ಪ್ರೀತಿಯ ಕಣ್ಣಾಮುಚ್ಚಾಲೆ ❤️ – 4
ಪ್ರೀತಿಯ ಕಣ್ಣಾಮುಚ್ಚಾಲೆ ❤️ – ೪
ಮಧ್ಯಾಹ್ನದ ವಿರಾಮ ಮುಗಿದ ನಂತರ ವಿದ್ಯಾರ್ಥಿಗಳೆಲ್ಲರೂ ಮತ್ತೆ ತರಗತಿಗಳಿಗೆ ಮರಳಿದರು. ನವೀನ್ ಕೂಡ ಹೊಸ ಕಾಲೇಜಿನ ವಾತಾವರಣಕ್ಕೆ ಹೊಂದಿಕೊಳ್ಳುವ ಪ್ರಯತ್ನದಲ್ಲಿದ್ದ. ಸಹೋದ್ಯೋಗಿಗಳ ಪರಿಚಯ, ವಿದ್ಯಾರ್ಥಿಗಳ ಜೊತೆಗಿನ ಮಾತುಕತೆ ಹೀಗೆ ದಿನದ ಉಳಿದ ಸಮಯ ಕಳೆಯಿತು.
ಸಂಜೆಯ ವೇಳೆಗೆ ತರಗತಿಗಳು ಮುಗಿದಿದ್ದವು. ಶುಭಾ ತನ್ನ ಪುಸ್ತಕಗಳನ್ನು ಬ್ಯಾಗ್ನಲ್ಲಿಟ್ಟುಕೊಂಡು ನೇರವಾಗಿ ಲೈಬ್ರರಿ ಅತ್ತ ಹೆಜ್ಜೆ ಹಾಕಿದಳು. ಹೋಗುವ ಮುನ್ನ ಒಂದೆರಡು ಪುಸ್ತಕಗಳನ್ನು ತೆಗೆದುಕೊಂಡು ಹೋಗುವ ಯೋಚನೆಯಿತ್ತು.
ಲೈಬ್ರರಿಯ ಒಳಗೆ ಹೋದವಳಿಗೆ ಪುಸ್ತಕಗಳ ರ್ಯಾಕ್ ನಡುವೆ ನಿಂತಿದ್ದ ನವೀನ್ ಕಾಣಿಸಿದ. ಅವನ ಕೈಯಲ್ಲಿ ಒಂದೆರಡು ಪುಸ್ತಕಗಳಿದ್ದವು. ಏನನ್ನೋ ಹುಡುಕುತ್ತಿದ್ದ ಅವನನ್ನು ಕಂಡು ಶುಭಾಳ ಮುಖದಲ್ಲಿ ನಗೆ ಮೂಡಿತು.
ಅವಳು ಅವನಿದ್ದ ಕಪಾಟಿನ ಬಳಿಗೆ ಹೋಗಿ,
“ಟೀ ಕುಡಿದ್ಯಾ?” ಎಂದು ಮೆಲ್ಲಗೆ ಕೇಳಿದಳು.
ನವೀನ್ ಅವಳತ್ತ ನೋಡಿದನಾದರೂ ಏನೂ ಮಾತನಾಡಲಿಲ್ಲ. ಮತ್ತೆ ಪುಸ್ತಕಗಳತ್ತ ಗಮನ ಹರಿಸಿದ.
ಶುಭಾ ಅವನ ಮುಖವನ್ನೇ ದಿಟ್ಟಿಸಿ, ನಂತರ ಸುತ್ತಲೂ ಕಣ್ಣಾಡಿಸಿ,
“ನವೀನ್… ಇಲ್ಲಿ ಯಾರೂ ಇಲ್ಲ. ಈಗ ಮಾತಾಡಬಹುದು. ಇನ್ನು ಸ್ವಲ್ಪ ಹೊತ್ತಲ್ಲಿ ಲೈಬ್ರರಿ ಕೂಡ ಕ್ಲೋಸ್ ಆಗುತ್ತೆ. ಇವತ್ತು ದಿನವೂ ಮುಗೀತು!” ಹೇಳಿದಳು.
ಆದರೂ ನವೀನ್ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಅವನು ತನಗೆ ಬೇಕಾದ ಪುಸ್ತಕವನ್ನು ತೆಗೆದುಕೊಂಡು ನೋಂದಣಿ ಮಾಡಿಸುವ ಕೌಂಟರ್ನತ್ತ ನಡೆದ.
