New Katha Varnika is now on Google Play — read original stories on your phone. Learn more
ಪ್ರೀತಿಯೇ ನಿನ್ನ… – 2

ಪ್ರೀತಿಯೇ ನಿನ್ನ… – 2

ಅಭಿಜ್ಞಾ ಮುಖ ಗಂಟಿಕ್ಕಿಕೊಂಡು ಮನೆಯೊಳಗೆ ಹೆಜ್ಜೆ ಇಟ್ಟಳು. ಅವಳ ಮುಖದಲ್ಲಿದ್ದ ಕೋಪವನ್ನು ನೋಡಿದ ಭುವನೇಶ್ವರಿ ಏನಾಯ್ತು ಅಭಿ? ಮುಖ ಯಾಕೆ ಹೀಗಿದೆ? ನಾನು ಹೇಳಿದ ಸಾಮಾನುಗಳನ್ನೆಲ್ಲ ತಂದ್ಯಾ?” ಎಂದು ಅಡುಗೆಮನೆಯಿಂದಲೇ ಕೇಳಿದರು.

“ಅಮ್ಮಾ… ಇನ್ನೊಮ್ಮೆ ನನ್ನನ್ನು ಸಾಮಾನು ತರೋದಕ್ಕೆ ಕಳಿಸಬೇಡ. ಒಳ್ಳೆ  ಯಾವುದೋ ಮೆಂಟಲ್ ಸಹವಾಸ ಬೇರೆ ಸುಮ್ಮನೆ ಬಂದು ತಲೆ ತಿಂತವೆ. ಅವರ ಜೊತೆ ವಾದ ಮಾಡೋಕೆ ಹೋಗಿ ಸಾಕಾಗಿದೆ” ಎಂದು ಸೋಫಾದ ಮೇಲೆ ಕುಸಿದು ಕುಳಿತಳು.

ಅಷ್ಟರಲ್ಲಿ ಅಲ್ಲಿಗೆ ಬಂದ ಅವಳ ಅಣ್ಣ ಅಭಿಷೇಕ್,

“ಎಲ್ಲರ ತಲೆ ತಿನ್ನುವ ನಿನ್ನ ತಲೆಯನ್ನೇ ತಿಂದ ಜಾಣ ಯಾರು?” ಎಂದು ರೇಗಿಸಿದ.

“ಅಣ್ಣಾ… ನೀನು ಸ್ವಲ್ಪ ಸುಮ್ಮನಿರು. ಎಲ್ಲರಿಗೂ ನನ್ನ ಮೇಲೆ ಕಣ್ಣೇ! ನೀನೇ ಹೇಳು, ನಾನು ನೋಡೋಕೆ ಚೆನ್ನಾಗಿಲ್ವಾ?” ಎಂದು ಮುಗ್ಧವಾಗಿ ಮುಖ ಮಾಡಿಕೊಂಡು ಕೇಳಿದಳು.

“ಯಾರು ಹೇಳಿದ್ದು ನನ್ನ ತಂಗಿ ಚೆನ್ನಾಗಿಲ್ಲ ಅಂತ? ಅವರ ಕಣ್ಣು ಸರಿಯಾಗಿದೆ ಅಂತ ಆಯ್ತು. ನಿಜ ಹೇಳೋ ಅಷ್ಟು ಧೈರ್ಯ ಮಾಡಿದ್ದಾರೆ ಮೆಚ್ಚಬೇಕು ಅವರನ್ನು. ಎಂದು ಅಭಿಷೇಕ್ ನಕ್ಕ.

“ಅಣ್ಣಾ!” ನೀನು ನನ್ನ ಪರ ಅನ್ಕೊಂಡಿದ್ದೆ. ಹೋಗು ಈ ಬಾರಿ ನಾನು ರಾಖಿ ಕಟ್ಟಲ್ಲ. ನಿನಗೆ ನಿನ್ನ ತಂಗಿ ಮೇಲೆ ಪ್ರೀತಿನೇ ಇಲ್ಲ ಎಂದು ಮೂತಿ ಉಬ್ಬಿಸಿದಳು.

