ಹುಚ್ಚು ಪ್ರೀತಿ ❤️🔥 – 3
ಹುಚ್ಚು ಪ್ರೀತಿ – ೩ ❤️🔥
ಮದುವೆ ನಿಂತು ಎರಡು ದಿನಗಳಾಗಿದ್ದರೂ ಆರಾಧ್ಯ ಮನೆಯ ವಾತಾವರಣ ಸಹಜವಾಗಿರಲಿಲ್ಲ. ಬಂದವರು ಹೋಗಿದ್ದರು. ಮಂಟಪದಲ್ಲಿ ಉಳಿದಿದ್ದ ಅಲಂಕಾರಗಳನ್ನು ಕೂಡ ತೆಗೆದುಹಾಕಲಾಗಿತ್ತು. ಮನೆಯ ಮುಂದೆ ಕಟ್ಟಿದ್ದ ಹೂವಿನ ತೋರಣ ಮಾತ್ರ ಇನ್ನೂ ಹಾಗೆಯೇ ಇತ್ತು. ಅದನ್ನು ನೋಡಿದಾಗಲೆಲ್ಲ ಆರಾಧ್ಯಳಿಗೆ ನಡೆದದ್ದೆಲ್ಲ ನೆನಪಾಗುತ್ತಿತ್ತು.
ಅವಳ ಮದುವೆ ನಿಂತಿದ್ದಕ್ಕೆ ಮನೆಯವರು ಯಾರೂ ಅವಳನ್ನು ದೂಷಿಸಲಿಲ್ಲ. ಆದರೆ ಎಲ್ಲರ ಮನಸ್ಸಿನಲ್ಲೂ ಒಂದೊಂದು ಪ್ರಶ್ನೆ ಇತ್ತು. ಆ ಪ್ರಶ್ನೆಗೆ ಉತ್ತರ ಕೊಡುವುದು ಆರಾಧ್ಯಳಿಗೂ ಸಾಧ್ಯವಾಗುತ್ತಿರಲಿಲ್ಲ.
ರುದ್ರವೀರ್ ಮತ್ತೆ ಆ ದಿನದ ನಂತರ ಮನೆಗೆ ಬಂದಿರಲಿಲ್ಲ. ಆದರೆ ಅವನ ಇರುವಿಕೆ ಮಾತ್ರ ಎಲ್ಲರ ಮಾತಿನಲ್ಲೂ ಇತ್ತು.
ಕಾರ್ತಿಕ್ ಅವನ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದ. ಅಪ್ಪನ ಬಳಿ ಕೇಳಿದ್ದ. ಪರಿಚಯದವರ ಬಳಿ ವಿಚಾರಿಸಿದ್ದ. ಸಿಕ್ಕ ಮಾಹಿತಿಯೆಲ್ಲ ಒಂದೇ ವಿಷಯ ಹೇಳುತ್ತಿತ್ತು. ರುದ್ರವೀರ್ ಸಾಮಾನ್ಯ ಹುಡುಗನಲ್ಲ. ಅವನ ಕುಟುಂಬ ನಗರದ ದೊಡ್ಡ ಕುಟುಂಬಗಳಲ್ಲಿ ಒಂದು. ವ್ಯವಹಾರದಲ್ಲಿ ಹೆಸರು, ಹಣ, ಪ್ರಭಾವ ಎಲ್ಲವೂ ಇತ್ತು. ಅವನ ಕಂಪನಿಯ ಅಡಿಯಲ್ಲಿ ನಡೆಯುತ್ತಿದ್ದ ಯೋಜನೆಗಳು ನಗರದ ಹಲವು ಭಾಗಗಳಲ್ಲಿ ಹರಡಿದ್ದವು. ದೊಡ್ಡ ದೊಡ್ಡ ರಾಜಕಾರಣಿಗಳಿಂದ ಹಿಡಿದು ಅಧಿಕಾರಿಗಳವರೆಗೆ ಅವನ ಪರಿಚಯವಿತ್ತು. ಅವನ ಒಂದು ಫೋನ್ಕಾಲ್ಗೆ ಕೆಲಸಗಳು ನಡೆಯುತ್ತಿದ್ದವು ಅನ್ನುವ ಮಾತುಗಳೂ ಕೇಳಿಬಂದಿದ್ದವು.
ಆದರೆ ಅವನ ವೈಯಕ್ತಿಕ ಜೀವನದ ಬಗ್ಗೆ ಹೊರಗಿನವರಿಗೆ ಹೆಚ್ಚಾಗಿ ಏನೂ ಗೊತ್ತಿರಲಿಲ್ಲ. ಅವನಿಗೆ ಮದುವೆಯಾಗುವ ಯೋಚನೆಯೇ ಇರಲಿಲ್ಲ ಅನ್ನೋ ಮಾತೂ ಕೇಳಿಬಂದಿತ್ತು. ಹಾಗಿದ್ದವನು ಆರಾಧ್ಯಳ ಮದುವೆ ದಿನವೇ ಬಂದು ಎಲ್ಲರ ಮುಂದೆ ತನ್ನನ್ನು ಮದುವೆಯಾಗಬೇಕಾದವನು ಎಂದು ಹೇಳಿದ್ದು ಮಾತ್ರ ಕಾರ್ತಿಕ್ಗೆ ಅರ್ಥವಾಗುತ್ತಿರಲಿಲ್ಲ.
