ನನ್ನವಳು – 5
ನನ್ನವಳು – ೫
ಸಕಲೇಶಪುರಕ್ಕೆ ವಾಪಸ್ ಹೊರಟರು. ಅಭಿನವ್ ಕುಟುಂಬ.
” ರೀ , ಹುಡುಗಿ ತುಂಬಾ ಲಕ್ಷಣವಾಗಿದಾಳೆ ಅಲ್ವಾ..ಗುಣನೂ ಅಷ್ಟೇ, ನಮ್ಮೆಲ್ಲರ ಜೊತೆ ಮಾತಾಡಿದ ರೀತಿಯಲ್ಲೇ ಗೊತ್ತಾಗತ್ತೆ ಒಳ್ಳೆ ಸಂಸ್ಕಾರ ಇದೆ ಅಂತ.ನಂಗೆ ತುಂಬಾನೇ ಇಷ್ಟ ಆದಳು. ಇನ್ನು ನಮ್ಮ ಅಭಿನವ್ ಜೊತೆನು ಚೆನ್ನಾಗಿ ಹೊಂದಿಕೊಂಡು ಖುಷಿ ಇಂದ ಇದ್ದುಬಿಟ್ರೆ ಸಾಕು.. ” ಎಂದರು ಗೀತಾ.
” ಹೊಂದಿಕೊಂಡು ಹೋಗದೆ ಏನು ಗೀತಾ, ನಮ್ಮ ಅಭಿ ಮುಖ ನೋಡಿದ್ರೆ ಗೊತ್ತಾಗತ್ತೆ, ಒಬ್ಬರೊನ್ನೊಬ್ಬರು ಸಂತೋಷದಿಂದ ಒಪ್ಪಿದಾರೆ ಅಂತ… ” ಎಂದು ನಕ್ಕರು ಶ್ಯಾಮ್ ಸುಂದರ್. ಅಭಿನವ್ ಮುಖದಲ್ಲಿ ಮಂದಹಾಸವಿತ್ತು.
ಇತ್ತ ಅದಿತಿ ಒಂದು ನಿರ್ಧಾರವನ್ನು ಮಾಡಿ, ಅದನ್ನು ಆದಷ್ಟು ಬೇಗ ಬೇಗ ಕಾರ್ಯಗತ ಮಾಡಬೇಕೆಂದುಕೊಂಡಳು. ಅದೊಂದು ಮಾಡಿದರೆ, ತಾನು ಯಾವ ಗೊಂದಲ, ಪಶ್ಚಾತಾಪವಿಲ್ಲದೆ ಮದುವೆಯಾಗಿ ಅಭಿನವ್ ಜೊತೆ ಸಂತೋಷದ ಜೀವನ ನಡೆಸಬಹುದೆಂದು ಅಂದುಕೊಂಡು ಸ್ವಲ್ಪ ಸಮಾಧಾನದಿಂದ ಇದ್ದಳು. ಸಂಜೆಯೇ ರಾಜೇಂದ್ರ, ಪುರೋಹಿತರ ಹತ್ತಿರ ಹೋಗಿ ಮಾತನಾಡಿ ಬಂದ. ಎರಡು ವಾರದಲ್ಲಿ ನಿಶ್ಚಿತಾರ್ಥ ಎಂದು ಎಲ್ಲರೂ ಖುಷಿ ಪಟ್ಟರು.
” ಮುದ್ದು ತಂಗಿ, ನೋಡು ಇನ್ನು ಕಣ್ಣು ಮುಚ್ಚಿ ಬಿಡೋದ್ರೊಳಗೆ ನೀನು ಸಕಲೇಶಪುರಕ್ಕೆ ಹೋಗಿರ್ತೀಯ ” ಎಂದ ಮನೋಜ್.
