New Katha Varnika is now on Google Play — read original stories on your phone. Learn more
ನನ್ನವಳು – 3

ನನ್ನವಳು – 3

ನನ್ನವಳು – ೩

ಸಕಲೇಶಪುರದ ಹೆಸರು ಕೇಳಿದಂತೆಯೇ ವನ ದೇವತೆ ಕಣ್ಣ ಮುಂದೆ ಬರುತ್ತಾಳೆ. ಎಲ್ಲೆಲ್ಲೋ ಹಸಿರು ತುಂಬಿರುವ ಸ್ವರ್ಗ. ಬೆಳಗಿನ ಹೊತ್ತಿನಲ್ಲಿ ಕಾಫಿ ತೋಟದ ಮೇಲೆ ಮಂಜಿನ ಹನಿಗಳು ನಾಟ್ಯ ಮಾಡುತ್ತಿದ್ದರೆ, ಮಧ್ಯಾನ ಸೂರ್ಯನ ಕಿರಣಗಳು ಚಿನ್ನದ ತಂತಿಗಳಂತೆ ಹರಡಿರುತ್ತವೆ. ದೇವರು ಸ್ವಲ್ಪ ಬಿಡುವು ಮಾಡಿಕೊಂಡು ನಿರ್ಮಿಸಿದ ಜಾಗ ಎನ್ನಬಹುದು.

ಪ್ರತಿಯೊಂದು ಮನೆ, ದೇವಾಲಯ , ಪ್ರಕೃತಿಯಲ್ಲಿನ ಪ್ರತಿಯೊಂದು ವಸ್ತುಗಳು ಕಲ್ಲು, ಮಣ್ಣು , ಮರ, ಎಲೆ ಎಲ್ಲವೂ ಒಂದೊಂದು ಕಥೆ ಹೇಳುವಂತೆ ತೋರುತ್ತದೆ. ಕಾಫಿಯ ಪರಿಮಳ ಎಲ್ಲರ ಹೃದಯವನ್ನು ತಣಿಸುತ್ತದೆ. 

ಭಾರತ ದೇಶದಲ್ಲಿ ಕೇವಲ ಎರಡು ಸ್ಥಳಗಳಲ್ಲಿ ಮಾತ್ರ ಪ್ರಸಿದ್ಧ ಭಾರತೀಯ ಏಲಕ್ಕಿ ಸಂಶೋಧನಾ ಸಂಸ್ಥೆಗಳಿದ್ದು,ಅದರಲ್ಲಿ ಒಂದು ಕೇರಳ ರಾಜ್ಯದಲ್ಲಿದೆ ಮತ್ತೊಂದು ಕರ್ನಾಟಕದ ರಾಜ್ಯವಾದ ಹಾಸನ ಜಿಲ್ಲೆಯ ನಮ್ಮ ಸಕಲೇಶಪುರ ತಾಲೂಕಿನ ದೋಣಿಗಲ್ ಎಂಬ ಸ್ಥಳದಲ್ಲಿ ಇದೆ ಎಂಬುದು ಹೆಮ್ಮೆಯ ವಿಷಯ.

ಕೇವಲ ಏಲಕ್ಕಿ ಅಲ್ಲದೆ, ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಈ ಮಲೆನಾಡ ಪ್ರದೇಶದಲ್ಲಿ ಹಸಿರು ಬೆಟ್ಟಗಳ ನಡುವೆ ಕಾಫಿ, ಮೆಣಸು, ಅಡಕೆ,ತೆಂಗು, ಬಾಳೆಯ ತೋಟಗಳು ಇವೆ.

ಸಕಲೇಶಪುರ ದಿಂದ ಸೂಮಾರು 30‌ ಕೀ.ಮೀ. ದೂರದಲ್ಲಿರುವ ಐಗೂರು ಕರ್ನಾಟಕ ಇತಿಹಾಸದಲ್ಲಿ ಗುರುತಿಸಿಕೊಂಡಿರುವ ಒಂದು ಐತಿಹಾಸಿಕ ಕೇಂದ್ರವಾಗಿದೆ.

