ಒಲವಿನ ಸೆರೆ – 5
ರಾಜಶೇಖರ್ ಅವರು ರಾಜಕೀಯ ವಿಷಯದ ಬಗ್ಗೆ ಮಾತನಾಡಿದವರು,”ಕೆಲವು ಪಕ್ಷದವರು ನಮ್ಮ ವಿರುದ್ಧ ಪ್ರಚಾರ ಮಾಡ್ತಾ ಇದಾರೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ…ನೀವು ನಮ್ಮ ಪರವಾಗಿ ಏನಾದರೂ ಸಹಾಯ ಮಾಡಬಹುದಾ? ನಿಮ್ಮ ಬೆಂಬಲದ ಅಗತ್ಯ ನಮಗೆ ಈಗ ಬಹಳ ಇದೆ…” ಎಂದು ವಿನಂತಿ ಮಾಡುವ ಹಾಗೆ ಹೇಳಿದ್ದರು.
ಜಗದೀಶ್ ಅವರು,”ಖಂಡಿತ ನನ್ನ ಸಹಾಯ ನಿಮಗೆ ಇದ್ದೇ ಇರತ್ತೆ…ನಿಮ್ಮಂತ ನಾಯಕರ ಅವಶ್ಯಕತೆ ನಮ್ಮ ರಾಜ್ಯಕ್ಕೆ ಇದೆ…” ಎಂದು ಆಶ್ವಾಸನೆ ಕೊಟ್ಟಿದ್ದರು.
ಕುಮಾರ್ ಅವರು ವಿಷಯ ಹೇಳಿ ಎನ್ನುವಂತೆ ರಾಜಶೇಖರ್ ಅವರಿಗೆ ಸನ್ನೆ ಮಾಡಲು ಅವರು ಹೇಳ್ತೀನಿ ಎಂಬಂತೆ ಕಣ್ಣು ಮುಚ್ಚಿದ್ದರು. ರಾಜಶೇಖರ್,”ಜಗದೀಶ್ ಅವರೇ ನೀವು ತಪ್ಪು ತಿಳಿದುಕೊಳ್ಳಲ್ಲಾ ಅಂದರೆ ನಿಮ್ಮನ್ನ ಒಂದು ಮಾತು ಕೇಳಬಹುದಾ? ” ಎಂದು ಪರೋಕ್ಷವಾಗಿ ಪೀಠಿಕೆ ಹಾಕಿದ್ದರು.
ರಾಜಶೇಖರ್ ಅವರು ತಮ್ಮ ಮನದಲ್ಲಿದ್ದ ವಿಷಯಕ್ಕೆ ಪೀಠಿಕೆ ಹಾಕಿದ್ದರು. “ನೀವು ಅನ್ಯಥಾ ಭಾವಿಸದಿದ್ದರೆ ಒಂದು ಮಾತು ಕೇಳಬಹುದಾ?” ಎಂದು ಕೇಳುವ ಮೂಲಕ ತಮ್ಮ ಮನದ ಮಾತನ್ನು ಹೊರಹಾಕಿದ್ದರು.
ಜಗದೀಶ್ ಅವರು,”ಖಂಡಿತ ಕೇಳಿ… ಏನ್ ವಿಷಯ?” ಎಂದು ಕೇಳಿದರೆ ರಾಜಶೇಖರ್,”ನನ್ನ ಮಗ ವಿರಾಟ್ ಗೊತ್ತಲ್ವಾ ನಿಮಗೆ? ಆಫೀಸಿನ ಜವಾಬ್ದಾರಿಯನ್ನೆಲ್ಲಾ ಈಗ ಅವನೇ ವಹಿಸಿಕೊಂಡಿದ್ದಾನೆ…ಅವನಿಂದ ನನ್ನ ಅರ್ಧ ಜವಾಬ್ದಾರಿ ಕಡಿಮೆ ಆಗಿದೆ ಅಂತಲೇ ಹೇಳಬಹುದು…” ಎಂದು ಹೇಳುತ್ತಿದ್ದರೆ ಅವರು,”ಒಂದೆರಡು ಸಲ ನೋಡಿದೀನಿ…ಒಳ್ಳೆಯ ಹುಡುಗ…” ಎಂದು ಹೇಳಿ ಸುಮ್ಮನಾಗಿದ್ದರು.