ಅದೆಷ್ಟು ಡ್ರಾಮಾ ಮಾಡ್ತೀಯಾ ಅಭಿ. ಡ್ರಾಮಾ ಕ್ವೀನ್ ನೀನು. ಈ ಕಾಫಿ ಕುಡಿದು ಏಳು ಮೇಲಿನ ರೂಮ್ ಕ್ಲೀನ್ ಮಾಡಿ ಬರಬೇಕು. ನಾಳೆ ಗೆಸ್ಟ್ ಬರ್ತಾರೆ. ನನಗೆ ಹೆಲ್ಪ್ ಮಾಡು ಎನ್ನುತ್ತಾ ಕಾಫಿ ಕೊಟ್ಟರು ಭುವನೇಶ್ವರಿ.

ಅಯ್ಯೋ ಹೋಗಮ್ಮ, ಈಗ ತಾನೇ ಸುಸ್ತಾಗಿ ಬಂದಿದ್ದೀನಿ. ಗೆಸ್ಟ್ಗೇನು ಬರ್ತಾನೆ ಇರ್ತಾರೆ. ಸುಮ್ಮನೆ ನಮ್ಮನ್ನು ರೋಸ್ಟ್ ಮಾಡೋದಕ್ಕೆ. ಅವರು ಇಲ್ಲೇ ಇರೋದಕ್ಕೆ ತಾನೇ ಬರ್ತಾ ಇರೋದು ಅವರೇ ಕ್ಲೀನ್ ಮಾಡಿಕೊಳ್ಳುತ್ತಾರೆ ಬಿಡು.

ಹೇ ತರಲೆ ಅದು ಎಷ್ಟು ಮಾತಾಡ್ತಿಯಾ. ಅಮ್ಮನಿಗೆ ಸಹಾಯ ಮಾಡೋದಕ್ಕೆ ಕಷ್ಟನಾ ನಿನಗೆ.

ಅಯ್ಯೋ ಹೋಗಣ್ಣ, ನೀನೆ ಹೋಗಿ ಮಾಡು ನನಗೆ ಸುಸ್ತು ನಾಳೆಯಿಂದ ಮತ್ತೆ ಕಾಲೇಜ್ಗೆ ಹೋಗಬೇಕು ಎಷ್ಟು ಬೇಗ ರಜಾ ಮುಗಿದು ಹೋಯ್ತು. ಇವತ್ತು ಒಂದು ದಿನ ಆದರೂ ಆರಾಮಾಗಿ ಇರ್ತೀನಿ.

“ಆಯ್ತು ಬಿಡು. ನಾನು ಅಮ್ಮನಿಗೆ ಸಹಾಯ ಮಾಡ್ತೀನಿ. ಈಗ ಹೇಳು, ಸೂಪರ್ ಮಾರ್ಕೆಟ್‌ನಲ್ಲಿ ಏನಾಯ್ತು? ಯಾರ ಜೊತೆ ಜಗಳ ಮಾಡಿಕೊಂಡು ಬಂದೆ?”

“ನಾನೇನು ಜಗಳ ಮಾಡಿಕೊಂಡಿಲ್ಲ. ಒಬ್ಬ ಆಸಾಮಿ ಇದ್ದ. ಕಣ್ಣು ಮುಂದೆ ಏನಿದೆ ಅಂತ ನೋಡದೆ ಬಂದು ಡಿಕ್ಕಿ ಹೊಡೆದು, ಕೊನೆಗೆ ತಪ್ಪೆಲ್ಲ ನನ್ನದೇ ಅನ್ನೋ ಹಾಗೆ ಮಾತನಾಡುತ್ತಿದ್ದ.” 

“ಹೌದಾ? ಹಾಗಾದರೆ ಆ ಆಸಾಮಿಯ ದಿನ ಚೆನ್ನಾಗಿರಲಿಲ್ಲ ಬಿಡು. ನನ್ನ ತಂಗಿಯ ಕೋಪಕ್ಕೆ ಸಿಕ್ಕಿದ್ದಾನೆ.”

“ಅದಕ್ಕಿಂತ ಹೆಚ್ಚಾಗಿ ಅವನ ಬಾಯಿಗೆ ಬ್ರೇಕ್ ಅನ್ನೋದೇ ಇಲ್ಲ. ಮಾತಿಗೆ ಮಾತು ಕೊಡ್ತಿದ್ದ.”