ಇದಲ್ಲದೆ ಸಕಲೇಶಪುರದ ಒಂದು ಪುಟ್ಟ ಗ್ರಾಮ ಕಲ್ಲರಹಳ್ಳಿಯ ಸೌಂದರ್ಯವು ಕಣ್ಣಿಗೂ ಹಾಗೂ ಮನಸಿಗೂ ತಂಪನ್ನು ನೀಡುವಂತಿದೆ. ಸಕಲೇಶಪುರದ ಮುಖ್ಯವಾದ ಪ್ರೇಕ್ಷಣೀಯ ಸ್ಥಳಗಳಲ್ಲೊಂದಾದ ಮಂಜರಾಬಾದ್ ಕೋಟೆ, ಇದು ಎಂಟು-ಬಿಂದುಗಳ ನಕ್ಷತ್ರದ ಆಕಾರದಲ್ಲಿದೆ ಮತ್ತು ಯುರೋಪಿಯನ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ಟಿಪ್ಪು ಸುಲ್ತಾನನು ನಿರ್ಮಿಸಿದ ವಿಶಿಷ್ಟ ನಕ್ಷತ್ರಾಕಾರದ ಕೋಟೆಯಾಗಿದೆ. ಇದು ಮಂಗಳೂರು ಮತ್ತು ಕೂರ್ಗ್ ನಡುವಿನ ಹೆದ್ದಾರಿಯನ್ನು ಸುರಕ್ಷಿತಗೊಳಿಸಲು ನಿರ್ಮಿಸಲ್ಪಟ್ಟಿತ್ತು ಮತ್ತು ಇದರ ಭೂಗತ ರಚನೆಗಳು, ಗನ್‌ಪೌಡರ್ ಸಂಗ್ರಹಿಸಲು ಬಳಸಲಾಗುವ ನೆಲಮಾಳಿಗೆಗಳು ಬಹಳ ವಿಶೇಷವಾಗಿವೆ. ಕೋಟೆಯು 253 ಮೆಟ್ಟಿಲುಗಳನ್ನು ಹೊಂದಿದ್ದು, ಬೆಟ್ಟದ ಮೇಲೆ ಇರುವುದರಿಂದ ಸುತ್ತಮುತ್ತಲಿನ ಪ್ರದೇಶದ ಸ್ಪಷ್ಟ ನೋಟವನ್ನು ಒದಗಿಸುತ್ತದೆ.

 

ಒಟ್ಟಿನಲ್ಲಿ,

ಸಕಲೇಶಪುರವು ಪಶ್ಚಿಮ ಘಟ್ಟಗಳಲ್ಲಿರುವುದರಿಂದ, ಇದು ಅದ್ಭುತವಾದ ಪ್ರಕೃತಿ ಸೌಂದರ್ಯ, ಹಸಿರುಮಯವಾದ ಕಾಫಿ ತೋಟಗಳು, ಮತ್ತು ವನ್ಯಜೀವಿಗಳನ್ನು ಹೊಂದಿದೆ.

ಮತ್ತು ಹೇಮಾವತಿ ನದಿಯ ದಂಡೆಯ ಮೇಲಿರುವುದು, ಆ ಪ್ರದೇಶಕ್ಕೆ ಮತ್ತಷ್ಟು ಸೊಬಗನ್ನು ನೀಡುತ್ತದೆ.

 

ಅದಿತಿ ತನ್ನ ಹಳೆಯ ನೆನಪುಗಳಿಗೆ ಜಾರಿದ್ದಳು. ಅವಳ ಜೀವನದ ಮೊದಲ ಪ್ರವಾಸ ಸಕಲೇಶಪುರದ ಪ್ರವಾಸವಾಗಿತ್ತು. ಪ್ರಾಥಮಿಕ ಶಾಲೆಯಲ್ಲಿರುವಾಗ ತುಂಬಾ ಹಠ ಮಾಡಿ ಪ್ರವಾಸಕ್ಕೆ ಹೋಗಿದ್ದಳು ಅದಿತಿ.

