ಅಪರಾಧದ ಜಗತ್ತಿನಲ್ಲಿ ಅಕ್ಷರಾ ಆರ್ಯನ್ 🫶 – 5
ಅಪರಾಧದ ಜಗತ್ತಿನಲ್ಲಿ ಅಕ್ಷರಾ ಆರ್ಯನ್ – ೫
ಮಧ್ಯಾಹ್ನದ ಹೊತ್ತಿಗೆ ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಕೆಲಸಗಳು ಬಿರುಸಿನಿಂದ ಸಾಗುತ್ತಿದ್ದವು. ಅಕ್ಷರಾ ಮೈಕ್ರೋಸ್ಕೋಪ್ನ ಲೆನ್ಸ್ಗೆ ಕಣ್ಣಿಟ್ಟು, ಮಗುವಿನ ಮಣಿಕಟ್ಟಿನ ಮೇಲಿದ್ದ ಆ ತ್ರಿಕೋನಾಕಾರದ ಚರ್ಮದ ಮಾದರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಪಕ್ಕದಲ್ಲೇ ಕಂಪ್ಯೂಟರ್ ಪರದೆಯ ಮೇಲೆ ಹೈ-ರೆಸಲ್ಯೂಷನ್ ಇಮೇಜ್ ದೊಡ್ಡದಾಗಿ ಮೂಡಿತ್ತು.
ಡಾ. ಸಾನ್ವಿ ಕಾಫಿಯ ಎರಡು ಕಪ್ಗಳನ್ನು ಹಿಡಿದು ಅವಳ ಬಳಿ ಬಂದು ನಿಂತಳು. “ಅಕ್ಷರಾ, ಸ್ವಲ್ಪ ಬ್ರೇಕ್ ತಗೋ. ಬೆಳಗ್ಗಿನಿಂದ ಅದೇ ಸ್ಯಾಂಪಲ್ ನೋಡ್ತಾ ಕೂತಿದ್ದೀಯಾ.”
ಅಕ್ಷರಾ ಲೆನ್ಸ್ನಿಂದ ಕಣ್ಣು ತೆಗೆದು, ಕನ್ನಡಕವನ್ನು ಸರಿಮಾಡಿಕೊಳ್ಳುತ್ತಾ ಕಾಫಿ ಕಪ್ ಕೈಗೆತ್ತಿಕೊಂಡಳು.
“ಸಾನ್ವಿ, ಇಲ್ಲಿ ನೋಡು. ಇದು ಕೇವಲ ಬಿಸಿಯಾದ ಕಬ್ಬಿಣದಿಂದ ಸುಟ್ಟ ಗುರುತಲ್ಲ. ಗಾಯದ ಅಂಚಿನಲ್ಲಿ ಮೈಕ್ರೋ-ಮೆಟಾಲಿಕ್ ಪಾರ್ಟಿಕಲ್ಸ್ ಸಿಕ್ಕಿವೆ. ಸ್ಪೆಕ್ಟ್ರೋಮೆಟ್ರಿ ಅನಾಲಿಸಿಸ್ ಪ್ರಕಾರ ಇದರಲ್ಲಿ ತಾಮ್ರ ಮತ್ತು ಹಿತ್ತಾಳೆಯ ಅಂಶಗಳಿವೆ. ಅಂದರೆ, ಯಾವುದೋ ನಿರ್ದಿಷ್ಟವಾದ ಲೋಹದ ಸೀಲ್ ಅಥವಾ ಅಚ್ಚು ಬಳಸಿ ಈ ಮುದ್ರೆ ಒತ್ತಿದ್ದಾರೆ. ಇದು ಆಕಸ್ಮಿಕವಾಗಿ ಆಗಿರೋ ಗಾಯ ಅಂತೂ ಖಂಡಿತ ಅಲ್ಲ.”
“ಯಾವ ಉದ್ದೇಶಕ್ಕೆ ಈ ತರಹ ಮುದ್ರೆ ಹಾಕ್ತಾರೆ?” ಸಾನ್ವಿ ಆಶ್ಚರ್ಯದಿಂದ ಕೇಳಿದಳು.
