New Katha Varnika is now on Google Play — read original stories on your phone. Learn more
ಹುಚ್ಚು ಪ್ರೀತಿ ❤️‍🔥 – 4

ಹುಚ್ಚು ಪ್ರೀತಿ ❤️‍🔥 – 4

ಹುಚ್ಚು ಪ್ರೀತಿ ❤️‍🔥 – ೪
ಆ ರಾತ್ರಿ ಆರಾಧ್ಯಗೆ ನಿದ್ರೆ ಬರಲಿಲ್ಲ.
ಹಳೆಯ ನೆನಪುಗಳನ್ನು ಹುಡುಕಲು ಪ್ರಯತ್ನಿಸಿದಳು. ತಾನು ಹತ್ತು ವರ್ಷದವಳಿದ್ದಾಗ ನಡೆದ ಘಟನೆಗಳು ಒಂದೊಂದಾಗಿ ನೆನಪಿಗೆ ಬರತೊಡಗಿದವು.

ಶಾಲೆ…. ಅಜ್ಜಿಯ ಮನೆ…. ಒಮ್ಮೆ ಊರಿಗೆ ಹೋಗಿದ್ದ ಸಮಯ. ಒಂದು ಮಳೆಗಾಲ… ಒಂದು ಅಪಘಾತದ ನೆನಪಿನಂತೆ ಕಾಣುವ ಅಸ್ಪಷ್ಟ ಚಿತ್ರ… ಒಬ್ಬ ಹುಡುಗ…ಅವಳ ನೆನಪಿನಲ್ಲಿ ಅವನ ಮುಖ ಸ್ಪಷ್ಟವಾಗಿರಲಿಲ್ಲ.

ಆದರೆ ಅವನ ಒಂದು ಮಾತು ಮಾತ್ರ ನೆನಪಿತ್ತು.

“ಭಯಪಡಬೇಡ.”

ಆ ಮಾತು ಕೇಳಿದಾಗಲೆಲ್ಲ ತನ್ನೊಳಗೆ ಏನೋ ಒಂದು ರೀತಿಯ ನೆಮ್ಮದಿ ಮೂಡುತ್ತಿತ್ತು. ಆದರೆ ಆ ಧ್ವನಿ ಯಾರದ್ದು? ಆ ಹುಡುಗ ಯಾರು? ತನ್ನ ಜೀವನದಲ್ಲಿ ನಡೆದ ಆ ಘಟನೆಗೂ ರುದ್ರವೀರ್‌ಗೂ ಏನು ಸಂಬಂಧ? ಆರಾಧ್ಯ ಕಣ್ಣು ಮುಚ್ಚಿದಳು. ಆ ನೆನಪು ಮತ್ತೆ ಮತ್ತೆ ಮನಸ್ಸಿನಲ್ಲಿ ಮೂಡಿತು. ಹಠಾತ್ತನೆ ಕಣ್ಣು ತೆರೆದಳು.

ಅದೇ ಸಮಯದಲ್ಲಿ ಮೊಬೈಲ್‌ನಲ್ಲಿ ಮೆಸೇಜ್ ಬಂದಿತ್ತು. ಮತ್ತೆ ರುದ್ರವೀರ್‌ನಿಂದ. ಆರಾಧ್ಯ ಬೆಚ್ಚಿ ಎದ್ದು ಕುಳಿತಳು.

❤️❤️❤️❤️❤️❤️❤️❤️❤️❤️❤️❤️❤️❤️❤️❤️

ಮೆಸೇಜ್ ನೋಡಿದವಳಿಗೆ ತಲೆ ಸುತ್ತು ಬಂದಂತೆ ಆಗಿತ್ತು.

“ನಿನಗೆ ಹಳೆಯ ನೆನಪುಗಳು ನೆನಪಾಗ್ತಾ ಇದ್ಯಾ?” ಎಂದಿತ್ತು ಮೆಸೇಜ್.

‘ಅವನು ಹೇಗೆ ಊಹಿಸಿದ? ಅಥವಾ ಅವಳ ಮನಸ್ಸಿನಲ್ಲಿ ಏನಾಗುತ್ತಿದೆ ಅನ್ನೋದು ಅವನಿಗೆ ಗೊತ್ತಾಗ್ತಾ ಇದ್ಯಾ?’ ಎಂದುಕೊಂಡವಳ ಕೈ ತಣ್ಣಗಾಯಿತು.

