ನನ್ನವಳು – 4
ನನ್ನವಳು – ೪
ಅದಿತಿಯ ಮುಖದಲ್ಲಿನ ಪ್ರಶ್ನಾರ್ಥಕ ಭಾವನೆಯನ್ನು ನೋಡಿ,
“ನಿಮ್ಮ ಜೀವನದ ಬಗ್ಗೆ ಹೇಳಿ. ಮದುವೆ ಬಗ್ಗೆ ಏನೇನು ಕನಸುಗಳಿವೆ, ಜೀವನ ಹೇಗೆ ನಡೆಸಬೇಕು ಅನ್ಕೊಂಡಿದೀರಾ.. ನಿಮ್ಮ ಲೈಫ್ ಗೋಲ್ಸ್ ಬಗ್ಗೆ ಹೇಳಿ.. ಅಂದೆ..ಹಾಗಂತ ಈಗ ಮಾತಾಡಿ ಎಲ್ಲ ತಿಳ್ಕೊಬಿಡ್ತೀವಿ..ಅಥವಾ ಮುಂದೆ ಕೂಡ ಹಾಗೆ ಇರತ್ತೆ ಅಂತ ಅಲ್ಲ. ಆದ್ರೂ ಅಲ್ಪ ಸ್ವಲ್ಪ ನಮ್ಮಿಬ್ಬರ ಜೀವನ ಶೈಲಿಯನ್ನ ತಿಳ್ಕೊಬೇಕಲ್ವಾ…” ಎಂದ ಅಭಿನವ್.
ಅದಿತಿಗೆ ಯಾಕೋ ಈ ಮಾತಿನಿಂದ ತುಂಬಾ ಖುಷಿ ಆಗಿತ್ತು. ಅಭಿನವ್ ಇಷ್ಟ ಆಗಿದ್ದ.
” ನೋಡಿ..ಮೊದಲನೆದಾಗಿ, ನೀವು ನಂಗೆ ನೀನು ಅಂತಾನೆ ಹೇಳಿ ಸಾಕು. ನೀವು ಅಂತೆಲ್ಲ ಹೇಳೋದು ಬೇಡ. ನನ್ನ ಬಗ್ಗೆ ಹೇಳಬೇಕು ಅಂದ್ರೆ, ನಾನು ಮದುವೆ ಬಗ್ಗೆ ಕನಸೆಲ್ಲ ಇಟ್ಕೊಂಡವಳು ಅಲ್ಲ. ನಂಗೆ ಯಾವಾಗಲೂ ಚೆನ್ನಾಗಿ ಓದಬೇಕು, ಒಳ್ಳೆ ಕೆಲಸ ಹುಡುಕಿ ಸ್ವಾವಲಂಬಿಯಾಗಿ ಬದುಕಬೇಕು ಅನ್ನೋದೊಂದೇ ಯೋಚನೆ ಇತ್ತು ಅಷ್ಟೇ. ಮತ್ತೆ ಅಪ್ಪ ಅಮ್ಮನ್ನ ಚೆನ್ನಾಗಿ ನೋಡ್ಕೊಳ್ಬೇಕು ಅಂತ. ನಂಗೆ ಅಪ್ಪ, ಅಮ್ಮ, ಅಣ್ಣನ ಬಿಟ್ಟು ಎಲ್ಲಿಗೂ ಹೋಗೋಕೆ ಮನಸಿಲ್ಲ. ” ಎಂದು ಮುಗ್ಧವಾಗಿ ಹೇಳಿದಳು ಅದಿತಿ.
ಅವಳ ಮುಗ್ಧತೆ ನೋಡಿ ಅಭಿನವ್ ಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಸುಮ್ಮನೆ ಅವಳನ್ನೇ ನೋಡುತ್ತಾ ನಿಂತಿದ್ದ.
” ನಿಮ್ಮ ಬಗ್ಗೆ ಹೇಳಿ ” ಎಂದಳು.