ರಾಜಶೇಖರ್ ಅವರು ತಾವೇ ಮಾತು ಮುಂದುವರೆಸಿದವರು,”ನನ್ನ ಮಗ ಸದ್ಯಕ್ಕೆ ಬಿಸಿನೆಸ್ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಿದವರ ಲಿಸ್ಟ್ ಅಲ್ಲಿ ಇದ್ದಾನೆ…ನಿಮ್ಮ ಮಗಳು ನನ್ನ ಮಗ ಜೋಡಿಯಾದರೇ ಒಳ್ಳೆಯದು ಎಂದು ನನ್ನ ಭಾವನೆ…ಇದರಲ್ಲಿ ನನ್ನ ಒತ್ತಾಯ ಏನು ಇಲ್ಲ…” ಎಂದು ನೇರವಾಗಿ ಬೇಡಿಕೆ ಇಟ್ಟಿದ್ದರು.
ಜಗದೀಶ್ ಅವರು,”ನಿಮ್ಮ ಮಗನ ಬಗ್ಗೆ ಕೇಳಿದ್ದೇನೆ…ಅವನ ವಯಸ್ಸಿಗೆ ಒಳ್ಳೆಯ ಸಾಧನೆಯನ್ನೇ ಮಾಡಿದ್ದಾನೆ…ಮುಂದೆ ಅವನು ಬಯಸಿದರೆ ಅವನಿಗೆ ರಾಜಕೀಯದಲ್ಲೂ ಒಳ್ಳೆಯ ಭವಿಷ್ಯ ಇದೆ…ಆದರೆ ನನ್ನ ಮಗಳ ಮದುವೆಯ ಬಗ್ಗೆ ನಾನಿನ್ನೂ ಏನನ್ನೂ ಯೋಚಿಸಿಲ್ಲ… ಅವಳಿನ್ನೂ ನಮಗೆ ಚಿಕ್ಕ ಮಗು ಇದ್ದ ಹಾಗೆ…” ಎಂದವರು ಮಗಳ ಮದುವೆಯ ವಿಷಯ ನೆನೆದು ತುಸು ಭಾವುಕರಾದರು. ಆದರೂ ಅದನ್ನು ಎದುರಿಗೆ ತೋರಗೊಡಲಿಲ್ಲ.
ರಾಜಶೇಖರ್,”ನನ್ನಿಂದ ಯಾವುದೇ ಒತ್ತಡ ಇಲ್ಲ…ಆದರೆ ಮುಂದೊಮ್ಮೆ ನಿಮ್ಮ ಮಗಳ ಮದುವೆಯ ಬಗ್ಗೆ ಯೋಚಿಸಿದಾಗ ಒಮ್ಮೆ ನಾನು ಹೇಳಿದ ವಿಷಯದ ಬಗ್ಗೆಯೂ ಯೋಚಿಸಿ…ನಿಮ್ಮ ಉತ್ತರದ ನಿರೀಕ್ಷೆಯಲ್ಲಿ ಇರುತ್ತೇನೆ…” ಎಂದವರು ಧನ್ಯವಾದ ತಿಳಿಸಿ ಅಲ್ಲಿಂದ ಹೊರಟಿದ್ದರು.
ರಾಜಶೇಖರ್ ಅವರಿಗೆ ತಮ್ಮ ಇಷ್ಟಾರ್ಥ ಒಂದೇ ಸಲ ನೆರವೇರದೆ ಇರುವುದನ್ನು ನೋಡಿ ಅಸಹನೆ ಉಂಟಾಗಿತ್ತು. ಅದನ್ನೇ ಕುಮಾರ್ ಮೇಲೆ ತೋರಿಸಿದ್ದರು. “ನಾನು ನಿಮಗೆ ಮೊದಲೇ ಹೇಳಿರಲಿಲ್ವ ಕುಮಾರ್…ಇದೆಲ್ಲ ಆಗದೆ ಇರುವ ವಿಷಯ ಅಂತ… ನೋಡಿ ಈಗ ಏನಾಯ್ತು ಅಂತ…ಸುಮ್ಮನೆ ನಾವು ಅವರ ಮುಂದೆ ಸಣ್ಣವರಾಗಬೇಕಾಯಿತು…” ಎಂದು ಸಿಡುಕಿದ್ದರು.
