ಅಕ್ಷರಾ ವಿರಾಟ್ ಹೆಂಡತಿಯಾಗಿ ಅವನ ಜೊತೆ ಹೊರಟಿದ್ದಳು. ಕಾರಿನಲ್ಲಿ ವಿರಾಟ್ ಪಕ್ಕ ಕುಳಿತವಳ ಕಣ್ಣಿನಿಂದ ನೀರು ಬಿಡದೇ ಹರಿಯುತ್ತಿತ್ತು. ವಿರಾಟ್ ಅವಳನ್ನು ಸಮಾಧಾನಿಸುವ ಪರಿ ತಿಳಿಯದೇ ಕುಳಿತಿದ್ದ. ದಾರಿಯುದ್ದಕ್ಕೂ ಅವಳು ಅಳುತ್ತಿದ್ದರೆ ಅವನು ತನ್ನ ಕರ್ಚೀಫ್ ತೆಗೆದು ಅವಳ ಕೈಗಿಟ್ಟಿದ್ದ. ಪ್ಲೀಸ್ ಅಳಬೇಡಿ ಇಷ್ಟೇ ಅವನಿಂದ ಹೇಳಲು ಸಾಧ್ಯವಾಗಿದ್ದು. ಅಕ್ಷರಾ ಅವನ ಕೈಯಿಂದ ಕರ್ಚೀಫ್ ತೆಗೆದುಕೊಂಡವಳು ಸ್ವಲ್ಪ ಸಮಾಧಾನ ಆಗಿದ್ದಳು.
ಕಾರು ಭವ್ಯವಾದ ಸೂರ್ಯವಂಶಿ ನಿವಾಸದ ಎದುರು ನಿಂತಿತ್ತು. ಮೊದಲೇ ಅರಮನೆಯಂತೆ ಇದ್ದ ಮನೆಯನ್ನು ಇನ್ನಷ್ಟು ಸುಂದರವಾಗಿ ಅಲಂಕರಿಸಲಾಗಿತ್ತು. ವಧು ವರರನ್ನು ಸ್ವಾಗತಿಸಲು ಅಷ್ಟು ಭವ್ಯವಾದ ಮನೆಯಲ್ಲಿ ಯಾರೂ ಇರಲಿಲ್ಲ. ಅವನ ಅಜ್ಜಿ ಇದ್ದರೂ ಅವರು ಮುತ್ತೈದೆ ಅಲ್ಲ ಎಂದು ಅವರು ಆರತಿ ಮಾಡಲು ಬಯಸಲಿಲ್ಲ. ರೋಹಿಣಿ ಅವರು ತಮಗೆ ಸಂಬಂಧ ಇಲ್ಲದಂತೆ ಕೋಣೆಯಲ್ಲಿ ಕುಳಿತಿದ್ದರು.
ರಾಜಶೇಖರ್ ಅವರೇ ಹೆಂಡತಿಗೆ ಬುದ್ಧಿ ಹೇಳಿ ಕರೆದುಕೊಂಡು ಬಂದಿದ್ದರು. ನವ ಜೋಡಿಗಳು ಬಂದು ಬಾಗಿಲಲ್ಲಿ ನಿಂತಿದ್ದರೂ ಯಾರು ಬಂದಿರಲಿಲ್ಲ. ಅಜ್ಜಿ ಒಬ್ಬರೇ ಎದುರು ನಿಂತು ಆರತಿ ತರಲು ಹೋಗಿದ್ದಾರೆ ಎಂದು ಹೇಳಿ ಸಂಭಾಳಿಸಿದ್ದರು. ವಿರಾಟ್ ಗೆ ಅವನ ಮನೆಯವರ ಬಗ್ಗೆ ಮೊದಲೇ ತಿಳಿದಿದ್ದರಿಂದ ಅವನಿಗೆ ಅಂತಹ ಆಶ್ಚರ್ಯ ಏನೂ ಆಗಲಿಲ್ಲ. ಆದರೆ ಅಷ್ಟು ಪ್ರೀತಿಯ ಕುಟುಂಬದಲ್ಲಿ ಬೆಳೆದ ಅಕ್ಷರಾಳಿಗೆ ಎಲ್ಲ ವಿಚಿತ್ರವಾಗಿ ಕಾಣುತ್ತಿತ್ತು.
