ನನ್ನವಳು – 2
ನನ್ನವಳು – ೨
ಅದಿತಿಗೆ ಇಷ್ಟು ಬೇಗ ಮದುವೆ ಇಷ್ಟವಿರಲಿಲ್ಲ. ಮನೋಜ್ ಕೂಡ ಮೊದಲು ಅದಿತಿಯ ಪರವಾಗಿಯೇ ಮತ ಹಾಕಿದ್ದ.
ಆದರೆ ಜ್ಯೋತಿಷಿಗಳು ಅದಿತಿಯ ಜಾತಕ ನೋಡಿ, ಈ ವರ್ಷ ಅಂದರೆ ಅದಿತಿಗೆ ಇಪ್ಪತ್ತೈದು ವರ್ಷದೊಳಗೆ ಮದುವೆ ಮಾಡದಿದ್ದರೆ, ಇನ್ನೂ ಆರು ವರ್ಷ ಮದುವೆ ಆಗುವುದಿಲ್ಲ. ಕಷ್ಟವಿದೆ ಎಂದು ತಿಳಿಸಿದ್ದಾರೆ ಎಂದು ರಾಜೇಂದ್ರ ಮನೆಯಲ್ಲಿ ಹೇಳಿದ ಮೇಲೆ ಮನೋಜ್ ಅಪ್ಪ ಅಮ್ಮನ ಮಾತಿಗೆ ತಲೆದೂಗಿದ್ದ.
ಅವರೆಲ್ಲಾ ಮಾತನಾಡುತ್ತಿರುವಾಗ ರಂಗಣ್ಣ ಅಲ್ಲಿಗೆ ಬಂದಿದ್ದ.
” ಏನು ರಂಗಣ್ಣ ಇಷ್ಟೊತ್ತು ಎಲ್ಲಿಗೆ ಹೋಗಿದ್ದೆ.. ತಿಂಡಿ ಗೆ ಕರೆಯೋಣ ಅಂತ ಬಂದಿದ್ದೆ ನೀನ್ ಎಲ್ಲೂ ಕಾಣ್ಸಿಲ್ಲ. ” ಎಂದು ಸುನಂದಾ ಪ್ರಶ್ನೆ ಮಾಡಿದ್ದರು.
” ಅದು ಇಲ್ಲೇ ಮಾರಿಗುಡಿ ಹೋಗಿದ್ದೆ ಅಮ್ಮಾವ್ರೇ, ಚಿಕ್ಕಮ್ಮೋರ್ ಹೆಸರಲ್ಲಿ ಪೂಜೆ ಮಾಡ್ಕೊಂಡು ಬರೋಣ ಅಂತ. ” ಎಂದು ವಿಧೇಯವಾಗಿ ಹೇಳಿದ್ದ.
ರಂಗಣ್ಣ ಸುಮಾರು ಎಪ್ಪತ್ತರ ಆಸು ಪಾಸಿನ ವ್ಯಕ್ತಿ. ಅದಿತಿಗೆ ಬುದ್ಧಿ ಬಂದಾಗಿನಿಂದ ರಂಗಣ್ಣ ಅಲ್ಲಿಯೇ ಇದ್ದ. ಅದರ ಹಿಂದಿನ ಕಥೆ ಅವಳಿಗಾಗಲೀ ಮನೋಜ್ಗಾಗಲೀ ತಿಳಿದಿಲ್ಲ. ಅದರ ಅವಶ್ಯಕತೆ ಯಾರಿಗೂ ಇರಲಿಲ್ಲ. ರಂಗಣ್ಣ ಅದಿತಿ ಮನೋಜ ಇಬ್ಬರನ್ನೂ ತುಂಬಾ ಕಾಳಜಿ ಮಾಡುತ್ತಿದ್ದ. ಅದಿತಿ ಎಂದರೆ ಸ್ವಲ್ಪ ಜಾಸ್ತಿಯೇ ಪ್ರೀತಿ ಕಾಳಜಿ ಇತ್ತು. ತನ್ನ ಮೊಮ್ಮಗಳಂತೆ ನೋಡಿಕೊಳ್ಳುತ್ತಿದ್ದ. ಅದಿತಿಗೂ ರಂಗಣ್ಣ ಎಂದರೆ ಪ್ರೀತಿ.