“ಅದೇ ನನಗೆ ಕಾಡ್ತಿರೋ ಪ್ರಶ್ನೆ. ಯಾವುದೋ ಅಕ್ರಮ ಜಾಲ ತಮ್ಮ ಕಸ್ಟಡಿಯಲ್ಲಿರೋ ಮಕ್ಕಳನ್ನು ಗುರುತಿಸೋಕೆ ಈ ತರಹದ ಕೋಡ್ ಅಥವಾ ಬ್ರಾಂಡಿಂಗ್ ಮಾಡ್ತಿರಬಹುದು,” ಎಂದ ಅಕ್ಷರಾ, ತನ್ನ ಕಂಪ್ಯೂಟರ್ನಲ್ಲಿ ರಾಜ್ಯ ಅಪರಾಧ ದಾಖಲೆಗಳ ವಿಭಾಗದ ಪೋರ್ಟಲ್ ತೆರೆದಳು.
“ಕಳೆದ ಆರು ತಿಂಗಳಲ್ಲಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನಾಪತ್ತೆಯಾದ ಹೆಣ್ಣುಮಕ್ಕಳ ದೂರುಗಳಲ್ಲಿ ಈ ತರಹದ ಗುರುತಿನ ಬಗ್ಗೆ ಯಾರಾದರೂ ಉಲ್ಲೇಖ ಮಾಡಿದ್ದಾರಾ ಅಂತ ಫಿಲ್ಟರ್ ಹಾಕಿ ಚೆಕ್ ಮಾಡ್ತಿದ್ದೀನಿ.”
———————————❤️———————————
ಅದೇ ಸಮಯದಲ್ಲಿ, ಜಯನಗರದ ಸೌತ್ ಎಂಡ್ ಸರ್ಕಲ್ ಬಳಿಯಿದ್ದ ದೊಡ್ಡ ಮೆಡಿಕಲ್ ಡಿಸ್ಟ್ರಿಬ್ಯೂಟರ್ ಗೋದಾಮಿನ ಹೊರಗೆ ಆರ್ಯನ್ನ ಜೀಪ್ ನಿಂತಿತ್ತು. ಆರ್ಯನ್ ಮತ್ತು ಸಬ್-ಇನ್ಸ್ಪೆಕ್ಟರ್ ರುದ್ರ ಇಬ್ಬರೂ ಒಳಗೆ ಮ್ಯಾನೇಜರ್ ಕ್ಯಾಬಿನ್ನಲ್ಲಿ ಕುಳಿತಿದ್ದರು.
ಟೇಬಲ್ ಮೇಲಿದ್ದ ದೊಡ್ಡ ಲೆಡ್ಜರ್ ಪುಸ್ತಕವನ್ನು ತಿರುವಿ ಹಾಕುತ್ತಿದ್ದ ಆರ್ಯನ್ನ ಮುಖದಲ್ಲಿ ತೀವ್ರವಾದ ಅಸಮಾಧಾನವಿತ್ತು.
“ನೋಡಿ ಇನ್ಸ್ಪೆಕ್ಟರ್ ಸಾಹೇಬ್ರೇ, ಪ್ರೊಪೋಫಾಲ್ ಅನಸ್ತೇಶಿಯ ಇಂಜೆಕ್ಷನ್ಗಳನ್ನು ನಾವು ಕೇವಲ ಮಾನ್ಯತೆ ಪಡೆದ ದೊಡ್ಡ ನರ್ಸಿಂಗ್ ಹೋಮ್ ಮತ್ತು ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ಗಳಿಗೆ ಮಾತ್ರ ಸಪ್ಲೈ ಮಾಡ್ತೀವಿ. ಪ್ರತಿಯೊಂದು ವಯಲ್ ಮೇಲೂ ಬ್ಯಾಚ್ ನಂಬರ್ ಇರುತ್ತೆ. ಡಾಕ್ಟರ್ ಪ್ರಿಸ್ಕ್ರಿಪ್ಷನ್ ಮತ್ತು ಹಾಸ್ಪಿಟಲ್ ಸೀಲ್ ಇಲ್ಲದೆ ನಾವು ಒಂದು ಬಾಟಲ್ ಕೂಡ ಹೊರಗೆ ಕೊಡಲ್ಲ.” ಎಂದ ಮ್ಯಾನೇಜರ್.