” ಅದೇ ಬೇಜಾರ್ ಆಗ್ತಿದೆ, ಅಣ್ಣ ನಿಮ್ಮನ್ನೆಲ್ಲ ಬಿಟ್ಟು ಅಷ್ಟು ದೂರ ಹೋಗಬೇಕು..ಮತ್ತೆ ಅತ್ತಿಗೆ ಇಲ್ಲಿಗೆ ಬರುವಾಗ ನಾನಿರಲ್ಲ..” ಎಂದು ಬೇಸರದಿಂದ ಹೇಳಿದಳು.
” ಅದಿತಿ, ಎನ್ ಮಾಡೋಕು ಆಗಲ್ಲ. ಹೆಣ್ಣು ಮಕ್ಕಳು ಒಂದಲ್ಲ ಒಂದು ದಿನ ಒಂದು ಮನೆಯಿಂದ ಮತ್ತೊಂದು ಮನೆಗೆ ಹೋಗಲೇಬೇಕು.. ಅಲ್ವಾ..ನೀನು ಬೇಜಾರು ಯಾಕೆ ಮಾಡ್ಕೊಳ್ತೀಯ.. ನೋಡು ನಿಂಗೆ ಎರಡೆರಡು ಮನೆ, ಎರಡೆರಡು ಅಪ್ಪ ಅಮ್ಮ.. ಎರಡೂ ಕಡೆ ಮಗಳಾಗೋ ಅವಕಾಶ. ಖುಷಿ ಇಂದ ಇರಬೇಕು ನೀನು. ಅಭಿನವ್ ಮನೆಯವರಂತೂ ತುಂಬಾ ಸಂಸ್ಕಾರವಂತರು ಮತ್ತೆ ಈಗಿನ ಕಾಲದವರು. ನಿಂಗೆ ಯಾವುದೇ ಸಮಸ್ಯೆ ಅಲ್ಲಿ ಆಗಲ್ಲ ಅನ್ನೋ ನಂಬಿಕೆ ನನಗಿದೆ. ” ಎಂದು ರಾಜೇಂದ್ರ ಸಮಾಧಾನ ಮಾಡಿದರು.
ತಂಗಿಯ ಬೇಸರದ ಮುಖ ನೋಡಿ ಅವಳ ಹತ್ತಿರ ಬಂದು ಕುಳಿತು,
“ಅದಿತಿ, ಯಾಕೆ ಬಿಟ್ಟು ಹೋಗ್ತಾ ಇದೀಯಾ ಅಂದುಕೊಳ್ಳುತೀಯ..ಇದು ಯಾವತ್ತಿದ್ದರೂ ನಿನ್ನ ಮನೆನೇ. ನಿಂಗೆ ಯಾವಾಗ ನಮ್ಮನ್ನೆಲ್ಲ ನೋಡ್ಬೇಕು ಅನ್ಸುತ್ತೋ ಅವಾಗ ಇಲ್ಲಿಗೆ ಬಂದ್ರೆ ಆಯ್ತು. ಸಕಲೇಶಪುರ ಏನು ವಿದೇಶನಾ….ಅದಕ್ಕೆಲ್ಲ ಬೇಜಾರು ಮಾಡ್ಕೋ ಬೇಡ. ಪುಟ್ಟಿ.. ” ಎಂದ. ಅದಿತಿ ಮನೋಜನನ್ನು ಅಪ್ಪಿಕೊಂಡಳು.
” ಸರಿ ಈಗ ಎಲ್ಲರೂ ಊಟಕ್ಕೆ ಬನ್ನಿ. ಊಟ ಮಾಡಿ ಬೇಗ ಮಲ್ಕೋಳೋಣ.. ನಾಳೆ ನಮಗೆ ಪೇಟೆಗೆ ಹೋಗಿ ನಿಶ್ಚಿತಾರ್ಥಕ್ಕೆ ಏನೇನು ಬೇಕು..ಎಲ್ಲ ಶಾಪಿಂಗ್ ಮಾಡಬೇಕು. ನಡೀರಿ ಹೊತ್ತಾಯಿತು. ” ಎಂದು ಸುನಂದಾ ಎಲ್ಲರನ್ನೂ ಕರೆದುಕೊಂಡು ಡೈನಿಂಗ್ ಹಾಲ್ ಗೆ ಹೊರಟಳು.