ಅದು ಅವಳ ಜೀವನದ ಮೊದಲ ಪ್ರವಾಸ ಎಂದೋ ಅಥವಾ ಸಕಲೇಶಪುರದ ಪ್ರಕೃತಿ ಸೌಂದರ್ಯದ ಸೆಳೆತೆವೋ ಏನೋ ಅಲ್ಲಿಯ ನೆನಪುಗಳು ಅವಳ ಸ್ಮೃತಿ ಪಟಲದಲ್ಲಿ ಅಚ್ಚಳಿಯದಂತೆ ಉಳಿದಿತ್ತು. ಏನಾದರೂ ಮದುವೆಯ ವಿಷಯ ಬಂದಾಗ ತನ್ನನ್ನು ಮದುವೆಯಾಗುವವನು ಸಕಲೇಶಪುರದವನೆ ಆಗಿರಬೇಕು ಎಂದು ಹೇಳುತ್ತಿದ್ದಳು. ಇದು ಅವಳ ಆಸೆಯನ್ನು ದೇವರು ಈಡೇರಿಸಿದನೋ ಅಥವಾ ಮುಂದೊಂದು ದಿನ ಹೀಗೆ ಆಗುತ್ತದೆ ಎಂದು ಚಿಕ್ಕವಳಿದ್ದಾಗ ಅವಳ ಬಾಯಲ್ಲಿ ಆ ಮಾತು ಬರುವಂತೆ ಮಾಡಿದ್ದನೋ ಎಂಬುದು ಯಾರ ಅರಿವಿಗೂ ನಿಲುಕದ ವಿಷಯ.

 

” ಅದಿತಿ ನೋಡು ನೀನು ಏನು ಹೇಳಿದ್ದೇ ಹಾಗೆ ಆಗುತ್ತಿದೆ. ಇನ್ನೂ ಖುಷಿಯಿಂದ ಮದುವೆ ತಯಾರಿ ಮಾಡ್ಕೋ.. ” ಎಂದ ಮನು.

 

” ಈಗಲೇ ಯಾಕೆ ಆ ಮಾತು ಅಣ್ಣ… ಮೊದಲು ಅವರು ನನ್ನನ್ನು ನೋಡಲಿ.. ನಾನು ಅವರಿಗೆ ಒಪ್ಪಿಗೆ ಆಗಬೇಕು.. ನಂಗೆ ಅವರು ಒಪ್ಪಿಗೆ ಆಗಬೇಕು.. ಆಮೇಲೆ ಮುಂದಿನ್ ಮಾತು.. ”  ಎಂದಳು ಅದಿತಿ.

 

” ಅದು ಸರಿ ಅದಿತಿ. ನಾಡಿದ್ದು ಅವರು ಇಲ್ಲಿಗೆ ಬರ್ತಾ ಇದ್ದಾರೆ.. ಇಷ್ಟು ದೂರ ಬರುತ್ತಿದ್ದಾರೆ ಅಂದ್ರೆ ಅವರಿಗೆ ನಾವು ನೀನು ಎಲ್ಲ ಇಷ್ಟ ಆಗಿದ್ದೀವಿ ಅಂತಾನೆ ಅರ್ಥ.. ನೀನು ಹುಡುಗನತ್ರ ಮಾತಾಡು.. ಆದ್ರೆ… ” ಎಂದು ಮಾತು ನಿಲ್ಲಿಸಿದರು ಸುನಂದ. 

 

” ನೀನೇನು ಯೋಚನೆ ಮಾಡಬೇಡ ಸುನಂದ.. ಅದಿತಿ ನಮ್ ಮಾತು ಕೇಳ್ತಾಳೆ.. ನಾವು ಅವಳ ಒಳ್ಳೇದನ್ನೇ ಬಯಸ್ತೇವೆ ಅಂತ ಅವಳಿಗೆ ಗೊತ್ತು.. ” ಎಂದರು ರಾಜೇಂದ್ರ. 

 

ಅದಿತಿ ಅಲ್ಲಿಂದ ತನ್ನ ರೂಮಿಗೆ ನಡೆದಳು. 

ಅದಿತಿಗೆ ಸಕಲೇಶಪುರದ ಹೆಸರು ಕೇಳಿದ ಮೇಲೆ ಏನೋ ಒಂದು ತರಹ ಖುಷಿಯಾಗಿತ್ತು. ಆದರೆ ಅದನ್ನು ಸಂಪೂರ್ಣವಾಗಿ ಅನುಭವಿಸಲು ಅವಳಿಂದಾಗಲಿಲ್ಲ. 

—————————-🌱—————————-

” ರಂಗ ಮನೆ ಮುಂದೆ ಎಲ್ಲ ಸರಿಯಾಗಿ ಕ್ಲೀನ್ ಮಾಡಿದ್ಯಾಲ.. ಇನ್ನೇನು ಅವರೆಲ್ಲ ಬರೋ ಹೊತ್ತಾಯಿತು.. ” ಎಂದು ಸುನಂದ ಅಡುಗೆ ಮನೆಯಿಂದಲೇ ಕೂಗಿದರು.

