New Katha Varnika is now on Google Play — read original stories on your phone. Learn more
ನನ್ನವಳು – 1

ನನ್ನವಳು – 1

ನನ್ನವಳು – ೧

” ಅಮ್ಮಾ !!!!! ” ಎಂದು ಜೋರಾಗಿ ಕೂಗುತ್ತಾ ಎದ್ದು ಕುಳಿತಿದ್ದಳು ಅದಿತಿ.
ಕೂಗು ಕೇಳಿದ ತಕ್ಷಣ ಅದಿತಿಯ ಅಪ್ಪ ಅಮ್ಮ ಓಡಿ ಬಂದಿದ್ದರು. ರಾತ್ರಿ 12.30.

” ಅದಿತಿ, ಏನಾಯ್ತಮ್ಮ..ಮತ್ತೆ ಏನಾದ್ರೂ ಕೆಟ್ಟ ಕನಸು ಬಿತ್ತಾ ?? ” ಎಂದು ಕಳವಳದಿಂದ ಕೇಳುತ್ತಾ ಅದಿತಿಯ ಅಮ್ಮ ಸುನಂದಾ ಮಗಳ ಹತ್ತಿರ ಬಂದು ಕುಳಿತರು.

ಅದಿತಿ ಎರಡೂ ಕಿವಿಗಳನ್ನು ಕೈಯಿಂದ ಮುಚ್ಚಿ ಗಟ್ಟಿಯಾಗಿ ಕಣ್ಣು ಮುಚ್ಚಿ ತಲೆ ಬಗ್ಗಿಸಿ ಕುಳಿತಿದ್ದಳು. ಮೈಯೆಲ್ಲಾ ಬೆವರಿತ್ತು.

” ಮಗಳೇ, ಹೆದರಬೇಡ ಕಣ್ ಬಿಡು.ನಾವ್ ಬಂದಿದೀವಿ. ನೋಡು ಇಲ್ಲೇ ಇದೀವಿ. ” ಎಂದು ಮಗಳ ತಲೆ ನೇವರಿಸಿದರು ಅಪ್ಪ ರಾಜೇಂದ್ರ.

ಅವಳು ನಿಧಾನವಾಗಿ ಕಣ್ಣು ತೆರೆದಿದ್ದಳು.
ಅಷ್ಟರಲ್ಲಿ ಕೆಲಸದ ರಂಗ ನೀರು ತಂದಿದ್ದ.

” ಚಿಕ್ಕಮ್ಮೋರಿಗೆ ಮತ್ತೆ ಅದೇ ಕನಸು ಬಿತ್ತು ಅನ್ಸುತ್ತೆ.. ತಗಳಿ ಅಮ್ಮ. ಸ್ವಲ್ಪ ನೀರ್ ಕುಡಿರಿ. ” ಎಂದು ನೀರಿನ ಲೋಟವನ್ನು ಅದಿತಿಯ ಮುಂದೆ ತಂದಿದ್ದ.

ನೀರಿನ ಲೋಟವನ್ನು ತೆಗೆದುಕೊಳ್ಳಲು ಕೈ ಮುಂದೆ ಮಾಡಲು ಪ್ರಯತ್ನಿಸಿದಳು. ಆದರೆ ಸಾಧ್ಯವಾಗಲಿಲ್ಲ. ಕೈ ನಡುಗುತ್ತಿತ್ತು.

ರಾಜೇಂದ್ರ ಹೆಂಡತಿಗೆ ಕಣ್ಸನ್ನೆ ಮಾಡಿದರು.
” ಇಲ್ ಕೊಡು ರಂಗ. ”
ಎಂದು ರಂಗನ ಕೈಯಲ್ಲಿರುವ ನೀರಿನ ಲೋಟವನ್ನು ಸುನಂದ ತಾನೇ ತೆಗೆದುಕೊಂಡು ಅದಿತಿಗೆ ನೀರನ್ನು ಕುಡಿಸಿದರು.

ಸ್ವಲ್ಪ ಹೊತ್ತು ಅವಳು ಏನು ಮಾತನಾಡಲಿಲ್ಲ.