ಆರಾಧ್ಯ ಮಾತ್ರ ಅವನ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿರಲಿಲ್ಲ. ಅವನ ಹೆಸರು ಕೇಳಿದರೂ ಅವಳಿಗೆ ಪಾದದ ಉರಿ ನೆತ್ತಿಗೆ ಏರುತ್ತಿತ್ತು. ಅವನ ಸಂದೇಶ ಬಂದರೆ ಅವನನ್ನು ಕೊಲ್ಲುವಷ್ಟು ಕೋಪ ಬರುತ್ತಿತ್ತು. ಆದರೆ ವಿಚಿತ್ರವೆಂದರೆ, ಅವನು ಮತ್ತೆ ಯಾವಾಗ ಸಂದೇಶ ಕಳುಹಿಸುತ್ತಾನೆ ಎನ್ನುವ ನಿರೀಕ್ಷೆ ಅವಳಿಗೇ ಗೊತ್ತಾಗದಂತೆ ಅವಳ ಮನಸು ಕಾಯುತ್ತಿತ್ತು. ಆ ನಿರೀಕ್ಷೆಯನ್ನು ಅವಳು ತನ್ನ ಮೇಲೆ ಕೋಪಗೊಂಡು ದೂರ ಮಾಡಿಕೊಳ್ಳುತ್ತಿದ್ದಳು.
ಆ ದಿನ ಬೆಳಗ್ಗೆ ಅವಳು ಅಡುಗೆಮನೆಯಲ್ಲಿದ್ದ ಅಮ್ಮನಿಗೆ ಸಹಾಯ ಮಾಡುತ್ತಿದ್ದಾಗ ಮೆಸೇಜ್ ಬಂದಿತ್ತು ರುದ್ರವೀರ್ನಿಂದ.
“ಬೆಳಗ್ಗೆ ತಿಂಡಿ ತಿಂದೆಯಾ?”
ಅವನ ಮೆಸೇಜ್ ನೋಡಿದ ತಕ್ಷಣ ಆರಾಧ್ಯಳ ಮುಖ ಗಂಟಿಕ್ಕಿತು.
‘ಅವನಿಗೆ ಇಷ್ಟು ಹಕ್ಕು ಎಲ್ಲಿಂದ ಬಂತು? ಮದುವೆ ನಿಲ್ಲಿಸಿದರೆ ಸಾಕಾಗಲಿಲ್ಲವೇ? ಈಗ ನನ್ನ ಊಟದ ಬಗ್ಗೆಯೂ ವಿಚಾರಿಸಬೇಕಾ?’ ಎಂದು ಗೊಣಗಿಕೊಂಡು ಮೊಬೈಲ್ ಪಕ್ಕಕ್ಕಿಟ್ಟಳು.
ಕೆಲವೇ ನಿಮಿಷಗಳ ನಂತರ ಮತ್ತೊಂದು ಮೆಸೇಜ್ ಬಂತು.
“ಉತ್ತರ ಕೊಡಬೇಕಿಲ್ಲ. ನೀನು ತಿಂಡಿ ಮಾಡಿಲ್ಲ ಅಂತ ನನಗೆ ಗೊತ್ತು.”
ಆರಾಧ್ಯಳಿಗೆ ಆಶ್ಚರ್ಯವಾಯಿತು. ಅವಳು ನಿಜವಾಗಿಯೂ ಆ ದಿನ ಬೆಳಗ್ಗಿನಿಂದ ಏನೂ ತಿಂದಿರಲಿಲ್ಲ. ಮನೆಯವರ ಒತ್ತಾಯಕ್ಕೆ ಎರಡು ತುತ್ತು ತಿನ್ನುವ ಮನಸ್ಸೂ ಇರಲಿಲ್ಲ.
ಅಮ್ಮ ಅವಳನ್ನು ಗಮನಿಸಿ, “ಏನಾಯ್ತು? ಯಾರ ಮೆಸೇಜ್?” ಎಂದು ಕೇಳಿದರು.
“ಏನಿಲ್ಲಮ್ಮ.” ಎಂದವಳು ತಕ್ಷಣ ಫೋನ್ ಪಕ್ಕಕ್ಕಿಟ್ಟಳು.
ಆದರೆ ಅವಳ ಮನಸ್ಸಿನಲ್ಲಿ ಕೊಂಚ ಅಸಮಾಧಾನ ಶುರುವಾಗಿತ್ತು. ತಾನು ಏನು ಮಾಡುತ್ತಿದ್ದೇನೆ, ಏನು ತಿನ್ನುತ್ತಿದ್ದೇನೆ ಅನ್ನುವುದನ್ನೂ ತಿಳಿದುಕೊಳ್ಳುವಷ್ಟು ಅವನಿಗೆ ತನ್ನ ಮೇಲೆ ಗಮನವೇಕೆ? ಈ ಎರಡು ದಿನಗಳಲ್ಲಿ ಅವನು ನೇರವಾಗಿ ಮನೆಗೆ ಬಂದಿರಲಿಲ್ಲ. ಆದರೂ ಅವನ ಮೆಸೇಜ್ಗಳು ಮಾತ್ರ ಅವಳನ್ನು ನೆಮ್ಮದಿಯಿಂದ ಇರಲು ಬಿಡುತ್ತಿರಲಿಲ್ಲ.
ಅವಳು ಮತ್ತೆ ಮೊಬೈಲ್ ತೆಗೆದು ಆ ಮೆಸೇಜ್ ನೋಡಿದಳು. ಉತ್ತರ ಬರೆಯಬೇಕೋ ಬೇಡವೋ ಎಂದು ಯೋಚಿಸಿ ಕೊನೆಗೆ ಬೇಡ ಎಂದು ಮೊಬೈಲ್ ಲಾಕ್ ಮಾಡಿದಳು.