 

ಹೌದು ಎನ್ನುತ್ತಾ ರಂಗಣ್ಣ ಒಮ್ಮೆ ಎಲ್ಲವನ್ನೂ ಪರೀಕ್ಷಿಸಿದ. 

ಅದಿತಿ ರೆಡಿಯಾಗಿದ್ದಳು. ಸುಂದರವಾಗಿಯೇ ಕಾಣುತ್ತಿದ್ದಳು.ಆದರೆ ಮುಖದಲ್ಲಿ ಒಂದು ನಗುವಿದ್ದರೆ ಗೊಂಬೆಗೆ ಅದಿತಿಗೆ ವ್ಯತ್ಯಾಸವಿಲ್ಲದಷ್ಟು ಸುಂದರವಾಗಿ ಕಾಣುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲಿ ಶ್ಯಾಮ್ ಸುಂದರ್, ಗೀತಾ ಮತ್ತು ಅಭಿನವ್ ಅವರ ಮನೆಯಲ್ಲಿದ್ದರು.

 

ಶ್ಯಾಮ್ ಸುಂದರ್ ಅವರು ಪ್ರಸಿದ್ಧವಾದ ಇಶಾ ಟೆಕ್ಸ್ಟೈಲ್ಸ್ ಮಾಲೀಕರಾಗಿದ್ದರು. ಹಲವಾರು ವರ್ಷಗಳಿಂದ ಉದ್ಯಮದಲ್ಲಿದ್ದರಿಂದ ಸಕಲೇಶಪುರದಲ್ಲಿ ನಂಬಿಕಸ್ತ ಮತ್ತು ಬುದ್ಧಿವಂತ ಉದ್ಯೋಗಸ್ತರ ಹೆಸರಿನ ಪಟ್ಟಿಯಲ್ಲಿ ಇವರ ಹೆಸರು ಕೂಡ ಸೇರಿತ್ತು. ಗೀತಾ ಕಾಲೇಜು ಉಪನ್ಯಾಸಕಿ ಆಗಿದ್ದವರು ಈಗ ಸ್ವಯಂ ನಿವೃತ್ತಿ ತೆಗೆದುಕೊಂಡು, ಸಮಾಜ ಸೇವೆಯ ಕಡೆ ಮುಖ ಮಾಡಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳು. ಅಭಿನವ್ ಮತ್ತು ಅರ್ಜುನ್.

ಅಭಿನವ್ ಅಪ್ಪನ ವ್ಯವಹಾರದ ಜವಾಬ್ದಾರಿಯನ್ನು ತೆಗೆದುಕೊಳ್ಳುವವನಾಗಿದ್ದ. ಸದ್ಯಕ್ಕೆ ಸ್ವಂತವಾಗಿ ಏನಾದರೂ ಮಾಡಬೇಕೆಂದು ಸಾಫ್ಟ್ವೇರ್ ಕನ್ಸಲ್ಟೆನ್ಸಿ ಒಂದನ್ನು ಶುರು ಮಾಡಿದ್ದ. ಒಟ್ಟಿನಲ್ಲಿ ಇವರು ದೊಡ್ಡ ಉದ್ಯಮಿಗಳೇ ಆದರೂ, ಇವರ ಜೀವನಶೈಲಿ ಮಾತ್ರ ಅತ್ಯಂತ ಸರಳವಾಗಿತ್ತು. ಇವರೇನೂ ದೊಡ್ಡ ಬಿಲಿಯನೇರ್‌ಗಳಂತೆ ಅಥವಾ ಅಂಬಾನಿ ಮಟ್ಟದ ವ್ಯವಹಾರಸ್ಥರಂತೆ ಆಡಂಬರದ ಜೀವನ ನಡೆಸುವವರಲ್ಲ. ವ್ಯವಹಾರದಲ್ಲಿ ಎಷ್ಟು ಎತ್ತರಕ್ಕೆ ಬೆಳೆದಿದ್ದರೂ, ಮಣ್ಣಿನ ಗುಣವನ್ನು ಮರೆತವರಲ್ಲ.

ಮನೆಗೆ ಬಂದವರನ್ನು ಪ್ರೀತಿಯಿಂದ ಬರಮಾಡಿಕೊಳ್ಳುವುದು, ಮನುಷ್ಯ ಸಂಬಂಧಗಳಿಗೆ ಬೆಲೆ ಕೊಡುವುದು ಮತ್ತು ತಮ್ಮ ಸಂಪ್ರದಾಯ – ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಯುವುದು ಇವರ ಕುಟುಂಬದ ವಿಶೇಷತೆಯಾಗಿತ್ತು. 