ಊಟದ ನಂತರ ಅದಿತಿ ವಾಕಿಂಗ್ ಮಾಡೋಣವೆಂದು ಮನೆಯ ಹೊರಗಡೆ ಬಂದಳು. ಅದು ಅದಿತಿಯ ರೂಢಿಯಾಗಿತ್ತು. ಊಟದ ನಂತರ ಮನೆಯ ಮುಂದಿನ ಗಾರ್ಡನ್ ಅಲ್ಲಿ ಸ್ವಲ್ಪ ಹೊತ್ತು ವಿಹರಿಸುತ್ತಿದ್ದಳು. ರಂಗಣ್ಣ ಅವಳ ಕಾವಲಾಗಿ ಮನೆಯ ಮುಂದೆಯೇ ಅಲ್ಲಿ ಕುಳಿತಿರುತ್ತಿದ್ದ. ಹಾಗೆಯೇ ಅಲ್ಲಿಗೆ ಬಂದ ರಂಗಣ್ಣ,
” ಚಿಕ್ಕಮ್ಮನೋರೆ, ಇವತ್ತು ನಾನು ನಿಮ್ಮ ಜೊತೆ ವಾಕಿಂಗ್ ಬರಲಾ ? ” ಕೇಳಿದ ರಂಗಣ್ಣ.
ಅದಿತಿ ಅವನನ್ನು ಒಮ್ಮೆ ಆಶ್ಚರ್ಯದಿಂದ ನೋಡಿ,
” ಅಯ್ಯೋ ರಂಗಣ್ಣ, ಇದ್ನೆಲ್ಲ ಯಾರಾದ್ರೂ ಕೇಳ್ತಾರಾ..ನೀನು ದಿನಾಲೂ ನನ್ನ ಜೊತೆ ಬಂದ್ರೆ ನಂಗೆ ಖುಷಿನೆ ಆಗತ್ತೆ..ಆದರೆ ನೀನು ದಿನ ಇಡೀ ಕೆಲಸ ಮಾಡಿ ಸುಸ್ತಾಗಿರ್ತೀಯ ಅಂತ ನಾನು ನಿನ್ನ ಕರಿಯಲ್ಲ ಅಷ್ಟೇ..” ಎಂದು ನಗುತ್ತಾ ಹೇಳಿದಳು.
ರಂಗಣ್ಣ ಕೂಡ ನಗುತ್ತಾ ಅವಳೊಡನೆ ವಾಕಿಂಗ್ ಹೊರಟ.
ಸ್ವಲ್ಪ ಸಮಯದ ನಂತರ,
” ಚಿಕ್ಕಮ್ಮೋರೇ, ನಿಮಗೆ ಹುಡುಗ ನಿಜವಾಗ್ಲೂ ಇಷ್ಟ ಆದ್ನ.. ಅವರಿಗೂ ನೀವು ಇಷ್ಟ ಆದ್ರಾ?..” ಕೇಳಿದ ಮೆಲ್ಲಗೆ.
” ರಂಗಣ್ಣ, ನಿಂಗೆ ಎಷ್ಟು ಹೇಳಿದ್ರು ನನ್ನ ಚಿಕ್ಕಮ್ಮ ಅಂತೀಯಾ.. ನಾಳೆ ಅಭಿಗೆ ಚಿಕ್ಕಪ್ಪೊನೊರೆ ಅಂತೀಯ. ? ” ಎಂದು ಜೋರಾಗಿ ನಕ್ಕಳು.