“ನಿನಗೆ ಹೇಗೆ ಗೊತ್ತು?” ಎಂದು ಅವಳು ತಕ್ಷಣ ಉತ್ತರ ಕೊಟ್ಟಳು.

ಕೆಲವು ಕ್ಷಣಗಳ ನಂತರ ಅವನ ಮೆಸೇಜ್ ಬಂತು.
“ಏಕೆಂದರೆ ಆ ನಿನ್ನ ನೆನಪಿನಲ್ಲಿ ನಾನೂ ಇದ್ದೇನೆ.” ಎಂದಿದ್ದ.

ಆರಾಧ್ಯ ಸ್ವಲ್ಪ ಹೊತ್ತು ಯೋಚಿಸಿದಳು.
“ಹದಿನಾಲ್ಕು ವರ್ಷಗಳ ಹಿಂದೆ ಏನಾಯಿತು? ನೀವು ಯಾರು? ನನ್ನ ಜೀವನದಲ್ಲಿ ಏನು ನಡೆದಿತ್ತು? ನನಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು.” ಎಂದು ಕಳುಹಿಸಿದಳು.

“ಎಲ್ಲವನ್ನೂ ಒಂದೇ ದಿನ ಹೇಳಿದರೆ, ನೀನು ನನ್ನನ್ನು ಇನ್ನಷ್ಟು ದ್ವೇಷ ಮಾಡ್ತೀಯ. ಗಡಿಬಿಡಿ ಬೇಡ” ಎಂದ.

ಆರಾಧ್ಯಗೆ ಕೋಪ ಉಕ್ಕಿ ಬಂತು.
“ನನ್ನ ಜೀವನದ ಬಗ್ಗೆ ನನಗೇ ಗೊತ್ತಿಲ್ಲದೆ ನೀವು ನಿರ್ಧಾರ ಮಾಡೋಕೆ ಯಾರು? ನಿಮಗೆ ಏನು ಗೊತ್ತಿದೆ ಅಂತ ಹೇಳಿ.” ಎಂದು ಮೆಸೇಜ್ ಕಳುಹಿಸುತ್ತಿದ್ದಂತೆಯೇ, ಅವನಿಂದ ಕರೆ ಬಂದಿತ್ತು.

ಆರಾಧ್ಯ ಒಂದು ಕ್ಷಣ ಕರೆ ಸ್ವೀಕರಿಸಬೇಕೋ ಬೇಡವೋ ಎಂದು ಯೋಚಿಸಿದಳು. ಬುದ್ಧಿ ಬೇಡ ಎಂದರೂ, ಕೊನೆಗೆ ಕುತೂಹಲವೇ ಗೆದ್ದಿತು.

“ಇಷ್ಟು ಹೊತ್ತಿಗೆ ನಿದ್ರೆ ಮಾಡಬೇಕಿತ್ತು, ಆರಾಧ್ಯ.” ಅತ್ತ ಕಡೆಯಿಂದ ಅವನ ಮಾತು ಕೇಳಿಸಿತು.

ಅವಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಹೀಗೆ ಆರಾಮಾಗಿ ಮಾತನಾಡಿದ್ದು ಕೇಳಿ, ಮಾತನಾಡುತ್ತಿದ್ದದ್ದು ಅವಳಿಗೆ ಇನ್ನಷ್ಟು ಕೋಪ ತರಿಸಿತು.

“ನನ್ನ ನಿದ್ರೆಯ ಬಗ್ಗೆ ನಿಮಗೆ ಯಾಕೆ ಅಷ್ಟೊಂದು ಚಿಂತೆ? ಮೊದಲು ನಾನು ಕೇಳಿದ್ದಕ್ಕೆ ಉತ್ತರ ಕೊಡಿ.”

“ಕೋಪ ಬಂದಾಗ ನಿನ್ನ ಧ್ವನಿ ಇನ್ನೂ ಜೋರಾಗುತ್ತೆ. ನಂಗೆ ಅದು ಇಷ್ಟ ಆಗೋದಿಲ್ಲ. ಸ್ವಲ್ಪ ನಿಧಾನವಾಗಿ ಮಾತಾಡು.” ಎಂದ.