ಅಬ್ಬರವಿಲ್ಲದ ವ್ಯಕ್ತಿತ್ವ, ಯಾರನ್ನೂ ಹೀಯಾಳಿಸದ ಸ್ವಭಾವ ಮತ್ತು ಮಧ್ಯಮ ವರ್ಗದ ಜನರೊಂದಿಗೂ ಬೆರೆತು ನಡೆಯುವ ಇವರ ಗುಣವೇ ಇವರನ್ನು ಸಕಲೇಶಪುರದಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನವರನ್ನಾಗಿ ಮಾಡಿತ್ತು.

ಶ್ಯಾಮ್ ಸುಂದರ್ ತಮ್ಮ ಪರಿಚಯ ಮಾಡಿಕೊಟ್ಟರು. ರಾಜೇಂದ್ರ ಕೂಡ ತಮ್ಮ ಬಗ್ಗೆ ವಿವರವಾಗಿ ಹೇಳಿದರು.

 

” ಅಂದ ಹಾಗೆ ನಿಮ್ಮ ಮತ್ತೊಂದು ಮಗ ಏನ್ ಮಾಡ್ತಿದಾನೆ? ಅವನ ಹೆಸರೇನು ? ಮರೆತೋಯ್ತು..  ” ಕೇಳಿದರು ಸುನಂದಾ.

 

” ನನ್ನ ಎರಡನೇ ಮಗನ ಹೆಸರು ಅರ್ಜುನ್. ಅವನು ಅಮೆರಿಕಾದಲ್ಲಿ ಇದಾನೆ. ಹೈಯರ್ ಸ್ಟಡೀಸ್ಗಂತ ಹೋಗಿದ್ದು. ಸಾಕು ಓದಿದ್ದು ಬಿಸಿನೆಸ್ ನೋಡ್ಕೋ ಅಂದ್ರೆ, ಕೇಳಿಲ್ಲ. ಅವನಿಗೆ ಈ ಬಿಸಿನೆಸ್ ಅಲ್ಲಿ ಎಲ್ಲ ಆಸಕ್ತಿ ಇಲ್ಲ. ಓಡು ಮುಗಿಸಿ ಇಲ್ಲಿಗೆ ಬಂದು ಕೆಲಸ ಮಾಡು ಅಂತ ಹೇಳಿದೀವಿ. ಅಭಿನವ್ ಮದ್ವೆ ನಂತರ ಅವನಿಗೂ ಮದುವೆ ಮಾಡಬೇಕು ಅಂತ ಅನ್ಕೊಂಡಿದ್ದೀವಿ. ” ಎಂದರು ಗೀತಾ.

 

” ಎಲ್ಲಿ ನಿಮ್ಮ ಮಗಳು ? ಕರಿರಿ ಅವಳನ್ನ. ಈ ಹಳೆ ಕಾಲದ ತರ ನಮ್ಮ ಜೊತೆ ಕೂತು ಮಾತಾಡಬಾರದು ಅಂತೆಲ್ಲ ಏನಿಲ್ಲ.” ಎಂದರು ಶ್ಯಾಮ್ ಸುಂದರ್.

 

ಸುನಂದಾ ಅದಿತಿಯನ್ನು ಕರೆದುಕೊಂಡು ಬಂದರು.

ಎಲ್ಲರನ್ನೂ ಮೆಲ್ಲಗೆ ಮಾತನಾಡಿಸಿದಳು. ಅಭಿನವ್ ಅನ್ನು ನೋಡಿದಳು. ಒಂದು ಸಣ್ಣ ನಗು ವಿನಿಮಯವಾಯಿತು ಇಬ್ಬರ ಮಧ್ಯೆ. ಅದಿತಿ ಎಲ್ಲರಿಗೂ ಕಾಫಿ ಕೊಟ್ಟ ಮೇಲೆ ಗೀತಾ ಅವಳನ್ನು ತಮ್ಮ ಹತ್ತಿರವೇ ಕುಳಿತುಕೊಳ್ಳಲು ಹೇಳಿದರು. ಒಂದಷ್ಟು ಸಮಯ ಅವಳ ಜೊತೆ ಮಾತನಾಡಿದರು. ಅದಿತಿಗೆ ಗೀತಾ ಮತ್ತು ಶ್ಯಾಮ್ ಸುಂದರ್ ಇಬ್ಬರೂ ಹಿಡಿಸಿದ್ದರು. ಒಳ್ಳೆಯ ಮನಸು ಇರುವ ಜನ ಎಂದು ಗೊತ್ತಾಗಿತ್ತು.