“ಏನಿದು? ಮಾತೇ ಆಡ್ತಿಲ್ಲ!” ಎಂದು ಮನಸ್ಸಿನಲ್ಲೇ ಅಂದುಕೊಂಡ ಶುಭಾ ತಾನೂ ಒಂದು ಪುಸ್ತಕವನ್ನು ಆಯ್ಕೆ ಮಾಡಿಕೊಂಡು ರಿಜಿಸ್ಟರ್ ಮಾಡಿಸಿ ಹೊರಬಂದಳು.
ನವೀನ್ ಹೊರಗೆ ನಡೆದಿದ್ದ. ಶುಭಾ ವೇಗವಾಗಿ ಅವನನ್ನು ಹಿಂಬಾಲಿಸಿದಳು.
“ನವೀನ್!” ಎಂದು ಕರೆದಳು.
ಅವನು ತಿರುಗಿ ನೋಡಲಿಲ್ಲ. ಇನ್ನೂ ವೇಗವಾಗಿ ಅವನ ಪಕ್ಕಕ್ಕೆ ಹೋಗಿ ನಿಂತಳು.
“ಏನಾಯ್ತು ನಿನಗೆ? ಯಾಕೆ ಹೀಗೆ ವರ್ತಿಸ್ತಿದ್ದೀಯಾ?”
“ಏನಿಲ್ಲ.”
“ಏನಿಲ್ಲ ಅಂದ್ರೆ? ಸರಿಯಾಗಿ ಮಾತೇ ಆಡ್ತಿಲ್ಲ.”
“ನಿನಗೆ ನಿನ್ನ ಫ್ರೆಂಡ್ಸ್ ಇದ್ದಾರಲ್ಲಾ? ಅವರ ಜೊತೆ ಹೋಗು. ನನ್ನ ಬಗ್ಗೆ ಯೋಚನೆ ಮಾಡಬೇಡ” ಎಂದು ಗಂಭೀರವಾಗಿ ಹೇಳಿದ.
“ನವೀನ್…” ಎಂದು ಅವಳು ಮತ್ತೆ ಏನೋ ಹೇಳಲು ಮುಂದಾದಳು.
ಮುಂದೆ ಹೆಜ್ಜೆ ಹಾಕಿದವ ನಂತರ ಮತ್ತೆ ನಿಂತು ಅವಳತ್ತ ತಿರುಗಿ,
“ಈಗಲೇ ಮನೆಗೆ ಬರ್ತೀಯಾ ಅಂದ್ರೆ, ನನ್ನ ಜೊತೆ ಬರಬಹುದು. ಇಲ್ಲ, ನಿನ್ನ ಫ್ರೆಂಡ್ಸ್ ಜೊತೆ ಹೋಗಬೇಕು ಅಂದ್ರೆ ಹೋಗು. ನಿನ್ನಿಷ್ಟ!” ಎಂದ.
ಅವನ ಮಾತಿನಲ್ಲಿದ್ದ ಅಸಮಾಧಾನ ಶುಭಾಳಿಗೆ ಅರ್ಥವಾಗಿತ್ತು.
“ನಾನು ಬರ್ತೀನಿ. ನೀನು ಹೊರಗೆ ಹೋಗು. ಇಲ್ಲಿ ನಾವಿಬ್ಬರೂ ಒಟ್ಟಿಗೆ ಹೋಗೋದನ್ನು ಯಾರೂ ಗಮನಿಸೋದು ಬೇಡ”
ನವೀನ್ ಏನೂ ಮಾತನಾಡದೆ ಅಲ್ಲಿಂದ ಹೊರಟ.
ಶುಭಾ ಮತ್ತೆ ತನ್ನ ಕ್ಲಾಸ್ ಗೆ ಹೋದಳು.
“ಯಾವಾಗಲೂ ಹೀಗೇ! ತನಗೇನಾದರೂ ಬೇಸರವಾದರೆ ಅದನ್ನು ಹೇಳೋದೇ ಇಲ್ಲ. ನಾನೇ ಅರ್ಥ ಮಾಡಿಕೊಳ್ಳಬೇಕು. ಮೊದಲನೆಯದಾಗಿ ಏನೂ ಆಗಿರಲ್ಲ, ಆದರೂ ಇಷ್ಟೊಂದು ಕೋಪ ಮಾಡಿಕೊಳ್ಳುತ್ತಾನೆ. ಎಲ್ಲಾ ನನ್ನ ಹಣೆಬರಹ! ಪ್ರೀತಿ ಅಂದ್ಮೇಲೆ ಇದೆಲ್ಲಾ ಸಹಿಸಿಕೊಳ್ಳಲೇಬೇಕು ಅನ್ಸುತ್ತೆ!” ಗೊಣಗುತ್ತಾ, ಬ್ಯಾಗ್ ಹೆಗಲಿಗೇರಿಸಿಕೊಂಡು ಕಾಲೇಜಿನಿಂದ ಹೊರಬಂದಳು.