“ನಿಮ್ಮಿಷ್ಟ ಕಷ್ಟ ನನಗೆ ಬೇಕಾಗಿಲ್ಲ. ನೀವು ನನ್ನನ್ನು ಹುಚ್ಚಿಯನ್ನಾಗಿ ಮಾಡುತ್ತಿದ್ದೀರಾ! ಮದುವೆ ನಿಲ್ಲಿಸಿ, ಈಗ ನನ್ನ ಮನೆಗೆ ಬಂದು ಅಪ್ಪನಿಗೆ ಬೆದರಿಕೆ ಹಾಕಿ, ನನ್ನ ಜೀವನದ ಬಗ್ಗೆ ನೀವೇ ನಿರ್ಧಾರ ಮಾಡುತ್ತಿದ್ದೀರಾ. ಅಷ್ಟಕ್ಕೂ ಹದಿನಾಲ್ಕು ವರ್ಷಗಳ ಹಿಂದೆ ಏನಾಯಿತು ಅನ್ನೋದನ್ನ ಹೇಳದೆ ನನ್ನನ್ನು ಯಾಕೆ ಹೀಗೆ ಕಾಯಿಸುತ್ತಿದ್ದೀರಾ?” ಮತ್ತಷ್ಟೂ ಕೋಪದಿಂದ ಕೇಳಿದಳು.

ರುದ್ರವೀರ್ ನಕ್ಕ.
“ನಾನು ನಿನ್ನನ್ನು ಕಾಯಿಸುತ್ತಿಲ್ಲ. ಸರಿಯಾದ ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ತಾಳ್ಮೆ ಇಟ್ಟುಕೋ”

“ಕಾಯೋದಿಲ್ಲ. ಈಗಲೇ ಹೇಳಿ.” ಆರಾಧ್ಯ ಗುಡುಗಿದಳು.

“ಸರಿ. ಒಂದು ಪ್ರಶ್ನೆಗೆ ಉತ್ತರ ಕೊಡು. ಮಳೆ ಬಿದ್ದಾಗ ನಿನಗೆ ಯಾವತ್ತಾದರೂ ಒಂದು ಹಳೆಯ ಘಟನೆ ನೆನಪಾಗುತ್ತಾ?”

ಆರಾಧ್ಯ ಮೌನಕ್ಕೆ ಶರಣಾದಳು.

“ಒಬ್ಬ ಹುಡುಗ ನಿನ್ನ ಕೈ ಹಿಡಿದುಕೊಂಡಿದ್ದ ನೆನಪಿದೆಯಾ? ನೀನು ಅವನಿಗೆ ಏನೋ ಹೇಳಿದ್ದೆ. ನೆನಪಿದೆಯಾ?” ಎಂದು ಮತ್ತೆ ಕೇಳಿದ ರುದ್ರವೀರ್.

ಅವಳ ಎದೆ ಬಡಿತ ಜಾಸ್ತಿ ಆಗಿತ್ತು
“ನಿಮಗೆ… ನಿಮಗೆ ಇದೆಲ್ಲ ಹೇಗೆ ಗೊತ್ತು?”

“ಯಾಕೆಂದರೆ ಆ ಹುಡುಗ ನಾನೇ, ಆರಾಧ್ಯ.”

ಅವಳ ಕೈ ನಡುಗಿತ್ತು.
“ಆದರೆ ನನಗೆ ನಿಮ್ಮ ಮುಖ ನೆನಪಿಲ್ಲ.”

“ಪರವಾಗಿಲ್ಲ. ನನಗೆ ನಿನ್ನ ಮುಖ ಮರೆತಿಲ್ಲ. ಆ ದಿನ ನೀನು ನನ್ನ ಕೈ ಹಿಡಿದ ರೀತಿ, ನನ್ನನ್ನು ಬಿಟ್ಟು ಹೋಗಬೇಡ ಅಂತ ಹೇಳಿದ ಮಾತು… ಎಲ್ಲವೂ ನನಗೆ ನೆನಪಿದೆ.”