ಆರ್ಯನ್ ಲೆಡ್ಜರ್ ಅನ್ನು ಮುಚ್ಚಿ ಟೇಬಲ್ ಮೇಲೆ ತಳ್ಳಿದ. “ಅದೆಲ್ಲಾ ಅಧಿಕೃತ ಕಾಗದದ ಲೆಕ್ಕ ಆಯ್ತು. ಆದರೆ ಕಳೆದ ಆರು ತಿಂಗಳಲ್ಲಿ ಈ ಏರಿಯಾದಲ್ಲಿ ಎಕ್ಸ್ಪೈರಿ ಡೇಟ್ ಹತ್ತಿರ ಬಂದಿರೋ ಸ್ಟಾಕ್ ಅಥವಾ ಡ್ಯಾಮೇಜ್ ಅಂತ ತೋರಿಸಿ ಎಷ್ಟು ಬಾಕ್ಸ್ಗಳನ್ನು ರೈಟ್-ಆಫ್ ಮಾಡಿದ್ದೀರಿ? ಆ ಸ್ಟಾಕ್ ಯಾರ ಕೈಗೆ ಹೋಯ್ತು ಅನ್ನೋದಕ್ಕೆ ನಿಮ್ಮ ಹತ್ತಿರ ದಾಖಲೆ ಇದೆಯಾ?”
ಆರ್ಯನ್ನ ಪ್ರಶ್ನೆಗೆ ಮ್ಯಾನೇಜರ್ನ ಗಂಟಲು ಒಣಗಿತು. “ಅದು… ಸರ್… ಕೆಲವು ಸಣ್ಣಪುಟ್ಟ ಕ್ಲಿನಿಕ್ಗಳು ಕ್ಯಾಶ್ ಪೇಮೆಂಟ್ ಮಾಡಿ ಲೋಕಲ್ ಆಗಿ ತಗೊಳ್ತಾರೆ. ಆದರೆ ನಾವು ಯಾವುದೇ ಇಲ್ಲೀಗಲ್ ಕೆಲಸ ಮಾಡಿಲ್ಲ ಸರ್.”
“ರುದ್ರ, ಇವರ ಕಳೆದ ಒಂದು ವರ್ಷದ ಎಲ್ಲಾ ಇನ್ವಾಯ್ಸ್ಗಳು ಮತ್ತು ಗೋದಾಮಿನ ಸ್ಟಾಕ್ ಆಡಿಟ್ ರಿಪೋರ್ಟ್ ಸೀಜ್ ಮಾಡು. ಯಾವ್ಯಾವ ಸಣ್ಣ ಕ್ಲಿನಿಕ್ಗಳಿಗೆ ಈ ಔಷಧಿ ಹೋಗಿದೆ ಅನ್ನೋ ಕಂಪ್ಲೀಟ್ ಲಿಸ್ಟ್ ಸಂಜೆ ಒಳಗೆ ನನಗೆ ಬೇಕು.”
“ಎಸ್ ಸರ್,” ರುದ್ರ ಕೆಲಸಕ್ಕೆ ತೊಡಗಿದ.
ಗೋದಾಮಿನಿಂದ ಹೊರಬಂದ ಆರ್ಯನ್ ರಸ್ತೆಯ ಬದಿಯಲ್ಲಿ ನಿಂತು ವಾಚ್ ನೋಡಿದ. ಸಂಜೆ ಐದು ಗಂಟೆ ಸಮೀಪಿಸುತ್ತಿತ್ತು. ಅವನ ಮೊಬೈಲ್ ಮತ್ತೆ ಕಂಪಿಸಿತು. ಸ್ಕ್ರೀನ್ ಮೇಲೆ ಅಮ್ಮನ ಹೆಸರು ನೋಡಿ ಅವನ ಹುಬ್ಬುಗಳು ಗಂಟಿಕ್ಕಿದವು.
ಫೋನ್ ರಿಸೀವ್ ಮಾಡುತ್ತಿದ್ದಂತೆ ಲಲಿತಾ ಅವರ ಆತುರದ ಧ್ವನಿ ಕೇಳಿಸಿತು: “ಆರ್ಯನ್, ಎಲ್ಲಿದ್ದೀಯ? ಮೈಸೂರಿನಿಂದ ಪ್ರಭಾಕರ್ ರಾವ್ ಅವರ ಕುಟುಂಬ ಈಗಾಗಲೇ ಮನೆಗೆ ಬಂದು ತಲುಪಿದ್ದಾರೆ. ನೀನು ಇನ್ನು ಸ್ಟೇಷನ್ನಲ್ಲೇ ಇದ್ದೀಯಂತೆ? ಬೇಗ ಬಾ, ಅಪ್ಪ ಪದೇ ಪದೇ ನಿನ್ನ ಬಗ್ಗೆ ಕೇಳ್ತಿದ್ದಾರೆ.”