” ನಂಗೂ ಅಷ್ಟೇ, ನೀವು ಅಂತ ಹೇಳಬೇಕಂತ ಇಲ್ಲ.. ನೀನು ಅಂತಾನೆ ಕರೀರಿ ಪರವಾಗಿಲ್ಲ..” ಎಂದಾಗ,
” ನಂಗೆ ನಿಮ್ಮನ್ನ ಹಾಗೆ ಕರೆಯೋಕೆ ಕಂಫರ್ಟೆಬಲ್ ಆಗಲ್ಲ… ” ಎಂದು ಅದಿತಿ ಹೇಳಿದಾಗ,
“ಸರಿ. ನಿಂಗೆ ಹೇಗೆ ಇಷ್ಟನೋ ಹಾಗೆ ಕರಿ.. ನಂದೇನು ರಿಸ್ಟ್ರಿಕ್ಷನ್ ಇಲ್ಲ. ಮತ್ತೆ ನಾನ್ ಕೂಡ ನಿಮ್ ತರಾನೇ..sorry ನಿನ್ನ ತರಾನೇ ಮದುವೆ ಬಗ್ಗೆ ಏನೂ ಕನಸೆಲ್ಲ ಇರ್ಲಿಲ್ಲ. ಮೊದಲಿಂದಾನೂ ಅಪ್ಪನ ತರಾನೇ ದೊಡ್ಡ ಬಿಸಿನೆಸ್ ಮ್ಯಾನ್ ಆಗಬೇಕು ಅಂತ ಆಸೆ ಇಟ್ಕೊಂಡಿದ್ದೆ.. ಟೆಕ್ಸ್ಟೈಲ್ಸ್ ವ್ಯವಹಾರದ ಜೊತೆ ನನ್ನ ಸ್ವಂತ ಬಿಸಿನೆಸ್ ಶುರು ಮಾಡಬೇಕು… ಒಂದಿಷ್ಟು ಜನಕ್ಕೆ ಸಹಾಯ ಮಾಡಬೇಕು.. ಕೆಲಸ ಕೊಡಬೇಕು.. ಅನ್ನೋ ಗುರಿ ಇಟ್ಕೊಂಡಿದ್ದೆ ಅಷ್ಟೇ..ಇನ್ನೂ ಮದುವೆ ಬಗ್ಗೆ ಯೋಚನೆ ಮಾಡಿದ್ರೆ, ನನ್ನ ಹೆಂಡ್ತಿ ಆಗೋವಳು ನನ್ನ ಅಪ್ಪ ಅಮ್ಮನನ್ನು ಗೌರವಿಸಬೇಕು. ಮತ್ತೆ ನನ್ನ ಗುರಿ ಸಾಧನೆಗೆ ಸಪೋರ್ಟ್ ಮಾಡಬೇಕು.. ನನ್ನನ್ನ ತುಂಬಾ ಪ್ರೀತಿ ಮಾಡಬೇಕು.. ” ಎಂದು ಹೇಳಿದ ಸಣ್ಣ ನಗುವಿನೊಂದಿಗೆ. ಆ ನಗು ಅದಿತಿಗೆ ಕೂಡ ಪಸರಿಸಿತತು.
ಹೀಗೆಯೇ ಸುಮಾರು ಎರಡು ಗಂಟೆ ಅಲ್ಲೇ ಓಡಾಡುತ್ತಾ, ಅಲ್ಲಲ್ಲಿ ಕುಳಿತು ಅದು ಇದು ಮಾತನಾಡಿದರು.
ಇಬ್ಬರಿಗೂ ಶುರುವಿನಲ್ಲಿ ಇದ್ದ ಮೊದಲ ಮುಜುಗರದ ಪರದೆ ಸರಿದಿತ್ತು. ಅದಿತಿ ತನ್ನ ಮನೆಯನ್ನೆಲ್ಲ ತೋರಿಸಿದಳು. ಹಾಗೆಯೇ ತನ್ನ ರೂಮುಗಳನ್ನೆಲ್ಲ ತೋರಿಸುತ್ತಿರುವಾಗ,
” ಈಗ ಗೊತ್ತಾಯ್ತು.. ನಿಮಗೆ ಅಣ್ಣ, ಅಪ್ಪ, ಅಮ್ಮ, ಎಷ್ಟು ಇಷ್ಟ ಅಂತ.. ಈ ರೂಮ್ಗಳ ಡಿಸೈನ್ ನೋಡಿದ್ರೆ.. ಗೊತ್ತಾಗತ್ತೆ..” ಎಂದ ಅಭಿನವ್. ಅದಿತಿಗೆ ಒಮ್ಮೆಲೇ ತನ್ನ ಕನಸಿನ ಬಗೆಗೆ ನೆನಪಾಗಿತ್ತು.