“ಅದು ಆ ಸಮಯದಲ್ಲಿ ನಾನು ಹೇಳಿದ್ದು.. ಅದನ್ನೇ ನೀವು ನೆನಪಿನಲ್ಲಿ ಇಟ್ಟುಕೊಂಡು ಈಗ ಬಂದು ಈ ರೀತಿ ಹಿಂಸೆ ಮಾಡ್ತಾ ಇದ್ದೀರಾ..? ಹುಚ್ಚಾ ನಿಮಗೆ” ಆರಾಧ್ಯ ಅಸಹಾಯಕತೆಯಿಂದ ಕೇಳಿದಳು.

“ಹೌದು. ಆದರೆ ಆ ನೆನಪು ನಿನಗೆ ಕೇವಲ ಒಂದು ಘಟನೆ ಇರಬಹುದು. ನೀನು ಆ ಸಮಯದಲ್ಲಿ ಆ ಮಾತು ಹೇಳಿರಬಹುದು. ಆದರೆ ನನಗೆ ಅದು ನನ್ನ ಇಡೀ ಜೀವನವನ್ನೇ ಬದಲಿಸಿದ ದಿನ. ನಿನಗೆ ಅದೆಲ್ಲ ಅರ್ಥವಾಗಬೇಕು ಅಂದ್ರೆ, ಸ್ವಲ್ಪ ಸಮಯ ಬೇಕು. ಆದರೆ ಒಂದು ವಿಷಯ ಮಾತ್ರ ಸ್ಪಷ್ಟವಾಗಿ ಕೇಳಿಸಿಕೋ, ಆರಾಧ್ಯ. ನೀನು ನನ್ನನ್ನು ಎಷ್ಟು ಬೇಕಾದರೂ ದ್ವೇಷಿಸು. ನನ್ನ ಜೊತೆ ಜಗಳ ಮಾಡು. ನನ್ನ ಮಾತನ್ನು ಕೇಳದೆ ಹಠ ಮಾಡು. ಆದರೆ ನನ್ನಿಂದ ದೂರ ಹೋಗಬಹುದು ಅಂತ ಮಾತ್ರ ಅಂದುಕೊಳ್ಳಬೇಡ. ನೀನು ನನ್ನವಳು, ಆರಾಧ್ಯ. ಈ ವಿಷಯದಲ್ಲಿ ನಾನು ಯಾವತ್ತೂ ಗೊಂದಲದಲ್ಲಿಲ್ಲ.” ಕೊನೆಯ ಮಾತುಗಳನ್ನು ಹಠದಿಂದ ಹೇಳಿದ್ದ ರುದ್ರವೀರ್.

“ನಾನು ನಿಮ್ಮವಳಲ್ಲ!” ಆರಾಧ್ಯ ತಕ್ಷಣ ಹೇಳಿದಳು.

ರುದ್ರವೀರ್ ನಕ್ಕ.
“ಈಗ ನೀನು ಹಾಗೆ ಹೇಳಬಹುದು. ನಿನ್ನ ಮನಸ್ಸು ಏನು ಹೇಳುತ್ತೆ ಅನ್ನೋದನ್ನು ನಾನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ನನ್ನ ನಿರ್ಧಾರವನ್ನು ಯಾರೂ ಬದಲಾಯಿಸೋಕೆ ಸಾಧ್ಯ ಇಲ್ಲ. ನಿನ್ನ ಜೀವನದಲ್ಲಿ ರುದ್ರವೀರ್ ಇರ್ತಾನೆ. ಅದು ನಿನಗೆ ಇಷ್ಟವಿರಲಿ, ಇಲ್ಲದಿರಲಿ.”

“ನೀವು ತುಂಬಾ ಅಹಂಕಾರದಿಂದ ಮಾತನಾಡುತ್ತಿದ್ದೀರಿ.”