“ಬರ್ತಿದ್ದೀನಿ ಅಮ್ಮಾ, ಇನ್ನೊಂದು ಅರ್ಧ ಗಂಟೆಯಲ್ಲಿ ಮನೆ ಮುಟ್ತೀನಿ,” ಎಂದ ಆರ್ಯನ್ ಕೋಪ ತಡೆದು.
ಫೋನ್ ಕಟ್ ಮಾಡಿದ ನಂತರ ಅವನಿಗೆ ಒಮ್ಮೆ ಅಕ್ಷರಾಳ ನೆನಪಾಯಿತು. ಬೆಳಗ್ಗೆ ಅವಳು ನಾಚಿ ಕೊಟ್ಟ ಆ ಪುಟ್ಟ ಮುತ್ತು, ಅವಳ ಮುಖದ ಕೆಂಪು ಇವನ ಕಣ್ಣ ಮುಂದೆ ಬಂತು. ಎದೆಯೊಳಗೆ ಸಣ್ಣದೊಂದು ನೋವು ಕಾಣಿಸಿಕೊಂಡಿತು. ತಾನು ಮಾಡುತ್ತಿರುವುದು ಸರಿನಾ? ಅಕ್ಷರಾಳಿಗೆ ಈ ವಿಷಯ ಹೇಳಬೇಕಿತ್ತಾ? ಆದರೆ ಈಗಲೇ ಹೇಳಿದರೆ ಅವಳು ಇನ್ನಷ್ಟು ಗಲಿಬಿಲಿಗೊಳ್ಳುತ್ತಾಳೆ. ಈ ಮದುವೆ ಪ್ರಸ್ತಾಪವನ್ನು ತಾನೇ ನೇರವಾಗಿ ನಿರಾಕರಿಸಿ ಮುಗಿಸುವುದು ಒಳ್ಳೆಯದು ಎಂದು ನಿರ್ಧರಿಸಿ ಜೀಪ್ ಹತ್ತಿದ.
ಸಂಜೆ ಆರು ಗಂಟೆಗೆ ಆರ್ಯನ್ ‘ಆರ್ಯ ನಿವಾಸ’ದ ಆವರಣಕ್ಕೆ ಕಾಲಿಟ್ಟಾಗ, ಲಿವಿಂಗ್ ರೂಮ್ನಲ್ಲಿ ನಗು, ಮಾತುಕತೆಯ ಸದ್ದು ಕೇಳಿಸುತ್ತಿತ್ತು.
ಆರ್ಯನ್ ತನ್ನ ಡ್ರೆಸ್ ಕಳಚಿ, ನೀಲಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ ಕೈಕಾಲು ತೊಳೆದುಕೊಂಡು ಕೆಳಗೆ ಬಂದ. ದೇವರಾಜ್, ವಿಕ್ರಮ್ ಮತ್ತು ಎದುರಿಗೆ ಕುಳಿತಿದ್ದ ಪ್ರಭಾಕರ್ ರಾವ್ ಗಂಭೀರವಾಗಿ ಹಳೆಯ ಕಾಲದ ಪೊಲೀಸ್ ಸರ್ವೀಸ್ ಬಗ್ಗೆ ಚರ್ಚಿಸುತ್ತಿದ್ದರು. ಪಕ್ಕದ ಸೋಫಾದಲ್ಲಿ ತಿಳಿ ಹಳದಿ ಬಣ್ಣದ ಸೀರೆಯಲ್ಲಿ ಕುಳಿತಿದ್ದ ಹುಡುಗಿ ಅನನ್ಯ, ಆರ್ಯನ್ ಕೆಳಗೆ ಇಳಿದು ಬರುತ್ತಿದ್ದಂತೆ ಮೆಲ್ಲನೆ ತಲೆ ಎತ್ತಿ ನೋಡಿದಳು.