” ಅವರು ನಂಗೆ ಯಾಜಮಾನ್ರೆ ಆಗ್ತಾರೆ.. ಅವರಿಗೆ ಯಜಮಾನರೇ ಅಂತಾನೆ ಕರೀತೀನಿ..” ಎಂದ.
” ಸರಿ.. ಬಿಡು. ನಿನ್ನಿಷ್ಟ ನೀನು ನನ್ನ ಮಾತೆಲ್ಲಿ ಕೇಳ್ತೀಯಾ.. ಮತ್ತೆ, ಯಾಕ್ ಈ ತರ ಪ್ರಶ್ನೆ ಕೇಳ್ತಾ ಇದೀಯಾ..” ಗಂಭೀರವಾಗಿ ಕೇಳಿದ್ದಳು ಅದಿತಿ.
” ಅಲ್ಲ…ಅದು…ಇಷ್ಟು ದಿನ ಬಂದವರೆಲ್ಲ ನಿಮ್ಮ ಬಗ್ಗೆ ತಿಳಿದು ಒಂದೊಂದೇ ನೆಪ ಹೇಳಿ ಬೇಡ ಅಂದಿದ್ರಲ್ವ..ಅದ್ಕೆ ಕೇಳಿದೆ ಅಷ್ಟೇ..” ಎಂದ ರಂಗಣ್ಣ.
” ನಂಗೆ ಅವ್ರು ಇಷ್ಟ ಆಗಿದ್ದಾರೆ ರಂಗಣ್ಣ. ತುಂಬಾ ಒಳ್ಳೆಯವರು ಅವರು..ಅವರಿಗೂ ನಾನು ಒಪ್ಪಿಗೆ ಅಂತ ನಾನು ಒಪ್ಪೋ ಮುಂಚೆನೇ ಹೇಳಿದ್ರು..ಆದ್ರೆ ಅವರಿಗೆ ನನ್ನ ಎಲ್ಲಾ ವಿಷ್ಯ ಗೊತ್ತಿಲ್ಲ. ” ಎಂದು ಹೇಳಿದ ಕೂಡಲೇ,
” ಯಜಮಾನ್ರು ಮತ್ತೆ ಅಮ್ಮ ಹೇಳಬೇಡ ಅಂದ್ರಾ ” ಎಂದು ಥಟ್ಟನೆ ಕೇಳಿದ. ಅದಿತಿಗೆ ಆಶ್ಚರ್ಯವಾಯಿತು.
“ನಿಂಗೆ ಹೇಗೆ ಗೊತ್ತಾಯ್ತು ? ರಂಗಣ್ಣ. ಅಪ್ಪ ಅಮ್ಮ ಹೇಳಬೇಡ ಅಂದ್ರು.. ಅವ್ರು ತುಂಬಾನೇ ಬೇಜಾರು ಮಾಡ್ಕೊಂಡ್ರು.. ನಂಗೆ ಅವರ ಮನಸಿಗೆ ನೋವಾದ್ರೆ ತಡಕೊಳೋಕೆ ಆಗಲ್ಲ.. ರಂಗಣ್ಣ.. ಅದ್ಕೆ ಬಾಯಿ ತುದಿಯಲ್ಲಿ ವಿಷಯ ಬಂದ್ರೂ ಆಮೇಲೆ ಹೇಳಿಲ್ಲ..” ಎಂದು ಅವನನ್ನೇ ನೋಡಿದಳು.
” ಅದು ಹಾಗೆ ಊಹೆ ಮಾಡಿದೆ..ಅವರಿಗೆ ನಿಮ್ಮ ಮದುವೆ ಬಗ್ಗೆ ಚಿಂತೆ ಆಗಿದ್ಯಲ.. ಅದಕ್ಕೆ ಹೀಗೆ ಹೇಳಿರಬಹುದು ಅಂತ.. ಅಷ್ಟೇ..” ಎಂದ. ಅವನ ಮುಖದಲ್ಲಿ ಏನೋ ಒಂದು ಆಂತಕ ಕಂಡಿತ್ತು. ಅದಿತಿ ಗಮನಿಸಿದಳು ಆದರೆ ಅರ್ಥವಾಗಲಿಲ್ಲ.