“ಹಾಗಾದರೆ ನೀನೂ ಕಡಿಮೆ ಮಾಡಿರಲಿಕ್ಕಿಲ್ಲ ಬಿಡು” ಎಂದ ಅಭಿಷೇಕ್.

ಅಭಿಜ್ಞಾ ಅವನತ್ತ ಕಣ್ಣು ಕೆಕ್ಕರಿಸಿದಳು.

“ನಿನಗೆ ನನ್ನ ಕಷ್ಟ ಅರ್ಥ ಆಗಲ್ಲ ಬಿಡು.”

“ನೋಡಮ್ಮಾ, ನಿನ್ನ ಮಗಳು ಸೂಪರ್ ಮಾರ್ಕೆಟ್‌ನಿಂದ ಬಂದಿದ್ದಾಳೋ ಅಥವಾ ಯುದ್ಧಭೂಮಿಯಿಂದ ಬಂದಿದ್ದಾಳೋ ಗೊತ್ತಾಗುತ್ತಿಲ್ಲ” ಎಂದು ಅಭಿಷೇಕ್ ಮತ್ತೆ ಕಾಲೆಳೆದ.

“ಅಣ್ಣಾ… ನಿನ್ನನ್ನು ಒಂದು ದಿನ ನೋಡಿಕೊಳ್ತೀನಿ!” ಎಂದು ಬೆರಳು ತೋರಿಸುತ್ತಾ ಅಭಿಜ್ಞಾ ತನ್ನ ಕೋಣೆಯತ್ತ ನಡೆದಳು.

ಅವಳ ಮಾತಿಗೆ ಅಭಿಷೇಕ್ ಜೋರಾಗಿ ನಕ್ಕ.

ನೋಡಿಕೊಳ್ಳುವಂತೆ ಹೋಗಿ ನಾಳೆಗೆ ಏನು ಬೇಕೋ ಅದನ್ನು ತಯಾರಿ ಮಾಡ್ಕೋ. ನಾಳೆ ಅದಿಲ್ಲ ಇದಿಲ್ಲ ಎಂದರೆ. ನಾನು ಆಗ ಏನು ತಂದು ಕೊಡೋದಿಲ್ಲ. ನಾಳೆ ಬೇಗ ಆಫಿಸ್ಗೆ ಹೋಗಬೇಕು.

ಸರಿ ಬಿಡು ಆಯ್ತು ನನ್ನ ಕೆಲಸ ನಾನು ಮಾಡಿಕೊಳ್ಳುತ್ತೇನೆ. ನಾಳೆ ಬರೋ ಗೆಸ್ಟ್ಗೆ ಬೇರೆ ಎಲ್ಲೂ ಜಾಗ ಇಲ್ವಾ, ಇಷ್ಟು ದೊಡ್ಡ ಬೆಂಗಳೂರಲ್ಲಿ,  ಅದು ಯಾಕೆ ಇಲ್ಲಿಗೆ ಬರ್ತಿರೋದು.

ಹೇ ಅವರು ಅಪ್ಪನ ಫ್ರೆಂಡ್ ಕಡೆಯವರಂತೆ, ಅಪ್ಪನ ಮುಂದೆ ಈಗೆಲ್ಲ ಮಾತಾಡಬೇಡ. ಆಮೇಲೆ ಅಪ್ಪ ಕೋಪ ಮಾಡಿಕೊಳ್ಳುತ್ತಾರೆ.

ಅಯ್ಯೋ ಬಿಡು ನಮ್ಮ ಭದ್ರಪ್ಪನಿಗೆ ಕೋಪ ಬರೋದಕ್ಕೆ ಕಾರಣ ಬೇಕಾ, ಭದ್ರಕಾಳಿ ಯಾವಾಗಲೂ ಮೈ ಮೇಲೆ ಇರ್ತಾಳೆ. ಆದ್ರೆ ನಾನು ಇರೋದು ಗಂಡಸಿನ ಮೇಲೆ ಅನ್ನೋದು ಮರೆತುಹೋಗ್ತಾಳೆ ಅಷ್ಟೇ ಎಂದು ತನ್ನ ಮಾತಿಗೆ ತಾನೇ ನಕ್ಕಳು.