“ಅಹಂಕಾರ ಅಂತ ಬೇಕಾದರೂ ಅಂದುಕೋ. ಹುಚ್ಚು ಅಂತ ಬೇಕಾದರೂ ಅಂದುಕೋ. ಏನು ಬೇಕಾದರೂ ಅಂದುಕೋ. ನನಗೆ ಪರವಾಗಿಲ್ಲ. ನಿನ್ನ ವಿಷಯ ಬಂದಾಗ ನಾನು ಹಾಗೆ ಇರೋದು.” ಎಂದ

ಅವಳು ಮತ್ತೆ ಏನೋ ಹೇಳಲು ಬಾಯಿ ತೆರೆದಳು. ಆದರೆ ಅವನು ಅವಳ ಮಾತನ್ನು ತಡೆದು,

“ಇನ್ನೊಂದು ವಿಷಯ. ಬೆಳಗ್ಗೆಯಿಂದ ಏನೂ ತಿನ್ನದೆ ಇದ್ದೀಯ. ನಾಳೆಯಿಂದ ಆ ರೀತಿ ಮಾಡಬೇಡ. ನಿನ್ನ ಕೋಪಕ್ಕೆ ನೀನೇ ಶಿಕ್ಷೆ ಅನುಭವಿಸಬೇಡ.”

“ನನ್ನ ಬಗ್ಗೆ ನಿಮಗೆ ಇಷ್ಟೆಲ್ಲ ತಿಳಿಯುವ ಅಗತ್ಯವಿಲ್ಲ.”

“ಅದು ನಿನ್ನ ಇಷ್ಟ. ನಿನ್ನ ಬಗ್ಗೆ ತಿಳಿದುಕೊಳ್ಳುವುದು ನನಗೆ ಅಗತ್ಯ. ಇಷ್ಟು ವರ್ಷ ಕಾಯಿಸಿದವಳು ನೀನು. ಈಗ ನಿನ್ನ ಪ್ರತಿಯೊಂದು ಸಣ್ಣ ವಿಷಯವೂ ನನಗೆ ಮುಖ್ಯ.”

“ನಾನು ನಿಮ್ಮನ್ನು ಪ್ರೀತಿಸುವುದಿಲ್ಲ ರುದ್ರವೀರ್. ಹಾಗಿದ್ದರೂ ಯಾಕೆ ಇಷ್ಟೊಂದು ಹಠ?”

“ಗೊತ್ತು. ಆದರೆ ಹೇಳಿದೆ ಅಲ್ವಾ.. ನಿನ್ನನ್ನು ಪ್ರೀತಿಸುವುದನ್ನು ನಿಲ್ಲಿಸುವುದು ನನಗೆ ಸಾಧ್ಯವಿಲ್ಲ, ಆರಾಧ್ಯ. ನೀನು ನನ್ನ ಜೀವನಕ್ಕೆ ಬಂದಿದ್ದು ಆಕಸ್ಮಿಕವಾಗಿರಬಹುದು. ಆದರೆ ನಿನ್ನ ಜೊತೆ ಬದುಕಬೇಕೆಂಬ ನಿರ್ಧಾರ ಆಕಸ್ಮಿಕವಲ್ಲ.”

ಅವಳಿಂದ ಮಾತು ಹೊರಡಲಿಲ್ಲ.

“ಸರಿ, ಈಗ ಮಲಗು. ರಾತ್ರಿ ತುಂಬಾ ಆಗಿದೆ.”

“ನನಗೆ ನಿದ್ರೆ ಬಂದರೆ ಮಲಗುತ್ತೇನೆ. ನೀವು ಹೇಳಿದ ತಕ್ಷಣ ಮಲಗಬೇಕೆಂದೇನಿಲ್ಲ.”

“ಅದು ಗೊತ್ತು. ನೀನು ನನ್ನ ಮಾತು ಕೇಳುವವಳಲ್ಲ ಅನ್ನೋದು ನನಗೆ ಈಗಾಗಲೇ ಅರ್ಥವಾಗಿದೆ.” ಸಣ್ಣದಾಗಿ ನಗುತ್ತಾ ಹೇಳಿದ.

ಆ ನಗು ಅವಳ ಕೋಪವನ್ನು ಇನ್ನೂ ಹೆಚ್ಚಿಸಿತ್ತು.

“ಗುಡ್ ನೈಟ್, ಆರಾಧ್ಯ.” ಅವಳು ಉತ್ತರಿಸುವ ಮೊದಲೇ ಕರೆ ತುಂಡರಿಸಿದ ಅವನು.