“ಬಾ ಆರ್ಯನ್, ಕೂತ್ಕೋ. ಇವರು ಪ್ರಭಾಕರ್ ರಾವ್, ಅವರ ಪತ್ನಿ ಮಾಲಿನಿ. ಇದು ಅನನ್ಯ” ದೇವರಾಜ್ ಮಗನನ್ನು ನೋಡಿ ಗಂಭೀರವಾಗಿ ಹೇಳಿದರು.
ಆರ್ಯನ್ ಕೈಮುಗಿದು ಎದುರಿನ ಸೋಫಾದ ಮೇಲೆ ಕುಳಿತು, “ನಮಸ್ಕಾರ.” ಎಂದ.
“ಆರ್ಯನ್ ಬಗ್ಗೆ ಪೇಪರ್ನಲ್ಲಿ ಆಗಾಗ ಬರ್ತಿರುತ್ತೆ. ತುಂಬಾ ಚುರುಕಾದ ಆಫೀಸರ್ ಅಂತ ಕಮಿಷನರ್ ರಾಘವನ್ ಅವರೇ ಒಮ್ಮೆ ಹೇಳಿದ್ರು,” ಪ್ರಭಾಕರ್ ರಾವ್ ಮೆಚ್ಚುಗೆಯಿಂದ ನಕ್ಕರು.
ಮಾತುಕತೆಗಳು ಔಪಚಾರಿಕವಾಗಿ ಸಾಗಿದವು. ಲಲಿತಾ ಕಾಫಿ ಮತ್ತು ತಿಂಡಿ ತಂದು ಎಲ್ಲರಿಗೂ ನೀಡಿದಳು. ಸ್ವಲ್ಪ ಸಮಯದ ನಂತರ ದೇವರಾಜ್, “ಆರ್ಯನ್, ಅನನ್ಯಳಿಗೆ ನಮ್ಮ ಗಾರ್ಡನ್ ತೋರಿಸು, ಇಬ್ಬರೂ ಸ್ವಲ್ಪ ಮಾತಾಡಿ,” ಎಂದರು.
ಇದು ಅನಿವಾರ್ಯವೆಂದು ತಿಳಿದ ಆರ್ಯನ್ ಎದ್ದು ನಿಂತು, “ಬನ್ನಿ,” ಎಂದು ಹೊರಗಿನ ಸಿಟ್-ಔಟ್ ಕಡೆಗೆ ಹೆಜ್ಜೆ ಹಾಕಿದ. ಅನನ್ಯ ಕೂಡ ಅವನನ್ನು ಹಿಂಬಾಲಿಸಿದಳು.
ಗಾರ್ಡನ್ ಬಳಿಯಿದ್ದ ಮರದ ಬೆಂಚ್ ಹತ್ತಿರ ಇಬ್ಬರೂ ಬಂದು ನಿಂತರು. ತಂಪಾದ ಸಂಜೆಯ ಗಾಳಿ ಬೀಸುತ್ತಿತ್ತು. ಅನನ್ಯಳ ಮುಖದಲ್ಲಿ ಮುಜುಗರದ ಸಣ್ಣ ನಗು ಇತ್ತು.
“ಹಲೋ ಇನ್ಸ್ಪೆಕ್ಟರ್, ತುಂಬಾ ಸೈಲೆಂಟ್ ಆಗಿದ್ದೀರಲ್ಲ?”
ಅವಳೇ ಮಾತಿಗೆ ನಾಂದಿ ಹಾಡಿದಳು.
ಆರ್ಯನ್ ಅವಳ ಕಡೆ ತಿರುಗಿ ನೋಡಿದ.