ಕುಮಾರ್,”ಸರ್ ಒಂದೇ ಸಲಕ್ಕೆ ತೀರ್ಮಾನಕ್ಕೆ ಬರಬೇಡಿ…ಬೇಡಿಕೆ ಇಟ್ಟಾಗಿದೆ ಅವರು ಒಪ್ಪುತ್ತಾರೆ ಎನ್ನುವ ಭರವಸೆ ನನಗಿದೆ…ಸದ್ಯಕ್ಕೆ ನೀವು ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ನೆಮ್ಮದಿಯಾಗಿರಿ…ಟೆನ್ಶನ್ ಬೇಡ…ಯಾವುದಕ್ಕೂ ಒಂದು ಸಲ ವಿರಾಟ್ ಸರ್ ಜೊತೆಗೂ ಮಾತಾಡಿ…ಮುಂದೆ ಅವರಿಗೇ ಒಪ್ಪಿಗೆ ಇರದಿದ್ದರೆ ಕಷ್ಟ…” ಎಂದು ಅವರಿಗೆ ಸಮಾಧಾನವಾಗುವ ಹಾಗೆ ನಿಭಾಯಿಸಿದರು.
ರಾಜಶೇಖರ ಅವರು ಅವರ ಮಾತಿಗೆ ಒಪ್ಪಿದವರಿಗೆ ಅವರು ಹೇಳುತ್ತಿರುವುದರಲ್ಲೂ ಅರ್ಥವಿದೆ ಅನಿಸಿತ್ತು. ಒಮ್ಮೆ ವಿರಾಟ್ ಜೊತೆ ಮಾತನಾಡಬೇಕು ಎಂದುಕೊಂಡರು.
©©©©©©©©©©
ಅಂದು ರಾತ್ರಿ ರಾಜಶೇಖರ್ ಅವರು ವಿರಾಟ್ ಕೋಣೆಗೆ ಬಂದಿದ್ದರು. ವಿರಾಟ್ ಲ್ಯಾಪ್ಟಾಪ್ ಹಿಡಿದು ಕುಳಿತಿದ್ದ. ತಂದೆ ಬಂದಿರುವುದನ್ನು ನೋಡಿ ಎದ್ದು ನಿಂತವನು,”ನೀವೇನು ಇಲ್ಲಿ ಡ್ಯಾಡ್? ಒಂದು ಮಾತು ಕರೆದರೆ ನಾನೇ ಬರುತ್ತಿದ್ದೆ…” ಎಂದವನಿಗೆ ಅವರು ತನ್ನ ಜೊತೆ ಸಮಯ ಕಳೆಯಲು ಬಂದಿದ್ದು ಎಂದು ಸಂತೋಷವಾಗಿತ್ತು.
ರಾಜಶೇಖರ್,”ಯಾಕೆ ನಾನು ನಿನ್ನ ರೂಮಿಗೆ ಬರಬಾರದ? ನೀನೇ ನನ್ನನ್ನ ಹುಡುಕಿ ಬರಬೇಕಾ? ಹಾಗಲ್ಲ ಏನು ಇಲ್ಲ…ಏನಿದು? ಮನೆಯನ್ನೇ ಆಫೀಸ್ ಮಾಡಿಕೊಂಡು ಬಿಟ್ಟಿದೀಯ? ಇಲ್ಲೂ ಲ್ಯಾಪ್ಟಾಪ್ ಹಿಡಿದು ಕುಳಿತಿದೀಯ? ಸ್ವಲ್ಪ ಸಮಯ ಆದರೂ ಮನೆಯಲ್ಲಿ ನೆಮ್ಮದಿಯಿಂದ ಇರಬೇಕು ಅಲ್ಲವಾ?” ಎಂದು ಪ್ರೀತಿಯಿಂದ ಮಾತನಾಡುತ್ತಿದ್ದರೆ ವಿರಾಟ್ ಖುಷಿಯಿಂದ,”ಮತ್ತೇನು ಕೆಲಸ ಇರತ್ತೆ ಹೇಳಿ ಡ್ಯಾಡ್…ನನಗೆ ಆಫೀಸ್ ಕೆಲಸ ಏನು ತಲೆನೋವಲ್ಲ…” ಎಂದು ಹೇಳಿದವನು,”ಏನ್ ವಿಷಯ ಡ್ಯಾಡ್? ಏನಾದರೂ ಸಮಸ್ಯೆ ಆಗಿದೆಯಾ?” ಎಂದು ಕೇಳಿದ್ದ.
ರಾಜಶೇಖರ್,”ಅಂತಹ ಸಮಸ್ಯೆ ಏನು ಇಲ್ಲ ವಿರಾಟ್…ನಿನಗೊಂದು ಸಂಬಂಧ ನೋಡೋಣ ಅಂತ….ಏನಂತೀಯ?” ಎಂದು ಮೆತ್ತಗೆ ಕೇಳಲು ವಿರಾಟ್,” ಈಗೇನು ಅರ್ಜೆಂಟ್ ಇದೆ ಡ್ಯಾಡ್…ಇನ್ನೊಂದು ವರ್ಷ ಹೋಗಲಿ…ನಂಗೀಗಲೇ ಮದುವೆ ಆಗೋಕೆ ಇಷ್ಟ ಇಲ್ಲ…” ಎಂದು ಹೇಳಿದ್ದ.
ರಾಜಶೇಖರ್,”ಈಗ ಹಾಗೆ ಹೇಳ್ತೀಯ…ಹೀಗೆ ಹೇಳುವವರೇ ಬೇಗ ಮದುವೆ ಆಗೋದು…ನಿನ್ನ ಸ್ನೇಹಿತರನ್ನೇ ನೋಡು ಎಲ್ಲ ಮದುವೆ ಆಗ್ತಾ ಇದಾರೆ…ನಿನಗೂ ಈಗ ಮದುವೆಯಾಗಲು ಸರಿಯಾದ ವಯಸ್ಸು…” ಎಂದು ಅವನನ್ನು ಒಪ್ಪಿಸಲು ನೋಡಿದ್ದರು.
ಆದರೂ ವಿರಾಟ್,”ಪ್ಲೀಸ್ ಡ್ಯಾಡ್…ನನಗೆ ಮದುವೆ ಬೇಡ…ಓಕೆ ಅಂದಾಗ ನಾನೇ ಹೇಳ್ತೀನಿ…” ಎನ್ನಲು ಅವರು ಅನುಮಾನದಿಂದ,”ಯಾಕೆ ಯಾರನ್ನಾದರೂ ಇಷ್ಟ ಪಟ್ಟಿದೀಯ? ಹಾಗೇನಾದರೂ ಇದ್ದರೆ ಹೇಳು…” ಎಂದವರು ಮನದಲ್ಲಿ ಹಾಗಾಗದೇ ಇರಲಿ ಎಂದುಕೊಳ್ಳುತ್ತಿದ್ದರು.
ವಿರಾಟ್,”ಅಂತದ್ದೇನು ಇಲ್ಲ…ಸದ್ಯಕ್ಕೆ ಬೇಡ ಅಂತ ಅಷ್ಟೇ…” ಎನ್ನಲು ಅವರು ನೆಮ್ಮದಿಯ ಉಸಿರು ಬಿಟ್ಟಿದ್ದರು. ವಿರಾಟ್,”ಆದರೆ ಯಾರನ್ನಾದ್ರೂ ಪ್ರೀತಿಸಿ ಮದುವೆಯಾಗಬೇಕು ಅನ್ನೋ ಆಸೆ ಇದೆ ಡ್ಯಾಡ್…” ಎಂದು ತಂದೆಯ ಮುಂದೆ ಮನದಲ್ಲಿ ಇರುವುದನ್ನು ಹೇಳಿಯೇಬಿಟ್ಟಿದ್ದ.
ರಾಜಶೇಖರ್,”ಲವ್ ಮಾಡಿಯೇ ಮದುವೆ ಆಗಬೇಕು ಅಂತೇನಿಲ್ಲ ವಿರಾಟ್…ಮದುವೆ ಆದಮೇಲೂ ಪ್ರೀತಿ ಮಾಡಬಹುದು…” ಎಂದು ಅವನ ಮೈಂಡ್ ವಾಶ್ ಮಾಡಲು ನೋಡಿದ್ದರು. ವಿರಾಟ್ ಅವರ ಮಾತಿಗೆ ಮತ್ತೆ ಎದುರಾಡಲು ಇಷ್ಟವಿರದೆ ಅಷ್ಟಕ್ಕೇ ಸುಮ್ಮನಾಗಿದ್ದ.
%%%%%%%%%%%%%
ಇತ್ತ ಜಗದೀಶ್ ಅವರು ಊಟಕ್ಕೆ ಕುಳಿತಾಗ ಮಗಳ ಬಳಿ ವಿಚಾರಿಸುತ್ತಿದ್ದರು. ಮಗಳೇ ನಿನಗೆ ಹುಡುಗ ಹೇಗಿರಬೇಕು ಅಂತ ಆಸೆ ಇದೆ ಎಂದು ಕೇಳಿದ್ದರು. ಅದಕ್ಕೆ ಅವಳು ನನಗೆ ಈ ಹಣ ಅಂತಸ್ತು ಶ್ರೀಮಂತಿಕೆ ಇದೆಲ್ಲದರ ಮೇಲೆ ಏನೂ ಆಸೆ ಇಲ್ಲ ಡ್ಯಾಡ್. ನನಗೆ ಒಳ್ಳೆಯ ಗುಣದ ಶ್ರೀಮಂತಿಕೆ ಇರುವ ಹುಡುಗ ಆದರೆ ಒಳ್ಳೆಯದು ಎಂದು ಉತ್ತರಿಸಿದಳು. ಜಗದೀಶ್ ಅವರು ಒಂದು ಸಂಬಂಧದ ಪ್ರಸ್ತಾಪ ಬಂದಿದೆ ಮಗಳೇ ಅದಿಕ್ಕೆ ಕೇಳಿದೆ. ವಿರಾಟ್ ಸೂರ್ಯವಂಶಿ ಅಂತ. ಅವರ ತಂದೆ ರಾಜಶೇಖರ್ ಅವರು ರಾಜಕೀಯದಲ್ಲಿ ಇದ್ದಾರೆ. ಹುಡುಗ ನೋಡೋಕೆ ಚೆನ್ನಾಗಿ ಇದಾನೆ. ಗುಣನೂ ಒಳ್ಳೆಯದೇ ಅನಿಸತ್ತೆ. ಓಕೆ ಅಂದರೆ ನಂತರ ನಾವು ಅದರ ಬಗ್ಗೆ ವಿಚಾರ ಮಾಡಬಹುದು. ಅವನು ಬಿಸಿನೆಸ್ ಫೀಲ್ಡ್ ಅಲ್ಲಿ ಇದಾನೆ. ಇದರ ಬಗ್ಗೆ ನಿನ್ನ ಅಭಿಪ್ರಾಯ ಏನು ಎಂದು ಕೇಳಿದ್ದರು.
ಅಕ್ಷರಾ,”ನಿಮಗೆ ಇಷ್ಟ ಆಗಿದ್ದರೆ ನನ್ನದೇನು ಅಭ್ಯಂತರ ಇಲ್ಲ ಡ್ಯಾಡ್…ನೀವು ಹೇಗೆ ಹೇಳುತ್ತೀರೋ ಹಾಗೆ” ಎಂದು ಹೇಳುತ್ತಿದ್ದರೆ ಜಗದೀಶ್ ಅವರಿಗೆ ಸಂತೋಷವಾಗಿತ್ತು. ಹಾಗೆಂದರೆ ಹೇಗೆ ಪುಟ್ಟಿ ಇದರಲ್ಲಿ ನನ್ನ ಅಭಿಪ್ರಾಯಕ್ಕಿಂತ ನಿನ್ನ ಅಭಿಪ್ರಾಯ ಮುಖ್ಯ ಎಂದು ಹೇಳಲು ಅವಳು ನೀವು ನನಗೆ ಏನೇ ಮಾಡಿದರೂ ಒಳ್ಳೆಯದೇ ಮಾಡ್ತೀರಾ ಅನ್ನೋ ನಂಬಿಕೆ ನನಗಿದೆ ಡ್ಯಾಡ್. ನಿಮ್ಮ ಇಷ್ಟವೇ ನನ್ನಿಷ್ಟ. ನೀವು ಯಾರನ್ನಾದ್ರೂ ಸೆಲೆಕ್ಟ್ ಮಾಡಿದ್ರೆ ಅವರು ನನಗೆ ಖಂಡಿತ ಇಷ್ಟ ಆಗೇ ಆಗ್ತಾರೆ ಅನ್ನೋ ನಂಬಿಕೆ ನನಗಿದೆ ಎಂದು ವಿಶ್ವಾಸದಿಂದ ಹೇಳಿದ್ದಳು.
ಜಗದೀಶ್ ಅವರು ಸರಿ ಪುಟ್ಟಿ ಹಾಗಾದ್ರೆ ಆ ಹುಡುಗನ ಬಗ್ಗೆ ವಿಚಾರಿಸೋಕೆ ಹೇಳ್ತೀನಿ ನಂತರ ವಿಚಾರ ಮಾಡೋಣ ಎಂದು ಹೋಗಿದ್ದರು.
ಅಕ್ಷರಾ ಜಗದೀಶ್ ಅವರು ಅಲ್ಲಿಂದ ಹೋಗುತ್ತಿದ್ದಂತೆ ವಿರಾಟ್ ಸೂರ್ಯವಂಶಿ ಎಂದು ಗೂಗಲ್ ಮಾಡಿ ನೋಡಿದ್ದಳು. ಅವಳು ಸರ್ಚ್ ಎಂದು ಟೈಪ್ ಮಾಡುತ್ತಿದ್ದಂತೆ ವಿರಾಟ್ ಬಯೋಡೇಟಾ ಅವಳ ಮುಂದೆ ಇತ್ತು. ಚಂದದ ರಾಯಲ್ ಕೋಟ್ ಧರಿಸಿದ ಅವನ ಫೋಟೋ ನೋಡುತ್ತಿದ್ದಂತೆ ಅವಳ ಮನ ಹ್ಯಾಂಡ್ಸಮ್ ಎಂದುಸುರಿತು. ಅವನ ಬಗ್ಗೆ ಇರುವ ಮಾಹಿತಿ ಎಲ್ಲವನ್ನೂ ನೋಡುತ್ತಿದ್ದಂತೆ ಅವನ ಬಗ್ಗೆ ಮೀಡಿಯಾದವರು ಅಹಂಕಾರ ಎದ್ದು ಬಿತ್ತರಿಸಿದ್ದ ವಿಷಯ ಸಹ ಕಂಡಿತ್ತು. ಅವನ ಒಂದಷ್ಟು ಫೋಟೋ ನೋಡಿದವಳಿಗೆ ಅವನ ಮುಖದಲ್ಲಿ ಇರುವ ಗಂಭೀರತೆ ಕೆಲವು ಫೋಟೋದಲ್ಲಿ ಕಂಡೂ ಕಾಣದಂತೆ ಇರುವ ನಗು ನೋಡಿದವಳಿಗೆ ಅಲ್ಲಿದ್ದ ಮಾಹಿತಿ ನಿಜವಿದ್ದರೂ ಇರಬಹುದು ಎಂದೆನಿಸಿತ್ತು. ಸರಿಯಾಗಿ ನಗುವುದಕ್ಕೂ ಟ್ಯಾಕ್ಸ್ ಬೀಳತ್ತೇನೋ ಈ ಮನುಷ್ಯನಿಗೆ ಎಂದುಕೊಂಡಿದ್ದಳು.
©©©©©©©©©©©©
ಮರುದಿನ ಜಗದೀಶ್ ಅವರು ವಿರಾಟ್ ಬಗ್ಗೆ ಮಾಹಿತಿ ಕಲೆಹಾಕಲು ಶುರುಮಾಡಿದ್ದರು. ಅವರು ವಿಚಾರಿಸಿದವರಲ್ಲಿ ಅವನ ಜೊತೆ ವ್ಯವಹಾರ ಮಾಡಿದವರು ಯಾರೂ ಅವನ ಬಗ್ಗೆ ನಕಾರಾತ್ಮಕ ವಿಷಯವನ್ನು ಹೇಳಿರಲಿಲ್ಲ. ಎಲ್ಲರ ಬಾಯಲ್ಲೂ ಒಳ್ಳೆಯ ಮಾತು ಕೇಳಿಬಂದಿತ್ತು. ಮಾಧ್ಯಮದ ಕೆಲವು ವಾಹಿನಿಗಳು ಅಹಂಕಾರ ಮಾಡೆಲ್ ಜೊತೆ ಹೆಸರು ತಳುಕು ಹಾಕುವುದು ಹೀಗೆ ಅನೇಕ ಬೇಡದ ವಿಷಯಗಳನ್ನು ಪ್ರಸಾರ ಮಾಡಿದ್ದು ಸಹ ತಿಳಿದಿತ್ತು. ರಾಜಕೀಯ ಬಿಸಿನೆಸ್ ಕ್ಷೇತ್ರದಲ್ಲಿ ಇದ್ದವರಿಗೆ ಇಂಥದ್ದೆಲ್ಲಾ ಸಾಮಾನ್ಯ ಎಂಬುದು ಅವರಿಗೆ ತಿಳಿದಿರುವ ವಿಷಯವೇ.
ಸ್ವತಃ ತಾವೇ ರಾಜಶೇಖರ್ ಅವರಿಗೆ ಕರೆ ಮಾಡಿ ಹುಡುಗ ಹುಡುಗಿಗೆ ಒಪ್ಪಿಗೆಯಾದರೆ ವಿಷಯ ಮುಂದುವರೆಸುವಂತೆ ಹೇಳಿದ್ದರು. ವಿಷಯವನ್ನು ಕೇಳಿದ ರಾಜಶೇಖರ್ ಅವರ ಸಂತೋಷ ಹೇಳತೀರದು. ಇನ್ನೇನು ತಮ್ಮ ಮುಂದಿನ ಉಜ್ವಲ ಭವಿಷ್ಯ ಕಣ್ಣು ಮುಂದೆಯೇ ಕಂಡಂತೆ ಆಗಿತ್ತು. ಅದೇ ವಿಷಯವನ್ನು ರೋಹಿಣಿಯವರ ಬಳಿ ಹಂಚಿಕೊಂಡಾಗ ಅವರು ಮೂಗು ಮುರಿದಿದ್ದರು. ನೀವೇನೋ ಒಪ್ಪಿಗೆ ಅಂತ ಹೇಳಿದ್ರಿ ನಿಮ್ಮ ಮಗ ಒಪ್ಪಬೇಕಲ್ಲ ಎಂದು ವ್ಯಂಗ್ಯ ಮಾಡಿದ್ದರು. ರಾಜಶೇಖರ್ ಅವರು ನಾನು ಒಪ್ಪಿದ ಮೇಲೆ ಅವನು ಒಪ್ಪಿಗೆ ಕೊಟ್ಟೆ ಕೊಡುತ್ತಾನೆ ಎಂದು ರೋಹಿಣಿ ಅವರ ಬಳಿ ಸಿಡುಕಿದ್ದರು.
ಸಮರ್ಥ್ ಕೂಡ ತಾಯಿಯಂತೆಯೇ ಪ್ರತಿಕ್ರಿಯೆ ನೀಡಿದ್ದ. ಅವನು ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದ. ಸರಿಯಾಗಿ ಓದದೇ ವರ್ಷದಿಂದ ಒಂದೇ ಕ್ಲಾಸಿನಲ್ಲಿ ಇದ್ದ. ಕೇಳಿದರೆ ತಾನೇಕೆ ಓದಬೇಕು ತನಗೇನು ಕಡಿಮೆ ಇದೆ ಎಂದು ಧಿಮಾಕಿನಲ್ಲಿ ವಾದಿಸುತ್ತಿದ್ದ. ಹುಟ್ಟಿದಾಗಿನಿಂದ ಕಂಡ ಶ್ರೀಮಂತಿಕೆ ಅವನಲ್ಲಿ ದರ್ಪವನ್ನು ಹುಟ್ಟುಹಾಕಿತ್ತು. ಓದುವ ಬುದ್ಧಿ ಇರದಿದ್ದರೂ ಚಿಕ್ಕಂದಿನಿಂದ ವಿರಾಟ್ ಕಂಡರೆ ಅಷ್ಟಕ್ಕಷ್ಟೇ. ಅಂಥ ದೊಡ್ಡ ದ್ವೇಷ ಏನು ಇರದಿದ್ದರೂ ವಿಶೇಷವಾಗಿ ಪ್ರೀತಿಯೂ ಇರಲಿಲ್ಲ.