‘ಅಭಿನವ್ ಗೆ ಇದರ ಬಗ್ಗೆ ಹೇಳಿಬಿಡಬೇಕು. ಇಲ್ಲವೆಂದರೆ ತಾನು ಮೋಸ ಮಾಡಿದ ಹಾಗೆ ಆಗುತ್ತದೆ ‘ ಎಂದು ಯೋಚಿಸಿ ಮುಖ ಕಪ್ಪಿಟ್ಟಿತು.
” ಏನ್ ಆಯ್ತು.. ಅದಿತಿ..ಅಪ್ಪ ಅಮ್ಮನ ಬಿಟ್ಟು ಹೋಗಬೇಕು.. ಅಂತ ನೆನಪಾಗಿ ಬೇಜಾರ್ ಆಯ್ತಾ.. ನೀನು ಬೇಜಾರ್ ಮಾಡ್ಕೋಬೇಡ.. ವಾರಕ್ಕೆ ಮೂರು ದಿನ ನಾವಿಬ್ರೂ ಇಲ್ಲಿಗೆ ಬಂದು ಹೋಗೋಣ…” ಎಂದು ಹೇಳಿದ ಅವನು, ಕ್ಷಣದಲ್ಲಿ ತಾನೇನು ಹೇಳಿಬಿಟ್ಟೆ ಎಂದು ತಿಳಿದು ನಾಲಿಗೆ ಕಚ್ಚಿ ದೃಷ್ಟಿ ಕೆಳಗೆ ಹಾಕಿದ. ತುಟಿಗಳಲ್ಲಿ ತುಂಟ ನಗುವೊಂದಿತ್ತು.
ಅದಿತಿ ಗೊಂದಲದಲ್ಲಿದ್ದಳು.
” ಕ್ಷಮಿಸು ಅದಿತಿ.. ನಂಗೆ ನೀನು ಇಷ್ಟ ಆಗಿದ್ದೀಯಾ..ನಿನ್ನ ಮತ್ತೆ ನಿಮ್ಮ ಫ್ಯಾಮಿಲಿ ಬಗ್ಗೆ ಕೇಳಿದ ಮೇಲೆ ನನ್ನ ಅಪ್ಪ ಅಮ್ಮಂಗೆ ಮೊದಲೇ ನೀನು ಹಿಡಿಸಿದ್ದೆ.. ಈಗ ನಿನ್ ಹತ್ರ ಇಷ್ಟೊತ್ತು ಮಾತಾಡಿದ ಮೇಲೆ ನಂಗೂ ನೀನು ಇಷ್ಟ ಆಗಿದ್ದೀಯಾ..ಅದಕ್ಕೆ ಹಾಗೆ ಹೇಳಿದೆ.. ನಿಂಗೂ ಒಪ್ಪಿಗೆ ಇದ್ರೆ ನಾವಿಬ್ರೂ ಜೊತೆಯಾಗೋಣ. ” ಎಂದು ಗಂಭೀರವಾಗಿ ಹೇಳಿದ.
ಈಗ ಅದಿತಿಗೆ ಇನ್ನೂ ಬೇಸರವಾಯಿತು.
‘ ಇವರು ಎಷ್ಟು ಒಳ್ಳೆಯವರು. ನಾನು ವಿಷಯ ಮುಚ್ಚಿಟ್ಟು.. ‘ ಎಂದು ಯೋಚಿಸುತ್ತಿರುವಾಗಲೇ , ಸುನಂದಾ ಅವರ ಕೂಗು ಕೇಳಿಸಿತ್ತು. ಅವಳ ಯೋಚನೆಯನ್ನು ಅಲ್ಲಿಗೆ ಮುಗಿಸಿದಳು.
” ಹಂ ಬಂದ್ವಿ. ” ಎಂದು ಹೇಳಿ,
” ಹೋಗೋಣ್ವಾ.. ” ಕೇಳಿದಳು.
ಅವನಿಗೆ ಅವಳ ಉತ್ತರ ಬೇಕೆನಿಸಿತ್ತು. ಆದರೆ ಅವಕಾಶ ಸಿಗಲಿಲ್ಲ. ಸರಿ ಎನ್ನುವಂತೆ ತಲೆಯಲ್ಲಾಡಿಸಿ ಅವಳನ್ನು ಹಿಂಬಾಲಿಸಿದ.