ಅವಳನ್ನು ಶಾಲೆಗೆ ಕರೆದುಕೊಂಡು ಹೋಗುವುದು. ಮನೆಯಲ್ಲಿ ಆಟ ಆಡುವುದು ಅವಳ ತಿಂಡಿ, ಬಟ್ಟೆ, ಬರೆಯ ಜವಾಬ್ದಾರಿ ಎಲ್ಲವನ್ನೂ ಸುಮಾರು ರಂಗಣ್ಣನೇ ನೋಡಿಕೊಳ್ಳುತ್ತಿದ್ದ. ರಂಗಣ್ಣನಿಗೂ ಒಬ್ಬಳು ಮೊಮ್ಮಗಳು ಇದ್ದಳು. ಆದರೆ ಅವನು ಯಾವತ್ತೂ ಅವಳನ್ನು ನೋಡಲು ಹೋಗುತ್ತಿರಲಿಲ್ಲ. ಹಾಗೆಯೇ ಅವಳು ಕೂಡ ಇಲ್ಲಿಗೆ ಯಾವತ್ತೂ ಬಂದಿರಲಿಲ್ಲ. ಕೆಲವೊಮ್ಮೆ ಫೋನಿನಲ್ಲಿ ಮಾತನಾಡುತ್ತಿದ್ದನ್ನು ಮನೋಜ್ ಮತ್ತು ಅದಿತಿ ನೋಡಿದ್ದರು. ಚಿಕ್ಕವಳಿರುವಾಗ ಅದಿತಿ ತುಂಬಾ ಹಠ ಮಾಡುತ್ತಿದ್ದಳು. ತನಗೂ ಮಾತನಾಡಬೇಕೆಂದು. ರಂಗಣ್ಣ ಹೇಗೋ ಸಮಾಧಾನ ಮಾಡಿ ಸುಮ್ಮನಿರಿಸುತ್ತಿದ್ದ. ಈಗ ಅದಿತಿ ಅವಳ ಆರೋಗ್ಯ ವಿಚಾರಿಸುತ್ತಿದ್ದಳು. ಅವಳ ಖರ್ಚಿಗೆ ಎಂದು ರಂಗಣ್ಣ ಬೇಡ ಎಂದರೂ ಸ್ವಲ್ಪ ಹಣ ಕೊಡುತ್ತಿದ್ದಳು.
ರಂಗಣ್ಣ ತಂದಿದ್ದ ಮಾರಿ ಗುಡಿಯ ಕುಂಕುಮ ಪ್ರಸಾದಗಳನ್ನು ಅದಿತಿ ತೆಗೆದುಕೊಂಡಳು. ಅದಿತಿಯ ಮೇಲಿನ ವಾತ್ಸಲ್ಯ ರಂಗಣ್ಣನ ಕಣ್ಣಿನಲ್ಲಿ ಕಾಣುತ್ತಿತ್ತು.
—————————-🌱—————————-
ವರಾನ್ವೇಷಣೆ ಕಾರ್ಯಕ್ರಮ ಶುರುವಾಯಿತು. ಅದಿತಿಗೆ ಇನ್ನೂ ಆರು ತಿಂಗಳಲ್ಲಿ ಇಪ್ಪತ್ತೈದು ವರ್ಷ ತುಂಬುತ್ತಿತ್ತು. ಆದರಿಂದ ರಾಜೇಂದ್ರ ಮತ್ತು ಸುನಂದಾಗೆ ಒತ್ತಡ ಆಗಿತ್ತು. ಬಂದ ಹುಡುಗರೆಲ್ಲಾ ಅದಿತಿಯ ಕನಸಿನ ಬಗ್ಗೆ ಕೇಳಿದ ಮೇಲೆ ಹಿಂತಿರುಗಿ ಹೋಗುತ್ತಿದ್ದರು.
ಒಂದು ದಿನ ಅದಿತಿ ತನ್ನ ರೂಮಿನಲ್ಲಿ ಲ್ಯಾಪ್ಟಾಪ್ ಮುಂದೆ ಕುಳಿತು ಏನೋ ಯೋಚಿಸುತ್ತಿದ್ದಳು.