ಕಾಲೇಜಿನಿಂದ ಸ್ವಲ್ಪ ದೂರದಲ್ಲಿದ್ದ ಬಸ್ ಸ್ಟಾಪ್ ಬಳಿಯಲ್ಲಿ ನವೀನ್ನ ಕಾರು ನಿಂತಿತ್ತು. ಶುಭಾ ಅಲ್ಲಿಗೆ ಹೋಗಿ ಬಾಗಿಲು ತೆರೆದು ಒಳಗೆ ಕುಳಿತಳು. ನವೀನ್ ಕಾರು ಸ್ಟಾರ್ಟ್ ಮಾಡಿದ. ಆದರೆ ಇಬ್ಬರ ನಡುವೆ ಮಾತೇ ಇರಲಿಲ್ಲ.
ಸ್ವಲ್ಪ ಹೊತ್ತು ಮೌನವಾಗಿಯೇ ಕುಳಿತಿದ್ದ ಶುಭಾ ಕೊನೆಗೆ ತಾಳ್ಮೆ ಕಳೆದುಕೊಂಡು,
“ನವೀನ್, ಇನ್ನೆಷ್ಟು ಹೊತ್ತು ಹೀಗೇ ಇರ್ತೀಯಾ? ಏನಾದರೂ ಬೇಸರವಾಗಿದ್ದರೆ ಅದನ್ನು ಹೇಳಬೇಕು ತಾನೇ? ಸುಮ್ಮನೆ ಹೀಗೆ ಮುಖ ಗಂಟಿಕ್ಕಿಕೊಂಡು ಕುಳಿತರೆ ನನಗೇನು ಅರ್ಥವಾಗುತ್ತೆ?” ಎಂದಳು.
ನವೀನ್ ಮಾತ್ರ ರಸ್ತೆಯತ್ತ ದೃಷ್ಟಿ ನೆಟ್ಟಿದ್ದ. ಅವಳ ಮಾತಿಗೆ ಉತ್ತರಿಸಲಿಲ್ಲ.
“ನಾನು ಏನಾದರೂ ತಪ್ಪು ಮಾಡಿದ್ದರೆ ಹೇಳು. ಅದನ್ನು ಬಿಟ್ಟು ಹೀಗೆ ಸುಮ್ಮನೆ ಇದ್ದರೆ ಹೇಗೆ?” ಎಂದು ಮತ್ತೆ ಕೇಳಿದಳು.
ಅವನಿಂದ ಯಾವುದೇ ಉತ್ತರ ಬರಲಿಲ್ಲ.
“ಸರಿ ನವೀನ್, ನಿನಗೆ ಯಾವಾಗ ಮಾತಾಡಬೇಕು ಅನಿಸುತ್ತೋ ಅವತ್ತೇ ಬಂದು ಮಾತಾಡು. ಇನ್ನು ನಾನಂತೂ ನಿನ್ನ ಜೊತೆ ಮಾತಾಡಲ್ಲ!” ಎಂದು ಮುಖ ತಿರುಗಿಸಿ ಕಿಟಕಿಯ ಹೊರಗೆ ನೋಡಿದಳು.
ಕಾರಿನೊಳಗೆ ಮತ್ತೆ ಮೌನ ಆವರಿಸಿತು.
ಸ್ವಲ್ಪ ಸಮಯದ ನಂತರ ಕಾರು ಶುಭಾಳ ಮನೆಯ ಮುಂದೆ ಬಂದು ನಿಂತಿತು. ಅವಳು ಕೆಳಗಿಳಿದ ನಂತರ ನವೀನ್ನತ್ತ ತಿರುಗಿ,
“ಮನೆಗೆ ಬಂದು ಹೋಗು” ಎಂದಳು.
“ಬೇಡ, ಪರವಾಗಿಲ್ಲ. ಇನ್ನೊಂದು ದಿನ ಬರ್ತೀನಿ”
“ಅಯ್ಯೋ ನವೀನ್! ಈಗ ಹೊಸ ಡ್ರಾಮಾ ಶುರು ಮಾಡಬೇಡ. ಅಜ್ಜಿ ನಿನ್ನನ್ನು ನೋಡಿ ಎಷ್ಟು ಖುಷಿಪಡ್ತಾರೆ ಗೊತ್ತಾ? ಬಾ, ಒಳಗೆ ಬಂದು ಹೋಗು” ಎಂದು ಒತ್ತಾಯಿಸಿದಳು.