ಕೊನೆಗೆ ರೋಹಿಣಿ ಅವರೇ ಆರತಿ ಬಟ್ಟಲು ಹಿಡಿದು ಬಂದಿದ್ದರು. ಮುಖದಲ್ಲಿ ಬಾರದ ನಗು ತಂದುಕೊಂಡವರು ಆರತಿ ಮಾಡಿ ಇಬ್ಬರಿಗೂ ಹಣೆಗೆ ಕುಂಕುಮ ಇಟ್ಟಿದ್ದರು. ಅಕ್ಷರಾ ಸೇರು ಒದ್ದು ಬಲಗಾಲಿಟ್ಟು ಒಳಗೆ ಬಂದಿದ್ದಳು. ಅಜ್ಜಿ ದೀಪ ಬೆಳಗಲು ಹೇಳಿದಾಗ ದೇವರ ಮನೆಯಲ್ಲಿ ದೀಪ ಬೆಳಗಿದ್ದಳು. ವಿರಾಟ್ ಹೊರಗಡೆಯೇ ನಿಂತಿದ್ದವನು ಅವಳು ಹೊರಗಡೆ ಬರುತ್ತಿದ್ದಂತೆ ಅವಳ ಜೊತೆ ಅಜ್ಜಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ. ಅಜ್ಜಿ ಅವರ ತಲೆಯ ಮೇಲೆ ಕೈ ಇಟ್ಟು ನೂರು ಕಾಲ ಸುಖವಾಗಿ ಬಾಳಿ ಎಂದು ಹರಸಿದ್ದರು.
ವಿರಾಟ್ ತನ್ನ ಕೋಣೆಯ ಕಡೆ ಹೋಗಿದ್ದ. ಅಕ್ಷರಾ ಎಲ್ಲಿ ಹೋಗಬೇಕೆಂದು ತಿಳಿಯದೆ ಅಲ್ಲೇ ನಿಂತಿದ್ದಳು. ಅಜ್ಜಿ ಅವಳ ಬಳಿ ಬಂದವರು ತಮ್ಮ ಕೋಣೆಗೆ ಕರೆದುಕೊಂಡು ಹೋಗಿದ್ದರು. ಬಂದ ಕೆಲ ಹೊತ್ತಿನಲ್ಲೇ ಅವಳು ಅಜ್ಜಿಯ ಜೊತೆ ಒಡನಾಟ ಬೆಳೆಸಿಕೊಂಡಿದ್ದಳು. ಅಜ್ಜಿ ಅವಳ ಹೊಂದಾಣಿಕೆ ಸ್ವಭಾವವನ್ನು ನೋಡಿ ಖುಷಿಪಟ್ಟಿದ್ದರು. ತಮ್ಮ ಮೊಮ್ಮಗನಿಗೆ ಇಂತಹ ಹುಡುಗಿಯೆ ಬೇಕು ಎಂದು ತಾನು ಎಷ್ಟು ಬಾರಿ ಯೋಚಿಸಿದ್ದೆ ಕೊನೆಗೂ ಮದುವೆ ಯಾವ ರೀತಿಯಲ್ಲಿ ಆದರೂ ಒಳ್ಳೆಯ ಹುಡುಗಿಯೇ ಅವನ ಕೈ ಹಿಡಿದಿದ್ದಾಳೆ ಎಂದು ಸಂತಸಪಟ್ಟಿದ್ದರು.
ಊಟಕ್ಕೆ ಕುಳಿತಾಗ ಅಜ್ಜಿ ಒಬ್ಬರಿಗೊಬ್ಬರು ಸಿಹಿ ತಿನ್ನಿಸಲು ಹೇಳಿದ್ದರು. ವಿರಾಟ್ ಇದೆಲ್ಲ ಬೇಕ ಎಂಬಂತೆ ಅವರನ್ನೇ ನೋಡಿದ್ದ. ಅಜ್ಜಿ ಅವನಿಗೆ ಕಣ್ಣಲ್ಲೇ ಗದರಿದವರು ಶಾಸ್ತ್ರ ಮಾಡಲೇಬೇಕು ಎಂದು ಹೇಳಿದಾಗ ವಿಧಿಯಿಲ್ಲದೆ ಸಿಹಿಯನ್ನು ಅವಳ ಮುಂದೆ ಹಿಡಿದಿದ್ದ. ಅವಳು ಮುಜುಗರದಿಂದಲೇ ತಿಂದಿದ್ದಳು. ಅವಳು ಕೂಡ ಸಿಹಿಯ ಸಣ್ಣ ತುಂಡನ್ನು ಅವನ ಮುಂದೆ ಹಿಡಿಯಲು ಅವನು ಎತ್ತಲೋ ನೋಡುತ್ತಾ ತಿಂದಿದ್ದ.