ಅವಳ ತಲೆಗೊಂದು ಮೋಟಕಿ ಹೋಗು ಇಲ್ಲಿಂದ ಅಪ್ಪ ಬಂದು ಕೇಳಿಸಿಕೊಂಡರೆ ಅಷ್ಟೇ ನಿನ್ನ ಕಥೆ. 

ಹೊರಗಡೆ ಇಂದ ಭದ್ರಪ್ಪ ಅವರು ಏನು ಮಾತಾಡ್ತಿದ್ದೀರಾ ನೀವಿಬ್ಬರೂ? ನಾನು ಏನು ಕೇಳಿಸಿಕೊಳ್ಳಬಾರದು ಎಂದರು ಗಂಭೀರವಾಗಿ.

ಹೇಳಲಾ,,, ಎನ್ನುವಂತೆ ಸನ್ನೆ ಮಾಡಿದ ಅಭಿಷೇಕ್.

ಬೇಡ ಎನ್ನುವಂತೆ ಕಣ್ಣಲ್ಲೇ ಸನ್ನೆ ಮಾಡಿ, ಅಪ್ಪನ ಬ್ಯಾಗ್ ಅನ್ನು ತೆಗೆದುಕೊಳ್ಳುತ್ತಾ, ಅಯ್ಯೋ ಏನಿಲ್ಲ ಅಪ್ಪ. ನಮ್ಮ ಅಪ್ಪನ ಹೆಸರು ಭದ್ರಪ್ಪ ಆದ್ರೂ ಎಷ್ಟು ಸ್ವೀಟ್ ಅವರು ಅಂತ ಹೇಳ್ತಿದ್ದೆ.

ಹಾಗಾದ್ರೆ ನೀನು ಇದಕ್ಕೆ ವಿರುದ್ಧವಾಗಿ ಏನೋ ಹೇಳಿರ್ತಿಯಾ ಬಿಡು. ನಿನ್ನ ಬಗ್ಗೆ ನನಗೆ ಗೊತ್ತಿಲ್ವಾ….

 ಎಂದ ತಕ್ಷಣ ಅಭಿಷೇಕ್ ಜೋರಾಗಿ ನಕ್ಕ.

ಅಪ್ಪ ನಿಮಗೆ ಮಗಳ ಮೇಲೆ ನಂಬಿಕೆನೆ ಇಲ್ಲ ಎಂದು ಮುದ್ದಾಗಿ ಮುಖ ಮಾಡಿ ಹೇಳಿದಳು.

 ಸಾಕು ಬೆಣ್ಣೆ ಹಚ್ಚಿದ್ದು ಹೋಗಿ ಕಾಫಿ ತಗೊಂಡು ಬಾ..

ಅಡುಗೆ ಮನೆಗೆ ಹೋದ ಅಭಿಜ್ಞಾ,  ಭುವನ ನಿನ್ನ ಗಂಡನಿಗೆ ಕಾಫಿ ಅಂತೆ ಕೊಡು.

ಅತಿ ಆಯ್ತು ನಿಂದು ನನ್ನ ಹೆಸರಿಡಿದು ಕರೆಯೋದಲ್ಲದೆ, ಗಂಡ ಅಂತ ಬೇರೆ ಹೇಳ್ತಿಯಾ ಇರು ನಿಮ್ಮ ಅಪ್ಪನ್ನ ಕರೀತೀನಿ ಅವರ ಮುಂದೇನೆ ಹೇಳು.

ಅಯ್ಯೋ ಒಂದು ಕಾಫಿ ಕೊಡೂದಕ್ಕೆ ಎಷ್ಟು ಮಾತಾಡ್ತೀಯಾ ನೀನು ಕೊಡು ನಾನೆ ಕೊಡ್ತೀನಿ. ಮೂತಿ ತಿರುವಿ ತೆಗೆದುಕೊಂಡು ಹೋದಳು.

ಕಾಫಿ ಕೊಟ್ಟು ಕೋಣೆ ಸೇರಿದಳು.

 

  ಮುಂದುವರೆಯುವುದು………

ಓದಿ ಅಭಿಪ್ರಾಯ ತಿಳಿಸಿ ಪ್ರೋತ್ಸಾಹಿಸಿ