” ಒಳಗೆ ಬರಬಹುದಾ ಮಗಳೇ ” ರಾಜೇಂದ್ರ ಮತ್ತು ಸುನಂದಾ ಬಾಗಿಲ ಬಳಿ ನಿಂತಿದ್ದರು.
ಯೋಚನಾ ಲಹರಿಯಿಂದ ಹೊರ ಬಂದ ಅದಿತಿ,
” ಏನಪ್ಪ ಕೇಳೋದು? ಬನ್ನಿ ಒಳಗೆ ” ಎಂದಳು.
ಅದಿತಿಯ ಬಳಿ ಬಂದು ಕುಳಿತ ಅವರಿಬ್ಬರೂ
” ಅದಿತಿ ನಿಂಗೊಂದು ಮಾತು ಹೇಳಬೇಕಿತ್ತು ” ಎಂದು ಪೀಠಿಕೆ ಹಾಕಿದರು ರಾಜೇಂದ್ರ.
ಒಂದು ಕ್ಷಣ ಅದಿತಿ ಅವರನ್ನೇ ನೋಡಿದಳು.
” ನೋಡು ಅದಿತಿ, ಹೀಗೆ ಹೇಳ್ತೀವಿ ಅಂತ ತಪ್ಪು ತಿಳ್ಕೊಬೇಡ..ನೀನು ಇನ್ಮುಂದೆ ಯಾರ ಹತ್ತಿರಾನೂ ನಿನ್ನ ಕನಸಿನ ಬಗ್ಗೆ ಹೇಳ್ಬೇಡ. ” ಎಂದರು ರಾಜೇಂದ್ರ.
ಗೊಂದಲಕ್ಕೆ ಒಳಗಾದ ಅದಿತಿ ,
” ಅಪ್ಪ ಏನು ಹೇಳ್ತಾ ಇದೀರಾ ನೀವು? ”
” ಹೌದು ಅದಿತಿ, ಅಪ್ಪ ಸರಿಯಾಗೇ ಹೇಳ್ತಾ ಇದಾರೆ. ನೀನೇ ನೋಡ್ತಾ ಇದಿಯಲ್ಲ..ಏನು ಆಗ್ತಿದೆ ಈಗ ಅಂತ..ಅದ್ಕೆ ಅಪ್ಪ ಹೇಳ್ತಾ ಇರೋದೇ ಸರಿ ” ಎಂದರು ಸುನಂದ.
ಅದಿತಿಗೆ ಸ್ವಲ್ಪ ಕೋಪ ಬಂದಿತ್ತು. ಕೈ ಕಟ್ಟಿ ನಿಂತುಕೊಂಡು,
” ಈಗ ಆಗ್ತಾ ಇರೋದು ನೋಡಿನೂ ಈ ಮಾತು ಹೇಳ್ತಿದೀರಲ್ಲ ನೀವು.. ” ಕೇಳಿದಳು.
” ನಿನ್ನ ಮಾತಿನ ಅರ್ಥ ಏನು ಅದಿತಿ ? ” ಮೆಲ್ಲಗೆ ಕೇಳಿದರು ರಾಜೇಂದ್ರ.
” ಇದರಲ್ಲಿ ಏನು ಹೇಳೋದು ಇದೆ ಅಪ್ಪ, ನನ್ನನ್ನು ಮದುವೆ ಆಗುವವರು ನನ್ನ ಗುಣ ಅವಗುಣಗಳನ್ನೆಲ್ಲ ಒಪ್ಕೊಂಡು ನನ್ನನ್ನ ಸಂಗಾತಿಯಾಗಿ ಮಾಡ್ಕೋಬೇಕು ಅಲ್ವಾ ? ಅದು ಬಿಟ್ಟು ಸುಳ್ಳಿನ ಬುನಾದಿ ಮೇಲೆ ಮದುವೆ ಅನ್ನೋ ಅನುಬಂಧ ಕಟ್ಟಿದರೆ ಅದು ಕೊನೆಗೆ ಬಂಧನ ಆಗತ್ತೆ. ” ಎಂದಳು.