ಶಾಮ್ ಸುಂದರ ಅವರ ಪಕ್ಕದಲ್ಲಿ ಕುಳಿತ ಅಭಿನವ್, ಮೆಲ್ಲಗೆ ಅಪ್ಪನನ್ನು ಕರೆದಿದ್ದ. ಅವನು ಏನು ಹೇಳಬೇಕು ಎಂದುಕೊಂಡಿದ್ದಾನೆಂದು ಊಹಿಸಿದ ಶಾಮ್ ಸುಂದರ್,

 

” ನಾವೇ ಮಾತಾಡ್ತಾ ಇರಲ್ಲ.. ಅಭಿ..ಹೆದರಬೇಡ.. ನೀವಿಬ್ರೂ ಸಪರೇಟ್ ಆಗಿ ಮಾತಾಡಬಹುದಂತೆ.. ಅದ್ಯಾಕೆ ಅಷ್ಟೊಂದು ಯೋಚನೆ ಮಾಡ್ತಾ ಇದೀಯಾ..” ಎಂದು ನಗುತ್ತಾ ಹೇಳಿದರು 

ಕಳವಳದಿಂದ ನೋಡುತ್ತಾ ಇದ್ದ ಅಭಿನವ್ ಅನ್ನು ನೋಡಿ.

 

” ಅಪ್ಪ ಏನಪ್ಪಾ ಇದು… ನಂಗೆ ಮುಜುಗರ ಆಗೋತರ ಮಾಡ್ತೀರಾ.. ” ಎಂದು ಪೆಚ್ಚಾಗಿ ಹೇಳಿದ್ದ. ಎಲ್ಲರೂ ನಕ್ಕರು.

 

” ಅವರಿಬ್ಬರೂ ಮಾತನಾಡಲಿ.. ನೀವು ಬನ್ನಿ ತೋಟದ ಕಡೆ ಹೋಗಿ ಬರೋಣ ಶ್ಯಾಮ್ ಸುಂದರ್ ಅವರೇ.. ” ಎಂದ ರಾಜೇಂದ್ರ ಅವರ ಮಾತಿಗೆ ಎಲ್ಲರೂ ಒಪ್ಪಿದರು.

 

ಗೀತಾ ಮತ್ತು ಸುನಂದಾ ಅಡಿಗೆ ಮನೆಯ ಕಡೆ ತೆರಳಿದರು.

ಉಳಿದವರು ಅಭಿನವ್ ಮತ್ತು ಅದಿತಿ. ಅದಿತಿ ಒಮ್ಮೆ ಅವನನ್ನು ನೋಡಿ ಮತ್ತೆ ದೃಷ್ಟಿ ಕೆಳಗೆ ಹಾಕಿ ಸುಮ್ಮನೆ ಕುಳಿತುಕೊಂಡಳು. 

 

” ಹೊರಗಡೆ ಹೋಗಿ ಮಾತಾಡೋಣ್ವ ” ಎಂದು ಅಭಿನವ್ ಕೇಳಿದ. ಸರಿ ಎನ್ನುವಂತೆ ತಲೆ ಅಲ್ಲಾಡಿಸಿ ಅವಳು ಹೊರಟಳು. ಅವನು ಅವಳನ್ನು ಹಿಂಬಾಲಿಸಿದ.

ಅದಿತಿ ಮತ್ತು ಅಭಿನವ್ ಅಂಗಳದಲ್ಲಿನ ಪುಟ್ಟ ಗಾರ್ಡನ್ ಮಧ್ಯ ಬಂದು ಕುಳಿತರು. ಸ್ವಲ್ಪ ಸಮಯ ಯಾರೂ ಏನನ್ನು ಮಾತನಾಡಲಿಲ್ಲ. 