ಅವರಿಬ್ಬರೂ ಬಂದ ತಕ್ಷಣ,
” ಎಲ್ಲ ಸರಿಯಾಗಿ ಮಾತಾಡ್ಕೊಂಡ್ರ… ನಾವ್ ಅಪ್ಪ ಅಮ್ಮ ಅಂತು ಒಳ್ಳೆ ಫ್ರೆಂಡ್ಸ್ ಆಗ್ಬಿಟ್ಟಿದ್ದೀವಿ.. ಇನ್ನೂ ನಿಮ್ಮಿಬ್ಬರ ಅಭಿಪ್ರಾಯ ಗೊತ್ತಾದ್ರೆ ಮುಂದಿನ ತಯಾರಿ ಮಾಡ್ಬೋದು.. ” ಎಂದು ನಗುತ್ತಾ ಕೇಳಿದರು ಗೀತಾ.
ಅಭಿನವ್ ನಗುತ್ತಾ ಹಾಲಿಗೆ ಹೋಗಿ ಅಪ್ಪನ ಬಳಿ ಕುಳಿತ.
ಅದಿತಿ ಅಮ್ಮನ ಬಳಿ ಬಂದು ನಿಂತಳು.
” ಅದಿತಿ, ನಿನ್ನ ಅಮ್ಮ ನಿನ್ನ ಬಗ್ಗೆ ಎಲ್ಲಾ ಹೇಳಿದ್ರು.. ನಂಗಂತೂ ನೀನು ತುಂಬಾನೇ ಹಿಡಿಸಿದ್ಯಾ.. ಬೆಳಿಗ್ಗೆ ಬಂದಾಗ ನಿನ್ ಹತ್ರ ಮಾತಾಡಿದ್ಮೇಲೆ ನಂಗೆ ನಿನ್ ಇಷ್ಟ ಆಗಿದ್ದೆ.. ಈಗಂತೂ ನೀನೇ ನನ್ನ ಸೊಸೆ ಆಗ್ಲಿ ಅಂತ ಹೇಳ್ತೀನಿ… ” ಎಂದು ಅದಿತಿಯ ಕೈ ಹಿಡಿದು ಗೀತಾ ಸಂತೋಷದಿಂದ ಮಾತನಾಡಿದರು.
ಸುನಂದಾ ಅದಿತಿಯ ಮುಖವನ್ನು ನೋಡಿದಳು. ಅವಳ ಮುಖದಲ್ಲಿರುವ ಗೊಂದಲವನ್ನು ಗಮನಿಸಿದವರಿಗೆ ಒಮ್ಮೆ ಗಾಬರಿಯಾಗಿತ್ತು.
” ಗೀತಾ ಅವರೇ, ಅವಳಿಗೆ ಸ್ವಲ್ಪ ಸಮಯ ಬೇಕು ಅನಿಸ್ತಾ ಇದೆ.. ನಾವ್ ನಿಮ್ಗೆ ತಿಳಿಸ್ತೀವಿ.. ಈಗ ಊಟ ಮಾಡೋಣ…” ಎಂದಳು ಸುನಂದ.
” ಸರಿ. ನಮಗೂ ಆಮೇಲೆ ಬೇಗ ಹೊರಡಬೇಕು. ಇಲ್ಲಾಂದ್ರೆ ಮನೆಗೆ ಹೋಗುವ ತನಕ ಸಂಜೆ ಆಗಿಬಿಡುತ್ತೆ.. ನಾನು ಎಲ್ಲರನ್ನೂ ಕರೀತೀನಿ.. ” ಎನ್ನುತ್ತಾ ಗೀತಾ ಅಲ್ಲಿಂದ ಹೊರ ನಡೆದರು.
” ಅದಿತಿ, ನಿಂಗಿಷ್ಟ ಅದ್ನ ಹುಡುಗ.. ಮತ್ತೆ ನೀನೇನು ಅದರ ಬಗ್ಗೆ ಹೇಳಿಲ್ಲ ತಾನೆ… ” ಕಳವಳದಿಂದ ಕೇಳಿದಳು ಸುನಂದ.
” ಅಮ್ಮ, ಅಭಿನವ್ ತುಂಬಾ ಒಳ್ಳೆಯವರು.. ಅವರತ್ರ ಹೀಗೆ ವಿಷಯ ಮುಚ್ಚಿಡೋಕೆ ಕಷ್ಟ ಆಗ್ತಿದೆ. ” ಎಂದು ಬೇಜಾರಿನಿಂದ ಹೇಳಿದಳು ಅವಳು.
