ಅಭಿನವ್ ಪರಿವಾರ ರಾತ್ರಿ ಸಕಲೇಶಪುರ ತಲುಪಿದ್ದರು. ಹೋದ ತಕ್ಷಣ ಅದಿತಿಗೆ ಕರೆ ಮಾಡಿದ್ದ ಅಭಿನವ್. ಒಂದೇ ಕ್ಷಣಕ್ಕೆ ಅವಳು ಯಾವುದೋ ಬೇಜಾರಿನಲ್ಲಿದ್ದಾಳೆ ಎಂಬುದನ್ನು ಕಂಡು ಹಿಡಿದಿದ್ದ. ಅವನು ಅದರ ಬಗ್ಗೆ ಕೇಳಿದರೂ ವಿಷಯ ಹೇಳಲು ಸಾಧ್ಯವಾಗಲಿಲ್ಲ. ಸುಸ್ತಾದ ನೆಪ ಹೇಳಿಕೊಂಡು ಕರೆ ತುಂಡರಿಸಿದ್ದಳು.
ಅದಿತಿಗೆ ತಂದೆ ತಾಯಿ ಎಂದರೆ ತುಂಬಾ ಪ್ರೀತಿ ಇತ್ತು. ಬಾಲ್ಯದಿಂದಲೂ ಅವಳಿಗೆ ಯಾವುದರಲ್ಲೂ ಕೊರತೆ ಮಾಡಿರಲಿಲ್ಲ. ಪ್ರೀತಿಯಲ್ಲಂತೂ ಇಲ್ಲವೇ ಇಲ್ಲ. ಯಾವುದೇ ವಿಷಯದಲ್ಲೂ ಅವರ ಬಗ್ಗೆ ಅವಳಿಗೆ ಅಸಮಾಧಾನ ಅನ್ನುವುದು ಇರಲೇ ಇಲ್ಲ. ಆದರೆ ಈ ಮದುವೆಯ ವಿಷಯದಲ್ಲಿ ಅವಳಿಗೆ ಸಮಾಧಾನ ಅನ್ನುವುದೇ ಇಲ್ಲವಾಗಿತ್ತು. ಅವರ ವರ್ತನೆ ವಿಚಿತ್ರ ಎನಿಸಿತ್ತು ಮತ್ತು ಬೇಸರ ತರಿಸಿತ್ತು. ಜ್ಯೋತಿಷದ ವಿಷಯ ಇದ್ದುದು ಸರಿ. ಆದರೂ ಏನೋ ಒಂದು ತರಹ ಆದಷ್ಟು ಬೇಗ ಮದುವೆ ಮಾಡಿ ಕಳುಹಿಸಬಿಡಬೇಕು ಎನ್ನುವ ಭಾವನೆಯನ್ನು ಅವರು ಹೊರ ಹಾಕಿದಂತೆ ಅನಿಸಿತ್ತು ಅವಳಿಗೆ. ಹೀಗೆ ಯೋಚನೆ ಮಾಡುತ್ತಿರುವಾಗ, ಮನೋಜ್ ಅಲ್ಲಿಗೆ ಬಂದಿದ್ದ.
” ಅದಿತಿ, ಏನ್ ಯೋಚನೆ ಮಾಡ್ತಾ ಇದೀಯಾ? ಸಂಜೆ ಆಗಿದ್ದನ್ನೆಲ್ಲಾ ಮರ್ತು ಬಿಡು..ಈಗ ಬಾ ನನ್ನ ಜೊತೇನೆ ಮಲ್ಕೋ ಇವತ್ತು “
” ಇಲ್ಲ, ಅಣ್ಣ ಅದರ ಬಗ್ಗೆ ಯೋಚನೆ ಮಾಡ್ತಾ ಇರ್ಲಿಲ್ಲ.. ಅದು ಅಲ್ಲಿಗೆ ಬಿಟ್ಟು ಬಿಟ್ಟೆ..ನೀನು ಹೋಗು ಪರವಾಗಿಲ್ಲ. ನಾನು ಇಲ್ಲೇ ಇರ್ತೀನಿ..” ಎಂದು ಬಾರದ ನಗು ನಕ್ಕಿದ್ದಳು ಅವಳು.
ಮನೋಜ್ ಕಣ್ಣು ಕಿರಿದು ಮಾಡಿಕೊಂಡು, ಅವಳ ಹತ್ತಿರ ಬಂದು ಕುಳಿತು,
” ಅದನ್ನ ಯೋಚನೆ ಮಾಡ್ತಾ ಇಲ್ಲ ಅಂದ್ರೆ ಇನ್ನೇನೋ ತಲೇಲಿ ಓಡ್ತಾ ಇದೆ ಅಂತಾಯ್ತು..ಅಲ್ವಾ ? ಹೇಳು ಏನಂತ..ಮುಚ್ಚಿಡಬೇಡ.. ನನ್ನ ಹತ್ರ..” ಎಂದು ನೇರವಾಗಿ ಕೇಳಿದ.
ಅದಿತಿಗೆ ಅಣ್ಣನೇ ಬೆಸ್ಟ್ ಫ್ರೆಂಡ್ ಚಿಕ್ಕಂದಿನಿಂದ, ಎಲ್ಲ ವಿಷಯವನ್ನೂ ಹಂಚಿಕೊಳ್ಳುತ್ತಿದ್ದಳು.