” ನಿನ್ನ ಬಗ್ಗೆ ಗೊತ್ತಾದ ಮೇಲೆ ಯಾರಾದ್ರೂ ಒಪ್ಪಿದಾರಾ..ಹೀಗೆ ಆಗ್ತಾ ಇದ್ರೆ.. ಮುಂದೇನು..ಅರ್ಥ ಮಾಡ್ಕೋ ಅದಿತಿ ” ಎಂದರು ಸುನಂದ.
” ಅದೇ ಅಮ್ಮ ನಾನು ಹೇಳ್ತಾ ಇರೋದು. ನನ್ನ ಬಗ್ಗೆ ಗೊತ್ತಾದ ಮೇಲೆ ಯಾರು ನನ್ನನ್ನ ಒಪ್ಪಲಿಲ್ಲ. ಅಂದ್ರೆ ಅವರಿಗೆಲ್ಲ ಅದು ಸಮಸ್ಯೆ ಅಂತ ಆಯ್ತು. ನಂಗೆ ಅಂತವರ ಜೊತೆ ಜೀವನ ಮಾಡ್ಬೇಕು ಅಂತ ಇಲ್ಲ ಅಮ್ಮ. ಈಗ ನೀವು ಅಣ್ಣ ಎಲ್ಲ ನನ್ನ ಬಗ್ಗೆ ಎಲ್ಲ ಗೊತ್ತಿದ್ದೂ ಹೇಗೆ ಪ್ರೀತಿ ಮಾಡ್ತಿರೋ ಹಾಗೆ ಅವರು ನನ್ನನ್ನ ಒಪ್ಪಬೇಕು.. ಇಲ್ಲ ಅಂದ್ರೆ ನಂಗೆ ಆ ಸಂಬಂಧನೆ ಬೇಡ.. ” ಎಂದು ಕೋಪದಿಂದ ನುಡಿದಳು.
” ಅದಿತಿ… ಎಲ್ಲೋ ಅಪರೂಪಕ್ಕೆ ಒಂದು ಸಲ ಆ ಕನಸು ಬೀಳತ್ತೆ.. ಆ ಥರ ಎಲ್ಲರಿಗೂ ಆಗುತ್ತೆ ಅಲ್ವಾ ? ಹೊಸ ಜಾಗಕ್ಕೆ ಹೋದಮೇಲೆ ನಿನಗೆ ಅದರ ಯೋಚನೆಯೇ ಬರದೆ.. ಮತ್ತೆ ಮರುಕಳಿಸಿದೆ ಇದ್ರೂ ಇರಬಹುದಲ್ವೆ… ಅದಕ್ಕೆ ನಾವು ಹೇಳಿದ ಮಾತು ಕೇಳು. ” ಎಂದರು ರಾಜೇಂದ್ರ.
ಎಲ್ಲೋ ತೀರ ಹೇಳುವಷ್ಟು ಅಪರೂಪಕ್ಕೊಮ್ಮೆ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೂ ಅಪ್ಪ ಅಮ್ಮ ಯಾಕಿಷ್ಟು ಅರ್ಥವಿಲ್ಲದ ಮಾತನಾಡುತ್ತಿದ್ದಾರೆ ಎಂದು ಅದಿತಿ ಗೆ ಬೇಸರ ತಂದಿತ್ತು. ಹೀಗೆಯೇ ಒಂದಿಷ್ಟು ವಿವಾದಗಳು ನಡೆದವು. ಅದಿತಿ ಮತ್ತು ಅಪ್ಪ ಅಮ್ಮಂದಿರ ಮಧ್ಯೆ.