” ಹಾಗಾದ್ರೆ ನಿಂಗ್ ಅವ್ನ್ ಇಷ್ಟ ಆದ ಅಂತ ಆಯ್ತು… ನೋಡು ಅದಿತಿ ಈಗ ಅದರ ಬಗ್ಗೆ ಮಾತಾಡೋ ಸಮಯ ಅಲ್ಲ.. ಅವರೆಲ್ಲರೂ ಇಲ್ಲೇ ಇದ್ದಾರೆ.. ಮತ್ತೆ ನಾವೇನೂ ತಪ್ಪು ಮಾಡ್ತಾ ಇಲ್ಲ… ನಿನ್ನ ಅಭಿಪ್ರಾಯವನ್ನು ಸರಿಯಾಗಿ ಹೇಳು ಅಷ್ಟೇ.. ನಂಗೆ ನಿಮ್ಮಪ್ಪಂಗೆ ಸಮಾಧಾನ ಆಗುತ್ತೆ.. ” ಎಂದಳು ಸುನಂದಾ.
ಕೊನೆಯ ಮಾತುಗಳು ಅದಿತಿಯನ್ನು ಮತ್ತಷ್ಟು ದುಃಖಕ್ಕೆ ಈಡು ಮಾಡಿತ್ತು. ಒಂದು ಕಡೆ ಅಪ್ಪ ಅಮ್ಮನ ಖುಷಿ, ಇನ್ನೊಂದು ಕಡೆ ತನಗೆ ಇಷ್ಟವಾದ ಅಭಿನವ್ ಗೆ ಸುಳ್ಳು ಹೇಳುತ್ತಿದ್ದೇನೆ ಎಂಬ ಭಾವನೆ,
ಕೊನೆಗೆ ಅವಳು ಅಪ್ಪ ಅಮ್ಮನ ಮಾತಿಗೆ ಕಟ್ಟು ಬಿದ್ದಳು.
” ಅಮ್ಮ, ಸ್ವಲ್ಪ ಸಮಯ ಕೊಡಿ. ಹೇಳ್ತೀನಿ.. ” ಎಂದಳು ಅದಿತಿ.
ಅಷ್ಟರಲ್ಲಿ ಎಲ್ಲರೂ ಊಟಕ್ಕೆ ಕುಳಿತಿದ್ದರು. ಅದಿತಿ ಮತ್ತು ಸುನಂದಾ ಊಟ ಬಡಿಸಿದರು. ಅಭಿನವ್ ಆಗಲೇ ತನಗೆ ಒಪ್ಪಿಗೆಯಾಗಿರುವ ವಿಷಯವನ್ನು ತಿಳಿಸಿದ್ದ. ಅವರೆಲ್ಲರ ಊಟವಾದ ಮೇಲೆ ಅದಿತಿ ಮತ್ತು ಸುನಂದ ಊಟಕ್ಕೆ ಕುಳಿತರು. ಅದಿತಿಗೂ ಅಭಿನವ್ ಇಷ್ಟ ಆಗಿದ್ದ. ಈ ಎರಡು ಮೂರು ಗಂಟೆಗಳಲ್ಲಿ ಅವನ ವ್ಯಕ್ತಿತ್ವ ಸ್ವಲ್ಪ ಮಟ್ಟಿಗೆ ಅರ್ಥವಾಗಿತ್ತು ಅವಳಿಗೆ.
‘ ತನ್ನ ಬಗ್ಗೆ ತನ್ನ ಮನೆಯವರ ಬಗ್ಗೆ ಗೌರವವಿದೆ. ಅವರ ಮನೆಯವರು ಕೂಡ ಒಳ್ಳೆಯವರೇ. ಯಾರಿಗೂ ಕೇಡು ಬಯಸುವವರಲ್ಲ. ತಾನು ಹೇಗೆ ಜೀವನವನ್ನು ಮಾಡಬೇಕೆಂದು ಅಂದುಕೊಂಡಿದ್ದೇನೋ, ಇವರ ಜೊತೆ ಅದೇ ತರಹ ತಾನು ಇರಬಹುದು. ಆದರೆ ಹೇಗಾದರೂ ಮಾಡಿ ಮದುವೆಗೆ ಮುಂಚೆ ಅವರಿಗೆ ಎಲ್ಲಾ ವಿಷಯವನ್ನು ತಿಳಿಸಿ ಬಿಡಬೇಕು. ಅದೇ ಸರಿಯಾದ ನಿರ್ಧಾರ. ಅಪ್ಪ ಅಮ್ಮನಿಗೆ ಹೇಳಿದರೆ ಅವರು ಖಂಡಿತ ನಿರಾಕರಿಸುತ್ತಾರೆ. ಅವರಿಗೆ ತಿಳಿಯದಂತೆ ತಾನು ಹೇಳಿಬಿಡಬೇಕು. ಅಭಿನವ್ ತನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ. ‘ ಎಂದು ಯೋಚಿಸಿದಳು ಅದಿತಿ.
