ಇಬ್ಬರೂ ಮದುವೆ ಮನೆಯಿಂದ ಹೊರಟಿದ್ದರು. ವಿರಾಟ್ ಕಾರು ಚಲಾಯಿಸುತ್ತ ಇದ್ದರೂ ಅವನ ಕಣ್ಣು ಈಗಲೂ ಅವಳ ಕಡೆಗೇ ಹೋಗುತ್ತಿದೆ. ಅಕ್ಷರಾಳ ರೂಪ ಅವನನ್ನು ಅವಳ ಕಡೆ ಸೆಳೆಯುತ್ತಿದೆ. ತನಗೆ ಯಾವಾಗಲೂ ಹೀಗೆ ಆಗಿಲ್ಲ ತಾನೇಕೆ ಹೀಗೆ ವರ್ತಿಸುತ್ತಿದ್ದೇನೆ ಎಂದು ತನಗೆ ತಾನೇ ಪ್ರಶ್ನೆ ಮಾಡಿಕೊಂಡಿದ್ದ.
ಅವಳನ್ನು ಮನೆಗೆ ಬಿಟ್ಟವನು ತನ್ನ ಮನೆ ಕಡೆ ಹೊರಟಿದ್ದ. ಅವನ ತಲೆಯಲ್ಲಿ ಅವಳನ್ನು ಬಿಟ್ಟರೆ ಬೇರೇನೂ ಇಲ್ಲವಂತೆ ಅವಳ ರೂಪವೇ ಕಣ್ಮುಂದೆ ಬರುತ್ತಿತ್ತು. ಮನೆಗೆ ಬಂದರೆ ಮತ್ತದೇ ದಿನಚರಿ! ಶಾಂತಮ್ಮ ಒಬ್ಬರನ್ನು ಬಿಟ್ಟು ಊಟಕ್ಕೆ ತಿಂಡಿಗೆ ಯಾರೂ ಕೇಳುವವರಿಲ್ಲ. ಕೊನೆ ಪಕ್ಷ ಆರೋಗ್ಯ ಸರಿ ಇಲ್ಲದಿದ್ದರೂ ವಿಚಾರಿಸುವವರಿಲ್ಲ. ಅಂದು ಫಂಕ್ಷನ್ ಮುಗಿಸಿ ಬಂದವನಿಗೆ ತಲೆನೋವು ಬಂದಂತಾಗಿ ಮಲಗಿಬಿಟ್ಟಿದ್ದ. ಶಾಂತಮ್ಮ ಬಂದು ಊಟಕ್ಕೆ ಕರೆದಿದ್ದರು. ತನಗೆ ಊಟ ಬೇಡ ಎಂದವನು ಊಟ ಮಾಡದೆಯೇ ಮಲಗಿದ್ದ. ಎಲ್ಲರೂ ಊಟ ಮಾಡಿ ಹೋಗಿ ಮಲಗಿದ್ದರು. ರೋಹಿಣಿ ಅವರಂತೂ ತಮ್ಮ ಗಂಡ ಮಗ ಬಿಟ್ಟರೆ ಮನೆಯಲ್ಲಿ ಬೇರೆ ಯಾರೂ ಇಲ್ಲದಂತೆ ವರ್ತಿಸುತ್ತಿದ್ದರು.
ಇನ್ನು ರಾಜಶೇಖರ್ ಅವರಿಗಂತೂ ಬಾಯಿ ಬಿಟ್ಟು ಹೇಳದೆ ಯಾವ ವಿಚಾರವೂ ತಿಳಿಯುತ್ತಿರಲಿಲ್ಲ. ಒಂದೇ ಮನೆಯಲ್ಲಿ ಇದ್ದರೂ ಮಗ ಊಟ ಮಾಡದೇ ಇರುವ ವಿಚಾರ ಯಾರಿಗೂ ತಿಳಿಯುತ್ತಿರಲಿಲ್ಲ. ಶಾಂತಮ್ಮ ಅವರಿಗೆ ವಿಷಯ ತಿಳಿದಿದ್ದರೂ ಅವರಿಗೆ ವಯಸ್ಸಾಗಿತ್ತು. ವಯಸ್ಸಿನ ಪ್ರಭಾವದಿಂದ ನಿದ್ದೆ ಬಂದುಬಿಟ್ಟಿತ್ತು. ಮತ್ತೆ ಅವನನ್ನು ಎಬ್ಬಿಸಿ ಊಟ ಹಾಕಲು ಅವರಿಗೆ ನೆನಪಾಗಲಿಲ್ಲ. ವಿರಾಟ್ ಅಂತೂ ತಲೆನೋವಿನ ಪ್ರಭಾವಕ್ಕೆ ಮಲಗಿದವನು ಎದ್ದಿರಲಿಲ್ಲ. ಮಧ್ಯ ರಾತ್ರಿಯಲ್ಲಿ ಎಚ್ಚರ ಆದರೂ ಮತ್ತೆ ಒಬ್ಬನೇ ಹೋಗಿ ಊಟ ಮಾಡಲು ಮನಸ್ಸಾಗಲಿಲ್ಲ. ಎದ್ದವನು ಮತ್ತೆ ಹಾಗೆಯೇ ಮಲಗಿಬಿಟ್ಟಿದ್ದ.