 

ನಂತರ , ಅಭಿನವ್ ಮೌನ ಮುರಿದು,

” ಹೆಲೋ…. ” ಎಂದು ಮುಜುಗರದಿಂದಲೇ ಮಾತು ಶುರು ಮಾಡಿದ್ದ. ಅದಿತಿ ಅವನನ್ನು ನೋಡಿ ನಗು ಸೂಸಿದಳು ಅಷ್ಟೇ. 

 

” ಏನ್ ಮಾತಾಡಬೇಕು ಅಂತಾ ಗೊತ್ತಾಗ್ತಾ ಇಲ್ಲ ಅಲ್ವಾ… ” ಎಂದ ಅವನು. ಅದಕ್ಕೂ ಕೂಡ ಅವಳು ” ಹ್ಮ್ಮ್ “ಎಂದಳು ಅಷ್ಟೇ. 

 

ಅವಳ ದೇಹ ಮಾತ್ರ ಅಲ್ಲಿ. ಮನಸು ಬೇರೆಲ್ಲೋ ಇದ್ದ ಹಾಗೆ ಇತ್ತು. ಇದು ಅಭಿನವ್ ಗಮನಕ್ಕೆ ಬಂದಿತ್ತು. ಆದರೆ ಅದರ ಬಗ್ಗೆ ಏನನ್ನು ಹೇಳಬೇಕೆನಿಸಲಿಲ್ಲ ಅವನಿಗೆ.

ಯಾಕೆಂದರೆ ಎಷ್ಟೋ ಜನರ ಮುಂದೆ ಬಿಸಿನೆಸ್ ಬಗ್ಗೆ ದಿನಾಲೂ ಗಂಟೆ ಗಟ್ಟಲೆ ಆತ್ಮವಿಶ್ವಾಸದಿಂದ ಚೂರು ಭಯಪಡದೆ ನಿರರ್ಗಳವಾಗಿ ಮಾತನಾಡುತ್ತಿದ್ದ ಅವನು ಈಗ ಏನು ಮಾತನಾಡಲಿ ಎಂದು ವಿಷಯವನ್ನು ಹುಡುಕುತ್ತಿದ್ದ. 

 

” ವಿಚಿತ್ರ ಅನ್ಸತ್ತೆ ಅಲ್ವಾ.. ಐದು ಹತ್ತು ನಿಮಿಷಗಳಲ್ಲಿ ಒಬ್ಬರ ಬಗ್ಗೆ ಇನ್ನೊಬ್ಬರು ತಿಳ್ಕೊಳೋಕೆ ಹೇಗ್ ಆಗತ್ತೆ.. ಆದ್ರೆ ಅರೇಂಜ್ ಮ್ಯಾರೇಜ್ ಅಲ್ಲಿ ಬೇರೆ ಆಯ್ಕೆ ಇರಲ್ಲ…ಅಲ್ವಾ.. ” ಎಂದು ನಕ್ಕ. ಅದಕ್ಕೂ ” ಹ್ಮ್ಮ್ ಹೌದು ” ಎಂದು ತಲೆ ಅಲ್ಲಾಡಿಸಿದಳು ಅದಿತಿ.

ಅಭಿನವ್ ಗೆ ಈಗ ವಿಚಿತ್ರವೆನಿಸಿತು. 

ಥಟ್ಟನೆ ಕೇಳಿಯೇಬಿಟ್ಟ. ” ಅದಿತಿ, ನಿಮಗೆ ನಿಜವಾಗಲೂ ಮದ್ವೆ ಇಷ್ಟ ಇದೆ ತಾನೆ.. ಅಂದ್ರೆ ನೀವು ಮದುವೆ ಆಗೋಕೆ ರೆಡಿ ಇದ್ದೀರಾ ಅಲ್ವಾ.. ”  

 

ಆಗ ಅದಿತಿಯ ಎಲ್ಲೋ ಇದ್ದ ಮನಸು ಅಭಿನವ್ ಇರುವಲ್ಲಿಗೆ ಬಂದಿತ್ತು. ತಲೆ ಎತ್ತಿ ಅವನನ್ನು ನೋಡಿದ್ದಳು. ಮತ್ತು ತಾನು ಏನು ಮಾಡುತ್ತಿದ್ದೇನೆ ಛೆ !! ಎಂದು ಸಂಕಟ ಪಟ್ಟಳು. ಬೇಸರವಾಯಿತು ಅವಳಿಗೆ.