” ಅದಿತಿ, ಏನು ಯೋಚನೆ ಮಾಡ್ತಾ ಇದ್ದೀಯಾ.. ಊಟ ಮಾಡು. ಅವಾಗ್ಲಿಂದ ನೋಡ್ತಾ ಇದೀನಿ.. ನೀನೊಂದು ತುತ್ತು ಕೂಡ ಬಾಯಿಗೆ ಹಾಕಿಲ್ಲ… ಅಷ್ಟೊಂದು ಚಿಂತೆ ಮಾಡ್ಬೇಡ.. ನಿನಗೆ ಒತ್ತಡ ಕೊಟ್ಟು ಮದುವೆ ಮಾಡಿಸಬೇಕು ಅನ್ನೋದು ನಮ್ ಮನ್ಸಲ್ಲಿ ಇಲ್ಲ… ” ಎಂದು ಸ್ವಲ್ಪ ಬೇಜಾರಿನಿಂದ ಹೇಳಿದಳು ಸುನಂದ.
” ಅಮ್ಮ.. ನಂಗೆ ಗೊತ್ತಿದೆ. ನೀವು ನನ್ನ ಎಷ್ಟು ಪ್ರೀತಿ ಮಾಡ್ತೀರಾ ಅಂತ.. ನಂಗೆ ಅಭಿನವ್ ಇಷ್ಟ ಆಗಿದಾರೆ. ನೀವು ಅವರಿಗೆ ತಿಳಿಸಬಹುದು… ” ಎಂದು ಹೇಳಿ ಊಟ ಮಾಡಲು ಶುರು ಮಾಡಿದಳು ಅದಿತಿ.
ಸುನಂದಾಗೆ ಅತ್ಯಂತ ಸಂತೋಷವಾಯಿತು. ಸರಸರನೇ ಊಟ ಮಾಡಿ, ಮೊದಲು ಹೋಗಿ ರಾಜೇಂದ್ರರಿಗೆ ವಿಷಯ ತಿಳಿಸಿದಳು. ಎಲ್ಲರಿಗೂ ವಿಷಯ ತಿಳಿದ ಮೇಲೆ,
” ರಾಜೇಂದ್ರ ಅವರೇ, ನಮಗಂತೂ ನಿಮ್ಮ ಮಗಳು ಬೆಳಗ್ಗೆನೇ ಹಿಡ್ಸಿದ್ಲು… ಇನ್ನೇನೂ ನಮ್ಮ ಮಕ್ಕಳಿಗೂ ಒಬ್ಬರಿಗೊಬ್ರಿಗೆ ಒಪ್ಪಿಗೆ ಅಂತ ಆಯ್ತು… ಮುಂದಿನ ಮಾತು ಕಥೆ ಮಾಡೋಣ ಹಾಗಾದ್ರೆ..” ಎಂದರು ಶ್ಯಾಮ್ ಸುಂದರ್.
” ಸರಿ. ರಾಯರೇ, ನಾವು ಪುರೋಹಿತರ ಹತ್ತಿರ ಮಾತಾಡ್ತೀವಿ.. ನಿಶ್ಚಿತಾರ್ಥಕ್ಕೆ ಒಂದು ಒಳ್ಳೆ ಮುಹೂರ್ತ ಯಾವಾಗ್ ಇದೆ ಅಂತ.. ನಾಳೇನೇ ನಿಮಗೆ ತಿಳಿಸ್ತೀವಿ. ” ಎಂದು ರಾಜೇಂದ್ರ ಹೇಳಿದಾಗ,
“ರಾಜೇಂದ್ರ ಅವರೇ ನೀವು ತಪ್ಪು ತಿಳ್ಕೊಳಲ್ಲ ಅಂದ್ರೆ ಒಂದು ವಿಷಯ ಹೇಳಬೇಕಿತ್ತು..” ಎಂದರು ಶಾಮ್ ಸುಂದರ್,
ರಾಜೇಂದ್ರ ಮತ್ತು ಗೀತಾ ಪ್ರಶ್ನಾರ್ಥಕವಾಗಿ ಅವರನ್ನೇ ನೋಡಿದ್ದರು.