“ಅನನ್ಯ, ನಾನು ಪೊಲೀಸ್. ಸುತ್ತಿ ಬಳಸಿ ಮಾತಾಡೋದು ನನಗೆ ಬರೋದಿಲ್ಲ. ನೇರವಾಗಿಯೇ ವಿಷಯ ಹೇಳ್ತೀನಿ, ಬೇಜಾರು ಮಾಡ್ಕೋಬೇಡಿ.” ಎಂದ ತಕ್ಷಣ,
ಅನನ್ಯ ತುಸು ಅಚ್ಚರಿಯಿಂದ ನೋಡಿದಳು. “ಹೇಳಿ…”
“ನಮ್ಮ ಅಪ್ಪ-ಅಮ್ಮನ ಒತ್ತಡಕ್ಕೆ ಮಣಿದು ನಾನಿಲ್ಲಿ ನಿಮ್ಮ ಮುಂದೆ ನಿಂತಿದ್ದೀನಿ ಅಷ್ಟೇ. ಸದ್ಯಕ್ಕೆ ನನಗೆ ಮದುವೆ ಆಗೋ ಯಾವ ಯೋಚನೆಯೂ ಇಲ್ಲ. ನನ್ನ ತಲೆಯ ಮೇಲೆ ನಗರದ ಅತ್ಯಂತ ಕ್ರಿಟಿಕಲ್ ಆದ ಮರ್ಡರ್ ಕೇಸ್ ಒಂದಿದೆ. ಮುಂದಿನ ಹಲವು ತಿಂಗಳು ನಾನು ಮನೆಗೆ ಬರ್ತೀನೋ ಇಲ್ವೋ ಅನ್ನೋದೇ ಗ್ಯಾರಂಟಿ ಇಲ್ಲ. ಒಬ್ಬ ಅಧಿಕಾರಿಯಾಗಿ ನನ್ನ ಬದುಕು ಸದಾ ಅನಿಶ್ಚಿತ. ನಿಮ್ಮ ಕುಟುಂಬ, ನಿಮ್ಮ ಕೆರಿಯರ್ ತುಂಬಾ ಚೆನ್ನಾಗಿದೆ. ಆದರೆ ನಾನು ನಿಮಗೆ ಸರಿಯಾದ ಆಯ್ಕೆ ಅಲ್ಲ. ದಯವಿಟ್ಟು ನಿಮ್ಮ ಕಡೆಯಿಂದಲೇ ಈ ಪ್ರಸ್ತಾಪ ಬೇಡ ಅಂತ ಮನೆಯವರಿಗೆ ಹೇಳಿಬಿಡಿ,” ಆರ್ಯನ್ ಹೇಳಿ ಮುಗಿಸಿದ.
ಅನನ್ಯ ಒಂದು ಕ್ಷಣ ಸ್ತಬ್ಧಳಾಗಿ ಅವನನ್ನೇ ನೋಡಿದಳು. ಅವನ ಕಣ್ಣುಗಳಲ್ಲಿ ಕೇವಲ ಕರ್ತವ್ಯದ ಹಠ ಮಾತ್ರವಲ್ಲ, ಬೇರೆ ಯಾವುದೋ ಬಲವಾದ ನಿಷ್ಠೆ ಇರುವುದನ್ನು ಅವಳು ಸೂಕ್ಷ್ಮವಾಗಿ ಗ್ರಹಿಸಿದ ಹಾಗಿತ್ತು.
“ನಿಮ್ಮ ಪ್ರಾಮಾಣಿಕತೆ ನನಗೆ ಇಷ್ಟವಾಯ್ತು. ಆರ್ಯನ್,ಯಾರಾದರೂ ಇಷ್ಟಪಟ್ಟವರು ಇದ್ದಾರಾ?” ಅವಳು ಸಣ್ಣದಾಗಿ ನಿಟ್ಟುಸಿರು ಬಿಟ್ಟು ನಕ್ಕಳು.
ಆರ್ಯನ್ ಆ ಪ್ರಶ್ನೆಗೆ ಉತ್ತರಿಸಲಿಲ್ಲ. ಕೇವಲ ತುಟಿಯಂಚಲ್ಲಿ ಮೌನದ ನಗೆಯಷ್ಟೇ ಉಳಿಯಿತು.
ಅಷ್ಟರಲ್ಲಿ ಆರ್ಯನ್ನ ಜೇಬಿನಲ್ಲಿದ್ದ ಪೊಲೀಸ್ ಫೋನ್ ಜೋರಾಗಿ ರಿಂಗ್ ಆಯಿತು. ಸ್ಕ್ರೀನ್ ಮೇಲೆ ಸಬ್-ಇನ್ಸ್ಪೆಕ್ಟರ್ ರುದ್ರನ ಹೆಸರು.