ರಾಜಶೇಖರ್ ವಿರಾಟ್ ಬಳಿ,”ವಿರಾಟ್ ಒಂದು ಸಂಬಂಧ ಬಂದಿದೆ ಅಂತ ಹೇಳಿದ್ದೆ ನೆನಪಿದೆಯಾ? ಅವರ ಕಡೆಯಿಂದ ಒಪ್ಪಿಗೆ ಅಂತ ತಿಳಿಸಿದ್ದಾರೆ ಕಣೋ…” ಎಂದು ಸಂತೋಷವಾಗಿ ಹೇಳುತ್ತಿದ್ದರೆ ವಿರಾಟ್ ಆಘಾತದಿಂದ ನಿಂತಿದ್ದ. ತಾನು ತನಗೆ ಇಷ್ಟವಿಲ್ಲ ಈಗಲೇ ಬೇಡ ಎಂದು ಮನದಲ್ಲಿ ಇರುವುದನ್ನು ಹೇಳಿದರೂ ಅವರು ವಿಷಯವನ್ನು ಮುಂದುವರೆಸಿದ್ದನ್ನು ಕೇಳಿ ಬೇಸರವಾಗಿತ್ತು.
“ನನಗೆ ಇಷ್ಟ ಇಲ್ಲ ಬೇಡ ಅಂತ ಆಗಲೇ ಹೇಳಿದೆನಲ್ಲ ಡ್ಯಾಡ್…ಯಾಕೆ ಫೋರ್ಸ್ ಮಾಡ್ತಾ ಇದೀರಾ?” ಎಂದವನಿಗೆ ತನ್ನ ಭಾವನೆಗೆ ಇವರ ಬಳಿ ಕಿಂಚಿತ್ತೂ ಬೆಲೆಯೇ ಇಲ್ಲವಾ ಎಂದು ಅನಿಸತೊಡಗಿತ್ತು.
ರಾಜಶೇಖರ್,”ನಾನು ನಿನಗೆ ಯಾವುದೇ ಒತ್ತಡ ಹೇರುತ್ತಾ ಇಲ್ಲ ವಿರಾಟ್…ನಿನ್ನ ಒಳ್ಳೆಯದಕ್ಕೇ ಹೇಳುತ್ತಾ ಇರುವುದು…ಇಷ್ಟು ಒಳ್ಳೆಯ ಸಂಬಂಧ ಬಂದಿದೆ ಅದಿಕ್ಕೆ ಹೇಳ್ತಾ ಇದೀನಿ ಒಪ್ಪಿಕೊ ಮಗನೆ…ನಿಮ್ಮ ಜೀವನ ಚೆನ್ನಾಗಿದ್ದರೆ ತಾನೆ ನನಗೂ ನೆಮ್ಮದಿ…” ಎಂದು ಭಾವನಾತ್ಮಕವಾಗಿ ಮಾತನಾಡಿದ್ದರು.
ಮುಂದುವರೆಯುವುದು…
ಮುಂದಿನ ಸಂಚಿಕೆಯಲ್ಲಿ:
ವಿರಾಟ್ ಗೆ ಅವಳ ಸರಳ ಸ್ವಭಾವ ಅಚ್ಚರಿ ಉಂಟುಮಾಡಿತ್ತು. ಅವನು ತನ್ನ ತಂದೆ ಅಷ್ಟು ದೊಡ್ಡ ಮನೆತನದ ಹುಡುಗಿ ಎಂದು ಹೇಳಿದಾಗ ಅವಳು ಇಷ್ಟು ಸರಳ ಸುಂದರಿ ಇರಬಹುದು ಎಂದು ಅಂದುಕೊಂಡಿರಲಿಲ್ಲ. ಅವಳನ್ನು ನೋಡಿದರೆ ಅವನು ನೋಡಿದ ಶ್ರೀಮಂತರ ಮನೆಯ ಹುಡುಗಿಯರ ಹಾಗೆ ಜಂಭ ಅಹಂಕಾರ ತೋರುವ ಹುಡುಗಿ ಎಂದೆನಿಸಿರಲಿಲ್ಲ.
ಮುಂದೆ? ವಿರಾಟ್ ಮದುವೆಗೆ ಒಪ್ಪಿಗೆ ಕೊಡುತ್ತಾನ? ರಾಜಶೇಖರ್ ಅವರು ಮಾಡುತ್ತಿರುವುದು ಸರಿಯೇ? ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ 🙏
ನಿಮ್ಮ ಪ್ರೋತ್ಸಾಹ ಹಾಗೂ ಚಂದದ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ…
Swipe left/right or tap the sides to turn pages