———————————❤️———————————
ಅದೇ ಸಮಯದಲ್ಲಿ ನಗರದ ಮಧ್ಯಭಾಗದಲ್ಲಿದ್ದ ರಾಯರ ಸಮೂಹ ಸಂಸ್ಥೆಗಳ ಮುಖ್ಯ ಕಚೇರಿಯ ತನ್ನ ವಿಶಾಲವಾದ ಕ್ಯಾಬಿನ್ನಲ್ಲಿ ರುದ್ರವೀರ್ ಕೆಲಸದಲ್ಲಿ ಇದ್ದ.
ಮುಂದೆ ಒಂದಿಷ್ಟು ಫೈಲ್ಸ್ ಇದ್ದರೂ ಅವನ ಗಮನ ಯಾವುದರಲ್ಲೂ ಇರಲಿಲ್ಲ. ಒಂದು ದೊಡ್ಡ ನಿರ್ಮಾಣ ಯೋಜನೆಗೆ ಸಂಬಂಧಿಸಿದ ಸಭೆ ಮುಗಿಸಿ ಬಂದಿದ್ದ ಅವನ ಮುಂದೆ ಇನ್ನೂ ಕೆಲವು ಪ್ರಮುಖ ಕಡತಗಳಿದ್ದವು. ವಿದೇಶಿ ಕ್ಲೈಂಟ್ ಜೊತೆಗಿನ ಒಪ್ಪಂದದ ಅಂತಿಮ ನಿರ್ಧಾರವೂ ಅವನಿಗಾಗಿ ಕಾಯುತ್ತಿತ್ತು. ಆದರೆ ಅವನ ಮನಸ್ಸು ಮಾತ್ರ ಬೆಳಗ್ಗೆಯಿಂದ ಆರಾಧ್ಯಳ ಕಡೆಗೇ ಇತ್ತು.
ಮೊಬೈಲ್ನಲ್ಲಿ ಅವಳು ಮೆಸೇಜ್ ಓದಿದ್ದಾಳೆ ಎನ್ನುವ ಸೂಚನೆ ಕಾಣಿಸಿತ್ತು. ಆದರೆ ಉತ್ತರ ಮಾತ್ರ ಬಂದಿರಲಿಲ್ಲ.
“ತುಂಬಾ ಹಠ ಮಾಡ್ತೀಯಾ…” ಎಂದುಕೊಂಡವನ ತುಟಿಯಂಚಿನಲ್ಲಿ ಸಣ್ಣ ನಗು ಮೂಡಿತು.
ಅಷ್ಟರಲ್ಲಿ ಆದಿತ್ಯ ಒಳಗೆ ಬಂದು ಕೆಲವು ಪೇಪರ್ಸ್ ಮೇಜಿನ ಮೇಲಿಟ್ಟು ಹೊರಗೆ ಹೋಗಲು ತಿರುಗಿದಾಗ,
“ನಿಲ್ಲು. ಆರಾಧ್ಯಳ ಮನೆಗೆ ಇವತ್ತು ಯಾರಾದರೂ ಹೋಗ್ತಾರಾ?” ಎಂದು ಕೇಳಿದ ರುದ್ರವೀರ್
“ಯಾಕೆ ಅಣ್ಣ?”
“ಹೋಗ್ತಾರಾ ಇಲ್ಲವಾ? ಅಷ್ಟಕ್ಕೆ ಉತ್ತರ ಕೊಡು. ಉಳಿದಿದ್ದು ನಿಂಗೆ ಬೇಡ.”
“ಇಲ್ಲ. ಯಾರೂ ಹೋಗಲ್ಲ.”
“ಹಾಗಾದರೆ ಸಂಜೆ ನಾನು ಹೋಗ್ತೀನಿ.” ಎಂದು ರುದ್ರ ತನ್ನ ಕೆಲಸದಲ್ಲಿ ಮುಳುಗಿದ.
ಆದಿತ್ಯ ಕೆಲವು ಕ್ಷಣ ಅವನನ್ನೇ ನೋಡುತ್ತಿದ್ದ. ಕೊನೆಗೆ,
“ಅಣ್ಣ, ನೀನು ಮತ್ತೆ ಅವರ ಮನೆಗೆ ಹೋಗೋದು ಒಳ್ಳೆಯದಲ್ಲ. ಈಗಾಗಲೇ ಮದುವೆ ನಿಂತಿದ್ದಕ್ಕೆ ಅವರು ತುಂಬಾ ಬೇಸರದಲ್ಲಿದ್ದಾರೆ. ನೀನು ಮತ್ತೆ ಮತ್ತೆ ಹೋದರೆ ಸಮಸ್ಯೆ ಆಗಬಹುದು.”
“ನಾನು ಹೋಗೋದು ಅವಳನ್ನು ನೋಡೋಕೆ ಅಲ್ಲ. ಅವಳ ಅಪ್ಪನ ಜೊತೆ ಮಾತನಾಡೋಕೆ.”
“ಆದರೂ…”
“ಆದಿತ್ಯ. ನಾನು ಏನು ಮಾಡಬೇಕು ಅನ್ನೋದನ್ನ ನೀನು ಹೇಳಬಹುದು. ಆದರೆ ನಾನು ಏನು ಮಾಡಬಾರದು ಅನ್ನೋದನ್ನ ನಿರ್ಧರಿಸೋಕೆ ಪ್ರಯತ್ನಿಸಬೇಡ.” ಎಂದು ಗಡುಸಾಗಿ ಹೇಳಿದಾಗ,
ಆದಿತ್ಯ ಏನೋ ಹೇಳಬೇಕು ಅನಿಸಿದರೂ ಸುಮ್ಮನಾದ. ಕೆಲವು ವಿಷಯಗಳಲ್ಲಿ ಅವನ ಅಣ್ಣನನ್ನು ತಡೆಯಲು ಸಾಧ್ಯವಿಲ್ಲ ಅನ್ನುವುದು ಅವನಿಗೆ ಚೆನ್ನಾಗಿ ಗೊತ್ತು.