” ನೋಡು ಅದಿತಿ, ಹೇಳೋವಷ್ಟು ಹೇಳಿದೀವಿ.. ಇನ್ನು ನೀನು ಏನು ಬೇಕಾದರೂ ಮಾಡ್ಕೋ.. ಹೆತ್ತವರ ಸಂಕಟ ನಿಂಗೆಲ್ಲಿ ಅರ್ಥ ಆಗತ್ತೆ..ಇಷ್ಟು ವರ್ಷ ಎಲ್ಲವೂ ನೀನು ಹೇಳಿದಂತೆ ಆಗಿದೆ.. ಇದೊಂದು ನಮ್ಮ ಮಾತು ಕೇಳೋಕೆ ಆಗಲ್ಲ ಅಂತೀಯ… ಅದೂ ನಾವೇನೋ ನಿನ್ನ ಕೆಟ್ಟದ್ದನ್ನ ಬಯಸಿ ಹೇಳ್ತಾ ಇದೀವಿ ಅನ್ನೋ ತರ ಮಾತಾಡ್ತಾ ಇದ್ದೀಯಾ.. ಏನು ಬೇಕಾದರೂ ಮಾಡ್ಕೋ.. ” ಎಂದು ಅಳುತ್ತಾ ಹೊರ ನಡೆದರು ಸುನಂದಾ.
ರಾಜೇಂದ್ರ ಕೂಡ ಮತ್ತೇನೂ ಮಾತನಾಡದೆ ಅಲ್ಲಿಂದ ತೆರಳಿದರು. ಸುನಂದಾ ಮತ್ತು ರಾಜೇಂದ್ರ ಯಾವತ್ತೂ ಅದಿತಿಗೆ ಇಷ್ಟು ಒತ್ತಾಯ ಮಾಡಿರಲಿಲ್ಲ. ಅಥವಾ ಇಷ್ಟೊಂದು ಕಠಿಣವಾಗಿ ಮಾತನಾಡಿರಲಿಲ್ಲ. ಅದಿತಿಗೆ ಬೇಜಾರಾಗಿತ್ತು.
ಕೆಲವೊಮ್ಮೆ ಹೆತ್ತವರು ಯಾಕೆ ನಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಅದಿತಿ ಯೋಚಿಸಿದಳು.
ಒಂದು ಚಿಕ್ಕ ಪೆನ್ಸಿಲ್, ಪೆನ್ ಇಂದ ಹಿಡಿದು, ಕಾಲೇಜ್ ಮುಗಿಸಿ ಕೆಲಸ ಸಿಗುವವರೆಗೂ ಅವಳಿಷ್ಟದಂತೆ ಆಗಲಿ ಎಂದು ಹೇಳಿದವರು, ಈಗ ಜೀವನದ ಅತಿ ಮುಖ್ಯವಾದ ನಿರ್ಧಾರ ಅದನ್ನು ಯಾಕೆ ತಾನು ಹೇಳಿದ್ದನ್ನು ನಿರಾಕರಿಸುತ್ತಿದ್ದಾರೆ ಎಂದೆನಿಸಿತು.
ಸ್ವಲ್ಪ ಹೊತ್ತಿನಲ್ಲಿ ಮನೋಜ್ ತನ್ನ ರೂಮಿಗೆ ತೆರಳುತ್ತಿರುವಾಗ ಅವಳ ಸಪ್ಪೆ ಮೋರೆಯನ್ನು ನೋಡಿ ಅವಳನ್ನು ಮಾತನಾಡಿಸಿದ. ಅದಿತಿ ನಡೆದ ವಿಷಯವನ್ನು ಹೇಳಿದಳು.
ತಾನು ಅಪ್ಪ ಅಮ್ಮಂದಿರಲ್ಲಿ ಮಾತನಾಡುತ್ತೇನೆಂದು ಅಲ್ಲಿಂದ ನೇರವಾಗಿ ಅಪ್ಪ ಅಮ್ಮನ ಹತ್ತಿರ ಹೋದ.
” ಅಪ್ಪ, ಏನಿದು? ಅದಿತಿ ಹೇಳಿದ್ದೆಲ್ಲ ನಿಜಾನಾ? ” ಪ್ರಶ್ನೆ ಮಾಡಿದ ಮನೋಜ್.
” ಮುದ್ದಿನ ತಂಗಿ, ತನ್ನ ಪರ ವಾದ ಮಾಡೋಕೆ ಲಾಯರ್ ಅಣ್ಣನ್ನ ನೇಮಿಸಿದಳು ಅಂತಾಯ್ತು ” ಎಂದು ನಕ್ಕರು ರಾಜೇಂದ್ರ.