ಅವಳು ಮುಂದೆ ಮಾತನಾಡುವುದಕ್ಕಿಂತ ಮುಂಚೆಯೇ,
” ಚಿಕ್ಕಮೋವ್ರೆ, ನೀವು ತಪ್ಪು ತಿಳಿಯಲ್ಲ ಅಂದ್ರೆ ನಾನೊಂದು ಮಾತು ಹೇಳ್.ಲಾ..? ” ಕೇಳಿದ ರಂಗಣ್ಣ.
” ಇದೇನು ರಂಗಣ್ಣ ಪೀಠಿಕೆ ಹಾಕ್ತಾ ಇದೀಯಾ.. ನೀನು ಏನ್ ಹೇಳಿದ್ರೂ ನನಗೆ ಬೇಜಾರ್ ಆಗಲ್ಲ.. ಹೇಳು ” ಎಂದಳು.
” ನೀವು ಈ ವಿಷ್ಯಾನ ಅವರಿಗೆ ಹೇಳಿಬಿಡಿ.. ಹೇಗಾದ್ರೂ ಮಾಡಿ.. ಮುಚ್ಚಿಡೋದು ಸರಿ ಅಲ್ಲ ಅನ್ಸತ್ತೆ.. ” ಎಂದ ರಂಗಣ್ಣ.
” ನಾನು ಅದನ್ನೇ ಯೋಚನೆ ಮಾಡಿದೀನಿ.. ಮತ್ತೆ ಈ ವಿಷ್ಯಾನ ಅಪ್ಪ ಅಮ್ಮಂಗೆ ಹೇಳಬಾರದು ಅನ್ಕೊಂಡಿದೀನಿ..” ಎಂದಳು ಅದಿತಿ.
” ಹಾಗೆ ಮಾಡಿ. ” ಎಂದು ಸಂತಸದಿಂದ ಹೇಳಿದ ರಂಗಣ್ಣ.
ಅದಿತಿಗೆ ರಂಗಣ್ಣ ಯಾಕೆ ಹೀಗೆ ಹೇಳುತ್ತಿದ್ದಾನೆಂದು ಅರ್ಥವಾಗಲಿಲ್ಲ. ಯಾಕೆಂದರೆ ರಂಗಣ್ಣ ಯಾವಾಗಲೂ ಹೆತ್ತವರಿಗೆ ನೋವು ಕೊಡಬಾರದು ಎಂದೇ ಹೇಳುತ್ತಿದ್ದ. ಆದರೆ ಈ ಸಲ ತಾನು ಹೇಳಿದ್ದಕ್ಕೆಲ್ಲ ಸರಿ ಎಂದಿದ್ದು ನೋಡಿ ಗೊಂದಲವಾಗಿತ್ತು. ಆದರೆ ಅದೇ ಸರಿ ಎಂದು ಅವಳಿಗೆ ಅನಿಸಿದ್ದರಿಂದ ಅದರ ಬಗ್ಗೆ ಜಾಸ್ತಿ ಯೋಚನೆ ಮಾಡದೇ ಸುಮ್ಮನಾದಳು.
” ರಂಗಣ್ಣ, ನಿನ್ನ ಮೊಮ್ಮಗಳು ನನ್ನ ವಯಸ್ಸೇ ಅಂತಾ ಹೇಳಿದ್ಯಲ.. ಇನ್ನು ಅವಳಿಗೂ ಒಂದೊಳ್ಳೆ ಹುಡುಗನ್ನ ಹುಡ್ಬೇಕಲ್ವಾ…ಅಥವಾ ಈಗಾಗಲೇ ನೋಡಿದ್ಯಾ.. ” ಕೇಳಿದಳು ಅದಿತಿ ನಗುತ್ತಾ ವಿಷಯ ಬದಲಿಸಲು.