ಆದಿತ್ಯ ಹೊರಗೆ ಹೋದ ನಂತರ ರುದ್ರವೀರ್ ಮತ್ತೆ ಮೊಬೈಲ್ ಕೈಗೆತ್ತಿಕೊಂಡ. ಆರಾಧ್ಯಳ ಫೋಟೋ ತೆರೆದು ಕೆಲವು ಕ್ಷಣ ನೋಡಿದ. ಅವಳ ಮುಖದಲ್ಲಿದ್ದ ಆ ನಗು ಅವನಿಗೆ ಯಾವಾಗಲೂ ಇಷ್ಟವಾಗುತ್ತಿತ್ತು. ಆದರೆ ಈಗ ಅವಳು ತನ್ನನ್ನು ನೋಡಿದಾಗ ನಗುವುದಿರಲಿ, ಮುಖ ತಿರುಗಿಸುತ್ತಿದ್ದಳು. ಅದೊಂದು ಬೇಸರದ ವಿಷಯ. ಆದರೆ ಅವಳನ್ನು ಬಿಟ್ಟುಕೊಡುವ ಯೋಚನೆ ಮಾತ್ರ ಅವನ ಮನಸ್ಸಿಗೆ ಬಂದಿರಲಿಲ್ಲ.
ಅಷ್ಟರಲ್ಲಿ ಜಗ್ಗನ ಫೋನ್ ಬಂದಿತ್ತು. ಕೆಲವು ವ್ಯವಹಾರದ ವಿಚಾರಗಳನ್ನು ಅವನಿಗೆ ತಿಳಿಸಿದ ಜಗ್ಗ, ಒಂದು VIP ರುದ್ರವೀರ್ ಜೊತೆ ಮಾತನಾಡಲು ಕಾಯುತ್ತಿದ್ದಾರೆ ಎಂದ.
“ಅವರನ್ನು ಕಾಯಲು ಹೇಳು. ನಾನು ಬಂದ ಮೇಲೆ ಮಾತಾಡ್ತೀನಿ.”
“ಸರ್, ಅವರು ಈಗಲೇ ಮಾತನಾಡಬೇಕು ಅಂತ…”
“ಜಗ್ಗ, ನಾನು ಹೇಳಿದ್ದು ಕೇಳಿಸಲಿಲ್ಲವಾ?”
“ಸರಿ ಸರ್.”
ಕರೆ ಮುಗಿಸಿದ ರುದ್ರವೀರ್ ಮತ್ತೆ ಕೆಲಸದತ್ತ ಗಮನ ಹರಿಸಿದ. ಅವನಿಗೆ ತನ್ನ ವ್ಯವಹಾರ, ತನ್ನ ಜನ, ತನ್ನ ಪ್ರಭಾವ ಎಲ್ಲವೂ ಮುಖ್ಯವಾಗಿದ್ದವು. ಆದರೆ ಅವನ ಜೀವನದಲ್ಲಿ ಮೊದಲ ಬಾರಿಗೆ ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆಯುತ್ತಿದ್ದದ್ದು ಆರಾಧ್ಯ ಮಾತ್ರ.
———————————❤️———————————
ಸಂಜೆ ರುದ್ರವೀರ್ ಆರಾಧ್ಯಳ ಮನೆಗೆ ಬಂದಾಗ ಕಾರ್ತಿಕ್ ಹೊರಗೇ ಇದ್ದ. ರುದ್ರವೀರ್ ಕಾರಿನಿಂದ ಇಳಿಯುತ್ತಿದ್ದಂತೆ ಕಾರ್ತಿಕ್ನ ಮುಖ ಗಂಟಿಕ್ಕಿತು.
“ನೀನು ಮತ್ತೆ ಯಾಕೆ ಬಂದಿದ್ದೀಯ?” ಎಂದು ಕೋಪದಿಂದ ಕೇಳಿದ.
ರುದ್ರವೀರ್ ಅವನನ್ನು ಒಮ್ಮೆ ನೋಡಿದ. ಕಾರ್ತಿಕ್ನ ಕೋಪ ಅವನಿಗೆ ಅರ್ಥವಾಗುತ್ತಿತ್ತು. ಆದರೂ ಅದಕ್ಕೆ ಉತ್ತರಿಸುವ ಅಗತ್ಯವಿಲ್ಲ ಎನ್ನುವಂತೆ ಶಾಂತವಾಗಿ, “ನಿಮ್ಮ ಅಪ್ಪನನ್ನು ನೋಡಬೇಕು.” ಎಂದ.
“ಅವರಿಗೆ ನಿನ್ನನ್ನು ನೋಡೋ ಅವಶ್ಯಕತೆ ಇಲ್ಲ. ನಡಿ ಇಲ್ಲಿಂದ.”
“ಕಾರ್ತಿಕ್, ನಿನ್ನ ತಂಗಿಯ ವಿಷಯದಲ್ಲಿ ನಿನಗೆ ಕೋಪ ಬರೋದು ಸಹಜ. ಅದಕ್ಕೆ ನಾನು ಉತ್ತರ ಕೊಡಬಹುದು. ಆದರೆ ನಿನ್ನ ಅಪ್ಪನ ಜೊತೆ ಮಾತನಾಡಬೇಕಾದ ವಿಷಯಕ್ಕೆ ನೀನು ಅಡ್ಡ ಬರಬೇಡ.”