” ಗಾಬರಿಯಾಗಬೇಡಿ. ನಿಶ್ಚಿತಾರ್ಥನ ಇಲ್ಲೇ ನಿಮ್ಮನೇಲೇ ಇಟ್ಟುಕೊಳ್ಳೋಣ.. ಆದರೆ ಮದುವೆನಾ ನಮ್ಮೂರಲ್ಲೇ ಇಟ್ಕೊಂಡ್ರೆ ಚೆನ್ನಾಗಿರ್ತಿತ್ತು ಅಂತ.. ಅಂದ್ರೆ ನಮ್ಮ ಬಂಧು ಬಳಗ ಎಲ್ಲಾ ದೊಡ್ಡದು.. ಮತ್ತೆ ಈ ಬಿಸಿನೆಸ್ ಅಂದ್ರೆ ಗೊತ್ತಲ್ವಾ.. ತುಂಬಾ ಜನರನ್ನು ಕರಿಲೇಬೇಕಾಗುತ್ತೆ.. ನಮಗೆ ಜಾಸ್ತಿ ಫ್ರೆಂಡ್ಸ್ ಮತ್ತೆ ಪಾರ್ಟ್ನರ್ ಎಲ್ಲಾ ಅಲ್ಲೇ ಇರೋದು.. ಎಲ್ಲರೂ ಇಲ್ಲಿಗೆ ಬರೋದು, ಇಲ್ಲಿ ವ್ಯವಸ್ಥೆ ಮಾಡೋದು ಅಂದ್ರೆ ಕಷ್ಟ ಆಗ್ಬಿಡುತ್ತೆ ಅಂತ.. ನಮ್ಮನ್ನ ಅನ್ಯತಾ ಭಾವಿಸಬೇಡಿ.. ನಾವು ಹೆಚ್ಚು ನೀವು ಕಮ್ಮಿ ಅಂತ ಹೇಳಿದ್ದಲ್ಲ…” ಎಂದು ಸ್ವಲ್ಪ ಹಿಂಜರಿಯುತ್ತಲೇ ಹೇಳಿದರು ಶ್ಯಾಮ್ ಸುಂದರ್.
ರಾಜೇಂದ್ರ ಒಮ್ಮೆ ನಕ್ಕು,
” ಅಯ್ಯೋ ಇಷ್ಟೇನಾ… ಇದರಲ್ಲಿ ತಪ್ಪು ತಿಳಿದುಕೊಳ್ಳುವುದು ಏನಿದೆ.. ನಮಗೂ ಅರ್ಥ ಆಗುತ್ತೆ.. ನಿಜ ಹೇಳ್ಬೇಕಂದ್ರೆ ನಾನೇ ಇದನ್ನ ನಿಮ್ಮ ಹತ್ತಿರ ಕೇಳಬೇಕು ಅನ್ಕೊಂಡಿದ್ದೆ.. ಆದರೆ ನೀವೆಲ್ಲಿ ಒಂದು ಮದ್ವೆನೂ ಮಾಡ್ಕೊಡೋಕಾಗಲ್ಲ ಅನ್ಕೊಂಡ್ಬಿಟ್ರೆ ಅಂತಾ ಸುಮ್ಮನಾಗಿದ್ದೆ.. ಧಾರಾಳವಾಗಿ ನಾವು ಅಲ್ಲೇ ಮದುವೆ ಮಾಡ್ಕೊಡ್ತೀವಿ..” ಎಂದರು ರಾಜೇಂದ್ರ.