” ಏನಾಯ್ತು ಅದಿತಿ. ಮತ್ತೇನಾದ್ರೂ ಅದೇ ಕನಸು.. ”  ಎಂದು ಸುನಂದ ಭಯದಿಂದ ಗಂಡನ ಮುಖ ನೋಡಿದರು ಸುನಂದ.

ಅವಳು ಏನು ಹೇಳಲಿಲ್ಲ. ಕೇವಲ ” ಹ್ಮ್ಮ್ ” ಎಂದು ತಡೆಯಲ್ಲಾಡಿಸಿದ್ದಳು.

” ಮಗಳೇ, ಹೆದರಬೇಡ. ನಾವೆಲ್ಲ ಇಲ್ಲೇ ಇದ್ದೀವಿ. ನಾನು ಹೇಳಿದ್ದೆ ಅಲ್ವಾ ಅಮ್ಮನ ಜೊತೆ ಮಲಗು ಅಂತ. ನೀನು ನಮ್ಮ ಮಾತನ್ನ ಕೇಳೋದೆ ಇಲ್ಲ. ನೋಡು ಈಗ ಹೇಗಾಯ್ತು.. ಇವತ್ತು ಸುನಂದ ನಿನ್ಜೊತೆನೆ ಮಲಗ್ತಾಳೆ. ” ಎಂದು ಮಗಳನ್ನು ಸಮಾಧಾನಿಸಿದ್ದರು ರಾಜೇಂದ್ರ.

ಅದಿತಿ ಸ್ವಲ್ಪ ಸಾವರಿಸಿಕೊಂಡಿದ್ದಳು.
” ಇಲ್ಲ ಅಪ್ಪ. ನೀವು ಹೋಗಿ. ನನಗೇನು ತೊಂದರೆ ಇಲ್ಲ ಈಗ. ಮತ್ತೇನಾದರೂ ಹೆದರಿಕೆ ಆದ್ರೆ ಖಂಡಿತ ಕರಿತೀನಿ. ಅಮ್ಮ ಇಲ್ಲೇ ಬಂದು ಮಲ್ಕೋಬಹುದು. ಆದ್ರೆ ಪ್ಲೀಸ್ ಈಗ ನೀವೆಲ್ಲ ಹೋಗಿ. ” ಎಂದಳು.

” ಅಲ್ಲಮ್ಮ ಅದಿತಿ… ” ಎಂದು ಏನೋ ಹೇಳಲು ಹೊರಟಾಗ,
ಅದಿತಿ ಅಪ್ಪನಿಗೆ ಪ್ಲೀಸ್ ಎಂದು ಬೇಡಿಕೊಳ್ಳುವ ಮುಖ ಮಾಡಿದ್ದಳು.

” ಸುನಂದಾ, ಇರ್ಲಿ ಬಿಡು. ಅವಳೇ ಹೇಳ್ತಿದಾಳಲ್ಲ.. ಗಂಟೆ ನೋಡು ಒಂದು ಗಂಟೆ ಆಗ್ತಾ ಬಂತು. ಈ ರಾತ್ರೀಲಿ ಮತ್ತೆ ಮಾತು ಮುಂದುವರೆಸೋದು ಬೇಡ. ”
ಎನ್ನುತ್ತಾ ಅವಳ ಭುಜದ ಮೇಲೆ ಕೈ ಇಟ್ಟು ನಡಿ ಎಂದಿದ್ದರು ರಾಜೇಂದ್ರ.

ಮಗಳನ್ನು ನೋಡಿ,
” ಅದಿತಿ, ಅಪ್ಪ ಅಮ್ಮಂಗೆ ನಿದ್ರೆ ಹಾಳಾಗುತ್ತೆ ಅಂತ ಎಬ್ಬಿಸದೆ ಇರಬೇಡ. ಹೆದ್ರಿಕೆ ಆದ್ರೆ ಫೋನ್ ಮಾಡು ಇಲ್ಲ, ಜೋರಾಗಿ ಕರಿ. ”  ಎಂದು ಮಗಳ ತಲೆ ನೇವರಿಸಿ ಹೊರಟಿದ್ದರು.

ಸುನಂದಾ ಮತ್ತು ರಂಗ ಇಬ್ಬರೂ ಅವರನ್ನು ಹಿಂಬಾಲಿಸಿದರು.

ಅದಿತಿ ಸುನಂದ ಮತ್ತು ರಾಜೇಂದ್ರ ಅವರ ಮಗಳು. ಮಗಳು ಒಬ್ಬಳೇ. ಒಬ್ಬ ಮಗ ಇದ್ದ. ಅದಿತಿಯ ಅಣ್ಣ ಮನೋಜ್.

ಇಪ್ಪತ್ನಾಲ್ಕು ವರ್ಷದ ಅದಿತಿ ಈಗಷ್ಟೇ ಓದು ಮುಗಿಸಿ ಕೆಲಸಕ್ಕೆ ಸೇರದ್ದಳು. ಅಣ್ಣ ತಂಗಿ ಇಬ್ಬರೂ ಒಂದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರು.

ಮನೆಯಲ್ಲಿ ಯಾವುದೇ ಕುಂದು ಕೊರತೆ ಇರಲಿಲ್ಲ. ಅದಿತಿ ಮತ್ತು ಮನೋಜ್ ಬಂಗಾರದ ಚಮಚವನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿರಲಿಲ್ಲ ಆದರೆ ಬೆಳ್ಳಿಯ ಚಮಚ ಇಟ್ಟುಕೊಂಡು ಹುಟ್ಟಿದ್ದರು ಎಂದರೆ ತಪ್ಪಾಗಲಾರದು. ಬೇಕಾದಷ್ಟು ಆಸ್ತಿ ಇತ್ತು. ಮನೋಜ್ ಕೂಡ ಒಳ್ಳೆಯ ಕೆಲಸದಲ್ಲೇ ಇದ್ದ.

ಅದಿತಿ ತುಂಬಾ ಚುರುಕು. ಆಫೀಸಿನ ಕೆಲಸದಲ್ಲಾದರೂ, ಮನೆ ಕೆಲಸದಲ್ಲಾದರೂ. ಚಿಕ್ಕವಳಿದ್ದಾಗಿಂದಲೂ ಆಟ, ಪಾಠ, ಅಡುಗೆ ಕಸೂತಿ, ನೃತ್ಯ, ಸಂಗೀತ ಎಲ್ಲದರಲ್ಲೂ ತುಂಬಾ ಆಸಕ್ತಿ ಹೊಂದಿದವಳಾಗಿದ್ದಳು. ಅತ್ಯುತ್ತಮವಲ್ಲದಿದ್ದರೂ ತಕ್ಕಮಟ್ಟಿಗೆ ಎಲ್ಲದರಲ್ಲೂ ಪರಿಣಿತಿ ಹೊಂದಿದ್ದಳು.

ಎಷ್ಟೋ ವಿಷಯದಲ್ಲಿ, ತಾಯಿ ಸುನಂದಾಗಿಂತ ಅದಿತಿಯೇ ಮುಂದಿದ್ದಳು. ಅಪ್ಪ ಅಮ್ಮನಿಗೆ ಮಗಳು ಎಂದರೆ ಹೆಮ್ಮೆ. ಅಣ್ಣ ಮನೋಜ್ಗು ಕೂಡ ಇವಳು ಮುದ್ದಿನ ತಂಗಿ.

ಆದರೆ ಅದೊಂದು ವಿಷಯ ಮಾತ್ರ.. ಎಲ್ಲರಿಗೂ ಚಿಂತೆ ಭಯ ಹುಟ್ಟಿಸುತ್ತಿತ್ತು…..
ಅವಳು ಕಾಣುವ ಆ ಸ್ವಪ್ನ. ಅದು ಕನಸೋ, ಸ್ವಪ್ನವೋ ದುಸ್ವಪ್ನವೋ..ಆದರೆ ‘ ಮರುಕಳಿಸುವ ಸ್ವಪ್ನ. ‘

ಇವತ್ತಿನ ಈ ದೃಶ್ಯ ಯಾರಿಗೂ ಹೊಸದೇನಾಗಿರಲಿಲ್ಲ. ಚಿಕ್ಕಂದಿನಿಂದಲೂ ಇದೇ ಕನಸು ಬೀಳುತ್ತಿತ್ತು. ಹೀಗೆಯೇ ತುಂಬಾ ಹೆದರಿಕೊಳ್ಳುತ್ತಿದ್ದಳು. ಹಾಗಂತ ದಿನಾಲು ಅವಳಿಗೆ ಕನಸು ಬೀಳುತ್ತಿರಲಿಲ್ಲ. ಆದರೆ ಆಗಾಗ ಈ  ಘಟನೆ ನಡೆಯುತ್ತಿತ್ತು.

ಮೊದಮೊದಲು ಅಮ್ಮನೊಂದಿಗೆ ಅಥವಾ ಅಣ್ಣನೊಂದಿಗೆ ಮಲಗುತ್ತಿದ್ದಳು. ಆದರೆ ದೊಡ್ಡವಳಾದ ಮೇಲೆ ಇನ್ನೂ ತಾನು ಅವರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಒಬ್ಬಳೇ ಮಲಗುವುದನ್ನು ರೂಢಿ ಮಾಡಿಕೊಂಡಿದ್ದಳು.
ಎಷ್ಟೋ ಬಾರಿ ತಾನೆ ಸಮಾಧಾನ ಮಾಡಿಕೊಂಡು ಮತ್ತೆ ಮಲಗಿದ ಉದಾಹರಣೆ ಇದೆ. ಆದರೂ ತುಂಬಾ ಗಾಬರಿಯಾದಾಗ ಅಪ್ಪ ಅಮ್ಮನ ಕೋಣೆಗೆ ನಡೆಯುತ್ತಿದ್ದಳು.

ಅಪ್ಪ ಅಮ್ಮನಿಗೂ ಅದಿತಿಯ ಬಗ್ಗೆ ಇದೊಂದೇ ಚಿಂತೆಯಾಗಿತ್ತು. ಆದರೆ ಅವರೇನು ಮಾಡಿಯಾರು. ಇದು ಯಾರ ಕೈಯಲ್ಲೂ ಇರಲಿಲ್ಲ.

ಅದಿತಿ ಸ್ವಲ್ಪ ಹೊತ್ತು ಯೋಚಿಸುತ್ತಾ ಮಲಗಿದ್ದಳು. ಲೈಟ್ ಆರಿಸಿರಲಿಲ್ಲ. ಅದೊಂದಿದ್ದರೆ ಸ್ವಲ್ಪ ಸಮಾಧಾನ ಎಂದು. ಆದರೆ ಅವಳ ಕನಸಿಗೂ ಲೈಟ್ ಗು ಯಾವುದೇ ಸಂಬಂಧವಿರಲಿಲ್ಲ.

‘ ಛೆ !!! ಇದೆಂಥ ಶಿಕ್ಷೆ ನಂಗೆ. ಯಾಕೆ ಈ ತರ ಆಗುತ್ತೆ. ಸುಮ್ನೆ ಅಪ್ಪ ಅಮ್ಮಂಗೂ ತೊಂದ್ರೆ ಕೊಟ್ಟೆ. ಅವರೆಷ್ಟು ಬೇಜಾರ್ ಮಾಡಿಕೊಂಡಿರುತ್ತಾರೆ ನಂಗೆ ಹೀಗಾಯ್ತು ಅಂತ. ಜೋರಾಗಿ ಕೂಗಬಾರದು ಅನ್ಕೊಂಡ್ರೂ ಅದು ನನ್ ಕೈಲಿ ಇಲ್ಲ. ‘ ಎಂದು ಅಂದುಕೊಳ್ಳುತ್ತಾ ನಿದ್ರೆಗೆ ಜಾರಿದ್ದಳು ಅವಳು.

—————————-🌱—————————-

ಮರುದಿನ ಬೆಳಗ್ಗೆ ಎಂಟು ಗಂಟೆ. ರಾಜೇಂದ್ರ ತಿಂಡಿ ತಿಂದು ಟೀ ಕುಡಿಯುತ್ತಾ ಪೇಪರ್ ಓದುತ್ತಾ ಕುಳಿತಿದ್ದರು.
ಸುನಂದ ಅಡುಗೆ ಮನೆಯ ಕೆಲಸದಲ್ಲಿ ನಿರತರಾಗಿದ್ದರು.
ಆಫೀಸ್ಗೆ ಹೊರಟ ಮನೋಜ್ ತಿಂಡಿ ತಿನ್ನಲೆಂದು ರೆಡಿಯಾಗಿ ಡೈನಿಂಗ್ ಟೇಬಲ್ ಗೆ ಬಂದು ಕೂತಿದ್ದ.

” ಏನಿದು ಮನೆ ಇಷ್ಟು ಶಾಂತವಾಗಿದೆ. ಎಲ್ಲಿ ನಮ್ಮ ರಾಜಕುಮಾರಿ. ಇನ್ನೂ ಎದ್ದಿಲ್ವಾ.. ಏನು ಇವತ್ತು ಆಫೀಸಿಗೆ ಹೋಗಲ್ವಂತ ಹೇಗೆ.. ” ಎಂದಿದ್ದ ಮನೋಜ್.

ಮನೋಜ್ ಅದಿತಿಗೆ ಪ್ರೀತಿಯಿಂದ ರಾಜಕುಮಾರಿ ಎಂದು ಕರೆಯುತ್ತಿದ್ದ. ಅವನಿಗೆ ತಂಗಿ ಎಂದರೆ ಅಪಾರ ಪ್ರೀತಿ. ಅದಿತಿ ಈ ಮನೆಯ ಬೆಳಕು.ಈ ಮನೆಯ ರಾಜಕುಮಾರಿ ಎಂದು ಯಾವಾಗಲೂ ಹೇಳುತ್ತಿದ್ದ. ಅವಳಿಗಿಂತ ಕೇವಲ ನಾಲ್ಕು ವರ್ಷ ದೊಡ್ಡವನಾಗಿದ್ದರೂ, ಅವನಿಗೆ ಅವಳು ಪುಟ್ಟ ಮಗುವಿನಂತೆ.

ಸುನಂದ ತಿಂಡಿಯ ಬಟ್ಟಲನ್ನು ತಂದಿಡುತ್ತಾ, ” ಅವಳು ರಾತ್ರಿ ನಿದ್ದೆ ಮಾಡಿಲ್ಲ ಮನು. ಅದಕ್ಕೆ ನಾನು ಎಬ್ಬಿಸೋಕೆ ಹೋಗಿಲ್ಲ. ಮಧ್ಯಾಹ್ನ ಆಫೀಸಿಗೆ ಹೋಗ್ತಾಳೆ ಬಿಡು.ಇಲ್ಲಾಂದ್ರೆ ನೀನು ಅವಳ ಬಾಸ್ ಗೆ ಹುಷಾರಿಲ್ಲ ಅಂತ ಹೇಳ್ಬಿಡು. ” ಎನ್ನುತ್ತಿರುವಾಗಲೇ,

ಅದಿತಿ ರೆಡಿಯಾಗಿ ಬಂದಿದ್ದಳು. ಆದರೆ ಮುಖದಲ್ಲಿ ಕಳೆ ಇರಲಿಲ್ಲ. ಕಣ್ಣು ದಪ್ಪಗಾಗಿದ್ದವು. ಸರಿಯಾಗಿ ನಿದ್ದೆ ಮಾಡಿರಲಿಲ್ಲ ಎಂಬುದು ಅವಳ ಮುಖ ನೋಡಿದರೆ ಯಾರು ಬೇಕಾದರೂ ಹೇಳುವಂತಿತ್ತು.
ಅವಳನ್ನು ನೋಡಿದ ತಕ್ಷಣ ನಿನ್ನೆ ಏನಾಗಿತ್ತು ಎಂಬುದು ಮನೋಜ್ ಗೆ ಅರಿವಾಗಿತ್ತು.

ಅಣ್ಣನ ಮುಖ ನೋಡಿ,
” ಗುಡ್ ಮಾರ್ನಿಂಗ್ ಅಣ್ಣ, ಏನ್ ಸಮಾಚಾರ.. ನಿನ್ನೆ ರಾತ್ರಿ ಊಟಕ್ಕೂ ಬಂದಿಲ್ಲ. ಅಷ್ಟೊಂದು ಕೆಲಸಾನ ಆಫೀಸಲ್ಲಿ.. ” ಎಂದು ಕೇಳಿದ್ದಳು.

ಅದಿತಿ ಪಟಪಟ ಎಂದು ಮಾತನಾಡುವ ಹುಡುಗಿ. ಅವಳು ಮನೆಯಲ್ಲಿದ್ದರೆ ಮನೆಯಲ್ಲಿ ಏನೋ ಸಂಭ್ರಮವಿರುತ್ತಿತ್ತು. ಅವಳು ಮಂಕಾದರೆ ಮನೆ ಬಿಕೋ ಎನ್ನುತ್ತಿತ್ತು. ಆದ್ದರಿಂದ ನಿನ್ನೆ ಆಗಿದ್ದ ಘಟನೆಯ ಬಗ್ಗೆ ಜಾಸ್ತಿ ಚಿಂತೆ ಮಾಡದೆ ತನ್ನ ದಿನಚರಿಯನ್ನು ಆರಂಭಿಸಿದಳು. ಮೊದಲೇ ಎಲ್ಲರಿಗೂ ನನ್ನಿಂದ ತೊಂದರೆಯಾಗುತ್ತಿದೆ. ಇನ್ನೂ ಅದರಿಂದ ತಾನು ಬೇಜಾರಾಗಿ ಕುಳಿತರೆ ಇಡೀ ಮನೆಯನ್ನು ಸ್ಮಶಾನ ಮೌನ ಆವರಿಸಿಬಿಡುತ್ತದೆ ಎನ್ನುವುದು ಅವಳಿಗೆ ತಿಳಿದಿರುವುದರಿಂದ, ಯಾವತ್ತೂ ಆ ಒಂದು ಕನಸು ಮನೆಯ ಖುಷಿಯನ್ನು ಹಾಳು ಮಾಡಲು ಬಿಡುತ್ತಿರಲಿಲ್ಲ.

ಅದಿತಿಯ ಮುಖವನ್ನೇ ನೋಡುತ್ತಾ ಗಾಢವಾಗಿ ಯೋಚನೆ ಮಾಡುತ್ತಿದ್ದ ಮನೋಜ್ ನ ಮುಖದ ಮುಂದೆ ಕೈ ಆಡಿಸುತ್ತಾ,
” ಏನಣ್ಣ ಕೇಳಿಸ್ತಾ ಇಲ್ವಾ.. ಯಾವ ಲೋಕದಲ್ಲಿ ಇದಿಯಾ… ಏನೂ ಅತ್ತಿಗೆ ನೆನಪಾದ್ರಾ? ” ಎಂದು ಕೇಳಿದಾಗಲೇ ವಾಸ್ತವಕ್ಕೆ ಮರಳಿದ್ದ ಮನು.

” ಸ್ವಾರಿ ಅದಿತಿ. ನಾನು ನಿನ್ನೆ ಸ್ವಲ್ಪ ಲೇಟ್ ಆಗಿ ಬಂದಿದ್ದೆ.ನಂಗೆ ಎಚ್ಚರನೇ ಆಗಿಲ್ಲ. ನೀನು ಒಂಚೂರು ನಿದ್ದೆ ಮಾಡಿಲ್ಲ ಅನ್ಸುತ್ತೆ. ನನ್ ರೂಮ್ಗ್ ಆದ್ರೂ ಬರಬಹುದಿತ್ತಲ್ವಾ.. ಅಥವಾ ಒಂದು ಮಾತು ಕರೆದರೆ ನಾನೇ ಅಲ್ಲಿಗೆ ಬಂದು ನೀನ್ ಜೊತೆ ಮಲಗ್ತಿದ್ದೆ ಅಲ್ವಾ.. ” ಎಂದು ಕೇಳಿದ್ದ ಮನೋಜ್.

ಮನೋಜ್ ಮತ್ತು ಅದಿತಿಯ ಕೋಣೆ ಅಕ್ಕ ಪಕ್ಕದಲ್ಲೇ ಇತ್ತು. ಅವರಿಬ್ಬರೂ ಚಿಕ್ಕವರಿದ್ದಾಗ ಒಂದೇ ಕೋಣೆಯನ್ನು ಬಳಸುತ್ತಿದ್ದರು.ನಂತರ ಮನು ಕಾಲೇಜಿಗೆ ಹೋಗಲು ಶುರು ಮಾಡಿದಾಗ ಅದಿತಿಯೇ ಅಪ್ಪನಲ್ಲಿ ಹಠ ಹಿಡಿದು ಇಬ್ಬರಿಗೂ ಪ್ರತ್ಯೇಕ ಕೋಣೆ ಬೇಕೆಂದು ಮಾಡಿಸಿದ್ದಳು. ಮನೆಯಲ್ಲಿ ಬೇಕಾದಷ್ಟು ರೂಂಗಳಿದ್ದರೂ, ಎಲ್ಲರೂ ಅಕ್ಕಪಕ್ಕದಲ್ಲೇ ಇರಬೇಕು ಎಂದು ಅದಿತಿ ಹೊಸದಾಗಿ ಎಲ್ಲರಿಗೂ ರೂಮ್ ರೆಡಿ ಮಾಡಿಸಿದ್ದಳು.

ಈಗ ಅದಿತಿಯ ಕೋಣೆ ಮಧ್ಯದಲ್ಲಿತ್ತು. ಒಂದು ಪಕ್ಕದಲ್ಲಿ ಮನೋಜ್ ಇದ್ದರೆ ಇನ್ನೊಂದು ಪಕ್ಕದಲ್ಲಿ ಸುನಂದ ಮತ್ತು ರಾಜೇಂದ್ರ ಇರುತ್ತಿದ್ದರು.
ರೂಮಿನಿಂದ ರೂಮಿಗೆ ಕರೆದರೆ ಕೇಳಿಸುತ್ತಿರಲಿಲ್ಲ. ಆದರೆ ಕೂಗಿದರೆ ಕೇಳಿಸುವಂತಿತ್ತು.

” ಅಣ್ಣ,  ಏನ್ ತಮಾಷೆ ಮಾಡ್ತಾ ಇದ್ದೀಯಾ.. ಇದೇನ್ ಹೊಸದಾ.. ನಂಗೆ ಯಾವಾಗಲೂ ಹೀಗೆ ಆಗ್ತಾ ಇರುತ್ತೆ ನಿಂಗ್ ಗೊತ್ತಲ್ವಾ.. ನಿನ್ನೆ ಬೇರೆ ಸ್ವಲ್ಪ ಜೋರಾಗಿ ಗಾಳಿ ಬೀಸ್ತಾ ಇತ್ತು.. ವಾತಾವರಣ ಸ್ವಲ್ಪ ಮಳೆ ಬರೋ ತರ ಇತ್ತು. ಅದಕ್ಕೆ ನನಗೆ ಹೆದರಿಕೆ ಆಯ್ತು ಅನ್ಸುತ್ತೆ. ಅದಕ್ಕೆಲ್ಲ ನೀನು ಸಾರಿ ಕೇಳ್ಬೇಡ. ನಂಗ್ ತುಂಬಾ ಬೇಜಾರಾಗುತ್ತೆ. “

” ಹಾಗಲ್ಲ ರಾಜಕುಮಾರಿ, ನಿನ್ನ ಯಾವಾಗಲೂ ಚೆನ್ನಾಗಿ ನೋಡಿಕೊಳ್ಳಬೇಕು. ನೀನು ಯಾವಾಗಲೂ ಖುಷಿಯಿಂದ ಇರಬೇಕು ಅನ್ನೋದು ಒಂದೇ ನನ್ನ ಆಸೆ. ನೀನು ನನ್ ಮುದ್ದು ತಂಗಿ. ಅದಕ್ಕೆ ಬೇಜಾರಾಯ್ತು. ಇವತ್ತಿಂದ ನೀನು ನನ್ ರೂಮ್ ಅಲ್ಲೇ ಮಲ್ಕೊಳ್ತೀಯಾ ಅಷ್ಟೇ. “

” ನೀನಾದ್ರೂ ಹೇಳು ಮನು. ನಾವೆಷ್ಟು ಹೇಳಿದ್ರು ಕೇಳಲ್ಲ ಅವಳು. ಹಠ ಮಾಡ್ತಾಳೆ. ನಿನ್ ಮುದ್ದು ತಂಗಿ ಅಲ್ವಾ ಅಣ್ಣನ ಮಾತು ಕೇಳಬಹುದು. ” ಎಂದು ರಾಜೇಂದ್ರ ತಮ್ಮ ಮಾತನ್ನು ಮುಂದಿಟ್ಟಿದ್ದರು.

” ಓಹೋ!! ಎಷ್ಟು ದಿನ ಅಂತ ನನ್ನ ನಿನ್ನ ರೂಮಲ್ಲಿ ಇರು ಅಂತ ಹೇಳ್ತಿಯಾ.. ಆಮೇಲೆ ಅತ್ತಿಗೆ ಬಂದ್ಮೇಲೆ ಏನ್ ಮಾಡ್ತೀಯಾ? ಇವಳು ನನ್ ತಂಗಿ ಅಲ್ಲ, ಮುದ್ದು ಮಗಳು. ಅದಕ್ಕೆ ಅವಳು ಇಲ್ಲೇ ನಮ್ ಜೊತೇನೆ ಇರ್ತಾಳೆ. ಅಂತ ಹೇಳ್ತಿಯ??? ” ಎಂದು ರೇಗಿಸಿದ್ದಳು ಅದಿತಿ.



 

” ಅಮ್ಮ, ಅವರು ಯಾರೋ ಜ್ಯೋತಿಷಿ ಸರಿಯಾಗಿ ಹೇಳಿದಾರೆ..ಇವಳು ನಮ್ಮೆಲ್ಲರಕಿಂತ ದೊಡ್ಡವಳಾಗಿದಾಳೆ. ಹೇಗ್ ಮಾತಾಡ್ತಾ ಇದಾಳೆ ನೋಡಿ. ಮದ್ವೆ ಮಾಡೋದೇ ಇವಳಿಗೂ. ಬೇಗ ಮಧುಮಗನ ಹುಡುಕಿ ” ಎಂದು ಮನು ಜೋರಾಗಿ ನಕ್ಕಿದ್ದ.

” ಅಣ್ಣ..  ಆ ವಿಷ್ಯ ಯಾಕ್ ಮಾತಾಡ್ತೀಯಾ..ನಂಗೆ ಈಗಲೇ ಮದ್ವೆ ಬೇಡ. ಈಗ ಮೊನ್ನೆ ಮೊನ್ನೆ ಅಷ್ಟೇ ಕೆಲಸಕ್ಕೆ ಸೇರಿರೋ ತರ ಇದೆ. ಇನ್ನೂ ಎರಡು ವರ್ಷನೂ ಆಗಿಲ್ಲ.ಇನ್ನೊಂದೆರಡು ವರ್ಷ ಕೆಲಸ ಮಾಡಿ ಮದ್ವೆ ಆಗ್ತೀನಿ. ಆಗ ನೀವೇ ಬೇಡ ಅಂದ್ರೂ ಆಗ್ತೀನಿ. ಎಷ್ಟು ಹೇಳಿದ್ರೂ ಅರ್ಥಾನೆ ಆಗಲ್ಲ ನಿಮಗೆಲ್ಲ. ” ಎಂದು ಅಳು ಮೋರೆ ಮಾಡಿದ್ದಳು.

ಮನೋಜ್ ಆಫೀಸಿನಲ್ಲಿ ಅವನ ಸಹೋದ್ಯೋಗಿ ರಾಧಿಕಾ ಎಂಬುವವಳನ್ನು ಪ್ರೀತಿ ಮಾಡಿದ್ದ. ಇಬ್ಬರ ಮನೆಯಲ್ಲೂ ಒಪ್ಪಿಗೆ ಆಗಿತ್ತು. ಯಾವುದೇ ತೊಂದರೆ ಇಲ್ಲದೆ ಮದುವೆ ನಿಶ್ಚಯವಾಗಿತ್ತು.
ಈಗ ಅದಿತಿಗೆ ಯೋಗ್ಯ ವರನನ್ನು ಹುಡುಕುತ್ತಿದ್ದರು.

(ಮುಂದುವರೆಯುವುದು 🌱)
—————————-🌱—————————-