“ನನ್ನ ತಂಗಿಯ ಜೀವನ ಹಾಳು ಮಾಡಿದ್ದು ನೀನು. ಈಗ ಇನ್ನೇನು ಮಾತನಾಡಬೇಕು?”
ರುದ್ರವೀರ್ನ ಮುಖದಲ್ಲಿದ್ದ ಸಣ್ಣ ನಗು ಮಾಯವಾಯಿತು.
“ನಾನು ಅವಳ ಜೀವನ ಹಾಳು ಮಾಡಿದ್ದೀನಾ, ಇಲ್ಲ ಅವಳ ಜೀವನದಲ್ಲಿ ಬರಬೇಕಾದವನು ನಾನು ಅನ್ನೋದನ್ನ ಕಾಲವೇ ತೋರಿಸುತ್ತೆ. ಈಗ ನನಗೆ ನಿಮ್ಮ ಅಪ್ಪನನ್ನು ನೋಡಬೇಕು.”
ಕಾರ್ತಿಕ್ ಏನೂ ಹೇಳದೆ ಒಳಗೆ ಹೋದ. ಸ್ವಲ್ಪ ಹೊತ್ತಿನ ನಂತರ ರಾಘವೇಂದ್ರ ಅವರು ಹೊರಗೆ ಬಂದರು.
“ಬಾ ರುದ್ರ.”
ಕಾರ್ತಿಕ್ ಅಸಮಾಧಾನದಿಂದ ಹಿಂದೆ ಸರಿದ. ಇಬ್ಬರೂ ಒಳಗೆ ಹೋದರು. ಆರಾಧ್ಯ ಮೇಲಿನ ಕೋಣೆಯ ಕಿಟಕಿಯಿಂದ ಕೆಳಗೆ ನೋಡುತ್ತಿದ್ದಳು. ರುದ್ರವೀರ್ ಬಂದಿದ್ದಾನೆ ಅನ್ನುವುದು ಗೊತ್ತಾದ ಕ್ಷಣದಿಂದಲೇ ಅವಳ ಮನಸ್ಸು ಅಶಾಂತವಾಗಿತ್ತು. ಅವನು ಅಪ್ಪನ ಜೊತೆ ಏನು ಮಾತನಾಡುತ್ತಿದ್ದಾನೆ ಅನ್ನುವುದನ್ನು ಕೇಳಲು ಪ್ರಯತ್ನಿಸಲಿಲ್ಲ. ಆದರೆ ಕೆಳಗಿನಿಂದ ಕೇಳಿಬರುವ ಪ್ರತಿಯೊಂದು ಧ್ವನಿಯೂ ಅವಳ ಗಮನ ಸೆಳೆಯುತ್ತಿತ್ತು.
ಹಾಲ್ನಲ್ಲಿ ಕುಳಿತ ರಾಘವೇಂದ್ರ ಅವರು ಮೊದಲು ಅವನಿಗೆ ನೀರು ಕೊಟ್ಟರು.
“ಹೇಳು ಮಗಾ. ಏನು ಮಾತನಾಡಬೇಕು?” ಎಂದು ರಾಘವೇಂದ್ರ ಕೇಳಿದರು.
“ನಿಮ್ಮ ಜೊತೆ ಆರಾಧ್ಯಳ ಬಗ್ಗೆ ಮಾತನಾಡಬೇಕು.”
“ಅವಳ ಬಗ್ಗೆ ಏನು ಮಾತನಾಡಬೇಕು? ಮದುವೆ ನಿಂತು ಎರಡು ದಿನ ಆಗಿದೆ. ಅವಳು ಇನ್ನೂ ಆ ಘಟನೆಯಿಂದ ಹೊರಗೆ ಬಂದಿಲ್ಲ. ನೀನು ಅಂದು ಮಂಟಪದಲ್ಲಿ ಮಾಡಿದ್ದರಿಂದ ಅವಳಿಗೆ ಎಷ್ಟು ನೋವಾಗಿದೆ ಅನ್ನೋದು ನಿನಗೆ ಗೊತ್ತಿದೆಯಾ?”
“ಗೊತ್ತಿದೆ.”
“ಹಾಗಿದ್ದರೆ ಮತ್ತೆ ಮತ್ತೆ ಅವಳ ಜೀವನಕ್ಕೆ ಯಾಕೆ ಬರುತ್ತಿದ್ದೀಯ? ಅವಳಿಗೆ ನಿನ್ನ ಮೇಲೆ ಯಾವುದೇ ಭಾವನೆ ಇಲ್ಲ. ನೀನು ಅವಳನ್ನು ಪ್ರೀತಿಸುತ್ತೀಯ ಅನ್ನೋ ಕಾರಣಕ್ಕೆ ಅವಳೂ ನಿನ್ನನ್ನು ಒಪ್ಪಿಕೊಳ್ಳಬೇಕು ಅಂತಿಲ್ಲ.”
“ನೀವು ಹೇಳಿದ್ದು ನಿಜ. ಅವಳಿಗೆ ನನ್ನ ಮೇಲೆ ಪ್ರೀತಿ ಇಲ್ಲ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅವಳು ನನ್ನ ಜೀವನದಲ್ಲಿ ಎಷ್ಟು ಮುಖ್ಯ ಅನ್ನೋದನ್ನ ನೀವು ಅರ್ಥಮಾಡಿಕೊಳ್ಳಬೇಕು.”
“ನೀನು ಆರಾಧ್ಯಳನ್ನು ನಿಜವಾಗಿಯೂ ಪ್ರೀತಿಸುತ್ತೀಯಾ?” ಎಂದು ಅವರು ನೇರವಾಗಿ ಪ್ರಶ್ನಿಸಿದರು.