ಕೆಲವೊಮ್ಮೆ ಏನಾದರೂ ವಿಷಯ ಅದಿತಿಗೆ ಇಷ್ಟವಿಲ್ಲದಿದ್ದರೆ, ಅದು ಮನೋಜ್ ಗೆ ತಿಳಿದಾಗ ಅವನು ಹೇಗಾದರೂ ಅಪ್ಪ ಅಪ್ಪನಲ್ಲಿ ಮಾತನಾಡಿ ಅದಿತಿ ಇಷ್ಟದಂತೆ ಆಗುವಂತೆ ಮಾಡುತ್ತಿದ್ದ. ಅದಕ್ಕೆ ಮನೋಜ್ ಅನ್ನು ಅದಿತಿಗೋಸ್ಕರ ಸಂಬಳ ತೆಗೆದುಕೊಳ್ಳದೆ ಕೆಲಸ ಮಾಡುವ ಲೀಗಲ್ ಅಡ್ವೈಸರ್ ಎನ್ನುತ್ತಿದ್ದರು.
” ಹೌದು ಅಪ್ಪ. ಈಗ ನಾನು ಅವಳ ಪರ ವಕೀಲನಾಗಿಯೇ ಬಂದಿದ್ದೇನೆ..ನಾನು ಕೇಳಿದ್ದಕ್ಕೆ ಉತ್ತರ ಕೊಡಿ.. ” ಎಂದ.
” ಏನ್ ಹೇಳೋದು ಮನು ?..ಸಮಯ ತುಂಬಾ ಕಡಿಮೆ ಇದೆ.ಇನ್ನೂ ಹೀಗೆ ಮಾಡ್ತಾ ಇದ್ರೆ ಆರು ತಿಂಗಳಲ್ಲಿ ಮದುವೆ ಮಾಡೋದು ಹೇಗೆ.. ” ಕೇಳಿದರು ಸುನಂದಾ.
” ಅಲ್ಲ ಅಮ್ಮ.. ಆರು ತಿಂಗಳಲ್ಲಿ ಮದುವೆ ಮಾಡಬೇಕು ಅಂತ.. ಯಾರ್ ಯಾರಿಗೋ.. ಸುಳ್ಳು ಹೇಳಿ ಮದ್ವೆ ಮುಗ್ಸಿಬಿಡ್ಬೇಕು ಅಂತಾನಾ ? ಅದು ತಪ್ಪಲ್ವ ? ” ಕೇಳಿದ ಮನೋಜ್.
” ಏನಂತ ಮಾತಾಡ್ತಾ ಇದೀಯ ಮನು ? ನಾವೇನೂ ಬೀದೀಲಿ ಹೋಗೋ ದಾಸಯ್ಯನ ಜೊತೆ ಅದಿತಿನ ಮದುವೆ ಮಾಡ್ತೀವಾ ? ನಮಗೂ ಮಗಳು ಅನ್ನೋ ಪ್ರೀತಿ ಇದೆ. ಅವಳು ಚೆನ್ನಾಗಿರಲಿ ಅಂತಾನೆ ಹೀಗೆ ಹೇಳ್ತಾ ಇರೋದು.. ” ಎಂದು ಸುನಂದಾ ಹೇಳಿದಾಗ,
” ಒಂದು ಒಳ್ಳೆ ಸಂಬಂಧ ಬಂದಿದೆ. ಇಲ್ಲಿಂದ ಸ್ವಲ್ಪ ದೂರ. ಆದರೆ ಜನ ತುಂಬಾ ಒಳ್ಳೆಯವರು. ಸ್ವಂತ ಬಿಸಿನೆಸ್ ಕೂಡ ಇದೆ. ಹುಡುಗನ ಬಗ್ಗೆನೂ ವಿಚಾರಿಸಿದೀವಿ. ಗುಣವಂತ ಅಂತಾನೆ ಎಲ್ಲರೂ ಹೇಳಿರೋದು.. ಜಾಗ ಬದಲು ಆದ್ರೆ ಅದಿತಿಗೆ ಆ ಸ್ವಪ್ನದ ಬಗ್ಗೆ ಮರೆತು ಹೋಗಬಹುದು.. ಹೊಸ ಜೀವನ ಒಳ್ಳೆಯ ಜೀವನ ಅದಿತಿಗೆ ಸಿಗತ್ತೆ. ” ಎಂದು ರಾಜೇಂದ್ರ ತಮ್ಮ ಮಾತನ್ನು ಮುಂದೆ ಇಟ್ಟರು.