 

ಅಭಿನವ್ ಅವಳ ಬೇಸರದ ಮುಖ ನೋಡಿ, 

“ಅಲ್ಲಾ, ಮೊದಲೇ ಈ ಅರೇಂಜ್ ಮ್ಯಾರೇಜ್ ಅಲ್ಲಿ ಒಬ್ಬರನ್ನೊಬ್ಬರು ತಿಳ್ಕೊಳೋಕೆ ಸಮಯ ಜಾಸ್ತಿ ಇರಲ್ಲ. ಇನ್ನೂ ಸಿಗೋ ಕಮ್ಮಿ ಟೈಮ್ ಅಲ್ಲೂ ನೀವೂ ಏನು ಮಾತಾಡ್ತಾ ಇಲ್ಲ.. ತಿಳ್ಕೊಳೋ ಕುತೂಹಲನೂ ತೋರಿಸ್ತಾ ಇಲ್ಲ.. ಅದ್ಕೆ ಕೇಳ್ದೆ ” ಎಂದು ಅವಳನ್ನು ಹುರಿದುಂಬಿಸುವ ಪ್ರಯತ್ನ ಮಾಡಿದ.

 

” ಕ್ಷಮಿಸಿ, ನಾನು ಸ್ವಲ್ಪ… ಅದು… ” ಎಂದು ಹೇಳುವಷ್ಟರಲ್ಲಿ,

 

” ಪರವಾಗಿಲ್ಲ ಅದಿತಿ. ನಂಗೆ ಅರ್ಥ ಆಯ್ತು..ನಂಗೂ ಒಂಥರಾ ಫೀಲ್ ಆಗ್ತಾ ಇದೆ.. ಏನು ಹೇಳಬೇಕು, ಕೇಳ್ಬೇಕು ಗೊತ್ತಾಗ್ತಾ ಇಲ್ಲ… ” ಎಂದು ಅತ್ತಿತ್ತ ನೋಡತೊಡಗಿದ.

 

ಏನು ಹೇಳಲಿ ಎಂದು ಅಂದುಕೊಳ್ಳುತ್ತಿದ್ದ ಅವಳಿಗೆ ಅವನ ಈ ಮಾತು ಕೇಳಿ ಸ್ವಲ್ಪ ನಿರಾಳವಾಗಿತ್ತು.

” ನಂಗೆ ಮದುವೆ ಇಷ್ಟ ಇದೆ. ನಾನು ಮನಸಾರೆ ನಿಮ್ಮನ್ನು ಭೇಟಿ ಆಗೋಕೆ ಒಪ್ಪಿದ್ದು ” ಎಂದು ಹೇಳಿದ ನಂತರ ಅವಳಿಗೆ ತಾನೇನು ಹೇಳಿಬಿಟ್ಟೆ ಎಂದೆನಿಸಿ ಪೆಚ್ಚಾದಳು.

ಅಭಿನವ್ ಮುಖದಲ್ಲಿ ನಗು ಮೂಡಿತ್ತು.

 

” ನಿಮ್ಮ ಬಗ್ಗೆ ಹೇಳಿ ” ಎಂದ.

” ನಾನು ಓದಿದ್ದು… ” ಎಂದು ಅದಿತಿ ಶುರು ಮಾಡಿದಾಗ,

 

” ಏನ್ರೀ ನೀವು..ಇದನ್ನ ಹೇಳ್ತಾ ಇದೀರಾ? ನಂಗೆ ನಿಮ್ಮ ಹೆಸರು, ಊರು, ಓದಿದ್ದು, ಕೆಲಸ ಮಾಡ್ತಾ ಇರೋದು ಎಲ್ಲಾ ಗೊತ್ತಾಗಿದೆ.. ಅಷ್ಟಕ್ಕೂ ಅದು ತಿಳ್ಕೊಂಡು ನಾನು ನಿಮಗೆ ಏನ್ ನನ್ ಕಂಪನಿ ಕೆಲಸಕ್ಕೆ ತಗೊಳೋಕೆ ಅಲ್ಲ ಬಂದಿದ್ದು.. ” ಎಂದು ನಕ್ಕ. ಅದಿತಿ ಕಣ್ಣು ಕಿರಿದು ಮಾಡಿ ಅವನು ಹೇಳಿದ್ದು ಅರ್ಥವಾಗಲಿಲ್ಲ ಎನ್ನುವಂತೆ  ಅವನನ್ನು ನೋಡಿದ್ದಳು.

 

(ಮುಂದುವರೆಯುವುದು 🌱)

 

—————————-🌱—————————-