“ಹೌದು.”
“ಎಷ್ಟು ದಿನದಿಂದ?”
“ಹೇಳೋಕೆ ಆಗೋದಿಲ್ಲ.”
“ಅವಳಿಗೆ ನಿನ್ನ ಬಗ್ಗೆ ಏನೂ ಗೊತ್ತಿಲ್ಲ. ಅವಳಿಗೆ ನೀನು ಇಷ್ಟವಿಲ್ಲ. ಆದರೂ ಯಾಕೆ ಹಿಂದೆ ಬಿದ್ದಿದ್ದೀಯ?”
ರುದ್ರವೀರ್ ಗೆ ತುಸು ಕೋಪ ಬಂದಿತ್ತು.
“ನಾನು ಅವಳನ್ನು ಯಾವತ್ತೂ ಪ್ರೀತಿಸಬೇಕು ಅಂತ ನಿರ್ಧರಿಸಿ ಪ್ರೀತಿಸಿಲ್ಲ. ಅದು ತನ್ನಷ್ಟಕ್ಕೆ ಆಗಿಹೋಗಿತ್ತು. ಅವಳು ನನ್ನ ಜೀವನಕ್ಕೆ ಯಾವಾಗ ಬಂದಳು ಅನ್ನೋದು ಅವಳಿಗೆ ನೆನಪಿಲ್ಲ. ಆದರೆ ನನಗೆ ಎಲ್ಲವೂ ನೆನಪಿದೆ. ಹದಿನಾಲ್ಕು ವರ್ಷಗಳ ಹಿಂದೆ ನಡೆದಿದ್ದು.”
ಆರಾಧ್ಯಳ ಹೃದಯ ಒಮ್ಮೆ ಜೋರಾಗಿ ಹೊಡೆದುಕೊಂಡಿತು.
ರುದ್ರವೀರ್ ಅವಳನ್ನು ಮೊದಲ ಬಾರಿಗೆ ನೋಡಿದ್ದು ಇವತ್ತು ಅಲ್ಲವೇ? ಹಾಗಾದರೆ ಹದಿನಾಲ್ಕು ವರ್ಷಗಳ ಹಿಂದೆಯೇ ನಮ್ಮಿಬ್ಬರ ನಡುವೆ ಏನೋ ನಡೆದಿತ್ತಾ? ಅವಳಿಗೆ ಕೆಳಗೆ ಹೋಗಿ ಕೇಳಬೇಕು ಅನ್ನಿಸಿದರೂ ಸುಮ್ಮನಾದಳು.
“ಹದಿನಾಲ್ಕು ವರ್ಷಗಳ ಹಿಂದೆನಾ? ಏನದು?”
“ಅದನ್ನೆಲ್ಲ ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಒಂದು ವಿಷಯ ಮಾತ್ರ ನಿಮಗೆ ಹೇಳಬೇಕು. ನಾನು ಆರಾಧ್ಯಳನ್ನು ಕೇವಲ ಇವತ್ತು ನೋಡಿ ಇಷ್ಟಪಟ್ಟಿಲ್ಲ. ಅವಳನ್ನು ಹುಡುಕಿಕೊಂಡು ಬಂದಿದ್ದೇನೆ. ಇಷ್ಟು ವರ್ಷ ನನ್ನ ಮನಸ್ಸಿನಲ್ಲಿ ಅವಳಿದ್ದಾಳೆ.”
ರಾಘವೇಂದ್ರ ಅವರು ದೀರ್ಘವಾಗಿ ಉಸಿರೆಳೆದರು.
“ನಿನ್ನ ಭಾವನೆಗಳನ್ನು ನಾನು ಗೌರವಿಸುತ್ತೇನೆ ರುದ್ರ. ಆದರೆ ನನ್ನ ಮಗಳ ಜೀವನದ ನಿರ್ಧಾರವನ್ನು ಅವಳೇ ತೆಗೆದುಕೊಳ್ಳಬೇಕು. ಅವಳಿಗೆ ಇಷ್ಟವಿಲ್ಲದಿದ್ದರೆ ನಾನು ಅವಳನ್ನು ನಿನ್ನ ಜೊತೆ ಮದುವೆ ಮಾಡಲು ಒತ್ತಾಯಿಸುವುದಿಲ್ಲ.”
“ನಿಮ್ಮ ಮಗಳ ನಿರ್ಧಾರವನ್ನು ನೀವು ಗೌರವಿಸಬೇಕು ಅನ್ನೋದರಲ್ಲಿ ನನಗೂ ಒಪ್ಪಿಗೆ ಇದೆ. ಆದರೆ ನನ್ನ ಮಾತನ್ನೂ ನೀವು ಅರ್ಥಮಾಡಿಕೊಳ್ಳಬೇಕು.”
“ಏನು ಅರ್ಥಮಾಡಿಕೊಳ್ಳಬೇಕು?”
“ನಾನು ಈಗ ನಿಮ್ಮ ಜೊತೆ ತುಂಬಾ ಗೌರವದಿಂದ, ತಾಳ್ಮೆಯಿಂದ ಮಾತನಾಡುತ್ತಿದ್ದೇನೆ. ಅದನ್ನೇ ನನ್ನ ಅಸಹಾಯಕತೆ ಅಂತ ತಿಳಿದುಕೊಳ್ಳಬೇಡಿ.”
“ರುದ್ರ…”
“ನಾನು ನಿಮ್ಮನ್ನು ಗೌರವಿಸುತ್ತೇನೆ. ಅದಕ್ಕಾಗಿಯೇ ನಿಮ್ಮ ಮನೆಗೆ ಬಂದು ಮಾತನಾಡುತ್ತಿದ್ದೇನೆ. ಆದರೆ ನಾಳೆ ಯಾರಾದರೂ ಬಂದು ಆರಾಧ್ಯಳಿಗೆ ಮತ್ತೊಂದು ಮದುವೆ ನಿಶ್ಚಯ ಮಾಡಬೇಕು, ಅವಳನ್ನು ಬೇರೆ ಯಾರಿಗಾದರೂ ಕೊಡಬೇಕು ಅಂತ ಪ್ರಯತ್ನಿಸಿದರೆ, ಇವತ್ತು ನಿಮ್ಮ ಮುಂದೆ ಕುಳಿತಿರುವ ಈ ರುದ್ರವೀರ್ನನ್ನು ಮತ್ತೆ ನೋಡಲು ಸಾಧ್ಯವಾಗುವುದಿಲ್ಲ. ನನ್ನ ತಾಳ್ಮೆ ಮುಗಿದ ಮೇಲೆ ನಾನು ಹೇಗೆ ವರ್ತಿಸುತ್ತೇನೆ ಅನ್ನೋದು ನಿಮಗೂ ಗೊತ್ತಾಗುತ್ತದೆ.”
“ನೀನು ನನ್ನನ್ನು ಬೆದರಿಸುತ್ತಿದ್ದೀಯಾ?” ಎಂದು ರಾಘವೇಂದ್ರ ಅವರು ಕೇಳಿದರು.
“ಇಲ್ಲ. ನಿಮಗೆ ಮೊದಲೇ ಹೇಳ್ತಾ ಇದೀನಿ. ನಿಮ್ಮ ಮಗಳಿಗೆ ತೊಂದರೆ ಕೊಡಬೇಕೆಂಬ ಉದ್ದೇಶ ನನಗಿಲ್ಲ. ಅವಳನ್ನು ನೋಯಿಸುವುದೂ ನನಗೆ ಇಷ್ಟವಿಲ್ಲ. ಆದರೆ ಅವಳನ್ನು ನನ್ನಿಂದ ದೂರ ಮಾಡುವ ಪ್ರಯತ್ನವನ್ನು ಮಾತ್ರ ನಾನು ಸುಮ್ಮನೆ ನೋಡುತ್ತಾ ಕೂರಲ್ಲ.”
“ಅವಳು ನಿನ್ನನ್ನು ಒಪ್ಪಿಕೊಳ್ಳದಿದ್ದರೆ?”
ಅವನ ತುಟಿಯಂಚಿನಲ್ಲಿ ವ್ಯಂಗ್ಯ ನಗು ಮೂಡಿತು.
“ಅವಳು ಒಪ್ಪಿಕೊಳ್ಳುವ ದಿನಕ್ಕಾಗಿ ಕಾಯುತ್ತೇನೆ. ಆದರೆ ಅವಳು ನನ್ನ ಜೀವನದಿಂದ ಹೊರಹೋಗುತ್ತಾಳೆ ಅನ್ನೋ ನಿರ್ಧಾರವನ್ನು ಮಾತ್ರ ನಾನು ಒಪ್ಪಿಕೊಳ್ಳಲ್ಲ.”
“ಇದು ಪ್ರೀತಿ ರುದ್ರ. ಹಠವಲ್ಲ.”
“ನನಗೆ ಪ್ರೀತಿ ಅಂದ್ರೆ ಏನು ಅಂತ ಯಾರೂ ಕಲಿಸಬೇಕಿಲ್ಲ. ನಾನು ಅವಳನ್ನು ಎಷ್ಟು ಪ್ರೀತಿಸುತ್ತೇನೆ ಅನ್ನೋದು ನನಗೆ ಗೊತ್ತು. ಅವಳಿಗಾಗಿ ನಾನು ಏನು ಬೇಕಾದರೂ ಮಾಡಬಲ್ಲೆ. ಆದರೆ ನನ್ನ ದಾರಿಯಲ್ಲಿ ಬರುವವರ ಜೊತೆ ಹೇಗೆ ನಡೆದುಕೊಳ್ಳಬೇಕು ಅನ್ನೋದೂ ನನಗೆ ಚೆನ್ನಾಗಿ ಗೊತ್ತು.”
ಅಷ್ಟರಲ್ಲಿ ರುದ್ರವೀರ್ನ ಮೊಬೈಲ್ ರಿಂಗಣಿಸಿತು. ಸ್ಕ್ರೀನ್ ಮೇಲೆ ಬಂದ ಹೆಸರನ್ನು ನೋಡಿ ಅವನು ಕರೆ ಸ್ವೀಕರಿಸಿದ.
“ಹೇಳು ಜಗ್ಗ.”
“ನಾನು ಹೇಳಿದ ಹಾಗೆ ಆಗಬೇಕು. ಆ ಫೈಲ್ ಇವತ್ತು ರಾತ್ರಿ ನನ್ನ ಟೇಬಲ್ ಮೇಲೆ ಇರಬೇಕು. ಯಾರಾದರೂ ಅಡ್ಡ ಬಂದರೆ ಮೊದಲು ನನಗೆ ತಿಳಿಸು. ನಾನು ನೋಡಿಕೊಳ್ಳುತ್ತೇನೆ.” ಎಂದು ಹೇಳಿ ರುದ್ರ ಕರೆ ಮುಗಿಸಿದ.
ರಾಘವೇಂದ್ರ ಅವರು ಅವನನ್ನೇ ನೋಡುತ್ತಿದ್ದರು. ಇಷ್ಟು ಹೊತ್ತು ತಮ್ಮ ಮುಂದೆ ಕುಳಿತು ಮಾತನಾಡುತ್ತಿದ್ದ ಯುವಕನಿಗೆ ನಗರದ ದೊಡ್ಡ ವ್ಯವಹಾರಗಳನ್ನೇ ಒಂದು ಫೋನ್ಕಾಲ್ನಲ್ಲಿ ನಿಯಂತ್ರಿಸುವ ಶಕ್ತಿ ಇದೆ ಅನ್ನುವುದು ಅವರಿಗೆ ತಿಳಿದಿತ್ತು. ಅವನ ಮಾತಿನಲ್ಲಿದ್ದ ಆತ್ಮವಿಶ್ವಾಸ ಕೇವಲ ಹಣದ ಅಹಂಕಾರವಲ್ಲ. ಅವನ ಹಿಂದೆ ದೊಡ್ಡ ವ್ಯವಸ್ಥೆಯೇ ನಿಂತಿತ್ತು.
ರುದ್ರವೀರ್ ಹೊರಡುವ ಮೊದಲು ಮತ್ತೊಮ್ಮೆ ಅವರತ್ತ ತಿರುಗಿ,
“ನಾನು ಹೇಳಿದ್ದನ್ನು ನೆನಪಿಟ್ಟುಕೊಳ್ಳಿ. ಆರಾಧ್ಯಳಿಗೆ ಸಮಯ ಬೇಕಾದರೆ ಕೊಡುತ್ತೇನೆ. ಆದರೆ ಅವಳನ್ನು ಕಳೆದುಕೊಳ್ಳಲು ನಾನು ಸಿದ್ಧನಿಲ್ಲ.”
ಅವನು ಬಾಗಿಲಿನ ಕಡೆ ನಡೆದ. ಹೊರಗೆ ಹೋಗುವ ಮೊದಲು ಮೇಲಿನ ಮಹಡಿಯ ಕಡೆ ಒಮ್ಮೆ ನೋಡಿದ. ಅವನ ತುಟಿಯಂಚಿನಲ್ಲಿ ಸಣ್ಣ ನಗು ಮೂಡಿತು.
ಆರಾಧ್ಯಳಿಗೆ ಈಗ ಅವನು ತನ್ನನ್ನು ನೋಡಿದ್ದಾನೆ ಅನ್ನುವುದು ಅರ್ಥವಾಯಿಗಿ, ತಕ್ಷಣ ಕಿಟಕಿಯಿಂದ ಹಿಂದೆ ಸರಿದಳು.
———————————❤️———————————
ಆ ರಾತ್ರಿ ಆರಾಧ್ಯಗೆ ನಿದ್ರೆ ಬರಲಿಲ್ಲ.
ಹಳೆಯ ನೆನಪುಗಳನ್ನು ಹುಡುಕಲು ಪ್ರಯತ್ನಿಸಿದಳು. ತಾನು ಹತ್ತು ವರ್ಷದವಳಿದ್ದಾಗ ನಡೆದ ಘಟನೆಗಳು ಒಂದೊಂದಾಗಿ ನೆನಪಿಗೆ ಬರತೊಡಗಿದವು.
ಶಾಲೆ…. ಅಜ್ಜಿಯ ಮನೆ…. ಒಮ್ಮೆ ಊರಿಗೆ ಹೋಗಿದ್ದ ಸಮಯ. ಒಂದು ಮಳೆಗಾಲ… ಒಂದು ಅಪಘಾತದ ನೆನಪಿನಂತೆ ಕಾಣುವ ಅಸ್ಪಷ್ಟ ಚಿತ್ರ… ಒಬ್ಬ ಹುಡುಗ…ಅವಳ ನೆನಪಿನಲ್ಲಿ ಅವನ ಮುಖ ಸ್ಪಷ್ಟವಾಗಿರಲಿಲ್ಲ.
ಆದರೆ ಅವನ ಒಂದು ಮಾತು ಮಾತ್ರ ನೆನಪಿತ್ತು.
“ಭಯಪಡಬೇಡ.”
ಆ ಮಾತು ಕೇಳಿದಾಗಲೆಲ್ಲ ತನ್ನೊಳಗೆ ಏನೋ ಒಂದು ರೀತಿಯ ನೆಮ್ಮದಿ ಮೂಡುತ್ತಿತ್ತು. ಆದರೆ ಆ ಧ್ವನಿ ಯಾರದ್ದು? ಆ ಹುಡುಗ ಯಾರು? ತನ್ನ ಜೀವನದಲ್ಲಿ ನಡೆದ ಆ ಘಟನೆಗೂ ರುದ್ರವೀರ್ಗೂ ಏನು ಸಂಬಂಧ? ಆರಾಧ್ಯ ಕಣ್ಣು ಮುಚ್ಚಿದಳು. ಆ ನೆನಪು ಮತ್ತೆ ಮತ್ತೆ ಮನಸ್ಸಿನಲ್ಲಿ ಮೂಡಿತು. ಹಠಾತ್ತನೆ ಕಣ್ಣು ತೆರೆದಳು.
ಅದೇ ಸಮಯದಲ್ಲಿ ಮೊಬೈಲ್ನಲ್ಲಿ ಮೆಸೇಜ್ ಬಂದಿತ್ತು. ಮತ್ತೆ ರುದ್ರವೀರ್ನಿಂದ. ಆರಾಧ್ಯ ಬೆಚ್ಚಿ ಎದ್ದು ಕುಳಿತಳು.
(ಮುಂದುವರೆಯುವುದು ❤️)
———————————❤️———————————
Swipe left/right or tap the sides to turn pages