” ತುಂಬಾ ಥ್ಯಾಂಕ್ಸ್.. ಆದ್ರೆ ನೀವು ಮದುವೆ ಮಾಡ್ಕೊಡ್ತೀನಿ ಅಂತ ಹೇಳಬೇಡಿ.. ಇದು ಕೂಡ ಅಷ್ಟೇ, ನಾವು ನಿಮ್ಮನ್ನ ಹೀಯಾಳಿಸೋಕೆ ಹೇಳ್ತಾ ಇಲ್ಲ. ನಮ್ಮ ಕಡೆಯಿಂದ ತುಂಬಾ ಜನ ಬರ್ತಾರೆ.. ಮತ್ತೆ ನಮಗೂ ಅತಿಥಿ ಸತ್ಕಾರ ಮಾಡಬೇಕು ಅಂತ ಇದೆ.. ಎಷ್ಟೋ ವರ್ಷ ಆದ್ಮೇಲೆ ನಮ್ಮನೇಲಿ ಒಂದು ಶುಭಕಾರ್ಯ ನಡಿತಾ ಇದೆ… ಅದಿಕ್ಕೆ ಇಬ್ಬರು ಸೇರಿ ಮದುವೆ ಮಾಡೋಣ… ಅಂತ ಹೇಳಿ ” ಎಂದರು ಶ್ಯಾಮ್ ಸುಂದರ್.
ಒಮ್ಮೆ ರಾಜೇಂದ್ರ ನಿರಾಕರಿಸಿದರು. ಆದರೆ ಶಾಮ್ ಸುಂದರ್ ತಮ್ಮ ವಾದವನ್ನು ಮುಂದುವರೆಸಿ ಅದರಲ್ಲಿ ಜಯಶಾಲಿಯಾದರು.
” ಸರಿ ಹಾಗಾದ್ರೆ, ನಾವಿನ್ನು ಹೊರಡ್ತೀವಿ.. ಆಗಲೇ ಲೇಟ್ ಆಗಿದೆ.. ಇನ್ನು ತಡ ಮಾಡಿದ್ರೆ ರಾತ್ರಿ ಆಗ್ಬಿಡುತ್ತೆ ಮನೆಗೆ ಹೋಗೋಕೆ…ಅನುಮತಿ ಕೊಡಿ ” ಎಂದು ಶ್ಯಾಮ್ ಸುಂದರ್ ಹೊರಡಲಣಿಯಾದರು. ಗೀತಾ ಒಮ್ಮೆ ಅದಿತಿಯನ್ನು ಮಾತನಾಡಿಸಿ, ಸುನಂದಾ ಗೆ ಹೋಗಿ ಬರುತ್ತೇನೆ ಎಂದು ಹೊರಟರು. ಅಭಿನವ್ ಅದಿತಿಯ ಮಧ್ಯೆ ಒಂದು ಸಣ್ಣ ನಗು ವಿನಿಮಯವಾಯಿತು.
ಜೋಡಿ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎನ್ನುತ್ತಾರೆ. ಹಾಗೆಯೇ ಅಭಿನವ್ ಮತ್ತು ಅದಿತಿ ಜೋಡಿಯಾಗಬೇಕೆಂದು ನಿಶ್ಚಯವಾಗಿದೆ ಅನ್ನುವಂತಿತ್ತು. ಬಹಳ ದೂರವಲ್ಲ ಎಂದರೂ ತೀರ ಹತ್ತಿರವೇನೂ ಅಲ್ಲ. ಸಕಲೇಶಪುರದಿಂದ ಮೈಸೂರಿಗೆ ಅವರೆಲ್ಲಾ ಅದಿತಿಯನ್ನು ನೋಡಲು ಬಂದಿದ್ದರು. ಮನೆಯವರಿಗೆಲ್ಲಾ ಮೊದಲೇ ಒಬ್ಬರಿಗೊಬ್ಬರು ತುಂಬಾ ಹಿಡಿಸಿದ್ದರು. ಈಗ ಅದಿತಿ ಅಭಿನವ್ ತಮ್ಮ ಬಾಳಿನ ಮುಂದಿನ ಪಯಣದಲ್ಲಿ ಒಟ್ಟಿಗೆ ಪ್ರಯಾಣ ಮಾಡೋಣವೆಂದು ನಿರ್ಧರಿಸಿದ್ದರು. ಎಲ್ಲಿಂದ ಎಲ್ಲಿಗೋ ಬಂಧ ಬೆಸೆದಿತ್ತು.
( ಮುಂದುವರೆಯುವುದು 🌱 )
—————————-🌱—————————-
Swipe left/right or tap the sides to turn pages