ಅವಳ ಮಾತಿಗೆ ನವೀನ್ ಏನೂ ಹೇಳಲಾಗಲಿಲ್ಲ. ಅವಳ ಜೊತೆ ಇನ್ನಷ್ಟು ಸಮಯ ಕಳೆಯಬೇಕೆಂಬ ಆಸೆಯನ್ನು ಹತ್ತಿಕ್ಕಲು ಸಾಧ್ಯವಾಗದೇ ಕಾರಿನಿಂದ ಕೆಳಗಿಳಿದ. ಇಬ್ಬರೂ ಮನೆಯೊಳಗೆ ಹೆಜ್ಜೆ ಹಾಕಿದರು.
ಶುಭಾ ಮೊದಲು ಮನೆಯೊಳಗೆ ಹೋದಳು. ಅವಳ ಹಿಂದೆಯೇ ನವೀನ್ ಕೂಡ ಒಳಗೆ ಬಂದ. ಅಡುಗೆಮನೆಯಲ್ಲಿದ್ದ ಸೀತಾ ಹೊರಗೆ ಬಂದು ನೋಡಿದಳು.
“ಅತ್ತೆ, ಹೇಗಿದ್ದೀರಾ?” ಎಂದು ನವೀನ್ ನಗುತ್ತಾ ಅವರನ್ನು ಕೇಳಿದ.
ಸೀತಾ ಒಂದು ಕ್ಷಣ ಅವನ ಮುಖವನ್ನೇ ನೋಡಿದರು. ಯಾರೆಂದು ನೆನಪಾಗದೆ ಸ್ವಲ್ಪ ಗೊಂದಲಕ್ಕೊಳಗಾದರು.
ಅಷ್ಟರಲ್ಲಿ ಒಳಗಿನಿಂದ ಬಂದ ಜಾನಕಮ್ಮ,
“ಅರೆ ನವೀನಾ! ಯಾವಾಗ ಬಂದೆ ಮಗಾ?” ಎಂದು ಪ್ರೀತಿಯಿಂದ ಮಾತನಾಡಿದರು.
“ಈಗಷ್ಟೇ ಅಜ್ಜಿ” ಎಂದ ನವೀನ್.
ಸೀತಾ ಜಾನಕಮ್ಮನತ್ತ ತಿರುಗಿ, “ಅತ್ತೆ, ಇವನು..” ಎನ್ನುವಷ್ಟರಲ್ಲಿ,
“ಸೀತಾ, ನಿನಗೆ ನೆನಪಿಲ್ವಾ? ನಮ್ಮ ಕೌಸಲ್ಯಳ ಮನೆಯ ಪಕ್ಕದ ಮನೆಯ ಹುಡುಗ ನವೀನ್. ನಾವು ಮದುವೆಗೆ ಹೋಗಿದ್ದಾಗ ಪರಿಚಯವಾಗಿದ್ದ ಅಲ್ವಾ. ಆಗ ನಮಗೆ ತುಂಬಾ ಸಹಾಯ ಮಾಡಿದ್ದನಲ್ಲಾ!” ಎಂದು ನೆನಪಿಸಿದರು.
“ಓಹ್! ಹೌದು ಹೌದು, ಈಗ ನೆನಪಾಯ್ತು. ಎಷ್ಟೋ ವರ್ಷಗಳಾಯ್ತಲ್ಲಾ, ಅದಕ್ಕೆ ಸರಿಯಾಗಿ ನೆನಪಾಗಲಿಲ್ಲ” ಎಂದು ಸೀತಾ ನಗುತ್ತಾ ಹೇಳಿದರು.
ಕೌಸಲ್ಯ ರಾಮಚಂದ್ರ ಅವರ ಅಕ್ಕ. ಅವರ ಪಕ್ಕದ ಮನೆಯ ಹುಡುಗನೇ ನವೀನ್. ಇವನ ಫ್ಯಾಮಿಲಿ ಬಗ್ಗೆ ಮುಂದೆ ಗೊತ್ತಾಗುತ್ತೆ.
😁
ನಂತರ ನವೀನ್ನತ್ತ ತಿರುಗಿ, “ಬಾ ನವೀನ್, ಬಾ… ಕುಳಿತುಕೋ” ಎಂದು ಆತ್ಮೀಯವಾಗಿ ಕರೆದಳು. ನವೀನ್ ಅಲ್ಲೇ ಇದ್ದ ಸೋಫಾದ ಮೇಲೆ ಕುಳಿತುಕೊಂಡ. ಶುಭಾ ಮಾತ್ರ ಕಾಣಲಿಲ್ಲ ಅವನಿಗೆ. ಅದೆಲ್ಲಿಗೆ ಹೋದಳು ಎಂದು ಅವನ ಕಣ್ಣು ಅವಳನ್ನೇ ಅರಸುತಲಿತ್ತು.
ಮುಂದುವರೆಯುವುದು..❤️
Swipe left/right or tap the sides to turn pages