” ಅವಳಿಗೆ ಇನ್ನೊಂದೆರಡು ವರ್ಷ ಬಿಟ್ಟು ಮದುವೆ ಮಾಡೋಣ ಅಂತ.. ಅವಳಿಗೆ ಒಂದು ಕೆಲಸ ಸಿಕ್ಕಿ ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಅನ್ನೋದು ನನ್ನ ಆಸೆ.. ಮುಂದೆ ಯಾವ ಪರಿಸ್ಥಿತಿ ಬರತ್ತೆ ಗೊತ್ತಿಲ್ಲ ಅಲ್ವಾ..ನಾನು ಇನ್ನೆಷ್ಟು ವರ್ಷ ಇರ್ತೀನಿ ಅಂತ ಗೊತ್ತಿಲ್ಲ..” ಎಂದ ರಂಗಣ್ಣ.
ಕೊನೆಯ ಮಾತನ್ನು ಕೇಳಿದ ಅದಿತಿಗೆ ಮನಸಿಗೆ ಬೇಜಾರಾಯಿತು.
” ಹಾಗೆಲ್ಲ ಮಾತಾಡಬೇಡಿ ರಂಗಣ್ಣ..ನಂಗೆ ಬೇಜಾರ್ ಆಗತ್ತೆ.” ಎಂದಳು.
ರಂಗಣ್ಣ ಏನೂ ಮಾತನಾಡಲಿಲ್ಲ. ಅವನು ಯಾಕೋ ಅಂದು ಮಂಕಾಗಿದ್ದ. ಅದಿತಿಯ ಗಮನಕ್ಕೆ ಬಂದಿತ್ತು. ಆದರೆ ಕೇಳುವ ಮನಸ್ಸಾಗಲಿಲ್ಲ. ಕೇಳಿದರೂ ಅವನೇನೂ ಹೇಳುವುದಿಲ್ಲ ಎನ್ನುವುದು ತಿಳಿದಿತ್ತು ಅವಳಿಗೆ. ಅವಳಿಗೂ ಜಾಸ್ತಿ ಮಾತನಾಡುವ ಮನಸಿರಲಿಲ್ಲ. ಈಗ ಅಭಿನವ್ ಗೆ ತನ್ನ ವಿಷಯ ಹೇಳುವುದು ಹೇಗೆ ಎಂಬುದು ಅವಳಿಗೆ ಬಹುಮುಖ್ಯವಾಗಿತ್ತು.
” ಸರಿ ರಂಗಣ್ಣ. ನಾನು ಹೋಗ್ತೀನಿ.. ನೀನು ಮಲ್ಕೋ ” ಎಂದು ಅವಳು ಅಲ್ಲಿಂದ ಹೊರಟಳು.
” ಚಿಕ್ಕಮ್ಮೋರೆ, ನೀವು ಯಾವಾಗಲೂ ಹುಷಾರಾಗಿರಿ. ಖುಷಿ ಇಂದ ಇರಿ ” ಎಂದ.
ಈ ಮಾತನ್ನು ಹೇಳಿದ ಅದಿತಿ ತಿರುಗಿ ಅವನ ಹತ್ತಿರ ಬಂದು,
“ಏನ್ ಆಗಿದೆ ರಂಗಣ್ಣ ಇವತ್ತು ನಿಂಗೆ.. ಅವಾಗ್ಲಿಂದ ನೋಡ್ತಾ ಇದೀನಿ..ನಿನ್ನ ವರ್ತನೆಯಲ್ಲಿ ಬದಲಾವಣೆ ಆಗಿದೆ. ಮತ್ತೆ ಒಗಟು ಒಗ್ಟಾಗಿ ಮಾತಾಡ್ತಾ ಇದೀಯ ಏನ್ ಆಯ್ತು.. ಏನಾದ್ರೂ ಸಮಸ್ಯೆ ಆಗಿದ್ಯಾ? ” ಶಾಂತವಾಗಿ ಮೆಲ್ಲಗೆ ಕೇಳಿದಳು ಅದಿತಿ.
