಬೇಕು…” ಎಂದರೆ 

 

ವಸುಂಧರಾ ಅವರು,”ಹೌದು…ನೀವು ಹೇಳುತ್ತಾ ಇರುವುದು ಸರಿಯಾಗಿಯೇ ಇದೆ…ನಾನು ಇವತ್ತೇ ಕಲ್ಯಾಣಿ ಜೊತೆ ಮಾತಾಡುತ್ತೀನಿ…” ಎಂದರೆ ಅನ್ವಿತಾ ಮುಖದಲ್ಲಿ ನಾಚಿಕೆಯ ನಗು ಮೂಡಿತ್ತು. 

 

ಆರಾಧ್ಯ ಅವರ ಮಾತುಗಳನ್ನು ಕೇಳುತ್ತಿದ್ದವಳು ಜಾರಿದ ಕಣ್ಣೀರನ್ನು ಯಾರಿಗೂ ಕಾಣದಂತೆ ತೊಡೆದುಕೊಂಡಿದ್ದಳು. ಮನಸ್ಸು ಭಾರವಾದಂತೆ ಅನಿಸತೊಡಗಿತ್ತು. ಒಂದೆರಡು ತುತ್ತು ತಿಂದವಳು,”ನಾನು ಹೊರಡುತ್ತೇನೆ ಅಮ್ಮ…ಕಾಲೇಜಿಗೆ ಲೇಟ್ ಆಗ್ತಾ ಇದೆ…” ಎಂದವಳು ತನ್ನ ಕೋಣೆಗೆ ಓಡಿದ್ದಳು. 

 

ತನ್ನ ಕೋಣೆಗೆ ಹೋದವಳು ಮುಖ ಮುಚ್ಚಿ ಅಳತೊಡಗಿದಳು. ವಿಖ್ಯಾತ್ ಇನ್ನು ಮುಂದೆ ತನ್ನ ಅಕ್ಕನ ಗಂಡ ಎಂದು ಯೋಚಿಸಿದವಳ ಮನ ಇನ್ನಷ್ಟು ರೋಧಿಸಿತ್ತು. 

ಅಳುತ್ತಿದ್ದವಳು,”ಅವನಿಗೇ ಇಲ್ಲದ ಬೇಸರ ನಿನಗ್ಯಾಕೆ? ಅವನೇ ಆರಾಮಾಗಿ ಇದ್ದ ಮೇಲೆ ನೀನ್ಯಾಕೆ ಅಳುತ್ತ ಇದೀಯ?” ಎಂದು ತನ್ನಲ್ಲೇ ಪ್ರಶ್ನಿಸಿಕೊಂಡಿದ್ದಳು. 

 

ಬಾತ್ರೂಮಿಗೆ ಹೋಗಿ ಮುಖಕ್ಕೆ ನೀರು ಎರಚಿಕೊಂಡವಳು ನಿಲ್ಲದೇ ಹರಿಯುತ್ತಿದ್ದ ಕಣ್ಣೀರನ್ನು ತಡೆಯುವ ಪ್ರಯತ್ನ ಮಾಡಿದ್ದಳು. 

 

ಅವಳು ಎಷ್ಟೇ ಸಮಾಧಾನ ಮಾಡಿಕೊಳ್ಳಲು ಪ್ರಯತ್ನಿಸಿದರೂ ಅವಳ ನೋವು ಕಡಿಮೆಯಾಗುತ್ತಿಲ್ಲ. ಅವನು ಇನ್ನು ತನ್ನವನಲ್ಲ ಎನ್ನುವ ಯೋಚನೆಯೇ ಅವಳನ್ನು ಇನ್ನಷ್ಟು ದುಃಖಕ್ಕೆ ತಳ್ಳಿತ್ತು. 

 

ನಿಮಿಷಗಳ ನಂತರ ಸಹಜ ಸ್ಥಿತಿಗೆ ಬಂದವಳು ಮನಸನ್ನು ಗಟ್ಟಿ ಮಾಡಿಕೊಳ್ಳಲು ಪ್ರಯತ್ನಿಸಿದ್ದಳು. ಕನ್ನಡಿಯಲ್ಲಿ ನೋಡಿಕೊಂಡವಳ ಮುಖ ಬಾಡಿದ ಹೂವಿನಂತೆ ಕಂಡಿತ್ತು. ಅತ್ತ ಕುರುಹು ಕಾಣದಂತೆ ಮೇಕಪ್ ಮಾಡಿಕೊಂಡು ಏನೂ ಆಗೇ ಇಲ್ಲವೆಂಬಂತೆ ಕಾಲೇಜ್ ಬ್ಯಾಗ್ ತೆಗೆದುಕೊಂಡು ಬಂದಿದ್ದಳು. 

 

ಅವಳು ಬರುವುದನ್ನು ನೋಡಿ ಅನ್ವಿತಾ,”ಆಗಲೇ ಅಷ್ಟು ಅರ್ಜೆಂಟ್ ಅಲ್ಲಿ ಹೋಗಿದ್ದು ನೋಡಿ ಪಾಪ ಕಾಲೇಜಿಗೆ ಲೇಟ್ ಆಗಿರಬಹುದು ಅಂತ ಅಂದುಕೊಂಡೆ ಕಣೇ…ನೀನು ನೋಡಿದರೆ ಆರಾಮಾಗಿ ಬರ್ತಾ ಇದೀಯ… ಏನಾಯ್ತು?” ಎಂದು ಕೇಳಲು ಅವಳು,”ಏನಿಲ್ಲ ಅಕ್ಕ…ಪ್ರಾಕ್ಟಿಕಲ್ ನೋಟ್ಸ್ ಕಾಣುತ್ತಾ ಇರಲಿಲ್ಲ…ಅದನ್ನೇ ಹುಡುಕುತ್ತಾ ಟೈಮ್ ಆಗೋಯ್ತು…” ಎಂದವಳು,”ಸರಿ ಈಗ ನಿಜವಾಗ್ಲೂ ಟೈಮ್ ಆಯ್ತು ಹೊರಡ್ತೀನಿ… ಬಾಯ್ ಅಕ್ಕ…” ಎಂದವಳು ತಂದೆ ತಾಯಿಗೆ ತಿಳಿಸಿ ಕಾಲೇಜಿಗೆ ಹೊರಟಿದ್ದಳು. 

 

ಮುಂದುವರೆಯುವುದು…

 

ಕಥೆ ಹೇಗೆ ಬರುತ್ತಿದೆ ಎಂದು ನಿಮ್ಮ ಅಭಿಪ್ರಾಯ ತಿಳಿಸಲು ಮರೆಯಬೇಡಿ.

 

ನಿಮ್ಮ ಪ್ರೋತ್ಸಾಹ ಹಾಗೂ ಚಂದದ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ…