New Katha Varnika is now on Google Play — read original stories on your phone. Learn more
ಪ್ರೀತಿ ಮರೀಚಿಕೆ – 6

ಪ್ರೀತಿ ಮರೀಚಿಕೆ – 6

ಮನೆಗೆ ಬಂದಿದ್ದ ನೋಟಿಸ್‌ನಿಂದ ರಾಜಾರಾಂ ಅವರ ಕೋಪ ಇನ್ನಷ್ಟು ಹೆಚ್ಚಾಗಿತ್ತು. ಇಷ್ಟು ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ಮಗಳ ನೆನಪೇ ಅವರಿಗೆ ರೋಷ ಉಕ್ಕಿಸುವಂತಿತ್ತು.

ಆದರೆ ರಾಜಾರಾಮ್ ಅವರ ಪತ್ನಿ ಸೀತಾ ಅವರ ಸ್ಥಿತಿ ಮಾತ್ರ ಬೇರೆಯಾಗಿತ್ತು. ಮಗಳ ಬಗ್ಗೆ ಕೇಳಬೇಕು ಎದರು ಕೇಳಲಾಗದ, ತಿಳಿದುಕೊಳ್ಳಬೇಕೆಂದರೂ ಯಾರ ಮುಂದೆಯೂ ಬಾಯಿ ತೆರೆಯಲಾಗದ ಸಂಕಟ ಅವರದಾಗಿತ್ತು. ಎಷ್ಟೇ ವರ್ಷಗಳು ಕಳೆದರೂ ತಾಯಿಯ ಮನಸ್ಸಿನಲ್ಲಿ ಮಗಳ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿರಲಿಲ್ಲ. ಹೊರಗೆ ತೋರಿಸಿಕೊಳ್ಳಲಾಗದೆ ಒಳಗೊಳಗೇ ನೋವು ನುಂಗುತ್ತಿದ್ದರು.

“ನಿಮ್ಮ ಮಗಳು ಓಡಿ ಹೋಗಿ ಈಗ ಅವಳ ಮಗಳನ್ನು ಆಸ್ತಿಗಾಗಿ ಛೂ ಬಿಟ್ಟಿದ್ದಾಳೆ. ಇಷ್ಟು ವರ್ಷಗಳಾದರೂ ಅವಳ ಕೆಟ್ಟ ಬುದ್ಧಿ ಮಾತ್ರ ಬಿಟ್ಟುಹೋಗಿಲ್ಲ. ಅಂದು ಮನೆಯ ಮರ್ಯಾದೆ ತೆಗೆದಿದ್ದಳು, ಈಗ ಮತ್ತೆ ಅದನ್ನೇ ಮಾಡಲು ಹೊರಟಿದ್ದಾಳೆ!” ಎಂದು ಶಕುಂತಲಾಳ ಅಣ್ಣ ರಾಮನಾಥ್ ಸಿಟ್ಟಿನಿಂದ ಸಿಡಿದರು.

ಅವರ ಮಾತುಗಳಿಗೆ ರಾಜಾರಾಂ ಮತ್ತಷ್ಟು ಕೆರಳಿದರು.

ಇದೆಲ್ಲವನ್ನೂ ಸೀತಾ ಅವರು ಮಾತ್ರ ಮೂಕಪ್ರೇಕ್ಷಕರಂತೆ ನಿಂತು ನೋಡುತ್ತಿದ್ದರು. ಮಗಳ ಪರವಾಗಿ ಮಾತನಾಡುವ ಧೈರ್ಯವೂ ಇರಲಿಲ್ಲ. ಮಗಳ ಬಗ್ಗೆ ವಿಚಾರಿಸುವ ಸ್ವಾತಂತ್ರ್ಯವೂ ಇರಲಿಲ್ಲ. ಮನೆಯವರ ಮುಂದೆ ತಮ್ಮ ನೋವನ್ನು ವ್ಯಕ್ತಪಡಿಸಲೂ ಸಾಧ್ಯವಾಗದೆ ಮೌನಕ್ಕೆ ಶರಣಾಗಿದ್ದರು.