ಆರ್ಯನ್ ಕ್ಷಮೆ ಕೋರುವಂತೆ ಸನ್ನೆ ಮಾಡಿ ಕಾಲ್ ರಿಸೀವ್ ಮಾಡಿದ. “ಹೇಳು ರುದ್ರ.”
“ಸರ್!, ಕಲಾಸಿಪಾಳ್ಯ ಪೊಲೀಸ್ ಸ್ಟೇಷನ್ನಿಂದ ಒಂದು ಮುಖ್ಯವಾದ ಮಾಹಿತಿ ಬಂದಿದೆ ಸರ್. ಸುಮಾರು ಹದಿನೈದು ದಿನಗಳ ಹಿಂದೆ ಅಲ್ಲಿನ ಹೂವಿನ ಮಂಡಿಯಲ್ಲಿ ಕೆಲಸ ಮಾಡೋ ಒಬ್ಬ ಬಡ ಮಹಿಳೆ ತನ್ನ ಒಂಬತ್ತು ವರ್ಷದ ಹೆಣ್ಣುಮಗು ಕಾಣೆಯಾಗಿದ್ದಾಳೆ ಅಂತ ಕಂಪ್ಲೈಂಟ್ ಕೊಟ್ಟಿದ್ದಳು. ಆ ಮಗುವಿನ ಗುರುತಿನ ಕಾಲಂನಲ್ಲಿ ‘ಬಲಗೈ ಮಣಿಕಟ್ಟಿನ ಮೇಲೆ ಬಿಸಿಯಾದ ಲೋಹದ ತ್ರಿಕೋನಾಕಾರದ ಕಲೆ ಇದೆ’ ಅಂತ ಮೆನ್ಷನ್ ಮಾಡಿದ್ದಾರೆ ಸರ್!”
ಆರ್ಯನ್ನ ಮೈ ಜುಮ್ಮೆಂದಿತು. ಅವನ ದವಡೆಗಳು ಬಿಗಿಯಾದವು.
“ರುದ್ರ, ಆ ಕಂಪ್ಲೈಂಟ್ ಫೈಲ್ ತಗೊಂಡು ಆ ತಾಯಿಯನ್ನು ತಕ್ಷಣ ನಮ್ಮ ಸ್ಪೆಷಲ್ ಆಫೀಸ್ಗೆ ಕರೆಸಿಕೊ. ಅಕ್ಷರಾಳಿಗೂ ಇನ್ಫಾರ್ಮ್ ಮಾಡು, ನಾನು ಈಗಲೇ ಹೊರಡ್ತಿದ್ದೀನಿ!” ಎಂದು ಆದೇಶಿಸಿದ.
ಫೋನ್ ಕಟ್ ಮಾಡಿದ ಆರ್ಯನ್, ತನ್ನ ಮುಂದೆ ನಿಂತಿದ್ದ ಅನನ್ಯಳತ್ತ ನೋಡಿ, “ನನಗೆ ಅರ್ಜೆಂಟ್ ಕಾಲ್ ಬಂದಿದೆ, ನಾನು ಹೊರಡಬೇಕು. ಮನೆಯಲ್ಲಿ ನೀವೇ ನಿಭಾಯಿಸಿ,” ಎಂದು ಹೇಳಿ, ಅಪ್ಪ-ಅಮ್ಮನಿಗೆ ಕಾಯದೆ ಗೇಟ್ನತ್ತ ಮಿಂಚಿನ ವೇಗದಲ್ಲಿ ಧಾವಿಸಿದ.
ಆ ಗುರುತಿಲ್ಲದ ಹೆಣಕ್ಕೆ ಕೊನೆಗೂ ಒಂದು ಹೆಸರು, ಒಂದು ಮುಖ ಸಿಗುವ ಸಮಯ ಹತ್ತಿರವಾಗಿತ್ತು. ಆದರೆ ಆ ತಾಯಿಯ ಕಣ್ಣೀರಿನ ಹಿಂದೆ ಯಾವ ಕರಾಳ ಜಾಲ ಬಾಯಿಬಿಡಲಿದೆ ಎಂಬ ಸತ್ಯ ತನಿಖಾ ತಂಡಕ್ಕೆ ಇನ್ನೂ ನಿಗೂಢವಾಗಿತ್ತು.
(ಮುಂದುವರೆಯುವುದು ❤️)
———————————❤️———————————
ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ
Swipe left/right or tap the sides to turn pages