ಆರಾಧ್ಯ ಕೆಲವು ಕ್ಷಣ ಮೊಬೈಲ್‌ನ್ನೇ ನೋಡುತ್ತಾ ಕುಳಿತಿದ್ದಳು. ಅವನ ಮಾತುಗಳು ಕಿವಿಯಲ್ಲಿ ಮತ್ತೆ ಮತ್ತೆ ಕೇಳಿಸಿತು.
‘ನೀನು ನನ್ನವಳು, ಆರಾಧ್ಯ…’

ಅವಳು ತಕ್ಷಣ ಮೊಬೈಲ್ ಪಕ್ಕಕ್ಕಿಟ್ಟು ಮಲಗಿದಳು. ಆದರೆ ಅವಳ ಮನಸ್ಸಿನಲ್ಲಿ ಈಗ ಒಂದೇ ಪ್ರಶ್ನೆ ಇರಲಿಲ್ಲ. ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಹದಿನಾಲ್ಕು ವರ್ಷಗಳ ಹಿಂದೆ ನಿಜವಾಗಿಯೂ ಏನಾಗಿತ್ತು? ಆ ಹುಡುಗ ರುದ್ರವೀರ್ ಆಗಿದ್ದರೆ, ಇಷ್ಟು ವರ್ಷ ಇಲ್ಲದೆ ಈಗ ಅವನು ತನ್ನನ್ನು ಹುಡುಕಿಕೊಂಡು ಬಂದಿದ್ದೇಕೆ? ಎಂದು ಯೋಚಿಸುತ್ತಾ ಕಷ್ಟಪಟ್ಟು ನಿದ್ರೆಗೆ ಶರಣಾದಳು.

ಅತ್ತ ರುದ್ರವೀರ್ ತನ್ನ ರೂಮಿನ ಬಾಲ್ಕನಿಯಲ್ಲಿ ನಿಂತು ಚಂದಿರನನ್ನು ನೋಡುತ್ತಿದ್ದ. ಮುಖದಲ್ಲಿ ಒಂದು ಮಂದಹಾಸ.
ಅವಳು ತನ್ನನ್ನು ದ್ವೇಷಿಸುತ್ತಿದ್ದಳು. ಅವನ ಮಾತುಗಳಿಗೆ ವಿರೋಧಿಸುತ್ತಿದ್ದಳು. ಆದರೂ ಇವತ್ತು ಮೊದಲ ಬಾರಿಗೆ ಅವನ ಜೊತೆ ಹಳೆಯ ನೆನಪಿನ ಬಗ್ಗೆ ಮಾತನಾಡಿದ್ದಳು. ಅವನಿಗೆ ಅದೇ ಸಾಕಾಗಿತ್ತು.

“ಎಷ್ಟು ದಿನ ಬೇಕಾದರೂ ತೆಗೆದುಕೋ ಆರಾಧ್ಯ. ಆದರೆ ಕೊನೆಗೆ ನೀನು ಬಂದು ಸೇರಬೇಕಾದ್ದು ಈ ರುದ್ರವೀರ್ ನಾ ಹೃದಯಕ್ಕೇನೆ” ಎಂದು ಪಿಸುಗುಟ್ಟಿದ.

ಕ್ಷಣಗಳ ನಂತರ,
“ಜಗ್ಗ, ಹದಿನಾಲ್ಕು ವರ್ಷಗಳ ಹಿಂದಿನ ಆ ಘಟನೆಯ ಬಗ್ಗೆ ಮತ್ತೆ ಮಾಹಿತಿ ಬೇಕು. ಆಗ ನಮ್ಮ ಜೊತೆ ಇದ್ದ ಪ್ರತಿಯೊಬ್ಬರ ವಿವರ ನನಗೆ ಬೇಕು. ಯಾರೂ ತಪ್ಪಿಸಿಕೊಳ್ಳಬಾರದು. ಇನ್ನು ಹೆಚ್ಚು ದಿನ ಆ ಸತ್ಯ ನನ್ನೊಬ್ಬನ ಬಳಿಯೇ ಇರಬಾರದು.” ಎಂದು ಜಗ್ಗನಿಗೆ ಕರೆ ಮಾಡಿ ಹೇಳಿದ.

(ಮುಂದುವರೆಯುವುದು ❤️)

———————————❤️——————————-