ಇನ್ನು ರಾಜಾರಾಂ ಅವರ ಹಿನ್ನೆಲೆಯನ್ನು ನೋಡುವುದಾದರೆ, ಅವರು ಸ್ವಂತ ಪರಿಶ್ರಮದಿಂದ ಬದುಕು ಕಟ್ಟಿಕೊಂಡವರು. ಆರಂಭದಲ್ಲಿ ಚಿಕ್ಕದಾಗಿ ಶುರುಮಾಡಿದ್ದ ಹಾರ್ಡ್‌ವೇರ್ ಕಂಪನಿಯನ್ನು ಹಂತ ಹಂತವಾಗಿ ಬೆಳೆಸಿ ದೊಡ್ಡ ಉದ್ಯಮವನ್ನಾಗಿ ರೂಪಿಸಿದ್ದರು. ಅದೇ ಮುಂದೆ ಶರ್ಮಾ ಇಂಡಸ್ಟ್ರೀಸ್ ಆಗಿ ಪ್ರಸಿದ್ಧಿ ಪಡೆದಿತ್ತು.

ವರ್ಷಗಳ ಪರಿಶ್ರಮ, ದೂರದೃಷ್ಟಿ ಮತ್ತು ಶ್ರಮದಿಂದ ಕಟ್ಟಿದ ಸಾಮ್ರಾಜ್ಯವದು.

ಇತ್ತೀಚೆಗೆ ಮೊಮ್ಮಗ ಶಶಾಂಕ್ ಪರಿಚಯಿಸಿದ್ದ ಸೂಪರ್ ಚಿಪ್ X1 ಅವರ ಸಂಸ್ಥೆಗೆ ಮತ್ತೊಂದು ದೊಡ್ಡ ಹೆಗ್ಗಳಿಕೆ ತಂದುಕೊಟ್ಟಿತ್ತು. ಕಂಪ್ಯೂಟರ್‌ನ ಕಾರ್ಯಕ್ಷಮತೆಯನ್ನು ಗಣನೀಯವಾಗಿ ಹೆಚ್ಚಿಸುವ ಸಾಮರ್ಥ್ಯ ಹೊಂದಿರುವ ಹೊಸ ಮೈಕ್ರೋಪ್ರೊಸೆಸರ್ ಅದಾಗಿತ್ತು. ಅದರ ಆವಿಷ್ಕಾರ ಮತ್ತು ಪರಿಚಯಕ್ಕಾಗಿ ಶಶಾಂಕ್‌ಗೆ ಪ್ರತಿಷ್ಠಿತ ಪ್ರಶಸ್ತಿಯೂ ಲಭಿಸಿತ್ತು.

ಅದೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೂರ್ತಿ ರಾಜಾರಾಂ ಅವರನ್ನು ಸುದ್ದಿವಾಹಿನಿಯಲ್ಲಿ ನೋಡಿದ್ದು.

ಆ ಒಂದು ದೃಶ್ಯವೇ ಮೂರ್ತಿಯ ಮನಸ್ಸಿನಲ್ಲಿ ವರ್ಷಗಳಿಂದ ಮರೆತುಹೋಗಿದ್ದ ದುರಾಸೆಯನ್ನು ಮತ್ತೆ ಎಚ್ಚರಿಸಿತ್ತು.

ಆದರೆ ಇಲ್ಲಿ ಯಾರಿಗೂ ತಿಳಿದಿರದ ಒಂದು ಸತ್ಯವಿತ್ತು. ಶಕುಂತಲಾ ಈ ಆಸ್ತಿಗಾಗಿ ತನ್ನ ತಂದೆಯ ಬಳಿ ಹೋಗಿರಲಿಲ್ಲ. ಅಷ್ಟೇ ಅಲ್ಲ, ಶ್ರಾವ್ಯಳಿಗೂ ತನ್ನ ತಾಯಿಯ ತವರುಮನೆಯವರು ಇಷ್ಟು ಸ್ಥಿತಿವಂತರು, ಎಂದಾಗಲೀ ಅವರಿಗೆ ಒಂದು ಕುಟುಂಬವಿದೆ ಎನ್ನುವ ಬಗ್ಗೆ ಸರಿಯಾದ ಮಾಹಿತಿಯೇ ಇರಲಿಲ್ಲ.

ಆದರೆ ಮೂರ್ತಿ ಮಾತ್ರ ತನ್ನ ಸ್ವಾರ್ಥಕ್ಕಾಗಿ ಮಗಳ ಬದುಕನ್ನೇ ಪಣಕ್ಕಿಟ್ಟಿದ್ದನು.

Premium Premium reading Full story · from ₹69
Sign in to continue