ಒಂದು ಕ್ಷಣ ಅವಳನ್ನೇ ನೋಡಿದ ರಂಗಣ್ಣ,
” ಇಲ್ಲ.. ಅಮ್ಮೋರೆ, ಹೀಗೆ ಹೇಳ್ದೆ. ಇನ್ನು ನಿಮ್ಮ ಮದುವೆ ಆಗ್ಬಿಡ್ತದಲ್ಲಾ..ನೀವು ಇಲ್ಲಿ ಇರಲ್ಲ ಅಲ್ವಾ. ಅದ್ಕೆ ಹೇಳ್ದೆ.. ಮತ್ತೇನೂ ಇಲ್ಲ…” ಎಂದ ಭಾವುಕನಾಗಿ.
” ಅಯ್ಯೋ ಅಷ್ಟೇನಾ..ಅದಕ್ಕೆಲ್ಲ ಬೇಜಾರು ಮಾಡ್ಕೋಬೇಡ.. ಹೀಗೆ ನೀನು ದುಃಖ ಪಟ್ಟರೆ ನಾನು ಹೇಗೆ ಖುಷಿ ಇಂದ ಮದುವೆ ಆಗಲಿ.. ಹಾಗೆ ನಿಂಗೆ ತುಂಬಾ ಬೇಜಾರ್ ಆಯ್ತು ಅಂದ್ರೆ ನೀನು ಅಲ್ಲೇ ಕೆಲಸಕ್ಕೆ ಸೇರಿಬಿಡು…” ಎಂದು ಅವನನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದಳು.
ರಂಗಣ್ಣ ಕಣ್ಣೀರು ಒರೆಸಿಕೊಂಡು ನಕ್ಕ. ಅದಿತಿ ತನ್ನ ರೂಮಿಗೆ ಬಂದಳು. ರೂಮಿಗೆ ಬಂದು ಸ್ವಲ್ಪ ಹೊತ್ತು ಪುಸ್ತಕ ಓದಿ ಮಲಗಿಕೊಂಡಳು. ಒಂದೆರಡು ತಾಸಿನ ಮೇಲೆ ” ಅಮ್ಮಾ !! ” ಎಂದು ಚೀರಿ ಎದ್ದು ಕುಳಿತಿದ್ದಳು.
ಮತ್ತೆ ಅದೇ ಕನಸು ಮರುಕಳಿಸಿತ್ತು. ಎದ್ದು ಕುಳಿತ ಅವಳು ಸ್ವಲ್ಪ ಸಮಯದ ನಂತರ ಚೇತರಿಸಿಕೊಂಡಿದ್ದಳು. ಅವತ್ತಿನ ಕೆಲಸದ ಸುಸ್ತಿನಿಂದಾಗಿ ಯಾರಿಗೂ ಎಚ್ಚರವಾಗಲಿಲ್ಲ. ಅಲ್ಲಿಯೇ ಇದ್ದ ನೀರನ್ನು ಕುಡಿದು ಸ್ವಲ್ಪ ಹೊತ್ತು ಹಾಗೆಯೇ ಕುಳಿತಳು. ಆದರೆ ಅವಳಿಗೆ ತುಂಬಾ ಭಯವಾಗುತ್ತಿತ್ತು.
ನಿದ್ರೆ ಮಾಡುವುದು ಅಸಾಧ್ಯವೆಂದು ಗೊತ್ತಾಗಿ, ಮನೋಜ್ ಹತ್ತಿರ ಹೋಗೋಬೇಕೆಂದುಕೊಂಡು, ಹೊದಿಕೆ, ದಿಂಬು ತೆಗೆದುಕೊಂಡು ಅಣ್ಣನ ರೂಮಿನ ಬಾಗಿಲು ತಟ್ಟಿದಳು.