ಅದು ಇದೂ ಹೇಳಿ ಕೊನೆಗೆ ಮನೋಜ್ ನ ಮನ ಒಲಿಸಿದರು. ಮತ್ತು ಅದಿತಿಯನ್ನು ಒಪ್ಪಿಸುವ ಜವಾಬ್ದಾರಿಯನ್ನು ಕೊಟ್ಟರು. ಮನೋಜ ಅದಿತಿಯ ಜೊತೆ ಮಾತನಾಡಿದ. ಅದಿತಿಯ ಒಪ್ಪಿಗೆ ಸಿಕ್ಕಿತು. ಸಂತೋಷವೇ ಇರಲಿಲ್ಲ ಅವಳ ಮುಖದಲ್ಲಿ. ಆದರೆ ಒಮ್ಮೆ ಅವರು ಹೇಳಿದ್ದೂ ಸರಿಯೇನೋ ಅನಿಸಿತ್ತು. ಹೊಸ ಜೀವನ ಪ್ರಾರಂಭ ಆದ ಮೇಲೆ ಎಲ್ಲರೂ ಹೇಳಿದಂತೆ ಎಲ್ಲವೂ ಸರಿ ಆದರೂ ಆಗಬಹುದೇನೋ ಎಂದುಕೊಂಡು ಒಲ್ಲದ ಮನಸಿನಿಂದ ಮದುವೆಗೆ ಒಪ್ಪಿದ್ದಳು ಅದಿತಿ.
ಅಪ್ಪ ಅಮ್ಮನಿಗೆ ಎಲ್ಲಿಲ್ಲದ ಖುಷಿ ಆಗಿತ್ತು.
” ಕ್ಷಮಿಸಿ ಅದಿತಿ ಮೇಡಂ. ಈ ಸಲ ಕೇಸ್ ಗೆಲ್ಲೋಕೆ ಸಾಧ್ಯ ಆಗಿಲ್ಲ. ದಯವಿಟ್ಟು ನನ್ನ ಕೆಲಸದಿಂದ ತೆಗೆಬೇಡಿ. ” ಎಂದು ನಾಟಕೀಯವಾಗಿ ಹೇಳಿ ಅವಳನ್ನು ನಗಿಸುವ ಪ್ರಯತ್ನ ಮನೋಜ್.
” ಇನ್ಮೇಲೆ ಅವಳ ಪರ ನಿಲ್ಲೋಕೆ ಹೊಸ ವಕೀಲರು ಬರ್ತಾರೆ.. ನಿನ್ನ ಹೇಗಿದ್ರೂ ಕೆಲಸದಿಂದ ತೆಗೆದು ಹಾಕೋದೇ ಆಗಿತ್ತು.. ನಿಂಗೆ ಹೊಸ ಮೇಡಂ ಬರ್ತಾರೆ..ಬಿಡು ಚಿಂತೆ ಯಾಕೆ ” ಎಂದು ರಾಜೇಂದ್ರ ಹೇಳಿದಾಗ ಎಲ್ಲರೂ ನಕ್ಕಿದ್ದರು.
ಅದಿತಿಯ ನಗು ಕೃತಕವಾಗಿತ್ತು.
” ಅದಿತಿ, ಹುಡುಗನ ಮನೆ ಎಲ್ಲಿ ಕೇಳಲ್ವ ? ” ಕೇಳಿದ ಮನೋಜ್.
ಅದಿತಿ ಮನೋಜ್ ಮುಖವನ್ನೇ ಎಲ್ಲಿ ಎನ್ನುವಂತೆ ನೋಡಿದಳು.
” ಸಕಲೇಶಪುರ !! ” ಎಂದರು ರಾಜೇಂದ್ರ.
ಅದಿತಿಯ ಮುಖದಲ್ಲಿ ಸಣ್ಣ ನಗು ಅರಳಿತ್ತು.
” ಅರೆ !! ನೋಡಿ ನನ್ನ ಮುದ್ದು ತಂಗಿ ಮುಖ ಹೇಗೆ ಅರಳಿತು ಅಂತ, ಸಕಲೇಶಪುರದ ಹೆಸರು ಕೇಳಿದ ತಕ್ಷಣ “
” ಹೌದು. ಎಲ್ಲಾ ಅವಳ್ ಅನ್ಕೊಂಡಂಗೆ ಆಗ್ತಿದೆ. ಮದುವೆ ಒಂದು ಚೆನ್ನಾಗಾಗ್ಬಿಟ್ರೆ ನಮ್ಗೆಲ್ರಿಗೂ ಸಮಾಧಾನ ಸಿಗುತ್ತೆ. ಅದಿತಿ ಕೂಡ ಹೊಸ ಜೀವನದಲ್ಲಿ ಖುಷಿಯಿಂದ ಇರುತ್ತಾಳೆ. ” ಎಂದರು ಸುನಂದ.
( ಮುಂದುವರೆಯುವುದು 🌱)
—————————-🌱—————————-
ಈ ಕಥೆ ಒಂದು ಫ್ಯಾಮಿಲಿ ಸಸ್ಪೆನ್ಸ್ – Family Suspense ಹೌದು, ಆದರೆ ಇದು ತುಂಬಾನೇ ಫಾಸ್ಟ್ ಆಗಿ ಹೋಗುವ ಥ್ರಿಲ್ಲರ್ ಶೈಲಿಯದ್ದಲ್ಲ. ಕಥೆಯ ಒಳಹರಿವು ಪ್ರತಿಯೊಂದು ಸಣ್ಣ ವಿಷಯವನ್ನೂ ವಿವರವಾಗಿ ಹೇಳ್ತಾ, ನಿಧಾನವಾಗಿ ಸಾಗುವಂತಹ ಒಂದು ಸ್ಲೋ ಬರ್ನ್ – Slow Burn ಕಥೆ.
ಒಂದು ಕಥೆ ಅದರದ್ದೇ ಆದ ಒಂದು ಲಯ ಮತ್ತು ಓಟದಲ್ಲಿ ಸಾಗಬೇಕಾಗುತ್ತದೆ ಅನ್ನೋದು ನನ್ನ ನಂಬಿಕೆ.
ನನಗೆ ಕಥೆಯನ್ನು ಶಾರ್ಟ್ ಕಟ್ ಮಾಡಿ ಮುಗಿಸಿಬಿಡಲು ಇಷ್ಟವಿಲ್ಲ. ಪ್ರತಿಯೊಂದು ಭಾವನೆಯನ್ನೂ ವಿವರವಾಗಿ ಬರೆಯಬೇಕು ಅನ್ನೋದೇ ನನ್ನ ಆಸೆ. ನಿಮಗೆ ಇಂತಹ ನಿಧಾನವಾಗಿ, ಆಳವಾಗಿ ಸಾಗುವ ಕಥೆಗಳನ್ನು ಓದಲು ಇಷ್ಟವಿದ್ದರೆ ಮಾತ್ರ ದಯವಿಟ್ಟು ನನ್ನ ಜೊತೆ ಇರಿ. ಕಥೆಯನ್ನು ಓದಲು ಸ್ವಲ್ಪ ತಾಳ್ಮೆ ಬೇಕಾಗುತ್ತದೆ. ಆದರೆ ನಿಮ್ಮ ತಾಳ್ಮೆಗೆ ಖಂಡಿತ ನಿರಾಸೆ ಮಾಡಲ್ಲ, ಒಂದು ದಿನ ಈ ಕಥೆ ನಿಮ್ಮನ್ನು ಒಂದು ಒಳ್ಳೆಯ ಅಂತ್ಯದತ್ತ ತಲುಪಿಸುತ್ತದೆ ಅನ್ನೋ ಭರವಸೆ ನನಗಿದೆ.
ಮೌನಿ
Swipe left/right or tap the sides to turn pages