ಮರುದಿನ ಬೆಳಿಗ್ಗೆ ಶಾಂತಮ್ಮ ಅವರಿಗೆ ಅವನು ರಾತ್ರಿ ಊಟ ಮಾಡಿಯೇ ಇಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ ಪಶ್ಚಾತ್ತಾಪ ಆಗಿತ್ತು. ತಾವು ಊಟಕ್ಕೆ ಕರೆಯದೇ ಅವನು ಬರುವುದಿಲ್ಲ ಎಂದುಕೊಂಡವರಿಗೆ ಬೇಸರವಾಗಿತ್ತು. ಬೇಗನೆ ತಿಂಡಿ ಮಾಡಿದವರು ತಿಂಡಿಗೆ ಕರೆದು ಬಡಿಸಿದ್ದರು.
ನೋಡು ವಿರಾಟ್ ಈ ಹಾಳಾದ ನಿದ್ದೆಯಿಂದ ನೀನು ಊಟ ಮಾಡಿಲ್ಲ ಅನ್ನೋದು ಕೂಡ ನೆನಪಾಗಿಲ್ಲ ಎಂದು ಅಲವತ್ತುಕೊಂಡಿದ್ದರು. ವಿರಾಟ್ ಪರವಾಗಿಲ್ಲ ಅಮ್ಮ ನಿಮ್ಮ ತಪ್ಪೇನಿಲ್ಲ ಇದರಲ್ಲಿ ಎಂದವನಿಗೆ ನಿಜಕ್ಕೂ ತನ್ನ ಅಮ್ಮನ ನೆನಪಾಗಿತ್ತು. ತನ್ನ ತಾಯಿ ಇದ್ದಿದ್ದರೆ ತನ್ನನ್ನೂ ಎಲ್ಲರಂತೆ ಪ್ರೀತಿಯಿಂದ ಕಾಳಜಿ ಮಾಡುತ್ತಿದ್ದರು. ಅವರ ಪ್ರೀತಿ ಸಿಗದ ತಾನು ನಿಜಕ್ಕೂ ದುರಾದೃಷ್ಟವಂತ ಎಂದುಕೊಂಡಿದ್ದ. ಹಾಗಂತ ಶಾಂತಮ್ಮ ಅವರ ಬಳಿ ಏನನ್ನೂ ಹೇಳಲು ಹೋಗಲಿಲ್ಲ. ಅವರು ತನಗೂ ಅವರಿಗೂ ಏನೇ ಸಂಬಂಧ ಇಲ್ಲದಿದ್ದರೂ ಇಷ್ಟು ಕಾಳಜಿ ತೋರುವುದು ಹೆಚ್ಚೇ ಇನ್ನೂ ಅವರಿಂದ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಾಗುತ್ತೆ ಎಂದವನು ತಿಂಡಿ ತಿಂದು ಎದ್ದು ಹೋಗಿದ್ದ.
ಶಾಂತಮ್ಮ ಬೇಸರದಿಂದ ಕಣ್ಣು ಒರೆಸಿಕೊಂಡವರು ನಿನಗೂ ಒಳ್ಳೆಯ ಹೆಂಡತಿ ಬರ್ತಾಳೆ ವಿರಾಟ್ ಎಲ್ಲರಂತೆ ನಿನ್ನನ್ನೂ ಕಾಳಜಿಯಿಂದ ಪ್ರೀತಿಯಿಂದ ನೋಡಿಕೊಳ್ಳುವ ಹುಡುಗಿ ಸಿಕ್ಕೇ ಸಿಗುತ್ತಾಳೆ ಅಂತ ನನ್ನ ಮನಸ್ಸು ಹೇಳ್ತಾ ಇದೆ…ದೇವರೇ ನನ್ನ ನಂಬಿಕೆ ನಿಜ ಆಗುವ ಹಾಗೆ ಮಾಡು ತಂದೆ ಎಂದು ದೇವರಲ್ಲಿ ಬೇಡಿಕೊಂಡಿದ್ದರು.