ಮನೋಜನಿಗೆ ಎಚ್ಚರವಾಗಲಿಲ್ಲ. ಮತ್ತೊಮ್ಮೆ ಬಾಗಿಲು ಬಡಿಯಲು ಪ್ರಯತ್ನಿಸಿದಾಗ ಬಾಗಿಲು ತೆರೆದೇ ಇದ್ದುದ್ದು ತಿಳಿದು ಒಳಗೆ ಹೋಗಿ ಮನೋಜನಿಗೆ ಎಚ್ಚರವಾಗದಂತೆ ಮೆಲ್ಲಗೆ ಅಲ್ಲೇ ಇದ್ದ ಸೋಫಾ ಮೇಲೆ ಮಲಗಿದಳು.
ಸೂರ್ಯ ಎದ್ದ ಕೂಡಲೇ, ಮನೋಜ್ ಗೆ ಕೂಡ ಎಚ್ಚರವಾಗಿತ್ತು. ಎದ್ದವನೇ ಆಕಳಿಸುತ್ತಾ ಕಿಟಕಿಯ ಬಳಿ ಹೋಗಿ ಕರ್ಟನ್ ತೆಗೆದು ಬಂದು, ಬೆಡ್ಶೀಟ್ ಮಡಿಸುತ್ತಿದ್ದ. ಹಾಗೆ ತಲೆ ಎತ್ತಿ ನೋಡಿದಾಗ, ಸೋಫಾ ಮೇಲೆ ಮಲಗಿದ್ದ ಅದಿತಿ ಕಾಣಿಸಿದಳು.
ಆಶ್ಚರ್ಯವಾಯಿತು. ‘ ಅರೆ ! ಇದೇನು ಇವಳು ಇಲ್ಲಿ ಇದಾಳೆ..ಯಾವಾಗ ಬಂದಿದಾಳೆ ‘ ಎಂದು ಮನಸಿನಲ್ಲಿ ಅಂದುಕೊಳ್ಳುತ್ತಾ ಅವಳ ಬಳಿ ಮೆಲ್ಲಗೆ ಹೋದ. ಅದಿತಿ ಗಾಢ ನಿದ್ದೆಯಲ್ಲಿದ್ದಳು. ರಾತ್ರಿ ಪುನಃ ಕನಸು ಬಿದ್ದಿರಬೇಕೆಂದು ಅವನಿಗೆ ಅರ್ಥವಾಯಿತು. ‘ ಪಾಪ.. ಎಷ್ಟೊತ್ತಿಗೆ ನಿದ್ದೆ ಮಾಡಿದ್ಲೇನೋ..ಮಲಗಲಿ.. ಶಬ್ದ ಮಾಡಬಾರದು ‘ ಎಂದುಕೊಳ್ಳುತ್ತಾ ಮತ್ತೆ ಕಿಟಕಿಯ ಕರ್ಟನ್ ಮುಚ್ಚಿ ಬಾತ್ರೂಂ ಕಡೆ ನಡೆದ. ಸ್ವಲ್ಪ ಸಮಯದ ನಂತರ ಬ್ರಷ್ ಮಾಡಿ , ಸ್ನಾನ ಮಾಡಿ ರೆಡಿ ಆಗಿ ಬಂದಿದ್ದ. ಇನ್ನೇನೂ ರೂಮಿನಿಂದ ತೆರಳಬೇಕು ಅನ್ನುವಷ್ಟರಲ್ಲಿ, ಅವಳಿಗೆ ಎಚ್ಚರವಾಗಿಬಿಟ್ಟಿತು.
( ಮುಂದುವರೆಯುವುದು 🌱 )
—————————-🌱—————————-
Swipe left/right or tap the sides to turn pages